Categories
ಸಿನಿ ಸುದ್ದಿ

ಇವರೇ ಹುಲಿ ನಾಯಕ! ಡಿ.ಜೆ.ಚಕ್ರವರ್ತಿ ಸಿನಿಮಾ ಶೀರ್ಷಿಕೆ ರಿಲೀಸ್ ಮಾಡಿದ ಉಪೇಂದ್ರ

ಪತ್ರಕರ್ತ, ನಟ.ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಹೆಸರು “ಹುಲಿ ನಾಯಕ”

ನಟ ಉಪೇಂದ್ರ ಅವರು ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮಂಜುನಾಥ್ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ.

ಚಿತ್ರದ ಹೆಸರು “ಹುಲಿ ನಾಯಕ” ಎಂದು ಘೋಷಣೆ ಮಾಡಿದ ಉಪೇಂದ್ರ ಅವರು, ಈ ಐತಿಹಾಸಿಕ ಚಿತ್ರ ಯಶಸ್ವಿಯಾಗಲಿ‌. ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಚ್ಚಿಕೊಂಡ‌ ದಿಗಂತ್! ಶರ್ಮಿಳಾ, ಧನ್ಯಾ ಕೈಯಲ್ಲೂ ಪೌಡರ್!! ಕಾಮಿಡಿ ಸಿನಿಮಾಗೆ ಕಿಚ್ಚ ಕ್ಲಾಪ್

ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅದರ ಮೊದಲ ಹಂತವಾಗಿ ಇಂದು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಮೊದಲ ಚಿತ್ರ ಪ್ರಾರಂಭವಾಗಿದೆ. ಅದೇ “ಪೌಡರ್”.

ಕಿಚ್ಚ ಸುದೀಪ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ಮಾಪಕ ಕಾರ್ತಿಕ್
ಗೌಡ ಅವರ ತಂದೆ ರಾಮಕೃಷ್ಣೇಗೌಡ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧನಂಜಯ್, ಸಂತೋಷ್ ಆನಂದರಾಮ್, ರೋಹಿತ್ ಪದಕಿ, ಧೀರೇನ್ ರಾಮಕುಮಾರ್, ನವೀನ್ ಶಂಕರ್, ಕೆ.ಮಂಜು, ಭೂಮಿ ಶೆಟ್ಟಿ, ನಾಗಭೂಷಣ್, ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್, ವಿಜಯ್ ಕೋಶಿ, ಚೈತನ್ಯ ಕುಂಬಕೋಣಂ ಮುಂತಾದವರು ಹಾಜರಿದ್ದರು.

“ಪೌಡರ್” ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.

ನಮ್ಮ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ “ಪೌಡರ್”. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ತಿಳಿಸಿದರು.

ಕೆ.ಆರ್‌.ಜಿ ಸ್ಟುಡಿಯೋಸ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಟಿವಿಎಫ್ ಸಂಸ್ಥೆಯ ಅರುಣಭ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಕಾಮಿಡಿ ಜಾನರ್ ನ ಈ ಕಥೆ ಎಲ್ಲರಿಗೂ ಹಿಡಿಸಲಿದೆ ಎಂದರು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ.

ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಎರಡು ದೊಡ್ಡ ಸಂಸ್ಥೆಗಳು ಸೇರಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ನಾಯಕ ದಿಗಂತ್.

ಶರ್ಮಿಳಾ ಮಾಂಡ್ರೆ, ಧನ್ಯ, ಅನಿರುದ್ಧ್ ಆಚಾರ್ಯ, ಅಚ್ಯುತ ಕುಮಾರ್, ರವಿಶಂಕರ್ ಗೌಡ ಮುಂತಾದ ಕಲಾವಿದರು “ಪೌಡರ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಇವ್ನು ಗ್ಯಾಂಗ್ ಸ್ಟರ್ ಅಲ್ಲ! ಪ್ರಾಂಕ್ ಸ್ಟರ್!! ಟ್ರೇಲರ್ ರಿಲೀಸ್ ಮಾಡಿದ ಸಚಿವ ಮಹದೇವಪ್ಪ

ವುಡ್ ಕ್ರೀಪರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ, ತಿಲಕ್ ಶೇಖರ್(ಉಗ್ರಂ ಖ್ಯಾತಿ) ನಾಯಕರಾಗಿ ನಟಿಸಿರುವ “ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ‌ಸಚಿವ ಹೆಚ್ ಸಿ ಮಹದೇವಪ್ಪ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಆನಂದ್ ಆಡಿಯೋ ಶ್ಯಾಮ್ ಅವರು ಸಹ ಸಮಾರಂಭಕ್ಕೆ ಆಗಮಿಸಿ ಯಶಸ್ಸನ್ನು ಹಾರೈಸಿದರು.

ಈ ಹಿಂದೆ ನಾನು “ಭಾವಚಿತ್ರ” ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿದ್ದೇನೆ.‌ ತಿಲಕ್ ಅವರು “ಗ್ಯಾಂಗ್ ಸ್ಟರ್” ಆಗಿ, ನಾನು “ಪ್ರಾಂಕ್ ಸ್ಟರ್” ಆಗಿ ನಟಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇದು ಯೂಟ್ಯೂಬರ್ ಒಬ್ಬನ ಕಥೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸಚಿವರಿಗೆ ಹಾಗೂ ಗಣ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಹಾಗೂ ನಟ ಗಿರೀಶ್ ಕುಮಾರ್.

ನಾನು “ಗ್ಯಾಂಗ್ ಸ್ಟರ್” ಆಗಿ ಕಾಣಿಸಿಕೊಂಡಿದ್ದೇನೆ. ಗಿರೀಶ್ ಕುಮಾರ್ ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಜನರಿಗೆ ಹತ್ತಿರವಾಗಲಿದೆ ಎಂದು ನಾಯಕ ತಿಲಕ್ ಶೇಖರ್ ತಿಳಿಸಿದರು.

ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಹಾಗೂ ಚಿತ್ರದ ಪ್ರಮುಖಪಾತ್ರದಲ್ಲೂ ಅಭಿನಯಿಸಿದ್ದೇನೆ.‌ ಚಿತ್ರದಲ್ಲಿ ನಾನು‌ ಸಹ “ಗ್ಯಾಂಗ್ ಸ್ಟರ್” ಎಂದರು ಗಿರೀಶ್ ಬಿಜ್ಜಳ್.

ನಾಯಕಿ ವಿರಾನಿಕ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ತಿಲಕ್ , ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ತುಕ್ರ-ತನಿಯ ಸಿನಿಮಾಗೆ ಭೀಮ ಸಾಥ್: ರಘು ಶಿವಮೊಗ್ಗ ಚಿತ್ರದ ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್

ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿರುವ ನಟ ಕಂ ನಿರ್ದೇಶಕ ರಾಘು ಶಿವಮೊಗ್ಗ ಮೂರನೇ ಕನಸು ಇಂದು ಅನಾವರಣಗೊಂಡಿದೆ. ರಾಘು ನಿರ್ದೇಶನದ ಹೊಸ ಸಿನಿಮಾದ ಟೈಟಲ್ ನ್ನು ಭೀಮ ದುನಿಯಾ ವಿಜಯ್ ಅನಾವರಣ ಮಾಡಿ ಶುಭಾಶಯ ಕೋರಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ತುಕ್ರ ತನಿಯ ಎಂಬ ವಿಭಿನ್ನ ಬಗೆಯ ಶೀರ್ಷಿಕೆ ಇಡಲಾಗಿದೆ.

ತುಕ್ರ ಅಂದರೆ ಶುಕ್ರವಾರ ಹುಟ್ಟಿದವನು. ತನಿಯ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ-ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ. ಪ್ರವೀಣ್ ತೇಜ್ ಹಾಗೂ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ ನಿಂದ ಚಿತ್ರೀಕರಣ ನಡೆಸೋದಿಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ತುಕ್ರ ತನಿಯ ಸಿನಿಮಾಗೆ ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿದೆ.

ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ಚೂರಿಕಟ್ಟೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು.

ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸ್ಮಾಲ್ ಸ್ಕ್ರೀನ್ ಟು ಬಿಗ್ ಸ್ಕ್ರೀನ್: ಗಟ್ಟಿಮೇಳ ರಕ್ಷ್ ಈಗ ಸಿನಿಮಾ ಹೀರೋ; ಬರ್ಮಗೆ ಬಹದ್ದೂರ್ ಚೇತನ್ ನಿರ್ದೇಶಕ

ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳ ಸಾರಥಿ ಚೇತನ್ ಕುಮಾರ್ ಹೊಸ ಸಿನಿಮಾ ಇಂದು ಘೋಷಣೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ರಿವೀಲ್ ಮಾಡಿದೆ. ಬರ್ಮ ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ರಕ್ಷ್ ರಾಮ್ ನಾಯಕ. ಅಂದಹಾಗೇ ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ.

ಬರ್ಮ. ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ.ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ಬರ್ಮ ಸಿನಿಮಾ ಅನೌನ್ಸ್ ದಿನವೇ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದಪ್ಪ ಚೇತನ್ ಸಿನಿಮಾಗಳ ರೆಕಾರ್ಡ್ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ. ಈಗಾಗಲೇ ರಕ್ಷ್ ರಾಮ್ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದು, ಬರ್ಮ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಪ್ರತಿ ಸಿನಿಮಾದಲ್ಲೊಂದು ಹೊಸತನ ಹೊತ್ತು ತರುತ್ತಾರೆ. ಅದೇ ನಿರೀಕ್ಷೆ ಬರ್ಮ ಸಿನಿಮಾ ಮೇಲೆಯೂ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ ನಿಂದ ಶೂಟಿಂಗ್ ಅಖಾಡಕ್ಕೆ ಚಿತ್ರತಂಡ ಧುಮುಕಲಿದೆ. ಇನ್ನುಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ನೀಡಲಿದೆ.

Categories
ಸಿನಿ ಸುದ್ದಿ

ಮೈಸೂರಿನಲ್ಲಿ ವೃಷಭನ ಸಾಹಸ ಪೂರ್ಣ!

ಬಹು ನಿರೀಕ್ಷಿತ “ವೃಷಭ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಕಂಡುಕೇಳರಿಯದ ಬೃಹತ್ ಆಕ್ಷನ್ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರದ ಚಿತ್ರೀಕರಣ ಕಳೆದ ತಿಂಗಳು 22 ರಂದು ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈ ಭಾಗದ ಚಿತ್ರೀಕರಣದಲ್ಲಿ ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ಅದ್ಭುತವಾಗಿ ಮೂಡಿಬರುವುದಕ್ಕೆ ಶ್ರಮವಹಿಸಿದ್ದಾರೆ.

ಹಾಲಿವುಡ್‌ ನ ಜನಪ್ರಿಯ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಒಂದು ವಿಶೇಷತೆಯಾದರೆ, “ಬಾಹುಬಲಿ”, “ಪುಲಿಮುರುಗನ್”, “ಶಿವಾಜಿ – ದಿ ಬಾಸ್”, “ಎಂದಿರನ್”, “ಪುಷ್ಪ – ದಿ ರೈಸ್” ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿರುವುದು ಇನ್ನೊಂದು ಹೆಗ್ಗಳಿಕೆ.


 
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ನಂದಕಿಶೋರ್, ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ಖುಷಿ ನಮಗಿದೆ. ಜೊತೆಗೆ ಹಗಲು ರಾತ್ರಿ ಕಷ್ಟಪಟ್ಟು ದುಡಿದ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ. ಮೋಹನ್ ಲಾಲ್ ಸರ್, ರೋಶನ್, ಶ್ರೀಕಾಂತ್, ರಾಗಿಣಿ ಮುಂತಾದವರು ನಮ್ಮ ಡೆಡ್ ಲೈನ್ ಗಳನ್ನು ಪೂರೈಸುವಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. “ಪುಲಿಮುರುಗನ್” ಚಿತ್ರದ ನಂತರ ಮೋಹನ್ ಲಾಲ್ ಮತ್ತು ಪೀಟರ್ ಹೇನ್ಸ್ ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ವೃಷಭ ಚಿತ್ರವು ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಮೂಡಿಬರಲಿದೆ ಎಂದು ಹೇಳಿದ್ದಾರೆ.

 “ವೃಷಭ” ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಅತೀ ದೊಡ್ಡ ಆಕ್ಷನ್ ಚಿತ್ರವಾಗಿದ್ದು, ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಝಹ್ರ ಎಸ್ ಖಾನ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ವಿಎಫ್ಎಕ್ಸ್ ದೊಡ್ಡ ಪ್ರಮಾಣದಲ್ಲಿದ್ದು, ಇದೊಂದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅದ್ಭುತ ಸೆಂಟಿಮೆಂಟ್ ಚಿತ್ರವಾಗಿ ಮೂಡಿಬರುತ್ತಿದ್ದು, 2024ರ ಅತೀ ಜನಿರೀಕ್ಷಿತ ಚಿತ್ರವಾಗಿದೆ.

ವೃಷಭ ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲಂಸ್, ಎವಿಎಸ್ ಸ್ಟುಡಿಯೋಸ್ ನ ಜೊತೆಗೆ ಅರ್ಪಿಸುತ್ತಿದೆ‌. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಅಭಿಷೇಕ್ ವ್ಯಾಸ್ (ಏವಿಎಸ್), ಶ್ಯಾಮ್ ಸುಂದರ್ (ಫರ್ಸ್ಟ್ ಸ್ಟೆಪ್ ಮೂವೀಸ್), ಏಕ್ತಾ ಕಪೂರ್, ಶೋಭಾ ಕಪೂರ್ (ಬಾಲಾಜಿ ಟೆಲಿಫಿಲಂಸ್), ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ (ಕನೆಕ್ಟ್ ಮೀಡಿಯಾ) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತೆಲುಗು, ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಟೋಬಿ ಸ್ವಲ್ಪ ಚಲೋ ಐತ್ರಿ! ನೋಡೋಕೆ ತಾಳ್ಮೆ ಬೇಕ್ರಿ!! ಕ್ರೈಂ ಸುತ್ತ ಅಸಹಾಯಕನ ಪಯಣ…

ಚಿತ್ರ ವಿಮರ್ಶೆ
ರೇಟಿಂಗ್ : 3/5

ವಿಜಯ್ ಭರಮಸಾಗರ

ಚಿತ್ರ : ಟೋಬಿ
ನಿರ್ದೇಶಕ : ಬಾಸಿಲ್ ಅಲ್ಚಾಲ್ಕಲ್
ನಿರ್ಮಾಣ : ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್
ತಾರಾಗಣ : ರಾಜ್ ಬಿ.ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲ್ ದೇಶಪಾಂಡೆ, ದೀಪಕ್ ಶೆಟ್ಟಿ, ಭರತ್, ಸಂದ್ಯಾ ಅರಕೆರೆ ಇತರರು.

‘ ಈ ಟೋಬಿ ಯಾರು, ಎಲ್ಲಿರ್ತಾನೆ, ಇಷ್ಟಕ್ಕೂ ಟೋಬಿ ಅಂದರೇನು? ಹೀಗಂತ ಆ ಪೊಲೀಸ್ ಅಧಿಕಾರಿ ಚರ್ಚ್ ಫಾದರ್ ಬಳಿ ಕೇಳುತ್ತಾನೆ.
ಆ ಅಧಿಕಾರಿ ಪ್ರಶ್ನೆಗೆ ಚರ್ಚ್ ಫಾದರ್ ಹೇಳೋದಿಷ್ಟು. ‘ಟೋಬಿಯಾ ಅಲಿಯಾಸ್ ಟೋಬಿ ಅನ್ನೋದು ಹೆಬ್ರು ಭಾಷೆಯ ಪದ. ಹಾಗಂದರೆ, ‘ಗಾಡ್ ಈಸ್ ಗುಡ್’ ಅಂತ… ಟೋಬಿ ಎಂಬ ಹೆಸರಿಟ್ಟಾಕ್ಷಣ, ಮನುಷ್ಯ ದೇವರಾಗ್ತಾನಾ?

ಈ ಸಂಭಾಷಣೆ ಬರುವ ಹೊತ್ತಿಗೆ, ಬೆರಳೆಣಿಕೆ ಜನ ಇರುವ ಆ ಊರಲ್ಲಿ ಟೋಬಿ ಒಂದಷ್ಟು ಭಯ ಮತ್ತು ಕುತೂಹಲ ಹುಟ್ಟಿಸಿರುತ್ತಾನೆ. ಹಾಗಾದರೆ, ಆ ಟೋಬಿ ಯಾರು, ಹೇಗೆ? ಎಂಬ ಪ್ರಶ್ನೆಗೆ ಸಮಯ ಇದ್ದರೆ ಹಾಗೊಮ್ಮೆ ಟೋಬಿಯ ಆಟಾಟೋಪವನ್ನೊಮ್ಮೆ ನೋಡಿ ಬರಬಹುದು.

ಟೋಬಿ ತುಂಬಾ ಅದ್ಭುತ ಕಥೆಯೇನಲ್ಲ. ಒಂದು ಸಿಂಪಲ್ ಕಥೆಗೆ ರೋಚಕ ಎನಿಸುವ ಚಿತ್ರಕಥೆ ಚಿತ್ರದ ಜೀವಾಳ. ಒಂದೇ ಮಾತಲ್ಲಿ ಹೇಳುವುದಾದರೆ, ಸಿನಿಮಾ ತುಂಬಾ ನಿಧಾನ. ನೋಡುವಾಗ ಅಲ್ಲಲ್ಲಿ ಮಲಯಾಳಿ, ತಮಿಳಿನ ಕೆಲ ಸಿನಿಮಾಗಳು ಕಣ್ಮುಂದೆ ಹಾದು ಹೋಗುತ್ತವೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೆ, ಒಂದು ಭಾವುಕ ಪಯಣ ಕಾಣಬಹುದು. ಆಗಾಗ ಒಂದಷ್ಟು ಕಚಗುಳಿ ಇಡುವಂತಹ ಸನ್ನಿವೇಶಗಳು, ಒಮ್ಮೊಮ್ಮೆ ರೌದ್ರಾವತಾರದ ದೃಶ್ಯಗಳು, ಮಗದೊಮ್ಮೆ ವಿನಾಕಾರಣ ಎನಿಸುವ ಸೀನ್ ಗಳು ಇಣುಕುವುದುಂಟು.

ನಿರ್ದೇಶಕರು ಒಂದಷ್ಟು ಸಿನಿಮಾ ಅವಧಿ ಕಡೆಗೆ ಗಮನ ಹರಿಸಿದ್ದರೆ ಟೋಬಿ ಮತ್ತಷ್ಟು ಚಂದ ಆಗುತ್ತಿದ್ದನೇನೋ? ಎರಡುವರೆ ತಾಸು ಕುಳಿತು ನೋಡೋದು ತುಸು ತ್ರಾಸು. ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ ಮಧ್ಯೆ ಕೆಲ ದೃಶ್ಯಗಳು ಜಾಳು ಜಾಳು ಎನಿಸುತ್ತವೆ. ನೋಡುಗರಿಗೆ ವಿನಾಕಾರಣ ಎಳೆದಾಡಿದ್ದಾರೆ ಎಂಬ ಫೀಲ್ ಬರದೇ ಇರದು. ದ್ವಿಯಾರ್ಧ ಕೂಡ ವೇಗ ಹೆಚ್ಚಿಸಿಕೊಳ್ಳಲು ಅವಕಾಶವಿತ್ತು. ಆದರೆ, ಟೋಬಿ ಆಡಿದ್ದೇ ಆಟವನ್ನು ಅನಿವಾರ್ಯವಾಗಿ ನೋಡಲೇಬೇಕು.

ಇಲ್ಲಿ ಕಥೆಗಿಂತ ಚಿತ್ರಕಥೆ ಚುರುಕಾಗಿದೆ. ನಿರೂಪಣೆ ಶೈಲಿ ಹೊಸದಾಗಿದೆ. ಪ್ರತಿ ಪಾತ್ರಗಳನ್ನು ನೈಜವಾಗಿ ಕಟ್ಟಿ ಕೊಡುವಲ್ಲಿ ನಿರ್ದೇಶಕರ ಪ್ರಯತ್ನ ಸಾರ್ಥಕ. ಸಿನಿಮಾದಲ್ಲಿ‌ ವಾವ್ ಎನ್ನುವಂತಹ ದೃಶ್ಯಕಾವ್ಯ ಕಾಣ ಸಿಗಲ್ಲ. ಆದರೆ, ಒಂದೊಳ್ಳೆಯ ಮನರಂಜನೆಗಂತೂ ಮೋಸವಿಲ್ಲ. ಹಾಗಂತ ಇಲ್ಲಿ ಹಾಡು, ಕುಣಿತ ಮೇಳೈಸಿಲ್ಲ. ಆಗಾಗ ಹೊಡೆದಾಟಗಳಿಗೆ ಬರವಿಲ್ಲ. ಇಲ್ಲಿ ಇನ್ನೊಂದು ವಿಷಯ ಹೇಳುವುದಾದರೆ, ಕಥೆಯೇ ಇಲ್ಲಿ ಹೀರೋ. ಹಾಗಾಗಿ ಹೀರೋಯಿಸಂನ ಸುಳಿವಿಲ್ಲ. ಇಲ್ಲಿ ಮಾನವೀಯತೆ ಇದೆ, ಭಾವುಕತೆ ಇದೆ, ನಿಷ್ಕಲ್ಮಷ ಪ್ರೀತಿ ವಾತ್ಸಲ್ಯವಿದೆ, ಪಾಪ ಪ್ರಜ್ಞೆ ಇದೆ, ನೆತ್ತರು ಚಿಮುತ್ತೆ, ಮೋಸ, ದ್ವೇಷ, ಭಯ, ಭಕ್ತಿ ಎಲ್ಲವೂ ಇದೆ. ಇವೆಲ್ಲವೂ ಒಂದೊಳ್ಳೆಯ ಹೂರಣವಾಗಿದೆ. ಆ ಹೂರಣದಲ್ಲಿ ಕೊಂಚ ‘ಬೆಲ್ಲ’ದ ಸಿಹಿ ಕಡಿಮೆ ಎನ್ನಬಹುದಷ್ಟೇ.

ಟೋಬಿ ಕಥೆ ಏನು?

ಟೋಬಿ ಒಬ್ಬ ಅನಾಥ. ಮಾತು ಬಾರದ ಮೂಗ. ಚಿಕ್ಕಂದಿನಲ್ಲೇ ಅವಮಾನ ಕಂಡು ಎಲ್ಲರನ್ನು ದ್ವೇಷಿಸೋ ವ್ಯಕ್ತಿ. ಕೆಣಕಿದವರನ್ನ ಹಿಂದೆ ಮುಂದೆ ನೋಡದೆ ಹೊಡೆದುರುಳಿಸೋ ಛಾಳಿ. ಅಂತಹವನನ್ನು ಆ ಊರ ಮಂದಿ ಹೇಗೆ ಬಳಸಿಕೊಳ್ತಾರೆ. ಸಣ್ಣ ಅಸೆಗೆ ಆ ಜೀವ ಏನೆಲ್ಲಾ ತಪ್ಪು ಮಾಡುತ್ತೆ. ಅದರಿಂದ ಎಷ್ಟೆಲ್ಲಾ ನೋವು ಅನುಭವಿಸುತ್ತೆ ಅನ್ನೋದು ಕಥೆಯ ಸಾರಾಂಶ.

ಹಾಗಾದರೆ ಆ ಟೋಬಿ ಎಂಬ ಮುಗ್ಧ ಜೀವದ ಬದುಕಿನುದ್ದಕ್ಕೂ ಎದುರಾಗುವ ಸಮಸ್ಯೆಗಳೇನು, ಜೊತೆ ನಿಲ್ಲೋರಾರು, ದೂರ ಮಾಡೋರಾರು ಎಂಬ ಕುತೂಹಲ ಇದ್ದರೆ ಟೋಬಿ‌ಯ ‘ಮಾರಾಮಾರಿ’ ನೋಡಬಹುದು.

ಯಾರು ಹೇಗೆ?

ಟೋಬಿಯಾಗಿ ರಾಜ್ ಬಿ.ಶೆಟ್ಟಿ ಅಬ್ಬರಿಸಿದ್ದಾರೆ. ಮಾತು ಬಾರದ ಮೂಗನಾಗಿ ಅವರ ನಟನೆಗೆ ಜೈ ಎನ್ನಬಹುದು. ಮೂಗನಾಗಿಯೇ ಅಲ್ಲಲ್ಲಿ‌ ನಗಿಸಿ, ಭಾವುಕತೆಗೆ ದೂಡುವಲ್ಲಿ ಅವರು ಯಶಸ್ವಿ.
ಚೈತ್ರಾ ಆಚಾರ್ ಟೋಬಿ ಮಗಳಾಗಿ‌ ಗಮನ ಸೆಳೆದಿದ್ದಾರೆ. ಬಜಾರಿ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.
ಸಂಯುಕ್ತಾ ಹೊರನಾಡು ‘ಮಾರಿ’ ಗೆ ಸಿಗದೆ ಮೈ ಮಾರಿಕೊಳ್ಳೋ ಹೆಣ್ಣಾಗಿ ಇಷ್ಟವಾಗುತ್ತಾರೆ.

ಗೋಪಾಲ್ ದೇಶಪಾಂಡೆ ಕೂಡ ಗಮನ ಸೆಳೆಯುತ್ತಾರೆ. ದೀಪಕ್ ಶೆಟ್ಟಿ ಖಳನಾಗಿ ಆವರಿಸಿದ್ದಾರೆ. ತೆರೆ ಮೇಲೆ ಬರುವ ಪ್ರತಿ ಪಾತ್ರಗಳು ಅಚ್ಚು ಕಟ್ಟಾಗಿ ಕೆಲಸ‌ ಮಾಡಿವೆ.
ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಇಲ್ಲಿ ಹೈಲೆಟ್ ಆಗಿದೆ. ಬರುವ ಹಾಡೊಂದು ಪರವಾಗಿಲ್ಲ. ಕ್ಯಾಮೆರಾ ಕೂಡ ಟೋಬಿಯನ್ನು ಅಂದಗಾಣಿಸಿದೆ.

Categories
ಸಿನಿ ಸುದ್ದಿ

ಹಿರಿಯ ಸಿನಿಮಾ‌ ಪತ್ರಕರ್ತ ಸುಬ್ರಹ್ಮಣ್ಯ(ಬಾನಾಸು) ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಕೇಂದ್ರ ಸರ್ಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿವೆ. ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿಯು ಕನ್ನಡದ ಚಲನಚಿತ್ರ ಪತ್ರಕರ್ತರ ಪಾಲಾಗಿದೆ. ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (Subramanya Badoor) ಅವರಿಗೆ ಈ ಬಾರಿ ದೊರೆತಿದೆ. ಸಿನಿಮಾ ರಂಗದಲ್ಲಿ ಬಾ.ನಾ.ಸು. ಅವರು ಹಲವು ದಶಕಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು, ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ.

Categories
ಸಿನಿ ಸುದ್ದಿ

ರೂಪೇಶ್ ಶೆಟ್ಟಿ – ಜಾಹ್ನವಿ ಹೊರಡಿಸಿದ ಅಧಿಪತ್ರ: ಹೊಸ ಸಿನಿಮಾಗೆ ಪೂಜೆ

ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿದೆ. ಈಗಾಗಲೇ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೂಪೇಶ್ ಸ್ಯಾಂಡಲ್ವುಡ್ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ನಟ ರೂಪೇಶ್ ಶೆಟ್ಟಿ ಮಾತನಾಡಿ, ಬಿಗ್ ಬಾಸ್ ಆದ್ಮೇಲೆ ಕನ್ನಡ ಸಿನಿಮಾ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್ ಗೂ ಮುಂಚೆ ಸರ್ಕಸ್ ಎಂಬ ತುಳು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೆ. ಆ ಚಿತ್ರದ ಕೆಲಸ ತುಂಬಾ ಇತ್ತು. ಈ ಚಿತ್ರದ ಕೆಲಸ ಮುಗಿಸಿ ಬೇರೆ ಸಿನಿಮಾದ ಒಪ್ಪಿಕೊಳ್ಳುವುದು ಎಂದು ತೀರ್ಮಾನ ಮಾಡಿದ್ದೆ. ದೇವರ ದಯೆಯಿಂದ ಆ ಚಿತ್ರ ಹಿಟ್ ಆಗಿದೆ. 150 ಥಿಯೇಟರ್ ಗಳಲ್ಲಿ ಓಡಿದೆ. ಅಧಿಪತ್ರ ಸಿನಿಮಾ ನಿರ್ದೇಶಕರು ಕಥೆ ಹೇಳಿದಾಗ ಇಂಟ್ರೆಸ್ಟ್ ಎನಿಸಿತು. ಅವರ ಮೊದಲ ಸಿನಿಮಾವಾದರೂ ಸ್ಕ್ರೀನ್ ಪ್ಲೇ ವಿವರಿಸಿದಾಗ ಎಷ್ಟು ತಯಾರಾಗಿದ್ದರೂ ಎಂದರೆ ಪ್ರತಿ ಸೀನ್ ಡ್ರಾಯಿಂಗ್ ಮಾಡಿಕೊಂಡಿದ್ದರು. ನನಗೆ ಅದನ್ನು ನೋಡಿ ತುಂಬಾ ಧೈರ್ಯ ಬಂತು. ಅವರಿಗೆ ಒಂದು ವಿಷನ್ ಇದೆ. ಈ ಕಾರಣದಿಂದ ಅಧಿಪತ್ರ ಸಿನಿಮಾ ಒಪ್ಪಿಕೊಂಡಿದ್ದೇನೆ. ಸದ್ಯದಲ್ಲಿ ಈ ಚಿತ್ರಕ್ಕಾಗಿ ನನ್ನ ಗೆಟಪ್ ಬದಲಾಗಲಿದೆ ಎಂದರು.

ನಟಿ ಜಾಹ್ನವಿ ಮಾತನಾಡಿ, ಅಧಿಪತ್ರ ಸಿನಿಮಾ ಈಗ ಶುರುವಾಗಿದೆ. ಇವತ್ತು ಮುಹೂರ್ತ ಆಗಿದೆ. ಈ ರೀತಿ ಒಂದು ಸಿನಿಮಾ ಬರ್ತಿದೆ ಅಂದಾಗಲೇ ತುಂಬಾ ಚೆನ್ನಾಗಿ ಪ್ರಮೋಷನ್ ಸಿಕ್ತಿದೆ. ಟೈಟಲ್ ತುಂಬಾ ಕ್ಯಾಚಿಯಾಗಿದೆ. ನನ್ನ ಪಾತ್ರದ ಹೆಸರು ಬೃಹತಿ. ನನ್ನ ಪಾತ್ರದ ರೀತಿ ಲ್ಲಾ ಪಾತ್ರದ ಹೆಸರು ಕೂಡ ವಿಭಿನ್ನವಾಗಿದೆ. ಈ ಸಿನಿಮಾ ತುಂಬಾ ಪಾಸಿಟಿವ್ ಆಗಿದೆ ಎಂದರು.

ನಿರ್ದೇಶಕ ಚಹನ್ ಶೆಟ್ಟಿ ಮಾತನಾಡಿ, ರೂಪೇಶ್ ಶೆಟ್ಟಿ ಹುಟ್ಟಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿದ್ದೆವು. ಆ ದಿನವೇ ನಮಗೆ ಒಳ್ಳೆ ಪ್ರೋತ್ಸಾಹ ಸಿಕ್ಕಿದೆ. ರೂಪೇಶ್ ಶೆಟ್ಟಿ ಅವರ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲಿದ್ದಾರೆ. ಗಣೇಶ್ ಹಬ್ಬದ ಬಳಿಕ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ.

ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಇವರು ನಿರ್ದೇಶನ ಮಾಡಿದ ಶಾರ್ಟ್ ಫಿಲಂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ಪಡೆದಿತ್ತು ಹಾಗೂ ಕೆಲವು ಜಾಹಿರಾತು ಗಳಿಗೆ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಚಯನ್ ಶೆಟ್ಟಿ, ಅಧಿಪತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆ
ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

Categories
ಸಿನಿ ಸುದ್ದಿ

ನಿಖಿಲ್‌ ಕುಮಾರ್ ಹೊಸ ಸಿನಿಮಾಗೆ ಅದ್ಧೂರಿ ಮುಹೂರ್ತ: ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ

ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.
ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್ ಡಿ ದೇವೇಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿ ನೂತನ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈಗ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ನಾಯಕನಾಗಿ ನಾನು ನಟಿಸುತ್ತಿದ್ದೇನೆ. ಲಕ್ಷ್ಮಣ್ ಅವರು ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಸೀತಾರಾಮ ಕಲ್ಯಾಣ” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ ಅವರು ಆಗಮಿಸಿದ್ದರು.

“ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕರಾಗಿ ನಟಿಸಬೇಕು” ಎಂದು ಸುಭಾಸ್ಕರನ್ ಅವರು ಹೇಳಿದ್ದರು. ಈಗ ಚಿತ್ರ ಆರಂಭವಾಗುತ್ತಿದೆ. ಈ ಚಿತ್ರಕ್ಕಾಗಿ ನಿರ್ದೇಶಕರು ಒಂದು ವರ್ಷದಿಂದ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿಖಿಲ್ ಕುಮಾರ್ ತಿಳಿಸಿದರು.

ತಮ್ಮ‌ ತಂಡವನ್ನು ಪರಿಚಯಿಸುತ್ತಾ ಮಾತು ಪ್ರಾರಂಭಿಸಿದ ನಿರ್ದೇಶಕ ಲಕ್ಷ್ಮಣ್, ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ನಾನು ಬರೆದ ಕಥೆಯನ್ನು ಒಪ್ಪಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರಿಗೆ ಹಾಗೂ ನಾಯಕ ನಿಖಿಲ್ ಕುಮಾರ್ ಅವರಿಗೆ ಧನ್ಯವಾದ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ನೀಡುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ವಿವರಣೆ ನೀಡುತ್ತೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.

ಈ ಚಿತ್ರದಲ್ಲಿ ನಟಿಸುವಂತೆ ನಿಖಿಲ್ ಅವರು ಹೇಳಿದರು. ನಾನು ಕಥೆ ಕೇಳಿ ಒಪ್ಪಿಕೊಂಡೆ. ಕಥೆ ಚೆನ್ನಾಗಿದೆ ಎಂದರು ನಟ ಕೋಮಲ್.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಚಿತ್ರ ಯಶಸ್ವಿಯಾಗಲಿ ಎಂದು ಲೈಕಾ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ಸುಭಾಸ್ಕರನ್ ಅವರು ಹಾರೈಸಿದರು.

ನಾಯಕಿ ಯುಕ್ತಿ ತರೇಜ ಸಹ ನೂತನ ಚಿತ್ರದ ಕುರಿತು ಮಾತನಾಡಿದರು. ಹಲವಾರು ತಂತ್ರಜ್ಞರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!