ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ನ ಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿರುವ “ಹೊಯ್ಸಳ” ಚಿತ್ರಕ್ಕೆ ಮುಹೂರ್ತ ನಡೆದಿದೆ.
ಮೊದಲ ಸನ್ನಿವೇಶಕ್ಕೆ ಮಂಜುನಾಥ್ “ಕ್ಲಾಪ್” ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ “ಕ್ಯಾಮೆರಾ” ಚಾಲನೆ ಮಾಡಿದರು. ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ.ಸೂರಿ, ಯಶವಂತ್, ಡಾ. ರಮೇಶ್ ಮುಖ್ಯ ಇದ್ದರು.
ವಿಜಯ್ ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ.
ಅಜನೀಶ್ ಲೋಕನಾಥ್ ಸಂಗೀತ ಇರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್. ಸಂಖನ, ಮಾಸ್ತಿ ಅವರ ಮಾತು,ಚಂಪಕದಾಮ ಬಾಬು ಹಾಗೂ ಕುಮಾರ್ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಬಡವ ರಾಸ್ಕಲ್” ನಂತರ ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ಚಿತ್ರದಲ್ಲಿದ್ದಾರೆ.
ಕಣ್ಣಲ್ಲೇ ನಟಿಸುವ ನಾಯಕ.. ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸ್ತಿರುವ ವಸಿಷ್ಠ ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯ ಮೇಲೆ ದಿಬ್ಬಣ ಹೋಗ್ತಿದ್ದಾರೆ. ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜೊತೆಗೆ ಚಿಟ್ಟೆ ತಲ್ವಾರ್ ಪೇಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸ್ತಿದ್ದಾರೆ. ಈಗ ವಸಿಷ್ಠ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸಜ್ಜಾಗಿದ್ದಾರೆ.
‘Love…ಲಿ’ ಎಂದ ಚಿಟ್ಟೆ
ವಸಿಷ್ಠ ಹೀರೋ ಆಗಿ ನಟಿಸ್ತಿರುವ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘Love…ಲಿ’ ಎಂಬ ಬ್ಯೂಟಿಫುಲ್ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್ ನಲ್ಲಿ ಚಿಟ್ಟಿ ಮಿಂಚಿದ್ದಾರೆ.
‘Love…ಲಿ’ ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೋಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯದಲ್ಲಿ ಉಳಿದ ಕಲಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.
ಅಂದಹಾಗೇ ವಸಿಷ್ಠ ಸಿಂಹ ಖಾತೆಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಹೆಡ್ ಬುಷ್, ಸಿಂಬಾ, ಓದೆಲಾ ರೈಲ್ವೇ ಸ್ಟೇಷನ್ ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.
‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಈ ಸಂಸ್ಥೆಯ ನಿರ್ಮಾಣದ “ಕೆ ಜಿ ಎಫ್ 2” ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ ಬಾರಿಸುತ್ತಿದೆ. ಗಳಿಕೆಯಲ್ಲೂ ಮೇಲುಗೈ ಸಾಧಿಸಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾಹಸಕ್ಕೆ ಜನ ಬಹುಪರಾಕ್ ಹೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಮತ್ತೊಂದು ಹೊಸ ಚಿತ್ರದ ಘೋಷಣೆಯಾಗಿದೆ.
ವಿಶೇಷ ಏನೆಂದರೆ, ಈ ಬಾರಿ ‘ಹೊಂಬಾಳೆ ಫಿಲಂಸ್’ ಗೆ ಸಿನಿಮಾ ಮಾಡುವ ಅವಕಾಶ ಪಡೆದಿರುವುದು ಸುಧಾ ಕೊಂಗರ. ಈ ಮಹಿಳೆ ಮೂಲತಃ ಆಂಧ್ರ ಪ್ರದೇಶದವರು. ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸುಧಾ ಕೊಂಗರ ಎಲ್ಲರ ಮನ ಸೆಳೆದಿದ್ದಾರೆ. ಈಗ ಸುಧಾ ಕೊಂಗರ ಮತ್ತು ‘ಹೊಂಬಾಳೆ ಫಿಲಂಸ್ ಸಂಸ್ಥೆ ಕೈ ಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ.
ಗುರುವಾರದಂದು ಈ ಹೊಸಚಿತ್ರ ನಿರ್ಮಾಣದ ಹೊಸ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಚ್ಚರಿ ಎಂದರೆ, ಈ ಬಾರಿ ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲಂಸ್’ ಸಂಸ್ಥೆ ಮುಂದಾಗಿದೆ. ‘ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗರ ಅವರ ಜೊತೆ ನಮ್ಮ ಹೊಸ ಸಿನಿಮಾ ಘೋಷಣೆ ಮಾಡಲು ಹೆಮ್ಮೆ ಆಗುತ್ತಿದೆ’ ಎಂದು ಪೋಸ್ಟ್ ಮಾಡಲಾಗಿದೆ.
ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದ ‘ಸೂರರೈ ಪೋಟ್ರು’ ಚಿತ್ರ ಕೂಡ ಸತ್ಯ ಘಟನೆ ಆಧಾರಿತ ಚಿತ್ರ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸುಧಾ ಅವರು ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದರು.
‘ಹೊಂಬಾಳೆ ಫಿಲಂಸ್ ಮೂಲಕ ಈಗಾಗಲೇ ಅನೇಕ ಸಿನಿಮಾಗಳ ಸಿದ್ಧವಾಗುತ್ತಿವೆ. ಪ್ರಭಾಸ್ ನಟನೆಯ ‘ಸಲಾರ್’, ಶ್ರೀಮುರಳಿ ಅಭಿನಯದ ‘ಬಘೀರ’, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈಗ ಸುಧಾ ಕೊಂಗರ ನಿರ್ದೇಶನದ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಈ ಚಿತ್ರದ ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ಮೇಲೊಬ್ಬ ಮಾಯಾವಿ”. ಚಿತ್ರದ ಟ್ರೇಲರ್ ಅನ್ನು ನಟ ಶ್ರೀನಗರ ಕಿಟ್ಟಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ವಿಜಯ್ ಅವರ ನೆನಪಲ್ಲೇ ಕಾರ್ಯಕ್ರಮ ನಡೆದದ್ದು ವಿಶೇಷ.
ನಾನು ಕೂಡ ಪತ್ರಕರ್ತನಾಗಿ ಹಲವು ಚಿತ್ರಗಳ ವಿಮರ್ಶೆ ಮಾಡಿದ್ದೀನಿ. ಆದರೆ ಅದೇ ಬೇರೆ. ನಿರ್ದೇಶನ ಮಾಡುವುದೇ ಬೇರೆ. ನಿರ್ದೇಶನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾದ ಕುರಿತಾದ ಸಿನಿಮಾ. ಇದರಲ್ಲಿ ಮೂರು ಪ್ರಮುಖ ಪಾತ್ರಗಳಿವೆ. ಸಕ್ಕರೆ, ಇರುವೆ ಹಾಗೂ ಸುಲೇಮಾನ್. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತ. ಇನ್ನು ಟ್ರೇಲರ್ ಬಿಡುಗಡೆ ಮಾಡಲು ಶ್ರೀನಗರ ಕಿಟ್ಟಿ ಬಂದಿದ್ದಾರೆ . ಅವರಿಗೆ ತುಂಬು ಹೃದಯದ ಧನ್ಯವಾದ. ಇದೇ ಇಪ್ಪತ್ತೊಂಬತ್ತರಂದು ರಿಲೀಸ್ ಆಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನವೀನ್ ಕೃಷ್ಣ,
ಸಂಚಾರಿ ವಿಜಯ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳುತ್ತಾ ಮಾತು ಆರಂಭಿಸಿದ ನಟ ಚಕ್ರವರ್ತಿ ಚಂದ್ರಚೂಡ್, ಸಿನಿಮಾ ಆರಂಭವಾದ ಬಗ್ಗೆ ಮಾಧ್ಯಮದ ಮುಂದೆ ಬಿಡಿಸಿಟ್ಟರು. ತಾವು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಚಾರಿ ವಿಜಯ್ ಚಿತ್ರೀಕರಣ ಸಮಯದಲ್ಲಿ ಮಾಡಿದ ಕೆಲಸಗಳನ್ನು ಚಂದ್ರಚೂಡ್ ಮೆಲಕು ಹಾಕಿದರು. ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಬಗ್ಗೆ ಕೂಡ ಮಾಹಿತಿ ನೀಡಿದ ಚಕ್ರವರ್ತಿ ಚಂದ್ರಚೂಡ್, ಚಿತ್ರದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆಯ ಮಾತುಗಳಾಡಿ, ಚಿತ್ರತಂಡಕ್ಕೆ ಬೆನ್ನು ತಟ್ಟಿರುವ ಕಿಚ್ಚ ಸುದೀಪ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.
ನಿರ್ಮಾಪಕ ಭರತ್ ಕುಮಾರ್, ಚಿತ್ರ ಸಾಗಿ ಬಂದ ಬಗ್ಗೆ ಹೇಳುತ್ತಾ ಭಾವುಕರಾದರು.
ಆಡಿಷನ್ ಮೂಲಕ ಆಯ್ಕೆಯಾದ ಬಗ್ಗೆ ಹೇಳಿದ ನಾಯಕಿ ಅನನ್ಯ ಶೆಟ್ಟಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಉತ್ತಮ ಹಾಡು ಕೊಟ್ಟಿರುವ ಎಲ್. ಎನ್. ಶಾಸ್ತ್ರಿ ಅವರಿಗೆ ಧನ್ಯವಾದ ತಿಳಿಸಿದರು.
ದಕ್ಷಿಣ ಕನ್ನಡ ಎಲ್ಲದಕ್ಕೂ ಪ್ರಸಿದ್ದಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ಕಲಾರಂಗಕ್ಕೆ ಸಾಕಷ್ಟು ಕಲಾವಿದರನ್ನು ನೀಡಿದೆ. ಆದರೆ ಯಾರಿಗೂ ತಿಳಿಯದ ಹಾಗೆ ಅಲ್ಲಿ ಹರಳು ದಂಧೆ ಸಹ ನಡೆಯುತ್ತದೆ. ಇದೇ ವಿಷಯವಿಟ್ಟುಕೊಂಡು ಈ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಸಹ ಚೆನ್ನಾಗಿದೆ. ಗೆಳೆಯ ಶ್ರೀನಗರ ಕಿಟ್ಟಿ ಸಮಾರಂಭಕ್ಕೆ ಬಂದಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟ ಕೃಷ್ಣಮೂರ್ತಿ ಕವತ್ತಾರ್.
ಇದು ನನ್ನ ಪತಿ ಎಲ್ ಎನ್ ಶಾಸ್ತ್ರಿ ಸಂಗೀತ ಸಂಯೋಜಿಸಿದ ಕೊನೆಯ ಚಿತ್ರ. ಕಾಕತಾಳೀಯವೆಂಬಂತೆ ಈ ಚಿತ್ರದ ಹಾಡೊಂದರಲ್ಲಿ ಬರುವ ಸಾಲಿನಂತೆ, ನಮ್ಮ ಯಜಮಾನರ ಜೀವನ ಸಹ ಅಂತ್ಯವಾಯಿತು. ಆದರೆ ಅವರ ಆಸೆಗಳನ್ನು ಅವರ ಹೆಂಡತಿಯಾಗಿ ನಾನು ಪೂರ್ಣ ಮಾಡುತ್ತೇನೆ ಎಂದ ಸುಮಾ ಶಾಸ್ತ್ರಿಯವರು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಹಳ್ಳ ತೋಡುವ ದೃಶ್ಯ ಕಂಡು ಕಣ್ಣೀರಾದರು.
ಖ್ಯಾತ ಸಾಹಿತಿ ಚಿ.ಉದಯ್ ಶಂಕರ್ ಅವರ “ದೇವನೊಬ್ಬನಿರುವ” ಹಾಡಿನ ಸಾಲಿನೊಂದಿಗೆ ಮಾತು ಆರಂಭಿಸಿದ ಶ್ರೀನಗರ ಕಿಟ್ಟಿ , ಹರಳು ದಂಧೆಯಂತಹ ವಿಷಯವನ್ನು ತೆರೆಗೆ ತರಲು ಧೈರ್ಯ ಮಾಡಿರುವ ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ನನ್ನ ಗುರುಗಳಾದ ಕವತ್ತಾರ್ ಅವರನ್ನು ಕಂಡು ತುಂಬಾ ಸಂತೋಷವಾಗಿದೆ. ಬಹುಕಾಲದ ಗೆಳೆಯ ಚಕ್ರವರ್ತಿ ಚಂದ್ರಚೂಡ್ ಈ ಚಿತ್ರದಲ್ಲಿ ತೊಡಗಿಕೊಂಡಿರುವುದು ಮತ್ತಷ್ಟು ಖುಷಿಯಾಗಿದೆ ಎಂದು ಶ್ರೀನಗರ ಕಿಟ್ಟಿ ಹೇಳಿದರು.
ಬಿ.ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ’ ಸಿನಿಮಾವನ್ನು,ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.
ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ನೀಡಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ದೀಪಿತ್ ಬಿ ಜೈ ರತ್ನಾಕರ್ ಛಾಯಾಗ್ರಾಹಕರಾಗಿ ದುಡಿದಿರುವ `ಮೇಲೊಬ್ಬ ಮಾಯಾವಿ’ಗೆ ರಾಮು ಅವರ ನೃತ್ಯ ಸಂಯೋಜನೆಯಿದೆ.
ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ ಕುಮಾರ್, ಆರ್.ವೆಂಕಟ್ ರಾಜು ಲಕ್ಷ್ಮಿ ಅರ್ಪಣ್, ಮುಖೇಶ್ , ಡಾ.ಮನೋನ್ಮಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಜಯ್ ರಾವ್ ಅವರ “ಶೋಕಿವಾಲ” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಈ ಹಾಡಿನ ವಿಶೇಷತೆ ಏನೆಂದರೆ ನಾಯಕ ಅಜಯ್ ರಾವ್ ಅವರೊಂದಿಗೆ ಕನ್ನಡದ ನಿರ್ದೇಶಕರಾದ ರವಿ ಬಸ್ರೂರ್, ನಂದಕಿಶೋರ್, ಹರಿ ಸಂತೋಷ್, ಶಶಾಂಕ್, ವಿ.ನಾಗೇಂದ್ರ ಪ್ರಸಾದ್ ಹೆಜ್ಜೆ ಹಾಕಿದ್ದಾರೆ. ಎಲ್ಲಾ ದಿಗ್ಗಜರ ಸಮಾಗಮದಲ್ಲಿ ಮೂಡಿಬಂದಿರುವ ಈ ಹಾಡು ಜನಮನಸೂರೆಗೊಂಡು, ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಾಡಿನಲ್ಲಿ ನಟಿಸಿರುವ ನಿರ್ದೇಶಕರೇ ಈ ಹಾಡನ್ನು ರೀಲಿಸ್ ಮಾಡಿದ್ದು ವಿಶೇಷ, ವಿ.ನಾಗೇಂದ್ರಪ್ರಸಾದ್, ನಂದಕಿಶೋರ್, ಹರಿ ಸಂತೋಷ್, ಚೇತನ್ ಕುಮಾರ್, ಮಹೇಶ್ ಕುಮಾರ್ ಅವರು ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 5 ಜನ ನಿರ್ದೇಶಕರನ್ನು ಚಿತ್ರ ತಂಡದಿಂದ ಆತ್ಮೀಯವಾಗಿ ಸನ್ಮಾನಿಸಿದ್ದು ಮತ್ತೊಂದು ವಿಶೇಷ.
ಏಪ್ರಿಲ್ 29 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವಾಗಿದೆ. ಎಲ್ಲರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಚಂದ್ರಶೇಖರ್.
“ಜಾಕಿ” ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಈ ಚಿತ್ರದ ಛಾಯಾಗ್ರಹಕರು.
ಅಜಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಅರುಣ ಬಾಲರಾಜ್, ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಗಿರಿ, ನಾಗರಾಜ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ “ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರದ ಟ್ರೇಲರ್ ಇದೀಗ ಹೊರಬಂದಿದೆ
ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.
ಮುಸುಕು ಧರಿಸಿದ ಮೂರು ಪ್ರಮುಖ ಪಾತ್ರಧಾರಿಗಳನ್ನು, ಪೊಲೀಸ್ ಪಾತ್ರಧಾರಿ ವೇದಿಕೆಗೆ ಕರೆತರುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ನಾನು ಹಾಗೂ ನಿರ್ದೇಶಕ ಅನಿಲ್ ಹಲವು ವರ್ಷಗಳ ಸ್ನೇಹಿತರು. ಆಗ ನಾವು ಕಳೆದ ದಿನಗಳು ಸುಂದರ. ಆಗಿನಿಂದ ಅನಿಲ್ ಗೆ ಬರವಣಿಗೆಯಲ್ಲಿ ಆಸಕ್ತಿ. ಮುಂದೆ ಆತನ ಸಂಭಾಷಣೆಯಲ್ಲಿ ಉತ್ತಮ ಚಿತ್ರಗಳು ಬಂದಿದೆ. ನಿರ್ದೇಶಕನಾಗೂ ಆತ ಚಿರಪರಿಚಿತ ಈಗ ತೀರ ಅಪರೂಪವೆಂಬ ಕಥಾವಸ್ತು ಆಯ್ಕೆಮಾಡಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ರವಿಶಂಕರ್, ತಬಲನಾಣಿ ಹಾಗೂ ಚಿಕ್ಕಣ್ಣ ಅವರಂತಹ ಉತ್ತಮ ಕಲಾವಿದರ ಅಭಿನಯದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ನಾನು ಸಹ ಮೊದಲ ದಿನ ಈ ಚಿತ್ರ ನೋಡುತ್ತೇನೆ ಎಂದರು ದುನಿಯಾ ವಿಜಯ್.
ಒಬ್ಬ ನಾಯಕ ಎರಡೂವರೆ ಗಂಟೆಗಳ ಕಾಲ ಒಬ್ಬನೇ ತೆರೆಯ ಮೆಲೆ ಕಾಣಲು ಸಾಧ್ಯವಿಲ್ಲ. ನಾಯಕನಿಗೆ ಇಲ್ಲಿರುವ ಅದ್ಭುತ ಕಲಾವಿದರ ಸಹಕಾರಬೇಕು. ನಮ್ಮ ಚಿತ್ರದಲ್ಲಿ ರಘು ಅಣ್ಣ ಮಾಡಿರುವ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಈ ಚಿತ್ರ ನೋಡಲು ನಾನು ಕಾತುರಾನಾಗಿದ್ದೀನಿ ಎಂದರು ಡಾಲಿ ಧನಂಜಯ.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದುನಿಯಾ ವಿಜಯ್ ಹಾಗೂ ಡಾಲಿ ಅವರಿಗೆ ಧನ್ಯವಾದ. ವಿಜಯ್ ಅವರೊಂದಿಗೆ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಆಗಿನಿಂದಲೂ ತನ್ನ ಹತ್ತಿರದವರನ್ನು ಬೆಳೆಸುವ ಗುಣ ವಿಜಿ ಅವರದು. ಇನ್ನೂ ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ವಿಭಿನ್ನ ಕಥಾವಸ್ತು. ರಂಗಾಯಣ ರಘು, ರವಿಶಂಕರ್, ತಬಲ ನಾಣಿ, ಚಿಕ್ಕಣ್ಣ, ತಿಲಕ್, ಆಶಿಕಾ ರಂಗನಾಥ್ ಮುಂತಾದ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಅಣ್ಣ ಜಿತೇಂದ್ರ ಮಂಜುನಾಥ್ ನಮ್ಮ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಚಿತ್ರಕ್ಕೆ ನನ್ನ ಸ್ನೇಹಿತರ ಸಹಕಾರ ಅಪಾರ. ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಮೇನಲ್ಲಿ ಚಿತ್ರ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಅನಿಲ್ ಕುಮಾರ್.
ನಮ್ಮನ್ನು ಹಾರೈಸಲು ಬಂದಿರುವ ವಿಜಿ ಹಾಗೂ ಡಾಲಿ ಅವರಿಗೆ ಧನ್ಯವಾದ. ಕನ್ನಡದಲ್ಲಿ ಕಾಲಕಾಲಕ್ಕೆ ತಕ್ಕ ಹಾಗೆ ಉತ್ತಮ ಕಥಾವಸ್ತುವುಳ್ಳ ಚಿತ್ರಗಳು ಬರುತ್ತದೆ. ಕನ್ನಡಿಗ ಉತ್ತಮ ಕಥೆಯುಳ್ಳ ಚಿತ್ರಕ್ಕೆ ಜೈ ಎನ್ನುತ್ತಾನೆ. ಅನಿಲ್ ಕುಮಾರ್ ಸಹ ಉತ್ತಮ ಕಥೆಯುಳ್ಳ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವ ಭರವಸೆಯಿದೆ ಎಂದರು ರಂಗಾಯಣ ರಘು.
ನಾಯಕ, ನಾಯಕಿ ಅಂತ ಇಲ್ಲದೇ, ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ “ಕಾಣೆಯಾದವರ ಬಗ್ಗೆ ಪ್ರಕಟಣೆ”. ಇಂತಹ ಪ್ರಯತ್ನ ಮಾಡಿರುವ ಅನಿಲ್ ಕುಮಾರ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ರವಿಶಂಕರ್.
ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ನಿರ್ಮಾಪಕ , ನಿರ್ದೇಶಕರಿಗೆ ಅಭಿನಂದನೆ. ಕಲಾವಿದನಿಗೆ ತಾನು ಮಾಡಿದ್ದ ಪಾತ್ರಗಳಲ್ಲಿ ಕೆಲವು ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತದೆ. ಅಂತಹ ಪಾತ್ರದಲ್ಲಿ ನನಗೆ ಈ ಚಿತ್ರದ ಪಾತ್ರ ಕೂಡ ಒಂದು ಎಂದರು ತಬಲಾ ನಾಣಿ.
ಇದು ಮಾಮೂಲಿ ಚಿತ್ರಗಳಂತೆ ಅಲ್ಲ. ಚಿತ್ರಗಳಲ್ಲಿ ಅಭಿನಯಿಸುವ ವಿಲನ್ ಗಳು ಹಾಗೂ ಕಾಮಿಡಿಯನ್ಸ್ ಗಳ ಸಮಾಗಮದಲ್ಲಿ ಮೂಡಿಬಂದಿರುವ ಚಿತ್ರವಿದು. ಈ ಚಿತ್ರದಲ್ಲಿ ಕಥೆಯೇ ನಾಯಕ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಚಿಕ್ಕಣ್ಣ.
ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಿಲಕ್, ಕೆ ಜಿ ಎಫ್ ೨ ಚಿತ್ರದಲ್ಲಿ ನಟಿಸಿರುವ ವಿಜಯ್ ಹಾಗೂ ನಿರ್ಮಾಪಕ ಜಿತೇಂದ್ರ ಮಂಜುನಾಥ್ ಸಹ ಚಿತ್ರದ ಬಗ್ಗೆ ಮಾತನಾಡಿದರು.
ನಾಯಕ ಧೀರನ್ ರಾಮಕುಮಾರ್, ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್, ಪೊಲೀಸ್ ಅಧಿಕಾರಿ ಯಶವಂತ್ ಹಾಗೂ ನಿರ್ಮಾಪಕ, ನಿರ್ದೇಶಕ ಡಾ||ಸೂರಿ ” ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರಕ್ಕೆ ಶುಭ ಹಾರೈಸಿದರು.
ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ನಟಿಸಿರುವ “ರಾಜಿ” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.
ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದ ವರ್ಷ ಅಕ್ಟೋಬರ್ 30 ರಂದು ನಿಗದಿಯಾಗಿತ್ತು. ನನ್ನ ತಮ್ಮ ಅಪ್ಪು ಕ್ಲ್ಯಾಪ್ ಮಾಡಲು ಬರಬೇಕಿತ್ತು. ಆದರೆ ಅಕ್ಟೋಬರ್ 29 ಅಪ್ಪು ನಮ್ಮನ್ನು ಬಿಟ್ಟು ದೂರವಾದ. ಒಂದು ನಿಮಿಷ ನನ್ನ ಎದೆ ನಿಂತು. ಮತ್ತೆ ಬಡೆಯಲು ಆರಂಭವಾದ ದಿನವದು. ಆನಂತರ ಕೆಲವು ದಿನಗಳ ನಂತರ ಮುಹೂರ್ತ ನಡೆಯಿತು. ಅದೇ ಕಂಠೀರವ ಸ್ಟುಡಿಯೋದಲ್ಲಿ. ಅಪ್ಪು ಸಮಾಧಿ ಬಳಿ. ಈಗ ಕಾಕತಾಳೀಯವಾಗಿ ಇದೇ 29ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಪ್ಪುವಿನ ಏಳನೇ ತಿಂಗಳ ಪುಣ್ಯತಿಥಿಯಂದು. ಸಿನಿಮಾ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಪ್ರೇಕ್ಷಕರ ಹೇಳುತ್ತಾರೆ ಎಂದರು ರಾಘವೇಂದ್ರ ರಾಜಕುಮಾರ್.
ನಾನು ಇಪ್ಪತ್ತೈದು ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅವರ ಮೇಲಿನ ಗೌರವ ಇಮ್ಮಡಿಯಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. “ರಾಜಿ” ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ ಎಂದು. ಬಸವರಾಜು ಮೈಸೂರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕಿ, ನಟಿ ಪ್ರೀತಿ ಎಸ್ ಬಾಬು ತಿಳಿಸಿದರು.
ಚಿತ್ರದಲ್ಲಿ ಏಳು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಡಾ. ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಉಪಾಸನ ಮೋಹನ್ ತಿಳಿಸಿದರು.
ಚಿತ್ರ ನಿರ್ಮಾಣವಾದ ಬಗ್ಗೆ ಬಸವರಾಜ್ ಮೈಸೂರು ಹಾಗೂ ತಮ್ಮ ಅಭಿನಯದ ಕುರಿತು ಪ್ರತಾಪ್ ಸಿಂಹ ಮಾತನಾಡಿದರು.
ಕಿಟ್ಟಿ, ವಿಜಯ ರಾಘವೇಂದ್ರ, ವಿ.ನಾಗೇಂದ್ರ ಪ್ರಸಾದ್, ಕೆಂಪ್ಪಣ್ಣ ಚೆಟ್ಟಿ, ಮುನಿರಾಜು ರಾಮಯ್ಯ, ತಬಲಾ ನಾಣಿ , ಸಾಗರ್ ಪುರಾಣಿಕ್ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.
ಜೋಗಿ ಪ್ರೇಮ್ ನಿರ್ದೇಶನದ, ಧ್ರುವಾ ಸರ್ಜಾ ಅಭಿನಯದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರದ, ಮುಹೂರ್ತ ಏಪ್ರಿಲ್ 24ಕ್ಕೆ ನಡೆಯಲಿದೆ. ಇದಕ್ಕೆ ನಿರ್ದೇಶಕ ಪ್ರೇಮ್ ತಮ್ಮದೇ ಸ್ಟೈಲಲ್ಲಿ ಇನ್ವಿಟೇಷನ್ ಡಿಸೈನ್ ಮಾಡಿ, ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.
ಇದರಲ್ಲಿ 1970 ಇಸವಿ, ಡೆಲ್ಲಿ ಗೇಟ್ ಮಾದರಿಯ ಗೇಟ್ , ಗನ್ ಹಿಡಿದು ನಿಂತಿರೋ ವ್ಯಕ್ತಿ, ಹೀಗೆ ರೆಟ್ರೋ ಸ್ಟೈಲಲ್ಲಿ ಪ್ರೇಮ್ ಪೋಸ್ಟರ್ ಬಿಟ್ಟಿದ್ದಾರೆ. ಜೊತೆಗೆ ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತ ಬರೆದು ಅಡಿ ಬರಹದಲ್ಲಿ ಇದು ನೈಜ ಘಟನೆಯನ್ನಾಧರಿಸಿದ ಕಥೆ ಅನ್ನೋದನ್ನ ಹೇಳಿದ್ದಾರೆ.
“ಗೋಧಿಬಣ್ಣ ಸಾಧಾರಣ ಮೈಕಟ್ಟು” ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, ” ಗುಲ್ಟು ” ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಅಜ್ಞಾತವಾಸಿ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ.
ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು. ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ. ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ. “ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್.
ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು.
ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.
ಈ ಬಣ್ಣದ ನಂಟೇ ಹಾಗೆ. ಇಲ್ಲಿ ಒಮ್ಮೆಎಂಟ್ರಿಯಾದರೆ ಸಾಕು, ಆ ನಂಟು ಕೊನೆಯವರೆಗೂ ಇರುತ್ತೆ. ಹಾಗೆ ನಂಟು ಉಳಿಸಿಕೊಂಡು ಇಲ್ಲಿಯವರೆಗೂ ಸಕ್ಸಸ್ ಜರ್ನಿ ಮಾಡಿರುವ ಅನೇಕ ನಟರಲ್ಲಿ ಜಿಮ್ ರವಿ ಕೂಡ ಒಬ್ಬರು
ಹೌದು, ಜಿಮ್ ರವಿ ಅಂದಾಕ್ಷಣ ನೆನಪಾಗೋದೆ, ಕಟ್ಟು ಮಸ್ತಾದ ದೇಹ, ಹೀರೋಗಳ ಕೈಯಲ್ಲಿ ಒದೆ ತಿನ್ನುವ ನಟ ನೆನಪಾಗುತ್ತಾರೆ. ಹೌದು, ಅದೇ ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ ಬಣ್ಣದ ಬದುಕಲ್ಲಿ ಮಿಂದೆದ್ದಿರುವುದು ಎಲ್ಲರಿಗೂ ಗೊತ್ತು. ಆ ಅನುಭವ ಅವರನ್ನೀಗ ಹೀರೋ ಆಗಿಯೂ, ನಿರ್ಮಾಪಕರನ್ನಾಗಿಯೂ ಮಾಡಿದೆ.
ಜಿಮ್ ರವಿ ಚೊಚ್ಚಲ ಬಾರಿಗೆ ಹೀರೋ ಆಗಿರುವ ಚಿತ್ರದ ಹೆಸರು “ಪುರುಷೋತ್ತಮ” ಆ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ಸುಮಾರು 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟರಾಗಿ ನಟಿಸಿರುವ ಜಿಮ್ ರವಿ, ಅವರು ಇದೇ ಮೊದಲ ಬಾರಿಗೆ “ಪುರುಷೋತ್ತಮ” ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ .
ಈ ಚಿತ್ರ ಒಂದು ಹೊಸ ವಿಷಯವುಳ್ಳ ಕೌಟುಂಬಿಕ ಚಿತ್ರವಾಗಿದ್ದು ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅನ್ನೋದು ವಿಶೇಷ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ರವಿ ಅವರ ಉದ್ದೇಶ ವಾಗಿದ್ದು ,ಅವರು ಚಿತ್ರಕಥೆಯಲ್ಲಿ ಬಾರಿ ವಿಶ್ವಾಸ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು , ಚಿತ್ರವು ಮೇ 6ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
ಈ ಹಿಂದೆ ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು ಪುರುಷೋತ್ತಮ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಟಿ ಅಪೂರ್ವ ಈ ಸಿನಿಮಾಗೆ ನಾಯಕಿ. ಈ ಹಿಂದೆ ಕೃಷ್ಣ ಟಾಕೀಸ್, ‘ವಿಕ್ಟರಿ 2’ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.
ಇನ್ನು ನಿವೇದಿತಾ ಅವರು ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಈ ಹಿಟ್ ಹಾಡುಗಳ ಹಿಂದೆ ಇರೋದು ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್.
ಅದೇನೆ ಇರಲಿ, ಒಂದೊಳ್ಳೆಯ ಕಥೆ ಇರುವ ಪುರುಷೋತ್ತಮ, ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್ಬರವಿ ಅವರ ಕನಸಿನ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಅನ್ನೋದು ಆಶಯ.