ಕಥೆ ಶಿಕಾರಿಯತ್ತ ಶ್ರೀಪ್ರಿಯಾ – ಭರತನಾಟ್ಯ ಪ್ರವೀಣೆಯ ಸಿನಿ ಪಯಣ

sripriya

ಎಂಜಿನಿಯರ್‌ ಹುಡುಗಿಯ ಕಲಾನಂಟು

ಈ ಸಿನಿಮಾ ಅಂದರೇನೆ ಹಾಗೆ. ಕಪ್ಪು ಬಿಳಿ ಕಣ್ಣಿನಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನೂ ಇಲ್ಲಿ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಅಂಥದ್ದೊಂದು ಕನಸಿನೊಂದಿಗೆ ಈ ಸಿನಿರಂಗವನ್ನು ಅಪ್ಪಿಕೊಂಡಿದ್ದಾರೆ. ಚಿತ್ರರಂಗ ಕೂಡ ಕೆಲವರನ್ನು ಒಪ್ಪಿಕೊಂಡಿದೆ.

ಅಂತಹ‌ ಬಣ್ಣದ ಕನಸು ನಂಬಿ ಬಂದವರ ಪೈಕಿ ಶ್ರೀಪ್ರಿಯಾ ಸಹ ಒಬ್ಬರು. ಇಷ್ಟಕ್ಕೂ ಯಾರು ಈ ಶ್ರೀಪ್ರಿಯಾ ಅಂದರೆ, ಈಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ನಟಿ. ಹೌದು, ಶ್ರೀಪ್ರಿಯಾ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರದೊಳಗಿನ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಹಾಗಾಗಿ ಶ್ರೀಪ್ರಿಯಾ ಅವರಿಗೀಗ ಮೊದಲ ಇನ್ನಿಂಗ್ಸ್ ನಲ್ಲೇ ಟ್ವೆಂಟಿ ಟ್ವೆಂಟಿ ಐಪಿಎಲ್ ಸೀರೀಸ್ ಗೆದ್ದಷ್ಟೇ ಖುಷಿ ಇದೆ. ಸದ್ಯ ತಮ್ಮ ಸಿನಿಪಯಣ ಕುರಿತು, ಶ್ರೀಪ್ರಿಯಾ ‘ಸಿನಿಲಹರಿ’ಜೊತೆ ಒಂದಷ್ಟು ಮಾತನಾಡಿದ್ದಾರೆ.

 

ಓವರ್ ಟು ಶ್ರೀಪ್ರಿಯಾ
‘ನಾನು ಮೂಲತಃ ಬೆಂಗಳೂರಿನ ಅಪ್ಪಟ ಕನ್ನಡದ ಹುಡುಗಿ. ಬೇಸಿಕಲಿ ನಾನೊಬ್ಬ ಎಂಜಿನಿಯರ್. ಅಷ್ಟೇ ಅಲ್ಲ, ಭರತನಾಟ್ಯ ಕಲಾವಿದೆ ಕೂಡ. ಚಿಕ್ಕಂದಿನಿಂದಲೂ ಭರತನಾಟ್ಯ ಕಲೆ‌ ಮೇಲೆ ಅಪಾರ ಪ್ರೀತಿ ಇದೆ. ಕಲಾರಂಗದಲ್ಲೇ ಏನಾದರೊಂದು ಸಾಧಿಸಬೇಕೆಂಬ ಆಸೆ ಇತ್ತು. ಹಾಗಾಗಿ ನಾನು ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಕೂಡ‌ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದೇನೆ. ಹಲವು ಭರತನಾಟ್ಯ ಕಾರ್ಯಕ್ರಮ ಕೂಡ ಕೊಟ್ಟಿದ್ದೇನೆ.

ಈಗಲೂ ಕೊಡುತ್ತಿದ್ದೇನೆ. ಇನ್ನು‌ ಈ ಸಿನಿಮಾರಂಗದ ಮೇಲೆ ಆಸಕ್ತಿ ಹುಟ್ಟೋಕೆ ಕಾರಣ, ನಾನು ರಂಗಶಂಕರದಲ್ಲಿ ಮಾಡಿದ‌ ನಾಟಕ ಕೆಲಸ. ಇದರ ನಡುವೆಯೇ ನಾನು‌ ಮಾಡೆಲಿಂಗ್ ಕೂಡ ಶುರು ಮಾಡಿದೆ. ಅದಾದ ಮೇಲೆ ನಟನೆ‌ ಮೇಲೂ ಆಸಕ್ತಿ ಇತ್ತು. ರಂಗಭೂಮಿಯಲ್ಲಿ ಹಲವು ನಾಟಕ‌ ಪ್ರಯೋಗ ಮಾಡುತ್ತಲೆ ನಟನೆಯ ಮೇಲೆ ಹೆಚ್ಚು ಆಸಕ್ತಿ ತೋರಿದೆ. ಅಲ್ಲಿಂದಲೇ ಸಿನಿಮಾ ‌ಮಾಡುವ ಆಸೆ ಹೆಚ್ಚಾಯ್ತು.

ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಡ್ತಾ ಇದ್ದೆ. ಹಾಗೆ ಒಂದು ಆಡಿಷನ್ ಮೂಲಕವೇ ‘ಒಂದು ಶಿಕಾರಿಯ ಕಥೆ’ ಸಿನಿಮಾಗೆ ಆಯ್ಕೆಯಾದೆ. ಆ ಚಿತ್ರದ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಲೀಡ್ ಪಾತ್ರ ನನ್ನದು. ಈಗಾಗಲೇ ಈ ಚಿತ್ರದ ಡಬ್ಬಿಂಗ್ ಮುಗಿದಿದೆ. “ಒಂದು ಶಿಕಾರಿಯ ಕಥೆ”ಯಲ್ಲಿ ಐದು ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬಳು. ಅಲ್ಲಿ ಕಥೆಯೇ ಎಲ್ಲವೂ ಆಗಿದೆ’ ಎಂದು ವಿವರ ಕೊಡುತ್ತಾರೆ ಶ್ರೀಪ್ರಿಯಾ.

ಇನ್ನು, ನಾನು ಚಿತ್ರರಂಗ ಪ್ರವೇಶಕ್ಕೂ ಮುನ್ನ “ಲಾಟರಿ” ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದೆ. ಆ ಚಿತ್ರ ಬೆಂಗಳೂರು ಇಂಟರ್‌ನ್ಯಾಷನಲ್‌ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಈಗ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೊರೊನಾ ಹಾವಳಿಯಿಂದಾಗಿ ಒಂದಷ್ಟು ಸಿನಿಮಾಗಳ ಮಾತುಕತೆ ಕೂಡ ಹಾಗೆಯೇ ನಿಂತಿತ್ತು. ಈಗ ಒಂದಷ್ಟು ಹೊಸ ಕಥೆಗಳು ಹುಡುಕಿ ಬರುತ್ತಿವೆ ಎನ್ನುವ ಶ್ರೀಪ್ರಿಯಾ, ಒಳ್ಳೆಯ ಕಥೆ, ಪಾತ್ರಗಳತ್ತ ಗಮನಹರಿಸುತ್ತಿದ್ದೇನೆ.

ಗ್ಲಾಮರ್‌ ಪಾತ್ರವಿದ್ದರೂ ಮಾಡ್ತೀನಿ. ಹಾಗಂತ ವಿನಾಕಾರಣ, ಗ್ಲಾಮರ್‌ ಬೇಡ ಅಂತಲ್ಲ, ಅದರೊಂದಿಗೆ ನಟನೆಗೂ ಅವಕಾಶ ಇರಬೇಕು. “ಒಂದು ಶಿಕಾರಿಯ ಕಥೆ” ಸಿನಿಮಾ ನೋಡಿದವರು ಗುರುತ್ತಿಸುತ್ತಿದ್ದಾರೆ. ಹಾಗೆ ಮನಸ್ಸಲ್ಲಿ ಉಳಿಯುವ ಪಾತ್ರ ಸಿಗಬೇಕು. ಕಥೆ ಡಿಮ್ಯಾಂಡ್‌ ಮಾಡಿದರೆ, ಮಾತ್ರ ಗ್ಲಾಮರ್‌ ಪಾತ್ರಕ್ಕೆ ಒಪ್ಪುತ್ತೇನೆ ಎಂದು ಹೇಳುವ ಅವರು, ಈ ರಂಗ ಆಯ್ಕೆ ಮಾಡಿಕೊಂಡಿದ್ದು ಈಗ ಖುಷಿ ಎನಿಸಿದೆ.

ಮನೆಯಲ್ಲೂ ಸಹಕಾರವಿದೆ. ಮೊದ ಮೊದಲು ಈ ರಂಗ ಪ್ರವೇಶಿಸಿದಾಗ, ಹೇಗೋ ಏನೋ ಎಂಬ ಭಯವಿತ್ತು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಭಯ ದೂರವಾಗಿದೆ. ಇಲ್ಲಿ ಪ್ರತಿಭೆಯಷ್ಟೇ ಅಲ್ಲ, ಜೊತೆಯಲ್ಲಿ ಅದೃಷ್ಟವೂ ಇರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೇ ಇರಬೇಕು. ಇಲ್ಲೇ ಗಟ್ಟಿನೆಲೆ ಕಾಣುವ ಆಸೆ ಇದೆ” ಎನ್ನುತ್ತಾರೆ ಶ್ರೀಪ್ರಿಯಾ.

Related Posts

error: Content is protected !!