ಕಾಡುವ, ನೋಡುವ ನೆನಪಿಸೋ ಕಥೆ : ಆಚಾರ – ವಿಚಾರ ಇರುವ ಪರಿಶುದ್ಧ ಚಿತ್ರ ಆಚಾರ್ ಅಂಡ್ ಕೋ

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ಆಚಾರ್ ಅಂಡ್ ಕೋ
ನಿರ್ದೇಶನ : ಸಿಂಧು ಶ್ರೀನಿವಾಸಮೂರ್ತಿ
ನಿರ್ಮಾಣ : ಪಿ ಆರ್ ಕೆ ಪ್ರೊಡಕ್ಷನ್ಸ್
ತಾರಾಗಣ: ಅಶೋಕ್, ಸುಧಾ ಬೆಳವಾಡಿ, ಸಿಂಧು ಇತರರು

ಕೆಲ ಸಂಬಂಧಗಳು ಹೊಡಕೊಂಡ್ರೆ ನೆಮ್ಮದಿ, ಕೆಲ ಸಂಬಂಧಗಳು ಉಳಕೊಂಡ್ರೆ ನೆಮ್ಮದಿ’ ಈ ಡೈಲಾಗ್ ನೊಡುಗರ ಕಿವಿಗೆ ಬೀಳುವ ಹೊತ್ತಿಗೆ ತೆರೆ ಮೇಲೊಂದು ಚಂದದ ಕಥೆ ಸರಾಗವಾಗಿ ಹರಿದಾಡಿರುತ್ತೆ. ಅಲ್ಲಿ ಯಾವುದೇ ಡಿಶುಂ ಡಿಶುಂ ಇಲ್ಲ. ಮರ ಸುತ್ತೋ ಹಾಡುಗಳಿಲ್ಲ. ಆದರೂ, ಅತ್ತಿತ್ತ ನೋಡದಂತೆ ಸುಮ್ಮನೆ ಎರಡು ತಾಸು ಕುಲಿತು ಆ ಮನೆಯ ‘ಆಚಾರ’ ವಿಚಾರ ತಿಳ್ಕೊಂಡು, ನೋಡ್ಕೊಂಡು‌ ಹಾಗೊಂದು ನಗೆ ಬೀರಿ ಹೊರಬರಬೇಕಷ್ಟೆ.

ಇದು ಈ ವಾರ ತೆರೆಗೆ ಅಪ್ಪಳಿಸಿರುವ ‘ ಆಚಾರ್ ಅಂಡ್ ಕೋ’ ಚಿತ್ರದೊಳಗಿನ ರುಚಿಯಾದ ಹೂರಣ. ಹಾಗಾಗಿ ಯಾವುದೇ ಅನುಮಾನಗಳಿಲ್ಲದೆ, ಒಂದೊಳ್ಳೆ ಕಥಾಹಂದರಲ್ಲಿ ಅರಳಿರೋ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.

ಇಲ್ಲಿ ತೆರೆ ಮೇಲೆ ಕಾಣಿಸಿಕೊಂಡಿರುವ ಬಹುತೇಕರು ಹೊಸಬರು. ತೆರೆ ಹಿಂದೆ ಕೂಡ ಹೊಸಬರದ್ದೇ ಬುದ್ಧಿ ಚಳಕವಿದೆ. ಕಥೆಯಲ್ಲಿ ಗಟ್ಟಿತನವಿದೆ, ಚಿತ್ರಕಥೆಯಲ್ಲಿ ಚುರುಕುತನವಿದೆ, ನಿರೂಪಣೆಯಲ್ಲಿ ಸ್ಪಷ್ಟತೆ ಇದೆ. ಕುಟುಂಬ ಸಮೇತ ನೋಡಬಹುದಾದ ಪರಿ ಶುದ್ಧ ಚಿತ್ರವಿದು.

ಕೆಲ ಸಿನಿಮಾಗಳು ಇಷ್ಟ ಆಗೋದೆ ಕಂಟೆಂಟ್ ಮೂಲಕ. ಅದು ಇಲ್ಲಿದೆ. ಅದರಲ್ಲೂ ಮನಸ್ಸಿಗೆ ನಾಟುವ, ಕಾಡುವ, ನೆನಪಿಸುವ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸೇರುತ್ತೆ. ಕಥೆ ತೀರಾ ಸಿಂಪಲ್. ಹೇಳುವ ಮತ್ತು ತೋರಿಸುವ ವಿಧಾನ ವಿಭಿನ್ನವಾಗಿದೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ನೋಡುಗನಿಗೆ ಎಲ್ಲೂ ಬೇಸರಿಸದ ವಿಚಾರಗಳು, ದೃಶ್ಯಗಳು ಇಲ್ಲಿವೆ. ಹಿಂದೆಲ್ಲಾ ಕೂಡು ಕುಟುಂಬ ಹೇಗಿತ್ತು, ಹೆಂಗೆಲ್ಲಾ ಸಮಸ್ಯೆ ಎದುರಾಗುತ್ತಿದ್ದವು ಎಂಬುದು ಸಿನಿಮಾದ ಎಳೆ. ಒಂದು ನೀಟ್ ಸಿನಿಮಾಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಆ ಕಾರಣಕ್ಕೆ ಹೊಸಬರ ಪ್ರಯತ್ನ ಸಾರ್ಥಕವೆನಿಸಿದೆ.

ಮೊದಲರ್ಧ ಕೆಲವು ಸಿದ್ಧಾಂತಗಳೊಂದಿಗೆ ಅಲ್ಲಲ್ಲಿ ಹಾಸ್ಯಮಯವಾಗಿ ಸಾಗುವ ಸಿನಿಮಾ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತಷ್ಟು ಕುತೂಹಲ ಹಾಗು ಉತ್ಸಾಹದಲ್ಲೇ ನೋಡುಗನಲ್ಲಿ ಮಂದಹಾಸ ಬೀರುತ್ತೆ.
ಇಲ್ಲೂ ಪಾತ್ರಗಳಿಗೆ ಬೆಟ್ಟದಷ್ಟು ಆಸೆಗಳಿವೆ, ಪುಟ್ಟಿಯಷ್ಟು ಕನಸುಗಳಿವೆ, ಖುಷಿ ಇದೆ, ದುಃಖ ವಿದೆ, ನೋವಿದೆ, ನಲಿವಿದೆ, ಜವಾಬ್ದಾರಿತನವಿದೆ, ಸೋಮಾರಿತನವೂ ಇದೆ, ಶಿಸ್ತು, ಸಂಯಮ ಎಲ್ಲವೂ ಮೇಳೈಸಿದೆ. ಮೊದಲೇ ಹೇಳಿದಂತೆ ಈ ಸಿನಿಮಾ ಹಳೆ ಕಾಲದ ದಿನಗಳನ್ನು ಮೆಲುಕು ಹಾಕಿಸುವುದು ದಿಟ.

ಅಂದಹಾಗೆ, ಇದು 60 ರ ದಶಕದ ಆಸುಪಾಸಲ್ಲಿ ನಡೆಯೋ ಕಥೆ. ಆಗ ಕೂಡು ಕುಟುಂಬ ಹೇಗಿತ್ತು. ಜೀವನ ಶೈಲಿ, ಊಟ, ಉಡುಗೆ ತೊಡುಗೆ, ಆಚಾರ, ವಿಚಾರ, ನಡೆ, ನುಡಿ ಇತ್ಯಾದಿ ಹೇಗಿತ್ತು ಎಂಬುದನ್ನು ಇಲ್ಲಿ ಕಾಣಬಹುದು. ಹಾಗೆ ಹೇಳುವುದಾದರೆ ನಿರ್ದೇಶಕರು ಆಗಿನ ಕಾಲಕ್ಕೆ ಕರೆದೊಯ್ಯುವಲ್ಲಿ ಯಶಸ್ವಿ.

ಕಥೆ ಏನು?

ಇದು 60 ರ ದಶಕದ ಕಥೆ. ಮಧುಸೂದನ್ ಆಚಾರ್ ಮತ್ತು ಸಾವಿತ್ರಿ ದಂಪತಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಹತ್ತು‌ ಮಕ್ಕಳು! ಅದೊಂದು ಕೂಡು ಕುಟುಂಬ. ಅಪ್ಪ ಪಿಡಬ್ಲ್ಯುಡಿ ಎಂಜಿನಿಯರ್. ಕೈ ತುಂಬ ಸಂಬಳ ಬಂದರೂ, ಮನೆ ನಿಭಾಯಿಸೋದು, ಮಕ್ಕಳನ್ನು ಸಲಹುವುದು ತುಸು ಕಷ್ಟ. ಅದರೂ ಸಿದ್ಧಾಂತಗಳಿಗೆ ಬದ್ಧನಾದ ಮಧುಸೂದನ್ ಆಚಾರ್, ತನ್ನ ಮಕ್ಕಳು ತನ್ನಂತೆ ಎಂಜಿನಿಯರ್ ಆಗಬೇಕೆಂಬ ಆಸೆ. ಮಕ್ಕಳಿಗೆ ಅದು ಇಷ್ಟವಿಲ್ಲ. ಹತ್ತು ಜನ‌ ಮಕ್ಕಳದ್ದು ಒಂದೊಂದು ಕಥೆ ಮತ್ತು ವ್ಯಥೆ. ತಕ್ಕಮಟ್ಟಿಗೆ ಓದಿ ಅಪ್ಪನಿಗೆ ಇಷ್ಟವಿಲ್ಲದ ಕೆಲಸ‌ಮಾಡುವ ಗಂಡು ಮಕ್ಕಳು ಒಂದು ಕಡೆ, ಹೇಗೋ ತಿಳಿದದ್ದು ಓದಿ ಮದ್ವೆಯಾಗಿ ಹೋದರೆ ಸಾಕು ಅಂತ ಇರೋ ಹೆಣ್ಮಕ್ಕಳು ಇನ್ನೊಂದೆಡೆ.

ಈ ನಡುವೆ, ಮಧುಸೂದನ್ ಆಚಾರ್ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ಆ ಕುಟುಂಬ ಮೆಲ್ಲನೆ‌ಸಂಕಷ್ಟಕ್ಕೆ ಸಿಲುಕುತ್ತೆ. ಮನೆ ಜವಾಬ್ದಾರಿ ಹಿರಿ ಮಗನಿಗೆ ಬರುತ್ತೆ. ಆದರೆ, ಅದರಮದ ತಪ್ಪಿಸಿಕೊಳ್ಳುವ ಹಿರಿ ಮಗ, ಆ ಮನೆ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕುತ್ತಾನೆ. ಹೇಗೋ ಬಂಡಿ ಎಳೆಯಲು ಮುಂದಾಗುವ ಎರಡನೇ ಮಗ ಕೂಡ ಅಪಘಾತತಕ್ಕೀಡಾಗುತ್ತಾನೆ. ಇದರಿಂದ ಅಕ್ಷರಶಃ ಆಚಾರ್ ಕುಟುಂಬ ನಲುಗುತ್ತೆ. ಈ ಮಧ್ಯೆ ಹಿರಿಯ ಮಗಳು ಓದಿಲ್ಲದಿದ್ದರೂ ತನಗೆ ಲಂಡನ್ ವಾಸವಾಗಿರೋ ಗಂಡನೇ ಬೇಕು ಅನ್ನೋ ಹಠ. ಈ ನಡುವೆ ಉಳಿದವರ ಮದ್ವೆ ಆಗುತ್ತಾ? ಆಚಾರ್ ಕುಟುಂಬದ ಸದಸ್ಯರು ಬದುಕು ಹೇಗೆ ಕಟ್ಟಿಕೊಳ್ತಾರೆ, ಅವರ ಆಸೆ ಕನಸು ಈಡೇರುತ್ತಾ ಅನ್ನೋದೆ ಮಜವಾದ ಕಥೆ.

ಯಾರು ಹೇಗೆ?

ಹಿರಿಯ ನಟ ಅಶೋಕ್ ಅವರು ಅಪ್ಪನಾಗಿ ಆಪ್ತವಾಗಿದ್ದಾರೆ. ಅವರು ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಅಮ್ಮನಾಗಿ ಸುಧಾ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಹಿರಿಯ ಮಗಳಾಗಿ ಕಾಣಿಸಿಕೊಂಡಿರುವ ಸಿಂಧು ಸಿನಿಮಾದ ಹೈಲೆಟ್. ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಪರದೆ‌ ಮೇಲೆ ಕಾಣುವ ಪ್ರತಿ ಪಾತ್ರವೂ ಮನಸ್ಸಲ್ಲುಳಿಯುತ್ತೆ


ಬಿಂದು ಮಾಲಿನಿ ಅವರ ಸಂಗೀತದ ಎರಡು ಹಾಡು ಚೆನ್ನಾಗಿವೆ. ಹಿನ್ನೆಲೆ ಸಂಗೀತವೂ ಕಥೆಗೆ ಪೂರಕವಾಗಿದೆ.
ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಆಗಿನ ಕಾಲವನ್ನು ಸಾಕ್ಷೀಕರಿಸಿದೆ. ಆಶಿಕ್ ಕುಸುಗೊಳ್ಳಿ ಸಂಕಲನ ವೇಗ ಹೆಚ್ಚಿಸಿದೆ. ತ್ರಿಲೋಕ್ ಸಂಭಾಷಣೆ ಖುಷಿ ನೀಡುತ್ತದೆ. ಅಭಿಮನ್ಯು ಸದಾನಂದನ್ ಕ್ಯಾಮರಾದಲ್ಲಿ ಅರವತ್ತರ ದಶಕದ‌ನೋಟ ವಿಶೇಷವೆನಿಸಿದೆ.

Related Posts

error: Content is protected !!