“ಗೋಧಿಬಣ್ಣ ಸಾಧಾರಣ ಮೈಕಟ್ಟು” ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, ” ಗುಲ್ಟು ” ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಅಜ್ಞಾತವಾಸಿ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ.
ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು. ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು.
ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ.
ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.
“ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ. ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್.
ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು.
ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.