ಗಣೇಶ್ ತ್ರಿಬಲ್ ರೈಡಿಂಗ್ ನಲ್ಲಿ ಮೂವರು ಸುಂದರಿಯರು! ನವೆಂಬರ್ 25ಕ್ಕೆ ಗೋಲ್ಡನ್ ರೈಡಿಂಗ್ ಶುರು…

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ “ತ್ರಿಬಲ್ ರೈಡಿಂಗ್” ಚಿತ್ರಕ್ಕಾಗಿ ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ “ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.‌ ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಬಾರಿ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ನಮ್ಮ “ತ್ರಿಬಲ್ ರೈಡಿಂಗ್” ಶುರುವಾಗಿದ್ದು, ಕೊರೋನ ಸಮಯದಲ್ಲಿ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಿದೆವು. ಅದು ಆಸ್ಪತ್ರೆಯಲ್ಲಿ. ಎಲ್ಲರಲ್ಲೂ ಭಯದ ವಾತಾವರಣ. ಆ ಸಮಯದಲ್ಲಿ ಚಿತ್ರೀಕರಣ ಮಾಡಲಾಯಿತು. ದೇವರ ದಯೆಯಿಂದ ಯಾವುದೇ ತೊಂದರೆ ಆಗಲಿಲ್ಲ. ಇನ್ನೂ ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಈಗ ಮೂರನೇ ಹಾಡು ಬಿಡುಗಡೆಯಾಗಿದೆ. ಹಿಂದಿನ ಎರಡು ಹಾಡುಗಳು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನಪ್ರಿಯವಾಗಿದೆ. ನವೆಂಬರ್ ಹದಿನೈದರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಇಪ್ಪತ್ತೈದರಂದು ಚಿತ್ರ ತೆರೆಗೆ ಬರಲಿದೆ. ಇಡೀ ಚಿತ್ರತಂಡದ ಸಹಕಾರದಿಂದ “ತ್ರಿಬಲ್ ರೈಡಿಂಗ್” ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೂ ಪ್ರಿಯವಾಗುವ ವಿಶ್ವಾಸವಿದೆ ಎಂದರು ನಾಯಕ ಗೋಲ್ಡನ್ ಸ್ಟಾರ್ ಗಣೇಶ್.

ಈ ಹಿಂದೆ ಬಿಡುಗಡೆಯಾಗಿರುವ ಎರಡು ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಹಾಡು ಕೂಡ ಸುಮಧುರವಾಗಿದೆ ಎಂದು ಹಾಡಿನ ಬಗ್ಗೆ ಮಾಹಿತಿ ನೀಡಿದ್ದ ನಿರ್ದೇಶಕ ಮಹೇಶ್ ಗೌಡ, ನವೆಂಬರ್ 25 ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರು ಪ್ರೋತ್ಸಾಹ ನೀಡಿ ಎಂದರು.

ಇದೇ ತಿಂಗಳ 25 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ.

ಇಂದು ಬಿಡುಗಡೆಯಾಗಿರುವ ಈ ಹಾಡು‌ ತುಂಬಾ ‌ಚೆನ್ನಾಗಿದೆ. ಗಣೇಶ್ ಸರ್ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಎರಡು ಜಡೆ ಒಟ್ಟಿಗೆ ಸೇರುವುದಿಲ್ಲ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ನಾವು ಮೂವರು ನಾಯಕಿಯರು. ಇಡೀ ಚಿತ್ರ ಪೂರ್ತಿ ಖುಷಿಯಿಂದ ಕಾಲ ಕಳೆದೆವು. ನಮ್ಮ ಚಿತ್ರಕ್ಕೆ ಬೆಂಬಲ ನೀಡಿ ಎಂದರು ನಾಯಕಿ ಅದಿತಿ ಪ್ರಭುದೇವ.

ಮತ್ತಿಬ್ಬರು ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ಸಹ “ತ್ರಿಬಲ್ ರೈಡಿಂಗ್” ಬಗ್ಗೆ ಮಾತನಾಡಿದರು. ಛಾಯಾಗ್ರಹಕ ಜೈ ಆನಂದ್ ಹಾಗೂ ಸಂಭಾಷಣೆ ಬರೆದಿರುವ ರಾಜಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

error: Content is protected !!