ಚಿತ್ರ ವಿಮರ್ಶೆ: ಪ್ರೇಮಿ
ನಿರ್ದೇಶನ: ಎಸ್.ಪ್ರದೀಪ್ ವರ್ಮ
ನಿರ್ಮಾಣ: ಸಿದ್ದಲಿಂಗಯ್ಯ
ತಾರಾಗಣ: ಅದ್ವಿಕ್, ಸಾತ್ವಿಕ, ಪ್ರದೀಪ್ ವರ್ಮ, ಶೋಭಿತ ಇತರರು.
ಕನ್ನಡದಲ್ಲಿ ಇಬ್ಬರು ನಾಯಕಿಯರಿರುವ ಹಲವಾರು ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಈ ‘ಪ್ರೇಮಿ’ ಯೂ ಸೇರಿದೆ.
ಇಲ್ಲೂ ಒಬ್ಬ ನಾಯಕ. ಇಬ್ಬರು ನಾಯಕಿಯರು. ತರಹೇವಾರಿ ಪಾತ್ರಗಳಿವೆ. ಹಾಗಂತ ಕಥೆ ಫ್ರೆಶ್ ಅಂದುಕೊಳ್ಳುವಂತಿಲ್ಲ. ಚಿತ್ರಕಥೆಯಲ್ಲಿ ಬಿಗಿ ಹಿಡಿತ ಬೇಕಿತ್ತು. ನಿರೂಪಣೆಯಲ್ಲಿ ವಿಶೇಷತೆಯೂ ಇಲ್ಲ. ಸುಮ್ಮನೆ ನೋಡಿಸಿಕೊಂಡು ಹೋಗುತ್ತಾ ? ಈ ಪ್ರಶ್ನೆಗೆ ಉತ್ತರ ಕಷ್ಟ. ಇಷ್ಟು ಹೇಳಿದ ಮೇಲೂ ಸಿನಿಮಾ ನೋಡುವ ಧೈರ್ಯ ಮಾಡಬಹುದು.

ಕಥೆ ಸರಳವಾಗಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ಆದರೆ, ನಿರ್ದೇಶಕರು ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಇನ್ನು ಲಿಪ್ ಸಿಂಕ್ ಬಗ್ಗೆ ಹೇಳದಿರುವುದೇ ವಾಸಿ.
ಕಥೆ ಏನು?
ಅವನು ಪ್ರೇಮ್. ಅವಳು ಮಧುಮತಿ. ಮತ್ತೊಬ್ಬಾಕೆ ಟೀನಾ. ಅವನ ಮೇಲೆ ಟೀನಾಗೆ ಪ್ರೀತಿ. ಆದರೆ ಅವನಿಗೆ ಮತ್ತೊಬ್ಬಾಕೆಯ ಮೇಲೆ ಪ್ರೀತಿ. ಕಥೆಯಲ್ಲಿ ಒಂದು ತಿರುವು ಇದೆ.ಅದೇ ನಾಯಕನ ಮದ್ವೆ? ಇಲ್ಲಿ ಯಾರನ್ನು ಹೇಗೆ ಮದ್ವೆ ಆಗ್ತಾನೆ ಅನ್ನೋದು ಸಸ್ಪೆನ್ಸ್.
ಕುಜ ದೋಷ ಅನ್ನೋ ಕಾರಣಕ್ಕೆ ನಾಯಕನ ಲೈಫಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅದೇ ಸಿನಿಮಾದ ಅಚ್ಚರಿ.
ಮೊದಲರ್ಧ ಬೆಂಗಳೂರಲ್ಲಿ ನಡೆಯೋ ಕಥೆ, ದ್ವಿತಿಯಾರ್ಧ ಹಳ್ಳಿಗೆ ಶಿಫ್ಟ್ ಆಗುತ್ತೆ. ಅಲ್ಲೊಂದಷ್ಟು ಟ್ವಿಸ್ಟು, ಟೆಸ್ಟು ಎದುರಾಗುತ್ತೆ. ನಾಯಕನ ಬಾಲ್ಯದಲ್ಲೊಂದು ಘಟನೆ ನಡೆದು ಹೋಗಿರುತ್ತೆ. ಆ ಘಟನೆ ಸಿನಿಮಾದ ಪ್ಲಸ್ಸು. ಆದರೆ ಸಿನಿಮಾದಲ್ಲಿ ಮೈನಸ್ ಜಾಸ್ತಿ. ಮದ್ವೆ ಅನ್ನೋದು ಇಲ್ಲಿ ಹೈಲೆಟ್. ಅಲ್ಲಿ ಡ್ರಾಮಾವೂ ಇದೆ. ಕೊನೆಗೆ ಇಬ್ಬರಲ್ಲಿ ಯಾರನ್ನು ಮದ್ವೆ ಆಗ್ತಾನೆ ಅನ್ನೋದು ಸಸ್ಪೆನ್ಸ್.

ಯಾರು ಹೇಗೆ?
ಅದ್ವಿಕ್ ಹೀರೋ ಆಗಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಡೈಲಾಗ್ ನಲ್ಲಿ ವಾಯ್ಸ್ ಜಾಸ್ತಿ ಇರಬೇಕಿತ್ತು. ಬಾಡಿ ಲಾಂಗ್ವೇಜ್ ಬಗ್ಗೆ ಇನ್ನಷ್ಟು ಗಮನಹರಿಸಬೇಕು. ಉಳಿದಂತೆ ಫೈಟು, ಡ್ಯಾನ್ಸು ಎಲ್ಲದರಲ್ಲೂ ಓಕೆ.
ಸಾತ್ವಿಕ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶೋಭಿತ ಹಾಗು ಇತರೆ ಪಾತ್ರಗಳು ಮೋಸ ಮಾಡಿಲ್ಲ.
ಪರದೆ ಮೇಲೆ ಎಲ್ಲವೂ ಚೆನ್ನಾಗಿ ಕಾಣುತ್ತೆ. ಸಂಗೀತ ಹಾಗು ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಛಾಯಾಗ್ರಹಣ ಪ್ರೇಮಿಯನ್ನು ಅಂದವಾಗಿಸಿದೆ.





