ಸಂಜಯ್ ಗುಪ್ತಾ ನಿರ್ದೇಶನದ ‘ಮುಂಬಯಿ ಸಾಗಾ’ ಕ್ರೈಂ-ಥ್ರಿಲ್ಲರ್ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 80, 90ರ ದಶಕದ ಸಂದರ್ಭವನ್ನು ಸೃಷ್ಟಿಸಿ ಕತೆ ಹೇಳಿದ್ದಾರೆ. ಜಾನ್ ಅಬ್ರಹಾಂ ಭೂಗತ ಪಾತಕಿ ‘ಅಮರ್ತ್ಯ ರಾವ್’ ಪಾತ್ರದಲ್ಲಿದ್ದು, ಮುಂಬಯಿ ಆಳುವುದು ಆತನ ಉದ್ದೇಶ. ಇದಕ್ಕೆ ತಡೆಗೋಡೆಯಾಗಿ ನಿಂತ ಖಡಕ್ ಪೊಲೀಸ್ ಅಧಿಕಾರಿಯಾಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಜಾಕಿ ಶ್ರಾಫ್, ಸುನೀಲ್ ಶೆಟ್ಟಿ, ಅಮೋಲ್ ಗುಪ್ತೆ, ಪ್ರತೀಕ್ ಬಬ್ಬರ್, ಗುಲ್ಶನ್ ಗ್ರೋವರ್, ರೋಹಿತ್ ರಾಯ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಭರಪೂರ ಆಕ್ಷನ್ ಇದ್ದು ಇದೊಂದು ಸಾಹಸಪ್ರಧಾನ ಕ್ರೈಂ-ಥ್ರಿಲ್ಲರ್ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಜಾನ್ ಅಬ್ರಹಾಂ ಪಾತ್ರವನ್ನು, ‘ಬಾಂಬೆ ರಸ್ತೆಗಳಲ್ಲಿ ಬೆಳೆದವನು ಮುಂಬಯಿ ಆಳಲು ಹೊರಟಿದ್ದಾನೆ’ ಎನ್ನುವ ಒಕ್ಕಣಿ ಇತ್ತು. ಈ ಚಿತ್ರದ ನಿರ್ದೇಶಕ ಸಂಜಯ್ ಗುಪ್ತಾ ‘ಶೂಟ್‌ಔಟ್ ಅಟ್ ಲೋಖಂಡ್‌ವಾಲಾ’, ಜಝ್ಬಾ, ಕಾಬಿಲ್, ಮುಸಾಫಿರ್, ಜಿಂದಾ… ಹಿಂದಿ ಚಿತ್ರಗಳ ಮೂಲಕ ಜನರಿಗೆ ಪರಿಚಿತರು. ಹಾಗೆ ನೋಡಿದರೆ ಕಳೆದ ವರ್ಷ ಜೂನ್‌ನಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಯ್ತು. ಕೊನೆನೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದ ನಿರ್ಮಾಪಕರು ಈಗ ಥಿಯೇಟರ್‌ನಲ್ಲೇ ಮಾರ್ಚ್ 19ರಂದು ರಿಲೀಸ್ ಮಾಡಲಿದ್ದಾರೆ.