ಗುರು ರಾಗವೇ ಚಂದ…! ‘ಶ್ರೀ ಗುರು’ ಮಠದೊಳಗೆ ವಾಸಂತಿಯ ಹೊಸ ಗಾನ ಬಜಾನ…

ಸಿನಿಮಾ ಅನ್ನೋದೇ ಹಾಗೆ. ಇಲ್ಲೊಮ್ಮೆ ಎಂಟ್ರಿಕೊಟ್ಟರೆ ಮುಗೀತು ಏನಾದರೊಂದು ಸಾಧಿಸಲೇಬೇಕೆಂಬ ಹಠ ಸಾಮಾನ್ಯ. ಅದೆಷ್ಟೋ ಪ್ರತಿಭಾವಂತ ನಟ, ನಟಿಯರು ಹಾಗು ತಂತ್ರಜ್ಞರು ಇಲ್ಲಿ ಬೇರೂರಿದ್ದಾರೆ. ಒಂದಷ್ಟು ಮಂದಿ ಗಟ್ಟಿ ನೆಲೆ ಕಾಣಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ತಯಾರಿಯಲ್ಲಿದ್ದಾರೆ. ಅಂತಹವರ ಸಾಲಿಗೆ ಸಂಗೀತ ನಿರ್ದೇಶಕ ಶ್ರೀ ಗುರು ಕೂಡ ಸೇರಿದ್ದಾರೆ. ಕಳೆದ ಒಂದುವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿರುವ ಶ್ರೀಗುರು, ನಿರಂತರವಾಗಿ ತಮ್ಮ ಸಂಗೀತ ಯಾನ ಮುಂದುವರೆಸಿದ್ದಾರೆ. ಅವರ ಬದುಕಿನ ರಾಗ ಕುರಿತು ‘ಸಿನಿಲಹರಿ’ ಜೊತೆ ಒಂದಷ್ಟು ಮಾತಾಡಿದ್ದಾರೆ…

ಓವರ್ ಟು ಶ್ರೀ ಗುರು…

‘ನಾನು ದೂರದ ಬೀದರ್ ನವನು. ಸಿನಿಮಾ ರಂಗ ಸ್ಪರ್ಶಿಸಿದ್ದೇ ಅಕಸ್ಮಿಕ. 2007ರಲ್ಲಿ ನಾನು ಈ ಗಂಧದ ಗುಡಿಗೆ ಕಾಲಿಟ್ಟೆ. ನನ್ನ ಮೊದಲ ಸಂಗೀತ ಕೆಲಸ ಶುರು ಮಾಡಿದ್ದು, ‘ ನಿನ್ನ ವಿನಹ’ ಸಿನಿಮಾಗೆ. ಆ ಚಿತ್ರದ ಸಂಗೀತ ಕೆಲಸಕ್ಕಾಗಿ ತಿಂಗಳುಗಟ್ಟಲೆ ಮಡಿಕೇರಿಯಲ್ಲೇ ಇದ್ದು, ರಾಗ ಸಂಯೋಜಿಸಿದೆ. ಅದೇಕೋ ಏನೋ, ಆ ಚಿತ್ರ ಶುರುವಾಗಲೇ ಇಲ್ಲ. ಮೊದಲ ಸಿನಿಮಾ ಹೀಗಾಯಿತಲ್ಲ ಎಂಬ ಬೇಸರವಾಯ್ತು. ಇಲ್ಲಿ ಯಾರೂ ಪರಿಚಯ ಇರಲಿಲ್ಲ. ಇಲ್ಲಿ ಸಾಧಿಸೋಕೆ ಅಗತ್ತಾ ಅಂತಂದುಕೊಂಡೇ, ಮತ್ತೆ ನನ್ನೂರಿನ ಕಡೆ ಮುಖ ಮಾಡಿದೆ. ಆರಂಭದಲ್ಲೇ ಪರಿಚಯವಾಗಿದ್ದ ನಿರ್ದೇಶಕ ರವೀಂದ್ರ ವೆಂಶಿ ಅವರು ಸ್ವಲ್ಪ ದಿನಗಳ ಬಳಿಕ ಕಾಲ್ ಮಾಡಿ, ಒಂದು ಸಿನಿಮಾ ಸಿಕ್ಕಿದೆ. ಬನ್ನಿ ಕೆಲಸ‌ ಮಾಡುವ ಅಂದರು.

ಇಲ್ಲಿಗೆ ಬಂದಾಗ, ಮೊದಲು ಶುರುವಾಗಿ ನಿಂತಿದ್ದ ಸಿನಿಮಾ ನಿರ್ಮಾಪಕರೇ ರವೀಂದ್ರ ವೆಂಶಿ ಸಿನಿಮಾ ಮಾಡುತ್ತಿದ್ದರು. ಸೋ, ಕೆಲಸಕ್ಕಾಗಿ ಹಪಹಪಿಸುತ್ತಿದ್ದೆ. ಕೆಲಸ ಮಾಡಿದೆ. ಆಗ ಗೀತ ಸಾಹಿತಿ ಗೌಸ್ ಪೀರ್ ಪರಿಚಯವಾದರು. ಮೆಲ್ಲನೆ ಇಂಡಸ್ಟ್ರಿಯ ಹಲವು ಮಂದಿ ಗೆಳೆಯರಾದರು. ಆಗಲೂ ನಾನು ಕೆಲಸ‌ ಮಾಡಿದ ಸಿನಿಮಾ ಶುರುವಾಗಲಿಲ್ಲ. ಮತ್ತದೇ ಬೇಸರ. ಆದರೆ, ನಾನು ಆತ್ಮವಿಶ್ವಾಸ ಕಳೆದುಕೊಳ್ಳದೆ, ಸಂಗೀತ ಯಾನ ಮುಂದುವರೆಸಿದೆ.

ಹೊಸ ಜೀವನ…

ಮತ್ತೆ ಅದೇ ನಿರ್ದೇಶಕ ರವೀಂದ್ರ ವೆಂಶಿ ಜೊತೆ ‘ ಕಥೆ ಅಲ್ಲ ಜೀವನ’ ಸಿನಿಮಾಗೆ ಕೆಲಸ ಮಾಡಿದೆ. ಅಲ್ಲಿಂದ ಗೆಳೆಯರ ಸರ್ಕಲ್ ಬೆಳೀತಾ ಹೋಯ್ತು. ‘ಮಾರ್ಚ್ 23’ ಸಿನಿಮಾಗೂ ಕೆಲಸ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಇಂಡಸ್ಟ್ರಿ ನನ್ನನ್ನೂ ಗುರುತಿಸುತ್ತಾ ಬಂತು. ನನ್ನೀ ಸಂಗೀತ ಪಯಣ ಈಗಲೂ ಮೊದಲಿಗಿಂತ ತುಸು ಹೆಚ್ಚೇ ಸದ್ದು ಮಾಡುತ್ತಿದೆ ಎಂಬ ಖುಷಿ ಇದೆ.

ಸದ್ಯ ರವೀಂದ್ರ ವೆಂಶಿ ಅವರ ‘ಮಠ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 18ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, ಸಿನಿಮಾದ ಹಾಡು. ಯೋಗರಾಜ್ ಭಟ್ಟರು ಬರೆದ ‘ಕಲ್ಲ ಮೇಲೆ ಕಲ್ಲ ಇಟ್ಟು’ ಹಾಡು ಎಲ್ಲೆಡೆ ಮೆಚ್ಚುಗೆ ಪಡೆದಿದೆ. ‘ಮಠ’ಕ್ಕೊಂದು ಇತಿಹಾಸವಿದೆ. ಆ ಪರಂಪರೆ ಹೊಸ ಮಠಕ್ಕೂ ಇದೆ ಎಂಬ ವಿಶ್ವಾಸವಿದೆ.

ಇದರ ಜೊತೆ ರವೀಂದ್ರ ವೆಂಶಿ ಅವರ ‘ವಾಸಂತಿ ನಲಿದಾಗ’ ಸಿನಿಮಾ ಕೂಡ ರಿಲೀಸ್ ಆಗೋಕೆ ರೆಡಿ ಇದೆ. ಇದರಲ್ಲೂ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದೇನೆ. ಇನ್ನು, ‘ ಬೀಗ’ ಎಂಬ ಹಾರರ್ ಸಿನಿಮಾ ಮತ್ತು ಅದೇ ಸಿನಿಮಾ ತೆಲುಗಲ್ಲೂ ಲೈ ಲವರ್ಸ್ ಹೆಸರಲ್ಲಿ ರೆಡಿಯಾಗಿದ್ದು, ಅಲ್ಲೂ ಸಂಗೀತ ನೀಡಿದ್ದೇನೆ. ಇದರ ಹೊರತಾಗಿ, ನಟ ಕಿಶೋರ್ ಅವರ ‘ಫೈ’ ಮತ್ತು ‘ಉದಾಹರಣೆ’ ಎಂಬ ಮಕ್ಕಳ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದೇನೆ. ನನ್ನ ಕೆಲಸ ನೋಡಿ ಒಂದಷ್ಟು ನಿರ್ದೇಶಕರು ಜೊತೆಗೆ ಕೆಲಸ ಮಾಡಲು ಹೇಳುತ್ತಿದ್ದಾರೆ.

ನಿರಂತರ ಕೆಲಸ‌ ಮಾಡಬೇಕು…

ನಾನು ಮೊದಲು ಕೆಲಸ ಮಾಡುವಾಗ, ನಿರ್ದೇಶಕರೊಬ್ಬರು ಕಥೆ ಮತ್ತು ತಂಡ, ಬ್ಯಾನರ್ ನೋಡಿಕೊಂಡು ಕೆಲಸ ಮಾಡಿ ಹಾಗಾದರೆ ಗಟ್ಟಿ ನೆಲೆ ಕಾಣುತ್ತೀರಿ ಅಂದಿದ್ದರು. ನಾನೂ ಕೂಡ ಅವರ ಮಾತು ಪಾಲಿಸಿದೆ. ಆಗ ಅದು ವರ್ಕೌಟ್ ಆಗಲಿಲ್ಲ. ದೊಡ್ಡದೋ, ಚಿಕ್ಕದೋ, ಹೊಸಬರೋ, ಹಳಬರೋ ಕೆಲಸ ನಿರಂತರವಾಗಿದ್ದರೆ ಮಾತ್ರ ಇಲ್ಲಿರಲು ಸಾಧ್ಯ ಅಂತಂದುಕೊಂಡೆ. ಹಾಗಾಗಿ ನಾನೀಗ ಎಲ್ಲಾ ಬಗೆಯ ಕಥೆ ಇರುವ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದೇನೆ. ಆ ಮೂಲಕ ಹೊಸ ಹೊಸ ಜನರ ಪರಿಚಯ ಆಗುತ್ತಿದೆ.

ಮಧ್ಯೆ ಎರಡು ವರ್ಷ ಗ್ಯಾಪ್ ಆಯ್ತು. ತಂದೆಯ ಅನಾರೋಗ್ಯ ಇತ್ತು. ಇಲ್ಲೂ ಸಹ ಆಗ ಕೆಲಸ ಇರಲಿಲ್ಲ ಪುನಃ ಬೀದರ್ ಕಡೆ ಮುಖ ಮಾಡಿದೆ. ಎರಡು ವರ್ಷ ಬದುಕಿಗಾಗಿ ರೋಡ್ ಕಂಟ್ರ್ಯಾಕ್ಟ್ ಕೆಲಸ ಮಾಡಿದೆ. ಮತ್ತೆ ರವೀಂದ್ರ ಅವರ ಜೊತೆ ಕೆಲಸ ಶುರುವಾಗಿ ಈಗ ಒಂದಷ್ಟು ಸಿನಿಮಾಗಳು ಕೈಯಲ್ಲಿವೆ ಎಂಬ ಸಮಾಧಾನವಿದೆ.

ಗೆಳೆಯರ ಸಾಥ್ ಮರೆಯಲ್ಲ…

ಈಗ ಅನುಭವ ಆಗಿದೆ. ಯಾರ ಜೊತೆ ಹೇಗೆ ಇರಬೇಕೆಂಬ ತಿಳಿವಳಿಕೆಯೂ ಇದೆ. ಎಲ್ಲರ ಜೊತೆ ಕೆಲಸ ಮಾಡುವ ಉತ್ಸಾಹವಿದೆ. ಹಗಲಿರುಳು ದುಡಿಯೋ ಹುಮ್ಮಸ್ಸು ಇದೆ. ಇಂಡಸ್ಟ್ರಿ ದೊಡ್ಡ ಹೆಸರು ಮಾಡಿದೆ. ನಮ್ಮಂತಹ ಅದೆಷ್ಟೋ ಸಂಗೀತ ನಿರ್ದೇಶಕರು ಬಿಜಿಯಾಗುತ್ತಿದ್ದಾರೆ. ನಾನು ಸಂಗೀತ ನಿರ್ದೇಶಕನಾಗಿ ಹೊಸ ಗಾಯಕರನ್ನೂ ಇಂಡಸ್ಟ್ರಿಗೆ ಪರಿಚಯಿಸಿದ ಖುಷಿ ಇದೆ.

ನನ್ನ ಈ ಸಂಗೀತ ಪಯಣದಲ್ಲಿ ಹಲವು ಗೆಳೆಯರ ಸಾಥ್ ಇದೆ. ಅದರಲ್ಲಿ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಬೆಂಬಲ ಮರೆಯಂಗಿಲ್ಲ. ಅಂತೆಯೇ ಒಂದಷ್ಟು ನಿರ್ದೇಶಕರ ಪ್ರೋತ್ಸಾಹವೂ ಇದೆ.

ಈಗ ನನ್ನ ಹೊಸ ರಾಗ ರೀಸ್ಟಾರ್ಟ್ ಆಗಿದೆ. ರಿಲೀಸ್ ಆಗಲಿರುವ ಮಠ ಮತ್ತು ವಾಸಂತಿ ನಲಿದಾಗ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಲೆ ಮಾತು ಮುಗಿಸುತ್ತಾರೆ ಶ್ರೀಗುರು.

Related Posts

error: Content is protected !!