ಗಂಡುಲಿ ಚಿತ್ರದ ಟ್ರೇಲರ್ ಬಿಡುಗಡೆ;

ಕೆಲವರ್ಷಗಳ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರ ಬಂದಿತ್ತು. ಅದರ ನಿರ್ದೇಶಕ ಹಾಗೂ ನಾಯಕನೂ ಆಗಿದ್ದ ವಿನಯ್ ರತ್ನಸಿದ್ಧಿ ಅವರೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿ ನಿಂತಿರುವ ಈ ಚಿತ್ರದ ಹೆಸರು ಗಂಡುಲಿ. ‌ವಿನಯ್ ರತ್ನಸಿದ್ದಿ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾನರಸಿಂಹರಾಜು ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹೆಚ್ಚು ವೀಕ್ಷಣೆಯಾಗುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರವನ್ನು ಸಂಕ್ರಾಂತಿಗೆ ರಿಲೀಸ್ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

ನಿರ್ದೇಶಕ ಹಾಗೂ ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ, ನಮ್ಮ ಚಿತ್ರ 2 ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ವ್ಯಾಪಿಸಿದ ಕಾರಣದಿಂದಾಗಿ ಮೂರು ಬಾರಿ ಮುಂದಕ್ಕೆ ಹೋಯಿತು. ಈಗ ಜನವರಿ 14ರಂದು ರಿಲೀಸ್ ಮಾಡಲು ನಿರ್ಧರಿಸಿದ್ದೇವೆ. ಚಿತ್ರದಲ್ಲಿ ವಿಭಿನ್ನ ಶೈಲಿಯ 3 ಹಾಡುಗಳಿವೆ. ನಮ್ಮ ಅಮರೇಂದ್ರ, ಪುನೀತ್, ಲೋಕೆಶ್ ರಾಜಣ್ಣ ಹಾಗೂ ಚಂದನ. ಸೇರಿ 4ಜನ ನಿರ್ಮಾಪಕರು. ಅವರಲ್ಲಿ ಅಮರೇಂದ್ರ ಅವರು ಮೂಲತಃ ತೆಲುಗುನವರಾದರೂ ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅಲ್ಲದೆ ಒಂದು ಚಿತ್ರವನ್ನು ನಿರ್ದೇಶನ ಕೂಡ ಮಾಡಿದ್ದಾರೆ. ನಟ ಧರ್ಮೇಂದ್ರ ಅರಸ್ ಅವರು ಬಹು ಮುಖ್ಯವಾದ ಪಾತ್ರ ಮಾಡಿದ್ದಾರೆ. ಗಂಡುಲಿ ಎಂದರೆ ಹುಲಿಯಷ್ಟೇ ಧೈರ್ಯವಂತ, ಸಾಹಸವಂತ ಎಂದರ್ಥ. ಸಂಪೂರ್ಣ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದರಲ್ಲಿದೆ. ಅದೊಂದು ದಿವಾನರ ಕುಟುಂಬ. ಊರಿನ ಬಡಜನರಿಗೆ ದಾನ-ಧರ್ಮ ಮಾಡುತ್ತ ಜನರ ಪಾಲಿಗೆ ಆಪದ್ಬಾಂಧವರು ಎನಿಸಿಕೊಂಡಿದ್ದ ಆ ಕುಟುಂಬದ ಆಸ್ತಿ, ಪಾಸ್ತಿ ದಿನಗಳೆದಂತೆ ಕರಗುತ್ತಾ ಕೊನೆಗೊಂದು ದಿನ ಅವರೆಲ್ಲ ಸಾಮಾನ್ಯರ ಹಾಗೆ ಬದುಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ನಾಯಕ ಕೂಡ ಅದೇ ಫ್ಯಾಮಿಲಿಯಿಂದ ಬಂದ ಹುಡುಗ. ಆತ ತನ್ನ ತಾಯಿ ಜೊತೆ ಹಳ್ಳಿಯಲ್ಲಿ ಸಾಮಾನ್ಯ ಜನರ ಹಾಗೆ ಬದುಕುತ್ತಿರುವಾಗ ನಡೆದ ಒಂದು ಘಟನೆ ನಡೆಯುತ್ತದೆ. ಮುಂದೆ ಚಿತ್ರದಲ್ಲಿ ಕುತೂಹಲಕರವಾದ ತಿರುವುಗಳಿವೆ. ನಮ್ಮ ಮುಂದಿನ ಚಿತ್ರ ಪ್ರೇಮಂ ಕೂಡ ತೆರೆಗೆ ಸಿದ್ದವಾಗಿದೆ ಎಂದು ಹೇಳಿದರು.

ಹಿರಿಯ ನಟಿ ಸುಧಾ ನರಸಿಂಹರಾಜು, ದಾನ ಧರ್ಮಕ್ಕೆ ಹೆಸರಾದ ದಿವಾನರ ಮನೆತನದ ಹೆಣ್ಣು ಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಎಂಟರ್‌ಟೈನ್ ಮೆಂಟ್ ಕಥೆ ಈ ಚಿತ್ರದಲ್ಲಿದೆ. ನಾನು ಹೀರೋ ತಾಯಿ ಕೂಡ. ಹಳ್ಳಿ ವಾತಾವರಣದಲ್ಲಿ ನಡೆಯುವ ಕಥೆಯಿದು. ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ಮಾಸ್ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ನಾಯಕಿ ಛಾಯಾದೇವಿ ಒಬ್ಬ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಅಮರೇಂದ್ರ,ಪುನೀತ್,
ಲೋಕೆಶ್ ರಾಜಣ್ಣ ಹಾಗೂ ಚಂದನ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಚಿತ್ರದಲ್ಲಿ ಮಾಸ್, ಕ್ಲಾಸ್, ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೂ ಇದೆ. ಊರಿನ ಜನರೆಲ್ಲಾ ಹೆದರಿಕೊಳ್ಳುವಂತಹ ಘಟನೆಗಳು ನಡೆದಾಗ ಅದರ ಹಿಂದೆ ಯರ‍್ಯಾರಿದ್ದಾರೆ ಅದಕ್ಕೆ ಕಾರಣ ಏನು ಎನ್ನುವುದನ್ನು ನಾಯಕ ಪತ್ತೆ ಹಚ್ಚುತ್ತಾನೆ. ಊರಿನ ಗಂಡುಲಿ ಎನಿಸಿಕೊಳ್ಳುತ್ತಾನೆ. ಇದು ಈ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರಕ್ಕೆ ಅಜಯ್ ಮತ್ತು ರವಿದೇವ್ ಇವರ ಸಂಗೀತ, ರಾಜು ಶಿವಶಂಕರ್ ಮತ್ತು ಶ್ಯಾಮ್ ಅವರ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ, ಸುರೇಶ್ ಅವರ ಸಾಹಸವಿದೆ. ಉಳಿದ ತಾರಾಬಳಗದಲ್ಲಿ ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಇದ್ದಾರೆ.

Related Posts

error: Content is protected !!