ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿ ನಿರ್ದೇಶಕನಾದ ಕಥೆ! ಕಡಲೂರ ಕಣ್ಮಣಿ ಹಿಂದಿನ ಹಾಡು ಪಾಡು!!

ಯಾವುದೇ ವ್ಯಕ್ತಿ ಸಾಧನೆ ಮಾಡಲು ಹೊರಟರೆ ನೂರಾರು ಅಡೆತಡೆ ಸಹಜ. ಅದರಲ್ಲೂ ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾದರಂತೂ ಬದುಕೇ ಬೇಡ ಎನಿಸಿ ಆತ್ಮಹತ್ಯೆಯಂತಹ ಘಟನೆಗೂ ಯೋಚಿಸುವಂತಹ ಸಂದರ್ಭ ಬಂದೇ ಬರುತ್ತೆ. ಅಂಥದ್ದೊಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕನ್ನಡ ಚಿತ್ರರಂಗದ ನಿರ್ದೇಶಕರಿಗೂ ಬಂದಿತ್ತು. ಅದು ರಾಮ್‌ ಪ್ರಸನ್ನ ಹುಣಸೂರು. ಕೊನೆಗೆ ಆ ನಿರ್ಧಾರದಿಂದ ಅವರು ಹಿಂದೆ ಸರಿದು ನಿಂತರು. ಈಗ ಸಿನಿಮಾ ನಿರ್ದೇಶಿಸಿ, ರಿಲೀಸ್‌ಗೂ ರೆಡಿಯಾಗುತ್ತಿದ್ದಾರೆ…

ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಅವರ ನಿರ್ದೇಶನದ “ಕಡಲೂರ ಕಣ್ಮಣಿ” ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಮಧುರಾಮ್ ಅವರು ಬರೆದಿರುವ “ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ” ಎಂಬ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ತಮ್ಮ ಸಿನಿಮಾ ಜರ್ನಿ ಕುರಿತು ಹೇಳಿಕೊಂಡ ನಿರ್ದೇಶಕ ರಾಮ್‌ ಪ್ರಸನ್ನ ಹುಣಸೂರು, “ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿದೆ. ಈ ಚಿತ್ರ ಆರಂಭವಾಗುವ ಮುನ್ನ ನಡೆದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಜೀವನದಲ್ಲಿ ನೊಂದ ನಾನು, ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದ್ದೆ. ಇನೇನ್ನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ-ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ಅವರೆಲ್ಲಾ ನನ್ನ ಪ್ರೋತ್ಸಹಕ್ಕೆ ನಿಂತರು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗಿದೆ.
“ಕಡಲೂರ ಕಣ್ಮಣಿ” ಯನ್ನು ನಾನು ವಜ್ರ ಎನ್ನುತ್ತೇನೆ. ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರಕ್ಕೆ ಸಂಗೀತ ನೀಡುವಂತೆ ಸಂಗೀತ ನಿರ್ದೇಶಕರೊಬ್ಬರನ್ನು ಕೇಳಲಾಗಿತ್ತು. ಆದರೆ ಅವರು ಆರು ತಿಂಗಳಾದರು ಒಂದು ಹಾಡು ಮಾಡಿ ಕೊಡಲಿಲ್ಲ. ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು ನಾನೇ ಸಂಗೀತ ನೀಡಿದ್ದೇನೆ ಎಂದರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು.

ಚಿತ್ರಕ್ಕೆ ಅರ್ಜುನ್‌ ಹೀರೋ. ಅವರು ಹೇಳಿದ್ದಿಷ್ಟು, “ನನಗೆ ನನ್ನ ‌ಸ್ನೇಹಿತನ ಮೂಲಕ ನಿರ್ದೇಶಕರು ಪರಿಚಯವಾದರು. ಸ್ವಲ್ಪ ಸಮಯ ಅವರೊಡನೆ ಮಾತನಾಡಿದೆ. ನೀವೆ ನಮ್ಮ ಸಿ‌ನಿಮಾ ಹೀರೋ ಎಂದರು. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ಅರ್ಜುನ್.

ನಿರ್ಮಾಪಕರಾದ ವಿನೋದ್ ರಾಮ್ ಹೊಳೆನರಸೀಪುರ, ಕೊಳ ಶೈಲೇಶ್ ಆರ್ ಪೂಜಾರ್ , ಸಹ ನಿರ್ಮಾಪಕ ಬಸವರಾಜ ಗಚ್ಚಿ, ಮಧುರಾಮ್, ಕಿರಣ್ ದೇವಲಾಪುರ ಹಾಗೂ ಛಾಯಾಗ್ರಾಹಕರಾದ ಮನೋಹರ್ ಹಾಗೂ ರವಿರಾಮ್ ಇದ್ದರು.

Related Posts

error: Content is protected !!