ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಕೆ.ಆರ್.ಮುರಳಿ (_63) ಕೃಷ್ಣ ನಿಧನರಾಗಿದ್ದಾರೆ
ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಆದರೆ, ಬ್ರೈನ್ ಟೂಮರ್ ಇರೋದು ತಡವಾಗಿ ಬೆಳಕಿಗೆ ಬಂದಿದೆ. ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಟ್ಯೂಮರ್ ಪತ್ತೆಯಾಗಿದೆ.
ಈ ಸಂಬಂಧ ಲಾಲ್ ಬಾಗ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದರೂ, ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗು ಪತ್ನಿಯನ್ನ ಅಗಲಿದ್ದಾರೆ.
ಅವರು, ಗರ ಸಿನಿಮಾಗಾಗಿ ಬಾಲಿವುಡ್ ನ ಜಾನಿ ಲಿವರ್’ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ವೃತ್ತಿಯಲ್ಲಿ ವಕೀಲರಾದರೂ, ಸಿನಿಮಾನ ಅವರು ಪ್ರವೃತ್ತಿಯಾಗಿಸಿಕೊಂಡಿದ್ದರು.
ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ನಂತರ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ಅವರು ನಿರ್ಮಿಸಿದ್ದರು
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಬಿಂಗೊ” ಚಿತ್ರದ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.
“ಬಿಂಗೊ” ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ” ನಲ್ಲಿರುತ್ತಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ವಿವರಣೆ ನೀಡಿದರು.
ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದೆ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೀನಿ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದರು ನಟಿ ರಾಗಿಣಿ ದ್ವಿವೇದಿ.
ನಾನು ಧಾರಾವಾಹಿಯಲ್ಲಿ ಅಭಿನಯಿಸಬೇಕಾದರೆ, ಶಂಕರ್ ಅವರ ಪರಿಚಯವಾಯಿತು. ಈ ಚಿತ್ರದ ಕುರಿತು ಮಾತನಾಡಿದರು. ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಆರ್ ಕೆ ಚಂದನ್.
ಇದು ನಮ್ಮ ನಿರ್ಮಾಣದ ಮೊದಲ ಚಿತ್ರ. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎನ್ನುತ್ತಾರೆ ನಿರ್ಮಾಪಕ ಪುನೀತ ಹಾಗೂ ಆರ್ ಪರಾಂಕುಶ್.
ನಾಯಕಿ ರಕ್ಷಾ ನಿಂಬರ್ಗಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ನಟರಾಜ್ ಮುದ್ದಾಲ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಸಿನಿಮಾ ಅನ್ನೋದೇ ಹಾಗೆ. ಇಲ್ಲೊಮ್ಮೆ ಎಂಟ್ರಿಕೊಟ್ಟರೆ ಮುಗೀತು ಏನಾದರೊಂದು ಸಾಧಿಸಲೇಬೇಕೆಂಬ ಹಠ ಸಾಮಾನ್ಯ. ಅದೆಷ್ಟೋ ಪ್ರತಿಭಾವಂತ ನಟ, ನಟಿಯರು ಹಾಗು ತಂತ್ರಜ್ಞರು ಇಲ್ಲಿ ಬೇರೂರಿದ್ದಾರೆ. ಒಂದಷ್ಟು ಮಂದಿ ಗಟ್ಟಿ ನೆಲೆ ಕಾಣಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ತಯಾರಿಯಲ್ಲಿದ್ದಾರೆ. ಅಂತಹವರ ಸಾಲಿಗೆ ಸಂಗೀತ ನಿರ್ದೇಶಕ ಶ್ರೀ ಗುರು ಕೂಡ ಸೇರಿದ್ದಾರೆ. ಕಳೆದ ಒಂದುವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿರುವ ಶ್ರೀಗುರು, ನಿರಂತರವಾಗಿ ತಮ್ಮ ಸಂಗೀತ ಯಾನ ಮುಂದುವರೆಸಿದ್ದಾರೆ. ಅವರ ಬದುಕಿನ ರಾಗ ಕುರಿತು ‘ಸಿನಿಲಹರಿ’ ಜೊತೆ ಒಂದಷ್ಟು ಮಾತಾಡಿದ್ದಾರೆ…
ಓವರ್ ಟು ಶ್ರೀ ಗುರು…
‘ನಾನು ದೂರದ ಬೀದರ್ ನವನು. ಸಿನಿಮಾ ರಂಗ ಸ್ಪರ್ಶಿಸಿದ್ದೇ ಅಕಸ್ಮಿಕ. 2007ರಲ್ಲಿ ನಾನು ಈ ಗಂಧದ ಗುಡಿಗೆ ಕಾಲಿಟ್ಟೆ. ನನ್ನ ಮೊದಲ ಸಂಗೀತ ಕೆಲಸ ಶುರು ಮಾಡಿದ್ದು, ‘ ನಿನ್ನ ವಿನಹ’ ಸಿನಿಮಾಗೆ. ಆ ಚಿತ್ರದ ಸಂಗೀತ ಕೆಲಸಕ್ಕಾಗಿ ತಿಂಗಳುಗಟ್ಟಲೆ ಮಡಿಕೇರಿಯಲ್ಲೇ ಇದ್ದು, ರಾಗ ಸಂಯೋಜಿಸಿದೆ. ಅದೇಕೋ ಏನೋ, ಆ ಚಿತ್ರ ಶುರುವಾಗಲೇ ಇಲ್ಲ. ಮೊದಲ ಸಿನಿಮಾ ಹೀಗಾಯಿತಲ್ಲ ಎಂಬ ಬೇಸರವಾಯ್ತು. ಇಲ್ಲಿ ಯಾರೂ ಪರಿಚಯ ಇರಲಿಲ್ಲ. ಇಲ್ಲಿ ಸಾಧಿಸೋಕೆ ಅಗತ್ತಾ ಅಂತಂದುಕೊಂಡೇ, ಮತ್ತೆ ನನ್ನೂರಿನ ಕಡೆ ಮುಖ ಮಾಡಿದೆ. ಆರಂಭದಲ್ಲೇ ಪರಿಚಯವಾಗಿದ್ದ ನಿರ್ದೇಶಕ ರವೀಂದ್ರ ವೆಂಶಿ ಅವರು ಸ್ವಲ್ಪ ದಿನಗಳ ಬಳಿಕ ಕಾಲ್ ಮಾಡಿ, ಒಂದು ಸಿನಿಮಾ ಸಿಕ್ಕಿದೆ. ಬನ್ನಿ ಕೆಲಸ ಮಾಡುವ ಅಂದರು.
ಭಟ್ಟರ ಜೊತೆ ಸಾಹಿತ್ಯ ಬರೆಸುವಾಗ
ಇಲ್ಲಿಗೆ ಬಂದಾಗ, ಮೊದಲು ಶುರುವಾಗಿ ನಿಂತಿದ್ದ ಸಿನಿಮಾ ನಿರ್ಮಾಪಕರೇ ರವೀಂದ್ರ ವೆಂಶಿ ಸಿನಿಮಾ ಮಾಡುತ್ತಿದ್ದರು. ಸೋ, ಕೆಲಸಕ್ಕಾಗಿ ಹಪಹಪಿಸುತ್ತಿದ್ದೆ. ಕೆಲಸ ಮಾಡಿದೆ. ಆಗ ಗೀತ ಸಾಹಿತಿ ಗೌಸ್ ಪೀರ್ ಪರಿಚಯವಾದರು. ಮೆಲ್ಲನೆ ಇಂಡಸ್ಟ್ರಿಯ ಹಲವು ಮಂದಿ ಗೆಳೆಯರಾದರು. ಆಗಲೂ ನಾನು ಕೆಲಸ ಮಾಡಿದ ಸಿನಿಮಾ ಶುರುವಾಗಲಿಲ್ಲ. ಮತ್ತದೇ ಬೇಸರ. ಆದರೆ, ನಾನು ಆತ್ಮವಿಶ್ವಾಸ ಕಳೆದುಕೊಳ್ಳದೆ, ಸಂಗೀತ ಯಾನ ಮುಂದುವರೆಸಿದೆ.
ಸಂಗೀತ ನಿರ್ದೇಶಕ ಶ್ರೀ ಗುರು
ಹೊಸ ಜೀವನ…
ಮತ್ತೆ ಅದೇ ನಿರ್ದೇಶಕ ರವೀಂದ್ರ ವೆಂಶಿ ಜೊತೆ ‘ ಕಥೆ ಅಲ್ಲ ಜೀವನ’ ಸಿನಿಮಾಗೆ ಕೆಲಸ ಮಾಡಿದೆ. ಅಲ್ಲಿಂದ ಗೆಳೆಯರ ಸರ್ಕಲ್ ಬೆಳೀತಾ ಹೋಯ್ತು. ‘ಮಾರ್ಚ್ 23’ ಸಿನಿಮಾಗೂ ಕೆಲಸ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಇಂಡಸ್ಟ್ರಿ ನನ್ನನ್ನೂ ಗುರುತಿಸುತ್ತಾ ಬಂತು. ನನ್ನೀ ಸಂಗೀತ ಪಯಣ ಈಗಲೂ ಮೊದಲಿಗಿಂತ ತುಸು ಹೆಚ್ಚೇ ಸದ್ದು ಮಾಡುತ್ತಿದೆ ಎಂಬ ಖುಷಿ ಇದೆ.
ಸದ್ಯ ರವೀಂದ್ರ ವೆಂಶಿ ಅವರ ‘ಮಠ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 18ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, ಸಿನಿಮಾದ ಹಾಡು. ಯೋಗರಾಜ್ ಭಟ್ಟರು ಬರೆದ ‘ಕಲ್ಲ ಮೇಲೆ ಕಲ್ಲ ಇಟ್ಟು’ ಹಾಡು ಎಲ್ಲೆಡೆ ಮೆಚ್ಚುಗೆ ಪಡೆದಿದೆ. ‘ಮಠ’ಕ್ಕೊಂದು ಇತಿಹಾಸವಿದೆ. ಆ ಪರಂಪರೆ ಹೊಸ ಮಠಕ್ಕೂ ಇದೆ ಎಂಬ ವಿಶ್ವಾಸವಿದೆ.
ಇದರ ಜೊತೆ ರವೀಂದ್ರ ವೆಂಶಿ ಅವರ ‘ವಾಸಂತಿ ನಲಿದಾಗ’ ಸಿನಿಮಾ ಕೂಡ ರಿಲೀಸ್ ಆಗೋಕೆ ರೆಡಿ ಇದೆ. ಇದರಲ್ಲೂ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದೇನೆ. ಇನ್ನು, ‘ ಬೀಗ’ ಎಂಬ ಹಾರರ್ ಸಿನಿಮಾ ಮತ್ತು ಅದೇ ಸಿನಿಮಾ ತೆಲುಗಲ್ಲೂ ಲೈ ಲವರ್ಸ್ ಹೆಸರಲ್ಲಿ ರೆಡಿಯಾಗಿದ್ದು, ಅಲ್ಲೂ ಸಂಗೀತ ನೀಡಿದ್ದೇನೆ. ಇದರ ಹೊರತಾಗಿ, ನಟ ಕಿಶೋರ್ ಅವರ ‘ಫೈ’ ಮತ್ತು ‘ಉದಾಹರಣೆ’ ಎಂಬ ಮಕ್ಕಳ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದೇನೆ. ನನ್ನ ಕೆಲಸ ನೋಡಿ ಒಂದಷ್ಟು ನಿರ್ದೇಶಕರು ಜೊತೆಗೆ ಕೆಲಸ ಮಾಡಲು ಹೇಳುತ್ತಿದ್ದಾರೆ.
ನಿರಂತರ ಕೆಲಸ ಮಾಡಬೇಕು…
ನಾನು ಮೊದಲು ಕೆಲಸ ಮಾಡುವಾಗ, ನಿರ್ದೇಶಕರೊಬ್ಬರು ಕಥೆ ಮತ್ತು ತಂಡ, ಬ್ಯಾನರ್ ನೋಡಿಕೊಂಡು ಕೆಲಸ ಮಾಡಿ ಹಾಗಾದರೆ ಗಟ್ಟಿ ನೆಲೆ ಕಾಣುತ್ತೀರಿ ಅಂದಿದ್ದರು. ನಾನೂ ಕೂಡ ಅವರ ಮಾತು ಪಾಲಿಸಿದೆ. ಆಗ ಅದು ವರ್ಕೌಟ್ ಆಗಲಿಲ್ಲ. ದೊಡ್ಡದೋ, ಚಿಕ್ಕದೋ, ಹೊಸಬರೋ, ಹಳಬರೋ ಕೆಲಸ ನಿರಂತರವಾಗಿದ್ದರೆ ಮಾತ್ರ ಇಲ್ಲಿರಲು ಸಾಧ್ಯ ಅಂತಂದುಕೊಂಡೆ. ಹಾಗಾಗಿ ನಾನೀಗ ಎಲ್ಲಾ ಬಗೆಯ ಕಥೆ ಇರುವ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದೇನೆ. ಆ ಮೂಲಕ ಹೊಸ ಹೊಸ ಜನರ ಪರಿಚಯ ಆಗುತ್ತಿದೆ.
ಮಧ್ಯೆ ಎರಡು ವರ್ಷ ಗ್ಯಾಪ್ ಆಯ್ತು. ತಂದೆಯ ಅನಾರೋಗ್ಯ ಇತ್ತು. ಇಲ್ಲೂ ಸಹ ಆಗ ಕೆಲಸ ಇರಲಿಲ್ಲ ಪುನಃ ಬೀದರ್ ಕಡೆ ಮುಖ ಮಾಡಿದೆ. ಎರಡು ವರ್ಷ ಬದುಕಿಗಾಗಿ ರೋಡ್ ಕಂಟ್ರ್ಯಾಕ್ಟ್ ಕೆಲಸ ಮಾಡಿದೆ. ಮತ್ತೆ ರವೀಂದ್ರ ಅವರ ಜೊತೆ ಕೆಲಸ ಶುರುವಾಗಿ ಈಗ ಒಂದಷ್ಟು ಸಿನಿಮಾಗಳು ಕೈಯಲ್ಲಿವೆ ಎಂಬ ಸಮಾಧಾನವಿದೆ.
ಗೆಳೆಯರ ಸಾಥ್ ಮರೆಯಲ್ಲ…
ಈಗ ಅನುಭವ ಆಗಿದೆ. ಯಾರ ಜೊತೆ ಹೇಗೆ ಇರಬೇಕೆಂಬ ತಿಳಿವಳಿಕೆಯೂ ಇದೆ. ಎಲ್ಲರ ಜೊತೆ ಕೆಲಸ ಮಾಡುವ ಉತ್ಸಾಹವಿದೆ. ಹಗಲಿರುಳು ದುಡಿಯೋ ಹುಮ್ಮಸ್ಸು ಇದೆ. ಇಂಡಸ್ಟ್ರಿ ದೊಡ್ಡ ಹೆಸರು ಮಾಡಿದೆ. ನಮ್ಮಂತಹ ಅದೆಷ್ಟೋ ಸಂಗೀತ ನಿರ್ದೇಶಕರು ಬಿಜಿಯಾಗುತ್ತಿದ್ದಾರೆ. ನಾನು ಸಂಗೀತ ನಿರ್ದೇಶಕನಾಗಿ ಹೊಸ ಗಾಯಕರನ್ನೂ ಇಂಡಸ್ಟ್ರಿಗೆ ಪರಿಚಯಿಸಿದ ಖುಷಿ ಇದೆ.
ನನ್ನ ಈ ಸಂಗೀತ ಪಯಣದಲ್ಲಿ ಹಲವು ಗೆಳೆಯರ ಸಾಥ್ ಇದೆ. ಅದರಲ್ಲಿ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಬೆಂಬಲ ಮರೆಯಂಗಿಲ್ಲ. ಅಂತೆಯೇ ಒಂದಷ್ಟು ನಿರ್ದೇಶಕರ ಪ್ರೋತ್ಸಾಹವೂ ಇದೆ.
ಈಗ ನನ್ನ ಹೊಸ ರಾಗ ರೀಸ್ಟಾರ್ಟ್ ಆಗಿದೆ. ರಿಲೀಸ್ ಆಗಲಿರುವ ಮಠ ಮತ್ತು ವಾಸಂತಿ ನಲಿದಾಗ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಲೆ ಮಾತು ಮುಗಿಸುತ್ತಾರೆ ಶ್ರೀಗುರು.
ಸತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ “ಹುಷಾರ್” ಚಿತ್ರದ “ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ” ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೇಲರ್ ನ್ನು ನಿರ್ಮಾಪಕ ಎನ್.ಎಂ.ಸುರೇಶ್ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು H20 ಚಿತ್ರದ “ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ” ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ. ಹಾರರ್ ಜಾನರ್ ನ ಈ ಸಿನಿಮಾ ಎಲ್ಲರ ಮನ ಗೆಲ್ಲಲಿ ಎಂದು ಪ್ರಿಯಾಂಕ ಉಪೇಂದ್ರ ಶುಭ ಹಾರೈಸಿದರು.
ನಾನು ಡಾ.ರಾಜ್ ಅವರ ಅಭಿಮಾನಿ. ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ರಂಗಭೂಮಿ ನಂಟು ಇದೆ. ಲಾಕ್ ಡೌನ್ ಸಮಯದಲ್ಲಿ “ಹುಷಾರ್” ಪೆನ್ ಡ್ರೈವ್ ಎಂಬ ಕಥೆ ಬರೆದೆ. ಈ ಕಥೆ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿವೆ. ಆನಂತರ ಇದನ್ನು ಸಿನಿಮಾ ಮಾಡೋಣ ಎಂದು ಚಿತ್ರೀಕರಣ ಆರಂಭಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಸಿನಿಮಾದ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಆ ಹಾಡನ್ನು ಬಿಡುಗಡೆ ಮಾಡಿದ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ- ನಿರ್ದೇಶಕ ಸತೀಶ್ ರಾಜ್.
ನಾಯಕ ಸಿದ್ದೇಶ್, ನಾಯಕಿ ಆದ್ಯಪ್ರಿಯ, ನಟಿ ಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್ ಮುಂತಾದ ಕಲಾವಿದರು ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಅಶ್ವಿನಿ ಅರುಣ್ ಕೃಷ್ಣನ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆರ್ಥಿಕ ಸಲಹೆಗಾರರಾದ ಇಂದು ಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಕನ್ನಡದಲ್ಲಿ ಈ ವರ್ಷದ ಮೋಸ್ಟ್ ಬ್ಯುಸಿಯೆಸ್ಟ್ ನಟ ಡಾಲಿ ಧನಂಜಯ್ ಅಭಿನಯದ ಈ ವರ್ಷದ ಕೊನೆಯ ಸಿನಿಮಾ, ‘ಒನ್ಸ್ ಅಪಾನ್ ಏ ಟೈಮ್ ಇನ್ ಜಮಾಲಿಗುಡ್ಡ’ ಈ ವರ್ಷದ ಕೊನೆ ವಾರ, ಡಿ.30ರಂದು ತೆರೆಗೆ ಬರುತ್ತಿದೆ. ಕನ್ನಡ ಇಂಡಸ್ಟ್ರಿಯ ಮೋಸ್ಟ್ ಲಕ್ಕಿಯೆಸ್ಟ್ ವೀಕ್ ಅಂತಲೇ ಪಾಪ್ಯುಲರ್ ಆಗಿರೋ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಆಗುತ್ತಿದೆ.
ಜಮಾಲಿಗುಡ್ಡ, ತನ್ನ ವಿಭಿನ್ನ ಮೇಕಿಂಗ್, ಸಾಂಗ್ ಎಲ್ಲದ್ದಕ್ಕೂ ಮೊದಲು ಸಿನಿಮಾದ ಟೈಟಲ್ ಮೂಲಕ ಸೌಂಡ್ ಆಗಿದೆ. ಬ್ಯಾಕ್ ಟು ಬ್ಯಾಕ್ ಆಕ್ಷನ್ , ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಡಾಲಿ ಧನಂಜಯ್, ಮೊದಲ ಬಾರಿಗೆ ಜಮಾಲಿ ಗುಡ್ಡ ಸಿನಿಮಾಮೂಲಕ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.
ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಜಮಾಲಿಗುಡ್ಡ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರ ಜೊತೆಗೆ ಅದಿತಿ ಪ್ರಭುದೇವ, ಬಾಲ ನಟಿ ಪ್ರಾಣ್ಯ ರಾವ್, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ಕನ್ನಡಕ್ಕೆ ಒಂದನ್ನು ಒತ್ತಿ ಖ್ಯಾತಿಯ ಕುಶಾಲ್ ಗೌಡ ನಿರ್ದೇಶಕರು. ತಮ್ಮ ಕನಸಿನ ಕಥೆ ಕಟ್ಟಿಕೊಂಡು ಮಾಡಿರುವ ಸಿನಿಮಾ ಇದು. ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಈಗಾಗಲೇ ಸಿನಿಮಾದ ‘ಸಾಗಿದೆ ಹಾಡು’ ಸಾಕಷ್ಟು ಜನಪ್ರಿಯವಾಗಿದೆ. ಶ್ರೀಹರಿ ನಿರ್ಮಾಣ ಮಾಡಿರುವ ಸಿನಿಮಾ ಮೂಲಕ ಡಾಲಿಯ ಮತ್ತೊಂದು ಹೊಸ ಅವತಾರ ಡಿಸೆಂಬರ್ 30ಕ್ಕೆ ನೋಡಬಹುದು.
ಈ ಸಿನಿಮಾ ಪ್ರೀತಿಯೇ ಹಾಗೆ. ಇಲ್ಲಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಸಾಕು. ಸೋಲಿರಲಿ, ಗೆಲುವಿರಲಿ ಆ ಸೆಳೆತ ಬಿಡೋದೇ ಇಲ್ಲ. ಇಲ್ಲೆ ಅದೆಷ್ಟೋ ಒಳ್ಳೆಯ ಪ್ರತಿಭಬೆಗಳು ಬಂದು ನೆಲೆ ಕಂಡಿವೆ. ಒಂದಷ್ಟು ಪ್ರತಿಭಾವಂತರು ನೆಲೆ ಕಾಣಲು ಹರಸಾಹಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಹೊಸ ಬಗೆಯ ಕಥೆಗಳನ್ನಿಟ್ಟುಕೊಂಡು ಇಲ್ಲಿಗೆ ಬರುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಆ ಸಾಲಿಗೆ ಈಗ ‘ಕೆರೆಬೇಟೆ’ ಸಿನಿಮಾ ಕೂಡ ಸೇರಿದೆ
ಹೌದು, ಇದು ಹೊಸ ಬಗೆಯ ಕಥೆ ಇಟ್ಟುಕೊಂಡು ಬರುತ್ತಿರುವ ಸಿನಿಮಾ. ಅಂದಹಾಗೆ, ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡು ಒಂದಷ್ಟು ಸುದ್ದಿಯಾಗಿದ್ದ, ಗೌರಿಶಂಕರ್ ಈಗ ಲೇಟೆಸ್ಟ್ ಕಥೆಯೊಂದಿಗೆ ಎಂಟ್ರಿಯಾಗುತ್ತಿದ್ದಾರೆ. ಇನ್ನು ‘ಕೆರೆಬೇಟೆ’ ಚಿತ್ರದ ಮುಹೂರ್ತ ಶಿವಮೊಗ್ಗ ಜಿಲ್ಲೆಯ ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ.
ಜನಮನ ಸಿನಿಮಾಸ್ ಬ್ಯಾನರ್ ಮೂಲಕ ಜೈ ಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುಶಿವ ಹಿತೈಶಿ ಕಥೆ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕಥೆಯಲ್ಲಿ ಗೌರಿಶಂಕರ್ ಕೂಡ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ವಿಶೇವೆಂದರೆ, ಹೀರೋ ಗೌರಿಶಂಕರ್ ಅವರೇ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರೇ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು ಗುರುಶಿವ ಹಿತೈಶಿ ಅವರು ಕಳೆದ ಹತ್ತು ವರ್ಷಗಳಿಂದಲೂ ಪವನ್ ಒಡೆಯರ್ ಜೊತೆ ಕೆಲಸ ಮಾಡಿದ್ದಾರೆ. ಆ ಅನುಭವ ಮೇಲೆ ಕೆರೆಬೇಟೆ ನಿರ್ದೇಶಿಸುತ್ತಿದ್ದಾರೆ.
ಕೆರೆಬೇಟೆ ಒಂದು ಹಳ್ಳಿ ಸೊಗಡಿನಲ್ಲಿ ನಡೆಯೋ ಕಥೆ. ಅದರಲ್ಲೊಂದು ಮುದ್ದಾದ ಪ್ರೇಮ ಕಥೆಯೂ ಇದೆ. ಮಲೆನಾಡ ಭಾಗದಲ್ಲಿ ನಡೆಐವ ಕೆರೆಬೇಟೆ ಎಂಬ ವಿಶೇಷ ಆಚರಣೆ ಈ ಚಿತ್ರದ ಆಕರ್ಷಣೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಸಿಗಂಧೂರು, ಕೋಗಾರ್ ಘಾಟ್ ಮತ್ತು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ಬಿಂದು ಶಿವರಾಮ್ ನಾಯಕಿ, ಉಳಿದಂತೆ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್, ಹರಿಣಿ, ರಘುರಾಜನಂದ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್ ಸೇರಿದಂತೆ ಶಿವಮೊಗ್ಗ ಭಾಗದ ಅನೇಕ ಕಲಾವಿದರು ಚಿತಗರದಲ್ಲಿ ನಟಿಸುತ್ತಿದ್ದಾರೆ.
ಕೀರ್ತನ್ ಪೂಜಾರಿ ಕ್ಯಾಮೆರಾ ಹಿಡಿದರೆ, ಗಗನ್ ಬಡೇರಿಯಾ ಅವರ ಸಂಗೀತವಿದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಮತ್ತು ಜ್ಞಾನೇಶ್ ಅವರ ಸಂಕಲನವಿದೆ. ಕಂಬಿರಾಜು ಅವರ ನೃತ್ಯ ನಿರ್ದೇಶನವಿದೆ.
ಅದೇನೆ ಇರಲಿ ಮಲೆನಾಡ ಭಾಗದ ವಿಶೇಷ ಕಥೆಯೊಂದು ಚಿತ್ರವಾಗುತ್ತಿದೆ. ಪಕ್ಕಾ ದೇಸಿ ಕಥೆಯ ಈ ಚಿತ್ರ ಕುತೂಹಲವಂತೂ ಮೂಡಿಸಿದೆ.
ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಬುಲೆಟ್” ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್ , ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿದ್ದಾರೆ. ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಾಯಕಿಯರು. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಅಜಿತಾ ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಮಾಹಿತಿ ನೀಡಿದರು.
ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವರೆ ಅಭಿನಯಿಸುತ್ತಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ ಕೀರ್ತಿರಾಜ್.
ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ನಿರ್ದೇಶಕ , ನಟ ಇಶ್ಯಾಕ್ ಬಾಜಿ, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ಮಾತನಾಡಿದರು.
ಲಾಕ್ ಡೌನ್ ನಲ್ಲಿ ಸೆರೆ ಹಿಡಿಯಲಾದ ಹಲವು ವಿಶೇಷತೆಗಳಿಂದ ಕೂಡಿದ ‘ದಿ ಫಿಲಂ ಮೇಕರ್’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆರ್ಯ ಎಸ್ ರೆಡ್ಡಿ ನಿರ್ದೇಶನಲ್ಲಿ ಮೂಡಿ ಬಂದಿರುವ ಈ ಚಿತ್ರ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೇವಲ ಒಂದೇ ಪಾತ್ರ ಇರುವ, ಒಂದೇ ಲೊಕೇಷನ್, ಮೂರು ಜನ ಟೆಕ್ನಿಶಿಯನ್ ಗಳಿಂದ ತಯಾರಾದ ಚಿತ್ರ ‘ದಿ ಫಿಲಂ ಮೇಕರ್’. ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಈ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಪಟ್ಟಿಗೂ ಸೇರಿದೆ. ಇದೆಲ್ಲವೂ ನಿರ್ದೇಶಕ ಆರ್ಯ ಎಸ್ ರೆಡ್ಡಿ ಕನಸು. ಅದನ್ನು ಬಹಳ ಸೃಜನಾತ್ಮಕವಾಗಿ, ಯಶಸ್ವಿಯಾಗಿ ನಿಭಾಯಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ, ಸಂಕಲನ ಜೊತೆಗೆ ಛಾಯಾಗ್ರಾಹಕನಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು ಸಿನಿಮಾ ಪೂರ್ಣ ಗೊಳಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ಹೊರಗಡೆ ಹೋಗುವಂತಿರಲಿಲ್ಲ. ಏನಾದ್ರು ಮಾಡಬೇಕಲ್ಲ ಎಂದಾಗ ಈ ರೀತಿ ಒಂದು ಎಕ್ಸ್ ಪಿರಿಮೆಂಟ್ ಮಾಡಲು ಪ್ಲ್ಯಾನ್ ಮಾಡಿದೆ. ಸಮಯಕ್ಕೆ ಸರಿಯಾಗಿ ಪರಿಚಿತರಾದ ನಟ ಸುನೀಲ್ ಸಿಕ್ಕರು. ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಒಂದೇ ಸ್ಥಳದಲ್ಲಿ 21 ದಿನಗಳ ಕಾಲ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 1 ಗಂಟೆ 40 ನಿಮಿಷ ಇರುವ ಈ ಚಿತ್ರ ಹಲವು ಚಿತ್ರೋತ್ಸವದಲ್ಲಿ ತೆರೆಕಂಡು ಪ್ರಶಂಸೆ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ನಿರ್ದೇಶಕ ಆರ್ಯ ಎಸ್ ರೆಡ್ಡಿ ತಿಳಿಸಿದ್ದಾರೆ.
ಚಿತ್ರದ ಮುಖ್ಯ ಪಾತ್ರಧಾರಿ ಸುನೀಲ್ ಗೌಡ ಮಾತನಾಡಿ, ನಾನು ರಂಗಭೂಮಿ ಕಲಾವಿದ. ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಸಿಂಗಲ್ ಕ್ಯಾರೆಕ್ಟರ್ ಪ್ಲೇ ಮಾಡೋದು ಅಷ್ಟು ಸುಲಭದ ಮಾತಲ್ಲ ಆರಂಭದಲ್ಲಿ ಕಷ್ಟ ಆಯ್ತು. ಆದ್ರೆ ನಿರ್ದೇಶಕರು ನನಗೆ ತುಂಬಾ ಸಹಕಾರ ನೀಡಿದ್ರು, ಟ್ರೈನ್ ಮಾಡಿದ್ರು. ಒಂದೊಳ್ಳೆ ಪ್ರಯತ್ನ, ಪ್ರಯೋಗವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಿರ್ದೇಶಕರಿಗೆ ಅವಕಾಶ ನೀಡಿದಕ್ಕೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಸುನೀಲ್ ತಿಳಿಸಿದ್ದಾರೆ.
ನಿರ್ದೇಶಕ ಆರ್ಯ ಎಸ್ ರೆಡ್ಡಿ ಈ ಚಿತ್ರವನ್ನು ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಶಾಲ್ ಆಲಾಪ್ ಸಂಗೀತ ನಿರ್ದೇಶನ, ವಿಶ್ವಾಸ್ ಕೌಶಿಕ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸಾಕಷ್ಟು ವಿಶೇಷತೆ ಹೊತ್ತ ಈ ಚಿತ್ರ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಬಿಯಾಂಡ್ ಡ್ರೀಮ್ಸ್ ನಡಿ ನಂದಳಿಕೆ ನಿತ್ಯಾನಂದ ಪ್ರಭು ಈ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.
ಕನ್ನಡ ಚಿತ್ರರಂಗವನ್ನು ಈಗ ಇಡೀ ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂತಾಗಿದೆ. ಕನ್ನಡದ ಅನೇಕ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ವ್ಯಾಪಾರದ ದೃಷ್ಟಿಯಲ್ಲೂ ಕನ್ನಡದ ಸಿನಿಮಾಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಆ ನಿಟ್ಟಿನಲ್ಲಿ ಅನೇಕ ಹೊಸಬರ ಕಂಟೆಂಟ್ ಸಿನಿಮಾಗಳು ಜೋರಾಗಿಯೇ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ರೆಡ್ ರಮ್’ ಸಿನಿಮಾ ಕೂಡ ಸೇರಿದೆ
ಹೌದು, ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಮ್ಸ್ ಮೂಲಕ ‘ ರೆಡ್ ರಮ್’ ಚಿತ್ರಕ್ಕೆ ಪೂಜೆ ನಡೆದಿದೆ. ಅಶೋಕ್ ದೇವನಾಂಪ್ರಿಯ, ಕಿಶೋರ್ ಎ. ವಿಜಯ್ ಕುಮಾರ್ ಹಾಗೂ ಹನಿ ಚೌಧರಿ ಈ ಸುನಿಮಾದ ನಿರ್ಮಾಪಕರು. ” ರೆಡ್ ರಮ್” ಚಿತ್ರದ ವಿಶೇಷವೆಂದರೆ, ಇದರ ಮುಹೂರ್ತ ಪೂಜೆ ಉತ್ತರ ಪ್ರದೇಶದ ಮೋದಿನಗರದ ಶ್ರೀ ಸನಾತನ ಧರ್ಮ ದೇವಸ್ಥಾನದಲ್ಲಿ ನೆರವೇರಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೋದಿ ನಗರದ ಶಾಸಕರಾದ ಶ್ರೀಮತಿ ಮಂಜು ಶಿವಾಚ್, ಸ್ಥಳೀಯ ಕೌನ್ಸಿಲರ್ ರಾಜಕುಮಾರಿ ಮುನ್ನಿ ಜಿ ಹಾಗೂ ಅನೇಕ ಗಣ್ಯರು ಆಗಮಿಸಿ ಕನ್ನಡ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ.
‘ರೆಡ್ ರಮ್’ ಚಿತ್ರಕ್ಕೆ ಆರ್. ಪ್ರಮೋದ್ ಜೋಯಿಸ್ ನಿರ್ದೇಶಕರು. ಇದೊಂದು ಈ ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿದೆ. ಹಿಂದೆಂದೂ ಕೇಳಿರದ ಕಥಾಹಂದರ ಇಲ್ಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಬಾಲಿವುಡ್ ನಟ ರಾಜ್ ವೀರ್, ಮಧುರಾ, ಅಫ್ಜಲ್ , ಶ್ರೀದತ್ತಾ, ಪ್ರಾಚಿಶರ್ಮ, ಧ್ರಿತೇಶ್ ವಿನಯ್ ಸೂರ್ಯ ಹಾಗೂ ಯತಿರಾಜ್ ಅಭಿನಯಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಕಲಾವಿದರ ಸಮಾಗಮವಿದೆ.
ಚಿತ್ರಕ್ಕೆ ಶಿವಶಂಕರ್(ಶಂಖು) ಛಾಯಾಗ್ರಹಣವಿದೆ. ಆರ್. ಚೇತನ್ ಕೃಷ್ಣ ಸಂಗೀತವಿದೆ. ಅಫ್ಜಲ್ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿನಿಮಾಗೆ ಮುಹೂರ್ತ ಪೂಜೆ ನಡೆದಿದ್ದು, ಸುಮಾರು 20 ದಿನಗಳ ಕಾಲ ಉತ್ತರ ಪ್ರದೇಶದ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಕೆಲ ಭಾಗ ಬೆಂಗಳೂರಿನಲ್ಲೂ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡಕ್ಕಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ “ತ್ರಿಬಲ್ ರೈಡಿಂಗ್” ಚಿತ್ರಕ್ಕಾಗಿ ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ “ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಬಾರಿ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ನಮ್ಮ “ತ್ರಿಬಲ್ ರೈಡಿಂಗ್” ಶುರುವಾಗಿದ್ದು, ಕೊರೋನ ಸಮಯದಲ್ಲಿ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಿದೆವು. ಅದು ಆಸ್ಪತ್ರೆಯಲ್ಲಿ. ಎಲ್ಲರಲ್ಲೂ ಭಯದ ವಾತಾವರಣ. ಆ ಸಮಯದಲ್ಲಿ ಚಿತ್ರೀಕರಣ ಮಾಡಲಾಯಿತು. ದೇವರ ದಯೆಯಿಂದ ಯಾವುದೇ ತೊಂದರೆ ಆಗಲಿಲ್ಲ. ಇನ್ನೂ ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಈಗ ಮೂರನೇ ಹಾಡು ಬಿಡುಗಡೆಯಾಗಿದೆ. ಹಿಂದಿನ ಎರಡು ಹಾಡುಗಳು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನಪ್ರಿಯವಾಗಿದೆ. ನವೆಂಬರ್ ಹದಿನೈದರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಇಪ್ಪತ್ತೈದರಂದು ಚಿತ್ರ ತೆರೆಗೆ ಬರಲಿದೆ. ಇಡೀ ಚಿತ್ರತಂಡದ ಸಹಕಾರದಿಂದ “ತ್ರಿಬಲ್ ರೈಡಿಂಗ್” ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೂ ಪ್ರಿಯವಾಗುವ ವಿಶ್ವಾಸವಿದೆ ಎಂದರು ನಾಯಕ ಗೋಲ್ಡನ್ ಸ್ಟಾರ್ ಗಣೇಶ್.
ಈ ಹಿಂದೆ ಬಿಡುಗಡೆಯಾಗಿರುವ ಎರಡು ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಹಾಡು ಕೂಡ ಸುಮಧುರವಾಗಿದೆ ಎಂದು ಹಾಡಿನ ಬಗ್ಗೆ ಮಾಹಿತಿ ನೀಡಿದ್ದ ನಿರ್ದೇಶಕ ಮಹೇಶ್ ಗೌಡ, ನವೆಂಬರ್ 25 ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರು ಪ್ರೋತ್ಸಾಹ ನೀಡಿ ಎಂದರು.
ಇದೇ ತಿಂಗಳ 25 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ.
ಇಂದು ಬಿಡುಗಡೆಯಾಗಿರುವ ಈ ಹಾಡು ತುಂಬಾ ಚೆನ್ನಾಗಿದೆ. ಗಣೇಶ್ ಸರ್ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಎರಡು ಜಡೆ ಒಟ್ಟಿಗೆ ಸೇರುವುದಿಲ್ಲ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ನಾವು ಮೂವರು ನಾಯಕಿಯರು. ಇಡೀ ಚಿತ್ರ ಪೂರ್ತಿ ಖುಷಿಯಿಂದ ಕಾಲ ಕಳೆದೆವು. ನಮ್ಮ ಚಿತ್ರಕ್ಕೆ ಬೆಂಬಲ ನೀಡಿ ಎಂದರು ನಾಯಕಿ ಅದಿತಿ ಪ್ರಭುದೇವ.
ಮತ್ತಿಬ್ಬರು ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ಸಹ “ತ್ರಿಬಲ್ ರೈಡಿಂಗ್” ಬಗ್ಗೆ ಮಾತನಾಡಿದರು. ಛಾಯಾಗ್ರಹಕ ಜೈ ಆನಂದ್ ಹಾಗೂ ಸಂಭಾಷಣೆ ಬರೆದಿರುವ ರಾಜಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.