Categories
ಸಿನಿ ಸುದ್ದಿ

ಖಡಕ್‌ ಕನ್ನಡಿಗರು! ಹಳ್ಳಿ ಹುಡುಗರ ಕನ್ನಡ ಹಾಡಿದು… ರಾಘಣ್ಣ ಹಾಡಿದ ಗೀತೆ ಪಿಆರ್‌ಕೆ ಆಡಿಯೋ ಮೂಲಕ ಬಂತು

ಹೊಸಬರ ಸಿನಿಮಾಗಳು ದಿನ ಕಳೆದಂತೆ ಶುರುವಾಗುತ್ತಿವೆ. ಆ ಸಾಲಿಗೆ ಈಗ “ಖಡಕ್‌ ಹಳ್ಳಿ ಹುಡುಗರು” ಎಂಬ ಸಿನಿಮಾ ಕೂಡ ಸೇರಿದೆ. ಹೌದು, ಈ ಚಿತ್ರ ಮಾರ್ಚ್‌ನಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ಕೊಡಲಾಗಿದೆ. ಹೌದು, ಈ ಚಿತ್ರಕ್ಕೆ ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಅದರಲ್ಲೂ ಅದು ಕನ್ನಡದ ಮೇಲಿರುವ ಹಾಡನ್ನು ರಾಘಣ್ಣ ಹಾಡಿದ್ದಾರೆ. “ಕನ್ನಡಕ್ಕೆ ಮೊದಲ ಗೌರವ” ಹಾಡನ್ನು ನಿರ್ಮಾಪಕ ರೆಹಮಾನ್‌ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಹಾಡು ಪಿಆರ್‌ಕೆ ಆಡಿಯೋ ಮೂಲಕ ಹೊರಬಂದಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಸಿನಿಮಾಗೆ ಎಂ.ಯು.ಪ್ರಸನ್ನ ನಿರ್ದೇಶಕರು. ಹಳ್ಳಿ ಹಿನ್ನೆಲೆಯಿಂದ ಬಂದಿರುವ ಪ್ರಸನ್ನ ಅವರಿಗೆ ಪೋಷಕರ ಬೆಂಬಲವಿದೆ. ಆ ಕಾರಣದಿಂದಲೇ ಪ್ರಸನ್ನೆ ನಿರ್ದೇಶನದತ್ತ ವಾಲಿದ್ದಾರೆ.


ಈ ಕುರಿತು ಹೇಳಿಕೊಂಡ ಪ್ರಸನ್ನ, “ನಾನು ಮೂಲತಃ ಹಳ್ಳಿಯವನು. ಕೊರೊನಾ ಲಾಕ್ ಡೌನ್ ವೇಳೆ ಹುಟ್ಟಿದ ಕಥೆಯಿದು. ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ಎಂಟು ಮುಖ್ಯ ಪಾತ್ರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಆರು ಹಾಡುಗಳಿವೆ. ಆರು ಹಾಡುಗಳನ್ನು ನಾನೇ ಬರೆದಿದ್ದೇನೆ. ಅದರಲ್ಲಿ “ಕನ್ನಡಕ್ಕೆ ಮೊದಲ ಗೌರವ” ಎಂಬ ಮೊದಲ ಹಾಡನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀನಿ. ಈ ಹಾಡನ್ನು ಹಾಡುವಂತೆ ರಾಘಣ್ಣ ಅವರಿಗೆ ಪ್ರೇರಿಪಿಸಿದ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಅಪ್ಪು ಅವರ ಪಿ.ಆರ್.ಕೆ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮಾರ್ಚ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದರು ನಿರ್ದೇಶಕ ಪ್ರಸನ್ನ.

ಚಿತ್ರಕ್ಕೆ ರಾಜೀವ್‌ ರಾಥೋಡ್‌ ಹೀರೋ. ಅವರು ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. “ನನ್ನ ನೋಡಿದರೆ ಹಳ್ಳಿ ಹುಡುಗನ ತರಹ ಕಾಣುವುದಿಲ್ಲ. ನಿರ್ದೇಶಕರು ನನಗೆ ಹಳ್ಳಿಹುಡುಗನ ಗೆಟಪ್ ಹಾಕಿ ನೋಡಿ ಆಯ್ಕೆ ಮಾಡಿಕೊಂಡರು. ಈಗ ಬಿಡುಗಡೆಯಾಗಿರುವ ಹಾಡು ಇಷ್ಟು ಚೆನ್ನಾಗಿ ಬಂದಿದೆ ಅಂದರೆ ಪುನೀತ್ ಸರ್ ಕಾರಣ. ಅವರ ಸಹಾಯ ಮರೆಯುವಂತಿಲ್ಲ. ಎಂಬುದು ನಾಯಕ ರಾಜೀವ್ ರಾಥೋಡ್ ಮಾತು.
ಅಂದು ನಟ ಧರ್ಮ ಕೂಡ ಹೊಸಬರ ಸಿನಿಮಾಗೆ ಶುಭಕೋರಲು ಆಗಮಿಸಿದ್ದರು. ಈ ಸಿನಿಮಾಗೆ ಒಳ್ಳೆಯದಾಗಲಿ ಎಂದ ಧರ್ಮ, “ನಾನು ರಾಜೀವ್ ಬಹು ದಿನಗಳ ಸ್ನೇಹಿತರು. ಈ ಚಿತ್ರದ ಕಥೆ ಚೆನ್ನಾಗಿದೆ. ನೀವು ಒಂದು ಪಾತ್ರ ಮಾಡಬೇಕೆಂದು ಕೇಳಿದ್ದಾರೆ. ಮಾಡುತ್ತೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಧರ್ಮ.


ಅಂದು ಪ್ರಭಾಸ್ ರಾಜ್, ಚಂದ್ರ ಪ್ರಭ, ದೀಪು ವಿಜಯ್, ವರದರಾಜ್, ಉದಯ್, ಮಹಂತೇಶ್, ಆರ್ ಎಂ ಎಂ ಮಂಜು, ನಾಯಕಿಯರಾದ ರಾನ್ವಿ ಶೇಖರ್, ದೀಪಿದ್ದರು. ಸಿಂಹ ಮತ್ತು ಪುನೀತ್ ಪಟೇಲ್ ನಿರ್ಮಾಪಕರು. ಸುಧೀರ್ ಶಾಸ್ತ್ರಿ ಹಾಗೂ ಧ್ರುವ ಸಂಗೀತ ನಿರ್ದೇಶಕರು. ಪಿ‌.ಎಲ್ ರವಿ ಛಾಯಾಗ್ರಹಣ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿ ನಿರ್ದೇಶಕನಾದ ಕಥೆ! ಕಡಲೂರ ಕಣ್ಮಣಿ ಹಿಂದಿನ ಹಾಡು ಪಾಡು!!

ಯಾವುದೇ ವ್ಯಕ್ತಿ ಸಾಧನೆ ಮಾಡಲು ಹೊರಟರೆ ನೂರಾರು ಅಡೆತಡೆ ಸಹಜ. ಅದರಲ್ಲೂ ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾದರಂತೂ ಬದುಕೇ ಬೇಡ ಎನಿಸಿ ಆತ್ಮಹತ್ಯೆಯಂತಹ ಘಟನೆಗೂ ಯೋಚಿಸುವಂತಹ ಸಂದರ್ಭ ಬಂದೇ ಬರುತ್ತೆ. ಅಂಥದ್ದೊಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕನ್ನಡ ಚಿತ್ರರಂಗದ ನಿರ್ದೇಶಕರಿಗೂ ಬಂದಿತ್ತು. ಅದು ರಾಮ್‌ ಪ್ರಸನ್ನ ಹುಣಸೂರು. ಕೊನೆಗೆ ಆ ನಿರ್ಧಾರದಿಂದ ಅವರು ಹಿಂದೆ ಸರಿದು ನಿಂತರು. ಈಗ ಸಿನಿಮಾ ನಿರ್ದೇಶಿಸಿ, ರಿಲೀಸ್‌ಗೂ ರೆಡಿಯಾಗುತ್ತಿದ್ದಾರೆ…

ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಅವರ ನಿರ್ದೇಶನದ “ಕಡಲೂರ ಕಣ್ಮಣಿ” ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಮಧುರಾಮ್ ಅವರು ಬರೆದಿರುವ “ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ” ಎಂಬ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ತಮ್ಮ ಸಿನಿಮಾ ಜರ್ನಿ ಕುರಿತು ಹೇಳಿಕೊಂಡ ನಿರ್ದೇಶಕ ರಾಮ್‌ ಪ್ರಸನ್ನ ಹುಣಸೂರು, “ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿದೆ. ಈ ಚಿತ್ರ ಆರಂಭವಾಗುವ ಮುನ್ನ ನಡೆದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಜೀವನದಲ್ಲಿ ನೊಂದ ನಾನು, ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದ್ದೆ. ಇನೇನ್ನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ-ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ಅವರೆಲ್ಲಾ ನನ್ನ ಪ್ರೋತ್ಸಹಕ್ಕೆ ನಿಂತರು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗಿದೆ.
“ಕಡಲೂರ ಕಣ್ಮಣಿ” ಯನ್ನು ನಾನು ವಜ್ರ ಎನ್ನುತ್ತೇನೆ. ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರಕ್ಕೆ ಸಂಗೀತ ನೀಡುವಂತೆ ಸಂಗೀತ ನಿರ್ದೇಶಕರೊಬ್ಬರನ್ನು ಕೇಳಲಾಗಿತ್ತು. ಆದರೆ ಅವರು ಆರು ತಿಂಗಳಾದರು ಒಂದು ಹಾಡು ಮಾಡಿ ಕೊಡಲಿಲ್ಲ. ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು ನಾನೇ ಸಂಗೀತ ನೀಡಿದ್ದೇನೆ ಎಂದರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು.

ಚಿತ್ರಕ್ಕೆ ಅರ್ಜುನ್‌ ಹೀರೋ. ಅವರು ಹೇಳಿದ್ದಿಷ್ಟು, “ನನಗೆ ನನ್ನ ‌ಸ್ನೇಹಿತನ ಮೂಲಕ ನಿರ್ದೇಶಕರು ಪರಿಚಯವಾದರು. ಸ್ವಲ್ಪ ಸಮಯ ಅವರೊಡನೆ ಮಾತನಾಡಿದೆ. ನೀವೆ ನಮ್ಮ ಸಿ‌ನಿಮಾ ಹೀರೋ ಎಂದರು. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ಅರ್ಜುನ್.

ನಿರ್ಮಾಪಕರಾದ ವಿನೋದ್ ರಾಮ್ ಹೊಳೆನರಸೀಪುರ, ಕೊಳ ಶೈಲೇಶ್ ಆರ್ ಪೂಜಾರ್ , ಸಹ ನಿರ್ಮಾಪಕ ಬಸವರಾಜ ಗಚ್ಚಿ, ಮಧುರಾಮ್, ಕಿರಣ್ ದೇವಲಾಪುರ ಹಾಗೂ ಛಾಯಾಗ್ರಾಹಕರಾದ ಮನೋಹರ್ ಹಾಗೂ ರವಿರಾಮ್ ಇದ್ದರು.

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ

ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ (75) ಅವರು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು (ಇಂದು) ಜನವರಿ 28ರಂದು ಅಗಲಿದ್ದಾರೆ. ಕಟ್ಟೆ ರಾಮಚಂದ್ರ ಅವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

ಅವರು ವೈಶಾಖದ ದಿನಗಳು, ಅರಿವು ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮಹಾಲಕ್ಷ್ಮಿ ಸಿನಿಮಾ ನಿರ್ಮಾಣ ಮಾಡಿದ್ದರು. ಕಿರುತೆರೆಯಲ್ಲೂ ಅವರು ತನು ನಿನ್ನದು ಮನ ನಿನ್ನದು ಎಂಬ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ಅವರು ಮನೆ ಮನೆ ಕಥೆ, ಅಲೆಗಳು ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು. ಅವರಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದ್ದವು. ಅವರು ರಾಷ್ಟ್ರ ಪ್ರಶಸ್ತಿಯ ಸಮಿತಿಯಲ್ಲಿ ಜ್ಯೂರಿಯಾಗಿಯೂ ಕೆಲಸ ಮಾಡಿದ್ದರು. ಇನ್ನು, ಅವರಿಗೆ ರಂಗಭೂಮಿ ಹಿನ್ನೆಲೆಯೂ ಇತ್ತು. ಅವರೊಂದಿಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನೇಕರು ಇಂದು ನಿರ್ದೇಶಕರಾಗಿ, ನಟ,ನಟಿಯರಾಗಿದ್ದಾರೆ.

Categories
ಸಿನಿ ಸುದ್ದಿ

ಮೂರು‌ ಭಾಷೆಯಲ್ಲಿ ಮಾಫಿಯಾ! ಏಕಕಾಲಕ್ಕೆ ಬಿಡುಗಡೆಯಾದ ಟೀಸರ್

ಪ್ರಜ್ವಲ್ ದೇವರಾಜ್ ಮಾಫಿಯಾ ಸಿನಿಮಾ ಮಾಡುತ್ತಿರೋದು ಎಲ್ಲರಿಗೂ ಗೊತ್ತು. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಟೀಸರ್ ರಿಲೀಸ್ ಅಗಿರೋದು. ಅಷ್ಟೇ ಅಲ್ಲ, ಅದು ಅಪಾರ ಮೆಚ್ಚುಗೆ ಪಡೆದಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಲೋಹಿತ್ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ಟೀಸರ್ ಆನಂದ್ ಆಡಿಯೋ ಚಾನಲ್ ಮೂಲಕ ಬಿಡುಗಡೆಯಾಗಿದೆ.

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ ಅನ್ನೋದು ವಿಶೇಷ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಅಷ್ಟೇ ಅಲ್ಲದೇ ಚಿತ್ರದ ಆಡಿಯೋ ಹಕ್ಕು ಸಹ ಆನಂದ್ ಆಡಿಯೋಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಮತ್ತೊಂದು ವಿಶೇಷ.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ದೇವರಾಜ್ ಕೂಡ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ ಇತರರು ಇದ್ದಾರೆ.

ತರುಣ್ ಛಾಯಾಗ್ರಹಣ ಮಾಡಿದರೆ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ಬಹದ್ದೂರ್‌ ಹುಡುಗನ ಭರ್ಜರಿ ಸ್ಟಂಟ್!

“ಕನ್ನಡತಿ” ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಅಭಿನಯದ “ಬಹದ್ದೂರ್ ಗಂಡು” ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ‌ ಇತ್ತೀಚೆಗೆ ನಂದಿ ಬೆಟ್ಟದ ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಕಲಿತಿದ್ದಾರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತಿದೆ. ವಿನೋದ್ ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿ ಯಾಗಿ ಈ ಸನ್ನಿವೇಶ ಮೂಡಿಬಂದಿದೆ.

ನಿರ್ದೇಶಕ ಪ್ರಶಾಂತ್‌ ಸಿದ್ಧ್‌ ಹೇಳುವುದಿಷ್ಟು, “ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ.

ಪ್ರಸಿದ್ದ್ ಸಿನಿಮಾಸ್ ಮತ್ತು ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ವೆಂಕಿ ಯು ಡಿ ವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಕಿರಣ್ ರಾಜ್, ಯಶಾ ಶಿವಕುಮಾರ್, ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಮಡೆನೂರ್ ಮನು, ಗೋವಿಂದೇ ಗೌಡ, ವಾಣಿ, ರಂಜಿತ್ ಖನ್ನಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಲವರ್ಸ್‌ ಡೇ ಮುನ್ನ ರೌಡಿ ಬೇಬಿ ಎಂಟ್ರಿ!

ಪ್ರೇಮಿಗಳ ದಿನಕ್ಕೆ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಕೆಲವು ಸಿನಿಮಾಗಳು ಟೀಸರ್‌, ಟ್ರೇಲರ್‌ ಮತ್ತು ಪೋಸ್ಟರ್‌ ರಿಲೀಸ್‌ ಮಾಡಲು ತಯಾರಿ ನಡೆಸುತ್ತಿವೆ. ಅದಕ್ಕೂ ಮುನ್ನ ರೌಡಿ ಬೇಡಿ ಸಿನಿಮಾ ರಿಲೀಸ್‌ ಆಗಲಿದೆ. ಹೌದು, ಎಸ್. ಎಸ್. ರವಿಗೌಡ ಹಾಗು ಬಿಗ್‌ ಬಾಸ್‌ ‌ಖ್ಯಾತಿಯ ದಿವ್ಯ ಸುರೇಶ್ ಅಭಿನಯದ ಚಿತ್ರ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ.

ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಇದಕ್ಕೂ ಮುನ್ನ “ರೌಡಿ ಬೇಬಿ” ಚಿತ್ರ ಬರುತ್ತಿದೆ. Warfoot studios ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು Epuru ಕೃಷ್ಣ ನಿರ್ದೇಶನ ಮಾಡಿದ್ದಾರೆ. ಸಾಮ್ರಾಟ್ ಛಾಯಾಗ್ರಹಣವಿದೆ. ಅಭಿಷೇಕ್ ಹಿನ್ನೆಲೆ ಸಂಗೀತವಿದೆ. ಅರ್ಮಾನ್ ಮೆರುಗು ಸಂಗೀತ ನಿರ್ದೇಶನ ಮಾಡಿದರೆ, ವೆಂಕಿ ಯುಡಿವಿ ಅವರ ಸಂಕಲನವಿದೆ.

ಎಸ್. ಎಸ್. ರವಿಗೌಡ ಅವರಿಗೆ ದಿವ್ಯ ಸುರೇಶ್ ಹಾಗು ಹೀರಾ ಕೌರ್ ನಾಯಕಿಯರಾಗಿ ನಟಿಸಿದ್ದಾರೆ. ಅಮಿತ್, ಕೆಂಪೇಗೌಡ ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಸ್ತಬ್ಧ ಮೂಲಕ ಸದ್ದು ಮಾಡೋಕೆ ಹೊರಟ ಹರ್ಷಿಕಾ; ರಾಘಣ್ಣನ ಮಗಳಾಗಿ ನಟನೆ…

ನಟಿ ಹರ್ಷಿಕಾ ಪೊಣಚ್ಚ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು, ಇತ್ತೀಚೆಗಷ್ಟೇ ಅವರು ಮತ್ತೊಂದು ಭೋಜ್‌ಪುರಿ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಆ ಚಿತ್ರದ ಮುಹೂರ್ತ ನಡೆದ ಬೆನ್ನಲ್ಲೇ ಈಗ ಹೊಸ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸ್ತಬ್ಧ” ಎಂದು ಹೆಸರಿಡಲಾಗಿದೆ. ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅವರು ಹೈಲೈಟ್.‌ ಹರ್ಷಿಕಾ ಪೂಣಚ್ಚ ಅವರೊಂದಿಗೆ ಪ್ರತಾಪ್‌ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗರೆಡ್ಡಿ ಕ್ಲಾಪ್‌ ಮಾಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ಈ ಚಿತ್ರಕ್ಕೆ ಲಾಲಿ ರಾಘವ ನಿರ್ದೇಶಕರು. ಡಾ.ಡಿ.ವಿ.ವಿದ್ಯಾಸಾಗರ್‌ ನಿರ್ಮಾಪಕರು.

ನಿರ್ದೇಶಕ ಲಾಲಿ ರಾಘು ಅವರು ಈ ಹಿಂದೆ ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡದ ಈ ಚಿತ್ರ ಎರಡನೇ ನಿರ್ದೇಶನದ ಸಿನಿಮಾ. ಕಥೆ ಬಗ್ಗೆ ಹೇಳುವ ಅವರು, “ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಸಾಗಿದಾಗ, ಆಗುವಂತಹ ಪರಿಣಾಮ ಮತ್ತು ಅದರಿಂದ ಹೊರಬರಲು ಚಿತ್ರದ ಕಥಾ ನಾಯಕ ನಡೆಸುವ ಹೋರಾಟದ ಸೂಕ್ಷ್ಮತೆಯ ಕಥೆಯನ್ನು ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ ಅವರೊಂದಿಗೆ, ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ.ಚಿನ್ಮಯ್ ಮತ್ತು ಪ್ರಿಯಾಂಕಾ ಹೀಗೆ ಹೊಸ ಪ್ರತಿಭೆಗಳು ನಟಿಸುತ್ತಿದ್ದಾರೆ. ಇನ್ನು, ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತವಿದೆ ಎಂದು ವಿವರ ಕೊಟ್ಟರು ನಿರ್ದೇಶಕ ಲಾಲಿ ರಾಘವ್.

ರಾಘವೇಂದ್ರ ರಾಜಕುಮಾರ್‌ ಅವರಿಗೆ ಇಲ್ಲಿ ಕಥೆ ಇಷ್ಟವಾಯಿತಂತೆ. ನಿರ್ದೇಶಕರು ಹೆಣೆದ ಕಥೆಯ ಆಶಯ ಚೆನ್ನಾಗಿದೆ. ಪಾತ್ರವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಕಥೆಯೇ ಒಂದು ಪಾತ್ರ. ನಾವೆಲ್ಲ ಚಿಕ್ಕ ಪಾತ್ರ ಮಾಡುತ್ತಿದ್ದೇವೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೇಳುವಂತಿಲ್ಲ ಎಂದರು ರಾಘವೇಂದ್ರ ರಾಜಕುಮಾರ್.
ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು.‌ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ಜಾಕಿ” ಚಿತ್ರದಲ್ಲಿ ನೀವು ನಟಿಸಬೇಕೆಂದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ.ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ ಎಂಬುದು ನಟಿ ಹರ್ಷಿಕಾ ಮಾತು.


ಹೊಸ ಪ್ರತಿಭೆ ಪ್ರತಾಪ್‌ ಸಿಂಹ ಅವರು, ಈಗಾಗಲೇ ರಾಘಣ್ಣ ಅವರೊಂದಿಗೆ “ರಾಜತಂತ್ರ”, ” ರಾಜಿ” ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವವಂತೆ. ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಶುಭಹಾರೈಕೆ ಇರಲಿ ಎಂದರು ಪ್ರತಾಪ್ ಸಿಂಹ.


ನಿರ್ಮಾಪಕ ಡಾ.ಡಿ.ವಿ.ವಿದ್ಯಾಸಾಗರ್‌ ಅವರು ನಿರ್ದೇಶಕ ಲಾಲಿ ರಾಘವ್ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದಾರಂತೆ. ಅವರ ಸಹೋದರ ನನ್ನ ಸಹೋದ್ಯೋಗಿ. ಆತ ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂಬುದು ವಿದ್ಯಾಸಾಗರ್ ಮಾತು. ಪ್ರಶಾಂತ್ ಸಿದ್ದಿ, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಹಾಗೂ ಸಂಗೀತ ನಿರ್ದೇಶಕ ಆರವ್ ರಿಷಿಕ್ ಇತರರು ಸಿನಿಮಾ ಕುರಿತು ಮಾತಾಡಿದರು.

Categories
ಸಿನಿ ಸುದ್ದಿ

ಜೇಮ್ಸ್‌ ನಲ್ಲಿ ಕಾಣಿಸಿಕೊಂಡ ರಾಜ್‌ ಪುತ್ರರು! ಪುನೀತ್‌ ಚಿತ್ರದಲ್ಲಿ ನಟಿಸಿದ ಶಿವಣ್ಣ-ರಾಘಣ್ಣ!!

ಪುನೀತ್‌ ರಾಜಕುಮಾರ್‌ ಅಭಿನಯದ ಜೇಮ್ಸ್‌ ಚಿತ್ರ ಮುಗಿದಿದೆ. ಚಿತ್ರತಂಡ ತುಂಬಾನೇ ಬೇಸರದಲ್ಲಿ ಅದರಲ್ಲೂ ಎಲ್ಲರೂ ಕಣ್ತುಂಬಿಕೊಂಡೇ ಕೆಲಸ ಮಾಡಿದ್ದಾರೆ. ವಿಷಯ ಏನೆಂದರೆ, ಈ ಸಿನಿಮಾವನ್ನು ಮಾರ್ಚ್‌ ೧೭ರಂದು ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ಸಾಕಷ್ಟು ತಯಾರಿ ನಡೆಸುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ, ಜೇಮ್ಸ್‌ ಸಿನಿಮಾ ಪುನೀತ್‌ ರಾಜಕುಮಾರ್‌ ಅವರ ಹೊಸ ಬಗೆಯ ಕಥೆ ಇರುವ ಚಿತ್ರ. ಈ ಚಿತ್ರದಲ್ಲಿ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ನಟಿಸಿದ್ದಾರೆ.

ಈ ಕುರಿತು ಸ್ವತಃ ರಾಘವೇಂದ್ರ ರಾಜಕುಮಾರ್‌ ಅವರೇ ಸ್ಪಷ್ಟಪಡಿಸಿದ್ದಾರೆ. “ಇದು ಪುನೀತ್‌ ಅವರ ಸಿನಿಮಾ. ಅದರಲ್ಲಿ ನಾವಿಬ್ಬರು ಒಂದು ಸಣ್ಣ ಪಾತ್ರ ಮಾಡಿದ್ದೇವಷ್ಟೇ. ಅದು ನಮಗೆ ಸಿಕ್ಕಿದೆ ಮಾಡಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಅಂತ ಹೇಳಲು ಇಷ್ಟ ಪಡ್ತೀನಿ ಅಷ್ಟೇ. ಪಾತ್ರ ಮಾಡಿದ್ದೀನಿ ಅಂತಲ್ಲ. ಇನ್ನು ಇದಕ್ಕೆ ಗಿಮಿಕ್ ಮಾಡಿ ಏನೇನೋ ಮಾಡಿದ್ದೀವಿ ಅಂತ ಜನರಲ್ಲಿ ನಾವು ಏನೇನೋ ಅಭಿಪ್ರಾಯ ಕೊಡಬಾರದು. ಮಾಡದೇ ಇರುವುದನ್ನು ಮಾಡಿದೀವಿ, ಮಾಡಿದಿವಿ ಅಂತ ಗಿಮಿಕ್ ಮಾಡಬಾರದು, ಅದು ನಾನು ಮಾಡಲ್ಲ. ನಮ್ಮ ಪಾತ್ರ ನೋಡಿದಾಗ ಸಣ್ಣದಾಗಿ ಇದ್ದರು ಚೆನ್ನಾಗಿದೆ ಅಂತ ಅನಿಸುತ್ತದೆ. ನಾವು ಮೂವರು ಈ ಚಿತ್ರದಲ್ಲಿ ಇದೀವಿ. ಹಾಗಂತ ನಾವು ಒಂದೇ ಸೀನ್ ನಲ್ಲಿ ಇಲ್ಲ. ಆದರೆ ಮೂವರು ಒಂದೇ ಚಿತ್ರದಲ್ಲಿ ಇದೀವಿ. ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದ್ದಾರೆ.

ಅಂದಹಾಗೆ, ನಿರ್ದೇಶಕ ಚೇತನ್‌ಕುಮಾರ್‌ ಅವರು ಈ ಸಿನಿಮಾ ಮಾಡಿದ ಉತ್ಸಾಹ ಆರಂಭದಲ್ಲಿ ಜೋರಾಗಿಯೇ ಇತ್ತು. ಯಾವಾಗ ಪುನೀತ್‌ ರಾಜಕುಮಾರ್‌ ಅವರು ಅಗಲಿದರೋ, ಅಂದಿನಿಂದ ಡಲ್‌ ಆಗಿಬಿಟ್ಟರು. ಜೇಮ್ಸ್‌ ಸಿನಿಮಾದಲ್ಲಿ ಉಳಿದ ಕೆಲಸ ಮಾಡುವುದಕ್ಕೂ ಅವರು ಯೋಚಿಸತೊಡಗಿದ್ದರು. ಮತ್ತೆ ಕೆಲಸ ಮಾಡಲು ಶುರುವಾದಾಗ, ಅದೇ ನೋವಲ್ಲಿ ಕೆಲಸ ಮಾಡಿದರು. ರಾಘವೇಂದ್ರ ರಾಜಕುಮಾರ್‌ ಅವರ ಬಳಿ ಹೋಗಿ ಮಾತಾಡುವಾಗಲೂ ಕಣ್ಣಾಲಿಗಳನ್ನು ತುಂಬಿಕೊಂಡಿದ್ದರು.

ಇದನ್ನೂ ಸಹ ರಾಘವೇಂದ್ರ ರಾಜಕುಮಾರ್‌ ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಪುನೀತ್‌ ಇಲ್ಲ ಅಂತ ಯಾರೂ ಭಾವಿಸಿಲ್ಲ. ಅವರ ಸಿನಿಮಾ ನೋಡಲು ಅವರ ಅಭಿಮಾನಿಗಳು ಅದರಲ್ಲೂ ಕನ್ನಡಿಗರು ಕಾದು ಕುಳಿತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್‌ ೧೭ರಂದು ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

Categories
ಸಿನಿ ಸುದ್ದಿ

ಶಿವಣ್ಣನಿಗೆ ಜೈ ಅಂದ ಆರ್‌.ಜೈ! ಬುದ್ಧಿವಂತ ಹುಡುಗನ ಹಿಂದೆ ನಿಂತ ರೈತ!! ಹೊಸ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ…

ಕನ್ನಡದಲ್ಲಿ ಶಿವರಾಜಕುಮಾರ್‌ ಅವರಿಗೆ ನಿರ್ದೇಶನ ಮಾಡಬೇಕು ಅನ್ನುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದರಲ್ಲೂ ಸಕ್ಸಸ್‌ಫುಲ್‌ ನಟನನ್ನು ನಿರ್ದೇಶಿಸುವ ಕನಸು ನನಸಾಗಿಬಿಟ್ಟರಂತೂ ಸ್ವರ್ಗ ಮೂರೇ ಗೇಣು. ಹೌದು, ಅಂಥದ್ದೊಂದು ಅವಕಾಶವನ್ನು ನಿರ್ದೇಶಕ ಆರ್.ಜೈ ಪಡೆದುಕೊಂಡಿದ್ದಾರೆ. ಅವರ ಈ ಚಿತ್ರಕ್ಕೆ ಕೇಶವ್‌ (ರೈತ) ನಿರ್ಮಾಪಕರು. ಇದೊಂದು ಬಿಗ್‌ಬಜೆಟ್‌ ಸಿನಿಮಾ ಅಷ್ಟೇ ಅಲ್ಲ, ಪ್ಯಾನ್‌ ಇಂಡಿಯಾ ಸಿನಿಮಾ ಅನ್ನೋದು ವಿಶೇಷ…

ಶಿವರಾಜಕುಮಾರ್‌ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಆರ್.ಜೈ ನಿರ್ದೇಶಕರು. ಯಾರು ಈ ಆರ್.ಜೈ ಅನ್ನುವ ಕುತೂಹಲ ಎಲ್ಲರಿಗೂ ಇದೆ. ಅದು ಬೇರಾರೂ ಅಲ್ಲ. ಅದು ಆರ್‌ ಜಯರಾಮ್.‌ ಹೌದು, ಉಪೇಂದ್ರ ಅಭಿನಯದ “ಬುದ್ಧಿವಂತ ೨” ನಿರ್ದೇಶಿಸಿರುವ ಆರ್.‌ ಜಯರಾಮ್‌ ಅವರೇ ಈ ಚಿತ್ರಕ್ಕೇ ನಿರ್ದೇಶಕರು. ಇನ್ನು, ಈ ಚಿತ್ರಕ್ಕೆ ನಿರ್ಮಾಪಕರಾಗಿರೋದು ಕೇಶವ್‌ (ರೈತ). ಇಷ್ಟಕ್ಕೂ ಯಾರು ಈ ನಿರ್ಮಾಪಕರು ಅನ್ನುವುದಾದರೆ, ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ – ರಚಿತಾರಾಂ ಕಾಂಬಿನೇಶನ್ ನ ಅದ್ಧೂರಿ ಬಜೆಟ್‌ನ “ಲಕಲಕ‌‌ ಲ್ಯಾಂಬರ್ಗಿನಿ” ಆಲ್ಬಮ್ ಸಾಂಗ್ ನಿರ್ಮಿಸಿದ್ದ ಆರ್. ಕೇಶವ್(ರೈತ) . ಬಿಂದ್ಯಾ‌‌ ಮೂವೀಸ್ ಮೂಲಕ ಅಪಾರ ವೆಚ್ಚದಲ್ಲಿ ಅದ್ದೂರಿ ಚಿತ್ರ ಮಾಡಲು ಹೊರಟಿದ್ದಾರೆ.

ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ ಅನ್ನೋದಷ್ಟೇ ಈ ಹೊತ್ತಿನ ಸುದ್ದಿ. ಉಳಿದಂತೆ ಚಿತ್ರಕ್ಕೆ ಯಾರು ನಾಯಕಿ. ಯಾರೆಲ್ಲ ಇರುತ್ತಾರೆ. ಎಲ್ಲೆಲ್ಲಿ ಚಿತ್ರೀಕರಣ ಎಂಬಿತ್ಯಾದಿ ವಿಷಯ ಸದ್ಯಕ್ಕಿಲ್ಲ. ಇನ್ನು, ಆರ್.ಜಯರಾಮ್‌ ಅವರು ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಆರ್. ಜೈ ಎಂದು ಬದಲಿಸಿಕೊಂಡಿದ್ದಾರೆ. ಆ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಥೆ ಏನು ಗೊತ್ತಾ…?

ನಿರ್ದೇಶಕ ಆರ್.‌ಜೈ ಹೇಳುವ ಪ್ರಕಾರ ಇದೊಂದು ಬಿಗ್‌ ಬಜೆಟ್‌ ಸಿನಿಮಾ. ಅದರಲ್ಲೂ ಇದು ಪ್ಯಾನ್‌ ಇಂಡಿಯಾ ಕಥೆ. ಹಾಗೆ ಹೇಳುವುದಾದರೆ, 1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆ ಇದು. ಶಿವರಾಜಕುಮಾರ್ ಅವರನ್ನು ಹೊಸ ರೀತಿಯಲ್ಲೇ ತೋರಿಸುವ ಉದ್ದೇಶದಿಂದ ಪಕ್ಕಾ ಪ್ಲಾನ್‌ ಮಾಡಿಕೊಳ್ಳಲಾಗಿದೆ.

ಅದರೊಂದಿಗೆ ಕಥೆ, ಪಾತ್ರವನ್ನು ವಿಶೇಷವಾಗಿ ಕಟ್ಟಿಕೊಡುವ ಮೂಲಕ ಕನ್ನಡಿಗರಿಗೊಂದು ಹೊಸ ಬಗೆಯ ಸಿನಿಮಾ ತೋರಿಸುವ ಉದ್ದೇಶ ನನ್ನದು ಅನ್ನುತ್ತಾರೆ ಅವರು. ಸದ್ಯ ತಾಂತ್ರಿಕವರ್ಗ ಹಾಗೂ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಅದಾದ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಾರೆ ಅವರು.

ಅಂದಹಾಗೆ, ಶಿವಣ್ಣ ಅಭಿನಯದ ಈ ಸಿನಿಮಾ ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆಯ ಜೊತೆಗೆ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್ ಜೈ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ತೋತಾಪುರಿ ಝಲಕ್ ಸಖತ್ ವೈರಲ್; ಟೀಸರ್ ಮೂಲಕ ಕಮಾಲ್ ಮಾಡಿದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ ‘ನೀರ್ ದೋಸೆ’ ಮೂಲಕ ದೊಡ್ಡ ದಾಖಲೆ ಬರೆದಿದೆ. ಈಗ ಮತ್ತೊಂದು ದಾಖಲೆಯೂ ಬರೆದಿದೆ. ಹೌದು, ಜನವರಿ 24ರಂದು “ತೋತಾಪುರಿ” ಚಿತ್ರದ ಮೊದಲ ಝಲಕ್ ಆಡಿಯೋ ಟೀಸರ್ ಮೂಲಕ ಹೊರಬಂದಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿರುವ ‘ತೋತಾಪುರಿ’ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ತಾರಾಗಣದ ವಿಷಯದಲ್ಲೂ ‘ತೋತಾಪುರಿ’ ಕಡಿಮೆಯೇನಿಲ್ಲ. ಜಗ್ಗೇಶ್, ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ನಟಿಸಿದ್ದಾರೆ.

ಈ ಹಿಂದೆ “ಎರಡನೇ ಮದುವೆ”, “ಗೋವಿಂದಾಯ ನಮಃ”, “ಆರ್ ಎಕ್ಸ್ ಸೂರಿ”, “ಶಿವಲಿಂಗ” ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ “ತೋತಾಪುರಿ” ನಿರ್ಮಿಸಿದ್ದಾರೆ.

ಅಂದಹಾಗೆ “ತೋತಾಪುರಿ” ಭಾಗ 1 ಹಾಗೂ ಭಾಗ 2 ರೂಪದಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಸೀಳಿನ್ ಸಂಗೀತವಿದೆ. ವಿಜಯ ಪ್ರಸಾದ್ ಸಾಹಿತ್ಯವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಮೊದಲ ಝಲಕ್ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗಿದೆ. ಅದು ಹಾಡಿನ ಟೀಸರ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸಿದೆ.

ಸದ್ಯದಲ್ಲೇ ಪೂರ್ಣ ಹಾಡು ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಅದೇನೆ ಇರಲಿ, ಸದ್ಯ ರಿಲೀಸ್ ಆಗಿರುವ ಆಡಿಯೋ ಟೀಸರ್ ಸಖತ್ ಕಮಾಲ್ ಮಾಡುತ್ತಿದ್ದು, ಲಕ್ಷಾಂತರ ಹಿಟ್ಸ್ ದಾಖಲಾಗಿದೆ. ಜಗ್ಗೇಶ್ ಅವರ ರಿಯಾಕ್ಷನ್, ವಿಜಯಪ್ರಸಾದ್ ಸಾಹಿತ್ಯ ಹಾಗೂ ಅನೂಪ್ ಸೀಳಿನ್ ಸಂಗೀತ ಸಾಕಷ್ಟು ಮೋಡಿ ಮಾಡಿದೆ. ಮೋನಿಫ್ಲಿಕ್ಸ್ ಆಡಿಯೋಸ್ ಯೂ ಟ್ಯೂಬ್ ಚಾನಲ್’ನಲ್ಲಿ ಹಾಡು ಬಿಡುಗಡೆಯಾಗಿದೆ. ಶಿವಲಿಂಗ ಸಿನಿಮಾ ಖ್ಯಾತಿಯ ಕೆ.ಎ.ಸುರೇಶ್ ಈ ಚಿತ್ರವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

error: Content is protected !!