ಕನ್ನಡ ಚಲನಚಿತ್ರೋದ್ಯಮದ ಅತ್ಯುನ್ನತ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ವಾರ್ಷಿಕ ಚುನಾವಣೆ ಇದೇ ಶನಿವಾರ, ಮೇ 28 ರಂದು ನಡೆಯಲಿದೆ.
ಮತದಾನಕ್ಕೆ ಇದೀಗ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಖಾಡದಲ್ಲಿ ಘಟಾನುಘಟಿಗಳಿದ್ದಾರೆ. ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದ ತಂಡ ಎದುರಾಳಿ ಸ್ಪರ್ಧಿಗಳಿಗಿಂತ ಮುಂದಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದ್ದು, ಅದೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾಲ್ಕು ವರ್ಷಗಳ ಬಳಿಕ ಸಾ.ರಾ. ಗೋವಿಂದು ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಪುನಃ ಅಧ್ಯಕ್ಷರಾಗಲು ತಯಾರಿ ನಡೆಸಿದ್ದಾರೆ.
ಈ ಸಲ ಅವರ ನೇತೃತ್ವದಲ್ಲಿ ನಿರ್ಮಾಪಕ ವಲಯದಿಂದ ಕರಿಸುಬ್ಬು (ಉಪಾಧ್ಯಕ್ಷ, ಸ್ಥಾನ), ಕೆ.ಎಂ.ವೀರೇಶ್ ನಿರ್ಮಾಪಕ ವಲಯದಿಂದ (ಗೌರವ ಕಾರ್ಯದರ್ಶಿ), ಎಂ.ಎನ್.ಕುಮಾರ್ ವಿತರಕ ವಲಯದಿಂದ (ಗೌರವ ಕಾರ್ಯದರ್ಶಿ) ಪಿ.ಎನ್.ಜ್ಞಾನೇಶ್ವರ್ ಐತಾಳ್ ವಿತರಕ ವಲಯದಿಂದ (ಉಪಾಧ್ಯಕ್ಷ), ಜೆ.ಪಿ.ಕುಮಾರ್ ಪ್ರದರ್ಶಕರ ವಲಯದಿಂದ (ಉಪಾಧ್ಯಕ್ಷ) ಎಲ್.ಸಿ.ಕುಶಾಲ್ ಪ್ರದರ್ಶಕರ ವಲಯದಿಂದ (ಗೌರವ ಕಾರ್ಯದರ್ಶಿ ಹಾಗು ಜಿ.ಕೆ.ಜಯಸಿಂಹ ಮುಸುರಿ ಗೌರವ ಖಜಾಂಚಿ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಈ ಹಿಂದೆ ಈ ತಂಡ ಅಧಿಕಾರದಲ್ಲಿದ್ದಾಗ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರ ಆಧಾರದ ಮೇಲೆ ಮತ್ತೆ ಸ್ಫರ್ಧೆಗಿಳಿದಿದೆ. ಕೆ.ಎಂ.ವೀರೇಶ್ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿದ ಪರಿ ಎಲ್ಲರಿಗೂ ಗೊತ್ತಿದೆ. ಅವರ ಕೆಲಸ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗಾಗಲೇ ಕೆಎಫ್‌ಸಿಸಿಯಲ್ಲಿ ಇತರ ಹುದ್ದೆಗಳಲ್ಲೂ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ.
ಸಾ.ರಾ.ಗೋವಿಂದು ಮತ್ತು ಎನ್.ಎಂ.ಕುಮಾರ್ ಅವರು 2008ರಲ್ಲಿ ಕೆಎಫ್‌ಸಿಸಿ ಸದಸ್ಯರಿಗೆ ಕಲ್ಯಾಣ ನಿಧಿಯನ್ನು ಪರಿಚಯಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ಈ ನಿಧಿಯು ವೈದ್ಯಕೀಯ ಚಿಕಿತ್ಸೆಗಾಗಿ ಸದಸ್ಯರಿಗೆ ರೂ.3,71,76,000 ವಿತರಿಸಿರುವುದು ಹೆಗ್ಗಳಿಕೆ. ನಿಧನರಾದ ಸದಸ್ಯರ ಕುಟುಂಬಗಳಿಗೆ ಪರಿಹಾರ ನೀಡಿದೆ. ಪ್ರತಿ ಸದಸ್ಯನ ಕಲ್ಯಾಣ ನಿಧಿ ಈಗ 2.5 ಲಕ್ಷ ರೂ. 5 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿಯೂ ಸಾ.ರಾ. ಗೋವಿಂದು ಭರವಸೆ ನೀಡಿದ್ದಾರೆ.
ಇದಲ್ಲದೇ ಚಿತ್ರರಂಗಕ್ಕೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಈ ತಂಡ ಕಾರಣರಾಗಿದೆ.
ಮತ್ತೊಂದೆಡೆ, ಗೋವಿಂದು ಅವರ ಎದುರಾಕಲಿ ತಂಡ ಅಷ್ಟೊಂದು ಬಲವಿಲ್ಲ ಎಂಬ ನಂಬಿಕೆ ಈ ತಂಡಕ್ಕಿದೆ.
ಕೆಎಫ್‌ಸಿಸಿಯಲ್ಲಿ 1,290 ನಿರ್ಮಾಪಕರು, 412 ವಿತರಕರು ಮತ್ತು 187 ಪ್ರದರ್ಶಕರು ಸೇರಿದಂತೆ ಒಟ್ಟು 1,800 ಮತದಾರರಿದ್ದಾರೆ. ಶನಿವಾರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ವಿಜೇತರನ್ನು ಘೋಷಿಸಲಾಗುತ್ತದೆ.