Categories
ಸಿನಿ ಸುದ್ದಿ

ಏಪ್ರಿಲ್ 19ಕ್ಕೆ ಪುಕ್ಸಟ್ಟೆ ಪೈಸ ಬಿಡುಗಡೆ: ಇದು ಕಾಸಿನ ಹಿಂದೆ ಬಿದ್ದವರ ಕಥೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾ ಇದೇ ಏ. 19 ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಈಗಾಗಲೇ ‘ಪುಕ್ಸಟ್ಟೆ ಪೈಸ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ.

‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದಲ್ಲಿ ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಉಮೇಶ್, ಗಜಾ, ಮಂಜೇಗೌಡ, ಥಾಮಸ್, ಸೂರ್ಯ, ಸಂತು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾತಿಗಿಳಿದ ನಿರ್ಮಾಪಕ ಕಂ ನಿರ್ದೇಶಕ ಮಧುಸೂಧನ ಎ. ಎಸ್., ‘ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾ. ಕೆಲ ವರ್ಷಗಳ ಹಿಂದೆ ನಡೆದ ಹಣದ ಹಗರಣ ಮತ್ತು ನಮ್ಮ ನಡುವೆಯೇ ಅಲ್ಲಲ್ಲಿ ನಡೆದಿರುವ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.

‘ಪುಕ್ಸಟ್ಟೆ ಪೈಸ’ ಸಿನಿಮಾದ ಟೈಟಲ್ಲೇ ಹೇಳುವಂತೆ ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು.

‘ಸಿನಿಮಾದಲ್ಲಿ ಎಲ್ಲ ಥರದ ಆಡಿಯನ್ಸ್ ಗೂ ಬೇಕಾದ ಅಂಶಗಳಿವೆ. ಕಾಮಿಡಿ, ಥ್ರಿಲ್ಲರ್ ಜೊತೆಗೆ ಒಂದು ಒಳ್ಳೆಯ ಸಂದೇಶವಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಕಲಾವಿದರಾದ ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಗಜಾ, ಉಮೇಶ್, ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಮತ್ತಿತರರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಪುಕ್ಸಟ್ಟೆ ಪೈಸ’ ಸಿನಿಮಾದ ಮೂರು ಹಾಡುಗಳಿಗೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಮಯೂರ್ ಆರ್. ಶೆಟ್ಟಿ, ವೇಲ್ ಮುರುಗನ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಹಾಸನ, ಹೊಳೆನರಸೀಪುರ ಸುತ್ತಮುತ್ತ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ. ‘ಪುಕ್ಸಟ್ಟೆ ಪೈಸ’ ಸಿನಿಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಏ. 19ಕ್ಕೆ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಮೆಡಿಕಲ್ ಸೀಟು ವಂಚನೆಯ ರೋಚ’ಕಥೆ’

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ನಿರ್ದೇಶಕ: ವಿಕಾಸ್ ಪುಷ್ಪಗಿರಿ

ನಿರ್ಮಾಪಕ: ದೇವರಾಜ್

ತಾರಾಗಣ: ರಂಜನ್, ನಿಶ್ಚಿತ, ಬಿ.ಸುರೇಶ, ರಘುಶಿವಮೊಗ್ಗ, ಹರಿಣಿ, ಪ್ರಶಾಂತ್, ಸಂದೀಪ್ ಇತರರು.

ಈ ಪ್ರಪಂಚದಲ್ಲಿ ಹೊಗಳೋರು ಇರ್ತಾರೆ. ತೆಗಳೋರು ಇರ್ತಾರೆ.
ನಮಗೆ ಸೀದಾ ಕಾಣಿಸೋದು, ಅವರಿಗೆ ಉಲ್ಟಾ ಕಾಣಿಸುತ್ತೆ…’

ಈ ಸಿನಿಮಾದ ಹೈಲೆಟ್ ಆಗಿರುವ ಟಿ ಅಲಿಯಾಸ್ ತಿಮ್ಮೇಗೌಡ (ಹೀರೋ ರಂಜನ್) ಈ ಡೈಲಾಗ್ ಹೇಳುವ ಹೊತ್ತಿಗೆ , ಅವನು ಎನ್ಇಇಟಿ ಎಕ್ಸಾಮ್ ಬರೆದು ಇಷ್ಟಪಟ್ಟ ಕಾಲೇಜಿನಲ್ಲಿ ಮೆಡಿಕಲ್ ಸೀಟು ಪಡೆದು ತಾನೊಬ್ಬ ಡಾಕ್ಟರ್ ಆಗಿ ಇದ್ದೂರಲ್ಲೇ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುತ್ತಾನೆ. ಆದರೆ ಅವನ ಕನಸುಗಳೆಲ್ಲಾ ನನಸಾಗುತ್ತ, ಇಲ್ಲವೋ ಅನ್ನೋದೇ ಈ ಸ್ಕ್ಯಾಮ್ 1770 ಸಿನಿಮಾದ ಸಾರಾಂಶ.

ವಂಚನೆ ಪ್ರಕರಣಗಳು ದಿನ‌ ನಿತ್ಯ ನಮ್ಮ ಬದುಕಲ್ಲಿ ನಡೆಯುತ್ತಲೇ ಇವೆ. ವಂಚನೆಗೊಳಗಾಗುತ್ತಿದ್ದರೂ ಎಷ್ಟೋ ಸಲ ಗೊತ್ತಾಗೋದೇ ಇಲ್ಲ. ಅಂಥದ್ದೊಂದು ಗಂಭೀರ ವಿಷಯ ಇಟ್ಟುಕೊಂಡು ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರು ಚಂದದ ಕಥೆ ಇಟ್ಟುಕೊಂಡು ಅಂದವಾಗಿ ನಿರೂಪಿಸಿದ್ದಾರೆ. ಇದು ಸ್ಟಾರ್ ಸಿನಿಮಾ ಅಲ್ಲದಿದ್ದರೂ ಸ್ಟಾರ್ ವ್ಯಾಲ್ಯು ಇರುವ ಸ್ಟೋರಿ ಸಿನಿಮಾ. ಹಾಗಾಗಿ ಇದು ಎಲ್ಲಾ ವರ್ಗದವರಿಗೂ ರುಚಿಸುವ, ಎಚ್ಚೆತ್ತುಕೊಳ್ಳುವ ಚಿತ್ರ ಅನ್ನೋದನ್ನು ಮುಲಾಜಿಲ್ಲದೆ ಹೇಳಬಹುದು.

ಶಿಕ್ಷಣ ಅನ್ನೋದು ಈಗ ಗಗನ ಕುಸುಮ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಬಲು ಕಷ್ಟ. ಎಷ್ಟೇ ಬುದ್ಧಿವಂತರಿದ್ದರೂ, ನೀಟ್ ಎಕ್ಸಾಮ್ ಪಾಸ್ ಆದರೂ ಪ್ರತಿಷ್ಟಿತ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ಪಡೆಯೋದು ಕಷ್ಟ. ಸಿಕ್ಕರೂ ಒಂದಷ್ಟು ಸಮಸ್ಯೆ ಮೂಲಕ ಕೈ ತಪ್ಪುವ ಉದಾಹರಣೆ ಹೆಚ್ಚು. ಅಂತಹ ವಂಚನೆ ಹೇಗೆಲ್ಲಾ ನಡೆಯುತ್ತೆ ಅನ್ನೋದು ಸಿನಿಮಾದ ಥಾಟ್. ಅದನ್ನೇ ಇಲ್ಲಿ ನಿರ್ದೇಶಕರು ಮನ ಮುಟ್ಟುವಂತೆ ನಿರೂಪಿಸಿದ್ದಾರೆ. ಮುಖ್ಯವಾಗಿ ಇದು ಸ್ಟುಡೆಂಟ್ಸ್ ಜೊತೆಗೆ ಪೋಷಕರು ನೋಡಲೇಬೇಕಾದ ಸಿನಿಮಾ. ವಾಸ್ತವ ಅಂಶ ಇಲ್ಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಸಮಾಜದಲ್ಲಿ ಈಗ ನಡೆಯುವ ವಸ್ತುಸ್ಥಿತಿಯನ್ನು ನಿರ್ದೇಶಕರು ಬಿಂಬಿಸಿದ್ದಾರೆ. ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜುಗಳ ವಂಚನೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಚಿತ್ರ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಇದೆಲ್ಲವೂ ಹೀಗಿದೆಯಾ ಅನ್ನುವಷ್ಟರ ಮಟ್ಟಿಗೆ ಕಾಡುತ್ತೆ. ಅಷ್ಟೇ ಅಲ್ಲ, ಎಚ್ಚೆತ್ತುಕೊಳ್ಳುವಂತೆಯೂ ಮಾಡುತ್ತೆ.

ಸಿನಿಮಾದ ಕಥೆಯ ಎಳೆ ಚೆನ್ನಾಗಿದೆ. ಎಲ್ಲೂ ನೀರಸವಾಗದ ನಿರೂಪಣೆ ಇಷ್ಟವಾಗುತ್ತೆ. ಕಮರ್ಷಿಯಲ್ ರೂಪ ಕೊಟ್ಟು, ನೋಡಿಸಿಕೊಂಡು ಹೋಗುವಂತೆ ಮಾಡಿರುವ ನಿರ್ದೇಶಕರ ಜಾಣತನ ಒಪ್ಪಬೇಕು.

ಕಥೆ ಇಷ್ಟು…

ಟಿ (ರಂಜನ್) ನೀಟ್ ಬರೆದು ಮೆಡಿಕಲ್ ಸೀಟು ಪಡೆಯಬೇಕೆಂಬ ಹಂಬಲದವನು. ಆದರೆ, ತಾನು ಇಷ್ಟ ಪಡುವ ಕಾಲೇಜಿನಲ್ಲೇ ಸೀಟು ಪಡೆಯಬೇಕೆಂಬ ಆಸೆ ನಿರಾಸೆಯಾಗುತ್ತೆ. ಮೆಡಿಕಲ್ ಸೀಟು ಕೋಟಾದಡಿ ಸಿಗುತ್ತೆ ಎಂಬ ಆಸೆ ಕೈ ತಪ್ಪುತ್ತೆ. ಅದು ತಪ್ಪಿದ್ದಲ್ಲ. ತಪ್ಪಿಸಿದ್ದು. ಅನ್ನೋ ಸತ್ಯ ಗೊತ್ತಾಗುತ್ತೆ. ಅವನಂತೆಯೇ ಒಂದಷ್ಟು ಪ್ರತಿಭಾವಂತರಿಗೂ ಇದೇ ಸಮಸ್ಯೆ ಎದುರಾಗುತ್ತೆ. ಸೀಟು ಅವರಿಂದ ಹೇಗೆ ತಪ್ಪುತ್ತೆ ಆ ನೋವು ಹೇಗೆ ಬಲಿ ಪಡೆಯುತ್ತೆ ಅನ್ನೋದೇ ಇಂಟ್ರೆಸ್ಟಿಂಗ್ ಕಥೆ.

ಖಾಸಗಿ ಶಾಲೆಗಳ ವಂಚನೆ ಬಯಲಿಗೆಳೆಯೋ ಕಥೆ ನೋಡುಗರಲ್ಲಿ ಹೀಗೂ ಉಂಟಾ ಎನಿಸದೇ ಇರದು. ಎಷ್ಟೋ ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಸಾಲ ಮಾಡಿ ಮೆಡಿಕಲ್ ಓದಿಸಿ ಡಾಕ್ಟರ್ ಮಾಡುವ ಆಸೆ ಇಟ್ಟುಕೊಂಡೇ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ಇಲ್ಲಿ ನೀಟ್ ಆಗಿ ಪ್ರೆಸೆಂಟ್ ಮಾಡಲಾಗಿದೆ. ಒಟ್ಟಾರೆ, ಶಿಕ್ಷಣ ದಂಧೆ ಅಂಶ ಇಲ್ಲಿ ಹೈಲೆಟ್.

ಯಾರು ಹೇಗೆ?

ಇಲ್ಲಿ ಟಿ ಪಾತ್ರದ ಮೂಲಕ ರಂಜನ್‌ ಗಮನ ಸೆಳೆಯುವುದರ ಜೊತೆ ಇಷ್ಟವಾಗುತ್ತಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಫೈಟಲ್ಲೂ ಓಕೆ ಎನಿಸುತ್ತಾರೆ. ಬಾಡಿ ಲಾಂಗ್ವೇಜ್ ಇನ್ನಷ್ಟು ತಿದ್ದಿಕೊಳ್ಳಬೇಕು. ಉಳಿದಂತೆ ಓಕೆ.
ನಿಶ್ಚಿತ ಸಿಕ್ಕ ಪಾತ್ರಕ್ಕೆ‌ ಮೋಸ‌ ಮಾಡಿಲ್ಲ.
ರಿಪೋರ್ಟರ್ ಆಗಿ ರಂಜನ್ ಅಣ್ಣನಾಗಿ ರಘು ಶಿವಮೊಗ್ಗ ಫೋಕಸ್ ಆಗಿದ್ದಾರೆ. ಅತ್ತಿಗೆಯಾಗಿ‌ ಹರಿಣಿ ಪಾತ್ರ ಚೆನ್ನಾಗಿ‌ ನಿರ್ವಹಿಸಿದ್ದಾರೆ. ಬಿ.ಸುರೇಶ ಖಾಸಗಿ ಕಾಲೇಜಿನ ವಂಚಕರಾಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಪ್ರಶಾಂತ್, ಸಂದೀಪ್, ನಾರಾಯಣ ಸ್ವಾಮಿ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ಈ ಸ್ಕ್ಯಾಮ್ ನಮ್ಮ ನಡುವೆಯೇ ಹೇಗೆಲ್ಲಾ ನಡೆಯುತ್ತೆ ಎಂಬುದು ಅಚ್ಚುಕಟ್ಟಾಗಿ ಮೂಡಿಬಂದಿದೆ.

Categories
ಸಿನಿ ಸುದ್ದಿ

ಕರ್ಫ್ಯೂ ರಾತ್ರೀಲಿ, ಕೊಲೆಯ ಕಥೆಯಲ್ಲಿ: ಟ್ವಿಸ್ಟು ಟೆಸ್ಟು ಇತ್ಯಾದಿ

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ಚಿತ್ರ: ‘ನೈಟ್‍ ಕರ್ಫ್ಯೂ’

ನಿರ್ದೇಶನ: ರವೀಂದ್ರ ವೆಂಶಿ

ನಿರ್ಮಾಣ: ಬಿ.ಎಸ್‍. ಚಂದ್ರಶೇಖರ್

ತಾರಾಗಣ: ಮಾಲಾಶ್ರೀ, ರಜನಿ ರಾಘವನ್‍, ಪ್ರಮೋದ್‍ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ಅಶ್ವಿನ್‍ ಹಾಸನ್, ಬಲ ರಾಜವಾಡಿ, ವರ್ಧನ್‍ ತೀರ್ಥಹಳ್ಳಿ ಇತರರು.

ಅದು ಕೊರೊನಾ ಸಮಯ. ಊರಾಚೆ ಇರುವ ಆಸ್ಪತ್ರೆಗೊಂದು ಕೇಸ್ ಬರುತ್ತೆ. ಅದು ಕೊರೊನಾ ಪಾಸಿಟಿವ್ ಹುಡುಗಿ. ಆದರೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಆ ಹುಡುಗಿ ಕಡೆಯವರು ವೈದ್ಯರ ಜೊತೆ ಚರ್ಚೆ ನಡೆಸುವಾಗಲೇ ಆ ಹುಡುಗಿಯ ಸಾವಾಗುತ್ತೆ. ಆದರೆ ಆ ಸಾವು ಕೊರೊನಾದಿಂದಲ್ಲ. ಹಾಗಾದರೆ ಏನದು? ಅಲ್ಲಿಂದ ಕುತೂಹಲ ಶುರು. ಅಲ್ಲಿ ಏನೆಲ್ಲಾ ಅವಘಡ ನಡೆಯುತ್ತೆ ಅನ್ನೋದೇ ಕಥೆ.

ಈ ಕಥೆ ನಡೆಯೋದು ಕೊರೊನಾ ಸಂದರ್ಭದಲ್ಲಿ. ಲಾಕ್ ಡೌನ್ ವೇಳೆ ನಡೆದ ಘಟನೆ ಎಷ್ಟೊಂದು ಭೀಕರವಾಗಿತ್ತು. ಯಾವ ಮಟ್ಟ ತಲುಪಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅದನ್ನು ದುರ್ಬಳಕೆ ಮಾಡಿಕೊಡವರೆಷ್ಟು ಮಂದಿ ಅನ್ನೋದು ಕೂಡ ಆ ದೇವರಿಗೇ ಗೊತ್ತು.

ಇರಲಿ ಇದು ಸೂಕ್ಷ್ಮ ವಿಷಯ. ಅದನ್ನೇ ಇಟ್ಟುಕೊಂಡು ನೋಡಿಸಿಕೊಂಡು ಹೋಗುವಂತೆ ನಿರ್ದೇಶಕ ರವೀಂದ್ರ ವೆಂಶಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಇಡೀ ಚಿತ್ರ ಆಸ್ಪತ್ರೆಯಲ್ಲಿ ನಡೆಯುತ್ತೆ. ಲಾಕ್ ಡೌನ್ ವೇಳೆ ಅಂಥದ್ದೊಂದು ಘಟನೆ ನಡೆದು ಹೋಯ್ತು ಅನ್ನೋದು ಕೂಡ ಅಚ್ಚರಿ. ಆ ಅಚ್ಚರಿ ಏನೆಂಬುದನ್ನೊಮ್ಮೆ ಸಿನಿಮಾದಲ್ಲೇ ತಿಳಿಯಬೇಕು.

ನೋಡುಗರಿಗೆ ಇಲ್ಲಿ ಟ್ವಿಸ್ಟು ಇದೆ ಹಾಗೆಯೇ ಟೆಸ್ಟೂ ಇದೆ. ಅದೊಂದು ರೀತಿ ಟಾಸ್ಕ್ ಇದ್ದಂತೆ. ತಾಳ್ಮೆಯಿಂದ ನೋಡಿದರೆ ಮಾತ್ರ ಕೊರೊನಾ ವೇಳೆ ನಡೆದ ಕರಾಳ ಸತ್ಯದ ಅರಿವಾಗುತ್ತೆ. ಅಷ್ಟಕ್ಕೂ ಆ ಸತ್ಯವೇನು? ಈ ಪ್ರಶ್ನೆಗೆ ಉತ್ತರ ಒಂದು ಕೊಲೆ!

ಮೊದಲರ್ಧ ಸಿನಿಮಾ ಕೊಂಚ ನಿಧಾನ ಎನಿಸಿದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಇಂಟ್ರೆಸ್ಟ್ ಎನಿಸುತ್ತೆ ಅದಕ್ಕೆ ಕಾರಣ ಬರುವ ಕೆಲ ತಿರುವು. ಆ ತಿರುವು ಏನೆಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಕಥೆ ಏನು?

ಕೋವಿಡ್‍ ವೇಳೆ ನೈಟ್‍ ಕರ್ಫ್ಯೂ ಇರುತ್ತೆ. ಆ ಒಂದು ರಾತ್ರಿ ನಡೆಯುವ ಕಥೆ ಇದು. ಪ್ರಾಮಾಣಿಕವಾಗಿ ರೋಗಿಗಳ ಉಪಚರಿಸೋ ವೈದ್ಯೆ ದುರ್ಗಾ (ಮಾಲಾಶ್ರೀ) ಅವರ ಜೊತೆ ಕಿರಿಯ ವೈದ್ಯೆ ವೇದ (ರಂಜನಿ ರಾಘವನ್‍) ಕೆಲಸ ಮಾಡುವ ಆಸ್ಪತ್ರೆಗೆ ಒಂದು ಕೋವಿಡ್ ಕೇಸ್ ಬರುತ್ತೆ. ಅಲ್ಲೊಂದು ಘಟನೆ ನಡೆಯುತ್ತೆ. ಆ ಘಟನೆ ಇಡೀ ಕಥೆಯ ವೇಗ ಹೆಚ್ಚಿಸುತ್ತೆ. ಒಂದು ರೀತಿ ರಣರಂಗವೇ ನಡೆಯುತ್ತೆ. ಅದಕ್ಕೆ ಕಾರಣ ಕೊಲೆ!! ಅರೇ ಕೋವಿಡ್ ಆಸ್ಪತ್ರೆಯಲ್ಲಿ ಕೊಲೆಯೇ? ಈ ಪ್ರಶ್ನೆ ಸಹಜ. ಆದರೆ, ನಿರ್ದೇಶಕರು ಆ ಕೊಲೆ ಯಾಕಾಯಿತು, ಹೇಗಾಯಿತು ಎಂಬುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅಷ್ಟಕ್ಕೂ ಕೊಲೆ ಮಾಡಿದ್ಯಾರು ಯಾಕೆ ಎಂಬುದೇ ಸಿನಿಮಾದ ಹೈಲೆಟ್.

ಮಾಲಾಶ್ರೀ ಇದ್ದ ಮೇಲೆ ಹೊಡೆದಾಟ ಇರದಿದ್ದರೆ ಹೇಗೆ? ಅವರಿಲ್ಲಿ ಡಾಕ್ಟರ್. ಆದರೂ ಎದುರಾಳಿಗಳನ್ನು ಹಿಗ್ಗಾಮುಗ್ಗ ಜಾಡಿಸುತ್ತಾರೆ. ಇಲ್ಲಿ ಮಾಲಾಶ್ರೀ ಫ್ಯಾನ್ಸ್ ಗೆ ಖಂಡಿತ ಫೈಟ್ ಇಷ್ಟವಾಗುತ್ತೆ. ಭರ್ಜರಿ ಫೈಟ್ಸ್ ಇಲ್ಲಿ ಕಾಣಬಹುದು.

ಸಿನಿಮಾ ಗಂಭೀರವಾಗಿ ಸಾಗುತ್ತಿರುವ ಮಧ್ಯೆ ಸಾಧುಕೋಕಿಲ ಅವರ ಹಾಸ್ಯ ಕಾಣಿಸಿಕೊಂಡು ಸ್ವಲ್ಪ ತಾಳ್ಮೆ ಕೆಡಿಸುತ್ತೆ. ಅದು ಬಿಟ್ಟರೆ ಉಳಿದಂತೆ ಯಾವ ಸಮಸ್ಯೆ ಇಲ್ಲ. ಒಂದೇ ಕಾಸ್ಟ್ಯೂಮ್ ಬಹುತೇಕ ಒಂದೇ ಲೊಕೇಷನ್ ಇಷ್ಟರಲ್ಲೇ ಕಥೆ ಕಟ್ಟಿಕೊಡುವ ಜಾಣತನದಲ್ಲಿ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಸಣ್ಣಪುಟ್ಟ ಮಿಸ್ಟೇಕ್ ಇಲ್ಲೂ ಇದೆ. ಅದನ್ನು ಹೊರತು ಪಡಿಸಿದರೆ ಕೊರೊನಾ ‘ ‘ಭಯ’ ಕಾಡುವುದಿಲ್ಲ.

ಯಾರು ಹೇಗೆ ನಟಿಸಿದ್ದಾರೆ?

ಮಾಲಾಶ್ರೀ ಅವರಿಲ್ಲಿ ವೈದ್ಯರಾಗಿ ಇಷ್ಟವಾಗುವುದರ ಜೊತೆಗೆ ಮಾನವೀಯತೆಗಾಗಿ ಹೊಡೆದಾಡುವ ದುರ್ಗೆಯಾಗಿಯೂ ಗಮನ ಸೆಳೆಯುತ್ತಾರೆ. ಮೊದಲಾರ್ಧ ಅಸಹಾಯಕಿ ಎನಿಸುವ ಅವರು ದ್ವಿತಿಯಾರ್ಧ ಅಬ್ಬರಿಸಿ ಬೊಬ್ಬರಿಸುತ್ತಾರೆ.

ಪ್ರಮೋದ್ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡದೆ ಹೈಲೆಟ್ ಆಗಿದ್ದಾರೆ. ಮಾಲಾಶ್ರೀ ಎದುರು ಹೊಡೆದು ಹೊಡೆಸಿಕೊಳ್ಳುವ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ಅಶ್ವಿನ್ ಹಾಸನ್, ವರ್ದನ್ ತೀರ್ಥಹಳ್ಳಿ ಬಲರಾಜವಾಡಿ ಇಲ್ಲಿ ವಿಲನ್ ಗಳಾಗಿ ಗಮನ ಸೆಳೆದಿದ್ದಾರೆ. ರಂಜನಿ ಅವರಿಲ್ಲಿ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ರಂಗಾಯಣ ರಘು ಇನ್ಸ್ ಪೆಕ್ಟರ್ ಆಗಿ ಖದರ್ ತೋರಿಲ್ಲ. ಸಾಧು ಕೋಕಿಲ, ಮಂಜು ಅವರು ಹೊರತಾಗಿಲ್ಲ.

ಪ್ರಮೋದ್‍ ಭಾರತೀಯ ಅವರು ತಮ್ಮ ಕ್ಯಾಮೆರಾ ಕೈ ಚಳಕದಲ್ಲಿ ಕತ್ತಲಾಟವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ ಅಷ್ಟಾಗಿ ರುಚಿಸಲ್ಲ.

Categories
ಸಿನಿ ಸುದ್ದಿ

ರಾಮಾಯಣಕ್ಕೆ ಸಾಥ್ ಕೊಟ್ಟ ರಾಕಿಭಾಯ್-ನಮಿತ್ ಮಲ್ಹೋತ್ರಾ: ರಾಮಾಯಣ ಚಿತ್ರ ನಿರ್ಮಿಸಲು ಸೈ ಎಂದ ಯಶ್

ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ.

ರಾಮಾಯಣ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ ಎಂದರು.

ಯಶ್ ಮಾತನಾಡಿ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ನ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ ಎಂದರು.

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

Categories
ಸಿನಿ ಸುದ್ದಿ

ಇದು ಶಿಕ್ಷಣ ವಂಚನೆ ಕಥೆ: ಸ್ಕ್ಯಾಮ್ 1770 ಏಪ್ರಿಲ್ 12ಕ್ಕೆ ರಿಲೀಸ್

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ “SCAM 1770” ಚಿತ್ರ ಏಪ್ರಿಲ್ 12 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ SCAM 1770. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು.

ಡಾ. ಇಂದು ನಟೇಶ್ ಹಾಗೂ ಅಡ್ವೊಕೇಟ್ ನೇತ್ರಾವತಿ ಅವರು ಕಥೆ ಬರೆದಿದ್ದು, ವಿಕಾಸ್ ಪುಷ್ಪಗಿರಿ ಹಾಗೂ ಶಂಕರ್ ರಾಮನ್ ಚಿತ್ರಕಥೆ ಬರೆದಿದ್ದಾರೆ‌. ಸಂಭಾಷಣೆ ಶಂಕರ್ ರಾಮನ್ ಅವರದು.

ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನ “SCAM 1770” ಚಿತ್ರಕ್ಕಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ನಿಶ್ವಿತ(ನಾಯಕಿ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಏಪ್ರಿಲ್ 12ರಿಂದ ಚಿತ್ರ ಮಂದಿರದಲ್ಲಿ ನೈಟ್ ಕರ್ಫ್ಯೂ! ಇದು ಮಾಲಾಶ್ರೀ ಚಿತ್ರ

ಆಕ್ಷನ್ ಕ್ವೀನ್ ಮಾಲಾಶ್ರೀ ಗ್ಯಾಪ್ ನಂತರ ’ನೈಟ್ ಕರ್ಫ್ಯೂ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸೇನೆಯಲ್ಲಿದ್ದು ಸೇವೆ ಸಲ್ಲಿಸಿದ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ಹಾಗೂ ಕುತೂಹಲದ ಕಥೆ ಹೊಂದಿದ್ದು, ಕೋವಿಡ್ 19 ಸಂದರ್ಭದಲ್ಲಿ ನಡೆದಂತಹ ಸತ್ಯ ಘಟನೆಗಳನ್ನು ತೆಗೆದುಕೊಂಡು ಅದನ್ನು ದೃಶ್ಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ರವೀಂದ್ರವೆಂಶಿ. ಇವರು ಈ ಹಿಂದೆ ’ಪುಟಾಣಿ ಸಫಾರಿ’ ’ಮಠ’ ಮತ್ತು ’ವಾಸಂತಿ ನಲಿದಾಗ’ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯುಎ ಪ್ರಮಾಣಪತ್ರ ನೀಡಿದೆ.

ಬಿಲ್ಡರ್ ಹಾಗೂ ಡೆವಲಪರ್ ಆಗಿರುವ ಬೆಂಗಳೂರಿನ ಬಿ.ಎಸ್.ಚಂದ್ರಶೇಖರ್ ನಿರ್ಮಾಣ ಮಾಡಿದ್ದ ಮಕ್ಕಳ ಸಿನಿಮಾ ’ಪುಟಾಣಿ ಸಫಾರಿ’ ಅನೇಕ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ಅಲ್ಲದೆ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಇದರ ಪ್ರೇರಣೆಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಕ್ತಿಗಾಗಿ ಮಾಲಾಶ್ರೀ, ಯುಕ್ತಿಗಾಗಿ ರಂಜನಿರಾಘವನ್ ಸಹ ಡಾಕ್ಟರ್ ಆಗಿ ನಟನೆ ಮಾಡಿದ್ದಾರೆ.

ಇವರೊಂದಿಗೆ ಪ್ರಮೋದ್‌ಶೆಟ್ಟಿ, ರಂಗಾಯಣರಘು, ಸಾಧುಕೋಕಿಲ, ಸಹನಶ್ರೀ, ಅಶ್ವಿನ್‌ರಮೇಶ್, ವರ್ಧನ್‌ತೀರ್ಥಹಳ್ಳಿ, ಮಂಜುಪಾವಗಡ, ಮಂಡ್ಯಸಿದ್ದು, ಸದಾನಂದ, ಗಂಗರಾಜು, ನಿತಿನ್, ವಸಂತಕುಮಾರ್.ಸಿ, ಬೇಬಿ ಮೌಲ್ಯಮಂಜುನಾಥ, ಜ್ಯೋತಿ, ರಜನಿ, ಶಿವರಾಜ್‌ಶೆಟ್ಟಿ, ಮಹೇಶ್.ಎಂ, ಅಲ್ಸೂರು ರಾಜಕುಮಾರ್ ಅಭಿನಯಿಸಿದ್ದಾರೆ.

ಹಿನ್ನಲೆ ಸಂಗೀತ ಎಂ.ಎಸ್.ಮಾರುತಿ, ಛಾಯಾಗ್ರಹಣ ಪ್ರಮೋದ್‌ಭಾರತೀಯ, ಸಾಹಸ ಜಾಗ್ವಾರ್‌ಸಣ್ಣಪ್ಪ, ಸಂಕಲನ ಸಿ.ರವಿಚಂದ್ರನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದ್ದು, ಏಪ್ರಿಲ್ 12ರಂದು ತೆರೆ ಕಾಣುತ್ತಿದೆ.

Categories
ಸಿನಿ ಸುದ್ದಿ

ಡಾಲಿ ಈಗ ಕೋಟಿ ಒಡೆಯ! ಇದು ಪರಮ್ ನಿರ್ದೇಶನದ ಮೊದಲ‌ ಚಿತ್ರ

ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ ಅವರ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದ ಈ ಸಿನಿಮಾ ಹೆಸರು ಕೋಟಿ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ.


ಯುಗಾದಿಗೆ ಬಂತು ಪೋಸ್ಟರ್


ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆಯುತ್ತಿರುವುದಂತೂ ಹೌದು.‌
ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.


ಸಮರ್ಥ ಚಿತ್ರತಂಡ


ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್‌ ಚಾನೆಲ್ಲಿನಿಂದ ಹೊರಗೆ ಬಂದಾಗ ತಾನು ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು ಅವರು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ ನ ಜ್ಯೋತಿ ದೇಶಪಾಂಡೆ.

ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ.
ಸಿನಿಮಾ ಶೀರ್ಷಿಕೆ ಅನಾವರಣ ಮಾಡುತ್ತಲೇ ಇದೇ ಶನಿವಾರ ಟೀಸರ್‌ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.‌

Categories
ಸಿನಿ ಸುದ್ದಿ

02 ಇದು ಪುನೀತ್ ರಾಜ್‍ಕುಮಾರ್ ಮೆಚ್ಚಿದ ಕಥೆ: ಏಪ್ರಿಲ್ 19ಕ್ಕೆ ರಿಲೀಸ್

ಸದಾ ಹೊಸಬರ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುವ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “O2” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದೇ ಏಪ್ರಿಲ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ.

“ಮಾಯಾಬಜಾರ್” ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜಕುಮಾರ್ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. “O2”, ಪ್ರಮುಖವಾಗಿ ಮೆಡಿಕಲ್ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು “02” ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ನಾಯಕಿ ಶ್ರದ್ದಾ(ಆಶಿಕಾ ರಂಗನಾಥ್) ಮಾಡುತ್ತಾರೆ. “O2” ಡ್ರಗ್ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದರಿಸುತ್ತಾರೆ.

ಇದಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹದು. ಅವಕಾಶ ನೀಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದರು ನಿರ್ದೇಶಕ ದ್ವಯರಾದ ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್. ರಾಘವ್ ನಾಯಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಕೂಡ.

ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ ಎಂದು ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಾನು ಹಾಗೂ ಅವರು ಇಬ್ಬರು ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆ. “O2” ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡು ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ಎರಡು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ಆರಂಭಿಸುತ್ತಿದ್ದೇವೆ‌. ಏಪ್ರಿಲ್ 19 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಮ್ಮ ಇಡೀ ಕುಟುಂಬದವರು ರಾಜಕುಮಾರ್ ಅವರ ಕುಟುಂಬದ ಅಪ್ಪಟ್ಟ ಅಭಿಮಾನಿಗಳು. ಅಂತಹುದರಲ್ಲಿ ನನಗೆ ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ನನ್ನದು ಈ ಚಿತ್ರದಲ್ಲಿ ಎನ್ ಆರ್ ಐ ವೈದ್ಯನ ಪಾತ್ರ ಎಂದು ನಾಯಕ ಪ್ರವೀಣ್ ತೇಜ್ ತಿಳಿಸಿದರು.

ಶ್ರದ್ದಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಆಶಿಕಾ ರಂಗನಾಥ್. ಸಂಗೀತ ನಿರ್ದೇಶಕ ವಿವಾನ್ ರಾಧಾಕೃಷ್ಣ ಹಾಗೂ ನಟ ಪುನೀತ್ ಬಾ ಉಪಸ್ಥಿತರಿದ್ದರು.

ಪುಟ್ಟಸ್ವಾಮಿ ಕೆ.ಬಿ ಹಾಗೂ ಸತೀಶ್ ವಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ “O2” ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಬಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ರತ್ನನಿಗೆ ಅಪ್ಪು ಆಪ್ತರ ಸಾಥ್: ಹಾಡು ಹೊರಬಂತು

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಇತ್ತೀಚಿಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದೊಂದು ಹಾಡನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳು ಬಿಡುಗಡೆ ಮಾಡಿದ್ದು ವಿಶೇಷ. “ಅಪ್ಪು” ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯಿಂದ ಬಂದಿದ್ದ ರಘುಪತಿ ಹಾಗೂ ಮಾರುತಿ ಅವರು “ರತ್ನ” ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

“ರತ್ನ” ಕೂಡ ಅಪ್ಪು ಅಭಿಮಾನಿಯ ಕುರಿತಾದ ಚಿತ್ರವಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಿದ್ದ ಅಷ್ಟು ಜನ ಜನ ಅಭಿಮಾನಿಗಳು ಹಾಗೂ ಒಡನಾಡಿಗಳು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ತಪ್ಪದೇ ನೋಡಿ ಎಂದರು‌.

ಪುನೀತ್ ರಾಜಕುಮಾರ್ ಅವರು ನನಗೆ ಮಾಡಿರುವ ಸಹಾಯ ಹಾಗೂ ಸಹಕಾರ ಅಷ್ಟಿಷ್ಟಲ್ಲ. ಅವರ ಒಳ್ಳೆಯ ಗುಣಗಳೇ, ನನಗೆ ಈ ಚಿತ್ರ ಮಾಡಲು ಸ್ಪೂರ್ತಿ. ನಾನು ಕೂಡ ಅವರ ಅಪ್ಪಟ್ಟ ಅಭಿಮಾನಿ. ಅಪ್ಪು ಅವರನ್ನು ಜನ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರ ನೋಡಬೇಕು. ಏಕೆಂದರೆ ಇದು ಅಪ್ಪು ಅವರ ಅಭಿಮಾನಿಯ ಕುರಿತಾದ ಚಿತ್ರ. “ರತ್ನ” ಚಿತ್ರದ ಹಾಡುಗಳನ್ನು ಅಪ್ಪು ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳಿಂದ ಬಿಡುಗಡೆ ಮಾಡಿಸುವ ಹಂಬಲವಿತ್ತು. ಸತೀಶ್ ಬಾಬು ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅಭಿಮಾನಿಗಳಿಗೆ ನನ್ನ ಧನ್ಯವಾದ. ಏಪ್ರಿಲ್ 19 ಚಿತ್ರ ಬಿಡುಗಡೆಯಾಗಲಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಬಸವರಾಜ್ ಬಳ್ಳಾರಿ.

ನಾಯಕ ವರ್ಧನ್, ಸಂಕಲನ ಕಾರ ಹಾಗೂ ನಟ ನಾಗೇಂದ್ರ ಅರಸ್, ನಟ ಅಮಿತ್ ರಾವ್, ವಿತರಕ ವಿಜಯ್ ಕುಮಾರ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್,ಕಲ್ಕೆರೆ ರಾಘವೇಂದ್ರ ಕರೂರ್ “ರತ್ನ” ಚಿತ್ರದ ಕುರಿತು ಮಾತನಾಡಿದರು.

ಹರ್ಷಲ ಹನಿ ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್,ವಿಜಯ್ ಚಂಡೂರ್. ಮಹೇಶ್ ಬಾಬು.ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ.ಜಗದೀಶ್ ಕೊಪ್ಪ ಮುಂತಾದವರು “ರತ್ನ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನಾಡಪ್ರಭು ಕೆಂಪೇಗೌಡ ಸಿನಿಮಾ ಅನೌನ್ಸ್: ಇದು ದಿನೇಶ್ ಬಾಬು ನಿರ್ದೇಶನದ‌ ಚಿತ್ರ; ಕಿರಣ್ ತೋಟಂಬೈಲ್ ನಿರ್ಮಾಣ

ಕನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ದಿನೇಶ್ ಬಾಬು.

ಇನ್ಸ್‌ಪೆಕ್ಟರ್‌ ವಿಕ್ರಂ, ಅಭಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಿದ್ರೆ ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವವರು ಯಾರು ಅನ್ನೋದನ್ನು ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿಲ್ಲ. ಜನಪ್ರಿಯ ನಟರೊಬ್ಬರು ಕೆಂಪೇಗೌಡರಾಗಿ ರಾರಾಜಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಸದ್ಯ ಆ ನಟ ತಮ್ಮ ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನಿಮ್ಮ ಮುಂದೆ ಪರಿಚಯಿಸುವುದಾಗಿ ಚಿತ್ರತಂಡ ತಿಳಿಸಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಹಾಡುಗಳಿಗಿದ್ದು, ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿದ್ದು, ಚೇತನ್ ರಾಜ್ ನಿರ್ಮಾಣ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಕನ್ನಡ ಹಾಗೂ‌‌‌ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ‌ ನಿರ್ಮಾಣವಾಗಲಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ‌ ಮುಹೂರ್ತ ನಡೆಯಲಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

error: Content is protected !!