ಕಾಟೇರ ಚಿತ್ರೀಕರಣ ಮುಕ್ತಾಯ: ಇದು ದರ್ಶನ್ ಚಿತ್ರ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.

ನಮ್ಮ ಸಂಸ್ಥೆಯ ನಿರ್ಮಾಣದ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಈ ಸ್ಥಳದಲ್ಲಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ತರುಣ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು.


ದರ್ಶನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

“ಗುರು ಶಿಷ್ಯರು” ಚಿತ್ರದ ನಂತರ ನಾನು ಹಾಗೂ ಜಡೇಶ್ ಅವರು ಸೇರಿ ಈ ಚಿತ್ರದ ಕಥೆ ಬರೆದ್ದೆವು. ದರ್ಶನ್ ಅವರಿಗಾಗಿಯೇ ಬರೆದ ಕಥೆಯಿದು ಎಂದು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್, ಆನಂತರ ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಈ ಕಥೆ ಹೇಳಿ ಎಂದರು. ರಾಕ್ ಲೈನ್ ಸರ್ ಕಥೆ ಮೆಚ್ಚಿಕೊಂಡು ಚಿತ್ರವನ್ನು ಪ್ರಾರಂಭಿಸಿದರು. ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಈ ಚಿತ್ರದ ನಾಯಕಿ ಎಂದು ನಿರ್ಮಾಪಕರು, ದರ್ಶನ್ ಅವರು ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದೆವು. ಆರಾಧನಾ ಅದ್ಭುತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದಾರೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು , ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಲಾಗಿದೆ‌. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದರು.

ನೂರು ದಿನಗಳ ಚಿತ್ರೀಕರಣದಲ್ಲಿ ನಾನು, ಎಪ್ಪತ್ತೊಂದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌. ತರುಣ್ ಹಾಗೂ ಜಡೇಶ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಎಂತಹ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಅಭಿನಯಿಸುವ ಕಲಾವಿದೆ ಅವರು.


ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಈ ಚಿತ್ರದ ಛಾಯಾಗ್ರಹಣಕ್ಕಾಗಿ ಅವರಿಗೆ ಪ್ರಶಸ್ತಿ ಬರಬಹುದು ಎಂಬುದು ನನ್ನ ಅನಿಸಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು‌.

ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕಿ ಆರಾಧನಾ.

ಹಿರಿಯ ನಟರಾದ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಛಾಯಾಗ್ರಾಹಕ ಸುಧಾಕರ್, ತರುಣ್ ಸುಧೀರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ಜಡೇಶ್, ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಹಿರಿಯ ನಟಿ ಮಾಲಾಶ್ರೀ ಚಿತ್ರತಂಡಕ್ಕೆ ಶುಭ ಕೋರಿದರು.

Related Posts

error: Content is protected !!