ಸೂಪರ್‌ಸ್ಟಾಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ‘ಜೈಲರ್’ ಚಿತ್ರ ಆಗಸ್ಟ್ 10 ರಂದು ತೆರೆ ಕಾಣುತ್ತಿದೆ. ಈ ಕಾರಣದಿಂದಲೇ ಆಗಸ್ಟ್ 11ರಂದು ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯ ಅನೌನ್ಸ್ ಮಾಡಿರಲಿಲ್ಲ. ಆದರೆ, ಈಗ ಕನ್ನಡ ಚಿತ್ರವೊಂದು ಜೈಲರ್ ಮುಂದೆ ಬರಲು ರೆಡಿಯಾಗಿದೆ. ಅದು ‘ತೋತಾಪುರಿ-2’ ಚಿತ್ರ. ಹೌದು ಜಗ್ಗೇಶ್-ಧನಂಜಯ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ಆಗಸ್ಟ್‌ನಲ್ಲಿ ತೆರೆಕಾಣುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಆಗಸ್ಟ್ 11ರಂದು ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆೆ ಮಾತನಾಡುವ ನಿರ್ಮಾಪಕ ಸುರೇಶ್, ‘ನಾವು ಆಗಸ್ಟ್ ಎರಡನೇ ವಾರ ಬರಲು ತಯಾರಿ ಮಾಡಿಕೊಳ್ಳುತ್ತಿರುವುದು ನಿಜ’ ಎನ್ನುತ್ತಾರೆ.
‘ತೋತಾಪುರಿ-2’ನಲ್ಲಿ ಜಗ್ಗೇಶ್ ಜೊತೆಗೆ ಧನಂಜಯ್ ಅವರಿಗೂ ಪ್ರಮುಖ ಪಾತ್ರವಿದೆ. ಇಲ್ಲಿ ಸುಮನ್ ರಂಗನಾಥ್ ಕೂಡಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾಾರೆ. ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್ ಹಾಡು ಸೂಪರ್ ಹಿಟ್ ಆಗಿತ್ತು. ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಲಕ್ಷಾಂತರ ಹಿಟ್ಸ್ ದಾಖಲಾಗಿತ್ತು. ಇದೀಗ ‘ತೋತಾಪುರಿ-2 ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲೆೆಡೆ ಸದ್ದು ಮಾಡುತ್ತಿಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿಿರೋದು ವಿಶೇಷ.
ಹೃದಯಶಿವ ಸಾಹಿತ್ಯ ರಚಿಸಿರುವ ‘ಮೊದಲ ಮಳೆ ಮನದೊಳಗೆ… ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡುತ್ತಿದೆ. ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್ ಹೆಗ್ಡೆೆ ಕಂಠಸಿರಿಯಲ್ಲಿ ‘ಮಳೆ ಹಾಡು ಮೂಡಿಬಂದಿದೆ.ಈ ಮೆಲೋಡಿ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಹಿಳಾ ಪ್ರಧಾನ ಈ ಚಿತ್ರದ ಮೂಲಕ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾಗೆ ಫೀನಿಕ್ಸ್ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರು. ನಿಮಿಕ ರತ್ನಾಕರ್ ಕೂಡ ಇಲ್ಲಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವವರು ನಿರ್ದೇಶಕ ಓಂಪ್ರಕಾಶ್ ರಾವ್. ಇತ್ತೀಚಿಗೆ ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರಗಳು ಯಾವುದು ಬಂದಿಲ್ಲ ಎಂಬ ಮಾತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಪ್ರಸ್ತುತ ಅವರು ನಿರ್ದೇಶಿಸುತ್ತಿರುವ “ಫೀನಿಕ್ಸ್” ಎಂಬ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭವಾಗಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
“ಫೀನಿಕ್ಸ್” ನನ್ನ ನಿರ್ದೇಶನದ 49 ನೇ ಚಿತ್ರ. ನಮ್ಮ ಸಂಸ್ಥೆಯ ನಿರ್ಮಾಣದ 4ನೇ ಚಿತ್ರ. ಇದೊಂದು ಮಹಿಳಾ ಪ್ರಾಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಹಾಗೂ ಕೃತಿಕಾ ಲೋಬೊ ಮೂವರು ನಾಯಕಿಯರಾಗಿ, ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರದೀಪ್ ರಾವತ್ ಮುಖ್ಯ ಖಳನಟನಾಗಿ ನಟುಸುತ್ತಿದ್ದಾರೆ. ಸ್ವಸ್ತಿಕ್ ಶಂಕರ್, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಜರ್ಮನ್ ಹಾಗೂ ಆಸ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.
ಸುಬ್ರಹ್ಮಣಿ ಅವರು ಬರೆದಿರುವ ಕಥೆಗೆ ನಿರ್ದೇಶಕರೆ ಚಿತ್ರಕಥೆ ಬರೆದಿದ್ದಾರೆ. ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ವಿಜಯನ್ ಅವರ ಸಾಹಸ ನಿರ್ದೇಶನವಿದೆ.
ವ ಈ “ಫೀನಿಕ್ಸ್” ಚಿತ್ರಕ್ಕೆ ಎಂ.ಎಸ್ ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚಿಗೆ ಓಂಪ್ರಕಾಶ್ ರಾವ್ ಅವರ ಹುಟ್ಟುಹಬ್ಬದಂದು ಈ ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಶಾನ್ವಿ ಶ್ರೀವಾತ್ಸವ್ ಹಾಗೂ ರಘು ದೀಕ್ಷಿತ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಬ್ಯಾಂಗ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ನಟ ದತ್ತಣ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರಾಪರ್ ALL Ok ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಬ್ಯಾಂಗ್” ಡಾರ್ಕ್ ಕಾಮಿಡಿ ಆಕ್ಷನ್ ಜಾನರ್ ನ ಚಿತ್ರ ಎಂದು ಮಾತು ಆರಂಭಿಸಿದ್ದ ನಿರ್ದೇಶಕ ಗಣೇಶ್ ಪರಶುರಾಮ್, ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ. ಟ್ರೇಲರ್ ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಸುದೀಪ್ ಅವರಿಗೆ ವಿಶೇಷ ಧನ್ಯವಾದ. ನಮ್ಮ ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.
ನನ್ನದು “ಬ್ಯಾಂಗ್” ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ. ಈತನಕ ಯಾವ ಚಿತ್ರದಲ್ಲೂ ಮಾಡಿರದ ಪಾತ್ರ. ನಿರ್ದೇಶಕ ಗಣೇಶ್ ಒಳ್ಳೆಯ ಕಥೆ ಮಾಡಿದ್ದಾರೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದು ನಾಯಕಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು.
ನಿರ್ದೇಶಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ರಿತ್ವಿಕ್ ನನ್ನನ್ನು ಭೇಟಿಯಾಗಲು ಬಂದಾಗ ನಾನು ಹಾಡು ಹಾಡಲು ಕೇಳಿರುವುದಕ್ಕೆ ಬಂದಿದ್ದಾರೆ ಅಂದುಕೊಂಡೆ. ಆದರೆ ಅವರು ನೀವು ಈ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು.
ನಾನು ಮೊದಲು ಒಪ್ಪಲಿಲ್ಲ. ಅವರು ನನ್ನ ಬಿಡಲಿಲ್ಲ. ಕೊನೆಗೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಶಾನ್ವಿ ಅವರ ತಂದೆಯ ಪಾತ್ರ ನನ್ನದು. ಚಿತ್ರ ಬಿಡುಗಡೆ ಕಾತುರದಿಂದ ಕಾಯುತ್ತಿರುವುದಾಗಿ ರಘು ದೀಕ್ಷಿತ್ ಹೇಳಿದರು.
ನಿರ್ಮಾಪಕಿ ಪೂಜಾ ವಸಂತ ಕುಮಾರ್, ಸಂಗೀತ ನಿರ್ದೇಶಕ ಹಾಗೂ ನಟ ರಿತ್ವಿಕ್ ಮುರಳಿಧರ್, ಛಾಯಾಗ್ರಹಕ ಉದಯ್ ಲೀಲಾ, ಸಂಕಲನಕಾರ ವಿಜೇತ್ ಚಂದ್ರ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು “ಬ್ಯಾಂಗ್” ಚಿತ್ರದ ಕುರಿತು ಮಾತನಾಡಿದರು.
“ಗುಲ್ಟು”, ” ಹೊಂದಿಸಿ ಬರೆಯಿರಿ”, “ಹೊಯ್ಸಳ” ಚಿತ್ರಗಳ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಶಂಕರ್ ಅಭಿನಯದ “ಕ್ಷೇತ್ರಪತಿ” ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ.
“ಬಸವ” ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಳ್ಳುತ್ತಿದ್ದು, ಭೂಮಿಕಾ ಎಂಬ ಹೆಸರಿನಿಂದ ಹೊಸ ತಲೆಮಾರಿನ ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ. ರೈತರ ಹೋರಾಟಕ್ಕೆ ಮಹಿಳಾ ಆಯಾಮ (women perspective) ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ. ಈ ಹಿಂದೆ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ಮೋಡಿ ಮಾಡಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಜೋಡಿ “ಕ್ಷೇತ್ರಪತಿ” ಚಿತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ “ಕ್ಷೇತ್ರಪತಿ” ಚಿತ್ರದ ಟೀಸರ್ ನೋಡುಗರ ಮನ ಗೆದ್ದಿದೆ.
ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಕ್ಷೇತ್ರಪತಿ” ಚಿತ್ರ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದ್ದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್ ಬದಲಿಸಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪುರಿ ಕನೆಕ್ಟ್ಸ್ ಬ್ಯಾನರ್ ನಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾ ಅಂಗಳಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಎಂಟ್ರಿಯಾಗಿದೆ.
ಬಿಗ್ ಬುಲ್ ಪಾತ್ರದಲ್ಲಿ ಸಂಜಯ್ ದತ್
ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಇತ್ತೀಚೆಗೆ ಸೌತ್ ಸಿನಿಮಾಗಳದತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿಎಫ್ ಬಳಿಕ ಬ್ಯಾಕ್ ಟು ಬ್ಯಾಕ್ ದಕ್ಷಿಣ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜುಬಾಬಾ ಈಗ ‘ಡಬಲ್ ಇಸ್ಮಾರ್ಟ್’ ಭಾಗವಾಗಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದೆ ಶುಭ ಕೋರಿದೆ. ಗಡ್ಡ ಬಿಟ್ಟು ಬಿಟ್ಟು ಸ್ಟೈಲೀಶ್ ಲುಕ್ ನಲ್ಲಿ ಸಿಗಾರ್ ಸೇದುತ್ತಾ ರಗಡ್ ಆಗಿ ಮುನ್ನಭಾಯಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೆ ಬಿಗ್ ಬುಲ್ ಎಂದು ಹೆಸರಿಡಲಾಗಿದೆ. ಸಂಜಯ್ ದತ್ ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಲು ನಿರ್ದೇಶಕ ಪುರಿ ಜಗನ್ನಾಥ್ ಪ್ಲಾನ್ ಮಾಡಿಕೊಂಡಿದ್ದಾರೆ.
ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾಗೆ ಹಾಲಿವುಡ್ ಗಿಯಾನಿ ಜಿಯಾನೆಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಹಿಂದೆ “ಸಂಕಷ್ಟಕರ ಗಣಪತಿ”, ಪಿ ಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಜನರಿಗೆ ಹತ್ತಿರವಾಗಿದ್ದ ನಾಯಕನಟ ಲಿಖಿತ್ ಶೆಟ್ಟಿ ‘ಫುಲ್ ಮೀಲ್ಸ್’ ಮೂಲಕ ನಟನೆಯೊಂದಿಗೆ ಪರಿಪೂರ್ಣ ನಿರ್ಮಾಪಕರೂ ಆಗಿದ್ದಾರೆ.
ಖುಷಿ ರವಿ, ತೇಜಸ್ವಿನಿ ಶರ್ಮ ನಾಯಯಕಿರರಾಗಿದ್ದು, ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್,. ಚಂದ್ರ ಕಲಾ ಮೋಹನ್, ರಾಜೇಶ್ ನಟರಂಗ, ರವಿ ಶಂಕರ ಗೌಡ, ಸುಜಯ್ ಶಾಸ್ತ್ರಿ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ ಇದ್ದಾರೆ.
ಎನ್ ವಿನಾಯಕ ನಿರ್ದೇಶನದ ಈ ಚಿತ್ರಕ್ಕೆ, ಮನೋಹರ್ ಜೋಷಿ ಛಾಯಾಗ್ರಹಣವಿದೆ. ಹರೀಶ ರಾಜಣ್ಣ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ, ಗುರು ಕಿರಣ್ ಸಂಗೀತ ಫುಲ್ ಮೀಲ್ಸ್ ಚಿತ್ರಕ್ಕಿದೆ.
ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಶೀಲ” ಚಿತ್ರ ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿದೆ. ”ಶೀಲ” ಚಿತ್ರದ(ಕನ್ನಡ) ಟ್ರೇಲರ್ ಅನ್ನು ನಟಿ ಪ್ರಿಯಾಂಕ ಉಪೇಂದ್ರ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, ಟ್ರೇಲರ್ ತುಂಬಾ ಚೆನ್ನಾಗಿದೆ. ರಾಗಿಣಿ ಅವರ ಅಭಿನಯ ಕೂಡ ಅದ್ಭುತವಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
“ಶೀಲ” ಮಹಿಳಾ ಪ್ರಧಾನ ಚಿತ್ರ. ಪ್ರಸ್ತುತ ಹೆಣ್ಣು ಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಆಗಸ್ಟ್ 4 ರಂದು “ಶೀಲ” ಚಿತ್ರ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ. ಎಲ್ಲರೂ ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಾಯಕಿ ರಾಗಿಣಿ ದ್ವಿವೇದಿ.
ನಿರ್ಮಾಪಕ ಡಿ.ಎಂ.ಪಿಳ್ಳೈ ಸಹ “ಶೀಲ” ಚಿತ್ರದ ಕುರಿತು ಮಾತನಾಡಿದರು.
ಚಿತ್ರ : ಆಚಾರ್ ಅಂಡ್ ಕೋ ನಿರ್ದೇಶನ : ಸಿಂಧು ಶ್ರೀನಿವಾಸಮೂರ್ತಿ ನಿರ್ಮಾಣ : ಪಿ ಆರ್ ಕೆ ಪ್ರೊಡಕ್ಷನ್ಸ್ ತಾರಾಗಣ: ಅಶೋಕ್, ಸುಧಾ ಬೆಳವಾಡಿ, ಸಿಂಧು ಇತರರು
‘ಕೆಲ ಸಂಬಂಧಗಳು ಹೊಡಕೊಂಡ್ರೆ ನೆಮ್ಮದಿ, ಕೆಲ ಸಂಬಂಧಗಳು ಉಳಕೊಂಡ್ರೆ ನೆಮ್ಮದಿ’ ಈ ಡೈಲಾಗ್ ನೊಡುಗರ ಕಿವಿಗೆ ಬೀಳುವ ಹೊತ್ತಿಗೆ ತೆರೆ ಮೇಲೊಂದು ಚಂದದ ಕಥೆ ಸರಾಗವಾಗಿ ಹರಿದಾಡಿರುತ್ತೆ. ಅಲ್ಲಿ ಯಾವುದೇ ಡಿಶುಂ ಡಿಶುಂ ಇಲ್ಲ. ಮರ ಸುತ್ತೋ ಹಾಡುಗಳಿಲ್ಲ. ಆದರೂ, ಅತ್ತಿತ್ತ ನೋಡದಂತೆ ಸುಮ್ಮನೆ ಎರಡು ತಾಸು ಕುಲಿತು ಆ ಮನೆಯ ‘ಆಚಾರ’ ವಿಚಾರ ತಿಳ್ಕೊಂಡು, ನೋಡ್ಕೊಂಡು ಹಾಗೊಂದು ನಗೆ ಬೀರಿ ಹೊರಬರಬೇಕಷ್ಟೆ.
ಇದು ಈ ವಾರ ತೆರೆಗೆ ಅಪ್ಪಳಿಸಿರುವ ‘ ಆಚಾರ್ ಅಂಡ್ ಕೋ’ ಚಿತ್ರದೊಳಗಿನ ರುಚಿಯಾದ ಹೂರಣ. ಹಾಗಾಗಿ ಯಾವುದೇ ಅನುಮಾನಗಳಿಲ್ಲದೆ, ಒಂದೊಳ್ಳೆ ಕಥಾಹಂದರಲ್ಲಿ ಅರಳಿರೋ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.
ಇಲ್ಲಿ ತೆರೆ ಮೇಲೆ ಕಾಣಿಸಿಕೊಂಡಿರುವ ಬಹುತೇಕರು ಹೊಸಬರು. ತೆರೆ ಹಿಂದೆ ಕೂಡ ಹೊಸಬರದ್ದೇ ಬುದ್ಧಿ ಚಳಕವಿದೆ. ಕಥೆಯಲ್ಲಿ ಗಟ್ಟಿತನವಿದೆ, ಚಿತ್ರಕಥೆಯಲ್ಲಿ ಚುರುಕುತನವಿದೆ, ನಿರೂಪಣೆಯಲ್ಲಿ ಸ್ಪಷ್ಟತೆ ಇದೆ. ಕುಟುಂಬ ಸಮೇತ ನೋಡಬಹುದಾದ ಪರಿ ಶುದ್ಧ ಚಿತ್ರವಿದು.
ಕೆಲ ಸಿನಿಮಾಗಳು ಇಷ್ಟ ಆಗೋದೆ ಕಂಟೆಂಟ್ ಮೂಲಕ. ಅದು ಇಲ್ಲಿದೆ. ಅದರಲ್ಲೂ ಮನಸ್ಸಿಗೆ ನಾಟುವ, ಕಾಡುವ, ನೆನಪಿಸುವ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸೇರುತ್ತೆ. ಕಥೆ ತೀರಾ ಸಿಂಪಲ್. ಹೇಳುವ ಮತ್ತು ತೋರಿಸುವ ವಿಧಾನ ವಿಭಿನ್ನವಾಗಿದೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ನೋಡುಗನಿಗೆ ಎಲ್ಲೂ ಬೇಸರಿಸದ ವಿಚಾರಗಳು, ದೃಶ್ಯಗಳು ಇಲ್ಲಿವೆ. ಹಿಂದೆಲ್ಲಾ ಕೂಡು ಕುಟುಂಬ ಹೇಗಿತ್ತು, ಹೆಂಗೆಲ್ಲಾ ಸಮಸ್ಯೆ ಎದುರಾಗುತ್ತಿದ್ದವು ಎಂಬುದು ಸಿನಿಮಾದ ಎಳೆ. ಒಂದು ನೀಟ್ ಸಿನಿಮಾಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಆ ಕಾರಣಕ್ಕೆ ಹೊಸಬರ ಪ್ರಯತ್ನ ಸಾರ್ಥಕವೆನಿಸಿದೆ.
ಮೊದಲರ್ಧ ಕೆಲವು ಸಿದ್ಧಾಂತಗಳೊಂದಿಗೆ ಅಲ್ಲಲ್ಲಿ ಹಾಸ್ಯಮಯವಾಗಿ ಸಾಗುವ ಸಿನಿಮಾ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತಷ್ಟು ಕುತೂಹಲ ಹಾಗು ಉತ್ಸಾಹದಲ್ಲೇ ನೋಡುಗನಲ್ಲಿ ಮಂದಹಾಸ ಬೀರುತ್ತೆ. ಇಲ್ಲೂ ಪಾತ್ರಗಳಿಗೆ ಬೆಟ್ಟದಷ್ಟು ಆಸೆಗಳಿವೆ, ಪುಟ್ಟಿಯಷ್ಟು ಕನಸುಗಳಿವೆ, ಖುಷಿ ಇದೆ, ದುಃಖ ವಿದೆ, ನೋವಿದೆ, ನಲಿವಿದೆ, ಜವಾಬ್ದಾರಿತನವಿದೆ, ಸೋಮಾರಿತನವೂ ಇದೆ, ಶಿಸ್ತು, ಸಂಯಮ ಎಲ್ಲವೂ ಮೇಳೈಸಿದೆ. ಮೊದಲೇ ಹೇಳಿದಂತೆ ಈ ಸಿನಿಮಾ ಹಳೆ ಕಾಲದ ದಿನಗಳನ್ನು ಮೆಲುಕು ಹಾಕಿಸುವುದು ದಿಟ.
ಅಂದಹಾಗೆ, ಇದು 60 ರ ದಶಕದ ಆಸುಪಾಸಲ್ಲಿ ನಡೆಯೋ ಕಥೆ. ಆಗ ಕೂಡು ಕುಟುಂಬ ಹೇಗಿತ್ತು. ಜೀವನ ಶೈಲಿ, ಊಟ, ಉಡುಗೆ ತೊಡುಗೆ, ಆಚಾರ, ವಿಚಾರ, ನಡೆ, ನುಡಿ ಇತ್ಯಾದಿ ಹೇಗಿತ್ತು ಎಂಬುದನ್ನು ಇಲ್ಲಿ ಕಾಣಬಹುದು. ಹಾಗೆ ಹೇಳುವುದಾದರೆ ನಿರ್ದೇಶಕರು ಆಗಿನ ಕಾಲಕ್ಕೆ ಕರೆದೊಯ್ಯುವಲ್ಲಿ ಯಶಸ್ವಿ.
ಕಥೆ ಏನು?
ಇದು 60 ರ ದಶಕದ ಕಥೆ. ಮಧುಸೂದನ್ ಆಚಾರ್ ಮತ್ತು ಸಾವಿತ್ರಿ ದಂಪತಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಹತ್ತು ಮಕ್ಕಳು! ಅದೊಂದು ಕೂಡು ಕುಟುಂಬ. ಅಪ್ಪ ಪಿಡಬ್ಲ್ಯುಡಿ ಎಂಜಿನಿಯರ್. ಕೈ ತುಂಬ ಸಂಬಳ ಬಂದರೂ, ಮನೆ ನಿಭಾಯಿಸೋದು, ಮಕ್ಕಳನ್ನು ಸಲಹುವುದು ತುಸು ಕಷ್ಟ. ಅದರೂ ಸಿದ್ಧಾಂತಗಳಿಗೆ ಬದ್ಧನಾದ ಮಧುಸೂದನ್ ಆಚಾರ್, ತನ್ನ ಮಕ್ಕಳು ತನ್ನಂತೆ ಎಂಜಿನಿಯರ್ ಆಗಬೇಕೆಂಬ ಆಸೆ. ಮಕ್ಕಳಿಗೆ ಅದು ಇಷ್ಟವಿಲ್ಲ. ಹತ್ತು ಜನ ಮಕ್ಕಳದ್ದು ಒಂದೊಂದು ಕಥೆ ಮತ್ತು ವ್ಯಥೆ. ತಕ್ಕಮಟ್ಟಿಗೆ ಓದಿ ಅಪ್ಪನಿಗೆ ಇಷ್ಟವಿಲ್ಲದ ಕೆಲಸಮಾಡುವ ಗಂಡು ಮಕ್ಕಳು ಒಂದು ಕಡೆ, ಹೇಗೋ ತಿಳಿದದ್ದು ಓದಿ ಮದ್ವೆಯಾಗಿ ಹೋದರೆ ಸಾಕು ಅಂತ ಇರೋ ಹೆಣ್ಮಕ್ಕಳು ಇನ್ನೊಂದೆಡೆ.
ಈ ನಡುವೆ, ಮಧುಸೂದನ್ ಆಚಾರ್ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ಆ ಕುಟುಂಬ ಮೆಲ್ಲನೆಸಂಕಷ್ಟಕ್ಕೆ ಸಿಲುಕುತ್ತೆ. ಮನೆ ಜವಾಬ್ದಾರಿ ಹಿರಿ ಮಗನಿಗೆ ಬರುತ್ತೆ. ಆದರೆ, ಅದರಮದ ತಪ್ಪಿಸಿಕೊಳ್ಳುವ ಹಿರಿ ಮಗ, ಆ ಮನೆ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕುತ್ತಾನೆ. ಹೇಗೋ ಬಂಡಿ ಎಳೆಯಲು ಮುಂದಾಗುವ ಎರಡನೇ ಮಗ ಕೂಡ ಅಪಘಾತತಕ್ಕೀಡಾಗುತ್ತಾನೆ. ಇದರಿಂದ ಅಕ್ಷರಶಃ ಆಚಾರ್ ಕುಟುಂಬ ನಲುಗುತ್ತೆ. ಈ ಮಧ್ಯೆ ಹಿರಿಯ ಮಗಳು ಓದಿಲ್ಲದಿದ್ದರೂ ತನಗೆ ಲಂಡನ್ ವಾಸವಾಗಿರೋ ಗಂಡನೇ ಬೇಕು ಅನ್ನೋ ಹಠ. ಈ ನಡುವೆ ಉಳಿದವರ ಮದ್ವೆ ಆಗುತ್ತಾ? ಆಚಾರ್ ಕುಟುಂಬದ ಸದಸ್ಯರು ಬದುಕು ಹೇಗೆ ಕಟ್ಟಿಕೊಳ್ತಾರೆ, ಅವರ ಆಸೆ ಕನಸು ಈಡೇರುತ್ತಾ ಅನ್ನೋದೆ ಮಜವಾದ ಕಥೆ.
ಯಾರು ಹೇಗೆ?
ಹಿರಿಯ ನಟ ಅಶೋಕ್ ಅವರು ಅಪ್ಪನಾಗಿ ಆಪ್ತವಾಗಿದ್ದಾರೆ. ಅವರು ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಅಮ್ಮನಾಗಿ ಸುಧಾ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಹಿರಿಯ ಮಗಳಾಗಿ ಕಾಣಿಸಿಕೊಂಡಿರುವ ಸಿಂಧು ಸಿನಿಮಾದ ಹೈಲೆಟ್. ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಪರದೆ ಮೇಲೆ ಕಾಣುವ ಪ್ರತಿ ಪಾತ್ರವೂ ಮನಸ್ಸಲ್ಲುಳಿಯುತ್ತೆ
ಬಿಂದು ಮಾಲಿನಿ ಅವರ ಸಂಗೀತದ ಎರಡು ಹಾಡು ಚೆನ್ನಾಗಿವೆ. ಹಿನ್ನೆಲೆ ಸಂಗೀತವೂ ಕಥೆಗೆ ಪೂರಕವಾಗಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಆಗಿನ ಕಾಲವನ್ನು ಸಾಕ್ಷೀಕರಿಸಿದೆ. ಆಶಿಕ್ ಕುಸುಗೊಳ್ಳಿ ಸಂಕಲನ ವೇಗ ಹೆಚ್ಚಿಸಿದೆ. ತ್ರಿಲೋಕ್ ಸಂಭಾಷಣೆ ಖುಷಿ ನೀಡುತ್ತದೆ. ಅಭಿಮನ್ಯು ಸದಾನಂದನ್ ಕ್ಯಾಮರಾದಲ್ಲಿ ಅರವತ್ತರ ದಶಕದನೋಟ ವಿಶೇಷವೆನಿಸಿದೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ ನಟನೆಯ 14ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ ನಲ್ಲಿಂದು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಹರೀಶ್ ಶಂಕರ್ ಮಟ್ಕಾ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್ ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿಕರಿಯರ್ ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಎಂಬ ನಿರೀಕ್ಷೆ ಹುಟ್ಟಿಸಿದೆ.
ಫಲಾಸ ಸಿನಿಮಾ ಖ್ಯಾತಿಯ ಕರುಣ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಟ್ಕಾ ಸಿನಿಮಾದಲ್ಲಿ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದು, ನವೀನ್ ಚಂದ್ರ, ಕನ್ನಡದ ಕಿಶೋರ್, ಅಜಯ್ ಘೋಷ್, ಮೈಮ್ ಗೋಪಿ, ರೂಪಲಕ್ಷ್ಮಿ, ವಿಜಯರಾಮ ರಾಜು, ಜಗದೀಶ್, ರಾಜ್ ತಿರಂದಾಸ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇನ್ನು, ಮಟ್ಕಾದ ಸ್ಪೆಷಲ್ ನಂಬರ್ ಗೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಮೆಗಾ ಪ್ರಿನ್ಸ್ ವರುಣ್ ತೇಜ್ ಜೊತೆ ಸೊಂಟ ಬಳುಕಿಸಲಿದ್ದಾರೆ.
ವೈರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಮೋಹನ್ ಚೆರುಕುರಿ ಮತ್ತು ಡಾ ವಿಜೇಂದರ್ ರೆಡ್ಡಿ ಟೀಗಾಲ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರಿಯ ಸೇಠ್ ಛಾಯಾಗ್ರಹಣ, ಕಾರ್ತಿಕ್ ಶ್ರೀನಿವಾಸ್ ಆರ್ ಸಂಕಲನ, ಸುರೇಶ್ ಕಲಾ ನಿರ್ದೇಶನವಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಮಟ್ಕಾ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ.
ರವಿ ಸುಬ್ಬರಾವ್, ತಮ್ಮ ಸ್ನೇಹಿತ ರಿತೇಶ್ ಜೋಶಿ ಅವರೊಂದಿಗೆ; ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ “ಈ ಪಟ್ಟಣಕ್ಕೆ ಏನಾಗಿದೆ” (ಭಾಗ ೧) ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ.
ನನ್ನ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳು ಹಾಗೂ ನಾನು ನೈಜವಾಗಿ ಕಂಡಿರುವ ಕೆಲವು ಸನ್ನಿವೇಶಗಳು ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ಎಂದು ಮಾತು ಪ್ರಾರಂಭಿಸಿದ ರವಿ ಸುಬ್ಬರಾವ್, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ.
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಕಥೆ. ನಾಯಕ ಈ ಮಾಫಿಯ ಮೂಲಕ ಯುವಜನತೆಯನ್ನು ಮೋಸದ ಜಾಲಕ್ಕೆ ಬೀಳಿಸುತ್ತಾನೆ. ಈಗಿನ ಕಾಲದ ಯುವಕರು ಮನೆಯಲ್ಲಿರುವ ರೀತಿಯೆ ಬೇರೆ. ಆಚೆಕಡೆಯಿರುವ ರೀತಿಯೇ ಬೇರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರದ ಕೊನೆಗೆ ಇವೆಲ್ಲಾ ಮಾಡುವುದು ತಪ್ಪು ಎಂಬ ಸಂದೇಶ ಕೂಡ ಇದೆ.
ಹಲವು ಸನ್ನಿವೇಶಗಳನ್ನು ನೈಜವಾಗಿ ಚಿತ್ರಿಸಿರುವುದರಿಂದ ಕರ್ನಾಟಕದಲ್ಲಿ ನಮ್ಮ ಚಿತ್ರ ಸೆನ್ಸಾರ್ ಆಗಲಿಲ್ಲ. ಕೊನೆಗೆ ಹೈದರಾಬಾದ್ ನಲ್ಲಿ ನಮ್ಮ ಚಿತ್ರದ ಸೆನ್ಸಾರ್ ಆಯಿತು. ಅಲ್ಲಿನ ಸೆನ್ಸಾರ್ ಮಂಡಳಿ ಕೆಲವು ಕಟ್ಸ್ ಗಳೊಂದಿಗೆ ಎ ಪ್ರಮಾಣಪ್ರತ್ರ ನೀಡಿದೆ. ಚಿತ್ರವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ರವಿ ಸುಬ್ಬರಾವ್ ತಿಳಿಸಿದರು.
ಈ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿ ಪಾತ್ರ ಎಂದರು ನಾಯಕಿ ರಾಧಿಕಾ ರಾಮ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ಅನಿಲ್ ಸಿ.ಜೆ, ಹಾಡುಗಳನ್ನು ಬರೆದವರ ಹಾಗೂ ಹಾಡಿದವರ ಹೆಸರುಗಳನ್ನು ಪರಿಚಯಿಸಿದರು.
ಮತ್ತೊಬ್ಬ ನಿರ್ಮಾಪಕ ರಿತೇಶ್ ಜೋಶಿ, ನಟ ಸತೀಶ್ ಶೆಟ್ಟಿ ಹಾಗೂ ವಿತರಕ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.