Categories
ಸಿನಿ ಸುದ್ದಿ

ದೂರದರ್ಶನ ವೀಕ್ಷಣೆಗೆ ಬಂದ ಆಯಾನಾ! ಪೃಥ್ವಿ ಅಂಬರ್ ಜೊತೆ ರಿಕ್ಷಾ ಡ್ರೈವರ್ ಮಗಳ ಡಿಂಗುಡಾಂಗು…

ದಿಯಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬರ್‌ ಈಗ ‘ದೂರದರ್ಶನ’ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಟೈಟಲ್‌ ಟೀಸರ್‌ ಇತ್ತೀಚೆಗೆ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ದೂರದರ್ಶನ ಬಳಗ ನಾಯಕಿಯನ್ನು ಪರಿಚಯಿಸುತ್ತಿದೆ. ಈ ಹಿಂದೆ ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದ ಆಯಾನಾ ಪೃಥ್ವಿ ಅಂಬರ್ ಗೆ ಜೋಡಿಯಾಗಿ ನಟಿಸಿದ್ದಾರೆ.

ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30 ರಿಂದ 40 ಮಂದಿ ಆಡಿಷನ್ ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆಯಾನಾ ಫೈನಲ್ ಆಗಿ ಆಯ್ಕೆಯಾದರು ಎನ್ನುವ ನಿರ್ದೇಶಕ ಸುಕೇಶ್ ಶೆಟ್ಟಿ, ಆಯಾನಾ ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೇ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ.

ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಇದು ಎಲ್ಲರಿಗೂ ಸ್ಪೆಷಲ್ ಗಿಫ್ಟ್! ಜುಲೈ 8ಕ್ಕೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ರಿಲೀಸ್…

ಕನ್ನಡದಲ್ಲಿ ಈಗಾಗಲೇ ಅನೇಕ ವಿಭಿನ್ನ ಕಥೆ ಇರುವ ಸಿನಿಮಾಗಳು ಬಂದಿವೆ. ಅ ಸಾಲಿಗೆ ಇದೀಗ ‘ ವೆಡ್ಡಿಂಗ್ ಗಿಫ್ಟ್’ ಸಿನಿಮಾ ಕೂಡ ಸೇರಿದೆ. ಶೀರ್ಷಿಕೆಯಲ್ಲೇ ವಿಶೇಷ ಎನಿಸುವ ಈ ಚಿತ್ರ ಫಟಾಫಟ್ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಹೌದು ಜುಲೈ 8 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ವಿಕ್ರಂಪ್ರಭು ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಎಂಟ್ರಿಯಾಗಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮದುವೆ ಹಿಂದಿನ‌ಕಥೆ ಮತ್ತು ವ್ಯಥೆ ಕುರಿತ ಸಿನಿಮಾ. ಈಗಿನ ಮದುವೆ ಸಂಬಂಧಗಳು ಎಷ್ಟರ ಮಟ್ಟಿಗೆ ಗಟ್ಟಿ ಅನ್ನೋದು ಗೊತ್ತಿದೆ. ಅಂಥದ್ದೇ ಒಂದು ಎಳೆ ಇಟ್ಟುಕೊಂಡು ಹೆಣೆದಿರುವ ಸಿನಿಮಾ ಇದು. ಮದುವೆಯಾದ ಆರಂಭದಲ್ಲೇ ಗಂಡ-ಹೆಂಡತಿ ಮಧ್ಯೆ ಬಿರುಕು ಬಂದರೆ ಏನೆಲ್ಲಾ ಆಗುತ್ತೆ ಎಂಬ ಕಥಾವಸ್ತು ಚಿತಗರದ ಹೈಲೆಟ್.


ಚಿತ್ರದಲ್ಲಿ ನಿಶಾಂತ್ ಮತ್ತು ಸೋನುಗೌಡ ನಾಯಕ- ನಾಯಕಿಯಾಗಿದ್ದಾರೆ. ಇನ್ನು ಚಿತ್ರದ ಪ್ರಮುಖ ಆಕರ್ಷಣೆ ನಟಿ ಪ್ರೇಮ. ತುಂಬಾ ದಿನಗಳ ಬಳಿಕ ಪ್ರೇಮ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಈ ಸಿನಿಮಾ ನಿರ್ದೇಶಕ ವಿಕ್ರಂ ಪ್ರಭು ಅವರಿಗೆ ಇದು ಮೊದಲ ಅನುಭವ. ಹಾಗಂತ, ಸಿನಿಮಾರಂಗ ಗೊತ್ತಿಲ್ಲ ಅಂತಲ್ಲ. ಅಚರು ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಪೂನಾದಲ್ಲಿ ಉದ್ಯಮಿಯಾಗಿ ನೆಲೆಸಿ, ತಾನೊಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಲೇಬೇಕು ಅಂತ ಕೆಲವು ವರ್ಷಗಳ ನಂತರ ಈ “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದಾರೆ.

ಕಳೆದ ಜುಲೈನಲ್ಲಿ ಈ ಸಿನಿಮಾದ ಮುಹೂರ್ತ ನಡೆದಿತ್ತು. ಈ ಜುಲೈ 8ರಂದು ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ.

ನಿರ್ದೇಶಕ ವಿಕ್ರಂ ಪ್ರಭು ಅವರು ಪಕ್ಕಾ ಪ್ಲಾನ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ಮೊದಲು ಒಂದೊಳ್ಳೆಯ ಕಥೆ ರೆಡಿ ಮಾಡಿ, ಅದಕ್ಕೆ ಇಂತಹ ಕಲಾವಿದರೇ ಸೂಕ್ತ ಅಂದುಕೊಂಡು ನಿಗಧಿತ ಅವಧಿಯಲ್ಲೇ ಸಿನಿಮಾ ಮಾಡಿದ ಸಂತಸ ಅವರದು. ಸರಿಯಾದ ಸಮಯಕ್ಕೆ ಸಿನಿಮಾ ಮಾಡಿ ರಿಲೀಸ್ ಮಾಡೋಕೆ ಚಿತ್ರತಂಡದ ಸಹಕಾರ ಅಪಾರವಾಗಿದೆ ಎನ್ನುವ ನಿರ್ದೇಶಕ ವಿಕ್ರಮ್ ಪ್ರಭು, ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ಇದಾಗಲಿದೆ ಎಲ್ಲರೂ ನಮ್ಮನ್ನು ಹರಸಿ ಎನ್ನುತ್ತಾರೆ.

ನಟಿ ಪ್ರೇಮ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಗಕವು ಕಥೆ ಬಂದರೂ ಸರಿಯಾಗಿಲ್ಲ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡುತ್ತಿದ್ದರಂತೆ. ಆದರೆ ಅವರು, ವಿಕ್ರಂಪ್ರಭು ಅವರು ಹೇಳಿದ ಕಥೆ ಕೇಳಿ ತಕ್ಷಣ ನಟಿಸಲು ಒಪ್ಪಿಕೊಂಡರಂತೆ. ಅಂದಹಾಗೆ, ನಟಿ ಪ್ರೇಮ ಇಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ.

ನಟಿ ಸೋನು ಗೌಡ ಅವರಿಗೆ ಕಥೆ ಇಷ್ಟವಾಗಿದ್ದೇ ತಡ ನಟಿಸೋಕೆ ಒಪ್ಪಿದರಂತೆ. ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು‌ ನಿಜವಾಗಲೂ ಕಷ್ಟವಾಯಿತು. ಇಂತಹವರೂ ಇರುತ್ತಾರಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು ಎಂಬುದು ನಟಿ ಸೋನು ಗೌಡ‌ ಅವರ ಮಾತು.

ಜುಲೈ 8 ರಂದು ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ, ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದೆ ಅನ್ನೋದು ವಿತರಕ ಶ್ರೀಧರ್ ಮಾತು.

ಚಿತ್ರಕ್ಕೆ ಉದಯ್ ಲೀಲ ಕ್ಯಾಮೆರಾ ಹಿಡಿದರೆ, ವಿಜೇತ್ ಚಂದ್ರ ಸಂಕಲನವಿದೆ. ಚಿತ್ರದಲ್ಲಿ ಅಚ್ಯುತ್ ರಾವ್, ಪವಿತ್ರಾ ಲೋಕೇಶ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಹುಲಿಬೇಟೆಯೊಳು ದುರುಳರ ಅಳಲು! ಇದು ಬೈರಾಗಿಯ ಭರ್ಜರಿ ಬೇಟೆ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ಬೈರಾಗಿ
ನಿರ್ದೇಶನ : ವಿಜಯ್ ಮಿಲ್ಟನ್
ನಿರ್ಮಾಣ : ಕೃಷ್ಣ ಸಾರ್ಥಕ್
ತಾರಾಗಣ : ಶಿವರಾಜಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್, ಯಶಾ ಶಿವಕುಮಾರ್, ಶರತ್‌ ಲೋಹಿತಾಶ್ವ, ಅನುಪ್ರಭಾಕರ್, ವಿನೋದ್ ಆಳ್ವ ಇತರರು.

ಸಿಂಪಲ್ಲಾಗಿರೋದ್ ನೋಡಿ ಡಮ್ಮಿ‌ ಪೀಸ್‌ ಅನ್ಕೊಂಡ…’
ಈ ಡೈಲಾಗ್ ಬರುವ ಹೊತ್ತಿಗೆ ಅದಾಗಲೇ ಆ ಹುಲಿಯ ಆರ್ಭಟ ಜೋರಾಗಿರುತ್ತೆ. ಆ ಹುಲಿ ತುಂಬಾ ಸೈಲೆಂಟ್ ಕೆಣಕಿದರೆ ವೈಲೆಂಟ್… ಚಿತ್ರದುದ್ದಕ್ಕೂ ಸೈಲೆಂಟ್ ಮತ್ತು‌ವೈಲೆಂಟ್ ನ‌ ಅಬ್ಬರ ತುಸು ಜೋರಾಗಿಯೇ ಇದೆ. ಇದು ಪಕ್ಕಾ ಮಾಸ್‌ ಮತ್ತು ಕ್ಲಾಸ್ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ ಬೈರಾಗಿ ಮನರಂಜನೆಯ ಜೊತೆಗೊಂದು ಸಂದೇಶ ಸಾರುವ ಸಿನಿಮಾ‌ ಕೂಡ. ಇದು ಶಿವಣ್ಣ ಫ್ಯಾನ್ಸ್ ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.

ಶಿವರಾಜಕುಮಾರ್ ಅವರನ್ನಿಲ್ಲಿ ನಿರ್ದೇಶಕ ವಿಜಯ್ ಮಿಲ್ಟನ್ ತುಂಬಾ ಸಿಂಪಲ್ಲಾಗಿ ತೋರಿಸಿದ್ದರೂ, ಶಿವಣ್ಣ ಅವರ ಎನರ್ಜಿಯನ್ನು ಎಲ್ಲೂ ವೇ್ಟ್ ಮಾಡದಂತೆ ತೋರಿಸಿದ್ದಾರೆ. ಶಿವಣ್ಣ ಅವರಿಗೆ ಇದೊಂದು ಹೊಸ ಬಗೆಯ ಪಾತ್ರ. ಆ ಪಾತ್ರದಲ್ಲೇ ಶಿವಣ್ಣ ಜೀವಿಸಿದ್ದಾರೆ. ಇಡೀ ಸಿನಿಮಾದಲ್ಲಿ ಶಿವಣ್ಣ ಅವರ ಹುಲಿ ಘರ್ಜನೆ ಹೈಲೆಟ್.

ಇದು ತಮಿಳಿನ ‘ಕಡುಗು’ ಚಿತ್ರದ ಅವತರಣಿಕೆ. ತಮಿಳಿನಲ್ಲಿ ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಈ ಸಿನಿಮಾಗೂ ಆಕ್ಷನ್‌ ಕಟ್ ಹೇಳಿದ್ದಾರೆ. ಇದು ತಮಿಳು ಸಿನಿಮಾದ ರಿಮೇಕ್ ಇದ್ದರೂ ಕನ್ನಡತನಕ್ಕೆ ಎಲ್ಲೂ ಮೋಸವಾಗಿಲ್ಲ. ಅನ್ನೋದೆ ಸಮಾಧಾನ. ಶಿವಣ್ಣ ಅವರನ್ನು ತೋರಿಸಿರುವ ರೀತಿ, ಮೇಕಿಂಗ್ ಪ್ಯಾಟ್ರನ್ ಎಲ್ಲವೂ ಇಲ್ಲಿ ಹೊಸದಾಗಿದೆ. ಇದುವರೆಗೆ ಮಾಡದಿರುವ ಪಾತ್ರದಲ್ಲಿ ಶಿವಣ್ಣ ಎಲ್ಲರಿಗೂ ಮತ್ತಷ್ಟು ಹತ್ತಿರವಾಗುತ್ತಾರೆ.

ಒಂದು ಕಥೆ ಕೇಳುವಂತಿರಬೇಕು, ಆ ಕಥೆ ತೆರೆ ಮೇಲೆ ಚಿತ್ರರೂಪವಾಗಿ ಬಂದಾಗ, ಕಾಡುವಂತಿರಬೇಕು ಆ ಕೇಳುವ, ಕಾಡುವ ಮತ್ತು‌ ನೋಡುವ ಸಿನಿಮಾ ಇದು. ಹಾಗಾಗಿ ಬೈರಾಗಿ‌ ನಂಬಿ‌ ಬಂದವರಿಗೆ ಯಾವ ಮೋಸವಾಗಲ್ಲ.

ಸಿನಿಮಾದಲ್ಲಿ ತಾರೆಗಳ ದಂಡೇ ಇದೆ. ಎಲ್ಲಾ ಪಾತ್ರಗಳಿಗೂ ಅಲ್ಲಿ ತುಂಬಾನೇ ಸ್ಪೇಸ್ ಇದೆ. ಮುಖ್ಯವಾಗಿ ಇಲ್ಲಿ ಮತ್ತೆ ಶಿವಣ್ಣ ಡಾಲಿ ಧನಂಜಯ ಕಾಂಬಿನೇಷನ್ ಇದೆ. ನಿರೀಕ್ಷೆ ಮೀರಿ ಆ ಕಾಂಬಿನೇಷನ್ ವರ್ಕೌಟ್ ಆಗಿದೆ. ಟಗರು ಮೂಲಕ ಜೋರು ಸುದ್ದಿಯಾದ ಧನಂಜಯ ಇಲ್ಲೂ ಹುಲಿ ಜೊತೆ ಸೆಣಸಾಡಿದ್ದಾರೆ. ಅವರಿಲ್ಲಿ ಒಳ್ಳೆಯವರ ಕೆಟ್ಟವರ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು.

ಕಥೆ ಏನು?

ಹುಲಿ ವೇಷ ಹಾಕಿಕೊಂಡು ಬದುಕು ಸವೆಸುವ ಶಿವಪ್ಪನಿಗೆ ಎಲ್ಲಿಲ್ಲದ ಕೋಪ. ಯಾರಾದರೂ ಕೆಣಕಿದರೆ, ಇತರರಿಗೆ ಅನ್ಯಾಯವಾದರೆ ಸಾಕು ಕೋಪ ಸ್ಪೋಟಗೊಂಡು ಅಲ್ಲೋಲ ಕಲ್ಲೋಲ ಆಗುವ ಹಂತಕ್ಕೂ ಶಿವಪ್ಪ ಕಾರಣನಾಗುತ್ತಾನೆ.

ತಮ್ಮನ್ನು ವಿನಾಕಾರಣ ಕೆಣಕಿದವರ ವಿರುದ್ಧ ಹುಲಿ ಶಿವಪ್ಪ ಕೋಪ ಹೆಚ್ಚಿಸಿಕೊಂಡು ಘಟನೆಯೊಂದರಲ್ಲಿ ಹೊಡೆದಾಡಿ, ಜೈಲಿಗೆ ಹೋಗುತ್ತಾನೆ. ಅಲ್ಲಿಂದ ಹೊರ ಬರುವ ಹುಲಿ ಶಿವಪ್ಪನಿಗೆ ಪೊಲೀಸ್ ಅಧಿಕಾರಿಯೊಬ್ಬ ಕೋಪ ಬಿಟ್ಟರೆ ನೀನು, ನಿನ್ನ ಜೊತೆ ಇರೋರು ಚೆನ್ನಾಗಿರುತ್ತಾರೆ ಅಂತ ಬುದ್ಧಿವಾದ ಹೇಳಿ ತನ್ನೊಟ್ಟಿಗೆ ಹುಲಿ ಶಿವಪ್ಪನನ್ನು ಕರೆದೊಯ್ಯುತ್ತಾರೆ. ಗೊತ್ತಿಲ್ಲದ ಊರಲ್ಲಿ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಜೊತೆ ಶಿವಪ್ಪನೂ ಹೋಗ್ತಾನೆ. ಅಲ್ಲಿ ಸಿಂಪಲ್ಲಾಗಿಯೇ ಇರುವ ಶಿವಪ್ಪನ ಬದುಕಲ್ಲಿ ಒಂದೊಂದೇ ಘಟನೆಗಳು ನಡೆಯುತ್ತವೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಿವಪ್ಪ, ಕೆಲವರ ಮೇಲೆ ತಿರುಗಿ ಬೀಳುತ್ತಾನೆ. ಹೀಗಿರುವಾಗ ಒಂದು ದುರ್ಘಟನೆ ನಡೆಯುತ್ತೆ. ಅದೇನು ಅನ್ನೋ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಶಿವಣ್ಣ ಅವರ ನಟನೆ ಬಗ್ಗೆ ಮಾತಾಡುವಂತಿಲ್ಲ. ಈ ಪಾತ್ರದಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಹುಲಿಯಾಗಿ ಘರ್ಜಿಸುತ್ತಲೇ ಮುದ್ದಾಡುವಂತಹ ಹುಲಿಯಾಗಿಯೂ ಕಾಣುತ್ತಾರೆ. ಅವರ ಎನರ್ಜಿ ಇಂದಿಗೂ ಕಮ್ಮಿಯಾಗಿಲ್ಲ ಅನ್ನೋಕೆ ಈ ಪಾತ್ರದಲ್ಲಿ ಮಿಂಚಿರುವ ರೀತಿಯೇ ಸಾಕ್ಷಿ. ಅವರ ಒಂದೊಂದು ಡೈಲಾಗ್ ಗೂ ಶಿಳ್ಳೆ, ಚಪ್ಪಾಳೆ ಬೀಳುತ್ತವೆ. ಹುಲಿ‌ ಕುಣಿತದಲ್ಲಂತೂ, ಕುಳಿತವರನ್ನೇ ಕುಣಿಸುವಷ್ಟರ ಮಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು, ಫೈಟಿಂಗ್ ವಿಚಾರದಲ್ಲಂತೂ ಜಿಂಕೆ ಥರಾನೆ ಎಗರಿ ವಿಲನ್ ಗಳನ್ನು‌ ಚಚ್ಚಿದ್ದಾರೆ. ಆಗಾಗ ಭಾವುಕತೆಗೂ ದೂಡುತ್ತಾರೆ.

ಡಾಲಿ ಧನಂಜಯ್ ಇಲ್ಲಿ ಒಳ್ಳೆಯವನಾಗಿ ಕೆಟ್ಟವನಾಗಿ ನಂತರ ಹುಲಿ ಭಯಕ್ಕೆ ಒಳ್ಳೆಯವಾಗಿರುವ ಪಾತ್ರ ಮಾಡಿದ್ದಾರೆ. ಸ್ಪೇಸ್ ಕಮ್ಮಿ‌ಇದ್ದರೂ ನಟನೆಯಲ್ಲೇನೂ ಕಮ್ಮಿಯಾಗಿಲ್ಲ.
ಪೃಥ್ವಿ ಅಂಬರ್ ನಿಜಕ್ಕೂ ಇಷ್ಟವಾಗುತ್ತಾರೆ. ಹೀರೋ ಆಗಿ ಸಕ್ಸಸ್ ಕಂಡರೂ ಆ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಗ್ಧನಾಗಿ ತಮಾಷೆ ಹುಡುಗನಾಗಿ ನಗಿಸಿ, ಒಂದಷ್ಟು‌ ಛೇ ಪಾಪ ಎನಿಸುವಷ್ಟು ನಟಿಸಿದ್ದಾರೆ.
ಶಶಿಕುಮಾರ್ ಇಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದರೆ, ಶರತ್ ಲೋಹಿತಾಶ್ವ ಕೆಟ್ಟ ರಾಜಕಾರಣಿಯಾಗಿ ಸೈ ಎನಿಸಿದ್ದಾರೆ. ನಾಯಕಿ ಅಂಜಲಿ ಕೂಡ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪ್ರತಿ ಪಾತ್ರಗಳು ರಿಜಿಸ್ಟರ್ ಆಗುತ್ತವೆ.

ಅನೂಪ್ ಸೀಳಿನ್ ಅವರ ಸಂಗೀತದ ಎರಡು‌ ಹಾಡು ಗುನುಗುವಂತಿವೆ. ಹಿನ್ನೆಲೆ ಸಂಗೀತ ಕೂಡ ಸಿನಿಮಾ ವೇಗ ಹೆಚ್ಚಿಸಿದೆ. ಬೈರಾಗಿಯ ಅಂದಕ್ಕೆ ಕ್ಯಾಮೆರಾ ಕೈಚಳಕ ಕಾರಣವಾಗಿದೆ.

Categories
ಸಿನಿ ಸುದ್ದಿ

ಗಾಳಿಪಟದ ಹಾಡು ಹೊರಬಂತು! ಇದು ಗಣೇಶ್ ಹುಟ್ಟು ಹಬ್ಬದ ಉಡುಗೊರೆ…

ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಇದರ ಸವಿನೆನಪಿಗಾಗಿ “ಗಾಳಿಪಟ 2” ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ.

ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ . “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ “ಗಾಳಿಪಟ 2” ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ.

ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭ. ಈ ಸುಂದರ ಕ್ಷಣಕ್ಕೆ ನಮ್ಮ ಹಾಡಿನ ಉಡುಗೊರೆ. ಜುಲೈ 2 ಗಣೇಶ್ ಹುಟ್ಟುಹಬ್ಬ. ಅಂದು ಅವರು ಊರಿನಲ್ಲಿರದ ಕಾರಣ ಈಗ ಮಾಧ್ಯಮ ಮಿತ್ರರ ಮುಂದೆ ಈ ಹಾಡು ಬಿಡುಗಡೆ ಮಾಡಿದ್ದೇವೆ. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು. ಹಾಡಿನ ಪದಪದದ ಅರ್ಥ ವಿವರಿಸಿ, ಹಾಡು ಬರೆದಿರುವ ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಹೇಳಿದರು.

ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ.
ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್ ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ‌ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು. ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು ನಾಯಕ ಗಣೇಶ್.

ಹಾಡು ಚೆನ್ನಾಗಿದೆ. ಈ ಹಾಡಿಗೆ ಬಳಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ. ಈ ಹಾಡನ್ನು ನನ್ನ ಮಗಳು ದಿನ ಕೇಳುತ್ತಿರುತ್ತಾಳೆ. ಬಿಡುಗಡೆ ಮುಂಚೆಯೇ ಈ ಹಾಡು ಗೆದ್ದಿದೆ ಎನ್ನಬಹುದು. ನಮ್ಮ ಚಿತ್ರಕ್ಕೆ
ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಸುಂದರವಾದ ಹಾಡು. ಅಷ್ಟೇ ಸುಂದರವಾದ ಸ್ಥಳ. ಅದ್ಭುತವಾದ ಸೆಟ್ ನಲ್ಲಿ ಐದು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ.
ಗಣೇಶ್ ಅವರನ್ನು ಕ್ಲೋಸಪ್ ನಲ್ಲಿ ತೋರಿಸಿದ್ದೇವೆ. ತುಂಬಾ ಮುದ್ದಾಗಿ ಕಾಣುತ್ತಾರೆ ಎನ್ನುತ್ತಾರೆ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ.

Categories
ಸಿನಿ ಸುದ್ದಿ

ಇನ್ನಿಲ್ಲ ಸೂರಿ! ಇದು ಹೊಸಬರ ವಿಭಿನ್ನ ಬಗೆಯ ಚಿತ್ರ…

ಹೇಳಿ ಕೇಳಿ ಇದು ಪ್ರಯೋಗಾತ್ಮಕ ಬಣ್ಣದ ಲೋಕ. ಅದರ ಮುಂದುವರೆದ ಭಾಗವಾಗಿ ರೂಪಗೊಳ್ಳುತ್ತಿರುವ ಸಿನಿಮಾ
ಇನ್ನಿಲ್ಲ ಸೂರಿ. ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗುತ್ತಿರುವುದು ನಿರ್ದೇಶಕ ಪ್ರೇಮ್ ಕುಮಾರ್ ಹೆಚ್ ಆರ್. ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರೇಮ್ ಕುಮಾರ್ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಕಿರುತೆರೆ ಮಾತ್ರವಲ್ಲ ಮನೆ ಮಾರಾಟಕ್ಕಿದೆ ಹಾಗೂ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ನಿರ್ದೇಶನದ ಕೌಶಲ್ಯಗಳನ್ನು ಕಲಿತುಕೊಂಡಿದ್ದಾರೆ. ಈ ಭರವಸೆಯೊಂದಿಗೆ ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಪ್ರೇಮ್ ಕುಮಾರ್ ಸ್ವತಂತ್ರ ನಿರ್ದೇಶಕರಾಗಿ ನಿರ್ದೇಶನದ ಅಖಾಡಕ್ಕೆ ಧುಮುಕ್ಕಿದ್ದಾರೆ.

ಇತ್ತೀಚೆಗೆಷ್ಟೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಶ್ರೀ ಶೃಂಗಗಿರಿ ಷಣ್ಮುಖ ಸನ್ನಿಧಿಯಲ್ಲಿ ಇನ್ನಿಲ್ಲ ಸೂರಿ ಸಿನಿಮಾದ ಮುಹೂರ್ತ ನೆರವೇರಿದೆ. ನೀರ್ ದೋಸೆ ಹಾಗೂ ತೋತಾಪುರಿ ಸಿನಿಮಾಗಳ ಖ್ಯಾತಿಯ ವಿಜಯ್ ಪ್ರಸಾದ್ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರೀ, ಶೇಖರ್, ಪೃಥ್ವಿರಾಜ್ ಕುಲಕರ್ಣಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಸಿನಿಮಾಗೆ ಶುಭ ಕೋರಿದ್ದಾರೆ.

ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಬಡ್ತಿ ಪಡೆದಿರುವ ಪ್ರೇಮ್ ಕುಮಾರ್ ಕನಸಿಗೆ ಸೂರಿ ಸಾಥ್ ಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಧಾರಾವಾಹಿಗಳಲ್ಲಿ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಸೂರಿ ಈ ಚಿತ್ರಕ್ಕೆ ಹಣ ಹಾಕಲಿದ್ದಾರೆ.

ಪ್ರಸ್ತುತ ಸಮಾಜದಲ್ಲಿ ನಡೆಯುವ ಹದಿ ಹರೆಯದ ಯುವಕ ಯುವತಿಯರ ಮನಸ್ಥಿತಿಯನ್ನು ಅತ್ಯಂತ ಮನರಂಜನಾತ್ಮಕವಾಗಿ ಹಾಗೂ ಕರುಳು ಹಿಂಡುವ ತಾಯಿ ಮಗನ ಕಥೆಯನ್ನು ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಪ್ರೇಮ್ ಕುಮಾರ್.

ಸದ್ಯ ಕಲಾವಿದರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಚಿತ್ರತಂಡ ಶೀರ್ಘದಲ್ಲಿಯೇ ಮಾಹಿತಿ ರಿವೀಲ್ ಮಾಡಲಿದೆ. ಮಂಡ್ಯ ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಸೆನ್ಸಾರ್ ಮುಗಿಸಿದ ಸೀತಮ್ಮನ ಮಗ!

ನಟ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಯಾಗಿದ್ದು , ಈಗಾಗಲೇ ಮೆಚ್ಚುಗೆ ಪಡೆದುಕೊಂಡಿದೆ.

ನಾನು ಈ ಹಿಂದೆ “ಕೆಂಪೇಗೌಡ” ಸಿನಿಮಾ ಸಂದರ್ಭದಲ್ಲಿ ಒಂದು ಕಥೆ ಸಿದ್ದ ಮಾಡಿಕೊಂಡಿದ್ದೆ. ಆ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಅವರು ಒಪ್ಪಿ, ಆರು ದಿನಗಳ ಕಾಲ್ ಶೀಟ್ ಸಹ ನೀಡಿದ್ದರು. ಕಾರಣಾಂತರದಿಂದ ಅದು ಆಗಲಿಲ್ಲ. ಆನಂತರ ಈ ಚಿತ್ರದ ಕಥೆ ಸಿದ್ದವಾಯಿತು. ನನ್ನ ಸ್ನೇಹಿತನ ಅಂತ್ಯಕ್ರಿಯೆಗಾಗಿ ಹರಿಶ್ಚಂದ್ರ ಘಾಟ್ ಗೆ ಹೋಗಿದ್ದಾಗ ಹುಟ್ಟಿದ ಕಥೆಯಿದು. ತಾಯಿ-ಮಗನ ಬಾಂಧವ್ಯವೇ ಚಿತ್ರದ ಹೈಲೆಟ್. ನಾನು ಒಂದು ಪಾತ್ರ ಮಾಡಿದ್ದೀನಿ. ಸೀತಮ್ಮನಾಗಿ ಚೈತ್ರ ಶ್ರೀನಿವಾಸ್, ಮಗನಾಗಿ ಚರಣ್ ಕಾಸಲ ಅಭಿನಯಿಸಿದ್ದಾರೆ.

ಸೋನು ಸಾಗರ, ಬುಲೆಟ್ ರಾಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸ್ನೇಹಿತರಾದ ರಾಜಾ ನಾಯಕ್ ಅವರ ಮೂಲಕ ಮಂಜುನಾಥ್ ನಾಯಕ್ ಅವರ ಪರಿಚಯವಾಯಿತು. ಅವರು ನನ್ನ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲೇ ಚಿತ್ರೀಕರಣ ನಡೆಯಿತು. ಈಗ ಸೆನ್ಸಾರ್ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ನಮ್ಮ ಚಿತ್ರತಂಡಕ್ಕೆ ಹಾಗೂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಯತಿರಾಜ್.

ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ದೇಶಕ ಯತಿರಾಜ್ ಕಾರಣ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಪ್ರಶಂಸೆ ದೊರಕಿರುವುದು ಸಂತೋಷ. ನಾನು ಕೂಡ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿದವನು. ಚಿತ್ರದುರ್ಗದ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೀನಿ. ಅವರು ಒಪ್ಪಿಗೆ ನೀಡಿದ್ದಾರೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಚಿತ್ರದಲ್ಲಿ ಅಭಿನಯಿಸಿರುವ ಚೈತ್ರ ಶ್ರೀನಿವಾಸ್, ಸೋನು ಸಾಗರ, ಚರಣ್ ಕಾಸಲ, ಬುಲೆಟ್ ರಾಜು ತಮ್ಮ ಪಾತ್ರದ ಕುರಿತು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿದ ಲಹರಿ ವೇಲು ಹಾಗೂ ಕೃಷ್ಣೇಗೌಡ ಅವರು “ಸೀತಮ್ಮನ ಮಗ” ನಿಗೆ ಶುಭ ಹಾರೈಸಿದರು.

Categories
ಸಿನಿ ಸುದ್ದಿ

ಎಲ್ಲೆಲ್ಲೂ ಪಸರಿಸಿದ ಮಾಯಾಗಂಗೆ! ಬನಾರಸ್ ಸಿನಿಮಾ‌ ಹಾಡು ಹೊರ ಬಂತು…

ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಕಾಶಿಗೆ ವಿಶೇಷ ಸ್ಥಾನ.‌ ಕಾಶಿಯನ್ನು “ಬನಾರಸ್” ಅಂತಲೂ ಕರೆಯುವುದು ವಾಡಿಕೆ. ಪರಮಪಾವನೆಯಾದ ಗಂಗೆ “ಬನಾರಸ್” ನಲ್ಲಿ ಹರಿದು ಎಷ್ಟೋ ಜನರ ಪಾಪ ಕಳೆಯುತ್ತಿದ್ದಾಳೆ‌.

ಈ ಪವಿತ್ರ ನಗರದ ಹೆಸರಿನಲ್ಲಿ “ಬನಾರಸ್” ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಿದೆ. ಅದು ಸದ್ಯದಲ್ಲೇ ರಿಲೀಸ್ ‌ಆಗಲಿದೆ.

ಜಯತೀರ್ಥ ನಿರ್ದೇಶನದಲ್ಲಿ ಝೈದ್ ಖಾನ್ ಹಾಗೂ ಸೋನಾಲ್ ಮೊಂತೆರೊ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದ ಮೊದಲ ಹಾಡು “ಮಾಯಾಗಂಗೆ” ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡ ಹಾಗೂ ಮಲೆಯಾಳಂ ಭಾಷೆಯ ಹಾಡುಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.

ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ “ಮಾಯಾಗಂಗೆ” ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಲೆಯಾಳಂ ನಲ್ಲಿ ಆದಿ ಈ ಹಾಡನ್ನು ಬರೆದಿದ್ದಾರೆ. ನಿರ್ಮಾಪಕಿ ಶೈಲಜಾನಾಗ್ ಈ ಹಾಡನ್ನು ಬಿಡುಗಡೆ ಮಾಡಿದರು. ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್ ಹಾಗೂ ಯಶಸ್ ಸೂರ್ಯ, ಲಹರಿ ವೇಲು, ಚಂದ್ರು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಝೈದ್ ಖಾನ್ ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರಿದರು.

ಕಾಶಿ ವೈರಾಗ್ಯದ ಸಂಕೇತ ಅಲ್ಲಿ ಪ್ರೀತಿಯ ಕಥೆ ಬರೆಯಲು ನನ್ನ ಗೆಳೆಯ ಜಯತೀರ್ಥ ನಿಗೆ ಮಾತ್ರ ಸಾಧ್ಯ. ಪಕ್ಕದಲ್ಲೇ ಚಿತೆ ಉರಿಯುತ್ತಿರುತ್ತದೆ. ಅಲ್ಲಿ ನಾಯಕ- ನಾಯಕಿ ಪ್ರೇಮ ಆರಂಭವಾಗುತ್ತದೆ ಈ ಸನ್ನಿವೇಶಕ್ಕೆ ತಕ್ಕ ಹಾಡು ಬರೆಯಬೇಕು. ಇದು ಮಾಮೂಲಿ ಪ್ರೇಮಗೀತೆಯ ತರಹ ಬೇಡ ಎಂದು ಜಯತೀರ್ಥ ವಿವರಿಸಿದಾಗ, ಈ “ಮಾಯಾಗಂಗೆ” ಹಾಡು ಬರೆದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅದ್ವೈತ ಛಾಯಾಗ್ರಹಣ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ವಿ.ನಾಗೇಂದ್ರಪ್ರಸಾದ್.

“ಬನಾರಸ್” ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ. ಇಂತಹ ಅದ್ಭುತ ಹಾಡನ್ನು ಬರೆದಿರುವ ನಾಗೇಂದ್ರಪ್ರಸಾದ್ ಅವರಿಗೆ ಧನ್ಯವಾದ. ಝೈದ್ ಖಾನ್ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ. ಜಯತೀರ್ಥ ಅವರ ನಿರ್ದೇಶನ ಉತ್ತಮವಾಗಿದೆ. ಮುಂದೆ ಇನ್ನೂ ಮೂರು ಹಾಡುಗಳು ಬಿಡುಗಡೆಯಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್.

ನಾನು ನಾಗೇಂದ್ರಪ್ರಸಾದ್ ಅವರಿಗೆ ಈ ಹಾಡಿನ ಸನ್ನಿವೇಶ ವಿವರಿಸಿದೆ. ನನಗೆ ಮಾಮೂಲಿ ತರಹದ ಪ್ರೇಮಗೀತೆ ಬೇಕಿರಲಿಲ್ಲ. ಇದು ಕೊರಿಯೋಗ್ರಾಫರ್ ಸಾಂಗ್ ಕೂಡ ಅಲ್ಲ. ನಾವೊಂದಿಷ್ಟು ಜನ ಸೇರಿ ಈ ಹಾಡು ಹೀಗೆ ಬರಬೇಕು ಅಂದುಕೊಂಡೆವು. ಅದೇ ರೀತಿ ನಾಗೇಂದ್ರಪ್ರಸಾದ್ ಅದ್ಭುತವಾಗಿ ಹಾಡು ಬರೆದುಕೊಟ್ಟಿದ್ದಾರೆ. ಅಜನೀಶ್ ಅಷ್ಟೇ ಸೊಗಸಾಗಿ ಸಂಗೀತ ನೀಡಿದ್ದಾರೆ. ಅದ್ವೈತ ಅಂದವಾಗಿ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ ಹಾಗೂ ಮಲೆಯಾಳಂ ಎರಡು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಮಲಯಾಳಂನಲ್ಲಿ ಹಾಡು ಬರೆಸಲು ಆದಿ ಅವರನ್ನು ಪರಿಚಯಿಸಿದ್ದು ನನ್ನ ಗೆಳೆಯ ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್. ಕಾಶಿಯಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಅದನೆಲ್ಲಾ ಸಾಧ್ಯ ಮಾಡಿದ್ದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರಿಗೆ ಧನ್ಯವಾದ. ಆಲ್ಲಿನ 84 ಘಾಟ್ ಗಳಲ್ಲೂ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ.

ಇನ್ನೂ ನಾಯಕ – ನಾಯಕಿ ನನ್ನ ಮಕ್ಕಳಿದಂತೆ. ಝೈದ್ ಖಾನ್ ನನ್ನ ಬಳಿ ಬಂದು ನಿರ್ದೇಶನ ಮಾಡಬೇಕೆಂದರು. ನಾನು ಅವರಿಗೆ ನೀವು ಹೆಸರಾಂತ ರಾಜಕಾರಣಿ ಮಗ. ನಿಮಗೆ ನಾನು ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು ಅಂದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ನೀವು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ ಎಂದರು .ಹಾಗೆ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ. ಸೋನಾಲ್ ಅವರ ಅಭಿನಯ ಕೂಡ ಚೆನ್ನಾಗಿದೆ. ಸೆನ್ಸಾರ್ ಕೂಡ ಮುಗಿದಿದೆ. ಸದ್ಯದಲ್ಲೇ “ಬನಾರಸ್” ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ಜಯತೀರ್ಥ.

ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಈ ಕನಸನ್ನು ನನಸು ಮಾಡಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೇನೆ. ಈ ನನ್ನ ಕನಸಿಗೆ ಆಸರೆಯಾಗಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು. ತಿಲಕ್ ಸರ್ ನನ್ನ ಗಾಡ್ ಫಾದರ್‌. ಬಾಂಬೆಗೆ ನನ್ನ ಕರೆದುಕೊಂಡು ಹೋಗಿ, ಆಕ್ಟಿಂಗ್ ಸ್ಕೂಲ್ ಗೆ ಸೇರಿಸಿ, ನಂತರ ಈ ಚಿತ್ರವನ್ನು ನಿರ್ಮಾಣ ಮಾಡಿದರು. ನಮ್ಮ “ಬನಾರಸ್” ಅನ್ನು ಪ್ಯಾನ್ ಇಂಡಿಯಾ ಚಿತ್ರವಾಗಿಸಿ ಎಲ್ಲಾ ಕಡೆ ಬಿಡುಗಡೆ ಮಾಡುತ್ತಿದ್ದಾರೆ.‌ ನಿರ್ದೇಶಕ ಜಯತೀರ್ಥ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಸೋನಾಲ್ ಅವರು ಅದ್ಭುತ ನಟಿ. ಇನ್ನು ಇಡೀ ಚಿತ್ರತಂಡದ ಪರಿಶ್ರಮದಿಂದ “ಬನಾರಸ್” ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದ ನಾಯಕ ಝೈದ್ ಖಾನ್, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸಿದರು.

ನನಗೆ ಇದು ವಿಶೇಷ ಸಿನಿಮಾ. ಧನಿ ಎಂಬ ಪಾತ್ರ ನೀಡಿದ್ದ ಜಯತೀರ್ಥ ಅವರಿಗೆ ಧನ್ಯವಾದ. ಮೋಷನ್ ಪೋಸ್ಟರ್ ರಿಲೀಸ್ ಆದ ಮೇಲೆ ಎಲ್ಲೇ ಹೋದರೂ ಈ ಚಿತ್ರದ ಬಗ್ಗೆ ಕೇಳುತ್ತಿದ್ದಾರೆ. ಝೈದ್ ಅವರ ಅಭಿನಯ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಇಲ್ಲಿ ಬಂದಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕಿ ಸೋನಾಲ್ ಮೊಂತೆರೊ.

ನಾನು ಮಂಗಳೂರಿನವನು. ಈಗ ಬಾಂಬೆ ವಾಸಿ. ಚಿತ್ರದ ಕಥೆ
ಇಷ್ಟವಾಯಿತು. ಸಿನಿಮಾ ಮಾಡಿದ್ದೇನೆ. ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್.

ಚಿತ್ರದಲ್ಲಿ ಪಾತ್ರ ಮಾಡಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್,
ಛಾಯಾಗ್ರಾಹಕ ಅದ್ವೈತ ಹಾಗೂ ಮಲೆಯಾಳಂ ಗೀತರಚನೆಕಾರ ಆದಿ ಅವರು “ಬನಾರಸ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಇದು ಜಾನಕಿರಾಮನ ಕ್ಯೂಟ್ ಲವ್ ಸ್ಟೋರಿ! ಮುದ್ದಾದ ಪ್ರೀತಿ ಗೆಲ್ಲೋಕೆ ಬಂದ ಉತ್ತರ ಕರ್ನಾಟಕ ಹುಡುಗ…

ಕನ್ನಡದಲ್ಲಿ ಉತ್ತರ ಕರ್ನಾಟಕ ಸೊಗಡಿನ ಅನೇಕ ಕಥೆಗಳಿರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಪಕ್ಕಾ ದೇಸಿತನ ಹೊಂದಿರುವ, ರಗಡ್ ಕಥೆಯಲ್ಲೊಂದು ಮುದ್ದಾದ ಪ್ರೇಮಕಥೆ ಇಟ್ಟುಕೊಂಡು ಸೊಗಸಾದ ಸಿನಿಮಾ ಕಟ್ಟಿಕೊಡಲು ಹೊಸ‌ ಪ್ರತಿಭಾವಂತರ ತಂಡವೊಂದು ಆಗಮಿಸಿದೆ. ಜಯ ಜಯ ಜಾನಕಿರಾಮ ಸಿನಿಮಾ ಮೂಲಕ ಜಯ ಸಾಧಿಸಲು ಹೊರಟಿದೆ

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಪ್ರತಿಭಾವಂತ ಯುವ ನಿರ್ದೇಶಕರೊಬ್ಬರು ಎಂಟ್ರಿಯಾಗಿದ್ದಾರೆ. ಹೌದು, ಸಿದ್ಧಾರ್ಥ್ ಮರಡೆಪ್ಪ ಈಗಷ್ಟೇ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಾರೆ. ಕನ್ನಡದ ಎವರ್ ಗ್ರೀನ್ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಹೊಸ ಚಿತ್ರದ ಮೂಲಕ. ಇಂಡಸ್ಟ್ರಿಗೆ ಬಂದಿದ್ದಾರೆ. ಅಂದಹಾಗೆ, ಸಿದ್ಧಾರ್ಥ್ ಮರಡೆಪ್ಪ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ‘ ಜಯ ಜಯ ಜಾನಕಿರಾಮ’ ಎಂಬ ಶೀರ್ಷಿಕೆ ಇಡಲಾಗಿದೆ.

ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾದರೂ ಕನ್ನಡ ಸಿನಿಮಾರಂಗ ಅವರಿಗೆ ಹೊಸದೇನಲ್ಲ. ಮೂಲತಃ ಉತ್ತರ ಕರ್ನಾಟಕದವರಾದ ಸಿದ್ಧಾರ್ಥ್, ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ‘ಮಾಸ್ತಿಗುಡಿ’, ‘ಮೈನಾ’, ‘ದೃಶ್ಯ 1’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ , ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ. ಆ ಅನುಭವ ಈಗ ಚೊಚ್ಚಲ ನಿರ್ದೇಶನಕ್ಕೆ ಕಾರಣವಾಗಿದೆ.

ಇದೊಂದು ಉತ್ತರ ಕರ್ನಾಟಕ ಭಾಗದ ಕಥೆಯಾಗಿದ್ದು, ಬಹುತೇಕ ಅಲ್ಲಿನ ಭಾಷೆಯೇ ಸಿನಿಮಾದ‌ ಜೀವಾಳ. ಈಗಿನ ಟ್ರೆಂಡ್ ಕಥೆ ಚಿತ್ರದಲ್ಲಿದೆ. ಮಾಸ ಫೀಲ್ ಇರುವ ಸಿನಿಮಾದಲ್ಲಿ ಒಂದು ಮುದ್ದಾದ ಪ್ರೇಮ ಕಥೆ ಇದೆ. ಅಲ್ಲಿ ಂತೆ, ಬಾಂಧವ್ಯ, ದ್ವೇಷ, ಸ್ನೇಹ, ನಿಷ್ಕಲ್ಮಷ ಪ್ರೀತಿ ಗೀತಿ ಇತ್ಯಾದಿ ಕೂಡ ಸಿನಿಮಾದಲ್ಲಿದೆ.

ಒಟ್ಟಾರೆ, ಮಕ್ಕಳಿಂದ ಹಿಡಿದು ವಯಸ್ಸಿನವರಿಗೂ ಈ ಸಿನಿಮಾ ಇಷ್ಟವಾಗುತ್ತೆ. ಇಲ್ಲಿ ಕಥೆ, ಪಾತ್ರಗಳು ಮತ್ತು ಚಿತ್ರಕಥೆ ಪ್ರಮುಖ ಪಾತ್ರವಹಿಸುತ್ತವೆ ಎನ್ನುತ್ತಾರೆ ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ.

ಇನ್ನು ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರ ಅಪೂರ್ವ ಮೂಲಕ ಕಾಲಿಟ್ಟ ಅಪೂರ್ವ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ‌ ಪಕ್ಕಾ ದೇಸಿ ಹುಡುಗಿಯಾಗಿ ಅವರು ಸ್ಕ್ರೀನ್ ಮೇಲೆ ಎಂಟ್ರಿಯಾಗುತ್ತಿದ್ದಾರೆ. ಆದಿತ್ಯ ಕೂಡ ಸಿನಿಮಾ ಕಥೆ, ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ಮತ್ತೊಂದು ಹೈಲೆಟ್ ಅಂದರೆ, ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಲ್ಲಿ ಖಳನಟರಾಗಿ ಅಬ್ಬರಿಸುತ್ತಿದ್ದಾರೆ. ಹೀರೋ ತಾಯಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ತಾರಾ ಕೂಡ ನಾಯಕಿಯ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಹಲವು ಕಲಾವಿದರೂ ಇದ್ದಾರೆ.

ಇನ್ನು, ಕಥೆ ಮತ್ತು ಕಲಾವಿದರು ಹೇಗೆ ಸ್ಟ್ರಾಂಗ್ ಇದೆಯೋ ಹಾಗೆಯೇ ತಾಂತ್ರಿಕ ವರ್ಗವೂ ಇಲ್ಲಿ ಸ್ಟ್ರಾಂಗ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಡಾ.ರವಿ ವರ್ಮ ಸ್ಟಂಟ್ ಮಾಡಿಸುತ್ತಿದ್ದಾರೆ.

ಉದಯ್ ಬಲ್ಲಾಳ್ ಕ್ಯಾಮೆರಾ ಹಿಡಿದರೆ, ಮೋಹನ್ ಕೊಲ್ಲಾಪುರ ಸಂಕಲನ ಮಾಡುತ್ತಿದ್ದಾರೆ. ಯೋಗರಾಜಭಟ್, ನಾಗೇಂದ್ರಪ್ರಸಾದ್ ಮತ್ತು ಗೌಸ್ ಪೀರ್ ಗೀತೆ ಬರೆಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಜೋರಾಗಿ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.

Categories
ಸಿನಿ ಸುದ್ದಿ

ಅಂತೂ ಫೀಲ್ಡ್ ಗೆ ಎಂಟ್ರಿಯಾದ ಉಪೇಂದ್ರ! 7ವರ್ಷಗಳ ಬಳಿಕ ಆಕ್ಷನ್ ಕಟ್ ಹೇಳಿದ ಉಪ್ಪಿ…

ಉಪೇಂದ್ರ ಅಂದರೆ ನೆನಪಾಗೋದೇ ಅವರ ನಿರ್ದೇಶನದ ಅದ್ಭುತ ಸಿನಿಮಾಗಳು. ಇದುವರೆಗೆ ರೆಕಾರ್ಡ್ ಮಾಡಿರುವ ಚಿತ್ರಗಳು ಎವರ್ ಗ್ರೀನ್. ನಿರ್ದೇಶನದ ಜೊತೆ ನಟನೆಯನ್ನೂ ಮಾಡುತ್ತ ಬಂದಿರುವ ಅವರು, ಅಭಿನಯದತ್ತ ಹೆಚ್ಚು ಗಮನ ಹರಿಸಿದ್ದರು.

ಅವರ ಫ್ಯಾನ್ಸ್ ನಿರ್ದೇಶನದ ಚಿತ್ರ ನೋಡಬೇಕು ಅಂತ ಬಯಸಿದ್ದರು. ಅಭಿಮಾನಿಗಳ ಆಶಯದಂತೆ ಉಪ್ಪಿ ನಿರ್ದೇಶನ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ತಮ್ಮ ಯು ಐ ಸಿನಿಮಾದ ಮುಹೂರ್ತ ಕೂಡ‌ ನಡೆಸಿದ್ದರು. ಈಗ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಹೌದು, ಇದ್ದದ್ದನ್ನ ಇದ್ದಂತೆ, ರಿಯಾಲಿಟಿಯನ್ನ ಸೂಪರ್ ಆಗಿ ನಿರೂಪಿಸೋ ನಿರ್ದೇಶಕ, ಮಾಸ್ಟರ್ ಮೈಂಡ್, ರಿಯಲ್‌ ಸ್ಟಾರ್ ,ಸೂಪರ್ ಸ್ಟಾರ್ ಉಪೇಂದ್ರ ಇಂದಿನಿಂದ ಫೀಲ್ಡಿಗಿಳಿದಿದ್ದಾರೆ. ಏಳು ವರ್ಷಗಳ ನಂತರ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಯುಐ ಚಿತ್ರಕ್ಕೆ ಬಹುತೇಕ ಯುವ ತಂತ್ರಜ್ಞರೆ ಕೆಲಸ ಮಾಡುತ್ತಿರೋದು ವಿಶೇಷ.

ಟೈಟಲ್ ಲಾಂಚ್, ಮುಹೂರ್ತದಿಂದಲೇ ದೇಶದಾದ್ಯಂತ ‌ಸಂಚಲನ ಸೃಷ್ಟಿಸಿರೋ ಯುಐ ಈಗ ಚಿತ್ರೀಕರಣ ಶುರು ಮಾಡಿದೆ.

Categories
ಸಿನಿ ಸುದ್ದಿ

ಕೆಜಿಎಫ್ ತಾತ ಈಗ ನ್ಯಾನೋ ನಾರಾಯಣಪ್ಪ! ಇದು ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕನ ಸಿನಿಮಾ…

ಕೆಜಿಎಫ್ ಸರಣಿ ಸಿನಿಮಾದಲ್ಲಿ ದೃಷ್ಟಿ ಹೀನ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಈಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೆಟ್ ಆಗಿದೆ, ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದೀಗ ನ್ಯಾನೋ ನಾರಾಯಣಪ್ಪ ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರ ಪ್ರೇಮಿಗಳನ್ನು ಎಂಟರ್ ಟೈನ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಇದೊಂದು ಕಾಮಿಡಿ ಎಮೋಷನಲ್ ಡ್ರಾಮ್ ಸಿನಿಮಾವಾಗಿದ್ದು, ತುಂಬ ಕಾಡುವ ಕಥೆ, ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಅಂತಾರೆ ಕುಮಾರ್.

ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಆಗಸ್ಟ್ ನಲ್ಲಿ ಸಿನಿಮಾವನ್ನು ತೆರೆಗೆ ಯೋಜನೆ ಹಾಕಿಕೊಂಡಿದೆ. ಕುಮಾರ್ ನಿರ್ಮಾಣದ ನ್ಯಾನೋ‌ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

error: Content is protected !!