ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ(ಡಿ.೧೦) ಶಂಕುಸ್ಥಾಪನೆ
ಸಾಂದಾರ್ಬಿಕ ಚಿತ್ರ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಬಹುದಿನದ ಕನಸು ನನಸಾಗುತ್ತಿದೆ. ಸಂಘವು ತನ್ನದೇ ಸುಸಜ್ಜಿತವಾದ ಕಟ್ಟಡ ಹೊಂದಬೇಕೆನ್ನುವ ಬಹುದಿನದ ಆಸೆ ಕೊನೆಗೂ ಈಡೇರುತ್ತಿದೆ. ಬೆಂಗಳೂರಿನ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಬಳಿ ಇರುವ ಸಂಘದ ಅಧಿಕೃತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ( ಡಿಸೆಂಬರ್ ೧೦) ಬೆಳಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಚಿತ್ರೋದ್ಯಮಕ್ಕೆ ಸದಾ ಸಹಕಾರ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಸಲಿದ್ದು, ಇದಕ್ಕೆ ಚಿತ್ರೋದ್ಯಮದ ಗಣ್ಯಾತೀಗಣ್ಯರು ಸಾಕ್ಷಿಯಾಗಲಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಖಚಿತಪಡಿಸಿದ್ದು, ಕೊನೆಗೂ ಸಂಘದ ಬಹುದಿನದ ಕನಸು ನನಸಾಗುತ್ತಿರುವುದು ಸಂತಸ ಮೂಡಿಸಿದೆ ಎನ್ನುತ್ತಾರೆ.ಸಂಘವೇ ಖರೀದಿಸಿಟ್ಟುಕೊಂಡಿದ್ದ ವಿಶಾಲವಾದ ಜಾಗದಲ್ಲಿ ವಿಶೇಷ ವಿನ್ಯಾಸದ ಸುಸಜ್ಜಿತ ಕಟ್ಟಡ ನಿರ್ಮಾಣದ ಕನಸು ಹೊತ್ತಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು, ಅಲ್ಲಿ ಏನೆಲ್ಲ ಇರಬೇಕು ಎನ್ನುವುದರ ನೀಲಿ ನಕ್ಷೆಯನ್ನು ಸಿದ್ದ ಪಡಿಸಿಕೊಂಡಿದೆ. ಮಿನಿ ಚಿತ್ರಮಂದಿರ, ಕನ್ನಡ ಚಿತ್ರರಂಗ ನಡೆದು ಬಂದ ಹಾದಿಗೆ ಸಂಬಂಧಿಸಿದ ಪುಸ್ತಕ ಹಾಗೂ ಡಿವಿಡಿಗಳ ಸಂಗ್ರಹಾಲಯದ ಜತೆಗೆ ಸಿನಿಮಾ ನಿರ್ಮಾಣಕ್ಕೆ ಪೂರಕವಾಗುವ ಇತರೆ ಸೌಲಭ್ಯಗಳು ಅಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದೆಯಂತೆ. ಇನ್ನು ಕನ್ನಡ ಚಿತ್ರರಂಗದ ಇತರೆ ಸಂಘ ಸಂಸ್ಥೆಗಳಿಗೆ ಇರುವಷ್ಟೇ ಇತಿಹಾಸ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘಕ್ಕೂ ಇದೆ.
ಇದು ನನ್ನ ಸೌಭಾಗ್ಯ. ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರುತ್ತಿದೆ, ಹಾಗೆಯೇ ಕಟ್ಟಡ ನಿರ್ಮಾಣ ಆಗುತ್ತಿದೆ ಎನ್ನುವುದು ಖುಷಿ ತಂದಿದೆ. ಹಾಗಂತ ನಾನೊಬ್ಬನೇ ಇದಕ್ಕೆ ಕಾರಣ ಆಲ್ಲ. ಆರಂಭದಿಂಲೂ ಇದಕ್ಕೆ ಹಲವು ಗಣ್ಯರು ಶ್ರಮಿಸಿದ್ದಾರೆ. ನಿರ್ಮಾಪಕ ಮುನಿರತ್ನ ಆವರು ನಿವೇಶನಕ್ಕಾಗಿ ಶ್ರಮಿಸಿದ್ದಾರೆ. ಅವರ ಪಟ್ಟ ಪರಿಶ್ರಮದ ಫಲದಿಂದಾಗಿ ಇವತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಹೊತ್ತಲ್ಲಿ ಸಂಘಕ್ಕೆ ನಾನು ಅಧ್ಯಕ್ಷ ಅನ್ನೋದು ನನ್ನ ಹೆಮ್ಮೆ. – ಪ್ರವೀಣ್ ಕುಮಾರ್, ಸಂಘದ ಅಧ್ಯಕ್ಷ
ಸಾಂದಾರ್ಬಿಕ ಚಿತ್ರ
ಚಿತ್ರರಂಗದಲ್ಲಿನ ನಿರ್ಮಾಪಕರ ಹಿತ ಕಾಪಾಡುವ ಸಲುವಾಗಿ ೧೯೮೨ ರಲ್ಲಿ ಈ ಸಂಘವು ಆಸ್ತಿತ್ವಕ್ಕೆ ಬಂತು. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೇತೃತ್ವದಲ್ಲಿ ಅಂದು ಅಸ್ತಿತ್ವಕ್ಕೆ ಬಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಎಚ್.ಎಂ.ಕೆ. ಮೂರ್ತಿ ಮೊದಲ ಅಧ್ಯಕ್ಷರಾದರು. ಆನಂತರ ಬಿ.ಎಂ. ವೆಂಕಟೇಶ್, ಶಾಸ್ತ್ರಿ, ಬಸಂತ್ ಕುಮಾರ್ ಪಾಟೀಲ್, ಸಂದೇಶ್ ನಾಗರಾಜ್ ಅಧ್ಯಕ್ಷರಾದರು. ಆನಂತರ ಸಂಘಕ್ಕೆ ಹಾಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಆಧ್ಯಕ್ಷರಾದಾಗ ಸಂಘಕ್ಕೆ ಒಂದು ಸ್ವಂತ ಕಟ್ಟಡ ಬೇಕು, ಅದಕ್ಕೆ ಮೊದಲು ನಿವೇಶನ ಬೇಕು ಎನ್ನುವ ಚರ್ಚೆ ನಡೆಯಿತು. ಸಂಘದ ಇತರೆ ಪದಾಧಿಕಾರಿಗಳ ಸಹಕಾರದೊಂದಿಗೆ ಮುನಿರತ್ನ ಅವರೇ ಹೆಚ್ಚು ಆಸಕ್ತಿ ವಹಿಸಿ, ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯೇ ಒಂದು ನಿವೇಶನ ಒದಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿಂದೀಗ ನಿರ್ಮಾಪಕ ಪ್ರವೀಣ್ ಕುಮಾರ್ ಅಧ್ಯಕ್ಷರಾಗಿದ್ದು, ಆವರ ಸೌಭಾಗ್ಯವೇ ಎನ್ನುವಂತೆ ಅವರ ಅವದಿಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ. ಇದಕ್ಕೆ ನಿರ್ಮಾಪಕ ಪ್ರವೀಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಸಂಘದ ಪದಾಧಿಕಾರಿಗಳ ಸಹಕಾರವೇ ಕಾರಣ ಎನ್ನುವುದು ಅವರ ಮಾತು.
ವಕೀಲರ ನೋಟಿಸ್ ಮೀರಿ ಬರ್ತಾರಾ ಸಿಎಂ?
ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಶುಭ ಸಂದರ್ಭದಲ್ಲಿದ್ದಾರೆ. ಸಂಘಕ್ಕೆ ಸ್ವಂತ ಕಟ್ಟಡ ಬೇಕಿತ್ತು, ಅದೀಗ ಈಡೇರುತ್ತಿದೆ ಎನ್ನುವುದು ಅದಕ್ಕೆ ಕಾರಣ. ಆದು ಸಹಜವೂ ಹೌದು. ಒಂದು ಕಟ್ಟಡ ಬೇಕು ಅಂತ ಸಂಘದ ಪದಾಧಿಕಾರಿಗಳ ಆರಂಭದಿಂದಲೂ ಕಷ್ಟಪಟ್ಟಿದ್ದಾರೆ, ಆದರೆ ಅದಕ್ಕೆ ವಿಘ್ನ ಎನ್ನುವ ಹಾಗೆ ಸಂಘದ ಕಟ್ಟಡ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿರುವುದಕ್ಕೆ ವಕೀಲರ ಆಕ್ಷೇಪಣೆ ಇದೆ. ಸಂಘದ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮೂಲಕ ಹೈಕೋರ್ಟ್ ವಕೀಲರಾದ ಅಮೃತೇಶ್ ಅವರು ಮುಖ್ಯ ಮಂತ್ರಿ ಅವರಿಗೆ ಅಕ್ಷೇಪಣೆ ಪತ್ರ ಕಳುಹಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಹಾಗೂ ಲೆಕ್ಕಪತ್ರ ವ್ಯವಹಾರಗಳಲ್ಲಿ ಲೋಪದೋಷಗಳಿವೆ. ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳ ಮುಂದೆ ಅವೀಗ ವಿಚಾರಣೆ ಹಂತದಲ್ಲಿವೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಅಲ್ಬಂ ಸಾಂಗ್ ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವಿಡಿಯೊ ಆಲ್ಬಂ ಸಾಂಗ್ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ಅದೊಂದು ಪಾರ್ಟಿ ಫ್ರೀಕ್ ಹಾಡು. ಈ ಹಾಡಿನ ಮೂಲಕ ಹೊಸ ವರ್ಷದಲ್ಲಿ ಪಡ್ಡೆ ಹುಡುಗರಿಗೆ ಕಿಕ್ ಏರಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರೋದು, ಗಾಯಕ ಕಮ್ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ
ಈ ಹಿಂದೆ ಚಂದನ್ ಶೆಟ್ಟಿ “ಮೂರೇ ಮೂರು ಪೆಗ್ಗಿಗೆ…” ., “ಟಕೀಲಾ…” ಎಂಬ ಪಾರ್ಟಿ ಸಾಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಆ ಬಳಿಕ ಅವರು ಬೇರೆ ಜಾನರ್ ಹಾಡುಗಳನ್ನು ಮಾಡಿ, ಬಿಡುಗಡೆ ಮಾಡಿದ್ದರು. ಆದರೆ, ಚಂದನ್ ಶೆಟ್ಟಿ ಅವರು, ಪಾರ್ಟಿ ಸಾಂಗ್ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಅವರು ಹಲವು ವಿಶೇಷಗಳೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿ ಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲಲರ್ ಫುಲ್ ಆಗಿ ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ. ಶೂಟಿಂಗ್ ನಡೆಯಲಿದೆ. ಸ್ಟಾರ್ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.
ನಿವೇದಿತಾ ಗೌಡ
ಈ ಹೊಸ ವಿಡಿಯೋ ಆಲ್ಬಂ ಸಾಂಗ್‌ಗೆ “ಪಾರ್ಟಿ ಫ್ರೀಕ್” ಎಂಬ ಹೆಸರಿಟ್ಟಿದ್ದಾರೆ. ಇನ್ನು, ಚೈತನ್ಯ ಲಕಂಸಾನಿ ಅವರು ಈ ವಿಡಿಯೋ ಸಾಂಗ್ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಹಾಡಿದ್ದಾರೆ ಕೂಡ. ಅಷ್ಟೇ ಅಲ್ಲ, ಆ ಹಾಡಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಲ್ಲಿ ಸ್ಟೆಪ್ ಹಾಕುತ್ತಿರುವುದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷವೆಂದರೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಈ ಹಾಡಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡನ್ನು ಡಿಸೆಂಬರ್ 26 ರಂದು ಯುನೈಟ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.
ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದ ಕುಮಾರ್ ಗೋವಿಂದ್
ನಟ ಕುಮಾರ್ ಗೋವಿಂದ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ” ಅನುರಾಗ ಸಂಗಮ” ಚಿತ್ರ. ಕುಮಾರ್ ಗೋವಿಂದ್, ರಮೇಶ್, ಸುಧಾರಾಣಿ ಹಾಗೂ ಬಿ. ಸರೋಜಾ ದೇವಿ ಅಭಿನಯದ ” ಅನುರಾಗ ಸಂಗಮ” ಚಿತ್ರ ತೆರೆ ಕಂಡು ಸೋಮವಾರಕ್ಕೆ 25 ವಸಂತ ತುಂಬಿತು. ಇದೇಕಾರಣಕ್ಕೆ ನಟ ಕುಮಾರ್ ಗೋವಿಂದ್ ಸಂತಸ ವ್ಯಕ್ತಪಡಿಸಿದ್ದು, ಆಗ ಚಿತ್ರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿ. ಉಮಾಕಾಂತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ” ಅನುರಾಗ ಸಂಗಮ ” ಚಿತ್ರವು 1995ಡಿಸೆಂಬರ್ 8 ರಂದು ತೆರೆ ಕಂಡಿತ್ತು.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರವು ೨೫ ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ವಿ. ಮನೋಹರ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಎಸ್ ಪಿಬಿ ಹಾಗೂ ರಮೇಶ್ ಚಂದ್ರ ಹಾಡಿದ್ದ ಹಾಡುಗಳು ಈಗಲೂ ಬಲು ಜನಪ್ರಿಯ. ಅಷ್ಟೇ ಅಲ್ಲ, ಗಾಯಕ ರಮೇಶ್ ಚಂದ್ರ ಅವರಿಗೆ ಈ ಚಿತ್ರದ ಗೀತೆಯ ಮೂಲಕ ರಾಜ್ಯ ಪ್ರಶಸ್ತಿಯೂ ಬಂತು. ಭಾರತದ ಇತರ ಭಾಷೆಗಳಿಗೂ ಈ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿ ಅಲ್ಲೂ ಯಶಸ್ವಿಯಾಗಿದೆ. ಎಸ್.ಕೆ ಫಿಲಂಸ್ ಮೂಲಕ ಡಿ. ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು. ನಟ ಕುಮಾರ್ ಗೋವಿಂದ್ ಆವರಿಗೂ ಈ ಚಿತ್ರ ಭರ್ಜರಿ ವರ್ಚಸ್ಸು ತಂದುಕೊಟ್ಟಿದ್ದು ಗಮನಾರ್ಹ.ಈ ಹಿನ್ನೆಲೆಯಲ್ಲಿ ಅವರು ಅಂದು ʼ ಅನುರಾಗ ಸಂಗಮʼ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ನಟ ಕುಮಾರ್ ಗೋವಿಂದ್.
ವಿನೋದ್ ಪ್ರಭಾಕರ್ ಸದ್ಯಕ್ಕೆ ಸುದ್ದಿಯಲ್ಲಿರುವ ಹೀರೋ..!
-ಹೌದು, ಈ ಮಾತು ಹೇಳೋಕೆ ಕಾರಣ, ದರ್ಶನ್ ಅಭಿನಯದ “ರಾಬರ್ಟ್” ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಕೂಡ ಮುಖ್ಯ ಆಕರ್ಷಣೆ. ಈ ಚಿತ್ರ ಒಂದಷ್ಟು ನಿರೀಕ್ಷೆ ಕೂಡ ಮೂಡಿಸಿದೆ. “ನವಗ್ರಹ” ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ದರ್ಶನ್ ಜೊತೆ ನಟಿಸಿದ್ದರು. ಅದಾದ ಬಳಿಕ ಈಗ ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ನಿರ್ಮಾಣದ “ರಾಬರ್ಟ್” ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನವೇ ವಿನೋದ್ ಪ್ರಭಾಕರ್ ಅವರು, “ಲಂಕಾಸುರ” ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬವಿತ್ತು. ಕೊರೊನಾ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ, ತಮ್ಮ ಅಭಿಮಾನಿಗಳಿಗೂ ಕೇಕ್, ಹಾರ, ಇತ್ಯಾದಿ ಯಾವುದನ್ನೂ ತರಬಾರದು. ಸರಳವಾಗಿಯೇ ಸಂಭ್ರಮಿಸಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಓಗೊಟ್ಟ ಅಭಿಮಾನಿಗಳು ಇದ್ದಲ್ಲಿಯೇ ಸರಳವಾಗಿ ವಿನೋದ್ ಪ್ರಭಾಕರ್ ಹುಟ್ಟುಹಬ್ಬ ಆಚರಿಸಿ, ಶುಭಕೋರಿದ್ದರು.
ಇನ್ನು, ವಿನೋದ್ ಪ್ರಭಾಕರ್ ಹುಟ್ಟುಹಬ್ಬದಂದು ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಿದ್ದು ವಿಶೇಷ.
“ಲಂಕಾಸುರ” ಇದು ವಿನೋದ್ ಪ್ರಭಾಕರ್ ಅವರ ಹೊಸ ಚಿತ್ರದ ಹೆಸರು. ಬರ್ತ್‌ಡೇಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದಂದು ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಅವರು ಈಗ ವಿನೋದ್ ಪ್ರಭಾಕರ್ ಅವರಿಗೆ “ಲಂಕಾಸುರ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ “ಎ೨” ಚಾನೆಲ್ ಮೂಲಕ “ಲಂಕಾಸುರ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಬಿಡುಗಡೆಗೊಂಡ ಕೇವಲ ಮೂರು ದಿನಗಳಲ್ಲಿ ೧೫೦ಕೆ ವೀಕ್ಷಣೆಗೊಂಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಹೆಮ್ಮೆ ಎನಿಸಿದೆ. ವಿಜೇತ್ ಕೃಷ್ಣ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಸುಜ್ಞಾನ್ ಕ್ಯಾಮೆರಾ ಹಿಡಿಯಲಿದ್ದಾರೆ.
ಸದ್ಯಕ್ಕೆಭಾರತೀಯ ಚಿತ್ರರಂಗದಮಟ್ಟಿಗೆ ಹೇಳುವುದಾದರೆ, ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಹೆಚ್ಚು ಕುತೂಹಲ ಮೂಡಿಸಿದ ಚಿತ್ರ ಕೆಜಿಎಫ್ ಭಾಗ 2 . ಅದಕ್ಕೆ ಕಾರಣ, ಅದರ ಮೊದಲ ಭಾಗದ ಬಹು ದೊಡ್ಡ ಯಶಸ್ಸು. ಸದ್ಯಕ್ಕೆ “ಕೆಜಿಎಫ್ ಭಾಗ-2”
ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟಾಗಿಯೂ ಈ ಚಿತ್ರದ ಒಂದೇ ಅಧಿಕೃತ ಲುಕ್ ಬಿಡುಗಡೆ ಆಗಿರಲಿಲ್ಲ.
ಆದರೆ ಇದೇ ಮೊದಲು ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರದ ಒಂದು ಹೊಸ ಲುಕ್ ರಿವೀಲ್ ಮಾಡಿದ್ದಾರೆ. ಇದನ್ನು ಖ್ಯಾತ ಛಾಯಾಗ್ರಾಹಕ ಭುವನ್ ಗೌಡ ಸೆರೆ ಹಿಡಿದಿದ್ದು, ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ಯಶ್, ಅದಕ್ಕೊಂದು ವಿವರಣೆ ಕೂಡ ಕೊಟ್ಟಿದ್ದಾರೆ.
ಚಿತ್ರ ತಂಡದ ಭವಿಷ್ಯಕ್ಕೆ ಸಿನಿಮಾ ನಿರ್ಮಾಣ ಮಾಡಿದೆ ಅಂದ ನಾನೊಂಥರ ನಿರ್ಮಾಪಕಿ
ಹಣ ಮಾಡ್ಬೇಕು ಅನ್ನೋದಲ್ಲ, ನನ್ನಿಂದ ಒಂದಷ್ಟು ಜನರಿಗೆ ಉಪಯೋಗ ಆಗುತ್ತೆ ಅನ್ನೋದೇ ‘ ನಾನೊಂಥರ’ ಹೆಸರಿನ ಚಿತ್ರ ನಿರ್ಮಾಣ ಮಾಡಿದ್ದಕ್ಕೆ ಇರೋ ಮುಖ್ಯ ಕಾರಣ…
ವೃತ್ತಿಯಲ್ಲಿ ನೀವು ವೈದ್ಯರು. ಅಲ್ಲಿಯೇ ಸಾಕಷ್ಟು ಕೆಲಸ, ಕೈ ತುಂಬಾ ಸಂಪಾದನೆಯಿದೆ. ಅಷ್ಟಾಗಿಯೂ ಈ ಸಿನಿ ದುನಿಯಾಕ್ಕೆ ನಿರ್ಮಾಪಕರಾಗಿ ಯಾಕೆ ಬಂದ್ರಿ ಎನ್ನುವ ಪ್ರಶ್ನೆಗೆ ಡಾ.ಜಾಕ್ಲಿನ್ ಫ್ರಾನ್ಸಿಸ್ ಕೊಟ್ಟ ಉತ್ತರ ಹೀಗಿತ್ತು.
ಅಂದ ಹಾಗೆ, ‘ನಾನೊಂಥರ’ ಅನ್ನೋದು ಹೊಸಬರ ಚಿತ್ರ. ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಸೇರಿದಂತೆ ಎಲ್ಲರೂ ಹೊಸಬರು. ಸಿನಿಮಾ ಮೇಲಿನ ಆಸಕ್ತಿಯಿಂದ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ. ಡಿಸೆಂಬರ್ 18 ಕ್ಕೆ ತೆರೆಗೆ ಬರುತ್ತಿದೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರವು ಕಳೆದ ಮಾರ್ಚ್ ತಿಂಗಳಲ್ಲೆ ತೆರೆಗೆ ಬರಬೇಕಿತ್ತು. ಇನ್ನೇನು ಚಿತ್ರ ತಂಡವು ತಾವು ರಿಲೀಸ್ ಗೆ ರೆಡಿ ಎಂದು ಅನೌನ್ಸ್ ಮಾಡುವ ಹೊತ್ತಿಗೆ ಕೊರೋನಾ ಬಂತು. ಚಿತ್ರರಂಗ ಬಂದ್ ಆಯ್ತು. ಪರಿಣಾಮ ಈಗ ‘ನಾನೊಂಥರ ‘ ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ‘ ಆಕ್ಟ್ 1978’ ಚಿತ್ರ ಬಿಡುಗಡೆ ಆಗಿ ದೊಡ್ಡ ಸಕ್ಸಸ್ ಕಂಡ ಬೆನ್ನಲೇ ‘ ‘ನಾನೊಂಥರ ‘ ಚಿತ್ರವು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಡಾ.ಜಾಕ್ಲಿನ್ ಫ್ರಾನ್ಸಿಸ್ ಚಿತ್ರದ ವಿಶೇಷತೆ ಜತೆಗೆ ತಮ್ಮ ಹಿನ್ನೆಲೆ ಕುರಿತು’ ಸಿನಿಲಹರಿ ‘ಜತೆಗೆ ಮಾತನಾಡಿದರು.
ಜೈ ಸನ್, ಡಾ. ಜಾಕ್ಲಿನ್ ಫ್ರಾನ್ಸಿಸ್
ಬಾಲ್ಯದಿಂದಲೂ ಇತ್ತು ಸಿನಿಮಾ ನಂಟು…
ನಾನೀಗ ವೃತ್ತಿಯಲ್ಲಿ ವೈದ್ಯೆ. ಆದರೆ ಸಿನಿಮಾ ಅನ್ನೊದು ನನಗೆ ಬಾಲ್ಯದಿಂದಲೂ ಇರುವ ನಂಟು. 8 ನೇ ತರಗತಿಯಲ್ಲಿ ದ್ದಾಗಲೇ ನಾನು ರಾಜ್ ಕುಮಾರ್ ಅಭಿನಯದ’ ಧ್ರುವತಾರೆ ‘ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದೆ. ಅದು ಅಮ್ಮನ ಕಾರಣಕ್ಕೆ. ಯಾಕಂದ್ರೆ, ನನ್ನಮ್ಮನಿಗೆ ನಾನು ನಟಿಯಾಗಬೇಕೆನ್ನುವ ಹುಚ್ಚು. ಅದಕ್ಕೆಕಾರಣ ಬಟ್ಟೆ ಮೇಲೆ ನನಗಿದ್ದ ಮೋಹ. ತುಂಬಾ ಬಟ್ಟೆ ತೊಡುತ್ತಿದೆ. ಚಂದದ ಬಟ್ಟೆ ಕಂಡ್ರೆ ಅವುಗಳನ್ನು ಕೊಂಡು ತಂದುತೊಡುವುದು, ಶಾಲೆಗಳಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನೋಡಿ, ನೀನು ನಟಿ ಆಗ್ಬೇಕು ಎನ್ನುತ್ತಿದ್ದರು. ಆಗಲೇ ಧ್ರುವತಾರೆ ಸಿನಿಮಾಕ್ಕೆ ಬಾಲನಟಿಯಾಗಲು ಆಡಿಷನ್ಸ್ ಗೆ ಹೋದೆ. ಅದೃಷ್ಟವಶಾತ್ ಅಲ್ಲಿ ಆಯ್ಕೆಯಾದೆ . ರಾಜಕುಮಾರ್ ಸೇರಿದಂತೆದೊಡ್ಡ ಕಲಾವಿದರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು.ಅ ಹೊತ್ತಿಗೆ ನನ್ನ ಅಮ್ಮನ ಆಸೆ ಕೂಡ ಈಡೇರಿತು.ಮುಂದೆ ಓದು ನನ್ನ ಟಾರ್ಗೆಟ್ ಆಯಿತು. ಅಂದುಕೊಂಡಂತೆ ಮೆಡಿಕಲ್ ಓದಿ ಡಾಕ್ಟರ್ ಆದೆ.
ಚಿತ್ರದ ನಾಯಕ ತಾರಕ್, ನಾಯಕಿ ರಕ್ಷಿಕಾ
ಕತೆಗಿಂತ ಅವರ ಭವಿಷ್ಯ ಮುಖ್ಯ ಎನಿಸಿತು…
‘ನಾನೊಂಥರ ‘ ಒಂದೊಳ್ಳೆಯ ಕಥಾ ಹಂದರದ ಚಿತ್ರ.ಒಂದಿನ ನಿರ್ದೇಶಕ ರಮೇಶ್ ಹಾಗೂ ನಾಯಕ ನಟ ತಾರಕ್ ಮಿಟ್ ಮಾಡಿ ಕತೆ ಹೇಳಿದ್ರು. ಕತೆ ಹಾರ್ಟ್ ಗೆ ಟಚ್ ಆಗುವ ಹಾಗಿತ್ತು. ನಿರ್ಮಾಣಕ್ಕೆ ಬಂಡವಾಳ ಹಾಕಿದರೆ ನಷ್ಟ ಇಲ್ಲ ಅಂತೆನಿಸಿತು. ಪ್ರೇಕ್ಷಕರಿಗೂ ಒಂದೊಳ್ಳೆಯ ಸಿನಿಮಾಕೊಟ್ಟ ತೃಪ್ತಿ ಸಿಗಬಹುದು ಅಂತೆನಿಸಿತು.ಅದಕ್ಕಿಂತ ಮುಖ್ಯವಾಗಿ ನನಗೆ ಏನೇನೋ ಕನಸು ಹೊತ್ತು ಬಂದ ನಿರ್ದೇಶಕ ರಮೇಶ್ ಹಾಗೂ ನಾಯಕನಟ ತಾರಕ್ ಅವರ ಭವಿಷ್ಯವೂ ಮುಖ್ಯ ಎನಿಸಿತು. ಅವರ ಕನಸಿಗೆ ಬೆಂಬಲವಾಗಿ ನಿಂತರೆ ಮುಂದೆ ಅವರು ಉನ್ನತ ಹಂತಕ್ಕೆ ಹೋಗಬಹುದು ಅಂತೆನಿಸಿತು. ಹಾಗಾಗಿ ಹಿಂದು ಮುಂದುನೋಡದೆ ಈಸಿನಿಮಾಕ್ಕೆ ಬಂಡವಾಳ ಹಾಕುತ್ತೇನೆ ಅಂತ ಮಾತುಕೊಟ್ಟೆ.ಅಲ್ಲಿಂದ ವೈದ್ಯಕೀಯ ಕ್ಷೇತ್ರದಲ್ಲಿದ್ದ ನಾನು ಸಿನಿಮಾ ನಿರ್ಮಾಪಕಿ ಎನ್ನುವ ಜವಾಬ್ದಾರಿ ಹೊತ್ತಿಕೊಂಡೆ.
ತಾರಕ್
ಎಲ್ಲರಿಗೂ ಇಷ್ಟವಾಗುವ ಸಿನಿಮಾ…
‘ನಾನೊಂಥರ’ ಎಲ್ಲರಿಗೂ ಇಷ್ಟವಾಗುವ ಸಿನಿಮಾ. ನಮ್ಮಸಿನಿಮಾ ಎನ್ನುವ ಪ್ರೀತಿ, ಕಾಳಜಿ ಅಥವಾ ವ್ಯಾಮೋಹಕ್ಕೆ ನಾನೀ ಮಾತು ಹೇಳುತ್ತಿಲ್ಲ, ಇದರ ಕತೆಯೇ ಹಾಗಿದೆ. ಒಬ್ಬ ಕುಡುಕ ಗಂಡ, ಜವಾಬ್ದಾರಿಯುತ ಹೆಂಡತಿ ಸುತ್ತಲ ಕತೆ ಪ್ರತಿಯೊಬ್ಬ ರ ಫ್ಯಾಮಿಲಿಗೂ ಕನೆಕ್ಟ್‌ಆಗುತ್ತೆ.ಅಲ್ಲಿ ಅದಷ್ಟೇ ಇಲ್ಲ. ಮಗನಿಗಾಗಿ ಪರಿತಪಿಸುವ ತಂದೆ, ಕಟ್ಟಿಕೊಂಡವನನ್ನು ಸರಿ ದಾರಿಗೆ ತರಲು ಪರದಾಡುವ ಹುಡುಗಿ, ಅಣ್ಣನಿಗಾಗಿ ಎಲ್ಲವನ್ನು ತ್ಯಾಗ ಮಾಡಿ ನಿಲ್ಲುವ ಸಹೋದರ.. ಹೀಗೆ ಪ್ರತಿ ಪಾತ್ರಗಳು ಅಲ್ಲಿ ಹೈಲೈಟ್ಸ್. ಇಂತಹದೊಂದು ಸಿನಿಮಾ ಮಾಡಿ, ಚಿತ್ರ ಮಂದಿರಕ್ಕೆ ತರುತ್ತಿರುವ ನಮಗೆ ಇಲ್ಲಿ ಎಲ್ಲವೂ ಹೊಸದು.ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ? ಚಿತ್ರ ತಂಡದ ಮುಂದಿನ ಭವಿಷ್ಯವೇನು? ಒಂಥರ ಆತಂಕ, ಇನ್ನೊಂದೆಡೆ ಚಿತ್ರ ಚೆನ್ನಾಗಿದೆ ಎನ್ನುವ ನಂಬಿಕೆ.
ಮಗ ಜೈಸನ್ ಮುಂದೆ ಹೀರೋ...
ಅದು ರಕ್ತಗತ ನಂಟೋ ಏನೋ ಗೊತ್ತಿಲ್ಲ. ನಾನು ಬಾಲ್ಯದಲ್ಲಿದ್ದಾಗ ನಾನುನಟಿ ಆಗ್ಬೇಕು ಅನ್ನೊದುನನ್ನಮ್ಮನಆಸೆ ಆಗಿತ್ತು. ಅದೇ ಕಾರಣಕ್ಕೆ ನಾನು ಆಡಿಷನ್ಸ್ ಗೆ ಹೋಗಿ ಬಾಲ ನಟಿಆಗಿ ಅಭಿನಯಿಸಿದೆ.ಈಗ ನನ್ನಮಗ ಕೂಡ ನಟನಾಗಿ ನಿಮ್ಮಮುಂದೆ ಬರುತ್ತಿದ್ದಾನೆ. ಹಾಗಂತ ಆತ ನಟ ಆಗ್ಬೇಕು ಅನ್ನೋದು ನನ್ನಾಸೆ ಅಲ್ಲ. ಒತ್ತಡವೂ ಇಲ್ಲ. ಅದು ಆತನ ಆಸೆ. ಒಬ್ಬ ತಾಯಿಯಾಗಿ ನಾನೀಗ ಆತನ ಆಸೆ ಈಡೇರಿಸುತ್ತಿದ್ದೇನೆ. ಈ ಚಿತ್ರದಲ್ಲಿಆತ ನಾಯಕನ ಸಹೋದರ. ಆತನವಯಸ್ಸಿಗೆ ಅದೊಂದುಒಳ್ಳೆಯ ಪಾತ್ರ.ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಎಲ್ಲರಿಗೂ ಇಷ್ಟವಾಗಿದೆ.ಒಳ್ಳೆಯ ಕಲಾವಿದ ಆಗ್ತಾನೆ ಅಂತ ಚಿತ್ರತಂಡ ಬೆನ್ನು ತಟ್ಟಿದೆ. ಮುಂದೆ ಆತನನ್ನು ಹೀರೋಆಗಿಪರಿಚಯಿಸಬೇಕೆನ್ನುವ ಹಂಬಲ ನಮಗೂ ಇದೆ. ಎಲ್ಲದಕ್ಕೂ ಪ್ರೇಕ್ಷಕರ ಅಶೀರ್ವಾದ ಬೇಕು.
ಬಹು ದಿನಗಳ ನಂತರ ನಾನೂ ಬಣ್ಣ ಹಚ್ಚಿದೆ…
ನಾನೊಂಥರ ಸಿನಿಮಾ ನನ್ನ ಮಟ್ಟಿಗೆ ಅತೀಮುಖ್ಯ. ಯಾಕಂದ್ರೆ ಬಹು ದಿನಗಳನಂತರ ನಾನಗೂ ಸಿನಿಮಾ ಜಗತ್ತಿಗೂ ಇದ್ದ ನಂಟು ನೆನಪಿಸಿತು.ಹಾಗೆಯೇ ಪುತ್ರ ಕೂಡ ನಟನಾಗಿ ಪರಿಚಯವಾಗುತ್ತಿದ್ದಾನೆ.ಅದರ ಜತೆಗೆಯೇ ಹಲವು ವರ್ಷಗಳ ನಂತರ ನಾನೂ ಕೂಡ ಇಲ್ಲಿ ಬಣ್ಣ ಹೆಚ್ಚಿದೆ. ಅದೊಂದು ಚಿಕ್ಕ ಪಾತ್ರ. ಚರ್ಚ್ ನ ಮದರ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನನಗೆ ಖುಷಿ ನೀಡುವ ಹಾಗೆ ಅಭಿನಯಿಸಿದ್ದೇನೆ ಎನ್ನುವ ನಂಬಿಕೆ ಇದೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.
ಪ್ರೇಕ್ಷಕರ ಆಶೀರ್ವಾದ ವೇ ನಮಗೆ ಮುಖ್ಯ…
ಹಣ ಮಾಡ್ಬೇಕು ಅಂತ ನಾನು ಈ ಸಿನಿಮಾಮಾಡಿಲ್ಲ. ತಂಡ ಭವಿಷ್ಯ ಚೆನ್ನಾಗಿರಲಿ ಅಂತ ಹಣ ಹಾಕಿದ್ದೇನೆ.ಇದು ಕೈ ಗೂಡಬೇಕಾದರೆ ಜನರ ಆಶೀರ್ವಾದ ಬೇಕು.ಹಾಗಂತ ಸಿನಿಮಾಕೆಟ್ಟದ್ದಾಗಿದ್ದರೂ ಬಂದು ಸಿನಿಮಾ ನೋಡಿ ಅಂತ ಹೇಳಲಾರೆ.ಸಿನಿಮಾ ಚೆನ್ನಾಗಿದೆ.ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೇ ಅದಕ್ಕೆ ಕಾರಣ.
ಈ ಸಿನಿಮಾ ಅಂದರೇನೆ ಹಾಗೆ. ಕಪ್ಪು ಬಿಳಿ ಕಣ್ಣಿನಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನೂ ಇಲ್ಲಿ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಅಂಥದ್ದೊಂದು ಕನಸಿನೊಂದಿಗೆ ಈ ಸಿನಿರಂಗವನ್ನು ಅಪ್ಪಿಕೊಂಡಿದ್ದಾರೆ. ಚಿತ್ರರಂಗ ಕೂಡ ಕೆಲವರನ್ನು ಒಪ್ಪಿಕೊಂಡಿದೆ.
ಅಂತಹ ಬಣ್ಣದ ಕನಸು ನಂಬಿ ಬಂದವರ ಪೈಕಿ ಶ್ರೀಪ್ರಿಯಾ ಸಹ ಒಬ್ಬರು. ಇಷ್ಟಕ್ಕೂ ಯಾರು ಈ ಶ್ರೀಪ್ರಿಯಾ ಅಂದರೆ, ಈಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ನಟಿ. ಹೌದು, ಶ್ರೀಪ್ರಿಯಾ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರದೊಳಗಿನ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಹಾಗಾಗಿ ಶ್ರೀಪ್ರಿಯಾ ಅವರಿಗೀಗ ಮೊದಲ ಇನ್ನಿಂಗ್ಸ್ ನಲ್ಲೇ ಟ್ವೆಂಟಿ ಟ್ವೆಂಟಿ ಐಪಿಎಲ್ ಸೀರೀಸ್ ಗೆದ್ದಷ್ಟೇ ಖುಷಿ ಇದೆ. ಸದ್ಯ ತಮ್ಮ ಸಿನಿಪಯಣ ಕುರಿತು, ಶ್ರೀಪ್ರಿಯಾ ‘ಸಿನಿಲಹರಿ’ಜೊತೆ ಒಂದಷ್ಟು ಮಾತನಾಡಿದ್ದಾರೆ.
ಓವರ್ ಟು ಶ್ರೀಪ್ರಿಯಾ
‘ನಾನು ಮೂಲತಃ ಬೆಂಗಳೂರಿನ ಅಪ್ಪಟ ಕನ್ನಡದ ಹುಡುಗಿ. ಬೇಸಿಕಲಿ ನಾನೊಬ್ಬ ಎಂಜಿನಿಯರ್. ಅಷ್ಟೇ ಅಲ್ಲ, ಭರತನಾಟ್ಯ ಕಲಾವಿದೆ ಕೂಡ. ಚಿಕ್ಕಂದಿನಿಂದಲೂ ಭರತನಾಟ್ಯ ಕಲೆ ಮೇಲೆ ಅಪಾರ ಪ್ರೀತಿ ಇದೆ. ಕಲಾರಂಗದಲ್ಲೇ ಏನಾದರೊಂದು ಸಾಧಿಸಬೇಕೆಂಬ ಆಸೆ ಇತ್ತು. ಹಾಗಾಗಿ ನಾನು ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಕೂಡ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದೇನೆ. ಹಲವು ಭರತನಾಟ್ಯ ಕಾರ್ಯಕ್ರಮ ಕೂಡ ಕೊಟ್ಟಿದ್ದೇನೆ.
ಈಗಲೂ ಕೊಡುತ್ತಿದ್ದೇನೆ. ಇನ್ನು ಈ ಸಿನಿಮಾರಂಗದ ಮೇಲೆ ಆಸಕ್ತಿ ಹುಟ್ಟೋಕೆ ಕಾರಣ, ನಾನು ರಂಗಶಂಕರದಲ್ಲಿ ಮಾಡಿದ ನಾಟಕ ಕೆಲಸ. ಇದರ ನಡುವೆಯೇ ನಾನು ಮಾಡೆಲಿಂಗ್ ಕೂಡ ಶುರು ಮಾಡಿದೆ. ಅದಾದ ಮೇಲೆ ನಟನೆ ಮೇಲೂ ಆಸಕ್ತಿ ಇತ್ತು. ರಂಗಭೂಮಿಯಲ್ಲಿ ಹಲವು ನಾಟಕ ಪ್ರಯೋಗ ಮಾಡುತ್ತಲೆ ನಟನೆಯ ಮೇಲೆ ಹೆಚ್ಚು ಆಸಕ್ತಿ ತೋರಿದೆ. ಅಲ್ಲಿಂದಲೇ ಸಿನಿಮಾ ಮಾಡುವ ಆಸೆ ಹೆಚ್ಚಾಯ್ತು.
ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಡ್ತಾ ಇದ್ದೆ. ಹಾಗೆ ಒಂದು ಆಡಿಷನ್ ಮೂಲಕವೇ ‘ಒಂದು ಶಿಕಾರಿಯ ಕಥೆ’ ಸಿನಿಮಾಗೆ ಆಯ್ಕೆಯಾದೆ. ಆ ಚಿತ್ರದ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಲೀಡ್ ಪಾತ್ರ ನನ್ನದು. ಈಗಾಗಲೇ ಈ ಚಿತ್ರದ ಡಬ್ಬಿಂಗ್ ಮುಗಿದಿದೆ. “ಒಂದು ಶಿಕಾರಿಯ ಕಥೆ”ಯಲ್ಲಿ ಐದು ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬಳು. ಅಲ್ಲಿ ಕಥೆಯೇ ಎಲ್ಲವೂ ಆಗಿದೆ’ ಎಂದು ವಿವರ ಕೊಡುತ್ತಾರೆ ಶ್ರೀಪ್ರಿಯಾ.
ಇನ್ನು, ನಾನು ಚಿತ್ರರಂಗ ಪ್ರವೇಶಕ್ಕೂ ಮುನ್ನ “ಲಾಟರಿ” ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದೆ. ಆ ಚಿತ್ರ ಬೆಂಗಳೂರು ಇಂಟರ್‌ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಈಗ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೊರೊನಾ ಹಾವಳಿಯಿಂದಾಗಿ ಒಂದಷ್ಟು ಸಿನಿಮಾಗಳ ಮಾತುಕತೆ ಕೂಡ ಹಾಗೆಯೇ ನಿಂತಿತ್ತು. ಈಗ ಒಂದಷ್ಟು ಹೊಸ ಕಥೆಗಳು ಹುಡುಕಿ ಬರುತ್ತಿವೆ ಎನ್ನುವ ಶ್ರೀಪ್ರಿಯಾ, ಒಳ್ಳೆಯ ಕಥೆ, ಪಾತ್ರಗಳತ್ತ ಗಮನಹರಿಸುತ್ತಿದ್ದೇನೆ.
ಗ್ಲಾಮರ್ ಪಾತ್ರವಿದ್ದರೂ ಮಾಡ್ತೀನಿ. ಹಾಗಂತ ವಿನಾಕಾರಣ, ಗ್ಲಾಮರ್ ಬೇಡ ಅಂತಲ್ಲ, ಅದರೊಂದಿಗೆ ನಟನೆಗೂ ಅವಕಾಶ ಇರಬೇಕು. “ಒಂದು ಶಿಕಾರಿಯ ಕಥೆ” ಸಿನಿಮಾ ನೋಡಿದವರು ಗುರುತ್ತಿಸುತ್ತಿದ್ದಾರೆ. ಹಾಗೆ ಮನಸ್ಸಲ್ಲಿ ಉಳಿಯುವ ಪಾತ್ರ ಸಿಗಬೇಕು. ಕಥೆ ಡಿಮ್ಯಾಂಡ್ ಮಾಡಿದರೆ, ಮಾತ್ರ ಗ್ಲಾಮರ್ ಪಾತ್ರಕ್ಕೆ ಒಪ್ಪುತ್ತೇನೆ ಎಂದು ಹೇಳುವ ಅವರು, ಈ ರಂಗ ಆಯ್ಕೆ ಮಾಡಿಕೊಂಡಿದ್ದು ಈಗ ಖುಷಿ ಎನಿಸಿದೆ.
ಮನೆಯಲ್ಲೂ ಸಹಕಾರವಿದೆ. ಮೊದ ಮೊದಲು ಈ ರಂಗ ಪ್ರವೇಶಿಸಿದಾಗ, ಹೇಗೋ ಏನೋ ಎಂಬ ಭಯವಿತ್ತು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಭಯ ದೂರವಾಗಿದೆ. ಇಲ್ಲಿ ಪ್ರತಿಭೆಯಷ್ಟೇ ಅಲ್ಲ, ಜೊತೆಯಲ್ಲಿ ಅದೃಷ್ಟವೂ ಇರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೇ ಇರಬೇಕು. ಇಲ್ಲೇ ಗಟ್ಟಿನೆಲೆ ಕಾಣುವ ಆಸೆ ಇದೆ” ಎನ್ನುತ್ತಾರೆ ಶ್ರೀಪ್ರಿಯಾ.
ಕನ್ನಡದಲ್ಲಿ ಹೊಸಬರ “ಪದವಿಪೂರ್ವ” ಸಿನಿಮಾ ಸೆಟ್ಟೇರಿದ್ದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಯಶಾ ಶಿವಕುಮಾರ್ ನಾಯಕಿ ಅನ್ನೋದ್ದನ್ನೂ ಹೇಳಲಾಗಿತ್ತು. ಯಶಾ ಶಿವಕುಮಾರ್ ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿರುವುದು ವಿಶೇಷ.
Processed with VSCO with al3 preset
ಹೌದು, ಯಶಾ ಶಿವಕುಮಾರ್, ಅಭಿನಯಿಸುತ್ತಿರುವ ಚಿತ್ರ “ಶಿವಪ್ಪ”. ಈ ಸಿನಿಮಾದಲ್ಲಿ ಶಿವರಾಜಕುಮಾರ್ ಹೀರೋ. ಅವರೊಂದಿಗೆ “ಡಾಲಿ” ಧನಂಜಯ್ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್ ಅವರಿಗೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. “ಡಾಲಿ” ಧನಂಜಯ್ ಅವರಿಗೆ ನಾಯಕಿಯಾಗಿ ಈಗ ಯಶಾ ಶಿವಕುಮಾರ್ ನಟಿಸುತ್ತಿದ್ದಾರೆ.
ಸದ್ಯಕ್ಕೆ “ಶಿವಪ್ಪʼ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದೇವೆ.
Processed with VSCO with al3 preset
ಇಡೀ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಶಿವರಾಜಕುಮಾರ್ ಮತ್ತು ಧನಂಜಯ್ ಅವರಿಬ್ಬರೂ “ಟಗರು” ಸಿನಿಮಾ ನಂತರ “ಶಿವಪ್ಪ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಶಶಿಕುಮಾರ್, ಉಮಾಶ್ರೀ ಇತರರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಅಕ್ಕಿ ರೊಟ್ಟಿಗೂ ಕೂರ್ಗ್ ನವರಿಗೂ ಬಿಡಿಸಲಾಗದ ನಂಟಿದೆ. ಅದರಲ್ಲೂ ಜಿನಿ ಜನಿ ಮಳೆಗಾಲದ ನಡುವೆ ಅಕ್ಕಿರೊಟ್ಟಿ- ಕೋಳಿ ಕರಿ ತಿಂತಿದ್ರೆ, ಎಂತಹ ಆನಂದ ಗೊತ್ತಾ? ಹೀಗಂತ ಒಂದ್ಸಲ ಬಾಯಿ ಚಪ್ಪರಿಸಿದ್ದು ಬೇರಾರು ಅಲ್ಲ ಸೌತ್ ಸೆನ್ಸೆಷನಲ್ ನಟಿ , ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ.
ಹಾಗಂತ ಅವರು ಹೇಳಿಕೊಂಡಿದ್ದು ಯೂವರ್ಸ್ ಲೈಫ್ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ. ಅಂದ ಹಾಗೆ ಇದು ಮೆಗಾ ಸ್ಟಾರ್ ಚಿರಂಜೀವಿ ಅವರ ಸೊಸೆ, ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಅವರು ಶುರುಮಾಡಿರೋ ಆನ್ ಲೈನ್ ಪ್ಲಾಟ್ ಫಾರ್ಮ್.
ಆರೋಗ್ಯ, ಲೈಫ್ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಅವರು, URLife.co.in ಹೆಸರಿನ ವಿನೂತನ ವೆಬ್ಸೈಟ್ ಮೂಲಕ ಹೇಳ ಹೊರಟಿದ್ದಾರೆ. ಈ ವೆಬ್ ಸೈಟ್ ಗೆ ಉಪಾಸನಾ ಅವರು ಮ್ಯಾನೇಜಿಂಗ್ ಡೈರೆಕ್ಟರ್ .
ಈ ಶೋನಲ್ಲಿ ಈಗ ಅತಿಥಿ ಸಂಪಾದಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಕೊಡಗಿನವರಿಗೂ , ಅಕ್ಕಿ ರೊಟ್ಟಿಗೂ ಇರುವ ನಂಟಿನ ಬಗ್ಗೆ ಹೇಳಿಕೊಂಡಿರುವುದು ವಿಶೇಷ. ಈ ಹಿಂದೆ ಇದಕ್ಕೆ ಅತಿಥಿಯಾಗಿ ಹೋಗಿದ್ದ ಕರ್ನಾಟಕದ ಕ್ರಷ್ ರಶ್ಮಿಕಾಮಂದಣ್ಣ , ಕೋಳಿ ಕರಿ ಶುಚಿ- ರುಚಿ ಕುರಿತು ಮಾತನಾಡಿದ್ದರು.ಈಗ ಮತ್ತೆ ಅಲ್ಲಿಗೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಅಕ್ಕಿ ರೊಟ್ಟಿ ನಂಟಿನ ಬಗ್ಗೆ ಹೇಳಿಕೊಂಡರು.
‘ ನಮ್ಮ ಮನೆಯಲ್ಲಿ ಬೆಳಗ್ಗೆಯೇ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೂರ್ಗಿಗಳಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟ’ ಎಂದರು ರಶ್ಮಿಕಾಮಂದಣ್ಣ.
ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್ ಪೂಜಾರ್ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್ ಪೂಜಾರ್, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಹನುಮಂತ್ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವಕುಮಾರ್ ಸ್ವಾಮಿ ಸಂಕಲನ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.