ಗಿನ್ನಿಸ್ ದಾಖಲೆಗಾಗಿಯೇ ಬಂದವರು! ದಾಖಲೆ ಆಗುತ್ತಾ? ದೇವರ ಆಟ ಬಲ್ಲವರಾರು??

ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ “ದೇವರ ಆಟ ಬಲವರಾರು” ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ “ಫಿರಂಗಿ ಪುರ” ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ.

ನಾನು ಈ ಹಿಂದೆ “ಫಿರಂಗಿ ಪುರ” ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದೆ. ಈಗ “ದೇವರ ಆಟ ಬಲವರಾರು” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದು 1975 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನಿಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಅಸೆ.

ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ಅಲ್ಲಿನ ವಿಶಾಲವಾದ ಜಾಗದಲ್ಲಿ ಸೆಟ್ ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ದಿನ ಸುಮಾರು 160 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಜೂನ್ 16 ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ. ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ.

ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದರು.

ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು. ಈ ಚಿತ್ರಕ್ಕಾಗಿ ಎರಡು ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿದ್ದೇನೆ. ನೋಡಿದವರು ಕಂಡು ಹಿಡಿಯದಷ್ಟು ಸಣ್ಣ ಆಗಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ಅರ್ಜುನ್ ರಮೇಶ್.

ಮೂರು ವರ್ಷಗಳ ನಂತರ ನಾನು ನಟಿಸುತ್ತಿರುವ ಚಿತ್ರವಿದು. ರಚನ ನನ್ನ ಪಾತ್ರದ ಹೆಸರು. ನಾನು ಈವರೆಗೂ ಮಾಡಿರದ ಪಾತ್ರ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದರು ನಾಯಕಿ ಸಿಂಧು ಲೋಕನಾಥ್.

ಇಂತಹ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಖುಷಿ ನಮ್ಮಗಿದೆ ಎಂದರು ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್.

ಚಿತ್ರದಲ್ಲಿ ನಟಿಸುತ್ತಿರುವ ವರ್ಷ ವಿಶ್ವನಾಥ್, ಅರ್ಜುನ್, ಸಂಪತ್ ರಾಮ್, ಸಂಗೀತ ನಿರ್ದೇಶಕ ಶ್ಯಾನ್ ಎಲ್ ರಾಜ್, ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀಪಾದ್ ಹೆಗಡೆ ಚಿತ್ರದ ಕುರಿತು ಮಾತನಾಡಿದರು.

“ದೇವರ ಆಟ ಬಲವರಾರು” ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೆ ಇರುತ್ತದೆ ಎಂಬ ಅಡಿಬರಹವಿದೆ.

Related Posts

error: Content is protected !!