Categories
ಸಿನಿ ಸುದ್ದಿ

ಜೂನ್ 23ಕ್ಕೆ ಧೂಮಂ ಸಿನಿಮಾ ರಿಲೀಸ್: ಏಕಕಾಲಕ್ಕೆ ಕನ್ನಡ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ

ಕೆ.ಜಿ.ಎಫ್, ಕಾಂತಾರ ದಂತಹ ಯಶಸ್ವಿ ಚಿತ್ರಗಳ ನಿರ್ಮಾಣದ ಮೂಲಕ ವಿಶ್ವದಾದ್ಯಂತ ಜನಪ್ರಿಯವಾಗಿರುವ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ ಚಿತ್ರ “ಧೂಮಂ. ಈ ಚಿತ್ರದ ಮೂಲಕ ಹೊಂಬಾಳೆ ಫಿಲಂಸ್ ಮಲೆಯಾಳಂ ಚಿತ್ರರಂಗಕ್ಕೂ ಅಡಿಯಿಟ್ಟಿದೆ. ಲೂಸಿಯಾ”, “ಯೂಟರ್ನ್” ಮಂತಾದ ಜನಪ್ರಿಯ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕನ್ನಡ ಹಾಗೂ ಮಲೆಯಾಳಂನಲ್ಲಿ ಇದೇ ಜೂನ್ 23 ರಂದು “ಧೂಮಂ” ಚಿತ್ರ ಬಿಡುಗಡೆಯಾಗಲಿದೆ.
“ಧೂಮಂ” ಚಿತ್ರದ ಕನ್ನಡ ಅವತರಣಿಕೆಯನ್ನು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ‌. ಕೇರಳದಲ್ಲೂ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ‌ಕಾಣುತ್ತಿದೆ.
ಜೂನ್ 29ರಂದು ತೆಲುಗು ಹಾಗೂ ತಮಿಳಿನಲ್ಲಿ ತೆರೆಗೆ ಬರಲಿದೆ.

ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಕುಮಾರ್ ಅವರೇ ಬರೆದಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಪ್ರಶಂಸೆ ಪಡೆದಿದೆ. ಚಿತ್ರದ ಬಗ್ಗೆ ನಿರೀಕ್ಷೆ ಇದೆ.

Categories
ಸಿನಿ ಸುದ್ದಿ

ಜೂನ್ 23ಕ್ಕೆ ಮೊದಲ ಮಳೆ!

ಯಾವುದೇ ಹುಡುಗಿಯೂ ಇಷ್ಟಪಡದಂಥ (ವಿ)ರೂಪವಂತ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಏನೇನಾಯಿತು ಎಂಬುದನ್ನು ಹಾಸ್ಯಮಯ ವಾಗಿ ಹೇಳುವಂಥ ಕಥಾಹಂದರ ಹೊಂದಿರುವ ಚಿತ್ರ ಮೊದಲಮಳೆ ಜೂನ್ 23ರಂದು ಬಿಡುಗಡೆಯಾಗಲಿದೆ. ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಜಾನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ.

ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ, ಸೇರಿದಂತೆ ಒಂಭತ್ತು ಜನ ನಾಯಕಿಯರಾಗಿ ಅಭಿನಸಿರುವ ಈ ಚಿತ್ರಕ್ಕೆ ರಾಜಶರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಅವರ ಸಂಗೀತ ಸಂಯೋಜನೆ, ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಚಿತ್ರದ ಕುರಿತಂತೆ ಮಾತನಾಡಿದ ನಾಯಕ ರಾಜಾನರಸಿಂಹ ನಾನು ರೈತನ ಮಗ, ಕಲಾವಿದನಾಗಬೇಕು ಎನ್ನುವುದು ನನ್ನ ಬಹುದಿನಗಳ ಕನಸು. ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಿದ್ದು, ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ.

ಜೀವನದಲ್ಲಿ ಏನಾದರೂ ಸಾಧನೆ ಮಾಡಲೆಂದು ಹಳ್ಳಿಯಿಂದ ಸಿಟಿಗೆ ಬಂದ ನಾಯಕ ಜವರಾಯ ಕೊನೆಗೆ ಏನಾಗುತ್ತಾನೆ ಎನ್ನುವುದೇ ಈ ಚಿತ್ರದ ಕಥೆ ಎಂದು ಹೇಳಿದರು. ನಿರ್ದೇಶಕ ರಾಜಶರಣ್ ಈ ಹಿಂದೆ ಎಮ್ಮೆತಮ್ಮ ಎಂಬ ಚಿತ್ರ ನಿರ್ದೇಶಿಸಿದ್ದರು. ರಾಜಾನರಸಿಂಹ ಅವರ ಸ್ನೇಹಿತರು, ಆತನಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು ೧೦ ಜನ ಹೀರೋಯಿನ್ ಇಟ್ಕೊಂಡು ಸಿನ್ಮಾ ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ.

ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ ೪೦ ದಿನ ಚಿತ್ರೀಕರಣ ನಡೆಸಿದ್ದೇವೆ. ಹಾರರ್ ಕಂಟೆಂಟ್ ಇರುವ ಕಾರಣ ಚಿತ್ರಕ್ಕೆ ಯು/ಎ ಸಿಕ್ಕಿದೆ ಎಂದರು. ಗಣೇಶರಾವ್, ಜೋತಿ ಮರೂರು ಉಳಿದ ಪಾತ್ರಗಳಲ್ಲಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲೂ ರಿಲೀಸ್ ಆಗಲಿದೆ ಧೋನಿ ನಿರ್ಮಾಣದ ಚಿತ್ರ: ಲೆಟ್ಸ್ ಗೆಟ್ ಮ್ಯಾರೀಡ್ ಟೀಸರ್ ಗೆ ಭರಪೂರ ಮೆಚ್ಚುಗೆ

ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಪತ್ನಿ‌ ಸಾಕ್ಷಿ ಜೊತೆಗೂಡಿ ತಮ್ಮದೇ ಧೋನಿ ಎಂಟರ್ಟೇನ್ಮೆಂಟ್‌ ಮೂಲಕ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’.
ಟೀಸರ್ ಮೂಲಕ ನಗುವಿನ ಕಿಕ್ ಕೊಟ್ಟಿರುವ ಈ ಚಿತ್ರವನ್ನು ರಾಜ್ಯದಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇತ್ತೀಚಿಗೆ ಪರಭಾಷೆ ಸಿನಿಮಾಗಳಿಗೆ ಕರುನಾಡಿನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಕೂಡ ಕರ್ನಾಟಕದಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ಫ್ಯಾಮಿಲಿ ಎಂಟರ್​ಟೇನರ್ ಕಥಾಹಂದರ ಹೊಂದಿರುವ ಸಿನಿಮಾವನ್ನು ರಮೇಶ್ ತಮಿಳ್​ಮಣಿ ನಿರ್ದೇಶನ ಮಾಡಿದ್ದಾರೆ. ನಾಯಕ ಹರೀಶ್ ಕಲ್ಯಾಣ್, ನಾಯಕಿ ಇವಾನಾ ನಟಿಸಿದ್ದು, ಹಿರಿಯ ನಟಿ ನದಿಯಾ, ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

ರಮೇಶ್ ತಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಶೀಘ್ರದಲ್ಲೇ ಆಡಿಯೋ ಹಾಗೂ ಟ್ರೇಲರ್‌ನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.

Categories
ಸಿನಿ ಸುದ್ದಿ

90 ಬಿಡಿ ಮನೀಗ್ ನಡಿ: ಇದು ಬಿರಾದರ್ ನಟನೆಯ 500ನೇ ಚಿತ್ರ- ತೆರೆಗೆ ರೆಡಿ

ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಅಭಿನಯದ 500ನೇ ಚಿತ್ರ “90 ಬಿಡಿ ಮನೀಗ್ ನಡಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಮೊದಲು ನಮ್ಮ ಚಿತ್ರದ ಟೈಟಲ್ “90 ಹೊಡಿ ಮನೀಗ್ ನಡಿ” ಎಂದು ಇಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಟೈಟಲ್ ಗೆ ಒಪ್ಪಲಿಲ್ಲ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನು “90 ಬಿಡಿ ಮನೀಗ್ ನಡಿ” ಎಂದು ಬದಲಿಸಲಾಯಿತು. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನ ಗೆದ್ದಿದೆ.‌ ರಾಷ್ಟ್ರಪ್ರಶಸ್ತಿ ವಿಜೇತ ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ‌ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ತಿಂಗಳ ಕೊನೆಗೆ ಅಥಾವಾ ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ತಿಳಿಸಿದರು.

ನನ್ನ ರಂಗಭೂಮಿ ಹಾಗೂ ಸಿನಿಪಯಣಕ್ಕೆ 50 ವರ್ಷ ತುಂಬಿದೆ. ಇದು ನನ್ನ 500ನೇ ಚಿತ್ರ. ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ‌ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ ಎಂದರು ನಟ ಬಿರಾದಾರ್.

ಬ್ಯಾಂಕ್ ಉದ್ಯೋಗಿಯ ಪಾತ್ರ ನನ್ನದು ಎಂದು ಕರಿಸುಬ್ಬು ಹೇಳಿದರು. ಅಭಯ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಪ್ರೀತು ಪೂಜಾ‌, ನೀತಾ, ಆರ್ ಡಿ ಬಾಬು, ವಿವೇಕ್, ಹೊಸಕೋಟೆ ಮುರುಳಿ ಮುಂತಾದವರು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಬಿರಾದಾರ್ ಜೊತೆ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ “90 ಬಿಡಿ ಮನೀಗ್ ನಡಿ” ಚಿತ್ರಕ್ಕೆ “ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ” ಎಂಬ ಪಾನಪ್ರೀಯರ ಜನಪ್ರಿಯ ಸ್ಲೋಗನ್ ಇಡಲಾಗಿದ್ದು, ಚಿತ್ರ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಕಾಮಿಡಿ, ಕ್ರೈಮ್ ಥ್ರಿಲ್ಲರ್ ರೂಪದಲ್ಲಿ ಟ್ರೈಲರ್ ಕಟ್ಟಿಕೊಟ್ಟಿದ್ದು ಚಿತ್ರದ ಮೇಲೊಂದು ನಿರೀಕ್ಷೆ ಹುಟ್ಟಿಕೊಂಡಿದೆ.


ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತವಿದ್ದು, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಅವರ ಸಂಗೀತ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕೊರಗಜ್ಜನಿಗೆ ಮೂರನೇ ಸಲ ಕ್ಲೈಮ್ಯಾಕ್ಸ್ ಶೂಟ್: ಹಾಲಿವುಡ್ ತಂತ್ರಜ್ಞರ ಗ್ರಾಫಿಕ್ಸ್ ಸ್ಪರ್ಶ

ಚಿತ್ರೀಕರಣ ಮುಗಿಸಿ, ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರಕ್ಕೆ ಮೂರನೆಯ ಬಾರಿಗೆ ಕ್ಲೈಮ್ಯಾಕ್ಸ್ ಚಿತ್ರಿಸಿಕೊಳ್ಳಲಾಗಿದೆ. ಗಗನ‌ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸನ್ನು ಮರು ಚಿತ್ರೀಕರಿಸಿ ಕೊಳ್ಳಲಾಯಿತು.


ಈ ಸಮಯದಲ್ಲಿ ಆಂಟ್ ಮ್ಯಾನ್, ಟ್ರೂ ಸ್ಪಿರಿಟ್, ಅಕ್ವ‌ ಮ್ಯಾನ್ ಮೊದಲಾದ ಹಾಲಿವುಡ್ ಚಿತ್ರಗಳ
VFX ಮತ್ತು ಗ್ರಾಫಿಕ್ಸ್ ತಂತ್ರಜ್ಞರು ಭಾಗಿಯಾಗಿದ್ದರು.
ನಂತರ ಯಲಹಂಕದ ಬಳಿ ಇರುವ ಸ್ಟುಡಿಯೋ 9 ರಲ್ಲಿ ಸತತ ಐದು ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಮೊದಲಾದವರು ಗ್ರೀನ್ ಮ್ಯಾಟ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ನಟಿ ಶ್ರುತಿಯವರು ನಿರ್ವಹಿಸುತ್ತಿರುವ
ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಡ್ತಿ ಯ ದೇವಸ್ಥಾನ ವು ಉಡುಪಿ ಬಳಿ ಇದ್ದು, ಕೊರಗಜ್ಜ ಮತ್ತು ಸಾಕುತಾಯಿ ಬೈಕಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ

ಬಹುಕೋಟಿ ರುಪಾಯಿಗಳನ್ನು ಹೂಡಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ರವರು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ

ಕನ್ನಡ, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿರುವ ಈ ಚಿತ್ರದ ಸಂಕಲನ ಕಾರ್ಯವನ್ನು ಸುರೇಶ್ ಅರಸ್ ಮತ್ತು ವಿದ್ಯಾಧರ್ ಶೆಟ್ಟಿ ಮುಗಿಸಿದ್ದಾರೆ.

ಸಂಗೀತ ಸುಧೀರ್ – ಕೃಷ್ಣ‌ ಅವರದು. ಡಿಓಪಿ ಯಾಗಿ ಪವನ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ.
ಕಬೀರ್ ಬೇಡಿ, ಭವ್ಯ, ಸಂದೀಪ್ ಸೊಪರ್ಕರ್, ನವೀನ್ ಪಡಿಲ್ ಹೀಗೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಮತ್ತೆ ನಿರ್ದೇಶನಕ್ಕೆ ಬಂದ ಮುದ್ದುರಾಜ್: ಎಜುಕೇಟೆಡ್ ಬುಲ್ಸ್ ಸಿನಿಮಾಗೆ ಚಾಲನೆ

“ಜಯಭೇರಿ”, ” ರಣಚಂಡಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ಜಿ.ಕೆ.ಮುದ್ದುರಾಜ್ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದಾರೆ. “ಎಜುಕೇಟೆಡ್ ಬುಲ್ಸ್” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ .ಮುಹೂರ್ತ ನೆರವೇರಿದೆ. ಭಾ.ಮ.ಗಿರೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಡಾ.ವಿ.ನಾಗೇಂದ್ರಪ್ರಸಾದ್ ಕ್ಯಾಮೆರಾ ಚಾಲನೆ ಮಾಡಿದರು‌.

ಒಡೆಯರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜಗದೀಶ್ ಅವರದು. ಬೆಂಗಳೂರು ಒಂದೇ ಹಂತದಲ್ಲಿ ಸುತ್ತಮುತ್ತ ಸುಮಾರು ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

ತನುಷ್, ಯಶಸ್ ಅಭಿ, ರಾಕೇಶ್ ಚಂದ್ರ, ಹರ್ಷಿಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಘವೇಂದ್ರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನ “ಎಜುಕೇಟೆಡ್ ಬುಲ್ಸ್” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರೋಡ್ ಮೇಲೆ ಕಿಂಗ್ ಎಂಟ್ರಿ! ಜೂನ್ 23ಕ್ಕೆ ಬಿಡುಗಡೆ: ಇದು ಹಾಲಿವುಡ್ ನಿರ್ದೇಶಕರ ಚಿತ್ರ

ಕೊರೋನ ನಂತರ ಇಂಟರ್ ನೆಟ್ ಬಳಕೆ ಬಹಳ ಹೆಚ್ಚಾಗಿದೆ. ಈಗ ಹೆಚ್ಚಾಗಿ ಎಲ್ಲಾ ಆನಲೈನ್ ನಲ್ಲೇ ನಡೆಯುತ್ತಿದೆ. ಆದರೆ ಕೊರೋನ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ” ರೋಡ್ ಕಿಂಗ್” ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಈ ಚಿತ್ರ ಇದೇ 23 ರಂದು ಬಿಡುಗಡೆಯಾಗುತ್ತಿದೆ.

ಹಾಲಿವುಡ್ ನ ರಾಂಡಿ ಕೆಂಟ್ ಅವರ ಬಳಿ ಈ ಚಿತ್ರವನ್ನು ನಿರ್ದೇಶನ ಮಾಡಿಸಬೇಕೆಂದುಕೊಂಡು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ವೀಸಾ ಸಮಸ್ಯೆಯಿಂದ ರಾಂಡಿ ಅವರು ಭಾರತಕ್ಕೆ ಬರಲಾಗಲಿಲ್ಲ‌. ಆಗ ಏನು ಮಾಡಬೇಕೆಂದು ಹೊಳೆಯಲಿಲ್ಲ. ಹೀಗೆ ಯೋಚಿಸುತ್ತಿದ್ದಾಗ ಸ್ಕೈಪ್ ಮೂಲಕ ನಿರ್ದೇಶನ ಮಾಡಿಸಿದರೆ ಹೇಗೆ? ಎಂದು ನನ್ನ ಮಿತ್ರ ಭುವನ್ ಬಳಿ ಹೇಳಿದೆ. ಆನಂತರ ಸ್ಕೈಪ್ ಮೂಲಕವೇ ರಾಂಡಿ ಅವರು ಅಮೇರಿಕಾದಿಂದ ಈ ಚಿತ್ರ ನಿರ್ದೇಶನ ಮಾಡಿದರು. ಹಲವು ಕಾರಣಾಂತರದಿಂದ ಚಿತ್ರ ತೆರೆಗೆ ಬರುವುದು ತಡವಾಯಿತು. ಜೂನ್ 23 ಚಿತ್ರ ಬಿಡುಗಡೆಯಾಗಲಿದೆ. ನಾನೇ ಚಿತ್ರಕ್ಕೆ ಕಥೆ ಬರೆದಿದ್ದೇನೆ. ನಾಯಕನಾಗಿಯೂ ನಟಿಸಿದ್ದೇನೆ ಎಂದರು ಮತೀನ್ ಹುಸೇನ್.

ನಾನು ಹಾಲಿವುಡ್ ನಲ್ಲಿ ಹದಿಮೂರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸ್ಕೈಪ್ ಮೂಲಕ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು ನನಗೆ ಖಷಿಯಾಗಿದೆ ಎಂದರು ನಿರ್ದೇಶಕ ರಾಂಡಿ ಕೆಂಟ್.
.
“ರೋಡ್ ಕಿಂಗ್ ” ಚಿತ್ರದ ಕಥೆ ಚೆನ್ನಾಗಿದೆ. ಸದ್ಯದಲ್ಲೇ “ರೋಡ್ ಕಿಂಗ್ 2” ಚಿತ್ರವನ್ನು ಆರಂಭಿಸುವುದಾಗಿ ನಿರ್ಮಾಪಕ ದಿಲೀಪ್ ಕುಮಾರ್ ತಿಳಿಸಿದರು.

ರಾಂಡಿ ಕೆಂಟ್ ಅವರು ನಿರ್ದೇಶನ ಮಾಡಿದ ಪರಿಯನ್ನು ವಿಸ್ತಾರವಾಗಿ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ವಿವರಿಸಿದರು.

ಚಿತ್ರದಲ್ಲಿ ನಟಿಸಿರುವ ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ಹಾಡೊಂದನ್ನು ಹಾಡಿರುವ ಖ್ಯಾತ ಗಾಯಕ ಚಂದನ್ ಶೆಟ್ಟಿ ಸಹ ಚಿತ್ರತಂಡಕ್ಕೆ ಶುಭ ಕೋರಿದರು.
“ರನ್ ಆಂಟೋನಿ” ಖ್ಯಾತಿಯ ರುಕ್ಷಾರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಗಿನ್ನಿಸ್ ದಾಖಲೆಗಾಗಿಯೇ ಬಂದವರು! ದಾಖಲೆ ಆಗುತ್ತಾ? ದೇವರ ಆಟ ಬಲ್ಲವರಾರು??

ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ “ದೇವರ ಆಟ ಬಲವರಾರು” ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ “ಫಿರಂಗಿ ಪುರ” ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ.

ನಾನು ಈ ಹಿಂದೆ “ಫಿರಂಗಿ ಪುರ” ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದೆ. ಈಗ “ದೇವರ ಆಟ ಬಲವರಾರು” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದು 1975 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನಿಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಅಸೆ.

ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ಅಲ್ಲಿನ ವಿಶಾಲವಾದ ಜಾಗದಲ್ಲಿ ಸೆಟ್ ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ದಿನ ಸುಮಾರು 160 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಜೂನ್ 16 ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ. ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ.

ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದರು.

ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು. ಈ ಚಿತ್ರಕ್ಕಾಗಿ ಎರಡು ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿದ್ದೇನೆ. ನೋಡಿದವರು ಕಂಡು ಹಿಡಿಯದಷ್ಟು ಸಣ್ಣ ಆಗಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ಅರ್ಜುನ್ ರಮೇಶ್.

ಮೂರು ವರ್ಷಗಳ ನಂತರ ನಾನು ನಟಿಸುತ್ತಿರುವ ಚಿತ್ರವಿದು. ರಚನ ನನ್ನ ಪಾತ್ರದ ಹೆಸರು. ನಾನು ಈವರೆಗೂ ಮಾಡಿರದ ಪಾತ್ರ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದರು ನಾಯಕಿ ಸಿಂಧು ಲೋಕನಾಥ್.

ಇಂತಹ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಖುಷಿ ನಮ್ಮಗಿದೆ ಎಂದರು ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್.

ಚಿತ್ರದಲ್ಲಿ ನಟಿಸುತ್ತಿರುವ ವರ್ಷ ವಿಶ್ವನಾಥ್, ಅರ್ಜುನ್, ಸಂಪತ್ ರಾಮ್, ಸಂಗೀತ ನಿರ್ದೇಶಕ ಶ್ಯಾನ್ ಎಲ್ ರಾಜ್, ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀಪಾದ್ ಹೆಗಡೆ ಚಿತ್ರದ ಕುರಿತು ಮಾತನಾಡಿದರು.

“ದೇವರ ಆಟ ಬಲವರಾರು” ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೆ ಇರುತ್ತದೆ ಎಂಬ ಅಡಿಬರಹವಿದೆ.

Categories
ಸಿನಿ ಸುದ್ದಿ

ಸೈಡ್ ಎ ಮತ್ತು ಸೈಡ್ ಬಿ ರಿಲೀಸ್ ಡೇಟ್ ಅನೌನ್ಸ್! ಇದು ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸುದ್ದಿ…

ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ A” ಸೆಪ್ಟೆಂಬರ್ 01 ಮತ್ತು ಎರಡನೆಯ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋin – ಸೈಡ್ B” ಅಕ್ಟೋಬರ್ 20ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ.

‘ಕವಲು ದಾರಿ’ ನಂತರ ಹೇಮಂತ್ ರಾವ್ ನಿರ್ದೇಶಿಸಿರುವ ಚಿತ್ರ “ಸಪ್ತ ಸಾಗರದಾಚೆ ಎಲ್ಲೋ”. ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಈಗ ಚಿತ್ರದ ಬಿಡುಗಡೆ ದಿನಾಂಕದ ಘೋಷಣೆಯಾಗಿದೆ. ಇಲ್ಲಿಂದ ಚಿತ್ರದ ಪ್ರಚಾರದ ಕೆಲಸಗಳು ಪ್ರಾರಂಭವಾಗಲಿವೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಪಾತ್ರ ಎರಡು ಶೇಡ್ ಗಳಲ್ಲಿರುತ್ತದೆ. ಎರಡು ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.


ನಟನೆಯ ಜೊತೆಗೆ ರಕ್ಷಿತ್ ಶೆಟ್ಟಿ “ಸಪ್ತ ಸಾಗರದಾಚೆ ಎಲ್ಲೋ” – ಸೈಡ್ A ಮತ್ತು B’ ಚಿತ್ರಗಳನ್ನು ಪರಂವಃ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಹಲಗಿ ಬಾರಿಸಿದ ಪಾಟೀಲ್ ಅಂಡ್ ಟೀಮ್! ಗರಡಿ ಚಿತ್ರದ ಹೊಡಿರಲೆ ಹಲಗಿ ಹಾಡು ರಿಲೀಸ್

ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಮೊದಲ ಹಾಡು “ಹೊಡಿರೆಲೆ ಹಲಗಿ” ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.

ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ “ಗರಡಿ” ಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. “ಗರಡಿ” ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ.
ಈ “ಗರಡಿ” ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಅವರು ಕಾಣಿಸಿಕೊಂಡಿದ್ದಾರೆ‌. ಆ ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ.

ಇನ್ನೂ ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ “ಹಲಗಿ” ಹೊಡಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ. ಮೇಘನಾ ಹಳಿಯಾಳ್ ಅದ್ಭುತವಾಗಿ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದರು.

“ಗರಡಿ” ಚಿತ್ರ ಆರಂಭವಾದ ಬಗ್ಗೆ ತಿಳಿಸಿದ ಬಿ.ಸಿ.ಪಾಟೀಲ್ ಅವರು, ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಈಗ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ “ಕೌಸಲ್ಯ ಸುಪ್ರಜಾ ರಾಮ” ನಿರ್ಮಿಸುತ್ತಿದ್ದೇವೆ‌. ಉತ್ತಮ ಕಥೆ ತರುವ ಯುವ ನಿರ್ದೇಶಕರಿಗೂ ನಮ್ಮ ಸಂಸ್ಥೆಯಿಂದ ಅವಕಾಶ ನೀಡಲಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಆ ಸ್ಪರ್ಧೆಗೆ ಬಿ.ಸಿ.ಪಾಟೀಲ್ ಸರ್ ಜಡ್ಜ್ ಆಗಿ ಆಗಮಿಸಿದ್ದರು. ಮುಂದೆ ಒಳ್ಳೆಯ ನಟಿ ಆಗುತ್ತೀಯಾ ಎಂದು ಆಶೀರ್ವದಿಸಿದರು. ಇಂದು ಅವರ ನಿರ್ಮಾಣದ ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ನೃತ್ಯ ಎಂದರೆ ಇಷ್ಟ. ಇನ್ನು ಭಟ್ಟರು ಬರೆದಿರುವ ಈ “ಹಲಗಿ” ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತಷ್ಟು ಖುಷಿಯಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.

ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ರಾಘವೇಂದ್ರ, ಧರ್ಮಣ್ಣ, ನಿರ್ಮಾಪಕರಾದ ವನಜಾ ಪಾಟೀಲ್ “ಗರಡಿ” ಕುರಿತು ಮಾತನಾಡಿದರು.

error: Content is protected !!