ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಮೊದಲ ಹಾಡು “ಹೊಡಿರೆಲೆ ಹಲಗಿ” ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.
ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ “ಗರಡಿ” ಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. “ಗರಡಿ” ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ.
ಈ “ಗರಡಿ” ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಅವರು ಕಾಣಿಸಿಕೊಂಡಿದ್ದಾರೆ. ಆ ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ.
![](https://cinilahari.in/wp-content/uploads/2023/06/IMG_20230616_145241.jpg)
ಇನ್ನೂ ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ “ಹಲಗಿ” ಹೊಡಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ. ಮೇಘನಾ ಹಳಿಯಾಳ್ ಅದ್ಭುತವಾಗಿ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದರು.
![](https://cinilahari.in/wp-content/uploads/2023/06/IMG_20230616_145241-1.jpg)
“ಗರಡಿ” ಚಿತ್ರ ಆರಂಭವಾದ ಬಗ್ಗೆ ತಿಳಿಸಿದ ಬಿ.ಸಿ.ಪಾಟೀಲ್ ಅವರು, ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಈಗ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ “ಕೌಸಲ್ಯ ಸುಪ್ರಜಾ ರಾಮ” ನಿರ್ಮಿಸುತ್ತಿದ್ದೇವೆ. ಉತ್ತಮ ಕಥೆ ತರುವ ಯುವ ನಿರ್ದೇಶಕರಿಗೂ ನಮ್ಮ ಸಂಸ್ಥೆಯಿಂದ ಅವಕಾಶ ನೀಡಲಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
![](https://cinilahari.in/wp-content/uploads/2023/06/IMG_20230616_145206-1024x424.jpg)
ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಆ ಸ್ಪರ್ಧೆಗೆ ಬಿ.ಸಿ.ಪಾಟೀಲ್ ಸರ್ ಜಡ್ಜ್ ಆಗಿ ಆಗಮಿಸಿದ್ದರು. ಮುಂದೆ ಒಳ್ಳೆಯ ನಟಿ ಆಗುತ್ತೀಯಾ ಎಂದು ಆಶೀರ್ವದಿಸಿದರು. ಇಂದು ಅವರ ನಿರ್ಮಾಣದ ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ನೃತ್ಯ ಎಂದರೆ ಇಷ್ಟ. ಇನ್ನು ಭಟ್ಟರು ಬರೆದಿರುವ ಈ “ಹಲಗಿ” ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತಷ್ಟು ಖುಷಿಯಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.
![](https://cinilahari.in/wp-content/uploads/2023/06/IMG_20230616_145220-1024x532.jpg)
ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ರಾಘವೇಂದ್ರ, ಧರ್ಮಣ್ಣ, ನಿರ್ಮಾಪಕರಾದ ವನಜಾ ಪಾಟೀಲ್ “ಗರಡಿ” ಕುರಿತು ಮಾತನಾಡಿದರು.