Categories
ಸಿನಿ ಸುದ್ದಿ

ಫಿಲ್ಮ್ ಚೇಂಬರ್ ಚುನಾವಣೆ: ಗೆಲ್ಲುವ ಭರವಸೆಯಲ್ಲಿ ಸಾ.ರಾ.ಗೋವಿಂದು ತಂಡ…

ಕನ್ನಡ ಚಲನಚಿತ್ರೋದ್ಯಮದ ಅತ್ಯುನ್ನತ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ವಾರ್ಷಿಕ ಚುನಾವಣೆ ಇದೇ ಶನಿವಾರ, ಮೇ 28 ರಂದು ನಡೆಯಲಿದೆ.

ಮತದಾನಕ್ಕೆ ಇದೀಗ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಖಾಡದಲ್ಲಿ ಘಟಾನುಘಟಿಗಳಿದ್ದಾರೆ. ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದ ತಂಡ ಎದುರಾಳಿ ಸ್ಪರ್ಧಿಗಳಿಗಿಂತ ಮುಂದಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದ್ದು, ಅದೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾಲ್ಕು ವರ್ಷಗಳ ಬಳಿಕ ಸಾ.ರಾ. ಗೋವಿಂದು ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಪುನಃ ಅಧ್ಯಕ್ಷರಾಗಲು ತಯಾರಿ ನಡೆಸಿದ್ದಾರೆ.

ಈ ಸಲ ಅವರ ನೇತೃತ್ವದಲ್ಲಿ ನಿರ್ಮಾಪಕ ವಲಯದಿಂದ ಕರಿಸುಬ್ಬು (ಉಪಾಧ್ಯಕ್ಷ, ಸ್ಥಾನ), ಕೆ.ಎಂ.ವೀರೇಶ್ ನಿರ್ಮಾಪಕ ವಲಯದಿಂದ (ಗೌರವ ಕಾರ್ಯದರ್ಶಿ), ಎಂ.ಎನ್.ಕುಮಾರ್ ವಿತರಕ ವಲಯದಿಂದ (ಗೌರವ ಕಾರ್ಯದರ್ಶಿ) ಪಿ.ಎನ್.ಜ್ಞಾನೇಶ್ವರ್ ಐತಾಳ್ ವಿತರಕ ವಲಯದಿಂದ (ಉಪಾಧ್ಯಕ್ಷ), ಜೆ.ಪಿ.ಕುಮಾರ್ ಪ್ರದರ್ಶಕರ ವಲಯದಿಂದ (ಉಪಾಧ್ಯಕ್ಷ) ಎಲ್.ಸಿ.ಕುಶಾಲ್ ಪ್ರದರ್ಶಕರ ವಲಯದಿಂದ (ಗೌರವ ಕಾರ್ಯದರ್ಶಿ ಹಾಗು ಜಿ.ಕೆ.ಜಯಸಿಂಹ ಮುಸುರಿ ಗೌರವ ಖಜಾಂಚಿ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಲಿದ್ದಾರೆ.

ಈಗಾಗಲೇ ಈ ಹಿಂದೆ ಈ ತಂಡ ಅಧಿಕಾರದಲ್ಲಿದ್ದಾಗ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರ ಆಧಾರದ ಮೇಲೆ ಮತ್ತೆ ಸ್ಫರ್ಧೆಗಿಳಿದಿದೆ. ಕೆ.ಎಂ.ವೀರೇಶ್ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿದ ಪರಿ ಎಲ್ಲರಿಗೂ ಗೊತ್ತಿದೆ. ಅವರ ಕೆಲಸ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗಾಗಲೇ ಕೆಎಫ್‌ಸಿಸಿಯಲ್ಲಿ ಇತರ ಹುದ್ದೆಗಳಲ್ಲೂ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ.
ಸಾ.ರಾ.ಗೋವಿಂದು ಮತ್ತು ಎನ್.ಎಂ.ಕುಮಾರ್ ಅವರು 2008ರಲ್ಲಿ ಕೆಎಫ್‌ಸಿಸಿ ಸದಸ್ಯರಿಗೆ ಕಲ್ಯಾಣ ನಿಧಿಯನ್ನು ಪರಿಚಯಿಸಿದ್ದರು.

ಕಳೆದ ಐದು ವರ್ಷಗಳಲ್ಲಿ ಈ ನಿಧಿಯು ವೈದ್ಯಕೀಯ ಚಿಕಿತ್ಸೆಗಾಗಿ ಸದಸ್ಯರಿಗೆ ರೂ.3,71,76,000 ವಿತರಿಸಿರುವುದು ಹೆಗ್ಗಳಿಕೆ. ನಿಧನರಾದ ಸದಸ್ಯರ ಕುಟುಂಬಗಳಿಗೆ ಪರಿಹಾರ ನೀಡಿದೆ. ಪ್ರತಿ ಸದಸ್ಯನ ಕಲ್ಯಾಣ ನಿಧಿ ಈಗ 2.5 ಲಕ್ಷ ರೂ. 5 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿಯೂ ಸಾ.ರಾ. ಗೋವಿಂದು ಭರವಸೆ ನೀಡಿದ್ದಾರೆ.
ಇದಲ್ಲದೇ ಚಿತ್ರರಂಗಕ್ಕೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಈ ತಂಡ ಕಾರಣರಾಗಿದೆ.

ಮತ್ತೊಂದೆಡೆ, ಗೋವಿಂದು ಅವರ ಎದುರಾಕಲಿ ತಂಡ ಅಷ್ಟೊಂದು ಬಲವಿಲ್ಲ ಎಂಬ ನಂಬಿಕೆ ಈ ತಂಡಕ್ಕಿದೆ.
ಕೆಎಫ್‌ಸಿಸಿಯಲ್ಲಿ 1,290 ನಿರ್ಮಾಪಕರು, 412 ವಿತರಕರು ಮತ್ತು 187 ಪ್ರದರ್ಶಕರು ಸೇರಿದಂತೆ ಒಟ್ಟು 1,800 ಮತದಾರರಿದ್ದಾರೆ. ಶನಿವಾರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ವಿಜೇತರನ್ನು ಘೋಷಿಸಲಾಗುತ್ತದೆ.

Categories
ಸಿನಿ ಸುದ್ದಿ

ಲಾಂಗ್ ಹಿಡಿದ ವಸಿಷ್ಠ: ಧಮ್ ಜೊತೆ Love…ಲೀ ಎಂಟ್ರಿ ಕೊಟ್ಟ ಸಿಂಹ…

ಕಂಚಿನ ಕಂಠದ ಗಾಯಕ… ಪ್ರತಿಭಾನ್ವಿತ ನಾಯಕ ವಸಿಷ್ಠ ಸಿಂಹ ಭತ್ತಳಿಕೆಯಲ್ಲಿರುವ ಬಹುನಿರೀಕ್ಷಿತ Love..ಲಿ ಸಿನಿಮಾ ಅಂಗಳದಿಂದ ನಯಾ ಪೋಸ್ಟರ್ ರಿಲೀಸ್ ಆಗಿದೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಮತ್ತೊಂದು ಕೈಯಲ್ಲಿ ಧಮ್ ಎಳೆಯುತ್ತಾ, ರಾ ಲುಕ್ ನಲ್ಲಿ ವಸಿಷ್ಠ ಸಿಂಹ ಎಂಟ್ರಿ ಕೊಟ್ಟಿದ್ದು, ಈ ಪೋಸ್ಟರ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ Love..ಲಿ ಚಿತ್ರದ ಇಂಟ್ರೊಡಕ್ಷನ್ ಸೀನ್ಸ್ ಅದ್ದೂರಿಯಾಗಿ ಮೂಡಿ ಮೂಡಿ ಬಂದಿರುವ ಬಗ್ಗೆ ಮಾಹಿತಿ‌ ಕೊಟ್ಟಿದ್ದ ಚಿತ್ರತಂಡ ಈಗ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಮಫ್ತಿ ಸಿನಿಮಾ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು love..ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್​​ಗಳಿವೆ. ಜಯರಾಜ್​ ಜೀವನ ಆಧರಿಸಿ ‘ಹೆಡ್ ಬುಷ್’ ‘ಸಿಂಬಾ’, ‘ಓದೆಲಾ ರೈಲ್ವೇ ಸ್ಟೇಷನ್’ ಸೇರಿ ಹಲವು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.

Categories
ಸಿನಿ ಸುದ್ದಿ

ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌ ಸಿನಿಮಾ ಶುರು: ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರಕ್ಕೆ ಯುವಧೀರ ಹೀರೋ…

ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಇತ್ತೀಚೆಗೆ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮೆರಾಗೆ ಚಾಲನೆ ನೀಡಿದರು.

ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ ಎಸ್ ಪಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ನಿರ್ದೇಶನ ಸಿನಿಮಾ. ಒಂದೇ ಕಥೆ ಮೂರು ಟ್ರ್ಯಾಕ್ ನಲ್ಲಿ ನಡೆಯುತ್ತದೆ. ಇದು ಯಾವ ಜಾನರ್ ಸಿನಿಮಾ ಅನ್ನೋದು ವರ್ಗೀಕೃತ ಮಾಡುವುದು ಕಷ್ಟ. ಹೀಗಾಗಿ ಇದು ಮಲ್ಟಿಪಲ್ ಜಾನರ್ ನ ಸಿನಿಮಾ ಎಂದು ನಿರ್ದೇಶಕ ಯುವಧೀರ ಮಾಹಿತಿ ಹಂಚಿಕೊಂಡರು.

ಸುಚೇಂದ್ರ ಪ್ರಸಾದ್, ಇವರು ಇಟ್ಟಿರುವ ಶೀರ್ಷಿಕೆ ವ್ಯಾಕರಣ ಬದ್ಧವಲ್ಲ ಹಾಗೇಯೇ ಸಿನಿಮಾ ಕೂಡ ಎಲ್ಲ ವ್ಯಾಕರಣವನ್ನ ಮುರಿಯಲಿದೆ. ಇದು ನಿಜ ಜೀವನದ ಕೆಲವು ಪ್ರಸಂಗ ತಳುಕು ಹಾಕಿ ಕಥೆ ರೆಡಿ ಮಾಡಿದ್ದಾರೆ. ಒಳ್ಳೆ ಕಥಾಹಂದರವನ್ನು ತಯಾರಿಸಿದ್ದಾರೆ ಎಂದು ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಹೇಳಿದರು.

ಯುವಧೀರ ನಿರ್ದೇಶನದ ಜೊತೆಗೆ ತಾವೇ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನುಗೌಡ, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ವಿ.ಮನೋಹರ್, ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಶ್ರೀನಿಧಿ ಪಿಕ್ಚರ್ ಬ್ಯಾನರ್‌ ತಯಾರಾಗುತ್ತಿರುವ ಗುಡ್ ಗುಡ್ಡರ್ ಗುಡ್ಡೆಸ್ಟ್ ಚಿತ್ರಕ್ಕೆ ಬಿಲ್ಡರ್‌ ಆಗಿರುವ ಸುರೇಶ್‌ ಬಿ ನಿರ್ಮಾಣ ಮಾಡಿದ್ದು, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರವಾಗಿದ್ದು, ಜೊತೆಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಂ, ಆ್ಯಕ್ಷನ್‌ ಕೂಡ ಒಳಗೊಂಡಿದೆ. ಬೆಂಗಳೂರು,‌ ಮಂಗಳೂರು, ಮೈಸೂರು ಸುತ್ತಮುತ್ತ 45 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಸಂದೀಪ್ ಹೊಲ್ಲೂರಿ ಕ್ಯಾಮೆರಾ, ಶಶಾಂಕ್ ಶೇಷಗಿರಿ ಸಂಗೀತ, ಕಿರಣ್ ಸಂಕಲನ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಕಿರಿಕ್ ಶಂಕರನಿಗೆ ಆರ್.ಚಂದ್ರು ಸಾಥ್! ಯೋಗಿ ಚಿತ್ರದ ಟ್ರೇಲರ್ ರಿಲೀಸ್… ಮೇ.27ಕ್ಕೆ ಸಿನಿಮಾ ಬಿಡುಗಡೆ

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು.

ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ. ಎನ್. ಕುಮಾರ್ ಅವರು ನೀಡುತ್ತಿರುವ ಪ್ರೋತ್ಸಾಹ ಅಪಾರ. ಅವರು ಈಗ ಸಿನಿಮಾ ಮಾಡು ಅಂದರು, ನಾನು ಮಾಡಲು ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯ. ಚಿತ್ರ ಯಶಸ್ವಿಯಾಗಲಿ ಅಂದರು ಆರ್ ಚಂದ್ರು. ಮತ್ತೊಬ್ಬ ಅತಿಥಿ ALL OK ಕೂಡ ಚಿತ್ರತಂಡಕ್ಕೆ ಶುಭ ಕೋರಿದರು.

ಇಡೀ ತಂಡದ ಪರಿಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಮನಸ್ಸುಗಳು ಸೇರಿ ಮಾಡುವ ಕೆಲಸ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ಇದೆ. ನಮ್ಮ ಚಿತ್ರ ನೋಡಿ ಹಾರೈಸಿ ಎಂದರು ನಿರ್ದೇಶಕ ಅನಂತರಾಜ್.

ನಾನು‌ ಏಪ್ರಿಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆ.‌ ತುಂಬಾ ಚಿತ್ರಗಳು ಬಿಡುಗಡೆಯಾಗಿದ್ದರಿಂದ ಈ 27ರಂದು 150 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಕಿರಿಕ್ ಶಂಕರ್” ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಎಂ.ಎನ್.ಕುಮಾರ್.

ನಾನು ಅಣ್ಣವ್ರ ಬ್ಯಾನರ್ ಬಿಟ್ಟರೆ ಇದೇ ದೊಡ್ಡ ಬ್ಯಾನರ್ ನಲ್ಲಿ ನಟನೆ ಮಾಡಿರುವುದು. ನಿರ್ದೇಶಕರು ಸಹ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವವರು. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಎಲ್ಲರ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಯಕ ಲೂಸ್ ಮಾದ ಯೋಗಿ.

ನಾಯಕಿ ಅದ್ವಿಕ ಸಹ ಅಭಿನಯದ ಅನುಭವ ಹಂಚಿಕೊಂಡರು. ನಟ ರಿತೇಶ್, ನಟ ಹಾಗೂ ಸಂಕನಕಾರ ನಾಗೇಂದ್ರ ಅರಸ್ , ಸಂಗೀತ ನಿರ್ದೇಶಕ ವೀರ ಸಮರ್ಥ್, ಛಾಯಾಗ್ರಾಹಕ ಜೆ.ಜಿ ಕೃಷ್ಣ ಹಾಗೂ
ಕಾರ್ಯಕಾರಿ ನಿರ್ಮಾಪಕ ಯೋಗೀಶ್ ಹುಣಸೂರು “ಕಿರಿಕ್ ಶಂಕರ್” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ವಾಸಂತಿ ನಲಿದಾಗ ಚಿತ್ರತಂಡ ಖುಷಿಯಾಯ್ತು…

ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್ ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿದ್ದು, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.

ನಿಜವಾಗಲೂ ಸಂತೋಷವಾಗುತ್ತಿದೆ. ಸುಧಾರಾಣಿ ನನ್ನ ಮೊದಲ ಜೋಡಿ. ಈ ಸಿನಿಮಾದಲ್ಲೂ ಮತ್ತೆ ಜೋಡಿಯಾಗಿ ನಟಿಸುತ್ತಿದ್ದೇವೆ.‌ ನಾನು ಬ್ಯುಸಿನೆಸ್ ಮ್ಯಾನ್. ಮಗ ಅಂದ್ರೆ ಇಷ್ಟ. ತುಂಬಾ ಇಂಟ್ರೆಸ್ಟಿಂಗ್ ಇರುವ ಪಾತ್ರ. ವಾಸಂತಿ ನಲಿದಾಗ ತುಂಬಾ ಸುಂದರವಾದ ಟೈಟಲ್, ವಂಡರ್ ಫುಲ್ ಸ್ಟಾರ್ ಕಾಸ್ಟ್, ಟೆಕ್ನಿಷಿಯನ್ ಎಂದು ಸಾಯಿಕುಮಾರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಮಂಜು ಪಾವಗಡ ಮಾತನಾಡಿ, ರವೀಂದ್ರ ಸರ್ ಗೆ ಧನ್ಯವಾದ ಒಳ್ಳೆ ಪಾತ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅದ್ಭುತ ಸನ್ನಿವೇಶಗಳಿವೆ. ಡೈಲಾಗ್ ತುಂಬಾ ಚೆನ್ನಾಗಿವೆ. ಇಷ್ಟೆಲ್ಲಾ ಸೀನ್ ಮಾಡಿದ್ರೂ ಹೀರೋಯಿನ್ ಕಾಣಿಸಿಲ್ಲ. ಆಮೇಲೆ ನಂಬರ್ ಕೊಟ್ರೆ ಕಷ್ಟಸುಖ ಮಾತಾಡೋಣಾ ಎಂದು ತಮಾಷೆ ಮಾಡಿದರು.

ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ವಾಸಂತಿ ನಲಿದಾಗ ಸಿನಿಮಾಗೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಸಿನಿಮಾಕ್ಕಿದ್ದು, ಸದ್ಯದಲ್ಲಿಯೇ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.

Categories
ಸಿನಿ ಸುದ್ದಿ

ಶ್ರೀಮುರಳಿಯ ಬಘೀರನಿಗೆ ಚಾಲನೆ: ಹೊಂಬಾಳೆ ಫಿಲಂಸ್ ಚಿತ್ರವಿದು…

ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಹ “ಕೆ ಜಿ ಎಫ್ 2” ನಂತಹ ಬಿಗ್ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ನಿರ್ಮಾಣದ “ಬಘೀರ” ಚಿತ್ರಕ್ಕೆ ಚಾಲನೆ ದೊರಕಿದೆ.

ಡಾ. ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀಮುರಳಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ‌.

“ಬಘೀರ” ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಹೋದರ ಮಂಜುನಾಥ್ ಆರಂಭ ಫಲಕ ತೋರಿದರು. ನಿರ್ದೇಶಕ ಸೂರಿ ಅವರ ತಾಯಿ ಸರೋಜ ಅವರು ಕ್ಯಾಮೆರಾ ಚಾಲನೆ ಮಾಡಿದರು. ಮೇ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ‌.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಎ ಜೆ ಶೆಟ್ಟಿ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಶ್ರೀಮುರಳಿ ನಾಯಕರಾಗಿ ನಟಿಸಿದ್ದ “ಉಗ್ರಂ” ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈ ಚಿತ್ರಕ್ಕೂ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕ ಡಾ. ಸೂರಿ ಅವರದು.
ಹಿಂದೆ ಬಿಡುಗಡೆಯಾಗಿದ್ದ “ಬಘೀರ” ಚಿತ್ರದ ಫಸ್ಟಲುಕ್ ಗೆ ಶ್ರೀಮುರಳಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರದಲ್ಲಿದ್ದಾರೆ.

ಶ್ರೀಮುರಳಿ “ಬಘೀರ” ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಾತ್ವಿಕ ಎಂಬ ಸಾರ್ಥಕ ಪ್ರತಿಭೆ! ಕನ್ನಡ ಮಾತ್ರವಲ್ಲ ಪರಭಾಷೆಗೂ ಕಾಲಿಟ್ಟ ಕನ್ನಡತಿ – ಬರ್ತ್ ಡೇ ಖುಷಿಯಲ್ಲಿ ನಟಿ, ನಿರ್ಮಾಪಕಿ, ಸ್ಟೈಲಿಶ್, ಕಾಸ್ಟ್ಯೂಮ್ ಡಿಸೈನರ್…

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಅನೇಕ ಪ್ರತಿಭೆಗಳು ಕಾಲಿಡುತ್ತಲೇ ಇವೆ. ನೂರಾರು ಆಸೆ, ಆಕಾಂಕ್ಷೆ ಹೊತ್ತು ಬಣ್ಣದ ಲೋಕದಲ್ಲಿ ಮಿಂದೆದ್ದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ನಟಿಯಾದವರು ಇಲ್ಲಿ ನಿರ್ಮಾಪಕರಾದ ಉದಾಹರಣೆಗೇನು ಕಮ್ಮಿ ಇಲ್ಲ. ಅಂತಹವರ ಸಾಲಿಗೆ ಈಗ ಯುವ ನಟಿಯೊಬ್ಬರೂ ಸೇರಿದ್ದಾರೆ. ಅವರು ಬೇರಾರೂ ಅಲ್ಲ, ಸಾತ್ವಿಕ. ಈ ಸಾತ್ವಿಕ ಬಗ್ಗೆ ಈಗ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರು ಮೇ. 20 ರಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ ಅವರು ಒಂದಷ್ಟು ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷೆಗೂ ಜಿಗಿದಿದ್ದಾರೆ.

ನಟಿಯಷ್ಟೇ ಅಲ್ಲ…

ಹೌದು, ಸಾತ್ವಿಕ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈಗಾಗಲೇ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಸಾತ್ವಿಕ, ಆ ಧಾರಾವಾಹಿಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿಯೂ ಕೆಲಸ ಮಾಡಿದ್ದಾರೆ. ಇದಷ್ಟೇ ಅಲ್ಲ, ಸಾತ್ವಿಕ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು, ವಿಶೇಷವೆಂದರೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಿಗೆ ತಮ್ಮ ಅದ್ಭುತ ಮನೆಗಳನ್ನೂ ಇವರು ಚಿತ್ರೀಕರಣಕ್ಕಾಗಿ ನೀಡುತ್ತಿದ್ದಾರೆ. ಹಾಗಾಗಿ ಸಾತ್ವಿಕ ಅಂದರೆ ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಇವರು ಗೊತ್ತಿಲ್ಲವೆಂದವಲ್ಲ. ಸದ್ಯದ ಮಟ್ಟಿಗೆ ಸಾತ್ವಿಕ ಎಲ್ಲಾ ವಿಭಾಗಗಳಲ್ಲೂ ಗುರುತಿಸಿಕೊಂಡಿದ್ದಾರೆ.

ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ, ಕಲರ್ಸ್ ಕನ್ನಡದ ಕನ್ಯಾಕುಮಾರಿ ಹಾಗು ಸುವರ್ಣ ಚಾನೆಲ್ ನ ಬೆಟ್ಟದ ಹೂ ಧಾರಾವಾಹಿಗಳಿಗೆ ಸಾತ್ವಿಕ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಅವರ ಕೆಲಸ ಸೀರಿಯಲ್ ನಲ್ಲಿ ಹೈಲೈಟ್.

ಕಿರುತೆರೆ ಟು ಬೆಳ್ಳಿತೆರೆ…

ಇನ್ನು‌ ಸಿನಿಮಾ ವಿಷಯಕ್ಕೆ ಬಂದರೆ, ಹಲವು ಸಿನಿಮಾಗಳಿಗೂ ಸಾತ್ವಿಕ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಅವರು ಬೆಳ್ಳಿತೆರೆಯಲ್ಲೂ ಕಾಣಿಕೊಂಡಿದ್ದಾರೆ. ಮಾರಿಗೋಲ್ಡ್ ಚಿತ್ರದಲ್ಲಿ ನಟಿಸಿರುವ ಸಾತ್ವಿಕ, ಪೃಥ್ವಿ ಅಂಬರ್ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.

ಜೊತೆಯಲ್ಲಿ ತೆರೆಯ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ನಟ ಭಯಂಕರ ಮತ್ತು ದಿಲ್ ಪಸಂದ್ ಸಿನಿಮಾಗಳ ಸ್ಪೆಷಲ್ ಸಾಂಗ್ ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

ಕೋವಿಡ್ ವೇಳೆ ಸೇವೆ…

ಇನ್ನು ಕೋವಿಡ್ ವೇಳೆ ಸಾತ್ವಿಕ ಅವರು ತಮ್ಮ ಶೂಟಿಂಗ್ ಮನೆಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ, ರೋಗಿಗಳ ಗುಣಮುಖಕ್ಕೆ ಕಾರಣರಾಗಿದ್ದರು.

ಆಗ ಒಂದಷ್ಟು ಕೈಲಾದ ಸೇವೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಬಣ್ಣದ ಲೋಕದಲ್ಲಿ ಬಿಝಿ ಡಿಸೈನರ್ ಆಗಿದ್ದಾರೆ. ಅದೇನೆ ಇರಲಿ ಸಾತ್ವಿಕ ನಟನೆ, ನಿರ್ಮಾಣದ ಜೊತೆಯಲ್ಲಿ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ವೈಕುಂಠ ದರ್ಶನದ ಹಾದಿಯಲ್ಲಿ ಭಾವುಕ‌ ಪಯಣ… ಇಲ್ಲಿ ಮನುಷ್ಯತ್ವವೇ ಜೀವಾಳ…

ಚಿತ್ರ ವಿಮರ್ಶೆ

ಚಿತ್ರ: ದಾರಿ ಯಾವುದಯ್ಯ ವೈಕುಂಠಕೆ
ನಿರ್ದೇಶನ: ಸಿದ್ದು ಪೂರ್ಣಚಂದ್ರ
ನಿರ್ಮಾಣ: ಶರಣಪ್ಪ ಎಂ ಕೊಟಗಿ
ತಾರಾಗಣ: ವರ್ಧನ್ ತೀರ್ಥಹಳ್ಳಿ, ಪೂಜಾ, ರಾಜ್ ಬಲವಾಡಿ, ಶೀಬಾ, ಸ್ಪಂದನ ಪ್ರಸಾದ್, ಸುಧಾ, ಪ್ರಣಯ ಮೂರ್ತಿ ಇತರರು.

‘ದೇಶದಲ್ಲಿ ಕಾಂಪಿಟೇಷನ್ ಇಲ್ಲದ ಜಾಗ ಅಂದ್ರೆ ಇದೆ…’
ತನ್ನ ಇಡೀ ಬದುಕನ್ನೇ ಆ ಸ್ಮಶಾನದಲ್ಲಿ ಕಳೆದು, ಹೆಣ ಸುಡುವ ಮತ್ತು ಗುಂಡಿ ತೋಡಿ ಮಣ್ಣು ಮಾಡುವ ಆ ಬಿಕ್ರ, ಈ ಡೈಲಾಗ್ ಹೇಳುವ ಹೊತ್ತಿಗೆ, ಆ ಕಥೆಯಲ್ಲಿ ಒಂದಷ್ಟು ಮೌಲ್ಯ ಸಂದೇಶ ಹರಡಿರುತ್ತೆ. ಸ್ಮಶಾನದಲ್ಲೇ ಇಡೀ ಸಿನಿಮಾ ಕಥೆ ಸಾಗುವುದರಿಂದ ಆ ಸ್ಮಶಾನ ಕೂಡ ಚಿತ್ರದ ಹೈಲೆಟ್. ಮನಸ್ಸಿಗೆ ಇಷ್ಟವಾಗುವ, ಆಗಾಗ ಎದೆ ಭಾರ ಎನಿಸುವ, ಅಲ್ಲಲ್ಲಿ ಮೌನವಾಗಿಸುವ, ಒಂದಷ್ಟು ಕಣ್ ಒದ್ದೆಯಾಗಿಸುವ ಎಮೋಷನಲ್ ಕಂಟೆಂಟ್ ಇಡೀ ಚಿತ್ರವನ್ನು ಮತ್ತಷ್ಟು ಅಪ್ಪಿ ಒಪ್ಪುವಂತೆ ಮಾಡಿದೆ.

ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಬದುಕಿನ ಪಾಠ ಕಲಿಸುವ ಚಿತ್ರಣ. ಇಲ್ಲಿ ಪ್ರೀತಿ ಇದೆ, ಆಸೆ ಇದೆ, ದುರಾಸೆ ಇದೆ, ಮೋಸವಿದೆ, ದರೋಡೆ, ಕೊಲೆ,ಸುಲಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಭಾವನೆಗಳ ಸಮ್ಮಿಲನವಿದೆ. ಜಾತ್ಯಾತೀತ ಭಾವನೆಯೂ ತುಂಬಿದೆ. ಒಟ್ಟಾರೆ ಪರಿಪೂರ್ಣ ಪರಿವರ್ತನೆಯ ಕಥೆಯನ್ನು ಅಷ್ಟೇ ಮನಮುಟ್ಟುವಂತೆ ನಿರೂಪಿಸಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಕಥೆ ಸಿಂಪಲ್ ಆಗಿದ್ದರೂ, ಅದರ ಭಾವ ಸಾರ ಕಾಡುವಂತಿದೆ. ಬದುಕಿನ ಎಲ್ಲಾ ಮಜಲುಗಳ ಮೆಲುಕು ಹಾಕುವಂತಹ ಸನ್ನಿವೇಶಗಳೂ ಇಲ್ಲಿವೆ. ಹಾಗಾಗಿ ನೋಡುಗರಿಗೆ ವೈಕುಂಟ ದರ್ಶನ ಖುಷಿ ಕೊಡಿಸುತ್ತೆ. ನೋಡ ನೋಡುತ್ತಲೇ ನೋಡುಗರ ಮನದಲ್ಲಿ ಒಂದಷ್ಟು ವಿಷಾದ ಮೂಡಿಸುತ್ತೆ. ಮಾನವ ಸಂಬಂಧಗಳ ಮೌಲ್ಯ ಹಲವು ವಿಷಯಗಳಿಗೆ ಮುಖ್ಯವೆನಿಸುತ್ತೆ. ಇನ್ನು ಆ ಸ್ಮಶಾನ ಕಾಯುವ ಬಿಕ್ರನಿಗೆ ತನ್ನ ಕಾಯಕ ಕೈಲಾಸ ಕಂಡಷ್ಟೇ ಖುಷಿ. ಹೆತ್ತ ಮಗನನ್ನು ಕಳಕೊಂಡ ಬಿಕ್ರನ ಪತ್ನಿಯ ಮೂಕ ರೋಧನೆ, ಅವಳ ಮಗಳು ಪಲ್ಲುಳ ನಿಷ್ಕಲ್ಮಶ ಪ್ರೀತಿ, ದರೋಡೆಕೋರ ಸುಧಾಕರನ ಪಾಪ ಪ್ರಜ್ಞೆ ಇವೆಲ್ಲವೂ ನೈಜತೆಗೆ ಸಾಕ್ಷಿಯಂತಿವೆ.

ಆ ದಾರಿಯ ಕಥೆ ಏನು?

ಆ ಸ್ಮಶಾನದಲ್ಲಿ ಎಲ್ಲವೂ ಎದೆಭಾರ ಎನಿಸುವ ಕ್ಷಣಗಳು. ಬಿಕೋ ಎನ್ನುವ, ಭಯವೆನಿಸೋ ಸ್ಮಶಾನದಲ್ಲಿ ಬಿಕ್ರನ ಕುಟುಂಬದ ವಾಸ. ಅಲ್ಲಿಗೆ ಆಕಸ್ಮಿಕವಾಗಿ ಎಂಟ್ರಿ ಕೊಡೋ ಒಬ್ಬ ಕಳ್ಳ. ಅಲ್ಲೊಂದಷ್ಟು ಮನಪರಿವರ್ತನೆಯಾಗುವ ಅಂಶಗಳು ಕಾಣಸಿಗುತ್ತವೆ. ಮೃಗಿಯಂತಹ ಒಬ್ಬ ಕೊಲೆಗಾರ, ಕಳ್ಳ ಹೇಗೆ ಒಬ್ಬ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಅನ್ನೋದೆ ಕಥೆ. ಈ ಮಧ್ಯೆ ಆ ಬಿಕ್ರನ ಮಗಳು ಪಲ್ಲು, ಮುಸ್ಲಿಂ ಯುವಕನೊಬ್ಬನ ಪ್ರೀತಿಗೆ ಮನಸೋತು ತನ್ನ ದೇಹವನ್ನೇ ಅರ್ಪಿಸಿ ಅವನ‌ ಆಗಮನಕ್ಕಾಗಿ ಕಾಯುತ್ತ ದಿನ ಸವೆಸೋ ಮುಗ್ಧ ಹುಡುಗಿಯ ಮೂಕ ರೋಧನ ಅವಳಿಗಷ್ಟೇ ಗೊತ್ತು.
ಇಲ್ಲಿ ಒಬ್ಬ ಕಳ್ಳನಿಗೂ ಕರುಣೆ ತೋರಿ ಅವನನ್ನು ಆರೈಕೆ ಮಾಡುವ ಬಿಕ್ರನ ಮಾನವೀಯ ಕಳಕಳಿ ಇಲ್ಲಿ ಮನಕಲಕುತ್ತದೆ. ಆಗಾಗ ಆ ದೃಶ್ಯ ಭಾವುಕತೆಗೂ ದೂಡುತ್ತದೆ.
ಇಲ್ಲಿ ಕಳ್ಳನಾಗಿ ಬರುವ ಆ ಸುಧಾಕರನ ಮನಪರಿವರ್ತನೆಯಾಗುವ ಪರಿಯೇ ವಿಶೇಷ. ಅಂತಹ ಹಲವು ವಿಶೇಷತೆಗಳು ಇಲ್ಲಿವೆ.

ಕಲೆಯೇ ಜೀವಾಳ

ಇಲ್ಲಿ ಹೈಲೆಟ್ ಅಂದರೆ ಸ್ಮಶಾನದಲ್ಲಿ ಬಿಕ್ರನಾಗಿ ಕಾಣಿಸಿಕೊಂಡಿರುವ ರಾಜ್ ಬಲವಾಡಿ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಡೈಲಾಗ್ ಡಿಲವರಿ, ಬಾಡಿ ಲಾಂಗ್ವೇಜ್ ಆಕರ್ಷಣೆ. ವರ್ಧನ್ ಕೂಡ ಇಲ್ಲಿ ಕಳ್ಳನಾಗಿ ಇಷ್ಟವಾಗುತ್ತಾರೆ. ಪೂಜಾ ಇಲ್ಲಿ ತಿಥಿಯ ಪಾತ್ರ ನೆನಪಿಸುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪಾತ್ರಗಳೂ ಗಮನಸೆಳೆಯುತ್ತವೆ.

ಚಿತ್ರದಲ್ಲಿ ಸಂಗೀತ ವಿಶೇಷ ಪಾತ್ರ ವಹಿಸಿದೆ. ಲೋಕಿ ಅವರ ಎಫರ್ಟ್ ಎದ್ದು ಕಾಣುತ್ತೆ. ಉಳಿದಂತೆ ನಿತಿನ್ ಅಪ್ಪಿ ಕ್ಯಾಮೆರಾ ಕೈಚಳಕ ಕೂಡ ಇಲ್ಲಿ ಗಮನಸೆಳೆಯುತ್ತೆ.

ಕೊನೆ ಮಾತು: ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ.. ಅನ್ನುವ ಮಾತಂತೆ ಇಲ್ಲಿ ಯಾವುದೂ ಶಾಶ್ವತವಲ್ಲ ಅನ್ನೋ ಸಂದೇಶವಿದೆ. ಇಷ್ಟು ಹೇಳಿದ ಮೇಲೂ ಸಿನಿಮಾ‌ ನೋಡದಿದ್ದರೆ ಹೇಗೆ? ಒಂದೊಮ್ಮೆ ವೈಕುಂಠದ ದಾರಿ ನೋಡಿ….

Categories
ಸಿನಿ ಸುದ್ದಿ

ಕಿಟ್ಟಿ ಜೊತೆ ಸಿದ್ಧಾರ್ಥ್ ಮಹೇಶ್ ಪಾರ್ಟಿ! ಗರುಡನಿಗೆ ಗಣ್ಯರ ಸಾಥ್…

“ಸಿಪಾಯಿ” ಚಿತ್ರದ ಮೂಲಕ ಬಂದ ಸಿದ್ದಾರ್ಥ್ ಮಹೇಶ್ ಅಭಿನಯದ “ಗರುಡ” ಚಿತ್ರದ ಹಾಡು ಬಿಡುಗಡೆಯಾಗಿದೆ. ಶಾಸಕ ಅರವಿಂದ್ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ , ನಟ ವಿನೋದ್ ಪ್ರಭಾಕರ್, ನಿರ್ದೇಶಕರಾದ ಮಹೇಶ್ ಬಾಬು, ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನೃತ್ಯ ನಿರ್ದೇಶಕನಾಗಿ‌ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶನ ಮಾಡುವ ಆಸೆಯಿತ್ತುm. ಅವಕಾಶ ಮಾಡಿಕೊಟ್ಟ ಸಿದ್ದಾರ್ಥ್ ಮಹೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದವೆಂದರು ನಿರ್ದೇಶಕ ಧನು ಕುಮಾರ್ .

ನಾನು ಹಾಗೂ ಧನು ಮಾಸ್ಟರ್ ಚರ್ಚೆ ಮಾಡಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡೆವು. ನಂತರ ನಿರ್ಮಾಪಕರಿಗಾಗಿ ಕಾಯುತ್ತಿದ್ದಾಗ, ನಮ್ಮ ತಂದೆ ರಾಜಾ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಅವರ ಸಹಾಯ ಮರೆಯಲು ಸಾಧ್ಯವಿಲ್ಲ. ಸಮೀಕ್ಷೆಯ ಪ್ರಕಾರ “ಗರುಡ” ಸಾವಿರಾರು ವರುಷ ಬದಕುವ ಪಕ್ಷಿ. ವಯಸ್ಸಾದ ಮೇಲೂ ತಾನೆ, ಮತ್ತೆ ಪುಟ್ಟಿದೇಳುವ ಪಕ್ಷಿ ಕೂಡ. ಹಾಗಾಗಿ ನಮ್ಮ ಸಿನಿಮಾಗೆ ಈ ಹೆಸರು ಸೂಕ್ತ ಅನಿಸಿತು. ಕಥೆ ಮಾಡುವಾಗಲೇ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಅಭಿನಯಿಸಬೇಕೆಂದು ತೀರ್ಮಾನ‌ಮಾಡಿಕೊಂಡಿದ್ದೆವು. ಕಿಟ್ಟಪ್ಪ ಅಭಿನಯಿಸಲು ಒಪ್ಪಿದರು. ಐಂದ್ರಿತಾ, ಆಶಿಕಾ ರಂಗನಾಥ್, ರಂಗಾಯಣ ರಘು ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸವೂ ಉತ್ತಮವಾಗಿದೆ. ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಸಿದ್ದಾರ್ಥ್ ಮಹೇಶ್.

ಶೀನಗರ ಕಿಟ್ಟಿ, ಆಶಿಕಾ ರಂಗನಾಥ್, ಐಂದ್ರಿತಾ ರೆ, ರಂಗಾಯಣ ರಘು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ಸಿದ್ದಾರ್ಥ್ ಮಹೇಶ್ ಅವರಿಗೆ ಶುಭ ಕೋರಿದರು.

ಜೈ ಆನಂದ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಹಾಡಗಳ ಹಾಗು ಹಾಡಿದವರ ಬಗ್ಗೆ ತಿಳಿಸಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ತಾವು ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

Categories
ಸಿನಿ ಸುದ್ದಿ

ಕ್ರೇಜಿ ಪುತ್ರನ ಕ್ರೇಜ್ ಪ್ರಾರಂಭ: ಮನೋರಂಜನಗೆ ತಂಡ ರೆಡಿ…

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ ” ಪ್ರಾರಂಭ ” ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮೂರು ವರ್ಷಗಳ ಹಿಂದೆ “ಪ್ರಾರಂಭ” ಶುರುವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು.‌ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ.

ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಪ್ರೀತಿ ಕೈ ಕೊಟ್ಡರೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ “ಪ್ರಾರಂಭ” ದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನೋಡಿ ಹರಸಿ ಎನ್ನುತ್ತಾರೆ ನಾಯಕ ಮನುರಂಜನ್ ರವಿಚಂದ್ರನ್.

ನನ್ನ ಪಾತ್ರ ಚೆನ್ನಾಗಿದೆ. ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ನಾಯಕಿ ಕೀರ್ತಿ ಕಲ್ಕೇರಿ ತಿಳಿಸಿದರು.

ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಪ್ರಾರಂಭ” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ವಿತರಕ ವೆಂಕಟ್ ತಿಳಿಸಿದರು.

ಸುಂದರಸ್ಥಳಗಳಲ್ಲಿ ಚಿತ್ರೀಕರಿಸಿರುವಿದಾಗಿ ಛಾಯಾಗ್ರಾಹಕ ಸುರೇಶ್ ಬಾಬು ಹೇಳಿದರು.

ಚಿತ್ರ ಇದೇ ಇಪ್ಪತ್ತರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಜಗದೀಶ್ ಕಲ್ಯಾಡಿ .

ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು “ಪ್ರಾರಂಭ”ದ ಬಗ್ಗೆ ಮಾತನಾಡಿದರು.

error: Content is protected !!