ಬ್ಯಾಂಗ್ ಟ್ರೇಲರ್ ಹೊರಬಂತು: ಇದು ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ

ಶಾನ್ವಿ ಶ್ರೀವಾತ್ಸವ್ ಹಾಗೂ ರಘು ದೀಕ್ಷಿತ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಬ್ಯಾಂಗ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ನಟ ದತ್ತಣ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರಾಪರ್ ALL Ok ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ಬ್ಯಾಂಗ್” ಡಾರ್ಕ್ ಕಾಮಿಡಿ ಆಕ್ಷನ್ ಜಾನರ್ ನ ಚಿತ್ರ ಎಂದು ಮಾತು ಆರಂಭಿಸಿದ್ದ ನಿರ್ದೇಶಕ ಗಣೇಶ್ ಪರಶುರಾಮ್, ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ. ಟ್ರೇಲರ್ ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಸುದೀಪ್ ಅವರಿಗೆ ವಿಶೇಷ ಧನ್ಯವಾದ. ನಮ್ಮ ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.

ನನ್ನದು “ಬ್ಯಾಂಗ್” ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ. ಈತನಕ ಯಾವ ಚಿತ್ರದಲ್ಲೂ ಮಾಡಿರದ ಪಾತ್ರ.‌ ನಿರ್ದೇಶಕ ಗಣೇಶ್ ಒಳ್ಳೆಯ ಕಥೆ ಮಾಡಿದ್ದಾರೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದು ನಾಯಕಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು.

ನಿರ್ದೇಶಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ರಿತ್ವಿಕ್ ನನ್ನನ್ನು ಭೇಟಿಯಾಗಲು ಬಂದಾಗ ನಾನು ಹಾಡು ಹಾಡಲು ಕೇಳಿರುವುದಕ್ಕೆ ಬಂದಿದ್ದಾರೆ ಅಂದುಕೊಂಡೆ. ಆದರೆ ಅವರು ನೀವು ಈ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು.

ನಾನು ಮೊದಲು ಒಪ್ಪಲಿಲ್ಲ‌. ಅವರು ನನ್ನ ಬಿಡಲಿಲ್ಲ. ಕೊನೆಗೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಶಾನ್ವಿ ಅವರ ತಂದೆಯ ಪಾತ್ರ ನನ್ನದು. ಚಿತ್ರ ಬಿಡುಗಡೆ ಕಾತುರದಿಂದ ಕಾಯುತ್ತಿರುವುದಾಗಿ ರಘು ದೀಕ್ಷಿತ್ ಹೇಳಿದರು.

ನಿರ್ಮಾಪಕಿ ಪೂಜಾ ವಸಂತ ಕುಮಾರ್, ಸಂಗೀತ ನಿರ್ದೇಶಕ ಹಾಗೂ ನಟ ರಿತ್ವಿಕ್ ಮುರಳಿಧರ್, ಛಾಯಾಗ್ರಹಕ ಉದಯ್ ಲೀಲಾ, ಸಂಕಲನಕಾರ ವಿಜೇತ್ ಚಂದ್ರ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು “ಬ್ಯಾಂಗ್” ಚಿತ್ರದ ಕುರಿತು ಮಾತನಾಡಿದರು.

.

Related Posts

error: Content is protected !!