90 ಬಿಡಿ ಮನೀಗ್ ನಡಿ: ಇದು ಬಿರಾದರ್ ನಟನೆಯ 500ನೇ ಚಿತ್ರ- ತೆರೆಗೆ ರೆಡಿ

ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಅಭಿನಯದ 500ನೇ ಚಿತ್ರ “90 ಬಿಡಿ ಮನೀಗ್ ನಡಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಮೊದಲು ನಮ್ಮ ಚಿತ್ರದ ಟೈಟಲ್ “90 ಹೊಡಿ ಮನೀಗ್ ನಡಿ” ಎಂದು ಇಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಟೈಟಲ್ ಗೆ ಒಪ್ಪಲಿಲ್ಲ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನು “90 ಬಿಡಿ ಮನೀಗ್ ನಡಿ” ಎಂದು ಬದಲಿಸಲಾಯಿತು. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನ ಗೆದ್ದಿದೆ.‌ ರಾಷ್ಟ್ರಪ್ರಶಸ್ತಿ ವಿಜೇತ ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ‌ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ತಿಂಗಳ ಕೊನೆಗೆ ಅಥಾವಾ ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ತಿಳಿಸಿದರು.

ನನ್ನ ರಂಗಭೂಮಿ ಹಾಗೂ ಸಿನಿಪಯಣಕ್ಕೆ 50 ವರ್ಷ ತುಂಬಿದೆ. ಇದು ನನ್ನ 500ನೇ ಚಿತ್ರ. ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ‌ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ ಎಂದರು ನಟ ಬಿರಾದಾರ್.

ಬ್ಯಾಂಕ್ ಉದ್ಯೋಗಿಯ ಪಾತ್ರ ನನ್ನದು ಎಂದು ಕರಿಸುಬ್ಬು ಹೇಳಿದರು. ಅಭಯ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಪ್ರೀತು ಪೂಜಾ‌, ನೀತಾ, ಆರ್ ಡಿ ಬಾಬು, ವಿವೇಕ್, ಹೊಸಕೋಟೆ ಮುರುಳಿ ಮುಂತಾದವರು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಬಿರಾದಾರ್ ಜೊತೆ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ “90 ಬಿಡಿ ಮನೀಗ್ ನಡಿ” ಚಿತ್ರಕ್ಕೆ “ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ” ಎಂಬ ಪಾನಪ್ರೀಯರ ಜನಪ್ರಿಯ ಸ್ಲೋಗನ್ ಇಡಲಾಗಿದ್ದು, ಚಿತ್ರ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಕಾಮಿಡಿ, ಕ್ರೈಮ್ ಥ್ರಿಲ್ಲರ್ ರೂಪದಲ್ಲಿ ಟ್ರೈಲರ್ ಕಟ್ಟಿಕೊಟ್ಟಿದ್ದು ಚಿತ್ರದ ಮೇಲೊಂದು ನಿರೀಕ್ಷೆ ಹುಟ್ಟಿಕೊಂಡಿದೆ.


ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತವಿದ್ದು, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಅವರ ಸಂಗೀತ ನಿರ್ದೇಶನವಿದೆ.

Related Posts

error: Content is protected !!