ನಟ ತಬಲನಾಣಿ ಅಂದ್ರೆ ಕನ್ನಡದ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ ಹಾಸ್ಯ ನಟರಾಗಿ. ಒಂದು ಸಿನಿಮಾದಲ್ಲಿ ಅವರಿದ್ದಾರೆಂದ್ರೆ ಅಲ್ಲಿ ಭರಪೂರ ಮನರಂಜನೆ ನೂರರಷ್ಟು ಖಚಿತ. ಅದಕ್ಕೆ ಸಾಕ್ಷಿ ಈಗಾಗಲೇ ಬಂದು ಹೋದ ಹಲವು ಸಿನಿಮಾ. ಅದರಲ್ಲೂ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದ ” ಕೆಮಿಸ್ಟ್ರಿ ಆಫ್ ಕರಿಯಪ್ಪ ʼ ಚಿತ್ರ. ಅದು ಅವರನ್ನು ಮತ್ತಷ್ಟು ಜನಪ್ರಿಯತೆ ಗೊಳಿಸಿದೆಯಂತೆ. ಈ ಚಿತ್ರ ಬಂದು ಹೋದ ನಂತರ ಬಹಳಷ್ಟು ಜನರು ಅವರನ್ನುಕೆಮಿಸ್ಟ್ರಿ ಕರಿಯಪ್ಪ ಅಂತಲೇ ಕರಿಯುತ್ತಾರಂತೆ. ಅದು ಅವರಿಗೂ ಒಂಥರ ಖುಷಿ ನೀಡಿದೆಯಂತೆ. ಅಷ್ಟೊಂದು ಜನಪ್ರಿಯತೆ ಅವರಿಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಸಿಕ್ಕಿದೆಯಂತೆ. ಅದರಾಚೆ ಅಲ್ಲಿಂದ ಅವರ ಸಿನಿ ಜರ್ನಿಯ ಕಥೆ ಏನಾಯ್ತು ಅನ್ನೋದೆ ಒಂದು ಇಂಟರೆಸ್ಟಿಂಗ್ ಕಥೆ ಇದೆಯಂತೆ. ಅದನ್ನ ಅವ್ರೇ ಹೇಳ್ತಾರೆ ಕೇಳಿ.
” ಒಂದು ಸಿನಿಮಾ ಗೆದ್ದರೆ, ಅದರಲ್ಲಿ ದುಡಿದವರೆಲ್ಲ ಬ್ಯುಸಿ ಆಗ್ತಾರೆ ಅಂತ ನಾನು ಚಿತ್ರೋದ್ಯಮಕ್ಕೆ ಬಂದಾಗಿನಿಂದ ಕೇಳುತ್ತಿದ್ದೆ. ಅದ್ಯಾಕೋ ನಂಗೆ ಅವತ್ತನಿಂದ ಅದು ನಿಜ ಅಂತ ಎನಿಸಿರಲಿಲ್ಲ. ಆದ್ರೆ ಅದು ನನ್ ಲೈಫ್ ನಲ್ಲೇ ನಿಜವಾಗಿದ್ದು “ಕೆಮಿಸ್ಟ್ರಿ ಆಫ್ ಕರಿಯಪ್ಪ ʼ ಚಿತ್ರ ಬಂದು ಹೋದ ನಂತರ. ಈ ಚಿತ್ರಕ್ಕೆ ಕನ್ನಡದ ಸಿನಿಮಾ ಪ್ರೇಕ್ಷಕರು ದೊಡ್ಡ ಸಕ್ಸಸ್ ಕೊಟ್ಟರು. ಹಾಗೆಯೇ ನಮಗೂ ಕೂಡ ಒಂದಷ್ಟು ಜನಪ್ರಿಯತೆ ಸಿಕ್ಕಿತು. ನಿಜ ಹೇಳ್ಬೇಕು ಅಂದ್ರೆ ಅದು ನನ್ನ ಟೈಟಲ್ ಕಾರ್ಡ್ ಬದಲಿಸಿತು. ಆ ಸಿನಿಮಾ ಬಂದು ಹೋದ ನಂತರ ಅಂತಹದೇ ಜಾನರ್ ನ ಸಿನಿಮಾಗಳು ಒಂದರ ಹಿಂದೆ ಒಂದು ಸರಣಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬಂದವು. ಆದರೆ ಒಳ್ಳೆಯ ಕಥೆಗಳು ನನ್ನ ಆದ್ಯತೆ ಗಿತ್ತು. ಅದನ್ನೇ ಇಟ್ಕೊಂಡ್ ಇಂದುವರೆಗೂ ಎಂಟು ಸಿನಿಮಾಗಳಿಗೆ ನಾನು ಕಾಲ್‌ಸೀಟ್ ಕೊಟ್ಟಿದ್ದೇನೆ. ಇದು ಅಲ್ವೇ ಒಂದು ಸಕ್ಸಸ್ ನ ಫಲ ಅಂದ್ರೆ. ನಿಜಕ್ಕೂ ಖುಷಿ ಆಗ್ತಿದೆ ʼ ಅಂತ ನಟ ತಬಲ ನಾಣಿ ʼಕ್ರಿಟಿಕಲ್ ಕೀರ್ತನೆಗಳು ʼ ಚಿತ್ರದ ಟ್ರೇಲರ್ ನ ಸಕ್ಸಸ್ ಮೀಟ್ ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.
ಅಂದ ಹಾಗೆ, ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ತಂಡದ ಮತ್ತೊಂದು ಚಿತ್ರವೇ ʼಕ್ರಿಟಿಕಲ್ ಕೀರ್ತನೆಗಳುʼ. ಕುಮಾರ್ ಈ ಸಿನಿಮಾದ ನಿರ್ದೇಶಕ. ಕೆಮಿಸ್ಟ್ರಿ ಸಿಕ್ಕ ದೊಡ್ಡ ಸಕ್ಸಸ್ ನಂತರ ತಾವೇ ಈ ಚಿತ್ರಕ್ಕೆ ಬಂಡವಾಳ ಹಾಕಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿದ್ದ ಬಹುತೇಕ ತಂಡವನ್ನೇ ಇಲ್ಲೂ ಮುಂದುವರೆಯುತ್ತೆ ಮಾಡಿದ್ದಾರೆ. ಅವರ ಪಯತ್ನದ ಬಗ್ಗೆ ಮಾತನಾಡಿದ ತಬಲ ನಾಣಿ, ಒಂದೊಳ್ಳೆಯ ತಂಡ ಇದ್ದಾಗ ಅದನ್ನು ಜೋಪಾನ ಮಾಡಿಕೊಂಡರೆ ಮತ್ತೊಂದು ಗೆಲವು ಕಾಣಬಹುದು. ಅದಕ್ಕೆ ಹಲವು ಸಿನಿಮಾ ಸಾಕ್ಷಿ ಆಗಿವೆ. ಕುಮಾರ್ ಅವರಲ್ಲಿ ಆ ಜಾಣತನ ಇದೆ. ಅದೇ ಕಾರಣಕ್ಕೆ ಈಗ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೇಲರ್ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಇದನ್ನು ಇತರರು ಪಾಲಿಸಲಿ ಅಂತ ಚಿತ್ರೋದ್ಯಮಕ್ಕೆ ಕಿವಿ ಮಾತು ಹೇಳಿದರು..
ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಮಯದಲ್ಲಿ ಇದು ದೊಡ್ಡ ಸುದ್ದಿಯೇ. ಹೌದು, “ರಾಬರ್ಟ್” ನಿರೀಕ್ಷೆಯಂತೆಯೇ, ದೊಡ್ಡ ಸಕ್ಸಸ್ ಕಂಡಿದೆ. ಎಲ್ಲರಲ್ಲೂ ಇದ್ದದ್ದು ಒಂದೇ ಒಂದು ಪ್ರಶ್ನೆ, ಈ ಸಿನಿಮಾ 100 ಕೋಟಿ ಕ್ಲಬ್ ಸೇರುತ್ತಾ ಅನ್ನೋದು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಹೌದು, “ರಾಬರ್ಟ್” ಚಿತ್ರ ಈಗ ನೂರು ಕೋಟಿ ಕ್ಲಬ್ ಸೇರಿದ್ದಾಗಿದೆ. ಕೇವಲ 20 ದಿನದಲ್ಲಿ ಈ ನೂರು ಕೋಟಿ ಗಳಿಕೆ ಕಂಡಿರೋದು ಸಹಜವಾಗಿಯೇ ಸಿನಿಮಾತಂಡಕ್ಕೆ ಖುಷಿ ಹೆಚ್ಚಿಸಿದೆ.
ಕೊರೊನಾ ನಂತರದ ದಿನಗಳಲ್ಲಿ ಚಿತ್ರರಂಗದ ಕಥೆ ಏನಪ್ಪಾ ಅಂದುಕೊಂಡೋರಿಗೆ ಈಗ “ರಾಬರ್ಟ್” ಧೈರ್ಯ ಕೊಟ್ಟಿರೋದು ಸುಳ್ಳಲ್ಲ. ಒಂದೊಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದರ್ಶನ್ ಸಿನಿಮಾ ಅಂದರೆ, ಒಂದಷ್ಟು ಜನರಿಗೆ ಕ್ರೇಜ್ ಇದ್ದೇ ಇರುತ್ತೆ. “ರಾಬರ್ಟ್” ಟೈಟಲ್ ಅನೌನ್ಸ್ ಮಾಡಿದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗಿದ್ದೇ ತಡ, ಎಲ್ಲರಲ್ಲೂ ಮತ್ತಷ್ಟು ಉತ್ಸಾಹ ಹೆಚ್ಚಿಸಿತ್ತು.
ಅವರ ಫ್ಯಾನ್ಸ್‌ಗಂತೂ “ರಾಬರ್ಟ್” ಭರ್ಜರಿ ಹಬ್ಬದೂಟದಂತಾಗಿತ್ತು. “ರಾಬರ್ಟ್”ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೆರೆದರು. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರರ್ದಶನ್ ಕಂಡಿತು. ಇನ್ನು, ತೆಲುಗಿನಲ್ಲೂ ಕೂಡ “ರಾಬರ್ಟ್” ದೊಡ್ಡ ಹವಾ ಎಬ್ಬಿಸಿದ್ದು ನಿಜ. ಅಲ್ಲೂ ಕೂಡ ದರ್ಶನ್ ಫ್ಯಾನ್ಸ್ ಸಿನಿಮಾವನ್ನು ಗೆಲ್ಲಿಸಿದರು.
ಕನ್ನಡದ ಮಟ್ಟಿಗೆ “ರಾಬರ್ಟ್” ಕೊರೊನಾ ಬಳಿಕ ದೊಡ್ಡ ಓಪನಿಂಗ್ ಕೊಟ್ಟಿದೆ. ಒಂದಷ್ಟು ಸಿನಿಮಾ ನಿರ್ಮಾಪಕರಿಗೂ ಅದು ಧೈರ್ಯ ಕೊಟ್ಟಿದೆ. ದರ್ಶನ್ ಗಲ್ಲಾ ಪೆಟ್ಟಿಗೆ ಸುಲ್ತಾನ್ ಅನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ. ಇದೇ ಖುಷಿಯಲ್ಲೇ “ರಾಬರ್ಟ್” ಚಿತ್ರತಂಡ ಇತ್ತೀಚೆಗೆ ಸಂಭ್ರಮ ಆಚರಿಸಿಕೊಂಡಿದೆ. ನಿರ್ದೇಶಕ ತರುಣ್ ಸುಧೀರ್,ನಿರ್ಮಾಪಕ ಉಮಾಪತಿ, ವಿನೋದ್ ಪ್ರಭಾಕರ್ ಸೇರಿದಂತೆ ಚಿತ್ರತಂಡದ ಹಲವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡದ ಬಹುತೇಕ ಸಿನಿಮಾಗಳು ಈಗಾಗಲೇ ಸಾಗರದಾಚೆಯೂ ಸದ್ದು ಮಾಡಿವೆ. ಮಾಡುತ್ತಲೇ ಇವೆ. ಈಗಲೂ ಅದೇ ಹಾದಿಯಲ್ಲೂ ಇವೆ. ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕನ್ನಡದ ಅನೇಕ ಸಿನಿಮಾಗಳ ಸಾಲಿಗೆ “ಅವಲಕ್ಕಿ ಪವಲಕ್ಕಿ” ಸಿನಿಮಾ ಕೂಡ ಸೇರಿದೆ. ಹೌದು, ರಾಜಸ್ತಾನ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ ಲಭಿಸಿದೆ.
ಮಾರ್ಚ್ 20 ರಿಂದ 24ರವರೆಗೆ ಜೈಪುರ್ ಮತ್ತು ಜೋದ್‌ಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಸಂದಿದೆ. ಈ ಚಿತ್ರೋತ್ಸವದಲ್ಲಿ ದೇಶ, ವಿದೇಶಗಳಿಂದಲೂ ಸಾಕಷ್ಟು ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಒಂದಷ್ಟು ಸಿನಿಮಾಗಳ ನಡುವೆಯೂ ಕನ್ನಡದ “ಅವಲಕ್ಕಿ ಪವಲಕ್ಕಿ” ಸಿನಿಮಾ ಕಥೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಅವಲಕ್ಕಿ ಪವಲಕ್ಕಿ” ಅಡ್ವೆಂಜರ್ ಡ್ರಾಮಾ ಕಥಾಹಂದರದ ಸಿನಿಮಾ. ದುರ್ಗ ಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯುವ ರಾಜು ಅವರ ಕಥೆ ಚಿತ್ರಕ್ಕಿದೆ. ಶ್ರೀಪ್ರಣವ ಬ್ಯಾನರ್‌ನಲ್ಲಿ ರಂಜಿತ ಸುಬ್ರಹ್ಮಣ್ಯ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ದೀಪಕ್ ಪಟೇಲ್, ಸಿಂಚನ ಚಂದ್ರ ಮೋಹನ್, ಸಮರ್ಥ್ ರಂಪುರ್ ಭಾರಧ್ವಜ್, ಶ್ರೇಯಾ, ಹನಮಂತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದುರ್ಗ ಪ್ರಸಾದ್, ನಿರ್ದೇಶಕ
ರಂಜಿತಾ,ನಿರ್ಮಾಪಕರು
ಜುಬಿನ್ ಪೌಲ್ ಸಂಗೀತವಿರುವ ಚಿತ್ರಕ್ಕೆ ನಿರೀಕ್ಷಿತ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಬರುವ ಏಪ್ರಿಲ್ ಅಥವಾ ಮೇನಲ್ಲಿ ತೆರೆಗೆ ಬರಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈಗಾಗಲೇ ಈ ಚಿತ್ರ ದೇಶ, ವಿದೇಶಗಳ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದೆ ಎಂಬ ಹೆಮ್ಮೆ ಚಿತ್ರತಂಡಕ್ಕಿದೆ. ಇಷ್ಟರಲ್ಲೇ ಟ್ರೇಲರ್ ಮತ್ತು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಚಿತ್ರದ ವಿಶೇಷತೆ ಬಗ್ಗೆ ಹೇಳಲೇಬೇಕು.
ನಿರೀಕ್ಷಿತ್, ಛಾಯಾಗ್ರಾಹಕ
ಈಗಾಗಲೇ ಈ ಚಿತ್ರ, ಸುಮಾರು ೩೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಲವು ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲಿ ಚಿತ್ರದ ಹಲವು ವಿಭಾಗಕ್ಕೆ ಪ್ರಶಸ್ತಿ ಸಂದಿದೆ. ಅತ್ಯುತ್ತಮ ನಿರ್ದೇಶ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್, ಛಾಯಾಗ್ರಾಹಕ, ಪೋಸ್ಟರ್, ಮ್ಯೂಸಿಕ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಅಮೆರಿಕಾ, ನ್ಯೂಯಾರ್ಕ್, ಸ್ವೀಡನ್, ಪೋರ್ಟ್ ಬ್ಲೈರ್, ಸ್ಲೊವಕಿಯಾ, ಟೊರೆಂಟೊ, ಪ್ಯಾರಿಸ್, ಈರೋಪ್, ಇಂಡೊ ಫ್ರೆಂಚ್, ಸಿಂಗಾಪುರ್ ಸೇರಿದಂತೆ ಇನ್ನೂ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈಗಾಗಲೇ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದೆ.
“ಕೆಮಿಸ್ಟ್ರಿ ಆಫ್ ಕರಿಯಪ್ಪʼ ಚಿತ್ರದ ಭರ್ಜರಿ ಸಕ್ಸಸ್ ನಂತರ ಯುವ ನಿರ್ದೇಶಕ ಕುಮಾರ್ ಆಕ್ಷನ್ ಕಟ್ ಹೇಳಿದ ಚಿತ್ರ ” ಕ್ರಿಟಿಕಲ್ ಕೀರ್ತನೆಗಳುʼ. ಅದೀಗ ಚಿತ್ರೀಕರಣ ಮುಗಿಸಿ, ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೀಗ ಟ್ರೇಲರ್ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಕೆಮಿಸ್ಟ್ರಿ ಕರಿಯಪ್ಪ ಚಿತ್ರ ನೋಡಿದವರಿಗೆ ನಿರ್ದೇಶಕ ಕುಮಾರ್ ಸಿನಿಮಾ ಮೇಕಿಂಗ್ ಶೈಲಿ ಗೊತ್ತಿದ್ದೇ ಇರುತ್ತೆ. ಕಾಮಿಡಿ ಮೂಲಕವೇ ಒಂದೊಳ್ಳೆಯ ಸಂದೇಶ ನೀಡುವ ಪ್ರಯತ್ನ ಕುಮಾರ್ ಸಿನಿಮಾ ಮೇಕಿಂಗ್ ಶೈಲಿಯಲ್ಲಿರುತ್ತದೆ. ಖಂಡಿತಾ ಇದು ಕೂಡ ಅದೇ ಜಾನರ್ ನ ಸಿನಿಮಾ ಅನ್ನೋದ್ರಲ್ಲಿ ನೋ ಡೌಟು. ಹಾಗಂತ “ಕೆಮಿಸ್ಟ್ರಿ ಕರಿಯಪ್ಪʼ ಚಿತ್ರದ ಮುಂದುವರೆದ ಭಾಗ ಇದಲ್ಲ. ಇದರ ಕಥಾ ಹಂದರವೇ ಬೇರೆ. ಐಪಿಎಲ್ ಬೆಟ್ಟಿಂಗ್‌ನ ಅವಾಂತರಗಳ ಸುತ್ತಲ ಕಥೆಯೇ “ಕ್ರಿಟಿಕಲ್ ಕೀರ್ತನೆಗಳುʼ ಚಿತ್ರ . ಇದರ ಒಂದಷ್ಟು ಹಿಟ್ಸ್ ಕೊಡುವ ಪ್ರಯತ್ನದಲ್ಲಿ ಚಿತ್ರದ ಟ್ರೇಲರ್ ಹೊರ ತಂದಿದ್ದಾರೆ ನಿರ್ದೇಶಕ ಕುಮಾರ್.
ಟ್ರೇಲರ್ ಸೋಷಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ನಾಲ್ಕುವರೆ ಲಕ್ಷ ವೀಕ್ಷಣೆ ಪಡೆದಿದೆ. ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡುತ್ತಿದೆ. ಈ ನಡುವೆಯೇ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಈ ಟ್ರೇಲರ್ ಮೆಚ್ಚಿಕೊಂಡು ಮಾತನಾಡಿದ್ದಾರೆ. ಶರಣ್, ವಸಿಷ್ಠ ಸಿಂಹ, ಶ್ರೀನಗರ ಕಿಟ್ಟಿ, ಸಂಜನಾ ಆನಂದ್, ರಿಷಿ, ಕುರಿ ಪ್ರತಾಪ್, ಸಿಂಗರ್ ಚಂದನ್ ಶೆಟ್ಟಿ, ಆಶಿಕಾ ರಂಗನಾಥ್, ರಾಜೇಶ್ ಬಿ. ಶೆಟ್ಟಿ , ರಿಷಬ್ ಶೆಟ್ಟಿ, ಅಜೇಯ್ ರಾವ್ , ಪ್ರಜ್ವಲ್ ದೇವರಾಜ್ ಸೇರಿದಂತೆ ದೊಡ್ಡ ತಂಡವೇ ಚಿತ್ರದ ಟ್ರೇಲರ್ ನೋಡಿ, ಮೆಚ್ಚುಗೆ ಹೇಳಿದೆ. ಚಿತ್ರದ ಟೈಟಲ್ ಜತೆಗೆ ಕಥೆ ಎಳೆ ಕೂಡ ಕುತೂಹಲ ಹುಟ್ಟಿಸುತ್ತದೆ ಅಂತ ಸ್ಟಾರ್ ಗಳು ತಮ್ಮ ಮಾತು ಹಂಚಿಕೊಂಡಿದ್ದು ವಿಶೇಷ.
ಈ ಚಿತ್ರದ ಕಥೆ ಐಪಿಎಲ್ ಬೆಟ್ಟಿಂಗ್ ಧಂದೆಗೆ ಕುರಿತದ್ದು. ಹಾಗಂತ ಅದೇನು ಕಲ್ಪನೆಯ ಕಥೆಯಲ್ಲ. ಕುಮಾರ್ ಅವರೇ ಕಂಡು ಕೇಳಿದ ಘಟನೆಗಳನ್ನೇ ಇಲ್ಲಿ ಚಿತ್ರದ ಕಥೆಯಾಗಿಸಿದ್ದಾರಂತೆ. ” ಕ್ರಿಕೆಟ್ ಒಂದು ಕಾಲದಲ್ಲಿ ಆಟವಾಗಿ ಮಾತ್ರ ಇತ್ತು, ಆದರೆ ಇವತ್ತು ಅದು ಬೆಟ್ಟಿಂಗ್ ಧಂದೆಯಾಗಿದೆ. ಅದರಲ್ಲೂ ಐಪಿಎಲ್ ಮ್ಯಾಚ್ ಶುರುವಾದ್ರೆ ಲೆಕ್ಕವಿಲ್ಲದಷ್ಟು ಕುಟುಂಬಗಳು ಬೀದಿಗೆ ಬೀಳುತ್ತವೆ. ನನ್ನ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ೨೦೦ ಮಂದಿ ಈ ಧಂದೆಯ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಷ್ಟು ಮಂದಿ ನನ್ನ ಫ್ರೇಂಡ್ಸ್ ಕೂಡ ಇದರಲ್ಲಿ ತುಂಬಾ ನಷ್ಟ ಅನುಭವಿಸಿದ್ದಾರೆ. ಅವೆಲ್ಲ ಘಟನೆಗಳನ್ನು ಹೆಕ್ಕಿಕೊಂಡು ಈ ಕಥೆ ಬರೆದಿದ್ದೇನೆʼ ಅಂತ ನಿರ್ದೇಶಕ ಕುಮಾರ್, ಟ್ರೇಲರ್ ಸಕ್ಸಸ್ವ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿತ್ರದ ತಾರಾಗಣದಲ್ಲಿ ಕೆಮಿಸ್ಟ್ರಿ ಕರಿಯಪ್ಪ ಚಿತ್ರದಲ್ಲಿದ್ದ ಬಹುತೇಕ ಕಲಾವಿದರೇ ಇಲ್ಲೂ ಇದ್ದಾರೆ. ತಬಲ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಅಪೂರ್ವ ಭಾರದ್ವಾಜ್, ದೀಪಾ ಜಗದೀಶ್, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟ್ಟರಾಜು, ಮಹೇಂದ್ರ ಪ್ರಸಾದ್, ಯಶಸ್ ಅಭಿ ಮತ್ತಿತರರು ಚಿತ್ರದಲ್ಲಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ಇವರೆಲ್ಲ ಕಾಣಿಸಿಕೊಂಡಿದ್ದಾರೆ. ನ್ಯಾಯಾ ಧೀಶರಾಗಿ ನಟ ಸುಚೇಂದ್ರ ಪ್ರಸಾದ್, ವಕೀಲರಾಗಿ ತಬಲ ನಾಣಿ ಅವರ ಕಾಂಬಿನೇಷನ್ ಅದ್ಬುತವಾಗಿ ಕಾಣಿಸಿಕೊಂಡಿದೆ.
ಟ್ರೇಲರ್ ಶುರುವೇ ಥ್ರಿಲ್ ನೀಡುತ್ತದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ವೀರ್ ಸಮರ್ಥ ಸಂಗೀತ ನೀಡಿದ್ದಾರೆ. ಅವರ ಇದೊಂದು ದೊಡ್ಡ ಕ್ಯಾನ್ವಾಸ್ ಸಿನಿಮಾ. ಒಂದೊಳ್ಳೆಯ ಸಂದೇಶ ಹೊತ್ತು ಬರುತ್ತಿದೆ ಎನ್ನುತ್ತಾರೆ ವೀರ್ ಸಮರ್ಥ್. ಟ್ರೇಲರ್ ಸಕ್ಸಸ್ ಮೀಟ್ ನಲ್ಲಿ ಎಲ್ಲರೂ ಹಾಜರಿದ್ದು ಚಿತ್ರದ ಕುರಿತು ಮಾತನಾಡಿದರು.
ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು.
ಇವತ್ತು ಎಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಇಲ್ಲಿನ ನಟರು ಬೇರೆ ಭಾಷೆಯಲ್ಲಿ ನಟಿಸಿದಾಗ ಕೊಂಡಾಡ್ತೀವಿ, ಸಂಭ್ರಮಿಸ್ತೀವಿ. ಒಬ್ಬ ಕಲಾವಿದನ ಪ್ರತಿ ನಡೆಯನ್ನು, ಮಾತನ್ನು, ಸಾಧನೆಯನ್ನು ಗಮನಿಸುತ್ತದೆ. ನಮ್ಮ ಚಿತ್ರದ ನಾಯಕ, ನಾಯಕಿ, ಪೋಷಕ ನಟ ಪರಭಾಷೆಯ ಚಿತ್ರಗಳಲ್ಲಿ ನಟಿಸಿದಾಗ ಅವರು ನಮ್ಮ ಭಾಷೆಯ ಕೀರ್ತಿ ಪತಾಕೆಯನ್ನು ಹೊರರಾಜ್ಯದಲ್ಲಿ ಹಾರಿಸಿದರು ಎನ್ನುತ್ತೇವೆ. ಅದು ತಪ್ಪಲ್ಲ. ಆ ಸಾಧನೆ ನಿಜವಾಗಿಯೂ ಹೊಗಳಿಕೆಗೆ ಅರ್ಹ. ಇಲ್ಲೀಗ ಹೇಳಹೊರಟಿರುವುದು ಕನ್ನಡಿಗರು ಮಾತ್ರವಲ್ಲ ಪರಭಾಷಿಗರೂ ಮೆಚ್ಚಿಕೊಂಡ ಅಪರೂಪದ ನಟ ಟೈಗರ್ ಪ್ರಭಾಕರ್ ಕುರಿತು. ಮಾರ್ಚ್ 30 ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಒಂದಷ್ಟು ಮಾಹಿತಿ ನೀಡುವ ಪ್ರಯತ್ನವಿದು.
ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು. ಆದರೆ, ಪ್ರಭಾಕರ್ ಮಾಡಿರುವ ಅದ್ವಿತೀಯ ಸಾಧನೆ ಬಹುತೇಕ ನೋಟಿಫೈ ಆಗಿಲ್ಲ. ಆ ಪೈಕಿ ಒಂದಷ್ಟು ದಾಖಲಿಸುವ ಪ್ರಯತ್ನ ಇಲ್ಲಾಗಿದೆ.
ಪ್ರಭಾಕರ್ ತಮ್ಮ ನಟನಾ ಬದುಕಿನ ಸಮಯದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಮೋಸ್ಟ್ ಪಾಪ್ಯುಲರ್ ಪ್ಯಾನ್ ಇಂಡಿಯ ಆಕ್ಟರ್ ಆಗಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದ ಪ್ರಭಾಕರ್ ಪಂಚಭಾಷಾ ನಟ. ಮತ್ತು ಎಲ್ಲಾ ಕಡೆಯಲ್ಲಿಯು ಅವರಿಗೆ ಮಾಸ್ ಇಮೇಜ್ ಇತ್ತು. ಕನ್ನಡದಲ್ಲಿ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಅವರಂತಹ ಹಿರಿಯ ಸ್ಟಾರ್ ನಟರುಗಳ ಎದುರು ವಿಲನ್ ಆಗಿ ಮಿಂಚಿದ ಪ್ರಭಾಕರ್ ಈ ಎಲ್ಲಾ ನಟರು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಖಳನಾಯಕನ ಇಮೇಜ್ ದಾಟಿ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದರು. ಬರೀ ನಟನೆಗೆ ಸೀಮಿತವಾಗದೆ ನಿರ್ದೇಶನ, ನಿರ್ಮಾಣಕ್ಕು ಇಳಿದು ಅಲ್ಲಿಯೂ ತಕ್ಕಮಟ್ಟಿಗೆ ಯಶಸ್ಸು ಕಂಡರು.
ಆಗಿನ ಕಾಲದಲ್ಲಿ ಒಬ್ಬ ಹೊಸ ಹೀರೋ ಇರಲಿ, ಹೊಸ ವಿಲನ್ ಉದಯಿಸುವುದು ಕಷ್ಟವಾಗಿತ್ತು. ಯಾಕಂದ್ರೆ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಸುಂದರ್ ಕೃಷ್ಣ ಅರಸ್, ಸುಧೀರ್ ಅವರಂಥ ಅತಿರಥರು ಖಳನಾಯಕರಾಗಿ ಬಹುದೊಡ್ಡ ಖ್ಯಾತಿ ಗಳಿಸಿದ್ದರು. ಅಂಥ ಸಂದರ್ಭದಲ್ಲಿಯು ಪ್ರಭಾಕರ್ ವಿಶಿಷ್ಟ ನಟನಾಶೈಲಿ ಎಲ್ಲರ ಗಮನ ಸೆಳೆಯಿತು, ಅವರನ್ನು ಬೆಳೆಸಿತು. ಖಳನಾಗಿ ಮಿಂಚಿದ ಪ್ರಭಾಕರ್ ನಾಯಕನ ಪಟ್ಟಕ್ಕೆ ಏರಿದ ಬಳಿಕ ಪೋಲಿಸ್ ಮತ್ತು ಸಿಬಿಐ ಅಧಿಕಾರಿಯ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯರಾದರು. ಅತಿ ಕಡಿಮೆ ಅವಧಿಯಲ್ಲಿ ಸರಿಸುಮಾರು 450 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಇದರಲ್ಲಿ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ ಚಿತ್ರಗಳಿವೆ. ಪ್ರಭಾಕರ್ ಕನ್ನಡದ ನಂತರ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದರು ಎಂಬುದು ವಿಶೇಷ. ಅಲ್ಲಿ ಚಿರಂಜೀವಿ ಚಿತ್ರಗಳೆಂದರೆ ಅಲ್ಲಿ ಖಳನಾಗಿ ಪ್ರಭಾಕರ್ ಇರಲೇಬೇಕು ಎನ್ನುವ ಮಟ್ಟಕ್ಕೆ ಹವಾ ಸೃಷ್ಟಿಸಿದ್ದರು ಪ್ರಭಾಕರ್. ಇವರಿಬ್ಬರ ಟಕ್ಕರ್ ಮಾಸ್ ಅಭಿಮಾನಿಗಳ ಮನಸೂರೆ ಮಾಡಿತ್ತು. ತೆಲುಗು ಚಿತ್ರರಂಗದಲ್ಲಿ ಪ್ರಭಾಕರ್ ಎಂಬುದು ಕಾಮನ್ ನೇಮ್ ಆಗಿತ್ತು.
ಪ್ರಭಾಕರ್, ಪ್ರಭಾಕರ್ ರೆಡ್ಡಿ ಎಂಬ ಹೆಸರುಗಳನ್ನು ಹೊಂದಿದ್ದ ಅಸಂಖ್ಯಾತರು ಅಲ್ಲಿದ್ದರು. ಈ ಕಾರಣಕ್ಕೆ ನಮ್ಮ ಪ್ರಭಾಕರ್ ಅಲ್ಲಿ ಕನ್ನಡ ಪ್ರಭಾಕರ್ ಎಂದೇ ಮನೆಮಾತಾಗಿದ್ದರು. ಇಲ್ಲಿ ಟೈಗರ್ ಎಂಬ ವಿಶೇಷಣ ಹೆಸರಿಗೆ ಅಂಟಿಕೊಂಡಿರುವ ಹಾಗೆ ಅಲ್ಲಿ ಕನ್ನಡ ಅವರ ಹೆಸರಿನೊಂದಿಗೆ ಬೆರೆತಿತ್ತು. ಚಿರಂಜೀವಿ ಅವರಿಗಂತು ಪ್ರಭಾಕರ್ ಒಂಥರಾ ಲಕ್ಕಿ ಚಾರ್ಮ್ ಆಗಿದ್ದರು. ಚಿರಂಜೀವಿ ಎದುರು ಪ್ರಭಾಕರ್ ಖಳನಾಗಿ ಅಭಿನಯಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಚಟ್ಟಾನಿಕಿ ಕಲ್ಲು ಲೇವು, ರೋಷಗಾಡು, ಬಿಲ್ಲಾ ಬಾಷಾ, ಜ್ವಾಲಾ, ಜಗದೇಕವೀರುಡು ಅತಿಲೋಕ ಸುಂದರಿ, ರಾಕ್ಷಸುಡು, ಕೊಡಮ ಸಿಂಹ, ಜೇಬು ದೊಂಗ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಎದುರಾಳಿಗಳಾಗಿ ಮಿಂಚಿದ್ದಾರೆ. ರಜನೀಕಾಂತ್ ಮತ್ತು ಪ್ರಭಾಕರ್ ಬದುಕಿನಲ್ಲಿ ಅನೇಕ ಸಾಮ್ಯತೆಗಳಿವೆ. ಇಬ್ಬರು ಯಾವುದೇ ಬಿಗ್ ಬ್ಯಾಕ್ ಗ್ರೌಂಡ್ ಇಲ್ಲದೆ ಪ್ರತಿಭೆ ಮತ್ತು ಪರಿಶ್ರಮದಿಂದ ಬೆಳೆದವರು. ಖಳನಾಗಿ ಮನೆಮಾತಾಗಿ ನಾಯಕನಾಗಿ ಹೊಸ ಬೆಲೆ ನೆಲೆ ಕಂಡುಕೊಂಡವರು. ರಜನೀಕಾಂತ್ ನಾಯಕನಾಗಿ ಬೆಳೆದ ಬಳಿಕ ಅವರ ಬಹುನಿರೀಕ್ಷೆಯ ಚಿತ್ರಗಳಿಗೆ ಪ್ರಭಾಕರ್ ವಿಲನ್ ಆಗಿದ್ದರು. ಇವರಿಬ್ಬರ ನಡುವಿನ ತೆರೆ ಮೇಲಿನ ಕಾದಾಟ ನೋಡುಗರ ಮೆಚ್ಚುಗೆ ಗಳಿಸಿತ್ತು.
ಕನ್ನಡದಲ್ಲಿ ಪ್ರಭಾಕರ್ ನಟಿಸಿ, ನಿರ್ದೇಶಿಸಿದ ‘ಬಾಂಬೆ ದಾದಾ’ ಚಿತ್ರವು ‘ಪಾಂಡ್ಯನ್’ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಯ್ತು. ಅಲ್ಲಿ ನಾಯಕನಾಗಿ ಮಿಂಚಿದ್ದು ರಜನೀಕಾಂತ್. ಕನ್ನಡ ಚಿತ್ರರಂಗದ ನಾಯಕ ಬರೆದ ಕಥೆಗೆ ರಜನೀಕಾಂತ್ ಹೀರೋ ಆಗಿದ್ದು ಒಂದು ವಿಶಿಷ್ಟ ದಾಖಲೆಯಾಗಿದೆ. ರಜನೀಕಾಂತ್ ನಟನೆಯ ‘ಅಣ್ಣಾಮಲೈ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದು, ರಜನಿಗೆ ಸರಿಸಮನಾಗಿ ಮಿಂಚಿದ್ದು ಇದೇ ಪ್ರಭಾಕರ್. ರಜನೀಕಾಂತ್ ನಟನೆಯ ಸೂಪರ್ ಹಿಟ್ ‘ಮುತ್ತು’ ಚಿತ್ರದಲ್ಲಿಯು ಪ್ರಭಾಕರ್ ಎಸ್ ಪಿ ಪ್ರತಾಪ್ ರಾಯುಡು ಪಾತ್ರ ಮಾಡಿದ್ದರು. ‘ಚಕ್ರವ್ಯೂಹ’ ಚಿತ್ರ ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಬಳಿಕ ಈಶ್ವರಿ ಪ್ರೊಡಕ್ಷನ್ಸ್ ನ ಮಾಲೀಕರಾದ ಎನ್ ವೀರಾಸ್ವಾಮಿ ಮತ್ತು ವಿ ರವಿಚಂದ್ರನ್ ಇದೇ ಚಿತ್ರವನ್ನು ಹಿಂದಿಯಲ್ಲಿ ‘ಇನ್ಕ್ವಿಲಾಬ್’ ಹೆಸರಲ್ಲಿ, ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ನಿರ್ಮಿಸಿದರು. ಆಗ ಚಕ್ರವ್ಯೂಹ ಚಿತ್ರದಲ್ಲಿ ಮಾಡಿದ್ದ ಅನಿಲ್ ರಾಜ್ ಹೆಸರಿನ ಖಳನ ಪಾತ್ರವನ್ನು ಹಿಂದಿಯಲ್ಲಿಯು ಪ್ರಭಾಕರ್ ಅವರೇ ನಿರ್ವಹಿಸಿದರು. ಆ ಮೂಲಕ ಬಾಲಿವುಡ್ ನ ಬಿಗ್ ಬಿ ಎದುರು ನಟಿಸಿ ಸೈ ಎನಿಸಿಕೊಂಡರು ಪ್ರಭಾಕರ್.
ಮಲಯಾಳಂ ಚಿತ್ರಗಳಲ್ಲಿಯು ಬ್ಯಾಡ್ ಮ್ಯಾನ್ ರೋಲ್ ಗಳ ಮೂಲಕ ಪ್ರಭಾಕರ್ ಜನಪ್ರಿಯತರ ಗಳಿಸಿದರು. ಸೂಪರ್ ಸ್ಟಾರ್ ಮುಮ್ಮುಟಿ ಚಿತ್ರಗಳಲ್ಲಿ ನಟಿಸಿ ಕೇರಳದಲ್ಲಿಯು ಅಭಿಮಾನಿಗಳನ್ನು ಪಡೆದರು. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಸ್ಟಾರ್ ಗಳಾದ, ಆಯಾ ಚಿತ್ರರಂಗದ ಮುಕುಟವಾದ ಡಾ. ರಾಜ್ ಕುಮಾರ್, ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಮುಮ್ಮುಟಿಯವರೊಡನೆ ನಟಿಸಿದ ಏಕೈಕ ಸ್ಟಾರ್ ನಟ ಟೈಗರ್ ಪ್ರಭಾಕರ್. ಈ ಮಹಾನ್ ಸಾಧನೆ ಮತ್ಯಾರು ಮಾಡಲು ಸಾಧ್ಯವಾಗಿಲ್ಲ ಅನ್ನುವುದನ್ನು ಇಲ್ಲಿ ಗಮನಿಸಬೇಕು. ಇದಲ್ಲದೆ ಮಹೇಶ್ ಬಾಬು ತಂದೆ ಕೃಷ್ಣ, ತಮಿಳನ ಸ್ಟಾರ್ ನಟ ವಿಜಯಕಾಂತ್, ಕೃಷ್ಣಂ ರಾಜು, ನಂದಮೂರಿ ಬಾಲಕೃಷ್ಣ ಅವರೊಡನೆಯು ಪ್ರಭಾಕರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರ್ ನಾಗ್, ರಾಜೇಶ್, ಲೋಕೇಶ್, ರವಿಚಂದ್ರನ್, ಶಿವರಾಜ್ ಕುಮಾರ್, ದೇವರಾಜ್, ರಮೇಶ್ ಸೇರಿದಂತೆ ಬಹುತೇಕರೊಡನೆ ಪ್ರಭಾಕರ್ ನಟಿಸಿದ್ದಾರೆ.
ಒಬ್ಬ ಮಾಸ್ ನಾಯಕನಿಗೆ ಇರಬೇಕಾದ ಕಲರ್, ಖದರ್, ಹೈಟು, ವೇಯ್ಟು, ಟ್ಯಾಲೆಂಟ್, ಮ್ಯಾನರಿಸಂ ಎಲ್ಲವು ಸರಿಯಾಗಿ, ಸಮನಾಗಿ ಇದ್ದ ಕಲಾವಿದ ಪ್ರಭಾಕರ್. “ಟೈಗರ್” ಎಂಬ ಚಿತ್ರ ಮಾಡಿ ಆ ಬಳಿಕ ಟೈಗರ್ ಪ್ರಭಾಕರ್ ಎಂದೇ ಜನಪ್ರಿಯರಾದರು. ಹಾಗೆ ನೋಡಿದರೆ, ಕನ್ನಡದ ಮೊದಲ ಆರಡಿ ಕಟೌಟ್ ಅಂದರೆ, ಆರಡಿ ಎತ್ತರದ ಮಾಸ್ ನಟ ಟೈಗರ್ ಪ್ರಭಾಕರ್ ಎನ್ನಲ್ಲಡ್ಡಿಯಿಲ್ಲ. ಮಾಸ್ ಪಾತ್ರಗಳ ಜೊತೆಗೆ ಎಮೋಷನಲ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಪ್ರಭಾಕರ್ ಕನ್ನಡ ಚಿತ್ರರಂಗದ ಹೆಮ್ಮೆಯಂತೂ ಹೌದು. ಪ್ರಭಾಕರ್ ನಟನೆಯ ‘ಕಲಿಯುಗ ಭೀಮ’ ಚಿತ್ರದ ‘ಕೈ ತುತ್ತು ಕೊಟ್ಟವ್ಳೆ ಐ ಲವ್ ಯು ಮೈ ಮದರ್ ಇಂಡಿಯಾ’ ಆಲ್ ಟೈಮ್ ಫೇವರಿಟ್ ಹಾಡುಗಳಲ್ಲೊಂದು. ಕಥೆ, ಚಿತ್ರಕಥೆ ರಚನೆಯ ಜೊತೆಗೆ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಇದರ ಜೊತೆಗೆ ಒಂದು ಸಿನಿಮಾದಲ್ಲಿ ಸಿನಿಮಾಟೋಗ್ರಫಿ ಮಾಡಿದ ಹೆಗ್ಗಳಿಕೆಯು ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಅವರೊಬ್ಬ ಒಳ್ಳೆಯ ನಟನಷ್ಟೇ ಅಲ್ಲ, ಅತ್ಯದ್ಭುತ ಟೆಕ್ನಿಷಿಯನ್ ಸಹ ಆಗಿದ್ದರು. ಕಂಗ್ಲೀಷ್ ಶೈಲಿಯ ಸಂಭಾಷಣೆ ಮತ್ತು ಡೈಲಾಗ್ ಡೆಲಿವರಿಯಲ್ಲಿನ ವಿಭಿನ್ನತೆ ಮೂಲಕ ಇವತ್ತಿಗೂ ಪದೇ ಪದೇ ನೆನಪಾಗುತ್ತಾರೆ. ಎಫ್‌ಎಂನಲ್ಲೂ ಕೂಡ ಪ್ರಭಾಕರ್ ಧ್ವನಿಯ ಅನುಕರಣೆ ನಿರಂತರ. ಯಾವುದೇ ಆರ್ಕೇಸ್ಟ್ರಾಗಳಿರಲಿ ಅಲ್ಲಿ ಪ್ರಭಾಕರ್ ಡೈಲಾಗ್‌ಗಳು ಸುರಿಮಳೆ ಆಗೋದು ಸಹಜ. ಅಷ್ಟರಮಟ್ಟಿಗೆ ಅವರ ವಾಯ್ಸ್ ಕೂಡ ಫೇಮಸ್ ಅನ್ನೋದು ವಿಶೇಷ.
ಏನೇ…ಅನ್ಕೊಳ್ಳಿ ಸಿನಿಮಾ ಅಂದ್ರೆ ಬರೀ ಮನರಂಜನೆ ಮಾತ್ರ ಅಲ್ಲ. ಹಾಗೆಯೇ ಬರೀ ಬಿಸಿನೆಸ್ ಕೂಡ ಅಲ್ಲ. ಹೊಸಬರಿಗೆ ಅದೊಂದು ಪ್ರಯೋಗ. ಅಂದ್ರೆ ಎಕ್ಸ್‌ಪೆರಿಮೆಂಟಲ್ ಫೀಲ್ಡ್. ಹಾಗೊಂದು ಕಾರಣಕ್ಕಾಗಿಯೇ ಈಗ ಚಂದನವನದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಚಿತ್ರ “ಆನ”. ಅರೆ, ಆನ ಅಂದ್ರೇನು ? ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇಂತಹದೊಂದು ಪ್ರಶ್ನೆ ನಿಮ್ಮಲ್ಲೂ ಹುಟ್ಟುತ್ತೆ. ಯಾಕಂದ್ರೆ, ಕನ್ನಡದಲ್ಲಿ ಅಂತಹದೊಂದು ಪದ ಅಷ್ಟಾಗಿ ನೀವು ಕೇಳಿರಲಿಕ್ಕಿಲ್ಲ. ಆದ್ರೆ, ಚಿತ್ರದ ನಿರ್ದೇಶಕರ ಪ್ರಕಾರ ʼಆನʼ ಅಂದ್ರೆ ಅನರ್ಘ್ಯ ಅಂತ. ಕಥೆಗೆ ಪೂರಕವಾಗಿ ಅದನ್ನೇ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರಂತೆ. ಅದರಾಚೆ ʼಆನʼ ಅನ್ನೋದು ಇಲ್ಲಿ ಚಿತ್ರದ ನಾಯಕಿ ಹೆಸರು ಕೂಡ.
ನಿಜಕ್ಕೂ ಇದೊಂದು ಎಕ್ಸ್ ಪೆರಿಮೆಂಟಲ್ ಚಿತ್ರ. ನಾಲ್ಕು ಸಾಂಗು, ನಾಲ್ಕು ಫೈಟು, ಜತೆಗೊಂದು ಐಟಂ ಸಾಂಗ್ ಇಡುವಂತಹ ಸಿದ್ಧ ಸೂತ್ರ ಇಟ್ಕೊಂಡು ಮಾಡಿದ ಚಿತ್ರ ಇದಲ್ಲ. ಅಂದ್ರೆ, ಇದು ಸೂಪರ್ ಹೀರೋ ಕಾನ್ಸೆಫ್ಟ್ ಕಥಾ ಹಂದರದ ಚಿತ್ರ. ಇಂಡಿಯಾದಲ್ಲೇ ಫಸ್ಟ್ ಟೈಮ್ ಒಬ್ಬ ನಾಯಕಿಯನ್ನೇ ಇಲ್ಲಿ ಸೂಪರ್ ಹೀರೋ ಶೈಲಿಯಲ್ಲಿ ತೋರಿಸಲು ಹೊರಟಿರುವ ಸಿನಿಮಾ ಇದು. ಇದರ ನಿರ್ದೇಶಕ ಮನೋಜ್ ಪಿ. ನಡುಲಮನೆ. ಸದ್ಯಕ್ಕೀಗ ಈ ಚಿತ್ರದ ಟೀಸರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಆಧಿಕೃತವಾಗಿ ಲಾಂಚ್ ಆಗಿದೆ. ಹೆಚ್ಚು ಕಡಿಮೆ ನಾಲ್ಕು ದಿನಗಳಿಗೆ ಅದನ್ನು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಹೊಸಬರಿಗೆ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಇದರ ನಾಯಕಿ. ಅವರೇ ಈ ಚಿತ್ರದ ಹೀರೋ-ಕಮ್ ಹೀರೋಯಿನ್. ಇದೇ ಮೊದಲು ಇಂತಹದೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಫಸ್ಟ್ ಟೈಮ್ ಸ್ಕ್ರೀನ್ ಮೇಲೆ ಹಾರರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕವರು ಥ್ರಿಲ್ ಆಗಿದ್ದಾರೆ. ಟೀಸರ್ ನೋಡಿದವರಿಗೆ ಅವರ ಹಾರರ್ ಲುಕ್ ಮೈ ನಡುಗಿಸುತ್ತೆ.
ಹಾರರ್ ಅಂದ್ಮೇಲೆ ಒಂದ್ಕಡೆ ಕತ್ತಲು ಅಂತಲೂ ಹೌದು. ಹಾಗಾಗಿಯೇ ಚಿತ್ರೀಕರಣದ ಬಹುತೇಕ ಭಾಗ ರಾತ್ರಿ ಹೊತ್ತಲೇ ನಡೆದಿದೆಯಂತೆ. ಅದೊಂದು ವಿಶೇಷ ಅನುಭವ ಅಂತ ಅದಿತಿ ಪ್ರಭುದೇವ್ ಹೇಳುತ್ತಾರೆ. ಶೂಟಿಂಗ್ ಕಂಪ್ಲೀಟ್ ಆಗಿ, ಚಿತ್ರ ಈಗ ರಿಲೀಸ್‌ಗೆ ರೆಡಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ನಿರ್ದೇಶಕ ಮನೋಜ್ ಪಿ. ನಡುಲಮನೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುಕೆ ಪ್ರೊಡಕ್ಷನ್ ಮೂಲಕ ಪೂಜಾ ವಸಂತ್ ಕುಮಾರ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರುಳೀಧರ್ ಸಂಗೀತವಿದೆ.
ಚಿತ್ರದ ತಾರಾಗಣವೇನು ಕಮ್ಮಿ ಇಲ್ಲ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ವರುಣ್ ಅಮರಾವತಿ ಮತ್ತಿತರರು ಇದ್ದಾರೆ. ಇದೀಗ ಚಿತ್ರದ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ಗೆ ಚಿತ್ರ ತಂಡ ಸಿಕ್ಕಾ ಪಟ್ಟೆ ಖುಷಿ ಆಗಿದೆ. ಚಿತ್ರದ ಸೆಕೆಂಡ್ ಪಾರ್ಟ್ ನಿರ್ಮಾಣಕ್ಕೂ ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ತೆರೆಮರೆಯಲ್ಲೇ ಅದರ ಕೆಲಸ ನಡೆದಿವೆ ಅಂತ ಹೇಳ್ತಾರೆ ನಿರ್ದೇಶಕರು. ಚಿತ್ರ ಗೆದ್ದರೆ ಭಾಗ 2 ಖಂಡಿತಾ ಬರುತ್ತೆ, ಅದರ ಸಿದ್ಧತೆ ಕೂಡ ನಡೆದಿದೆ ಅಂತಾರೆ ನಿರ್ದೇಶಕ ಮನೋಜ್.
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಹಾಗೂ ನ್ಯಾಷನಲ್ ಕ್ರಷ್ ಪ್ರಿಯಾ ವಾರಿಯರ್ ಅಭಿನಯದ ʼವಿಷ್ಣು ಪ್ರಿಯʼ ಚಿತ್ರ ರಿಲೀಸ್ ರೆಡಿ ಆಗುತ್ತಿದೆ. ಸದ್ಯಕ್ಕೇನು ಅದರ ರಿಲೀಸ್ ಡೇಟ್ ಫಿಕ್ಸ್ ಆಗಿಲ್ಲ. ಆದರೆ, ಈಗ ಟೀಸರ್ ಲಾಂಚ್ ಮೂಲಕ ಸೌಂಡ್ ಮಾಡಲು ರೆಡಿಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೀಸರ್ ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಡಿಜಿಟಲ್ ಸ್ಟುಡಿಯೋದಲ್ಕಿ ಮೊನ್ನೆಯಷ್ಟೇ”ವಿಷ್ಣು ಪ್ರಿಯʼ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಪುನೀತ್ ರಾಜ್ ಕುಮಾರ್ ಟೀಸರ್ ಲಾಂಚ್ ಮಾಡಿ ಶುಭ ಹಾರೈಸಿದ್ರು. ಚಿತ್ರಕ್ಕೆ ಒಳ್ಳೆಯ ಟೈಟಲ್ ಇಡಲಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಬಂದಿರುವ ನಂಬಿಕೆ ಇದೆ ಅಂತ ಅಪ್ಪು ವಿಶ್ವಾಸ ವ್ಯಕ್ತಪಡಿಸಿದರು.
ಕಾಲೇಜು ಜೀವನದಲ್ಲಿ ಪ್ರೀತಿ ಮಾಡೋದು ಸಹಜ. ಕೆಲವೊಮ್ಮೆ ಪ್ರೀತಿ ಸಿಗದೆ ಹುಡುಗರು ಹುಚ್ಚರಾಗುವುದು ಅಷ್ಟೇ ಕಾಮನ್. ಅಂತಹದೊಂದು ಕಥೆಯನ್ನು ಹೊತ್ತ ಸಿನಿಮಾ ವಿಷ್ಣು ಪ್ರಿಯ. ಆ ಕುರಿತು ನಿರ್ಮಾಪಕ ಮಂಜು ಮಾತನಾಡಿದರು. ” ಇದು ನೈಜಘಟನೆಯಾಧಾರಿತ ಸಿನಿಮಾ. ಬೆಳಗಾವಿಯಲ್ಲಿ 1990ಯಲ್ಲಿನಡೆದಿರುವ ಪಕ್ಕಾ ಲವ್ ಸ್ಟೋರಿಯಾಗಿದೆ. ಕಥೆ ಮನಸ್ಸಿಗೆ ನಾಟುತ್ತೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ನಡೆಯಲಿದೆ ಎಂದರು.” ಪಡ್ಡೆ ಹುಲಿʼ ಚಿತ್ರದ ನಂತರ ಶ್ರೇಯಸ್ ನಾಯಕ ನಟರಾಗಿ ಅಭಿನಯಿಸಿದ ಚಿತ್ರದ ಇದು. ಅವರಿಲ್ಲಿ ಕಾಲೇಜು ಹುಡುಗ. ಟೀಸರ್ ಲಾಂಚ್ ಗೆ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಬಂದಿದ್ದಕ್ಕೆ ಧನ್ಯವಾದ ಹೇಳಿದರು. ನಿರ್ದೇಶಕ ವಿ.ಕೆ ಪ್ರಕಾಶ್ ಅವರಿಗೂ ಇದು ಎರಡನೇ ಸಿನಿಮಾ. ಚಿತ್ರದ ಮೇಲೆ ಅವರಿಗೂ ಸಾಕಷ್ಟು ನಿರೀಕ್ಷ ಇದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಟೀಸರ್ ಲಾಂಚ್ ಗೆ ಅತಿಥಿಯಾಗಿ ಬಂದಿದ್ದರು.
ರಾಜಸ್ತಾನದ ಜೋಧ್‌ಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕ್ಕೆ ಉತ್ತಮ ಕಥೆ ಪ್ರಶಸ್ತಿ ಲಭಿಸಿದೆ. ಚಿತ್ರ ವೀಕ್ಷಿಸಿದ ಜನರಿಂದಲೂ ಒಳ್ಳೆಯ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಈಗಾಗಲೇ ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡು ಸುಮಾರು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆ [ಪೈಕಿ ನಾಲ್ಕು “ಬೆಸ್ಟ್ ಡೈರೆಕ್ಟರ್” ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂಭ್ರಮದಲ್ಲಿದೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ಚಿತ್ರದಲ್ಲಿ ವರ್ಧನ್ ನಾಯಕರಾಗಿ ನಟಿಸಿದ್ದಾರೆ.
ಅವರೊಂದಿಗೆ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ ಇತರರು ನಟಿಸಿದ್ದಾರೆ. ಲೋಕಿ ಸಂಗೀತವಿದೆ. ನಿತಿನ್ ಛಾಯಾಗ್ರಹಣ ಮಾಡಿದರೆ, ಮುತ್ತುರಾಜ್ ಸಂಕಲನವಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮೋಕ್ಷ ಚಿತ್ರದ ಟ್ರೇಲರ್ ಲಾಂಚ್ ಆಗಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಇದು ಹೊರ ಬಂದಿದೆ. ಅದು ಲಾಂಚ್ ಆಗಿ ಇಲ್ಲಿಗೆ ಮೂರು ದಿನಗಳು ಕಳೆದಿವೆ. ಸೋಷಲ್ ಮೀಡಿಯಾದಲ್ಲಿ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಸಸ್ಪೆನ್ಸ್, ಥ್ರಿಲ್ಲರ್ ಸ್ಟೋರಿ ಅಂದ್ಮೇಲೆ ಅಲ್ಲೇನಿರುತ್ತೆ ಅಂತ ವಿವರಿಸಿ ಹೇಳಬೇಕಿಲ್ಲ, ಮರ್ಡರ್ ಗೇಮ್ ಇರುತ್ತೆ. ಯಾರೋ, ಇನ್ನಾರನ್ನೋ ಮುಗಿಸುವ ಸಂಚುಗಳಿರುತ್ತವೆ. ಅವೆಲ್ಲ ಗೊತ್ತಾಗದೆ ಹಲವು ಟರ್ನ್ ಅಂಡ್ ಟ್ವಿಸ್ಟ್ ಗಳು ಮೂಲಕ ಸಾಗುತ್ತವೆ. ಹಾಗೊಂದು ಕಥೆ ಈ ಚಿತ್ರದ್ದು ಕೂಡ. ಆ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿಸುತ್ತೆ ಈ ಟ್ರೇಲರ್.
ಚಿತ್ರ ತಂಡ ಮೊನ್ನೆಯಷ್ಟೇ ಅಧಿಕೃತವಾಗಿಯೇ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲಿ ಚಿತ್ರ ತಂಡವು ಟ್ರೇಲರ್ ವಿಶೇಷತೆ ಜತೆಗೆ ಸಿನಿಮಾದ ಕುತೂಹಲದ ಅಂಶಗಳ ಕುರಿತು ಮಾತನಾಡಿತು. “ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್‌ಗೆ ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಸಿನಿಮಾ ಪ್ರೇಕ್ಷಕರು ನಮ್ಮನ್ನು ಕೈ ಹಿಡಿಯಬೇಕಿದೆ ಅಂತ ಚಿತ್ರದ ನಾಯಕ ಕಮ್ ನಿರ್ಮಾಪಕ ಸಮರ್ಥ್ ನಾಯಕ್ ಮನವಿ ಮಾಡಿಕೊಂಡರು. ಬಾಲಿವುಡ್ ನಟ ಮೋಹನ್ ಧನರಾಜ್ ಈ ಚಿತ್ರದ ಪ್ರಮುಖ ಆಕರ್ಷಣೆ. ಕನ್ನಡದಲ್ಲಿ ಅವರಿಗಿದು ಚೊಚ್ಚಲ ಚಿತ್ರ. ಅವರ ಪ್ರಕಾರ ಸಸ್ಪೆನ್ಸ್ ಕಥೆಗಳ ತಿರುಳು ಗೊತ್ತಾಗುವುದು ಪ್ರೇಕ್ಷಕ ಚಿತ್ರ ನೋಡಿದ ಮೇಲೆಯೇ ಅಂತೆ. ಹಾಗಂತ ಅವರು ಅಲ್ಲಿ ಹೇಳಿಕೊಂಡರು.
ನಟ ತಾರಕ್ ಪೊನ್ನಪ್ಪ ಈ ಚಿತ್ರದ ಇನ್ನೊಂದು ಪ್ರಮುಖ ಪಾತ್ರಧಾರಿ. ಅಂದ್ರೆ ಅವರಿಲ್ಲಿ ಪೊಲೀಸ್ ಪಾತ್ರಧಾರಿ. ಅವರ ಪಾತ್ರವೇ ಇಲ್ಲಿ ಇನ್ನೊಂದು ಹೈಲೈಟ್ ಅಂತೆ. ಮಂಗಳೂರು ಚೆಲುವೆ ಆರಾಧ್ಯ ಲಕ್ಷ್ಮಣ್ ಈ ಚಿತ್ರದ ನಾಯಕಿ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಬರೆದ ಸಾಹಿತ್ಯಕ್ಕೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.
ಗುರುಪ್ರಶಾಂತ್ ರೈ, ಜೋಮ್ ಜೋಸೆಫ್, ಕಿರಣ್ ಹಂಪಾಪುರ ಸೇರಿದಂತೆ ಮೂವರು ಛಾಯಾಗ್ರಾಹಕರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಟ ಕಿಚ್ಚ ಸುದೀಪ್, ತಮ್ಮ ಟ್ವಿಟರ್ ಖಾತೆಯಲ್ಲಿ ಮೋಕ್ಷ ಚಿತ್ರದ ಟೀಸರ್ ಲಿಂಕ್ ಷೇರ್ ಮಾಡಿ, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಹಾಗೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ ಹಾಗೂ ನಟ ರಿಷಿ ಸೇರಿದಂತೆ ಹಲವರಿಗೆ ಟ್ರೇಲರ್ ಹಿಡಿಸಿದೆ. ಎಲ್ಲರೂ ಮೆಚ್ಚುಗೆ ಹೇಳಿದ್ದಾರೆ. ದಿನೇ ದಿನೆ ಟ್ರೇಲರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ಖುಷಿಯಲ್ಲಿ ಚಿತ್ರ ತಂಡವು ಏಪ್ರಿಲ್ ಕ್ಕೆ 16ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ.
ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಅದೇ ಕಾರಣಕ್ಕೀಗ ಜಯಣ್ಣ ಕಂಬೈನ್ಸ್ ನಿರ್ಮಾಣದ ಅದ್ದೂರಿ ವೆಚ್ವದ ‘ಶಿವ 143 ‘ ಚಿತ್ರ ಚಂದನವನದಲ್ಲಿ ತೀವ್ರ ಕುತೂಹಲ ಹುಟ್ಟಿಸಿರೋದು ನಿಮಗೂ ಗೊತ್ತು. ಹಾಗಂತ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಅವರೇನು ಕಮ್ಮಿ ಇಲ್ಲ. ಈಗಾಗಲೇ ಮಾಡೆಲಿಂಗ್ ನಲ್ಲಿ ಮಿಂಚಿದವರು. ಈಗ ಅವರು ಕೂಡ” ನಿನ್ನ ಸನಿಹಕೆʼ ಹೆಸರಿನ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ.
ಈಗಾಗಲೇ ಆ ಚಿತ್ರದ ಚಿತ್ರೀಕರಣವು ಮುಗಿದಿದೆ. ಹಾಡುಗಳ ಮೂಲಕ ಈಗ ಸೋಷಲ್ ಮೀಡಿಯಾದಲ್ಲಿ ” ನಿನ್ನ ಸನಿಹಕೆʼ ಚಿತ್ರ ಸಖತ್ ಸದ್ದು ಮಾಡಿದೆ. ಈ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಗ್ರಾಂಡ್ ಎಂಟ್ರಿಯಾಗುತ್ತಿರುವ ಧನ್ಯಾ ರಾಮ್ ಕುಮಾರ್ ಮೇಲೆ ರಾಜ್ ಕುಟುಂಬ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ತಮ್ಮ ಕುಟುಂಬದ ಮತ್ತೊಂದು ಕುಡಿ ಇದೇ ಮೊದಲು ನಾಯಕಿಯಾಗಿ ಎಂಟ್ರಿ ಆಗುತ್ತಿರುವುದು ಅವರಿಗೂ ಖುಷಿ ಇದೆ. ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸಿರುವ .’ನಿನ್ನ ಸನಿಹಕೆ ‘ಚಿತ್ರದ ಪ್ರಮೊಷನ್ ಕಾರ್ಯಕ್ರಮವೊಂದರಲ್ಲಿ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ ರೀತಿಯೇ ವಿಶೇಷ ವಾಗಿತ್ತು.
‘ಧನ್ಯಾ ನಮ್ಮನೆ ಕುಡಿ. ಮಗಳೆ, ನಿನ್ನ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ನಿನ್ನಮ್ಮ ಪೂರ್ಣಿಮಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನೀನು ಕೂಡ ನಟಿಯಾಗಿ ನ್ಯಾಷನಲ್ ಅವಾರ್ಡ್ ತಗೊಬೇಕಮ್ಮ. ಅವಾರ್ಡ್ ಬಂದೇ ಬರುತ್ತೆ ಅನ್ನೋ ನಂಬಿಕೆ ನಂಗಿದೆ. ಒಳ್ಳೆಯದಾಗಲಿ. ನಿಮ್ಮ ಸಿನಿಮಾ ದೊಡ್ಡ ಸಕ್ಸಸ್ ಕಾಣಲಿ’ ಅಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಸಿದರು. ಅವರಂತೆಯೇ ನಟ ಪುನೀತ್ ರಾಜ್ ಕುಮಾರ್ ಕೂಡ ಸೋಷಲ್ ಮೀಡಿಯಾದ ಲೈವ್ ನಲ್ಲಿ ಧನ್ಯಾ ರಾಮ್ ಕುಮಾರ್ ಅವರಿಗೆ ಶುಭ ಹಾರೈಸಿದರು.
ಕಲಾ ಕುಟುಂಬದಲ್ಲಿ ಹುಟ್ಟಿ ಬೆಳೆದ ಧನ್ಯ ರಾಮ್ ಕುಮಾರ್ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳಲು ದೊಡ್ಡ ಅವಕಾಶವಿದೆ. ಅವರ ಸುತ್ತ ದೊಡ್ಡ ಕಲಾವಿದರ ಬಳಗವೇ ಇದೆ. ಹಾಗಂತ ಅದನ್ನೇ ನಂಬಿಕೊಂಡು ಧನ್ಯಾ ರಾಮ್ ಕುಮಾರ್ ನಟಿಯಾಗಲು ಹೊರಟಿಲ್ಲ. ನಟನೆ ಮೇಲೆ ದೊಡ್ಡ ಆಸಕ್ತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಟನೆಯ ಎಲ್ಲಾ ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. ಆ ಮೂಲಕವೇ ನಟಿಯಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಅವರ ಮಾವಂದಿರು ನಿರೀಕ್ಷೆ ಮಾಡಿದಂತೆ ಧನ್ಯಾ ರಾಮ್ ಕುಮಾರ್ ಪ್ರಶಸ್ತಿ ಅರಸಿ ಬರುವಂತೆ ನಟಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.