Categories
ಸಿನಿ ಸುದ್ದಿ

ಸಲಗ ಕೋಟಿಗೊಬ್ಬನ‌ ನಡುವೆಯೂ ನಿನ್ನ ಸನಿಹಕೆ ಹೌಸ್ ಫುಲ್!

ದಸರಾ ಹಬ್ಬ ಈಗಷ್ಟೇ ಮುಗಿದಿದೆ. ಆದರೆ, ಸಿನಿಮಾ ಹಬ್ಬ ಜೋರಾಗಿದೆ. ಹೌದು, ಒಂದೊಂದೇ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಸಿನಿಮಾ ಪ್ರೇಮಿ ಈಗ ಆ ಚಿತ್ರಗಳನ್ನು ಒಪ್ಪಿ ಅಪ್ಪಿಕೊಂಡಿದ್ದಾನೆ. ಆ ಸಾಲಿಗೆ ‘ನಿನ್ನ ಸನಿಹಕೆ’ ಚಿತ್ರವೂ ಸೇರಿದೆ.

ದೊಡ್ಡ ಚಿತ್ರಗಳ‌ ಅಬ್ಬರದ ನಡುವೆಯೂ ನಿನ್ನ ಸನಿಹಕೆ ಚಿತ್ರವನ್ನ ಪ್ರೇಕ್ಷಕರು ಕೈ ಬಿಡಲಿಲ್ಲ ಎಂಬುದು ಚಿತ್ರತಂಡದ ಖುಷಿ. ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲೂ ನಿನ್ನ ಸನಿಹಕೆ‌ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ದಲ್ಲಿ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ.
10ರಲ್ಲಿ 7 ಸ್ಕ್ರೀನ್ ಹೌಸ್ ಫುಲ್. 3 ಸ್ಕ್ರೀನ್ 90% ಫಿಲ್ ಅಗಿರುವುದು ತಂಡದ ಉತ್ಸಾಹಕ್ಕೆ ಕಾರಣವಾಗಿದೆ.
ಹಬ್ಬ, ವೀಕೆಂಡ್ ನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ಸ್ಕ್ರೀನ್ ಹೆಚ್ಚಿಸಲು ಕೆ.ಆರ್.ಜಿ‌ ಸ್ಟುಡಿಯೋಸ್ ನಿರ್ಧರಿಸಿದೆ.

ರಾಜ್ಯದಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲೂ ನಿನ್ನ ಸನಿಹಕೆ ಪ್ರದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ.
ಪ್ರೇಕ್ಷಕ ಹಾಗೂ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿರೋ ಚಿತ್ರದ ವೇಗ ಇನ್ನಷ್ಟು ಹೆಚ್ಚಿದೆ.

ದೊಡ್ಡ ಚಿತ್ರಗಳ‌ ಆಗಮನದಿಂದ ಥಿಯೇಟರ್ ಮತ್ತು ಸ್ಕ್ರೀನ್ಸ್ ಸಮಸ್ಯೆ ಎದುರಿಸಿದ್ದ ಚಿತ್ರತಂಡ. ಇದೀಗ ಪ್ರೇಕ್ಷಕರ ಒತ್ತಾಯ ನೋಡಿ‌ ಪರದೆಗಳನ್ನು ಹೆಚ್ಚಿಸಲು ವಿತರಕರು ಮುಂದಾಗ್ತಿದ್ದಾರೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ.

Categories
ಸಿನಿ ಸುದ್ದಿ

ಕಿಚ್ಚು ಹೆಚ್ಚಿಸಿದ ಕಿಚ್ಚನಿಗೆ ಪ್ರೇಕ್ಷಕರ ಬಹುಪರಾಕ್! ಕಳ್ಳ ಪೋಲೀಸ್ ಆಟದಲ್ಲಿ ಭರಪೂರ ಮನರಂಜನೆ!!

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಚಿತ್ರ : ಕೋಟಿಗೊಬ್ಬ 3

ನಿರ್ದೇಶನ: ಶಿವಕಾರ್ತಿಕ್

ನಿರ್ಮಾಣ : ಸೂರಪ್ಪ ಬಾಬು

ತಾರಾಗಣ: ಸುದೀಪ್, ನವಾಬ್, ಮಡೋನ ಸೆಬಾಸ್ಟಿಯನ್, ರವಿಶಂಕರ್ ಇತರರು

ಅಭಿನವ ಭಾರ್ಗವನ ಮುಂದೆ ಹಲ್ಲಲ್ಲು ಕಡಿದ, ಸಾಹಸಸಿಂಹ ವಿಷ್ಣುದಾದಾ ವಿರುದ್ದ ಕತ್ತಿ ಮಸೆದ ಖಳನಾಯಕನಿಗೆ ಕಿಚ್ಚ ಸುದೀಪ್ ಆಯುಧಪೂಜೆ ದಿನದಂದೇ ಮಹೂರ್ತವಿಟ್ಟಿದ್ದರು.ಧೂರ್ತ ದೇವೇಂದ್ರನ ಸಾಮ್ರಾಜ್ಯವನ್ನು ಹೊಡೆದುರುಳಿಸಬೇಕು ಜೊತೆಗೆ ಒಡೆಯ ದೇವೇಂದ್ರನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದರು. ಆದರೆ, ಆಯುಧಪೂಜೆಯ ದಿನದಂದು ಅಂದುಕೊಂಡ ಕೆಲಸ ನೆರವೇರಲಿಲ್ಲ. ಹಾಗಂತ, ಹಾಕಿದ್ದ ಸ್ಕೆಚ್ ಮರುದಿನ ಮಿಸ್ ಆಗಲೇ ಇಲ್ಲ.ಪ್ಲ್ಯಾನ್ ಪ್ರಕಾರ ಎಲ್ಲವೂ ನಡೀತು. ಕ್ಯಾನ್ಸಲ್ ಆದ ಶೋಗಳು ಮರುದಿನ ಬೆಳಗ್ಗೆಯಿಂದಲೇ ಪ್ರಾರಂಭಗೊಂಡವು. ಕಿಚ್ಚನ ಸೈನ್ಯ ಥಿಯೇಟರ್ ಗೆ ಮುತ್ತಿಗೆ ಹಾಕ್ತು. ಇತ್ತ ಕಿಚ್ಚ ಕಣ್ಣಲ್ಲೇ ಕೆಂಡ ಉಗುಳುತ್ತಾ, ಬಾಲಿವುಡ್ ಬಾದ್ ಷಾ ನಂತೆ ಎಂಟ್ರಿಕೊಟ್ಟರು. ನೋಡುಗರು ಏನಾಯ್ತು ಎನ್ನುವಷ್ಟರಲ್ಲಿ ದಾದಾ ವಿರುದ್ಧ ಕತ್ತಿಮಸೆದವನನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿಬಿಟ್ಟರು. ಇಷ್ಟೆಲ್ಲಾ ಆಗಿದ್ದು ಕೋಟಿಗೊಬ್ಬ 3 ಚಿತ್ರ ಬೆಳ್ಳಿತೆರೆ ಮೇಲೆ ಧಗಧಗಿಸಿದಾಗ.

ಅಂದ್ಹಾಗೇ, ಜೇಷ್ಠ ಸಿನಿಮಾದಲ್ಲಿ ದಾದಾಗೆ ಬಿಟೌನ್ ನವಾಬ್ ಎದುರಾಳಿಯಾಗಿದ್ದರು. ಭರ್ತಿ ಹದಿನೇಳು ವರ್ಷಗಳು ಕಳೆದ ಮೇಲೆ ಕಿಚ್ಚನ ಕೋಟಿಗೊಬ್ಬ 3 ಗೆ ಖಳನಾಯಕನಾಗಿ ಮತ್ತೆ ಕನ್ನಡಕ್ಕೆ ಬಂದು ಕಮಾಲ್ ಮಾಡಿದ್ದಾರೆ. ಕೋಟಿಗೊಬ್ಬ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಎವರ್ ಗ್ರೀನ್‌ ಸಿನಿಮಾ.‌ ಇದೇ ಸಿನಿಮಾದ ಟೈಟಲ್ ನ ಕೋಟಿಗೊಬ್ಬ 2 ಚಿತ್ರಕ್ಕೆ ಬಣ್ಣಹಚ್ಚಿದ ಕಿಚ್ಚ ದಾದಾ ಅಭಿಮಾನಿಗಳ ಹೃದಯ ಗೆದ್ದರು. ಯಜಮಾನನ ಭಕ್ತರು ಮಾಣಿಕ್ಯನನ್ನು ತಲೆಮೇಲೆ ಹೊತ್ಕೊಂಡು ಮೆರೆಸಿದರು. ಅಭಿಮಾನಿ ದೇವರುಗಳು ತೋರಿಸಿದ ಪ್ರೀತಿ ಹಾಗೂ ಪ್ರೋತ್ಸಾಹವೇ ಕೋಟಿಗೊಬ್ಬ 3 ಚಿತ್ರಕ್ಕೆ ಸ್ಪೂರ್ತಿಯಾಯ್ತು. ಫೈನಲೀ, ಕೋಟಿಗೊಬ್ಬ 3 ಚಿತ್ರ ಪ್ರೇಕ್ಷಕರನ್ನು ತಲುಪಿದೆ. ಬೆಳ್ಳಿತೆರೆ ಮೇಲೆ ಅಭಿನಯ ಚಕ್ರವರ್ತಿ ದರ್ಬಾರ್ ಜೋರಾಗಿದೆ. ಕೋಟಿಗೊಬ್ಬ ಅಂತ ಹೆಸರಿಟ್ಟುಕೊಂಡು ಎರಡನೇ ಭಾರಿ ಬಿಗ್ ಸ್ಕ್ರೀನ್ ಮೇಲೆ ಬಂದ ಕಿಚ್ಚನ ಸಿನಿಮಾ ಬರೀ ಮನರಂಜನೆ ನೀಡೋದಲ್ಲದೆ, ಒಂದೊಳ್ಳೆ ಸಂದೇಶ ನೀಡಿದೆ.

ಕೋಟಿಗೊಬ್ಬ 3 ಚಿತ್ರದಲ್ಲಿ ಅಂತದ್ದೇನಿದೆ? ಸತ್ಯ ಯಾರು ? ಶಿವ ಯಾರು ? ಸತ್ಯ ಹಾಗೂ ಶಿವ ಇಬ್ಬರು ಒಬ್ಬರೇನಾ ಅಥವಾ ಇಬ್ಬರು ಬೇರೆ ಬೇರೆನಾ? ಈ ರೀತಿಯ ಕನ್ಫೂಷನ್ ನ ಕೋಟಿಗೊಬ್ಬ 2 ಚಿತ್ರದಲ್ಲಿ ಕ್ರಿಯೇಟ್ ಮಾಡಿದ್ದರು. ಸಿನಿರಸಿಕರನ್ನು ಗೊಂದಲಕ್ಕೀಡು ಮಾಡಿದ್ರು. ಬಹುಷಃ ಆ ಕನ್ಫ್ಯೂಷನ್ ಗೆ ಕೋಟಿಗೊಬ್ಬ 3ನಲ್ಲಿ ಉತ್ತರ ಕೊಟ್ಟಿರ್ತಾರೆ ಅಷ್ಟೇ. ಹೀಗೆ ‌ಅಂದುಕೊಂಡು ಚಿತ್ರಮಂದಿರಕ್ಕೆ ಬರುವವರಿಗೆ ಕ್ಲ್ಯಾರಿಟಿ ಕೊಡುವುದರ ಜೊತೆಗೆ ಕಾಸು ಕೊಟ್ಟು ಥಿಯೇಟರ್ ಒಳಗಡೆ ಬಂದ ಪ್ರೇಕ್ಷಕ ಮಹಾಷಯನಿಗೆ ಮನರಂಜನೆಯನ್ನು ಕೊಟ್ಟು ಬೀಳ್ಕೊಟ್ಟಿದ್ದಾರೆ. ಒಂದಂತೂ ನಿಜ ಕೊಟ್ಟ ಕಾಸಿಗೆ ಇಲ್ಲಿ ಮೋಸವಿಲ್ಲ.

ಆಟೋರಿಕ್ಷಾ ಏರಿ ಎಂಟ್ರಿ ತೆಗೆದುಕೊಳ್ಳುವ ಕೋಟಿಗೊಬ್ಬ ಕಿಚ್ಚ, ಬಿಗ್ ಬಿ ಅಮಿತಾಬ್ ರಂತೆ ಕಾಣ್ತಾರೆ. ಪಟಾಕಿ ಪೋರಿ ಆಶಿಕಾ ರಂಗನಾಥ್ ಜೊತೆ ಕುಣಿದು ಕುಪ್ಪಳಿಸ್ತಾರೆ, ಬೇಬಿಡಾಲ್ ಆದ್ಯಾ ಮುಂದೆ ಮಂಡಿಯೂರ್ತಾರೆ. ಸ್ಟೈಲಿಷ್ ಲುಕ್ ನಲ್ಲಿ ಕಿಕ್ಕೇರಿಸುತ್ತಾರೆ. ಕಾರ್ ಚೇಸಿಂಗ್ ಮಾಡಿ ಚಿತ್ರಪ್ರೇಮಿಗಳನ್ನು ಎಡ್ಜ್ ಆಫ್‌ ದಿ ಸೀಟ್ ನಲ್ಲಿ ಕೂರಿಸ್ತಾರೆ. ಎದುರಾಳಿಗಳ ಜೊತೆ ಹೊಡೆದಾಡಿ ಮೀಸೆ ತಿರುವುತ್ತಾರೆ. ಕೊನೆಗೆ ಹೆತ್ತ ತಾಯಿ ಸಾವಿಗೆ ಕಾರಣರಾದ ಧೂರ್ತನಂತಿರುವ ದೇವೇಂದ್ರ ಅಲಿಯಾಸ್ ನವಾಬ್ ಷಾರನ್ನು ಮುಗಿಸಿ ಮರೆಯಾಗುತ್ತಾರೆ. ಅಲ್ಲಿಗೆ, ಕೋಟಿಗೊಬ್ಬ 3 ಗೆ ತೆರೆಬೀಳುತ್ತೆ.

ಕೋಟಿಗೊಬ್ಬ 2 ಚಿತ್ರ ದಲ್ಲಿದ್ದ ಎರಡು ಕ್ಯಾರೆಕ್ಟರ್ ಗಳು ಮಾತ್ರ ಕೋಟಿಗೊಬ್ಬ 3 ನಲ್ಲಿ ಕಂಟಿನ್ಯೂ ಆಗಿವೆ. ಸತ್ಯ ಹಾಗೂ ಶಿವ ಎರಡು ಪಾತ್ರದಲ್ಲಿ ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡಿದ್ದ ಸುದೀಪ್, ಭಾಗ 3 ರಲ್ಲೂ ಸತ್ಯ- ಶಿವ ಹಾಗೂ ಗೋಸ್ಟ್ ಅಂತ ಮತ್ತೆ ಕನ್ಫ್ಯೂಸ್ ಮಾಡಿದ್ದಾರೆ. ಜೈಲು ಹಕ್ಕಿ ಆಗಿದ್ದ ರವಿಶಂಕರ್ ಕೋಟಿಗೊಬ್ಬ 3 ನಲ್ಲೂ ಕಂಬಿಹಿಂದೆ ಹಲ್ಲಲ್ಲು ಕಡಿದು , ಕಿಚ್ಚನ ಮುಂದೆ ಬಂದಾಗ ಕಾಮಿಡಿ ಮಾಡುತ್ತಾ ಹಾಸ್ಯದ ರಸದೌತಣ ಉಣಬಡಿಸಿದ್ದಾರೆ. ನವಾಬ್ ಷಾ, ಅಫ್ತಾಬ್ ಶಿವದಾಸಿನಿ, ಶ್ರದ್ದಾದಾಸ್ ಕೋಟಿಗೊಬ್ಬನ ಜೊತೆ ಮೆರೆದಿದ್ದಾರೆ. ರಾಜೇಶ್ ನಟರಂಗ್, ಅಭಿರಾಮಿ,ತಾರಕ್ ಪಾತ್ರಗಳು ಗಮನ ಸೆಳೆಯುತ್ತವೆ. ರವಿಶಂಕರ್, ಶಿವರಾಜ್ ಕೆ. ಆರ್ ಪೇಟೆ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.ರಂಗಾಯಣ ರಘು ಹಾಗೂ ತಬಲನಾಣಿಯವರ ಪ್ರತಿಭೆಯನ್ನು ಇಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ. ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದರೂ ಕೇರಳದ ಕುಟ್ಟಿ ಮಡೋನ್ನ ಸೆಬಾಸ್ಟಿನ್ ಅಷ್ಟೇನು ಮೋಡಿ ಮಾಡಿಲ್ಲ ಅನ್ನೋದು ಬೇಸರದ ಸಂಗತಿ.

ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ. ಪೋಲ್ಯಾಂಡ್ ಕಾರ್ ಚೇಸಿಂಗ್ ದೃಶ್ಯಗಳು ರೋಮಾಂಚನಗೊಳಿಸುತ್ತವೆ. ಅರ್ಜುನ್ ಜನ್ಯಾ ಸಂಗೀತದ ಒಂದು ಹಾಡು ಹುಚ್ಚೆದ್ದು ಕುಣಿಸುತ್ತೆ, ಬ್ಯಾಗ್ರೌಂಡ್ ಸ್ಕೋರ್ ಕೊಂಚ ಸೊರಗಿದೆ. ಮೊದಲರ್ಧ ಮನರಂಜನೆಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತೆ. ಅಲ್ಲಲ್ಲಿ ಪಂಚಿಂಗ್ ಡೈಲಾಗ್ ಕೊರತೆ ಎದ್ದು ಕಾಣುತ್ತೆ.. ಕಿಚ್ಚ ಕೊಟ್ಟ ಒನ್ ಲೈನ್ ಸ್ಟೋರಿಗೆ ಸ್ಕ್ರೀನ್ ಪ್ಲೇ ಮಾಡಿಕೊಂಡ ನಿರ್ದೇಶಕ ಶಿವಕಾರ್ತಿಕ್ ಇನ್ನಷ್ಟು ಧಮ್ ಕಟ್ಟಬೇಕಿತ್ತು. ನಿರೂಪಣೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಎಲ್ಲೋ ಒಂದು ಕಡೆ ಟ್ರ್ಯಾಕ್ ಚೇಂಜ್ ಆಗುತ್ತೆ ಅನ್ನುವ ಹೊತ್ತಿಗೆ ಮದರ್ ಸೆಂಟಿಮೆಂಟ್ ಮೈನಸ್ ಪಾಯಿಂಟ್ ಗಳನ್ನ ಮರೆಸುತ್ತೆ. ಅಲ್ಲಲ್ಲಿ ಬಾಲಿವುಡ್ ರೇಂಜ್ ಗಿರುವ ಮೇಕಿಂಗ್ ಖುಷಿ ಕೊಡುತ್ತೆ. ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯಕ್ಕೆ ಇಂಟರ್ ನ್ಯಾಷನಲ್ ಕಿಲಾಡಿ‌ ಕಿರೀಟ ಸಲ್ಲಬೇಕು. ಕೋಟಿ‌ಕೋಟಿ ಸುರಿದು ನಾಲ್ಕು ವರ್ಷ ಕೈಕಟ್ಟಿ ಕುಳಿತ ಅನ್ನದಾತ ನಿರ್ಮಾಪಕ ಸೂರಪ್ಪ ಬಾಬುಗೆ ಕಿಚ್ಚನ ಪಡೆ ಸೆಲ್ಯೂಟ್ ಹೊಡಿಲೇಬೇಕು. ಕಾರಣ ಅದ್ಧೂರಿತನ.

ಇಲ್ಲಿ ಸತ್ಯ- ಶಿವ ಬೇರೆ ಬೇರೆನಾ? ಅಥವಾ ಇಬ್ಬರು ಒಬ್ಬರೇನಾ? ಇದೊಂದು ಕೂತೂಹಲಕ್ಕೆ ಸಿನಿಮಾ ನೋಡಬೇಕಿಲ್ಲ. ಕ್ರಿಷ್ ಹಾಗೂ ಧೂಮ್‌ ಸಿನಿಮಾದಷ್ಟೇ ರೋಚಕ ಎನಿಸೋ ಕಾರ್ ಚೇಸ್ ನೋಡಿದ ನಂತರ ಕೋಟಿಗೊಬ್ಬನ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚದೇ ಇರದು.ಇಲ್ಲೊಂದು ಮೆಡಿಕಲ್‌ ಮಾಫಿಯಾ ಇದೆ. ಜೊತೆಗೆ ರಿವೇಂಜ್ ಸ್ಟೋರಿ ಇಲ್ಲಿ ಹೈಲೆಟ್. ಉಳಿದಂತೆ, ಇಲ್ಲಿ ಸಣ್ಣ ಪ್ರೇಮ್ ಕಹಾನಿ ಇದೆ, ಅಮ್ಮನ ಸೆಂಟಿಮೆಂಟ್ ಕೂಡ ಇದೆ. ಭರ್ಜರಿ ಆಕ್ಷನ್ ಮತ್ತೊಂದು ಹೈಲೆಟ್.ಒಟ್ಟಾರೆ, ಇದು ಎಲ್ಲಾ ವರ್ಗಕ್ಕೂ ಸಲ್ಲುವ ಮನರಂಜನಾತ್ಮಕ ಸಿನಿಮಾ.

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಮೇಘನಾ ರಾಜ್ ಕೊಟ್ರು ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ – ಯುವ ಸಾಮ್ರಾಟನ ಫ್ಯಾನ್ಸ್ ಥ್ರಿಲ್ !

ಇಂತಹದ್ದೊಂದು ಸುದ್ದಿಗೋಸ್ಕರ ಸ್ಯಾಂಡಲ್‌ವುಡ್ ಯುವ ಸಾಮ್ರಾಟನ ಅಪ್ಪಟ ಅಭಿಮಾನಿಗಳು ಮಾತ್ರವಲ್ಲ, ನಟಿ ಮೇಘನಾ ರಾಜ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದರು. ಫೈನಲೀ ಅಭಿಮಾನಿ ದೇವರುಗಳ ಕಾಯುವಿಕೆಯ ಕೌತುಕಕ್ಕೆ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಆಸೆ-ಆಕಾಂಕ್ಷೆಯನ್ನು ಈಡೇರಿಸಿದ್ದಾರೆ. ವಿಐಪಿಗಳ ಕನಸಿನ ಕೋರಿಕೆಯಂತೆ, ಅವರ ಅಭಿಲಾಷೆಯಂತೆ ಬಣ್ಣದ ಜಗತ್ತಿಗೆ ಮರಳಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ನಟಿ ಮೇಘನಾ ಚಿತ್ರರಂಗಕ್ಕೆ ಮರಳಬೇಕು, ಮಾಯಲೋಕದಲ್ಲಿ ಮಿನುಗಬೇಕು ಎನ್ನುವುದು ಅಭಿಮಾನಿ ದೇವರುಗಳ ಅಭಿಲಾಷೆಯಾಗಿತ್ತು. ಮನೆದೇವರ ಅಗಲಿಕೆಯಿಂದ ಮನನೊಂದಿರುವ ಮೇಘನಾ ಆದಷ್ಟು ಬೇಗ ಚೇತರಿಸಿಕೊಂಡು ಗಂಧದಗುಡಿಗೆ ವಾಪಾಸ್ ಆಗ್ಬೇಕು ಅಂತ ಫ್ಯಾನ್ಸ್ ಬಯಸಿದ್ದರು. ಅಭಿಮಾನಿಗಳ ಮಹದಾಸೆಯಂತೆ ನಟಿ ಮೇಘನಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇವತ್ತು ಬೆಳಗ್ಗೆ ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ ಕೊಟ್ಟ ಮೇಘನಾ, ಸರ್ಜಾ ಕುಟುಂಬದ ವಿಐಪಿಗಳು ಹಾಗೂ ಆಟಗಾರನ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ.

ಅಷ್ಟಕ್ಕೂ, ಯಾವ್ ಸಿನಿಮಾ? ಏನ್ ಕಥೆ? ಅದ್ಯಾವ ಚಿತ್ರತಂಡವನ್ನು ಸೇರಿಕೊಂಡರು? ಅದೆಂತಾ ಪಾತ್ರಕ್ಕೆ ಜೀವ ತುಂಬಿದರು? ಈ ಕೂತೂಹಲವನ್ನು ನಟಿ ಮೇಘನಾ ಹಾಗೇ ಉಳಿಸಿದ್ದಾರೆ. ಮಿಲ್ಟ್ರಿ ಮಾಸ್ಕ್ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಕಾರು ಏರಿದ ಮೇಘನಾ, `ಶೂಟಿಂಗ್ ಫಾರ್ ಸಂಥಿಂಗ್ ರಿಯಲಿ ಎಕ್ಸೈಟಿಂಗ್ ಟುಡೇ’ ಅಂತ ಬ್ರಿಟಿಷರ ಭಾಷೆಯಲ್ಲಿ ಎರಡು ಲೈನ್ ಟೈಪ್ ಮಾಡಿ ಒಂದ್ ಫೋಟೋ ಸಮೇತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಘನಾ ಪೋಟೋ ಅಂಡ್ ಪೋಸ್ಟ್ ನೋಡಿ ನಿಜಕ್ಕೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಮೇಘನಾ ಕಮ್‌ಬ್ಯಾಕ್ ಪಯಣ ಭರ್ಜರಿಯಾಗಿ ಶುರುವಾಗಲಿ ಅಂತ ಆಶಿಸುತ್ತಿದ್ದಾರೆ.

ಅಂದ್ಹಾಗೇ, ಮೇಘನಾ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ-2 ಚಿತ್ರಗಳು ಚಿರು ಇದ್ದಾಗಲೇ ಒಪ್ಪಿಕೊಂಡಿದ್ದರು. ಚಿತ್ರೀಕರಣ ಕೂಡ ಶುರುವಾಗಿತ್ತು. ಈ ಮಧ್ಯೆ ವಿಧಿಯೆಂಬ ಆಟಗಾರನ ಆಟದಿಂದ ಯುವಸಾಮ್ರಾಟ ಚಿರು ಅರ್ಧಕ್ಕೆ ಜೀವನದ ಆಟ ಮುಗಿಸಬೇಕಾಗಿ ಬಂತು. ಜನ್ಮಕೊಟ್ಟ ಹೆತ್ತವರು, ರಕ್ತಹಂಚಿಕೊಂಡು ಹುಟ್ಟಿದ ಅಣ್ತಮ್ಮ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟೇ ಹೋದರು. ಚಿರು ಗೋಣು ಚೆಲ್ಲಿದ ಕ್ಷಣದಿಂದ ರಾಯನ್ ರಾಜ್ ಸರ್ಜಾ ಆಗಮನದವರೆಗೆ ಮನೆ-ಮನಸ್ಸು ಬರೀ ಕತ್ತಲೆಯಿಂದ ತುಂಬಿತ್ತು. ಆದ್ರೀಗ, ಎರಡು ಕುಟುಂಬದ ಮನೆ-ಮನಸ್ಸುಗಳಲ್ಲಿ ಪ್ರಕ್ಷುಬ್ಧ ಬೆಳಕಿನ ವಾತಾವರಣ.

ವಾಯುಪುತ್ರನನ್ನೇ ಹೋಲುವ, ಚಿರುನಾ ಕಣ್ಮುಂದೆ ತಂದು ನಿಲ್ಲಿಸುವ ರಾಯನ್ ರಾಜ್ ಸರ್ಜಾ ಇದೀಗ ಅಮ್ಮನನ್ನು ಶೂಟಿಂಗ್‌ಗೆ ಮರಳುವಂತೆ ಮಾಡಿದ್ದಾನೆ. `ಚಿರು ನನ್ನ ರಾಜ ನಮ್ಮ ರಾಯನ್ ನನ್ನ ಯುವರಾಜ’ ಹೀಗನ್ನುವ ಮೇಘನಾ ಮತ್ತೆ ಕಲಾಸರಸ್ವತಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಜಾಹೀರಾತುಗೋಸ್ಕರ ಬಣ್ಣ ಹಚ್ಚಿದ್ದರು. ಇದಾದ್ಮೇಲೆ ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೀತು. ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಿರ್ದೇಶಕನ ಕಲ್ಪನೆಯಲ್ಲಿ ಅರಳಿದ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಪತ್ನಿ ಮೇಘನಾ ಕಲಾರಾಧನೆಗೆ ಬೆಳ್ಳಿಮೋಡಗಳಿಂದಲೇ ಚಿರು ಹಾರೈಸುತ್ತಿರುತ್ತಾರೆ. ಸೋ, ಸದ್ಯಕ್ಕೆ ಗುಟ್ಟಾಗಿರುವ ನಟಿ ಮೇಘನಾ ಸಿನಿಮಾ ಹಾಗೂ ಪಾತ್ರ ಆದಷ್ಟು ಬೇಗ ಅವರೇ ಹೇಳಿಕೊಳ್ಳಲಿ. ಫ್ಯಾನ್ಸ್ ಜೊತೆ ಬೆಳ್ಳಿಪರದೆಯನ್ನು ಖುಷಿಪಡಿಸಲಿ ಅನ್ನೋದೇ ನಮ್ಮ ಆಸೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಲ್ಮಾನ್‌ ಖಾನ್‌ ಚಿತ್ರಕ್ಕೆ ರವಿಬಸ್ರೂರು ಸಂಗೀತ


ಕನ್ನಡ ಚಿತ್ರರಂಗವನ್ನು ಪರಭಾಷಿಗರು ಅದ್ಯಾವತ್ತೋ ಒಪ್ಪಿ ಅಪ್ಪಿದ್ದಾಗಿದೆ. ಇಲ್ಲಿನ ಸಿನಿಮಾಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾಗಿದೆ. ಹಾಗಾಗಿಯೇ ಈಗ ಕನ್ನಡದ ಹೀರೋಗಳು, ನಿರ್ದೇಶಕರು ಅಷ್ಟೇ ಯಾಕೆ ತಾಂತ್ರಿಕ ವರ್ಗದವರಿಗೆ ಬೇಡಿಕೆ ಹೆಚ್ಚು. ಇಲ್ಲಿನ ಅನೇಕರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿ ಅಂದರೆ, “ಉಗ್ರಂ” ಮತ್ತು “ಕೆಜಿಎಫ್‌” ಮೂಲಕ ಜೋರು ಸುದ್ದಿ ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.

ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಈ ಬಗ್ಗೆ ರವಿ ಬಸ್ರೂರು ಅವರೇ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದೇನೆ. ಈ ನನ್ನ ಜರ್ನಿಗೆ ನಿಮ್ಮ ಬೆಂಬಲ ಹೀಗೆ ಇರಲಿ” ಎಂದು ತಮ್ಮ ಸಂಭ್ರವನ್ನು ಹಂಚಿಕೊಂಡಿದ್ದಾರೆ ರವಿಬಸ್ರೂರು.


“ಅಂತಿಮ್” ದಿ ಫೈನಲ್ ಟ್ರೂತ್ ಚಿತ್ರವನ್ನು ಮಹೇಶ್ ಮಂಜ್ರೆಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಬಸ್ರೂರು ಸಂಗೀತ ನೀಡುತ್ತಿರುವುದು ವಿಶೇಷವಾದರೂ, ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ “ಕೆಜಿಎಫ್”. ಇದು ರವಿಬಸ್ರೂರು ಅವರಿಗೆ ಪರಭಾಷೆಯಲ್ಲಿ ಹೆಸರು ತಂದುಕೊಟ್ಟಿತು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಿಗೂ ಸಂಗೀತ ನೀಡುತ್ತಿರುವ ರವಿಬಸ್ರೂರು, ಇನ್ನೂ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೌದು, ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್, ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡುತ್ತಿದ್ದು, ಆ ನೈಜ ಚಿತ್ರಕ್ಕೆ ‘ಗರುಡ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್‌ ಹೇಳುತ್ತಿದೆ. ಈಗಾಗಲೇ ರವಿ ಬಸ್ರೂರ್ ಹಿಂದಿಯ ಯುಧ್ರಾ. ‘ಗಲ್ಲಿ ಬಾಯ್’ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

`ಸಲಗ’ ನಿಗೆ ಸಂತೋಷವಿಲ್ಲ; ಕರೆಂಟ್ ಶಾಕ್- ನರ್ತಕಿಯಲ್ಲಿ ಕೋಟಿಗೊಬ್ಬನ ನರ್ತನ !

ದುನಿಯಾ ವಿಜಯ್ ಅಭಿನಯದ'ಸಲಗ'ಚಿತ್ರಕ್ಕೆ ಕರೆಂಟ್ ಶಾಕ್ ಎದುರಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ‘ಸಲಗ’ ಚಿತ್ರಕ್ಕೆ ಸಂತೋಷವಿಲ್ಲದಂತಾಗಿದೆ. ಹಾಗಂತ, ಅಭಿಮಾನಿಗಳು ಬೇಸರಪಟ್ಟುಕೊಳ್ಳುವ ಹಾಗೂ ಆಘಾತಕ್ಕೆ ಒಳಗಾಗುವಂತಹದ್ದೇನ್ ಆಗಿಲ್ಲ. ಜಸ್ಟ್ ಥಿಯೇಟರ್ ಚೇಂಜ್ ಆಗಿದೆ ಅಷ್ಟೇ. ಸಂತೋಷ್ ಚಿತ್ರಮಂದಿರದಲ್ಲಿ ಧಗಧಗಿಸಬೇಕಿದ್ದ `ಸಲಗ'ಚಿತ್ರ ಕೆ.ಜಿ.ರಸ್ತೆಯಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.ಇಷ್ಟಕ್ಕೆಲ್ಲಾ ಕಾರಣ ತಾಂತ್ರಿಕ ದೋಷ.ಹೌದು,ಸಂತೋಷ್ ಥಿಯೇಟರ್‌ನಲ್ಲಿ ತಾಂತ್ರಿಕ ಸಮಸ್ಯೆಯಿದೆ.

ಹೀಗಾಗಿ,’ಸಲಗ'ಚಿತ್ರತಂಡ ಥಿಯೇಟರ್ ಬದಲಾಯಿಸಿದ್ದಾರೆ.4ಕೆ ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್‌ನ ಒಳಗೊಂಡಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ' ಪ್ರದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹೀಗಾಗಿ,ಒಂಟಿಸಲಗನ ಸಕಲ ಅಭಿಮಾನಿ ಬಳಗವೆಲ್ಲವೂ ತ್ರಿವೇಣಿ ಚಿತ್ರಮಂದಿರಕ್ಕೆ ಬಂದು ಹಬ್ಬಮಾಡಿ ಸಂಭ್ರಮಿಸುವಂತೆ ಚಿತ್ರತಂಡ ಕೋರಿಕೊಂಡಿದೆ.ಕಳೆದ ಶುಕ್ರವಾರವಷ್ಟೇ ದೊಡ್ಮನೆ ಮೊಮ್ಮಗಳ ಚಿತ್ರಕ್ಕೆ ಕರೆಂಟ್ ಶಾಕ್ ಎದುರಾಗಿತ್ತು. ಸಂತೋಷ್ ಚಿತ್ರಮಂದಿರದಲ್ಲಿ ನಿನ್ನ ಸನಿಹಕೆ ಚಿತ್ರದ ಶೋ ಕ್ಯಾನ್ಸಲ್ ಆಗಿತ್ತು.

ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಪ್ರದರ್ಶನ ರದ್ದಾಯ್ತು. ಕೊನೆಗೆ ನಿನ್ನ ಸನಿಹಕೆ ಚಿತ್ರತಂಡ ಥಿಯೇಟರ್ ಬದಲಾಯಿಸಿದರು.ಇದೀಗಸಲಗ’ ಚಿತ್ರತಂಡ ಮೊದಲೇ ಹೆಚ್ಚೆತ್ತುಕೊಂಡ್ತಾ ಅಥವಾ ನಿಜವಾಗಲೂ ತಾಂತ್ರಿಕವಾಗಿ ಕೆಲಸ ನಡೆಯುತ್ತಿದೆಯೋ ಗೊತ್ತಿಲ್ಲ? ರಿಲೀಸ್‌ಗೂ ಮುನ್ನವೇ ‘ಸಲಗ'ಚಿತ್ರತಂಡ ಥಿಯೇಟರ್ ಬದಲಾಯಿಸಿದೆ.

ಇದರಿಂದ ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು.ಒಂದ್ವೇಳೆ ಅಭಿಮಾನಿಗಳೆಲ್ಲರೂ ಸೇರಿ ಹಬ್ಬ ಮಾಡೋದಕ್ಕೆ ಸಜ್ಜಾದಾಗ ಕರೆಂಟ್ ಶಾಕ್ ಎದುರಾಗಿದ್ದರೆ ನಿರಾಸೆಯಾಗ್ತಿತ್ತು. ಅದಕ್ಕಿಂತ ಚಿತ್ರಮಂದಿರವನ್ನೇ ಬದಲಾಯಿಸಿ ‘ಸಲಗ’ ಫ್ಯಾನ್ಸ್ಗೆ ಬೇರೆ ಥಿಯೇಟರ್ ಅರೆಂಜ್ ಮಾಡಿದ್ದು ಒಂದು ರೀತಿ ಒಳ್ಳೆಯದೇ ಆಯ್ತು.

ಇನ್ನೂ ಕೋಟಿಗೊಬ್ಬ-3 ಚಿತ್ರತಂಡ ಅನೌನ್ಸ್ ಮಾಡಿದಂತೆ ನರ್ತಕಿಯಲ್ಲೇ ತಮ್ಮ ಸಿನಿಮಾನ ರಿಲೀಸ್ ಮಾಡ್ತಿದ್ದಾರೆ. ಅಕ್ಟೋಬರ್ 14ರಂದು ನರ್ತಕಿಯಲ್ಲಿ ಕೋಟಿಗೊಬ್ಬ-3 ಚಿತ್ರ ಧಗಧಗಿಸಲಿದೆ. ಅಭಿನಯ ಚಕ್ರವರ್ತಿಯ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸಲಿದ್ದಾರೆ.

Categories
ಸಿನಿ ಸುದ್ದಿ

ಗಣೇಶ್‌ ಮನೆಗೊಂದು ಗೋಲ್ಡನ್‌ ಕಾರು! ದಸರಾ ಹಬ್ಬಕ್ಕೂ ಮುನ್ನ ಹೊಸ ಅತಿಥಿ ಬರಮಾಡಿಕೊಂಡ ಗಣಿ!!

ಗಂಧದಗಡಿಯ ಗೋಲ್ಡನ್‌ಸ್ಟಾರ್ ಗಣೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ದಸರಾ ಹಬ್ಬಕ್ಕೆ ವಿಶೇಷವಾಗಿ ನಟ ಗೋಲ್ಡನ್‌ಸ್ಟಾರ್ ಮನೆಗೆ ನ್ಯೂ ಗೆಸ್ಟ್ ನ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಹೊಸ ಅತಿಥಿ ಬೇರಾರು ಅಲ್ಲ ಮರ್ಸಿಡೀಸ್ ಬೆನ್ಜ್ ಕಾರು

ಸಾಮಾನ್ಯವಾಗಿ ಹಬ್ಬ-ಹರಿದಿನಗಳಂದು ಹೊಸ ಮನೆ-ಕಾರು ಖರೀದಿ ಸೇರಿದಂತೆ ಇತ್ಯಾದಿ ವಸ್ತುಗಳ ಪರ್ಚೈಸ್ ಹಾಗೂ ಶುಭಕಾರ್ಯಗಳಿಗೆ ಚಾಲನೆ ಕೊಡ್ತಾರೆ. ಅದರಂತೇ, ಮುಂಗಾರುಮಳೆಯ ಪ್ರೀತಂ ದಸರಾ ಹಬ್ಬ ರಂಗೇರಿರುವಾಗ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಗೋಲ್ಡನ್ ಸ್ಟಾರ್ ಅಂತನೇ ಕರೆಸಿಕೊಳ್ಳುವ ಗಣಿ ಬಳಿ ಕಾಸ್ಟ್ಲೀಯಸ್ಟ್ ಕಾರುಗಳಿವೆ‌. ಈಗ ಮತ್ತೊಂದು‌ ದುಬಾರಿ ಕಾರು ನಟ ಗಣೇಶ್ ಮನೆಮುಂದೆ ಪಾರ್ಕ್ ಆಗಿದೆ. ಮಗ ವಿಹಾನ್ ಜೊತೆ ಶೋ ರೂಂಗೆ ಹೋಗಿ ಹೊಸ ಕಾರು ಪಡೆದಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ನಟ ಗಣೇಶ್ ಪರ್ಚೈಸ್ ಮಾಡಿರುವ ನ್ಯೂ ಕಾರ್‌ನ ಫೋಟೋಗಳು ಸಖತ್ ವೈರಲ್ ಆಗುತ್ತಿವೆ .


ಚಮಕ್ ಕೊಟ್ಟಮೇಲೆ ಗೀತ ಹಾಗೂ ಗಿಮಿಕ್ ಚಿತ್ರಗಳು ನಿರೀಕ್ಷೆಯ ಮಟ್ಟಿಗೆ ಕಲೆಕ್ಷನ್ ಮಾಡಲಿಲ್ಲ. ಆದರೇನಂತೆ, ಪ್ರಯತ್ನ ನಮ್ಮದು ಪ್ರತಿಫಲ ಅಭಿಮಾನಿಗಳದ್ದು ಎನ್ನುತ್ತಾ ಗಣಿ ಬ್ಯಾಕ್ ಟು ಬ್ಯಾಕ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


ತ್ರಿಬಲ್ ರೈಡಿಂಗ್, ಗಾಳಿಪಟ-2, ಸಖತ್, ದಿ ಸ್ಟೋರಿ ಆಫ್ ರಾಯಘಡ ಸೇರಿದಂತೆ ಹಲವು ಸಿನಿಮಾಗಳು ಮುಗುಳುನಗೆ ಹೀರೋ ಕೈಯಲ್ಲಿವೆ. ಗಾಳಿಪಟ ಚಾಪ್ಟರ್ 2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಮುಂಗಾರುಮಳೆಯಿಂದಾದ ಸೊಂಪಾದ ಬೆಳೆ ಗಾಳಿಪಟದಿಂದ ಆಗಬೇಕು ಎನ್ನುತ್ತಾ ಇಡೀ ಟೀಮ್ ಶ್ರಮವಹಿಸಿ ದುಡಿಯುತ್ತಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರಶ್ಮಿಕಾ ಮಂದಣ್ಣಗೆ ಬೆಂಗಾಲಿ ಪಾತ್ರ ಮಾಡುವಾಸೆಯಂತೆ! ಫ್ಯಾನ್‌ ರಚಿಸಿದ ಚಿತ್ರ ನೋಡಿ ಇಂಗಿತ ಹೊರ ಹಾಕಿದ ಬೆಡಗಿ!!

ಸದಾ ಸುದ್ದಿಯಲ್ಲಿರುತ್ತಿದ್ದ ಕೊಡಗಿನ ಬೆಡಗಿ ರಶ್ಮಿಕಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಅವರು ಕನ್ನಡದ ಹೊಸ ಸಿನಿಮಾದಲ್ಲೇನಾದ್ರೂ ನಟಿಸ್ತಾ ಇದಾರಾ ಅನ್ನೋ ಕುತೂಹಲದ ಪ್ರಶ್ನೆ ಸಹಜ. ಆದರೆ, ರಶ್ಮಿಕಾ ಸುದ್ದಿಯಲ್ಲಿರೋದು ಸತ್ಯ. ಆದರೆ, ಕನ್ನಡ ಸಿನಿಮಾ ಮಾಡ್ತಾ ಇಲ್ಲ ಅಷ್ಟೇ. ಬದಲಾಗಿ ಅವರು ಬೆಂಗಾಲಿ ಚಿತ್ರವೊಂದರಲ್ಲೂ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೌದು, “ಕಿರಿಕ್‌ ಪಾರ್ಟಿ” ಮೂಲಕ ಕಿರಿಕ್‌ ಮಾಡಿಕೊಂಡೇ ಬಂದ ಬೆಡಗಿ ರಶ್ಮಿಕಾ, ನೋಡ ನೋಡುತ್ತಿದ್ದಂತೆಯೇ ಅವರು, ಕನ್ನಡದಿಂದ ತೆಲುಗು, ತಮಿಳು ಚಿತ್ರರಂಗದಲ್ಲೊಮ್ಮೆ ಹವಾ ಎಬ್ಬಿಸಿಬಿಟ್ಟರು. ಅಲ್ಲೊಂದ ಒಮ್ಮೆಲೆ ಬಾಲಿವುಡ್‌ ಅಂಗಳಕ್ಕೂ ಜಿಗಿದಿದ್ದು ಗೊತ್ತೇ ಇದೆ. ಹಾಗಾಗಿ ರಶ್ಮಿಕಾ ಪಂಚಭಾಷಾ ನಟಿ ಅನ್ನೋ ಮಾತಿಗೂ ಕಾರಣರಾಗಿದ್ದಾರೆ. ಅವರು ಮಲಯಾಳಂ ಸಿನಿಮಾದಲ್ಲಿ ನಟಿಸಬೇಕು ಅಂದುಕೊಂಡಿದ್ದರು. ಅಲ್ಲಿನ್ನೂ ಅವಕಾಶದ ಬಾಗಿಲು ಓಪನ್‌ ಆಗಿಲ್ಲ. ಅದರ ನಡುವೆಯೇ ರಶ್ಮಿಕಾ ಈಗ ಬೆಂಗಾಲಿ ಸಿನಿಮಾರಂಗ ಕಡೆ ಒಲವು ತೋರಿದ್ದಾರೆ.


ರಶ್ಮಿಕಾ ಅವರ ಅಭಿಮಾನಿಯೊಬ್ಬರು ಬೆಂಗಾಲಿ ಸಂಸ್ಕೃತಿಯಲ್ಲಿರುವಂತಹ ಭಾವಚಿತ್ರವೊಂದನ್ನು ರಚಿಸಿ, ಅವರಿಗೆ ಶೇರ್ ಮಾಡಿದ್ದಾರೆ. ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಶ್ಮಿ, “ಈಗ ನಿಜಕ್ಕೂ ನನಗೆ ಬೆಂಗಾಲಿ ಪಾತ್ರ ಮಾಡಬೇಕು ಎನಿಸುತ್ತಿದೆ. ಇದು ತುಂಬಾ ಚೆನ್ನಾಗಿದೆ. ಥ್ಯಾಂಕ್ ಯೂ ಸೋ ಮಚ್” ಎಂದು ಹೇಳಿಕೊಂಡಿದ್ದಾರೆ.
ಅವರು ಬೆಂಗಾಲಿ ಸಿನಿಮಾ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಇಂಗಿತ ವ್ಯಕ್ತಪಡಿಸಿರುವುದಂತೂ ನಿಜ. ಸದ್ಯ, ರಶ್ಮಿಕಾ ಅವರು ‘ಪುಷ್ಪ’ ಚಿತ್ರದಲ್ಲಿ ‘ಶ್ರೀವಲ್ಲಿ’ ಪಾತ್ರಧಾರಿಯಾಗಿದ್ದಾರೆ.

ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕರು. ಈಗಾಗಲೇ ಟೀಸರ್ ಮತ್ತು ಮೊದಲ ಹಾಡು ಜೋರು ಸೌಂಡು ಮಾಡಿದ್ದಾಗಿದೆ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಖ್ಯಾತ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಅಂದಹಾಗೆ, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹೊರಬರಲಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಡಿಸೆಂಬರ್ 17ಕ್ಕೆ ಚಿತ್ರ ಬರಲಿದೆ.

ಅತ್ತ ರಶ್ಮಿಕಾ ಅವರು “ಮಿಷನ್ ಮಜ್ನು” ಎಂಬ ಹಿಂದಿ ಸಿನಿಮಾದಲ್ಲೂ ನಟಿಸುತ್ತಿದ್ದು, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ್‌ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ರಶ್ಮಿಕಾ ಕನ್ನಡದಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಕ್ಕಿಂತ ಪರಭಾಷೆಯ ಚಿತ್ರಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ದಸರಾಗೆ ಮದಗಜ ಟೀಸರ್;‌ ಶ್ರೀಮುರಳಿ ಫ್ಯಾನ್ಸ್‌ಗೆ ಹಬ್ಬದೂಟ!


ದಸರಾ ಹಬ್ಬವನ್ನು ಕನ್ನಡ ಚಿತ್ರರಂಗ ಈ ಬಾರಿ ಎಂದಿಗಿಂತಲೂ ಜೋರಾಗಿಯೇ ಸಂಭ್ರಮಿಸಲು ಸಜ್ಜಾಗಿದೆ. ಹೌದು, ಈಗಾಗಲೇ ಅನೌನ್ಸ್‌ ಆಗಿರುವಂತೆ ಸುದೀಪ್‌ ಅಭಿನಯದ “ಕೋಟಿಗೊಬ್ಬ ೩” ಮತ್ತು “ದುನಿಯಾ” ವಿಜಯ್‌ ಅಭಿನಯದ “ಸಲಗ” ಚಿತ್ರಗಳು ರಿಲೀಸ್‌ ಆಗುತ್ತಿವೆ. ಅಂತೆಯೇ ಒಂದಷ್ಟು ಹೊಸಬರ ಸಿನಿಮಾಗಳ ಪೋಸ್ಟರ್‌, ಟೀಸರ್‌ ಹಾಗು ಟ್ರೇಲರ್‌ ರಿಲೀಸ್‌ ಆಗುತ್ತಿವೆ. ಇವುಗಳ ಜೊತೆಯಲ್ಲೇ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗುತ್ತಿದೆ.

ಈ ಮೂಲಕ ಶ್ರೀಮುರಳಿ ಫ್ಯಾನ್ಸ್‌ಗೆ‌ ದಸರಾ ಧಮಾಕ ಗ್ಯಾರಂಟಿ. ಹೌದು, ನಿರ್ದೇಶಕ ನಿರ್ದೇಶಕ ಮಹೇಶ್ ಅವರು “ಮದಗಜ” ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಇದು ಎರಡನೇ ಟೀಸರ್‌ ಆಗಿದ್ದು, ಅಕ್ಟೋಬರ್ 14ರ ಸಂಜೆ 5.5ಕ್ಕೆ ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.


ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ “ಮದಗಜ” ಈಗಾಗಲೇ ತನ್ನ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಜನಮನ ಗೆದ್ದಿದೆ. ಎಲ್ಲೆಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಸದ್ಯ ಶೂಟಿಂಗ್‌ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿರುವ ಚಿತ್ರತಂಡ, ದಸರಾ ಹಬ್ಬಕ್ಕೆ ಟೀಸರ್ ಮೂಲಕ ಎಂಟ್ರಿ ಕೊಡುತ್ತಿದೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ ಎಂದು ಸುದ್ದಿಯಾಗಿದ್ದು, ಶ್ರೀಮುರಳಿ ಫ್ಯಾನ್ಸ್‌, “ಮದಗಜ”ನನ್ನು ಕಣ್ತುಂಬಿಕೊಳ್ಳಲು ಆತುರದಿಂದ ಕಾಯುತ್ತಿದ್ದಾರೆ.

ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇದೊಂದು ಅದ್ಧೂರಿ ಬಜೆಟ್‌ ಚಿತ್ರ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದು, ಆಶಿಕಾಗೆ ಶ್ರೀಮುರಳಿ ಅವರೊಂದಿಗೆ ಇದು ಮೊದಲ ಸಿನಿಮಾ. ಆಶಿಕಾ ಇಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಪಾತ್ರವೂ ಇಲ್ಲಿ ಕುತೂಹಲ ಮೂಡಿಸಿವೆ. ಉಳಿದಂತೆ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಇದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ದಸರಾಗೆ ದಚ್ಚು ಅಭಿನಯದ ಕ್ರಾಂತಿಗೆ ಪೂಜೆ

ನಟ ದರ್ಶನ್‌ “ರಾಬರ್ಟ್‌ ಬಳಿಕ “ಕ್ರಾಂತಿ” ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ, ಆ ಚಿತ್ರಕ್ಕೆ ಮುಹೂರ್ತ ಯಾವಾಗ ಅಂತ ಗೊತ್ತಿರಲಿಲ್ಲ. ಮೂಲಗಳ ಪ್ರಕಾರ ದರ್ಶನ್‌ ಅಭಿನಯದ “ಕ್ರಾಂತಿ” ಚಿತ್ರದ ಮುಹೂರ್ತ ದಸರಾ ಹಬ್ಬದಂದು ನಡೆಯಲಿದೆ ಎನ್ನಲಾಗಿದೆ. ಅಕ್ಟೋಬರ್‌ ೧೫ರಂದು “ಕ್ರಾಂತಿ” ಚಿತ್ರಕ್ಕೆ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

ಈ ಹಿಂದೆ ದರ್ಶನ್‌ ಅವರಿಗೆ “ಯಜಮಾನ” ಚಿತ್ರವನ್ನು ನಿರ್ಮಿಸಿದ್ದ ಶೈಲಜಾ ನಾಗ್‌ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂತೆಯೇ, ಆ ಚಿತ್ರವನ್ನು ನಿರ್ದೇಶಿಸಿದ್ದ ವಿ.ಹರಿಕೃಷ್ಣ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶೈಲಜಾನಾಗ್‌ ಅವರ ನಿರ್ಮಾಣದ ಎರಡನೇ ಪ್ರಾಜೆಕ್ಟ್‌ ಇದಾಗಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿಯಲ್ಲೂ ಡಬ್‌ ಆಗಲಿದೆ.


ಅಂದಹಾಗೆ, ಈ ಹಿಂದೆ “ಯಜಮಾನ” ಬಾಕ್ಸಾಫೀಸ್‌ನಲ್ಲಿ ದೊಡ್ಡ ಹವಾ ಸೃಷ್ಠಿಸಿತ್ತು. ಎಲ್ಲೆಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್‌ ಬಂದಿತ್ತು. ಅದೇ ಜೋಡಿ ಈಗ “ಕ್ರಾಂತಿ”ಯ ಹಿಂದೆ ನಿಂತಿದೆ. ಚಿತ್ರದ ಶೀರ್ಷಿಕೆಯೇ ಇಲ್ಲಿ ಫೋರ್ಸ್‌ ಆಗಿದೆ.

ಚಿತ್ರದ ಕಥೆ ಕೂಡ ಅಷ್ಟೇ ಫೋರ್ಸ್‌ ಆಗಿರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸದ್ಯ ಈ ಚಿತ್ರದಲ್ಲಿ ದರ್ಶನ್‌ ಹೀರೋ. ಅವರಿಗೆ ನಾಯಕಿ ಯಾರು, ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.

Categories
ಸಿನಿ ಸುದ್ದಿ

ಟ್ರಾಫಿಕ್ ಅಂದ್ಮೇಲೆ ಅಕ್ಕ-ಪಕ್ಕ ಕಾರ್‌ಗಳು ಇರುತ್ತೆ ಸ್ಟಾರ್‌ವಾರ್‌ಗೆ ಸುದೀಪ್ ಬೆಂಕಿ ರಿಯಾಕ್ಷನ್ ! `ಸಲಗ-ಕೋಟಿಗೊಬ್ಬ’; ಜಿದ್ದಲ್ಲ ಜಸ್ಟ್ ಫೈಟ್

  • ವಿಶಾಲಾಕ್ಷಿ

ದುನಿಯಾ ವಿಜಯ್ ಮೊದಲ ಭಾರಿ ನಿರ್ದೇಶಿಸಿ ನಟಿಸಿರುವ ಸಲಗ' ಹಾಗೂ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಅಭಿನಯಿಸಿರುವ ‘ಕೋಟಿಗೊಬ್ಬ-3’ ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರುವುದು. ಗಾಂಧಿನಗರದಲ್ಲಿ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿರುವುದು ಇಡೀ ಆರು ಕೋಟಿ ಕನ್ನಡ ಜನತೆಗೆ ಮಾತ್ರವಲ್ಲ ಅಕ್ಕ-ಪಕ್ಕ ರಾಜ್ಯದ ಮಂದಿಗೂ ಗೊತ್ತಾಗಿದೆ. ಗಂಧದಗುಡಿಯ ಇಬ್ಬರು ನಟರುಗಳ ಬಹುನಿರೀಕ್ಷೆಯ ಸಿನಿಮಾ ಒಂದೇ ದಿನ ಬಿಡುಗಡೆಯಾಗ್ತಿರುವುದರಿಂದ ಸಿನಿಮಾ ಮಂದಿ ಮಾತ್ರವಲ್ಲ ಸಾಮಾನ್ಯ ಜನರು ಕೂಡ ಇದನ್ನು ಸ್ಟಾರ್‌ವಾರ್ ಅಂತಲೇ ಪರಿಗಣಿಸಿದ್ದಾರೆ. ಆಯುಧಪೂಜೆಯ ದಿನದಂದು ಆರಂಭಗೊಳ್ಳುವ ಸ್ಟಾರ್‌ನಟರಿಬ್ಬರ ಸಿನಿಮಾ ಜಾತ್ರೆಯನ್ನು ನೋಡಲಿಕ್ಕೆ ಕಾತುರರಾಗಿದ್ದಾರೆ. ಮೊನ್ ಮೊನ್ನೆಯಷ್ಟೇ ನಟ ವಿಜಯ್ ಅವ್ರು ಸ್ಟಾರ್‌ವಾರ್ ಸುಂಟರಗಾಳಿಗೆ ಉತ್ತರ ಕೊಟ್ಟಿದ್ದರು. ಇದೀಗ ನಟ ಸುದೀಪ್ ಸ್ಟಾರ್‌ವಾರ್ ಬಿರುಗಾಳಿಗೆ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದರು ಕಿಚ್ಚ ಅದರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ…

ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಸಲಗ ಮತ್ತು ಕೋಟಿಗೊಬ್ಬ-3' ಚಿತ್ರಗಳದ್ದೇ ಚರ್ಚೆ. ಬಹುನಿರೀಕ್ಷೆಯ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರೋದ್ರಿಂದ, ಅದರಲ್ಲೂ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ತಿರುವುದರಿಂದ ಎಲ್ಲರ ಕಣ್ಣು ಈಗಸಲಗ ಮತ್ತು ‘ಕೋಟಿಗೊಬ್ಬ-3’ ಚಿತ್ರದ ಮೇಲೆ ಬಿದ್ದಿದೆ. ಸಲಗ ವರ್ಸಸ್ ಕೋಟಿಗೊಬ್ಬ ಎನ್ನುವಂತಾಗಿದೆ. ಏಕಕಾಲಕ್ಕೆ ಫೀಲ್ಡಿಗಿಳಿಯುತ್ತಿರುವ ಇಬ್ಬರು ಸ್ಟಾರ್‌ಗಳ ಚಿತ್ರಕ್ಕೆ ಪ್ರೇಕ್ಷಕಮಹಾಷಯರಿಂದ ಯಾವ್ ರೀತಿಯ ರೆಸ್ಪಾನ್ಸ್ ಸಿಗ್ಬೋದು? ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಎರಡು ಸಿನಿಮಾಗಳು ಯಾವ್ ರೀತಿಯಾಗಿ ಸದ್ದು ಮಾಡ್ಬೋದು? ಎಷ್ಟು ಕಮಾಯಿ ಮಾಡ್ಬೋದು? ಇದೆಲ್ಲದರ ಜೊತೆಗೆ ಸ್ಟಾರ್‌ವಾರ್ ಹಾಗೂ ಫ್ಯಾನ್ಸ್ವಾರ್ ಆಗ್ಬೋದಾ? ಆಗುತ್ತಂತೆ ಅಂತ ಒಂದು ತಂಡ? ಆಗಲ್ಲವಂತೆ ಅಂತ ಒಂದು ತಂಡ? ನೋಡ್ತಾಯಿರಿ ಅನ್ನೋ ಮತ್ತೊಂದು ತಡ ಇಡೀ ಗಾಂಧಿನಗರದ ತುಂಬೆಲ್ಲಾ ಇದೆ. ಆದರೆ, ಏನಾಗಲಿದೆ ಅನ್ನೋದು ಮೂರು ದಿನದಲ್ಲಿ ಗೊತ್ತಾಗಲಿದೆ.

ಮೂರು ರಾತ್ರಿ ಕಳೆದು, ಮೂರು ಸಲ ಬೆಳಗಾಗುವಷ್ಟರಲ್ಲಿ ಗಾಂಧಿನಗರ ರಂಗೇರಿರುತ್ತೆ. ಸಂತೋಷ್ ಸಲಗ'ನ ಕಟೌಟ್ ಅಂಡ್ ಬ್ಯಾನರ್ ಹಾಕ್ಕೊಂಡು ಸಂತಸಪಡುತ್ತಿರುತ್ತೆ,ನರ್ತಕಿ’ ಕೋಟಿಗೊಬ್ಬನನ್ನು ಹೊತ್ಕೊಂಡು ನಗುತ್ತಿರುತ್ತೆ. ಇಬ್ಬರು ಸ್ಟಾರ್‌ನಟರ ಫ್ಯಾನ್‌ಗಳು ಥಿಯೇಟರ್ ಅಖಾಡದಲ್ಲಿ ಜಮಾಯಿಸಿರುತ್ತಾರೆ. ಒಂದು ಕಡೆ ಕಿಚ್ಚನಿಗೆ ಜೈಕಾರ, ಇನ್ನೊಂದು ಕಡೆ ಬ್ಲಾಕ್‌ಕೋಬ್ರಾಗೆ ಜೈಕಾರ ನಡೆಯುತ್ತಿರುತ್ತೆ. ಈ ಜೈಕಾರದ ಮಧ್ಯೆ ಫ್ಯಾನ್ಸ್ವಾರ್ ನಡಿಯದೇ ಹೋದರೆ ಮೈಸೂರಿನಲ್ಲಿ ದಸರಾ ಹಬ್ಬ ಎಷ್ಟು ಅದ್ದೂರಿಯಾಗಿ ಆರಂಭಗೊಂಡು ಅಡ್ಡಿಆತಂಕವಿಲ್ಲದೇ ಯಶಸ್ವಿಯಾಗುತ್ತೋ, ಅದೇ ರೀತಿ ಗಾಂಧಿನಗರದಲ್ಲಿ ನಡೆಯುವ ಸಿನಿಮಾ ಜಾತ್ರೆಯೂ ಸಕ್ಸಸ್ ಆಗುತ್ತೆ. ಹಾಗೆಯೇ, ಆಗಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಕೆಲವರು ಸ್ಟಾರ್‌ವಾರ್ ಜೊತೆ ಫ್ಯಾನ್ಸ್ವಾರ್‌ಗೂ ಬೆಂಕಿ ಹಚ್ಚೋದಕ್ಕೆ ನೋಡ್ತಾಯಿದ್ದಾರೆ. ಅವರೆಲ್ಲರೂ ಕೂಡ ಕಿಚ್ಚನ ಮಾತುಗಳನ್ನು ಒಮ್ಮೆ ಕೇಳಿಸಿಕೊಂಡರೆ ಬೆಸ್ಟ್.

ಕೋಟಿಗೊಬ್ಬ-೩ ಬಿಡುಗಡೆಯ ಹಿನ್ನಲೆಯಲ್ಲಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಜಾರ್‌ನಲ್ಲಿ ಕೇಳಿಬರುತ್ತಿರುವ ಮತ್ತು ಧಗಧಗಿಸುತ್ತಿರುವ ಸ್ಟಾರ್‌ವಾರ್' ಕಥೆಯ ಕುರಿತಾದ ಪ್ರಶ್ನೆಯೊಂದನ್ನು ಮಾಧ್ಯಮಮಿತ್ರರು ಕಿಚ್ಚ ಸುದೀಪ್ ಬಳಿ ಕೇಳಿದರು. ಇದಕ್ಕೆ ಉತ್ತರ ನೀಡಿದ ಕಿಚ್ಚ, ಟ್ರಾಫಿಕ್ ಅಂದ್ಮೇಲೆ ಅಕ್ಕಪಕ್ಕದಲ್ಲಿ ಕಾರ್‌ಗಳು ಇದ್ದೇ ಇರುತ್ವೆ ಅಲ್ವಾ ಸಾರ್. ಕೊರೊನಾ ಟೈಮ್‌ನಲ್ಲಿ ರೋಡ್ ಖಾಲಿಯಿದ್ದರು ಕಾರ್ ಓಡಿಸೋಕೆ ಅವಕಾಶ ಇದ್ರೂ ಕೂಡ ಹೆದರಿಕೊಂಡು ಮನೆಯಲ್ಲೇ ದೀಪ ಹಚ್ಚಿಕೊಂಡು ಚಪ್ಪಾಳೆ ತಟ್ಕೊಂಡು ಇದ್ವಿ. ಇವತ್ತು ರೋಡ್‌ನಲ್ಲಿ ನಾನೇ ಒಬ್ಬನೇ ಕಾರ್ ಓಡಿಸ್ಬೇಕು, ನಾನು ಒಬ್ಬನೇ ಓಡಾಡ್ಬೇಕು ಅಂದ್ರೆ ಹೆಂಗೆ ಸಾರ್. ಎಲ್ಲರೂ ಓಡಾಡೋದಕ್ಕೆ ಅವಕಾಶ ಇದೆ ಎಲ್ಲರೂ ಬರಲಿ. ಅಷ್ಟಕ್ಕೂ,ಯಾರು ನಮ್ಮ ಎದುರುಗಡೆ ಬಂದ್ರೂ, ಯಾರು ಪಕ್ಕದಲ್ಲಿ ಬಂದ್ರೂ ಅನ್ನೋದು ದೊಡ್ಡದಲ್ಲ. ಈ ಕೊರೊನಾ ಬಂದು ಹೋದ್ಮೇಲೆ ನಮ್ಮ ಸಿನಿಮಾಗೆ ಬೆಳಕು ಕಾಣ್ತಿದೆ, ಥಿಯೇಟರ್‌ಗಳು ಸಿಗುತ್ತಿವೆ, ವಿತರಕರು ಸಿನಿಮಾ ಕೊಂಡುಕೊಳ್ಳಲಿಕ್ಕೆ ಮುಂದೆ ಬರುತ್ತಿದ್ದಾರೆ ಇದನ್ನೆಲ್ಲಾ ನೋಡಿ ಖುಷಿಪಡಬೇಕು.

ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಜಾಸ್ತಿ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಕಡಿಮೆ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ವಾಸ್ತವ ಹೀಗಿರುವಾಗ, ಕೆತ್ತಿರುವ ಹಳೆಯ ಹಿಸ್ಟರಿಗಳು, ತಿಕ್ಕಿ ಅಳಿಸಿದರೂ ಅಳಿಯದ ಹಿಸ್ಟರಿಗಳು ಕಣ್ಮುಂದೆ ಇರುವಾಗ ಯಾಕ್ ಕಚ್ಚಾಡಬೇಕು, ಯಾಕೇ ಬಿಪಿ-ಟೆನ್ಷನ್-ಫೀವರ್ ಬರಿಸಿಕೊಳ್ಳಬೇಕು. ಏನಾಗ್ಬೇಕು ಅಂತ ಬರೆದಿರುತ್ತೋ, ಅದು ಆಗಿಯೇ ಆಗುತ್ತೆ ಮತ್ತು ಅದೇ ಆಗ್ಬೇಕು ಎನ್ನುವುದು ಕಿಚ್ಚನ ಮಾತು ಮತ್ತು ವಾದ. ಅಂದ್ಹಾಗೇ, ಕೊರೊನಾ ಟೈಮ್‌ನಲ್ಲಿ ಮನೆಯಲ್ಲಿದ್ದಾಗ ಹೆಂಗಿದ್ದೀರಾ? ಏನ್ ತಿಂದ್ರಿ ? ಮುಂದೇನ್ ಮಾಡೋಣ ಅಂತ ಮಾತನಾಡಿಕೊಂಡು ಈಗ `ನಾನಾ-ನೀನಾ’ ಅಂದರೆ ಚೆನ್ನಾಗಿರುತ್ತಾ? ಅಷ್ಟಕ್ಕೂ ಜಿದ್ದು ಬೇಕಾ ನೀವೇ ಹೇಳಿ. ಅಷ್ಟಕ್ಕೂ, ಎಲ್ಲರೂ ಅವರವರ ಚಿತ್ರಕ್ಕಾಗಿ ಫೈಟ್ ಮಾಡಬೇಕು ಮಾಡ್ತೀವಿ. ಹಾಗಂತ, ಇದು ಜಿದ್ದಲ್ಲ- ಪ್ರತಿಕಾರವೂ ಅಲ್ಲ ಅನ್ನೋದು ಕಿಚ್ಚನ ಒಂದೇ ಸಾಲಿನ ಉತ್ತರ.

ಅಷ್ಟಕ್ಕೂ, ಪಕ್ಕದಲ್ಲಿ ಬಿಡುಗಡೆಯಾಗುವ ಸಲಗ' ಚಿತ್ರಕ್ಕೆ ಸೋಲಾಗ್ಬೇಕು ಅಂತ ಬಯಸೋ ಸಣ್ಣ ಮನಸ್ಸು ಮತ್ತು ಸಣ್ಣತನ ಸುದೀಪ್ ಅವ್ರದ್ದಲ್ಲ.ಸಲಗ’ ಚಿತ್ರ ಸೆಟ್ಟೇರುವಾಗಲೇ ಗೆಸ್ಟ್ ಆಗಿ ಹೋಗಿ ಫಸ್ಟ್ ಕ್ಲಾಪ್ ಮಾಡಿ ೨೦೦೦' ಕೊಟ್ಟು ೨೦೦ ಕೋಟಿಯಾಗ್ಲಿ ಅಂತ ಹಾರೈಸಿ ಬಂದವರು. ಹೀಗಿರುವಾಗಸಲಗ’ ಸೋಲಬೇಕು ಅಂತ ಬಯಸ್ತಾರೆ ಯಾವುದೇ ಕಾರಣಕ್ಕೂ ಕೆಟ್ಟದ್ದು ಬಯಸಲ್ಲ. ಹೀಗಾಗಿ, ಮಾಧ್ಯಮ ಮುಂದೆ ಕೋಟಿಗೊಬ್ಬನ' ಬಗ್ಗೆ ಮಾತನಾಡುವಾಗ ಕ್ಲಾರಿಟಿ ಕೊಟ್ಟರು. ನನ್ನ ಗೆಳೆಯ ಹಾಗೂಸಲಗ’ ನಿರ್ಮಾಪಕ ಶ್ರೀಕಾಂತ್ ಜೊತೆಗಿನ ಗೆಳೆತನಕ್ಕೆ ಮುಹೂರ್ತಕ್ಕೆ ಹೋಗಿ ಮನಸಿಂದ ಹಾರೈಸಿದ್ದೆ. ಅವತ್ತು ಏನು ಶುಭ ಕೋರಿದ್ದೆನೊ ಇವತ್ತು ಕೂಡ ಅದೇ ಮನಸಿಂದ ಶುಭಹಾರೈಸ್ತೀನಿ ಎಂದರು. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಕೋಟಿಗಟ್ಟಲೇ ಬಂಡವಾಳ ಹಾಕಿದ್ದಾರೆ ಅವರಿಗೂ ಒಳ್ಳೆಯದಾಗ್ಬೇಕು ಅಂತ ಅಭಿನಯ ಚಕ್ರವರ್ತಿ ಹೃದಯದಿಂದ ಹೇಳಿಕೊಂಡರು.

ಎಲ್ಲಾ ಸ್ಟಾರ್‌ಗಳು ಅಷ್ಟೇ, ಯಾರ್ ತಂಟೆಗೆ ಯಾರು ಸುಮ್ ಸುಮ್ನೇ ಹೋಗಲ್ಲ. ಸುಮ್ನೆ ಇದ್ದಾಗ ಕೆಣಕಿಕೊಂಡು ಬಂದರೆ ಸುಮ್ನೆ ಯಾರು ಬಿಡಲ್ಲ. ಸ್ಟಾರ್‌ಗಳ ಮಧ್ಯೆ ಕಾಂಪಿಟೇಷನ್ ಇರಬೇಕು. ಸ್ಪರ್ಧೆ ಇದ್ದಾಗಲೇ ಬೆಳೆಯೋದಕ್ಕೆ ಸಾಧ್ಯ, ಆ ಸ್ಪರ್ಧೆ ಆರೋಗ್ಯಕ ಸ್ಪರ್ಧೆಯಾಗಿರಲಿ ಎನ್ನುವುದೇ ಇಡೀ ಕರ್ನಾಟಕದ ಆರು ಕೋಟಿ ಜನತೆಯ ಆಶಯ. ಆ ಆಶಯವನ್ನು ಹುಸಿಮಾಡದೇ ಹೆಲ್ದಿ ಕಾಂಪಿಟೇಷನ್ ಕೊಡುತ್ತಾ, ಪರಭಾಷೆಯವರು ಹಾಗೂ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮಂದಿ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೊಡಲಿ. ಬರೀ ಸ್ಟಾರ್‌ನಟರುಗಳು ಮಾತ್ರವಲ್ಲದೇ ಪ್ರತಿಯೊಬ್ಬ ಕಲಾವಿದರು ಗೆಲ್ಲಲಿ, ಕನ್ನಡದ ಕೀರ್ತಿ ಇನ್ನಷ್ಟು ಹಬ್ಬಲಿ.`ಸಲಗ-ಕೋಟಿಗೊಬ್ಬ-೩’ ಸಕ್ಸಸ್‌ಫುಲಿ ಯಶಸ್ವಿಯಾಗಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!