ವಿಭಿನ್ನ ಕಥಾಹಂದರದ ಈ ಚಿತ್ರದ ಹೀರೋ ಮೈಸೂರು ಹುಡುಗ ಮನ್ವಿತ್….
ಮೈಸೂರಿನ ಹೊಸತಂಡದ ಹೊಸಪ್ರಯತ್ನ “ಆ್ಯಂಗರ್”. ಈ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಸೇರಿದಂತೆ ಅನೇಕ ಗಣ್ಯರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.
ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರವ, ಚಿತ್ರದ ನಾಯಕ ಬಾಲ್ಯದ ಕೆಲವು ಘಟನೆಗಳಿಂದ ತುಂಬಾ ಮುಂಗೋಪಿಯಾಗಿರುತ್ತಾನೆ. ನಾಯಕಿಯ ಪ್ರವೇಶದ ನಂತರ ಆತನ ಜೀವನದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಹಾಡುಗಳು ಸುಂದರವಾಗಿದೆ. ಅಷ್ಟೇ ಸುಂದರವಾಗಿ ಚಿತ್ರವೂ ಮೂಡಿ ಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂಬುದು ನಿರ್ದೇಶಕ ನಟರಾಜ್ ರಂಗಾಯಣ ಅವರ ಮಾತು.
ರಂಗಾಯಣದಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಇದೇ ಮೊದಲ ಚಿತ್ರ. ಮುಂಗೋಪಿಯಾದರೆ ಏನೆಲ್ಲಾ ಸಂಕಷ್ಟ ಎದರಾಗುತ್ತದೆ ಎಂಬುದನ್ನು ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಮನ್ವಿತ್.
ಚಿತ್ರದಲ್ಲಿ ಏಳು ಹಾಡುಗಳಿದೆ. ಅದರಲ್ಲಿ ಮೂರು ಬಿಟ್ ಸಾಂಗ್. ಶಶಾಂಕ್ ಶೇಷಗಿರಿ ಸೇರಿದಂತೆ ಎಲ್ಲಾ ಕನ್ನಡ ಗಾಯಕರ ಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿದೆ ಎಂದು ಸಂಗೀತ ನಿರ್ದೇಶಕ ವಿಜಯ್ ಮಾಹಿತಿ ನೀಡಿದರು.
ನಾಯಕಿ ಪುಣ್ಯಗೌಡ, ಸಾಹಸ ನಿರ್ದೇಶಕ ಮಾಸ್ ಮಾದ, ಗಾಯಕ ಶಶಾಂಕ್ ಶೇಷಗಿರಿ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಅಭಿನಯಿಸಿರುವ ಶಿವಾಜಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಬಣ್ಣದ ಜಗತ್ತಿನಲ್ಲಿ ಕನಸುಗಳ ಹೊತ್ತು ಬರುವ ಮಂದಿಗೇನು ಕಮ್ಮಿ ಇಲ್ಲ. ಪ್ರತಿಭೆ, ಅದೃಷ್ಟ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ. ಇಂತಹ ಪ್ರತಿಭೆಯೊಬ್ಬರು ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಿಂದ ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಅವ್ರು ತೆಲುಗಿನವರಲ್ಲ. ಅಪ್ಪಟ ಕನ್ನಡದವರೇ. ಹೆಸರು ಕಿಶೋರ್ ಭಾರ್ಗವ್. ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಾಗಿ ಕಿಶೋರ್ ರ್ಭಾರ್ಗವ್ ಗಮನ ಸೆಳೆಯುತ್ತಿದ್ದಾರೆ
ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿ ಸೈಕೋ ಎಂಬ ತೆಲುಗು ಸಿನಿಮಾ ಮಾಡಿದ್ದ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ಸ್ಟಾಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ಸ್ಟಾಕರ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.
ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ನಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡನಿರ್ಮಾಣ ಮಾಡಿದ್ದಾರೆ.
ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿರಲಿದೆ. ಸದ್ಯ ಸ್ಟಾಕರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಬಿಡುಗಡೆಗೆ ಎದುರು ನೋಡುತ್ತಿದೆ.
ಕೆಲವರ್ಷಗಳ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರ ಬಂದಿತ್ತು. ಅದರ ನಿರ್ದೇಶಕ ಹಾಗೂ ನಾಯಕನೂ ಆಗಿದ್ದ ವಿನಯ್ ರತ್ನಸಿದ್ಧಿ ಅವರೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿ ನಿಂತಿರುವ ಈ ಚಿತ್ರದ ಹೆಸರು ಗಂಡುಲಿ. ವಿನಯ್ ರತ್ನಸಿದ್ದಿ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾನರಸಿಂಹರಾಜು ನಿರ್ವಹಿಸಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹೆಚ್ಚು ವೀಕ್ಷಣೆಯಾಗುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರವನ್ನು ಸಂಕ್ರಾಂತಿಗೆ ರಿಲೀಸ್ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.
ನಿರ್ದೇಶಕ ಹಾಗೂ ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ, ನಮ್ಮ ಚಿತ್ರ 2 ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ವ್ಯಾಪಿಸಿದ ಕಾರಣದಿಂದಾಗಿ ಮೂರು ಬಾರಿ ಮುಂದಕ್ಕೆ ಹೋಯಿತು. ಈಗ ಜನವರಿ 14ರಂದು ರಿಲೀಸ್ ಮಾಡಲು ನಿರ್ಧರಿಸಿದ್ದೇವೆ. ಚಿತ್ರದಲ್ಲಿ ವಿಭಿನ್ನ ಶೈಲಿಯ 3 ಹಾಡುಗಳಿವೆ. ನಮ್ಮ ಅಮರೇಂದ್ರ, ಪುನೀತ್, ಲೋಕೆಶ್ ರಾಜಣ್ಣ ಹಾಗೂ ಚಂದನ. ಸೇರಿ 4ಜನ ನಿರ್ಮಾಪಕರು. ಅವರಲ್ಲಿ ಅಮರೇಂದ್ರ ಅವರು ಮೂಲತಃ ತೆಲುಗುನವರಾದರೂ ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅಲ್ಲದೆ ಒಂದು ಚಿತ್ರವನ್ನು ನಿರ್ದೇಶನ ಕೂಡ ಮಾಡಿದ್ದಾರೆ. ನಟ ಧರ್ಮೇಂದ್ರ ಅರಸ್ ಅವರು ಬಹು ಮುಖ್ಯವಾದ ಪಾತ್ರ ಮಾಡಿದ್ದಾರೆ. ಗಂಡುಲಿ ಎಂದರೆ ಹುಲಿಯಷ್ಟೇ ಧೈರ್ಯವಂತ, ಸಾಹಸವಂತ ಎಂದರ್ಥ. ಸಂಪೂರ್ಣ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದರಲ್ಲಿದೆ. ಅದೊಂದು ದಿವಾನರ ಕುಟುಂಬ. ಊರಿನ ಬಡಜನರಿಗೆ ದಾನ-ಧರ್ಮ ಮಾಡುತ್ತ ಜನರ ಪಾಲಿಗೆ ಆಪದ್ಬಾಂಧವರು ಎನಿಸಿಕೊಂಡಿದ್ದ ಆ ಕುಟುಂಬದ ಆಸ್ತಿ, ಪಾಸ್ತಿ ದಿನಗಳೆದಂತೆ ಕರಗುತ್ತಾ ಕೊನೆಗೊಂದು ದಿನ ಅವರೆಲ್ಲ ಸಾಮಾನ್ಯರ ಹಾಗೆ ಬದುಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ನಾಯಕ ಕೂಡ ಅದೇ ಫ್ಯಾಮಿಲಿಯಿಂದ ಬಂದ ಹುಡುಗ. ಆತ ತನ್ನ ತಾಯಿ ಜೊತೆ ಹಳ್ಳಿಯಲ್ಲಿ ಸಾಮಾನ್ಯ ಜನರ ಹಾಗೆ ಬದುಕುತ್ತಿರುವಾಗ ನಡೆದ ಒಂದು ಘಟನೆ ನಡೆಯುತ್ತದೆ. ಮುಂದೆ ಚಿತ್ರದಲ್ಲಿ ಕುತೂಹಲಕರವಾದ ತಿರುವುಗಳಿವೆ. ನಮ್ಮ ಮುಂದಿನ ಚಿತ್ರ ಪ್ರೇಮಂ ಕೂಡ ತೆರೆಗೆ ಸಿದ್ದವಾಗಿದೆ ಎಂದು ಹೇಳಿದರು.
ಹಿರಿಯ ನಟಿ ಸುಧಾ ನರಸಿಂಹರಾಜು, ದಾನ ಧರ್ಮಕ್ಕೆ ಹೆಸರಾದ ದಿವಾನರ ಮನೆತನದ ಹೆಣ್ಣು ಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಎಂಟರ್ಟೈನ್ ಮೆಂಟ್ ಕಥೆ ಈ ಚಿತ್ರದಲ್ಲಿದೆ. ನಾನು ಹೀರೋ ತಾಯಿ ಕೂಡ. ಹಳ್ಳಿ ವಾತಾವರಣದಲ್ಲಿ ನಡೆಯುವ ಕಥೆಯಿದು. ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ಮಾಸ್ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ನಾಯಕಿ ಛಾಯಾದೇವಿ ಒಬ್ಬ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಅಮರೇಂದ್ರ,ಪುನೀತ್, ಲೋಕೆಶ್ ರಾಜಣ್ಣ ಹಾಗೂ ಚಂದನ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಮಾಸ್, ಕ್ಲಾಸ್, ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೂ ಇದೆ. ಊರಿನ ಜನರೆಲ್ಲಾ ಹೆದರಿಕೊಳ್ಳುವಂತಹ ಘಟನೆಗಳು ನಡೆದಾಗ ಅದರ ಹಿಂದೆ ಯರ್ಯಾರಿದ್ದಾರೆ ಅದಕ್ಕೆ ಕಾರಣ ಏನು ಎನ್ನುವುದನ್ನು ನಾಯಕ ಪತ್ತೆ ಹಚ್ಚುತ್ತಾನೆ. ಊರಿನ ಗಂಡುಲಿ ಎನಿಸಿಕೊಳ್ಳುತ್ತಾನೆ. ಇದು ಈ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರಕ್ಕೆ ಅಜಯ್ ಮತ್ತು ರವಿದೇವ್ ಇವರ ಸಂಗೀತ, ರಾಜು ಶಿವಶಂಕರ್ ಮತ್ತು ಶ್ಯಾಮ್ ಅವರ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ, ಸುರೇಶ್ ಅವರ ಸಾಹಸವಿದೆ. ಉಳಿದ ತಾರಾಬಳಗದಲ್ಲಿ ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಇದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ ಭಜರೇ ಭಜರಂಗಿ-2 ಸಿನಿಮಾ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆಯ.. ಹರ್ಷ ಡೈರೆಕ್ಷನ್ ಗೆ ಪ್ರೇಕ್ಷಕ ಸಖತ್ ರೆಸ್ಪಾನ್ಸ್ ಕೊಟ್ಟಿದ್ದ. ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು-ಸುದ್ದಿ ಮಾಡಿದ್ದ ಭಜರಂಗಿ-2 ಈಗ ಒಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಟೀಸರ್, ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಭಜರಂಗಿ-2 ಅಕ್ಟೋಬರ್ 29ರಂದು ತೆರೆಗಪ್ಪಳಿಸಿತ್ತು. ರಾಜ್ಯಾದ್ಯಂತ ರೇ ರೇ ಭಜರಂಗಿ-2 ಕಣ್ತುಂಬಿಕೊಂಡು ಶಿವಣ್ಣನ ಭಕ್ತಗಣ ಖುಷಿಪಟ್ಟಿದ್ದು. ಹೊಸ ಕಥೆ, ಒಳ್ಳೆ ಸಂದೇಶ ಹೊತ್ತು ತಂದಿದ್ದ ಭಜರಂಗಿ-2 ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು.
ಎ ಹರ್ಷ ಡೈರೆಕ್ಷನ್ ನಲ್ಲಿ ರೆಡಿಯಾಗಿದ್ದ ಭಜರಂಗಿ-2 ಸಿನಿಮಾವನ್ನು ಜಯಣ್ಣ ಮತ್ತು ಭೋಗಣ್ಣ ಅದ್ಧೂರಿಯಾಗಿ ತಯಾರಿಸಿದ್ದರು. ಪ್ರೇಕ್ಷಕ ಮೆಚ್ಚಿಕೊಂಡ ಭಜರಂಗಿ-2 ಡಿಸೆಂಬರ್ 23ರಂದು ಜೀ5 ಒಟಿಟಿಯಲ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗಲಿದೆ.
ಹರಿಕಥಾಮೃತ ಸಾರದಂತಹ ಮೇರುಕೃತಿ ನೀಡಿರುವ ದಾಸ ಶ್ರೇಷ್ಠ ಶ್ರೀಜಗನ್ನಾಥ ದಾಸರ ಕುರಿತಾದ “ಶ್ರೀ ಜಗನ್ನಾಥ ದಾಸರು” ಚಿತ್ರ ನಮ್ಮ ರಾಜ್ಯವಷ್ಟೇ ಅಲ್ಲದೇ, ಹೊರ ದೇಶದಲ್ಲೂ ಜನಮನಸೂರೆಗೊಂಡಿದೆ
ನಿರ್ದೇಶಕ ಮಧುಸೂದನ್ ಹವಾಲ್ದಾರ್, ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದಾರೆ. ಈ ವೇಳೆ ಮಾತಾಡಿದ ಅವರು, ‘ ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆ ಕಂಡು ಆನಂದವಾಗಿದೆ. ಚಿತ್ರ ಆರಂಭಿಸಲು ಯೋಚನೆ ಮಾಡಿದಾಗ ನನ್ನ ಅನೇಕ ಸ್ನೇಹಿತರೆ, ಈಗಿನ ಕಾಲದಲ್ಲಿ ಈ ಸಿನಿಮಾ ಯಾರು ನೋಡುತ್ತಾರೆ ಎಂದಿದ್ದರು. ಆದರೆ ನಾನು ಧೃತಿಗೆಡಲಿಲ್ಲ. ಈ ಸಿನಿಮಾ ಮಾಡಿದ್ದೇನೆ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ತ್ರಿವಿಕ್ರಮ ಜೋಶಿ ಅವರ ಸಹಕಾರ ಮುಖ್ಯ ಕಾರಣ. ಚಿತ್ರ ನೋಡಿರುವ ಪಂಡಿತ, ಪಾಮರರೆಲ್ಲರು ಈ ಚಿತ್ರದ ಎರಡನೇ ಭಾಗ ನೋಡುವ ಕಾತುರದಲ್ಲಿದ್ದೇವೆ ಎಂದರು. ಆದಷ್ಟು ಬೇಗ ಆರಂಭ ಮಾಡುತ್ತೇವೆ. ಕರ್ನಾಟಕ ಕಂಡ ಶ್ರೇಷ್ಠ ಹರಿದಾಸರಾದ ಶ್ರೀ ವಿಜಯದಾಸರು ಹಾಗೂ ಶ್ರೀ ಪ್ರಸನ್ನ ವೆಂಕಟದಾಸರ ಕುರಿತಾದ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಂತೆ ಸಿನಿಮಾ ಮಾಡುವ ಯೋಜನೆಯಿದೆ’ ಎಂದರು.
ನಮ್ಮ ಸಿನಿಮಾ ಇಷ್ಟು ಜನಪ್ರಿಯತೆ ಪಡೆಯಲು ಶ್ರೀ ಜಗನ್ನಾಥ ದಾಸರ ಆಶೀರ್ವಾದವೇ ಕಾರಣ. ಹೋದಲೆಲ್ಲಾ ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೀರಿ ಎಂದು ಎಲ್ಲರೂ ಹೇಳುತ್ತಿರುವುದು ಕೇಳಿ ಕರ್ಣಾನಂದವಾಗಿದೆ. ಹಿಂದೆ ಮಂತ್ರಾಲಯ ಮಹಾತ್ಮೆ ಚಿತ್ರ ಬಿಡುಗಡೆಯಾದಾಗ ಜನ ಚಪ್ಪಲಿ ಬಿಟ್ಟು ಸಿನಿಮಾ ನೋಡಿದ್ದನ್ನು ಕೇಳಿದ್ದೆವು. ಈಗ ಈ ಚಿತ್ರವನ್ನು ಜನ ಹಾಗೆ ನೋಡುತ್ತಿದ್ದಾರೆ. ಕರ್ನಾಟಕದ ಜನರಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು. ಸುಮಾರು ಹದಿನೆಂಟಕ್ಕು ಹೆಚ್ಚು ಹೊರದೇಶದಲ್ಲಿ ಈ ಚಿತ್ರ ವೀಕ್ಷಿಸಿದ್ದಾರೆ. ಇನ್ನೂ ಹೆಚ್ಚಿನ ದೇಶಗಳಲ್ಲಿ ಸದ್ಯದಲ್ಲೇ ಪ್ರದರ್ಶನವಾಗಲಿದೆ. ಕೆಲವು ಕಡೆ ದಾಸರ ವೇಷ ಧರಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಾ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಸಿನಿಮಾ ಆರಂಭಕ್ಕೂ ಒಂದು ಗಂಟೆ ಮುಂಚೆ ಭಜನಾ ಗೋಷ್ಠಿ ಏರ್ಪಡಿಸುತ್ತಿದ್ದಾರೆ. ಇದನೆಲ್ಲಾ ಕಂಡು ಕಣ್ತುಂಬಿ ಬರುತ್ತಿದೆ ಎನ್ನುತ್ತಾರೆ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ.
ನನಗೆ ಇದು ಮೊದಲ ಚಿತ್ರ. ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ಈಗಿನ ಟ್ರೆಂಡ್ ಬೇರೆ ಇದೆ. ಜನ ಒಪ್ಪಿಕೊಳ್ಳುತ್ತಾರಾ? ಎಂಬ ಆತಂಕವಿತ್ತು. ಈಗ ಆತಂಕ ದೂರವಾಗಿದೆ. ಚಿತ್ರ ಗೆದ್ದಿದೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ಜಗನ್ನಾಥ ದಾಸರ ಪಾತ್ರಧಾರಿ ಶರತ್ ಜೋಶಿ.
ನಟ ಪ್ರಭಂಜನ ದೇಶಪಾಂಡೆ, ಕಥೆ, ಚಿತ್ರಕಥೆ ರಚನೆಯಲ್ಲಿ ನಿರ್ದೇಶಕರಿಗೆ ನೆರವಾಗಿರುವ ಜೆ.ಎಂ.ಪ್ರಹ್ಲಾದ್, ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ತಮ್ಮ ಅಭಿಪ್ರಾಯ ಹಂಚಿಕೊಂಡರು.
2022 ನೇ ಫೆಬ್ರವರಿಯಲ್ಲಿ ಬೆಂಗಳೂರು 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಈ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಕಥಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಏಷಿಯನ್, ಭಾರತೀಯ ಹಾಗೂ ಕನ್ನಡದ ಎಲ್ಲ ಉಪಭಾಷಾ ಚಲನಚಿತ್ರಗಳೂ ಸೇರಿದಂತೆ ಕನ್ನಡ ಸಿನಿಮಾಗಳು ಸ್ಪರ್ಧಾತ್ಮಕ ವಿಭಾಗದಲ್ಲಿರುತ್ತವೆ. ಪ್ರತಿಯೊಂದು ವಿಭಾಗದಲ್ಲೂ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ನಗದು, ಸ್ಮರಣ ಫಲಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರವೇಶ ಪಡೆಯಲು ಕಥಾಚಿತ್ರಗಳು 1, ಜನವರಿ 2021 ರಿಂದ 30 ನವೆಂಬರ್ 2021 ರ ಅವಧಿಯಲ್ಲಿ ನಿರ್ಮಾಣಗೊಂಡವಾಗಿರಬೇಕು. ಹಾಗೂ 70 ನಿಮಿಷದ ಅವಧಿಯ ಚಲನಚಿತ್ರವಾಗಿರಬೇಕು.
ಕನ್ನಡ ಹಾಗೂ ಕರ್ನಾಟಕದ ಉಪಭಾಷೆಗಳಲ್ಲಿ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ತಯಾರಾದ ಚಿತ್ರಗಳ ನಿರ್ಮಾಣದ ದಿನಾಂಕವನ್ನು ಭಾರತ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ನೀಡಿದ ದಿನಾಂಕವನ್ನು ಆಧರಿಸಿ ಗಣನೆಗೆ ತೆಗೆದುಕೊಳ್ಳಲಾಗುವುದು.
ಸ್ಪರ್ಧಾತ್ಮಕ ವಿಭಾಗಕ್ಕೆ ಚಲನಚಿತ್ರಗಳನ್ನು ಸಲ್ಲಿಸಲು 27 ಡಿಸೆಂಬರ್ 2021 ಕಡೆಯ ದಿನವಾಗಿದೆ. ಚಲನಚಿತ್ರಗಳನ್ನು ಸಲ್ಲಿಸಲು ಅನುಸರಿಸಬೇಕಾದ ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ Biffes.org ನಿಂದ ಪಡೆಯಬಹುದು.
ಕನ್ನಡ ಚಿತ್ರರಂಗದಲ್ಲಿ ಮತ್ತು ಸಿನಿಪ್ರಿಯರ ಮನಸ್ಸಿನಲ್ಲಿ ಒಂದಷ್ಟು ಕುತೂಹಲಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ಅದಕ್ಕೆ ಕಾರಣ, ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿರುವ ನಿರ್ದೇಶಕ ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೈಟಲ್ ಏನಿರಬಹುದು? ಅನ್ನುವುದು.
ಏನಿರಬಹುದು? ನೀವೇ ಊಹಿಸಿ! ಎಂದು ನಸುನಕ್ಕು ಸುಮ್ಮನಾಗುವ ಸಡಗರ ರಾಘವೇಂದ್ರ, ಪ್ರೇಕ್ಷಕರ ಮನಸ್ಸಿನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕುತ್ತಾರೆ. ಈ ಚಿತ್ರಕ್ಕಾಗಿ ಸತತವಾಗಿ ಜಿಮ್ಮಿನಲ್ಲಿ ಬೆವರು ಹರಿಸುತ್ತಾ ಫೈಟ್ ಮತ್ತು ಡ್ಯಾನ್ಸ್ ರಿಹರ್ಸಲ್ನಲ್ಲಿ ತೊಡಗಿಸಿಕೊಂಡಿರುವ ಕವೀಶ್ ಶೆಟ್ಟಿಯವರನ್ನು ನೋಡಿದರೆ ಇದೊಂದು ಅಪ್ಪಟ ಔಟ್ ಆಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಿಗರ ಮನೆಮನದ ಮುದ್ದಿನ ಬೆಡಗಿ ಮೇಘಾ ಶೆಟ್ಟಿ ಇವರ ಜೊತೆಗೂಡಿದ್ದಾರೆ ಅಲ್ಲದೆ ಅವರೂ ಕೂಡ ಈ ಚಿತ್ರಕ್ಕೆ ವಿಶೇಷವಾಗಿ ಸಮಯ ಮೀಸಲಿಟ್ಟು ನೃತ್ಯ ಇತ್ಯಾದಿ ತಯಾರಿಯಲ್ಲಿ ತೊಡಗಿದ್ದಾರೆ ಎಂದರೆ ಇದೊಂದು ಅದ್ಬುತ ಪ್ರೇಮಕಾವ್ಯ ಇರಬಹುದೇ? ಎನ್ನುವ ಕುತೂಹಲವೂ ಕಾಡುತ್ತದೆ. ಮರಾಠಿಗರ ಕನಸಿನ ಹುಡುಗಿ ಶಿವಾನಿ ಸುರ್ವೆ ಮತ್ತು ವಿರಾಟ್ ಮಡ್ಕೆ ಬೇರೆ ಈ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅದೂ ಅಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತಯಾರಾಗುತ್ತಿದೆಯೆಂದರೆ ಖಂಡಿತವಾಗಿಯೂ ಚಿತ್ರದ ಟೈಟಲ್ ಕೂಡ ಆ ಮಟ್ಟದಲ್ಲಿಯೇ ಇರುತ್ತದೆ. ಹಾಗಾದರೆ ಈ ಚಿತ್ರದ ಟೈಟಲ್ ಏನಿರಬಹುದು?
ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ತಂಡ ಈಗಾಗಲೇ ಮೊದಲನೇ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ಇದೇ ತಿಂಗಳ ಕೊನೆಯಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧಗೊಳ್ಳುತ್ತಿದೆ. ಆದರೂ ಚಿತ್ರತಂಡ ಇನ್ನೂ ಚಿತ್ರದ ಟೈಟಲ್ ಗುಟ್ಟು ಬಿಟ್ಟು ಕೊಟ್ಟಿಲ್ಲ ಎನ್ನುವುದು ಒಂದು ಕಡೆಯಾದರೆ ಚಿತ್ರದ ಫಸ್ಟ್ ಲುಕ್ ಹೇಗಿರುತ್ತದೆ ಎನ್ನುವುದು ಕೂಡ ಮತ್ತೊಂದು ಕುತೂಹಲ.
ಎಲ್ಲಾ ಕುತೂಹಲಗಳಿಗೂ ಸದ್ಯದಲ್ಲಿಯೇ ತೆರೆ ಎಳೆಯುತ್ತೇವೆ ಅಲ್ಲಿಯವರೆಗೂ ತಾಳ್ಮೆಯಿಂದ ಟೈಟಲ್ ಏನಿರಬಹುದು? ಎಂದು ನೀವೂ ಯೋಚಿಸಿ ಎಂದು ಜಾಣ್ಮೆಯಿಂದ ತಲೆಗೆ ಹುಳ ಬಿಡುವ ನಿರ್ದೇಶಕರು ಮುಂದಿನ ಹಂತದ ಚಿತ್ರೀಕರಣದ ತಯಾರಿಯಲ್ಲಿ ಬಿಜಿಯಾಗಿದ್ದಾರೆ.
“ರೋಜ್”, “ಮಾಸ್ ಲೀಡರ್”, ” ವಿಕ್ಟರಿ 2″ ಹಾಗೂ “ಖಾಕಿ” ಚಿತ್ರಗಳ ನಿರ್ಮಾಣ ಮಾಡಿದ್ದ ತರುಣ್ ಟಾಕೀಸ್ ಸಂಸ್ಥೆಯಿಂದ “ಪ್ರೊಡಕ್ಷನ್ ನಂ 5” ನೂತನ ಚಿತ್ರ ನಿರ್ಮಾಣವಾಗುತ್ತಿದೆ. ಶರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸುತ್ತಿದ್ದಾರೆ.
ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕ್ಯಾಮೆರಾ ಚಾಲನೆ ಮಾಡಿದರು.
ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಜಾಹಿರಾತುಗಳಿಗೆ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿರುವ ಅನೂಪ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.
ಶರಣ್ ನಾಯಕರಾಗಿ ನಟಿಸುತ್ತಿದ್ದು, ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಬೆಂಗಳೂರು ಹಾಗೂ ಉತ್ತರಖಂಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇಷ್ಟರಲ್ಲೆ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ರಂಗಭೂಮಿ ನಟಿ ಅರ್ಚನಾ ಕೊಟ್ಟಿಗೆ ಅದೃಷ್ಟ ಖುಲಾಯಿಸಿದೆ. ಅವರೀಗ ಹೊಸ ಅವಕಾಶಗಳ ಮೂಲಕ ಆಗಿಫುಲ್ ಬ್ಯುಸಿ ಆಗುತ್ತಿದ್ದಾರೆ. ನಾಯಕಿಯಾಗಿ ಅಭಿನಯಿಸಿದ ಮೊದಲ ಸಿನಿಮಾ ‘ಡಿಯರ್ ಸತ್ಯ ‘ ಅದರ ಜತೆಗೆ ‘ಕಟಿಂಗ್ ಶಾಪ್ ‘ಚಿತ್ರಗಳು ರಿಲೀಸ್ ಗೆ ರೆಡಿಯಾಗಿರುವ ಬೆನ್ನಲೇ ಅರ್ಚನಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.’ ಜುಗಲ್ ಬಂಧಿ ಬೆನ್ನಲೇ ಈಗ ‘ಅಲಂಕಾರ್ ವಿದ್ಯಾರ್ಥಿ’ ಹೆಸರಿನಮತ್ತೊಂದು ಚಿತ್ರಕ್ಕೆ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ-ವೆಂಕಟೇಶ್ವರ ದೇವಾಲಯದಲ್ಲಿ ಅಲಂಕಾರ್ ವಿದ್ಯಾರ್ಥಿ ಚಿತ್ರಕ್ಕೆ ಮಹೂರ್ತ ನಡೆಯಿತು.
ಮುಹೂರ್ತ ಸಮಾರಂಭಕ್ಕೆ ನಟ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಅನಂತರ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ‘ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ಕಾಲೇಜು ಸ್ಟೋರಿ ಸಿನಿಮಾ.ಇಲ್ಲಿ ನಾನು ಸ್ಟುಡೆಂಟ್. ವಿಶೇಷ ಅಂದ್ರೆ ನಾನು ನಿಜ ಜೀವನದಲ್ಲಂತೂ rank ಸ್ಟೂಡೆಂಟ್ ಆಗಿರಲಿಲ್ಲ. ಆದರೆ ಅಲಂಕಾರ್ ವಿದ್ಯಾರ್ಥಿಯ ಪಾತ್ರದ ಮೂಲಕ ಆ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆʼ ಎಂದು ನಗು ಬೀರಿದರು.ಇನ್ನು ಉಡಾಳ ಬಾಬುಖ್ಯಾತಿಯ ನಟ ಪ್ರಮೋದ್ ಕಾಂಬಿನೇಷನ್ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಆಗುತ್ತಿದೆ ಎಂದರು.
ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶ ಸಿಗುತ್ತಿರುವುದರ ರಹಸ್ಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಇದೆಲ್ಲ ದೊಡ್ಡದು ಅಂತ ಭಾವಿಸಬೇಡಿ. ಈಗ ಒಂದಷ್ಟು ಅವಕಾಶ ಸಿಗುತ್ತಿವೆ. ಉದ್ಯಮದಲ್ಲಿ ಇರುವ ಅನೇಕ ಸ್ಟಾರ್ ನಟಿಯರಿಗೆ ಹೋಲಿಕೆ ಮಾಡಿಕೊಂಡರೆ ನಾವೇನು ಅಲ್ಲ. ಅದ್ಯಾಕೋ ನಾವಂದುಕೊಂಡಂತೆ ಇಲ್ಲಿ ಅವಕಾಶ ಸಿಗೋದು ತುಂಬಾ ಕಮ್ಮಿ. ಒಳ್ಳೆಯ ಪಾತ್ರಗಳಲ್ಲಿ, ಒಳ್ಳೆಯ ಕತೆಗಳಲ್ಲಿ ಅಭಿನಯಿಸಬೇಕೆನ್ನುವ ಹಸಿವಿದೆ. ಆದರೆ ಅವೆಲ್ಲದ್ದಕ್ಕೂ ಸಮಯ ಬೇಕು ಅಂತಾರೆ ನಟಿ ಅರ್ಚನಾ ಕೊಟ್ಟಿಗೆ.ಅಂದ ಹಾಗೆ, ದಿವಾಕರ್ ಡಿಂಡಿಮ ನಿರ್ದೇಶನದ ಜುಗಲ್ ಬಂದಿ ಚಿತ್ರದಲ್ಲೂ ಅರ್ಚನಾ ಅವರಿಗೆ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿ ಇದೆಯಂತೆ.
ಸದ್ಯಕ್ಕೆ ಡಿಯರ್ ಸತ್ಯ, ಅದರ ಜತೆಗೆ ಕಟಿಂಗ್ ಶಾಪ್ ಎರಡು ಸಿನಿಮಾ ರಿಲೀಸ್ ಆಗಬೇಕಿದೆ. ಈ ನಡುವೆಯೇ ಅವಕಾಶಗಳ ಜತೆಗೆ ಬ್ಯುಸಿ ಆಗುತ್ತಿರುವ ಪಕ್ಕದ್ಮನೆ ಹುಡುಗಿ ಅರ್ಚನಾ ಕೊಟ್ಟಿಗೆ, ಪಕ್ಕಾ ರಂಗಭೂಮಿ ನಟಿ. ಕಾರ್ಪೊರೇಟ್ ಜಾಹೀರಾತುಗಳಿಗೆ ಮಾಡೆಲ್ ಆಗಿ ಕ್ಯಾಮೆರಾ ಎದುರಿಸಿದ ದಿನಗಳಲ್ಲಿಯೇ ‘ಅನಾಮಿಕ’ ರಂಗ ತಂಡದ ಮೂಲಕ ರಂಗದ ಮೇಲೆ ಕಾಣಿಸಿಕೊಂಡರು. ಆನಂತರ 2017ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ರೆಡ್ ಕಾರ್ಪೆಟ್ ಕಾರ್ಯಕ್ರಮ, ಕಿರಿಕ್ ಪಾರ್ಟಿ ಶೋ ಹಾಗೂ LOL ಬಾಗ್ ಹೋಸ್ಟ್ ಮಾಡಿದ್ದರು. ಅದರ ಜೊತೆಗೆ ಹಲವು ಸಿನಿಮಾ ಆಡಿಷನ್ಗಳಲ್ಲಿ ಭಾಗಿಯಾಗಿದ್ದರಂತೆ. ಆದರೆ ಅವರಿಗೆ ಮೊದಲು ನಾಯಕಿ ಆಗಿ ಅವಕಾಶ ಸಿಕ್ಕಿದ್ದು ‘ ಡಿಯರ್ ಸತ್ಯ’ .
ಈ ಚಿತ್ರದಲ್ಲಿ ನಾನು ಅಂಜಲಿ ಹೆಸರಿನ ಪಾತ್ರ ಮಾಡಿದ್ದೀನಿ. ಸಾವಿರಾರು ಕನಸುಗಳನ್ನು ಹೊತ್ತಿಕೊಂಡಿರುವ ಮಿಡಲ್ ಕ್ಲಾಸ್ ಕುಟುಂಬದ ಹುಡುಗಿ. ಸತ್ಯನ ಲೈಫ್ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರುವಂಥ ಗಟ್ಟಿ ಹುಡುಗಿ ಇವಳು. ನಿಜ ಹೇಳಬೇಕಂದರೆ ವೀಕ್ಷಕರು ಈ ಸಿನಿಮಾ ಹಾಗೂ ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆಂದು ತುಂಬಾ ನರ್ವಸ್ ಆಗುತ್ತಿದ್ದೇನೆ’ ಎನ್ನುವ ನಟಿ ಅರ್ಚನಾ ಕೊಟ್ಟಿಗೆ ಈಗ ಹಲವು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ, ಕಲಾವಿದೆಯಾಗಿ ತಮ್ಮ ನ್ನು ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳಲು ಮುಂದಾಗಿದ್ದಾರೆ.ಆಲ್ ದಿ ಬೆಸ್ಟ್ ಅರ್ಚನಾ.
ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ನ “ಆನ” ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ಮೊದಲ ಬಾರಿಗೆ ಅದಿತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರಿಲ್ಲಿ ಇನ್ನೊಂದು ಹೈಲೈಟ್.
ನಿರ್ದೇಶಕ ಮನೋಜ್ ಅವರಿಗೆ ಸಿನಿಮಾ ಮೇಲೆ ಸಾಕಷ್ಟು ನಂಬಿಕೆ ಇದೆ. ಅದಕ್ಕೆ ಕಾರಣ, ಸಿನಿಮಾ ಮೂಡಿಬಂದಿರುವ ರೀತಿ. ಆದರೆ, ಬಿಡುಗಡೆಯ ಸಮಸ್ಯೆ ಈ ಚಿತ್ರಕ್ಕೂ ಇದೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಂದು ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ, ಸ್ವಂತ ಊರಾದ ದಾವಣಗೆರೆಯಲ್ಲೇ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಅಂತ ಮನೋಜ್ ನಡಲುಮನೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಮಗೆ ಸಹಕಾರ ನೀಡಿದ ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಹೇಳಿದರು.
ಇನ್ನು, ಅದಿತಿ ಈ ಚಿತ್ರದ ಪಾತ್ರ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ತಮ್ಮ ಪಾತ್ರ ಕುರಿತು ಹೇಳಿದ್ದಿಷ್ಟು, “ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂದು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎಂಬುದು ಅದಿತಿ ಪ್ರಭುದೇವ ಅವರ ಮಾತು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಸಂಗೀತ ಕುರಿತು ಮಾಹಿತಿ ನೀಡಿದರು.
ಸೌಂಡ್ ಡಿಸೈನರ್ ನವೀನ್ ಕೂಡ ಮಾತನಾಡಿದರು. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ನಟಿಸಿದ್ದಾರೆ.