ಸದ್ದು ಮಾಡಿದ ಮೇಲೊಬ್ಬ ಮಾಯಾವಿ! ಸಂಚಾರಿಯ ಹೊಸ ಸಂಚಾರ: ಟ್ರೇಲರ್ ಗೆ ಭರಪೂರ ಮೆಚ್ಚುಗೆ…

ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ಮೇಲೊಬ್ಬ ಮಾಯಾವಿ”. ಚಿತ್ರದ ಟ್ರೇಲರ್ ಅನ್ನು ನಟ ಶ್ರೀನಗರ ಕಿಟ್ಟಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ವಿಜಯ್ ಅವರ ನೆನಪಲ್ಲೇ ಕಾರ್ಯಕ್ರಮ ನಡೆದದ್ದು ವಿಶೇಷ.

ನಾನು ಕೂಡ ಪತ್ರಕರ್ತನಾಗಿ ಹಲವು ಚಿತ್ರಗಳ ವಿಮರ್ಶೆ ಮಾಡಿದ್ದೀನಿ. ಆದರೆ ಅದೇ ಬೇರೆ. ನಿರ್ದೇಶನ ಮಾಡುವುದೇ ಬೇರೆ. ನಿರ್ದೇಶನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಪಶ್ಚಿಮ ಘಟ್ಟಗಳಲ್ಲಿ ನಡೆಯುವ
ಹರಳು ಮಾಫಿಯಾದ ಕುರಿತಾದ ಸಿನಿಮಾ. ಇದರಲ್ಲಿ ಮೂರು ಪ್ರಮುಖ ಪಾತ್ರಗಳಿವೆ. ಸಕ್ಕರೆ,‌ ಇರುವೆ ಹಾಗೂ ಸುಲೇಮಾನ್.
ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತ. ಇನ್ನು ಟ್ರೇಲರ್ ಬಿಡುಗಡೆ ಮಾಡಲು ಶ್ರೀನಗರ ಕಿಟ್ಟಿ ಬಂದಿದ್ದಾರೆ . ಅವರಿಗೆ ತುಂಬು ಹೃದಯದ ಧನ್ಯವಾದ. ಇದೇ ಇಪ್ಪತ್ತೊಂಬತ್ತರಂದು ರಿಲೀಸ್ ಆಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನವೀನ್ ಕೃಷ್ಣ,

ಸಂಚಾರಿ ವಿಜಯ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳುತ್ತಾ ಮಾತು ಆರಂಭಿಸಿದ ನಟ ಚಕ್ರವರ್ತಿ ಚಂದ್ರಚೂಡ್, ಸಿನಿಮಾ ಆರಂಭವಾದ ಬಗ್ಗೆ ಮಾಧ್ಯಮದ ಮುಂದೆ ಬಿಡಿಸಿಟ್ಟರು. ತಾವು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಚಾರಿ ವಿಜಯ್ ಚಿತ್ರೀಕರಣ ಸಮಯದಲ್ಲಿ ಮಾಡಿದ ಕೆಲಸಗಳನ್ನು ಚಂದ್ರಚೂಡ್ ಮೆಲಕು ಹಾಕಿದರು. ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಬಗ್ಗೆ ಕೂಡ ಮಾಹಿತಿ ನೀಡಿದ ಚಕ್ರವರ್ತಿ ಚಂದ್ರಚೂಡ್, ಚಿತ್ರದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆಯ ಮಾತುಗಳಾಡಿ, ಚಿತ್ರತಂಡಕ್ಕೆ ಬೆನ್ನು ತಟ್ಟಿರುವ ಕಿಚ್ಚ ಸುದೀಪ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.

ನಿರ್ಮಾಪಕ ಭರತ್ ಕುಮಾರ್, ಚಿತ್ರ ಸಾಗಿ ಬಂದ ಬಗ್ಗೆ ಹೇಳುತ್ತಾ ಭಾವುಕರಾದರು.

ಆಡಿಷನ್ ಮೂಲಕ ಆಯ್ಕೆಯಾದ ಬಗ್ಗೆ ಹೇಳಿದ ನಾಯಕಿ ಅನನ್ಯ ಶೆಟ್ಟಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಉತ್ತಮ ಹಾಡು ಕೊಟ್ಟಿರುವ ಎಲ್. ಎನ್. ಶಾಸ್ತ್ರಿ ಅವರಿಗೆ ಧನ್ಯವಾದ ತಿಳಿಸಿದರು.

ದಕ್ಷಿಣ ಕನ್ನಡ ಎಲ್ಲದಕ್ಕೂ ಪ್ರಸಿದ್ದಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ಕಲಾರಂಗಕ್ಕೆ ಸಾಕಷ್ಟು ಕಲಾವಿದರನ್ನು ನೀಡಿದೆ. ಆದರೆ ಯಾರಿಗೂ ತಿಳಿಯದ ಹಾಗೆ ಅಲ್ಲಿ ಹರಳು ದಂಧೆ ಸಹ ನಡೆಯುತ್ತದೆ. ಇದೇ ವಿಷಯವಿಟ್ಟುಕೊಂಡು ಈ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಸಹ ಚೆನ್ನಾಗಿದೆ. ಗೆಳೆಯ ಶ್ರೀನಗರ ಕಿಟ್ಟಿ ಸಮಾರಂಭಕ್ಕೆ ಬಂದಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟ ಕೃಷ್ಣಮೂರ್ತಿ ಕವತ್ತಾರ್.

ಇದು ನನ್ನ ಪತಿ ಎಲ್ ಎನ್ ಶಾಸ್ತ್ರಿ ಸಂಗೀತ ಸಂಯೋಜಿಸಿದ ಕೊನೆಯ ಚಿತ್ರ. ಕಾಕತಾಳೀಯವೆಂಬಂತೆ ಈ ಚಿತ್ರದ ಹಾಡೊಂದರಲ್ಲಿ ಬರುವ ಸಾಲಿನಂತೆ, ನಮ್ಮ ಯಜಮಾನರ ಜೀವನ ಸಹ ಅಂತ್ಯವಾಯಿತು. ಆದರೆ ಅವರ ಆಸೆಗಳನ್ನು ಅವರ ಹೆಂಡತಿಯಾಗಿ ನಾನು ಪೂರ್ಣ ಮಾಡುತ್ತೇನೆ ಎಂದ ಸುಮಾ ಶಾಸ್ತ್ರಿಯವರು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಹಳ್ಳ ತೋಡುವ ದೃಶ್ಯ ಕಂಡು ಕಣ್ಣೀರಾದರು‌.

ಖ್ಯಾತ ಸಾಹಿತಿ ಚಿ.ಉದಯ್ ಶಂಕರ್ ಅವರ “ದೇವನೊಬ್ಬನಿರುವ” ಹಾಡಿನ ಸಾಲಿನೊಂದಿಗೆ ಮಾತು ಆರಂಭಿಸಿದ ಶ್ರೀನಗರ ಕಿಟ್ಟಿ , ಹರಳು ದಂಧೆಯಂತಹ ವಿಷಯವನ್ನು ತೆರೆಗೆ ತರಲು ಧೈರ್ಯ ಮಾಡಿರುವ ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ನನ್ನ ಗುರುಗಳಾದ ಕವತ್ತಾರ್ ಅವರನ್ನು ಕಂಡು ತುಂಬಾ ಸಂತೋಷವಾಗಿದೆ. ಬಹುಕಾಲದ ಗೆಳೆಯ ಚಕ್ರವರ್ತಿ ಚಂದ್ರಚೂಡ್ ಈ ಚಿತ್ರದಲ್ಲಿ ತೊಡಗಿಕೊಂಡಿರುವುದು ಮತ್ತಷ್ಟು ಖುಷಿಯಾಗಿದೆ ಎಂದು ಶ್ರೀನಗರ ಕಿಟ್ಟಿ ಹೇಳಿದರು.

ಬಿ.ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ’ ಸಿನಿಮಾವನ್ನು,ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.

ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ನೀಡಿದ್ದಾರೆ.
ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ದೀಪಿತ್ ಬಿ ಜೈ ರತ್ನಾಕರ್ ಛಾಯಾಗ್ರಾಹಕರಾಗಿ ದುಡಿದಿರುವ `ಮೇಲೊಬ್ಬ ಮಾಯಾವಿ’ಗೆ ರಾಮು ಅವರ ನೃತ್ಯ ಸಂಯೋಜನೆಯಿದೆ.

ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ ಕುಮಾರ್, ಆರ್.ವೆಂಕಟ್ ರಾಜು ಲಕ್ಷ್ಮಿ ಅರ್ಪಣ್, ಮುಖೇಶ್ , ಡಾ.ಮನೋನ್ಮಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related Posts

error: Content is protected !!