ಕನ್ನಡದಲ್ಲಿ ಶಿವರಾಜಕುಮಾರ್ ಅವರಿಗೆ ನಿರ್ದೇಶನ ಮಾಡಬೇಕು ಅನ್ನುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದರಲ್ಲೂ ಸಕ್ಸಸ್‌ಫುಲ್ ನಟನನ್ನು ನಿರ್ದೇಶಿಸುವ ಕನಸು ನನಸಾಗಿಬಿಟ್ಟರಂತೂ ಸ್ವರ್ಗ ಮೂರೇ ಗೇಣು. ಹೌದು, ಅಂಥದ್ದೊಂದು ಅವಕಾಶವನ್ನು ನಿರ್ದೇಶಕ ಆರ್.ಜೈ ಪಡೆದುಕೊಂಡಿದ್ದಾರೆ. ಅವರ ಈ ಚಿತ್ರಕ್ಕೆ ಕೇಶವ್ (ರೈತ) ನಿರ್ಮಾಪಕರು. ಇದೊಂದು ಬಿಗ್‌ಬಜೆಟ್ ಸಿನಿಮಾ ಅಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ…
ಶಿವರಾಜಕುಮಾರ್ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಆರ್.ಜೈ ನಿರ್ದೇಶಕರು. ಯಾರು ಈ ಆರ್.ಜೈ ಅನ್ನುವ ಕುತೂಹಲ ಎಲ್ಲರಿಗೂ ಇದೆ. ಅದು ಬೇರಾರೂ ಅಲ್ಲ. ಅದು ಆರ್ ಜಯರಾಮ್. ಹೌದು, ಉಪೇಂದ್ರ ಅಭಿನಯದ “ಬುದ್ಧಿವಂತ ೨” ನಿರ್ದೇಶಿಸಿರುವ ಆರ್. ಜಯರಾಮ್ ಅವರೇ ಈ ಚಿತ್ರಕ್ಕೇ ನಿರ್ದೇಶಕರು. ಇನ್ನು, ಈ ಚಿತ್ರಕ್ಕೆ ನಿರ್ಮಾಪಕರಾಗಿರೋದು ಕೇಶವ್ (ರೈತ). ಇಷ್ಟಕ್ಕೂ ಯಾರು ಈ ನಿರ್ಮಾಪಕರು ಅನ್ನುವುದಾದರೆ, ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ – ರಚಿತಾರಾಂ ಕಾಂಬಿನೇಶನ್ ನ ಅದ್ಧೂರಿ ಬಜೆಟ್‌ನ “ಲಕಲಕ ಲ್ಯಾಂಬರ್ಗಿನಿ” ಆಲ್ಬಮ್ ಸಾಂಗ್ ನಿರ್ಮಿಸಿದ್ದ ಆರ್. ಕೇಶವ್(ರೈತ) . ಬಿಂದ್ಯಾ ಮೂವೀಸ್ ಮೂಲಕ ಅಪಾರ ವೆಚ್ಚದಲ್ಲಿ ಅದ್ದೂರಿ ಚಿತ್ರ ಮಾಡಲು ಹೊರಟಿದ್ದಾರೆ.
ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ ಅನ್ನೋದಷ್ಟೇ ಈ ಹೊತ್ತಿನ ಸುದ್ದಿ. ಉಳಿದಂತೆ ಚಿತ್ರಕ್ಕೆ ಯಾರು ನಾಯಕಿ. ಯಾರೆಲ್ಲ ಇರುತ್ತಾರೆ. ಎಲ್ಲೆಲ್ಲಿ ಚಿತ್ರೀಕರಣ ಎಂಬಿತ್ಯಾದಿ ವಿಷಯ ಸದ್ಯಕ್ಕಿಲ್ಲ. ಇನ್ನು, ಆರ್.ಜಯರಾಮ್ ಅವರು ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಆರ್. ಜೈ ಎಂದು ಬದಲಿಸಿಕೊಂಡಿದ್ದಾರೆ. ಆ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಥೆ ಏನು ಗೊತ್ತಾ…?
ನಿರ್ದೇಶಕ ಆರ್.ಜೈ ಹೇಳುವ ಪ್ರಕಾರ ಇದೊಂದು ಬಿಗ್ ಬಜೆಟ್ ಸಿನಿಮಾ. ಅದರಲ್ಲೂ ಇದು ಪ್ಯಾನ್ ಇಂಡಿಯಾ ಕಥೆ. ಹಾಗೆ ಹೇಳುವುದಾದರೆ, 1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆ ಇದು. ಶಿವರಾಜಕುಮಾರ್ ಅವರನ್ನು ಹೊಸ ರೀತಿಯಲ್ಲೇ ತೋರಿಸುವ ಉದ್ದೇಶದಿಂದ ಪಕ್ಕಾ ಪ್ಲಾನ್ ಮಾಡಿಕೊಳ್ಳಲಾಗಿದೆ.
ಅದರೊಂದಿಗೆ ಕಥೆ, ಪಾತ್ರವನ್ನು ವಿಶೇಷವಾಗಿ ಕಟ್ಟಿಕೊಡುವ ಮೂಲಕ ಕನ್ನಡಿಗರಿಗೊಂದು ಹೊಸ ಬಗೆಯ ಸಿನಿಮಾ ತೋರಿಸುವ ಉದ್ದೇಶ ನನ್ನದು ಅನ್ನುತ್ತಾರೆ ಅವರು. ಸದ್ಯ ತಾಂತ್ರಿಕವರ್ಗ ಹಾಗೂ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಅದಾದ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಾರೆ ಅವರು.
ಅಂದಹಾಗೆ, ಶಿವಣ್ಣ ಅಭಿನಯದ ಈ ಸಿನಿಮಾ ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆಯ ಜೊತೆಗೆ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್ ಜೈ ತಿಳಿಸಿದ್ದಾರೆ.