ಹೊಂಬಾಳೆ ಫಿಲಂಸ್ ಮೂಲಕ ಬರಲಿದೆ ಹೊಸ ಚಿತ್ರ; ಸುಧಾ ಕೊಂಗರ ನಿರ್ದೇಶನದ ಸಿನಿಮಾ…

‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಈ ಸಂಸ್ಥೆಯ ನಿರ್ಮಾಣದ “ಕೆ ಜಿ ಎಫ್ 2” ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ ಬಾರಿಸುತ್ತಿದೆ. ಗಳಿಕೆಯಲ್ಲೂ ಮೇಲುಗೈ ಸಾಧಿಸಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾಹಸಕ್ಕೆ ಜನ ಬಹುಪರಾಕ್ ಹೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಮತ್ತೊಂದು ಹೊಸ ಚಿತ್ರದ ಘೋಷಣೆಯಾಗಿದೆ.

ವಿಶೇಷ ಏನೆಂದರೆ, ಈ ಬಾರಿ ‘ಹೊಂಬಾಳೆ ಫಿಲಂಸ್’ ಗೆ ಸಿನಿಮಾ ಮಾಡುವ ಅವಕಾಶ ಪಡೆದಿರುವುದು ಸುಧಾ ಕೊಂಗರ. ಈ ಮಹಿಳೆ ಮೂಲತಃ ಆಂಧ್ರ ಪ್ರದೇಶದವರು. ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸುಧಾ ಕೊಂಗರ ಎಲ್ಲರ ಮನ ಸೆಳೆದಿದ್ದಾರೆ. ಈಗ ಸುಧಾ ಕೊಂಗರ ಮತ್ತು ‘ಹೊಂಬಾಳೆ ಫಿಲಂಸ್ ಸಂಸ್ಥೆ ಕೈ ಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ.

ಗುರುವಾರದಂದು ಈ ಹೊಸಚಿತ್ರ ನಿರ್ಮಾಣದ ಹೊಸ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಚ್ಚರಿ ಎಂದರೆ, ಈ ಬಾರಿ ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲಂಸ್’ ಸಂಸ್ಥೆ ಮುಂದಾಗಿದೆ. ‘ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗರ ಅವರ ಜೊತೆ ನಮ್ಮ ಹೊಸ ಸಿನಿಮಾ ಘೋಷಣೆ ಮಾಡಲು ಹೆಮ್ಮೆ ಆಗುತ್ತಿದೆ’ ಎಂದು ಪೋಸ್ಟ್ ಮಾಡಲಾಗಿದೆ.

ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದ ‘ಸೂರರೈ ಪೋಟ್ರು’ ಚಿತ್ರ ಕೂಡ ಸತ್ಯ ಘಟನೆ ಆಧಾರಿತ ಚಿತ್ರ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸುಧಾ ಅವರು ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದರು.

‘ಹೊಂಬಾಳೆ ಫಿಲಂಸ್ ಮೂಲಕ ಈಗಾಗಲೇ ಅನೇಕ ಸಿನಿಮಾಗಳ ಸಿದ್ಧವಾಗುತ್ತಿವೆ. ಪ್ರಭಾಸ್ ನಟನೆಯ ‘ಸಲಾರ್’, ಶ್ರೀಮುರಳಿ ಅಭಿನಯದ ‘ಬಘೀರ’, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈಗ ಸುಧಾ ಕೊಂಗರ ನಿರ್ದೇಶನದ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಈ ಚಿತ್ರದ ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

Related Posts

error: Content is protected !!