ಚಿತ್ರ ವಿಮರ್ಶೆ
ಚಿತ್ರ: ದಾರಿ ಯಾವುದಯ್ಯ ವೈಕುಂಠಕೆ
ನಿರ್ದೇಶನ: ಸಿದ್ದು ಪೂರ್ಣಚಂದ್ರ
ನಿರ್ಮಾಣ: ಶರಣಪ್ಪ ಎಂ ಕೊಟಗಿ
ತಾರಾಗಣ: ವರ್ಧನ್ ತೀರ್ಥಹಳ್ಳಿ, ಪೂಜಾ, ರಾಜ್ ಬಲವಾಡಿ, ಶೀಬಾ, ಸ್ಪಂದನ ಪ್ರಸಾದ್, ಸುಧಾ, ಪ್ರಣಯ ಮೂರ್ತಿ ಇತರರು.
‘ದೇಶದಲ್ಲಿ ಕಾಂಪಿಟೇಷನ್ ಇಲ್ಲದ ಜಾಗ ಅಂದ್ರೆ ಇದೆ…’
ತನ್ನ ಇಡೀ ಬದುಕನ್ನೇ ಆ ಸ್ಮಶಾನದಲ್ಲಿ ಕಳೆದು, ಹೆಣ ಸುಡುವ ಮತ್ತು ಗುಂಡಿ ತೋಡಿ ಮಣ್ಣು ಮಾಡುವ ಆ ಬಿಕ್ರ, ಈ ಡೈಲಾಗ್ ಹೇಳುವ ಹೊತ್ತಿಗೆ, ಆ ಕಥೆಯಲ್ಲಿ ಒಂದಷ್ಟು ಮೌಲ್ಯ ಸಂದೇಶ ಹರಡಿರುತ್ತೆ. ಸ್ಮಶಾನದಲ್ಲೇ ಇಡೀ ಸಿನಿಮಾ ಕಥೆ ಸಾಗುವುದರಿಂದ ಆ ಸ್ಮಶಾನ ಕೂಡ ಚಿತ್ರದ ಹೈಲೆಟ್. ಮನಸ್ಸಿಗೆ ಇಷ್ಟವಾಗುವ, ಆಗಾಗ ಎದೆ ಭಾರ ಎನಿಸುವ, ಅಲ್ಲಲ್ಲಿ ಮೌನವಾಗಿಸುವ, ಒಂದಷ್ಟು ಕಣ್ ಒದ್ದೆಯಾಗಿಸುವ ಎಮೋಷನಲ್ ಕಂಟೆಂಟ್ ಇಡೀ ಚಿತ್ರವನ್ನು ಮತ್ತಷ್ಟು ಅಪ್ಪಿ ಒಪ್ಪುವಂತೆ ಮಾಡಿದೆ.
ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಬದುಕಿನ ಪಾಠ ಕಲಿಸುವ ಚಿತ್ರಣ. ಇಲ್ಲಿ ಪ್ರೀತಿ ಇದೆ, ಆಸೆ ಇದೆ, ದುರಾಸೆ ಇದೆ, ಮೋಸವಿದೆ, ದರೋಡೆ, ಕೊಲೆ,ಸುಲಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಭಾವನೆಗಳ ಸಮ್ಮಿಲನವಿದೆ. ಜಾತ್ಯಾತೀತ ಭಾವನೆಯೂ ತುಂಬಿದೆ. ಒಟ್ಟಾರೆ ಪರಿಪೂರ್ಣ ಪರಿವರ್ತನೆಯ ಕಥೆಯನ್ನು ಅಷ್ಟೇ ಮನಮುಟ್ಟುವಂತೆ ನಿರೂಪಿಸಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಕಥೆ ಸಿಂಪಲ್ ಆಗಿದ್ದರೂ, ಅದರ ಭಾವ ಸಾರ ಕಾಡುವಂತಿದೆ. ಬದುಕಿನ ಎಲ್ಲಾ ಮಜಲುಗಳ ಮೆಲುಕು ಹಾಕುವಂತಹ ಸನ್ನಿವೇಶಗಳೂ ಇಲ್ಲಿವೆ. ಹಾಗಾಗಿ ನೋಡುಗರಿಗೆ ವೈಕುಂಟ ದರ್ಶನ ಖುಷಿ ಕೊಡಿಸುತ್ತೆ. ನೋಡ ನೋಡುತ್ತಲೇ ನೋಡುಗರ ಮನದಲ್ಲಿ ಒಂದಷ್ಟು ವಿಷಾದ ಮೂಡಿಸುತ್ತೆ. ಮಾನವ ಸಂಬಂಧಗಳ ಮೌಲ್ಯ ಹಲವು ವಿಷಯಗಳಿಗೆ ಮುಖ್ಯವೆನಿಸುತ್ತೆ. ಇನ್ನು ಆ ಸ್ಮಶಾನ ಕಾಯುವ ಬಿಕ್ರನಿಗೆ ತನ್ನ ಕಾಯಕ ಕೈಲಾಸ ಕಂಡಷ್ಟೇ ಖುಷಿ. ಹೆತ್ತ ಮಗನನ್ನು ಕಳಕೊಂಡ ಬಿಕ್ರನ ಪತ್ನಿಯ ಮೂಕ ರೋಧನೆ, ಅವಳ ಮಗಳು ಪಲ್ಲುಳ ನಿಷ್ಕಲ್ಮಶ ಪ್ರೀತಿ, ದರೋಡೆಕೋರ ಸುಧಾಕರನ ಪಾಪ ಪ್ರಜ್ಞೆ ಇವೆಲ್ಲವೂ ನೈಜತೆಗೆ ಸಾಕ್ಷಿಯಂತಿವೆ.
ಆ ದಾರಿಯ ಕಥೆ ಏನು?
ಆ ಸ್ಮಶಾನದಲ್ಲಿ ಎಲ್ಲವೂ ಎದೆಭಾರ ಎನಿಸುವ ಕ್ಷಣಗಳು. ಬಿಕೋ ಎನ್ನುವ, ಭಯವೆನಿಸೋ ಸ್ಮಶಾನದಲ್ಲಿ ಬಿಕ್ರನ ಕುಟುಂಬದ ವಾಸ. ಅಲ್ಲಿಗೆ ಆಕಸ್ಮಿಕವಾಗಿ ಎಂಟ್ರಿ ಕೊಡೋ ಒಬ್ಬ ಕಳ್ಳ. ಅಲ್ಲೊಂದಷ್ಟು ಮನಪರಿವರ್ತನೆಯಾಗುವ ಅಂಶಗಳು ಕಾಣಸಿಗುತ್ತವೆ. ಮೃಗಿಯಂತಹ ಒಬ್ಬ ಕೊಲೆಗಾರ, ಕಳ್ಳ ಹೇಗೆ ಒಬ್ಬ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಅನ್ನೋದೆ ಕಥೆ. ಈ ಮಧ್ಯೆ ಆ ಬಿಕ್ರನ ಮಗಳು ಪಲ್ಲು, ಮುಸ್ಲಿಂ ಯುವಕನೊಬ್ಬನ ಪ್ರೀತಿಗೆ ಮನಸೋತು ತನ್ನ ದೇಹವನ್ನೇ ಅರ್ಪಿಸಿ ಅವನ ಆಗಮನಕ್ಕಾಗಿ ಕಾಯುತ್ತ ದಿನ ಸವೆಸೋ ಮುಗ್ಧ ಹುಡುಗಿಯ ಮೂಕ ರೋಧನ ಅವಳಿಗಷ್ಟೇ ಗೊತ್ತು.
ಇಲ್ಲಿ ಒಬ್ಬ ಕಳ್ಳನಿಗೂ ಕರುಣೆ ತೋರಿ ಅವನನ್ನು ಆರೈಕೆ ಮಾಡುವ ಬಿಕ್ರನ ಮಾನವೀಯ ಕಳಕಳಿ ಇಲ್ಲಿ ಮನಕಲಕುತ್ತದೆ. ಆಗಾಗ ಆ ದೃಶ್ಯ ಭಾವುಕತೆಗೂ ದೂಡುತ್ತದೆ.
ಇಲ್ಲಿ ಕಳ್ಳನಾಗಿ ಬರುವ ಆ ಸುಧಾಕರನ ಮನಪರಿವರ್ತನೆಯಾಗುವ ಪರಿಯೇ ವಿಶೇಷ. ಅಂತಹ ಹಲವು ವಿಶೇಷತೆಗಳು ಇಲ್ಲಿವೆ.
ಕಲೆಯೇ ಜೀವಾಳ
ಇಲ್ಲಿ ಹೈಲೆಟ್ ಅಂದರೆ ಸ್ಮಶಾನದಲ್ಲಿ ಬಿಕ್ರನಾಗಿ ಕಾಣಿಸಿಕೊಂಡಿರುವ ರಾಜ್ ಬಲವಾಡಿ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಡೈಲಾಗ್ ಡಿಲವರಿ, ಬಾಡಿ ಲಾಂಗ್ವೇಜ್ ಆಕರ್ಷಣೆ. ವರ್ಧನ್ ಕೂಡ ಇಲ್ಲಿ ಕಳ್ಳನಾಗಿ ಇಷ್ಟವಾಗುತ್ತಾರೆ. ಪೂಜಾ ಇಲ್ಲಿ ತಿಥಿಯ ಪಾತ್ರ ನೆನಪಿಸುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪಾತ್ರಗಳೂ ಗಮನಸೆಳೆಯುತ್ತವೆ.
ಚಿತ್ರದಲ್ಲಿ ಸಂಗೀತ ವಿಶೇಷ ಪಾತ್ರ ವಹಿಸಿದೆ. ಲೋಕಿ ಅವರ ಎಫರ್ಟ್ ಎದ್ದು ಕಾಣುತ್ತೆ. ಉಳಿದಂತೆ ನಿತಿನ್ ಅಪ್ಪಿ ಕ್ಯಾಮೆರಾ ಕೈಚಳಕ ಕೂಡ ಇಲ್ಲಿ ಗಮನಸೆಳೆಯುತ್ತೆ.
ಕೊನೆ ಮಾತು: ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ.. ಅನ್ನುವ ಮಾತಂತೆ ಇಲ್ಲಿ ಯಾವುದೂ ಶಾಶ್ವತವಲ್ಲ ಅನ್ನೋ ಸಂದೇಶವಿದೆ. ಇಷ್ಟು ಹೇಳಿದ ಮೇಲೂ ಸಿನಿಮಾ ನೋಡದಿದ್ದರೆ ಹೇಗೆ? ಒಂದೊಮ್ಮೆ ವೈಕುಂಠದ ದಾರಿ ನೋಡಿ….