Categories
ಸಿನಿ ಸುದ್ದಿ

ಛೂ ಮಂತರ್! ಇದು ಶರಣ ಚಿತ್ರ!! ಮೋಷನ್ ಪೋಸ್ಟರ್ ರಿಲೀಸ್…

ತಮ್ಮ ಸಹಜ ನಟನೆಯ ಮೂಲಕ ಮನೆ ಮಾತಾಗಿರುವ ಶರಣ್ ನಾಯಕರಾಗಿ ನಟಿಸಿರುವ ” ಛೂ ಮಂತರ್” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಕುತೂಹಲ ಮೂಡಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾ. ನಾನು ಹಾಗೂ ಮಾನಸ ತರುಣ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ನವನೀತ್ ಹಾಗೂ ನಾನು, ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರದಿಂದ ಆ ಚಿತ್ರ ಸ್ವಲ್ಪ ಮುಂದೆ ಹೋಯಿತು. ಅಷ್ಟರಲ್ಲಿ ನವನೀತ್ ಹಾರರ್ ಜಾನರ್ ನ ಈ ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದರು. ಶರಣ್ ಹಾಗೂ ತರುಣ್ ಸುಧೀರ್ ಅವರ ಬಳಿ ಕಥೆ ಹೇಳಿದ್ದರು. ಇಬ್ಬರಿಗೂ ಕಥೆ ಹಿಡಿಸಿತು. ಚಿತ್ರ ಆರಂಭವಾಯಿತು. ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶರಣ್ ಅವರೊಟ್ಟಿಗೆ ಚಿಕ್ಕಣ್ಣ, ಅದಿತಿ, ಪ್ರಭುದೇವ, ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು‌.

ಶರಣ್ ಸರ್ ಜೊತೆ ಕೆಲಸ ಮಾಡಿದ್ದು ಖುಷಿಯಿದೆ‌. “ಛೂ ಮಂತರ್” ಎಂದರೆ ಫ್ಯಾನ್ಸಿ ವರ್ಡ್. ಈ ಪದ ತುಂಬಾ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿರುತ್ತದೆ. ಎಲ್ಲಾ ಕಥೆಗಳಿಗೂ ಮೂಲ ನಾಯಕ ಆಗಿರುತ್ತಾರೆ. ನನ್ನ ಕಥೆ ಕೇಳಿ ಶರಣ್ ಹಾಗೂ ತರುಣ್ ಸುಧೀರ್ ಇಷ್ಟಪಟ್ಟರು. ಕಂಪ್ಲೀಟ್ ಹಾರರ್ ಸಿನಿಮಾದಲ್ಲಿ ಶರಣ್ ಅವರು ಅಭಿನಯಿಸಿರಲಿಲ್ಲ. ಇದೇ ಮೊದಲು ಎನ್ನಬಹುದು. ‌ನಮ್ಮ ಚಿತ್ರದಲ್ಲಿ ಹಾರಾರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ ಎಂದರು “ಕರ್ವ” ಖ್ಯಾತಿಯ ನಿರ್ದೇಶಕ ನವನೀತ್.

ನಾನು ಚಿಕ್ಕವಯಸ್ಸಿನಿಂದಲೂ ಹಾರಾರ್ ಚಿತ್ರಗಳ ಅಭಿಮಾನಿ. ಸಾಕಷ್ಟು ಹಾರಾರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಮಿತ್ರ ತರುಣ್ ಸುಧೀರ್ ಈ ಚಿತ್ರದ ಕಥೆ ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ‌ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ‌. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಅವರ ಛಾಯಾಗ್ರಹಣ ಎನ್ನುತ್ತಾರೆ ಶರಣ್.

ತರುಣ್ ಶಿವಪ್ಪ ನಿರ್ಮಾಣದ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು ಆಗಿರಲಿಲ್ಲ. ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರ ಚೆನ್ನಾಗಿದೆ ಎಂದರು ಮೇಘನಾ ಗಾಂವ್ಕರ್.

ನನಗೂ ಹಾರಾರ್ ಚಿತ್ರಗಳೆಂದರೆ ಪ್ರಾಣ. ನವನೀತ್ ಅವರ “ಕರ್ವ” ಚಿತ್ರವನ್ನು ಸಾಕಷ್ಟು ಸಲ ನೋಡಿದ್ದೇನೆ. ಶರಣ್ ಸರ್ ಜೊತೆ ನಟಿಸಿರುವ ಸಂತಸವಿದೆ‌. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ಅದಿತಿ ಪ್ರಭುದೇವ.

ಫಾರಿನ್ ರಿಟರ್ನ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಪ್ರಭು ಮುಂಡ್ಕರ್, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಧರ್ಮ ಹೇಳಿದರು. ರಜನಿ ಭಾರದ್ವಾಜ್ ಸಹ “ಛೂ ಮಂತರ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಷಡಕ್ಷರಿ ಸನ್ ಆಫ್ ಪಂಚಾಕ್ಷರಿ ಟೈಟಲ್ ಅನಾವರಣ: ಶಿವರಾಜ್ ಸಕ್ರೆ ಸಿನಿಮಾಗೆ ಡಾರ್ಲಿಂಗ್ ಸಾಥ್…

‘ಉಡುಂಬಾ’ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಶಿವರಾಜ್ ಸಕ್ರೆ ಹೊಸದೊಂದು ಸಬ್ಜೆಕ್ಟ್ ಹೊತ್ತು ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರದ ಟೈಟಲ್ ಹೊಸ ವರ್ಷದಂದು ರಿವೀಲ್ ಆಗಿದೆ. ನಟ ಡಾರ್ಲಿಂಗ್ ಕೃಷ್ಣ ಟೈಟಲ್ ರಿವೀಲ್ ಮಾಡುವ ಮೂಲಕ ಶಿವರಾಜ್ ಸಕ್ರೆ ಸೆಕೆಂಡ್ ವೆಂಚರ್ ಗೆ ಶುಭ ಹಾರೈಸಿದ್ದಾರೆ. ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಚಿತ್ರ ಥ್ರಿಲ್ಲರ್ ಜಾನರ್ ಒಳಗೊಂಡಿದ್ದು, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಉಡುಂಬಾ ಸಿನಿಮಾ ನಂತರ ಥ್ರಿಲ್ಲರ್ ಜಾನರ್ ಕಥೆ ಹೆಣೆದು ಒಂದಿಷ್ಟು ಹೊಸತನದೊಂದಿಗೆ ನಿರ್ದೇಶಕ ಶಿವರಾಜ್ ಸಕ್ರೆ ಕಂ ಬ್ಯಾಕ್ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿಭಾಯಿಸಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಜನವರಿ 28ಕ್ಕೆ ಸಿನಿಮಾ ಸೆಟ್ಟೇರಲಿದೆ.

ಚಿತ್ರದಲ್ಲಿ ಕಿಶೋರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ‘ಐ1’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಕಿಶೋರ್ ಗಿದು ಎರಡನೇ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ರಂಗಾಯಣ ರಘು, ಸುಜಯ್ ಶಾಸ್ತ್ರಿ, ತೆಲುಗು ಹಾಗೂ ತಮಿಳು ಸಿನಿಮಾ ಖ್ಯಾತಿಯ ಮಧುಸೂದನ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಝೀ ವಾಹಿನಿಯ ಸರಿಗಮಪ ಮೆಂಟರ್ ಸುಚೇತನ್ ರಂಗಸ್ವಾಮಿ ಸಂಗೀತ ನಿರ್ದೇಶನ, ಕಬ್ಜ, ಮಾರ್ಟಿನ್, ನಟ ಸಾರ್ವಭೌಮ ಖ್ಯಾತಿಯ ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಭರ್ಜರಿ ಚೇತನ್, ಜೋಗಿ ಪ್ರೇಮ್, ಅಲೆಮಾರಿ ಸಂತು ಹಾಗೂ ಹೊಸ ಪ್ರತಿಭೆ ಸಂತೋಷ್ ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಎಸ್. ಪಿ ಪಿಕ್ಚರ್ಸ್ ಬ್ಯಾನರ್ ನಡಿ ಶೈಲಜಾ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ‘ಐ 1’, ‘ಮೃತ್ಯುಂಜಯ’ ಸಿನಿಮಾ ನಂತರ ಎಸ್ ಪಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಐದನೇ ಸಿನಿಮಾ ಇದಾಗಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಬಿಗ್ ಅನೌನ್ಸ್! ಐದು ವರ್ಷದಲ್ಲಿ 3 ಸಾವಿರ ಕೋಟಿ ಹೂಡಿಕೆ: ವಿಜಯ್ ಕಿರಗಂದೂರು ಮಹತ್ವದ ಘೋಷಣೆ…

ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ಘೋಷಿಸಿದ್ದಾರೆ..
ಈ ಬಗ್ಗೆ ಅವರು ತಮ್ಮ ಟ್ವೀಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.


ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ವಿಜಯ್ ಕಿರಗಂದೂರು, ಕಳೆದ ವರ್ಷ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಾಡಿನ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನೂತನ ವರ್ಷದಲ್ಲಿ ನವ ಸಂಕಲ್ಪದೊಂದಿಗೆ ಬೃಹತ್ ಯೋಜನೆಗಳನ್ನು ಘೋಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.


ಚಿತ್ರ ಪ್ರೇಮಿಗಳ ಪ್ರೀತಿ ಮತ್ತು ಪ್ರೋತ್ಸಾಹದ ಫಲವಾಗಿ ಹೊಂಬಾಳೆ ಫಿಲಮ್ಸ್ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಯಶಸ್ವೀ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.

ಅದರ ಭಾಗವಾಗಿ ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ಹೂಡಲು ಯೋಜನೆ ಸಿದ್ದವಾಗಿದೆ ಎಂದು ಘೋಷಿಸಿದ್ದಾರೆ.


ಹೊಂಬಾಳೆ ಫಿಲಮ್ಸ್ ಸಂಸ್ಥೆ ಇಂದು ದೇಶದ ಪ್ರತಿಷ್ಠಿತ ಚಿತ್ರ ನಿರ್ಮಾಣ ಎಂಬ ಹೆಗ್ಗಳಿಕೆ ಪಡೆದಿರುವುದು ಚಿತ್ರ ಪ್ರೇಮಿಗಳ ಬೆಂಬಲದಿಂದ ಎಂದು ವಿಜಯ್ ಸ್ಮರಿಸಿದ್ದಾರೆ.
ನಾಡಿನ ಇತಿಹಾಸ, ಪರಂಪರೆ, ಕಲೆ- ಸಂಸ್ಕೃತಿ , ಮತ್ತು ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸುವ ಇನ್ನಷ್ಟು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಿ ನಾಡಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ಇಂದು ಮನರಂಜನಾ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು ನಮ್ಮ ದೇಶದಲ್ಲಿ ವೈವಿದ್ಯಮಯ ಗುಣಮಟ್ಟದ ಚಿತ್ರ ನಿರ್ಮಾಣಕ್ಕೆ ವಿಫುಲ ಅವಕಾಶವಿದೆ. ದೇಶದ ಯುವ ಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಹೆಚ್ಚು ಪ್ರೋತ್ಸಾಹಿಸುವ ಸಲುವಾಗಿ ಮನರಂಜನಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.


ನಾಡಿನ ಜನತೆ ಹೊಂಬಾಳೆ ಫಿಲಮ್ಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದು , ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.


ಹೊಸವರ್ಷ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸುತ್ತಾ , ನಾಡಿನ ಜನತೆಯ ಪ್ರೀತಿ-ವಿಶ್ವಾಸ, ಬೆಂಬಲ ಪ್ರೋತ್ಸಾಹ ಹೀಗೆ ಇರಲಿ ಎಂದು ವಿಜಯ್ ಕಿರಗಂದೂರು ಹಾರೈಸಿದ್ದಾರೆ..

Categories
ಸಿನಿ ಸುದ್ದಿ

ಶ್ರೇಯಸ್ ಚಿಂಗ ಈಗ ಕಿಂಗ್! ಕಿಂಗ್ ಅಂಡ್ ಕ್ವೀನ್ ಸಿನಿಮಾಗೆ ಇತಿ ಆಚಾರ್ಯ ನಾಯಕಿ…

ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

ಈ ಹಿಂದೆ ಡೇವಿಡ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಚಿಂಗ ನಾಯಕನಾಗಿ ಹಾಗೂ ಇತಿ ಆಚಾರ್ಯ ನಾಯಕಿಯಾಗಿ ಅಭಿನಯಿಸುತ್ತಿರುವ “ಕಿಂಗ್ & ಕ್ವೀನ್” ಚಿತ್ರದ ಪೋಸ್ಟರ್ದೆ‌‌ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹೊಸ ವರ್ಷದ ಆರಂಭದ ದಿನ ಈ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅರ್ಜುನ್ ಸುಬ್ರಹ್ಮಣ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.

ಶ್ರೇಯಸ್ ಚಿಂಗ ಅಭಿನಯದ “ಡೇವಿಡ್” ಚಿತ್ರವನ್ನು ನಿರ್ಮಿಸಿರುವ ಪ್ರಸಾದ್ ರುದ್ರಮುನಿ ನಿರಗಂಟಿ, ಪ್ರದೀಪ್ ಅಬ್ಬಯ್ಯ ಹಾಗೂ ವರುಣ್ ರಾಘವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದೆ. ಅದ್ಭುತ ಗಾಯನದ ಮೂಲಕ ಜನಮನಸೂರೆಗೊಂಡಿರುವ ALL OK ಸಂಗೀತ ನೀಡಲಿದ್ದಾರೆ.

ಚಿತ್ರದಲ್ಲಿ ಮೈನವಿರೇಳಿಸುವ ಆರು ಸಾಹಸ ಸನ್ನಿವೇಶಗಳಿದೆ‌. ಚೇತನ್ ಡಿಸೋಜ, ಚಾಮರಾಜ್, ರವಿ ಜಮಖಂಡಿ, ರೋಹಿತ್ ಅರುಣ್ ಸಾಹಸ ಸಂಯೋಜಿಸಲಿದ್ದಾರೆ.

ಶ್ರೇಯಸ್ ಚಿಂಗ, ಇತಿ ಆಚಾರ್ಯ, ಶೋಭ್ ರಾಜ್, ಯತಿರಾಜ್ ಜಗ್ಗೇಶ್, ಲಲಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಫೆಬ್ರವರಿ ಮೊದಲವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಹೊಸ ಅವತಾರ ತಾಳಿದ ವಿನಯ್ ರಾಜಕುಮಾರ್: ಪೆಪೆ ಲುಕ್ ಕಂಡು ದೊಡ್ಮನೆ ಫ್ಯಾನ್ಸ್ ಫಿದಾ…

ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೆಪೆ’. ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರದ ರಗಡ್ ಟೀಸರ್ ಝಲಕ್ ಸಿನಿ ರಸಿಕರಲ್ಲಿ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದೀಗ ಚಿತ್ರತಂಡ ಹೊಸ ವರ್ಷಕ್ಕೆ ಮಾಸ್ ಫೀಲ್ ಇರೋ ರಗಡ್ ಪೋಸ್ಟರ್ ಬಿಡುಗಡೆ ಮಾಡಿದೆ. ವಿನಯ್ ರಾಜ್ ಕುಮಾರ್ ನಯಾ ಅವತಾರ, ಮಾಸ್ ಲುಕ್ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ಪೆಪೆ’ ಚಿತ್ರತಂಡ ನಿರತವಾಗಿದೆ. ಟೈಟಲ್ ಮೂಲಕವೇ ಕುತೂಹಲವನ್ನು ಹುಟ್ಟುಹಾಕಿರುವ ಈ ಚಿತ್ರ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಗ್ಯಾಂಗ್ ಸ್ಟಾರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಒಂದೇ ಜಾನರ್ ಸಿನಿಮಾಗೆ ಒಗ್ಗಿ ಕೊಳ್ಳದೇ, ಪ್ರತಿ ಬಾರಿ ವಿಭಿನ್ನ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಕಂಪ್ಲೀಟ್ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಗ್ಯಾಂಗ್ ಲೀಡರ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದು, ಟೀಸರ್ ಹಾಗೂ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿವೆ. ದೊಡ್ಮನೆ ಅಭಿಮಾನಿ ಬಳಗ ವಿನಯ್ ಲುಕ್ ಕಂಡು ಥ್ರಿಲ್ ಆಗಿದ್ದು ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.

ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಾಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಮತ್ತು ಶ್ರೀರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಹೊಸ ಲುಕ್: ಬ್ರಹ್ಮ ಕಮಲ ಫಸ್ಟ್ ಲುಕ್ ರಿಲೀಸ್-ಇದು ಅದ್ವಿತೀಯ ಚಿತ್ರ…

ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರ ನಿರ್ದೇಶಕ “ಸಿದ್ದು ಪೂರ್ಣಚಂದ್ರ” ಅವರು ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ “ಬ್ರಹ್ಮಕಮಲ”. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.

ಹೊಸ ವರ್ಷಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.

ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ.

ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿಯಿಂದ “ಯು” ಸರ್ಟಿಫಿಕೇಟ್ ಪಡೆದುಕೊಂಡಿದೆ.

” ಬ್ರಹ್ಮಕಮಲ” ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಧ್ವಿತಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಚಿತ್ರದಲ್ಲಿದ್ದಾರೆ.

ಛಾಯಾಗ್ರಹಣ ಲೋಕೇಂದ್ರ ಸೂರ್ಯನಾರಾಯಣ, ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು ಮತ್ತು ಪ್ರಮಿಳಾ ಸುಬ್ರಹ್ಮಣ್ಯಂ. ನಿರ್ಮಾಣ ನಿರ್ವಹಣೆ ನಾಗರತ್ನ ಕೆ ಹೆಚ್, ವಸ್ತ್ರ ವಿನ್ಯಾಸ ಋತು ಚೈತ್ರ, ಕಲೆ ಬಸವರಾಜ್ ಆಚಾರ್ ಕೆ ಆರ್.

Categories
ಸಿನಿ ಸುದ್ದಿ

ಹೊಂದಿಸಿ ಬರೆದ ಭಟ್ರು! ‘ನೀ ಇರದ ನಾಳೆ’ ಲಿರಿಕಲ್ ವಿಡಿಯೋ ರಿಲೀಸ್…

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆ ಸನಿಹದಲ್ಲಿರುವ ಚಿತ್ರತಂಡ, ಸಿನಿಮಾ ಪ್ರಚಾರ ಕಾರ್ಯವನ್ನು ಬಿಡುವಿಲ್ಲದೇ ನಡೆಸುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್, ಹಾಡುಗಳು ಸಿನಿ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ‘ನೀ ಇರದ ನಾಳೆ’ ಹಾಡಿನ ಲಿರಿಕಲ್ ವೀಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ನಿರ್ದೇಶಕ ಯೋಗರಾಜ್ ಭಟ್ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಪ್ರತಿ ಹಾಡುಗಳು ಸಿನಿಮಾದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಪ್ರೇಕ್ಷಕರ ಮನಗೆದ್ದಿದ್ದು, ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ಹಾಡು ‘ನೀ ಇರದ ನಾಳೆ ಬೇಕಿಲ್ಲ ನನಗೆ’ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಸಂಬಂಧಗಳಲ್ಲಿರುವ ಗೊಂದಲವನ್ನು ವ್ಯಕ್ತಪಡಿಸುವ ಹಾಡು ಇದಾಗಿದೆ. ಪ್ರವೀಣ್ ತೇಜ್, ಭಾವನ ರಾವ್ ಈ ಹಾಡಿನ ಭಾಗವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಹಾಡು ಇದಾಗಿದೆ. ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದು ಜೋ ಕೋಸ್ಟ ಸಂಗೀತ ನಿರ್ದೇಶನ ಹಾಡಿಗಿದೆ. ಸಂಡೆ ಸಿನಿಮಾಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯ ಭೂಮಿಕೆ ಚಿತ್ರದಲ್ಲಿದೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ಬಹು ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಒನ್ ಲೈನ್ ಕಹಾನಿ ಸುತ್ತ ಹೆಣೆಯಲಾದ ಚಿತ್ರವೇ ‘ಹೊಂದಿಸಿ ಬರೆಯಿರಿ’. ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣ ಹಾಗೂ ಭಾವನಾತ್ಮಕ ಪಯಣ ಇದೆ.

ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದು. ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಕೆಂಡದ ಸೆರಗು ಕನ್ನಡದ ಹೊಸ ಬೆರಗು! ವಿಭಿನ್ನ ಸಿನಿಮಾಗೆ ವರ್ಧನ್ ವಿಲನ್…

ಕಲರ್ ಫುಲ್ ಕನಸು ಕಟ್ಟಿಕೊಂಡು ಈ ಬಣ್ಣದ ಲೋಕಕ್ಕೆ ಬರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಾಗೆಯೇ ಪ್ರತಿ ದಿನ ಹೊಸ ಬಗೆಯ ಸಿನಿಮಾಗಳೂ ಸಾಕಷ್ಠು ಸೆಟ್ಟೇರುತ್ತಿವೆ. ಆ ಸಾಲಿಗೆ ‘ಕೆಂಡದ ಸೆರಗು’ ಎಂಬ ಸಿನಿಮಾ ಕೂಡ ಸೇರಿದ್ದು, ಚಿತ್ರೀಕರಣ ಕೂಡ ಮುಗಿದಿದೆ. ಇದು ಮಹಿಳಾ ಪ್ರಧಾನ ಚಿತ್ರ. ರಾಕಿ ಸೋಮ್ಲಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.

ಹೌದು, ‘ಕೆಂಡದ ಸೆರಗು’ ಈ ಶೀರ್ಷಿಕೆಯೇ ವಿಶೇಷವಾಗಿದೆ ಅಂದಮೇಲೆ, ಸಿನಿಮಾ ಕಥಾಹಂದರ ಕೂಡ ವಿಶೇಷವಾಗಿರಲೇಬೇಕು. ಇದು ಕಾದಂಬರಿ ಆಧಾರಿತ ಸಿನಿಮಾ. ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಈಗ ಚಿತ್ರವಾಗುತ್ತಿದೆ. ವಿಶೇಷ ಅಂದರೆ ರಾಕಿ ಸೋಮ್ಲಿ ಅವರೇ ತಮ್ಮ ಕಾದಂಬರಿ ಇಟ್ಟುಕೊಂಡು ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ರಾಕಿ ಸೋಮ್ಲಿ ಅವರ ಈ ಕಾದಂಬರಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಶಸ್ತಿ ಪಡೆದಿರುವುದು ಮತ್ತೊಂದು ಸ್ಪೆಷಲ್.

2020 ರಲ್ಲಿ ಯುವ ಬರಹಗಾರ ಚೊಚ್ಚಲ ಕೃತಿ ಅಡಿಯಲ್ಲಿ ಈ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಅದೇ ಕಾದಂಬರಿಯನ್ನೆ ರಾಕಿ ಸೋಮ್ಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾದರೂ, ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಇದೆ. ಗೀತ ಸಾಹಿತಿಯಾಗಿ, ಸಂಭಾಷಣೆಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಮೊದಲ ಕನಸು ‘ಕೆಂಡದ ಸೆರಗು’ ಶೂಟಿಂಗ್ ಕೂಡ ಮುಗಿದಿದೆ.

ಏನು ಕಥೆ?

ಕೆಂಡದ ಸೆರಗು’ ಈ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣಿನ ಶೋಷಣೆ, ಬವಣೆ , ಮೋಸ, ಇತ್ಯಾದಿ ವಿಷಯಗಳು ಸಿನಿಮಾದ ಹೈಲೆಟ್. ಸಿನಿಮಾ ಆಕರ್ಷಣೆಯೇ ಹೆಣ್ಣಿನ ಕಥೆ. ಅವಳ ಅಸಹಾಯಕತೆ, ಹೋರಾಟ ಇಲ್ಲಿ ಹೈಲೆಟ್. ನೊಂದ ಹೆಣ್ಣನ್ನು ದೂಷಿಸುವ ಸಮಾಜ, ಕೆಟ್ಟ ವ್ಯವಸ್ಥೆ ಮತ್ತಿತರ ವಿಷಯಗಳಿವೆ.

ವರ್ಧನ್ ಎಂಬ ಖಡಕ್ ಖಳ ನಟ…

ಬಿಗ್ ಬಾಸ್ ಖ್ಯಾತಿಯ ಭೂಮಿಶೆಟ್ಟಿ ‘ಕೆಂಡದ ಸೆರಗು’ ಸಿನಿಮಾದ ಪ್ರಮುಖ ಆಕರ್ಷಣೆ. ಮಹಿಳಾ ಪ್ರಧಾನ‌ ಸಿನಿಮಾ ಅಂದಮೇಲೆ, ವಿಲನ್ ಇರದಿದ್ದರೆ ಹೇಗೆ? ಇಲ್ಲೂ ಖಡಕ್ ವಿಲನ್ ಇದ್ದಾರೆ. ಒಬ್ಬ ಕೆಟ್ಟ ಪೊಲೀಸ್ ಅಧಿಕಾರಿಯಾಗಿ ನಟ ವರ್ಧನ್ ತೀರ್ಥಹಳ್ಳಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಲ್ಲಿ ದುಷ್ಟ ಅಧಿಕಾರಿ ಆಗಿರುವುದರಿಂದ ದಾಡಿ ಬಿಟ್ಟು ರಗಡ್ ಅಧಿಕಾರಿಯಾಗಿ ಕಾಣಲಿದ್ದಾರೆ.

ಈಗಾಗಲೇ ವರ್ಧನ್ ಕನ್ನಡ ಚಿತ್ರರಂಗದಲ್ಲಿ ಹಲವು ಬಗೆಯ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ತಮ್ಮ ವಿಶಿಷ್ಠ ಮ್ಯಾನರಿಸಂ ಮೂಲಕವೇ ನಿರ್ದೇಶಕರ ನಟರಾಗಿ, ಎಲ್ಲಾ ಬಗೆಯ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ. ‘ಕೆಂಡದ ಸೆರಗು’ ಸಿನಿಮಾದ ಪಾತ್ರ ವಿಭಿನ್ನವಾಗಿದ್ದು, ಒಳ್ಳೆಯ ತಂಡದಲ್ಲಿ ಹೊಸ ಬಗೆಯ ಕಥೆ ಇರುವ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ವರ್ಧನ್.

ಕೆಂಡದ ಸೆರಗಲ್ಲಿ ಇವರೆಲ್ಲಾ ಇದಾರೆ…

ಕೆಂಡದ ಸೆರಗು ಮಹಿಳಾ‌ ಪ್ರಧಾನ ಕಥೆಯಾದರೂ ಚಿತ್ರದಲ್ಲಿ ವರ್ಧನ್, ಯಶ್ ಶೆಟ್ಟಿ ಕೂಡ ಅಬ್ಬರಿಸಲಿದ್ದಾರೆ. ಉಳಿದಂತೆ, ಶೋಭಿತ, ಅರ್ಚನಾ, ಪ್ರತಿಮಾ, ಮೋಹನ್ ಇತರರು ಇದ್ದಾರೆ. ವಿಶೇಷ ಅಂದರೆ ಮಾಲಾಶ್ರೀ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖ ಆಕರ್ಷಣೆ.

ಚಿತ್ರಕ್ಕೆ ವಿಪಿನ್ ರಾಜ್ ಕ್ಯಾಮೆರಾ ಹಿಡಿದಿದ್ದಾರೆ. ವೀರೇಶ್ ಕಬ್ಳಿ ಸಂಗೀತವಿದೆ. ಕೊಡುತ್ತಿದ್ದಾರೆ. ಕ್ಯಾಪ್ಟನ್ ಕಿಶೋರ್ ನೃತ್ತ, ಶ್ರೀಕಾಂತ್ ಸಂಕಲನವಿದೆ. ಚಿತ್ರವನ್ನು ಕೊಟ್ರೇಶ್ ಗೌಡ ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ದೂರದರ್ಶನ ಚಿತ್ರದ ಕ್ಲಾಸ್ ಅಂಡ್ ಮಾಸ್ ಟೀಸರ್ ರಿಲೀಸ್: ಎಲ್ಲೆಡೆ ಮೆಚ್ಚುಗೆ

80,90ರ ದಶಕದವರಿಗೆ ದೂರದರ್ಶನ ಅಂದ್ರೆ ಒಂದು ರೋಮಾಂಚನಕಾರಿ ಅನುಭವ. ಅದರೊಂದಿಗೆ ಒಂದು ಅವಿನಾಭಾವ ನಂಟು ಬೆಳೆದಿರುತ್ತೆ. ಅದರಲ್ಲೂ ಹಳ್ಳಿ ಯವರಾದರೆ ಆ ನಂಟಿನ ಸೊಗಸೇ ಅದ್ಭುತ. ಈಗಲೂ ಆ ದಿನಗಳನ್ನು ನೆನಪಿಸಿ ಮಿಸ್ ಮಾಡಿಕೊಳ್ಳೋರಿಗೆ ಆ ಮಜಭೂತನ್ನು ತೆರೆ ಮೇಲೆ ಕಟ್ಟಿಕೊಡಲು ಸಿದ್ದವಾಗಿರೋ ಸಿನಿಮಾ ‘ದೂರದರ್ಶನ’. ಟೈಟಲ್ ಕೇಳಿದಾಕ್ಷಣ ಬಹಳ ಬೇಗ ಕನೆಕ್ಟ್ ಆಗುತ್ತೆ ಅದೇ ರೀತಿ ಸಿನಿಮಾ ಕೂಡ ಹಳ್ಳಿ ಸೊಗಡಲ್ಲೇ ಮೋಡಿ ಮಾಡೋಕೆ ಸಿದ್ದವಾಗಿದೆ. ಹಾಡುಗಳ ಮೂಲಕ ಮೋಡಿ ಮಾಡಿರೋ ‘ದೂರದರ್ಶನ’ ಚಿತ್ರತಂಡ ಪ್ರಾಮಿಸಿಂಗ್ ಆಗಿರೋ ಟೀಸರ್ ಬಿಡುಗಡೆ ಮಾಡಿದೆ.

ಮಾಸ್ ಸಿನಿಮಾ ಭರಾಟೆಯಲ್ಲಿ ಹಳ್ಳಿ ಸೊಗಡಿರೋ, ಹಳ್ಳಿಯಲ್ಲಿ ನಡೆಯೋ ಕಥಾನಕಗಳಿರೋ ಸಿನಿಮಾಗಳು ಕಡಿಮೆ ಆಗಿದೆ ಅನ್ನೋರಿಗೆ ಪಕ್ಕಾ ಹಳ್ಳಿ ಸೊಗಡಿರೋ, 80, 90 ದಶಕದ ಚಿತ್ರಣವನ್ನೊಳಗೊಂಡ ‘ದೂರದರ್ಶನ’ ಸಿನಿಮಾ ಮನರಂಜನೆ ನೀಡಲು ಸಜ್ಜಾಗಿದೆ. ಹಾಗೆಂದ ಮಾತ್ರಕ್ಕೆ ಕ್ಲಾಸ್ ಆಡಿಯನ್ಸ್ ಸಿನಿಮಾವೇನಲ್ಲ. ಮಾಸ್ ಆಡಿಯನ್ಸ್ ಗಳನ್ನು ಸೆಳೆಯೋ ಕಟೆಂಟ್ ಚಿತ್ರದಲ್ಲಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಾಮಿಸಿಂಗ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಗಮನ ಸೆಳೆದಿದೆ.

‘ದೂರದರ್ಶನ’ ಸಿನಿಮಾ ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ ಮೂಡಿಬಂದಿರೋ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ ಸುಕೇಶ್ ಶೆಟ್ಟಿ. ಈ ಚಿತ್ರ 80, 90 ದಶಕದಲ್ಲಿ ಹಳ್ಳಿಗಳಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಟಿವಿ(ದೂರದರ್ಶನ)ಯ ಆಗಮನವಾದ ಮೇಲೆ ಏನೆಲ್ಲ ಬದಲಾವಣೆ ಆಗುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ನಟಿಸಿದ್ದು, ಅಯಾನ ನಾಯಕಿಯಾಗಿ ನಟಿಸಿದ್ದಾರೆ.

ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಸಿನಿಮಾದಲ್ಲಿದೆ. ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

ವಿ ಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ದೂರದರ್ಶನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಜಾಲಿಯಲ್ಲದ ಜಮಾಲಿ ಗುಡ್ಡ! ಭಾವುಕ ಪಯಣದಲ್ಲಿ ಎಲ್ಲವೂ ಆಕಸ್ಮಿಕದ ಅಂತ್ಯ!!

ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ

ರೇಟಿಂಗ್- 2.5 / 5

ಚಿತ್ರ : ಜಮಾಲಿಗುಡ್ಡ
ನಿರ್ದೇಶಕ : ಕುಶಾಲ್ ಗೌಡ
ನಿರ್ಮಾಪಕ: ಶ್ರೀ ಹರಿ
ತಾರಾಗಣ: ಧನಂಜಯ, ಯಶ್ ಶೆಟ್ಟಿ, ಭಾವನಾ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ರುಶಿಕಾ, ಪ್ರಾಣ್ಯ, ಸಂತು, ದಿವ್ಯ ಇತರರು.

ಜಗತ್ತಿನ ಕಣ್ಣಿಗೆ ಮತ್ತು ಪೋಲೀಸರ ದೃಷ್ಟಿಯಲ್ಲಿ ಅವನು ಮೋಸ್ಟ್ ವಾಂಟೆಡ್ ಕ್ರಿಮಿನಲ್! ಹೆಸರು ಹಿರೋಶಿಮ. ಆದರೆ, ಅವನೊಬ್ಬ ಇನ್ನೋಸೆಂಟ್. ನಿಷ್ಕಲ್ಮಷ ಪ್ರೇಮಿ. ಅಂಥಾ ಪ್ರೇಮಿಯೊಬ್ಬ ಆಕಸ್ಮಿಕ ಕೊಲೆಗಾರ. ಯಾಕೆ, ಏನು ಎತ್ತ ಎಂಬುದನ್ನು ತಿಳಿಯಲು ‘ಜಮಾಲಿಗುಡ್ಡ’ ಹತ್ತಿ ಸುಧಾರಿಸಿಕೊಂಡು ನೋಡಬೇಕು!!

ಒಂದೇ ಮಾತಲ್ಲಿ ಹೇಳುವುದಾದರೆ, ಇಡೀ ಸಿನಿಮಾದ ಹೈಲೆಟ್ ಬಾಬಬುಡನ್ ಗಿರಿಯ ಹಸಿರು ವಾತಾವರಣ ಮತ್ತು ಚುಮು ಚುಮು ಮಂಜು ಧುಮುಕುವ ದೃಶ್ಯ. ಇಷ್ಟನ್ನು ಕಣ್ತುಂಬಿಕೊಳ್ಳೋಕೆ ಯಾವುದೇ ಮೋಸವಿಲ್ಲ.

ಇನ್ನು ಡಾಲಿ ಧನಂಜಯ ಅವರ ಎಂದಿನ ಶೈಲಿಯ ಸಿನಿಮಾ ಅಂದುಕೊಂಡು ಬಂದರೆ, ಆ ನಿರೀಕ್ಷೆ ಇಲ್ಲಿ ಸುಳ್ಳಾಗುತ್ತೆ. ಅಂತಹ ಪವಾಡ ಇಲ್ಲಿಲ್ಲ. ಕಥೆ ತೀರಾ ಸರಳ. ಹೊಸ ವಿಷಯವೇನಿಲ್ಲ. ಒಂದೊಳ್ಳೆಯ ಭಾವುಕ ಸನ್ನಿವೇಶಗಳು ಆಗಾಗ ಇಣುಕಿ ನೋಡುತ್ತವೆ ಎಂಬುದು ಬಿಟ್ಟರೆ, ಇಲ್ಲಿ ಎಲ್ಲವೂ ಝಾಳು ಝಾಳು.

ಸಿನಿಮಾ ಕೂಡ ಹೇಳಿಕೊಳ್ಳುವಂತಹ ಅದ್ಧೂರಿಯಾಗಿಲ್ಲ. ಹಾಗಂತ, ಕಥೆಯೊಳಗಿನ ಪಾತ್ರಗಳಿಗೆ ವಿನಾಕಾರಣ ಬಿಲ್ಡಪ್ ಕೊಟ್ಟಿಲ್ಲ. ಕೆಲವು ಸನ್ನವೇಷಗಳು ತೀರಾ ಕಳಪೆ ಎನಿಸಿಬಿಡುತ್ತವೆ. ಒಬ್ಬ ಕ್ರಿಮಿನಲ್ ಹುಡುಕಿ ಬರುವ ಪೊಲೀಸ್ ಅಧಿಕಾರಿ ಮತ್ತು ತಂಡ, ಅದರ ಜೊತೆ ಬರುವ ಶಾರ್ಪ್ ಶೂಟರ್ ಅವರನ್ನೆಲ್ಲಾ ಆ ಸನ್ನಿವೇಶದಲ್ಲಿ ನೋಡುವಾಗ ನಿಜಕ್ಕೂ ಅದು ಫೂಲಿಶ್ ಅನಿಸುತ್ತೆ.

ಒಂದು ಹಸಿರು ಬೆಟ್ಟದ ತಪ್ಪಲಿನಲ್ಲಿ ನಡೆಯೋ ಆ ದೃಶ್ಯಕ್ಕೆ ವಿಪರೀತ ಬಿಲ್ಡಪ್ ಬೇಕಿರಲಿಲ್ಲ. ಆದರೂ ಅದೊಂದು ರೀತಿ ಆಡಿಕೊಳ್ಳುವ ಮಾತಿಗೆ ಸಿಲುಕುವ ದೃಶ್ಯ ಅನ್ನೋದು ಸತ್ಯ.

ಮೊದಲರ್ಧ ಕಾಮನ್ ಆಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ನೋಡುಗರ ತಾಳ್ಮೆ ಪರೀಕ್ಷಿಸುತ್ತೆ. ಕೆಲವೊಮ್ಮೆ ಸಿನಿಮಾದ ಲಿಂಕ್ ಎತ್ತೆತ್ತಲ್ಲೋ ಸಾಗಿ, ನೋಡುಗನ ಗೊಂದಲಕ್ಕೀಡು ಮಾಡುತ್ತೆ. ಇನ್ನೇನು ಸೀಟಿಗೆ ಒರಗಿಕೊಳ್ಳಬೇಕು ಅನ್ನುತ್ತಿದ್ದಂತೆ ಅಲ್ಲೊಂದು ಹಾಡು ಕಾಣಿಸಿಕೊಂಡು ಕೊಂಚ ರಿಲ್ಯಾಕ್ಸ್ ಗೆ ಕಾರಣವಾಗುತ್ತೆ.

95-96 ರ ಕಾಲಘಟ್ಟದ ಕಥೆ ಇದು. ಆದರೆ, ಆ ಫೀಲ್ ಅಷ್ಟಾಗಿ ಕಾಣಸಿಗಲ್ಲ. ನಿರ್ದೇಶಕರು ಲೊಕೇಷನ್ ಸೌಂದರ್ಯಕ್ಕೆ ಒತ್ತು ಕೊಟ್ಟಷ್ಟು, ನಿರೂಪಣೆಗೆ ಒತ್ತು ಕೊಟ್ಟಿದ್ದರೆ, ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ ಜಮಾಲಿಗುಡ್ಡದ ಸೊಬಗು ಮತ್ತಷ್ಟು ರಂಗೇರುತ್ತಿತ್ತು.
ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಕಲ್ಪನೆಯೂ ಸೊಗಸಾಗಿದೆ. ಆದರೆ, ಅದನ್ನು ಮತ್ತಷ್ಟು ಅಂದವಾಗಿ ಕಟ್ಟಿಕೊಡಬಹುದಿತ್ತು. ಅಲ್ಲಲ್ಲಿ ಬರುವ ಸಂಭಾಷಣೆ ಮತ್ತು ಕೆಲ ದೃಶ್ಯಗಳು ಮನಸ್ಸಿಗೆ ನಾಟುತ್ತವೆ. ಉಳಿದಂತೆ ಚಿಟಿಕೆಯಷ್ಟು ಮುದ ಕೊಡುವಷ್ಟರ ಮಟ್ಟಿಗೆ ಮೂಡಿದೆಯಷ್ಟೆ. ಇನ್ನೂ ಪರಿಣಾಮಕಾರಿಯಾಗಿ ತರಬಲ್ಲ ಸಾಧ್ಯತೆಗಳಿದ್ದವು. ಆದರೆ ಅದಿಲ್ಲಿ ಸಾದ್ಯವಾಗಿಲ್ಲ.

ಕಥೆ ಇಷ್ಟು…

ಅವನೊಬ್ಬ ಬಾರ್ ಸಪ್ಲೈಯರ್. ಮಸಾಜ್ ಸೆಂಟರ್ ನಲ್ಲಿ ಸ್ವರ್ಗ ನೋಡಬಹುದು ಅನ್ನೋ ಗೆಳೆಯನೊಬ್ಬನ ಮಾತು ಕೇಳಿ ಸ್ಪಾ ವೊಂದಕ್ಕೆ ಹೋಗ್ತಾನೆ. ಅಲ್ಲಿ ಮಸಾಜ್ ಮಾಡುವ ಅಂದದ ಹುಡುಗಿಯನ್ನು ನೋಡಿ ಪ್ರೀತಿಗೆ ಜಾರುತ್ತಾನೆ. ಆ ಪ್ರೀತಿ ಅವರಿಬ್ಬರ ಬದುಕಲ್ಲಿ ನಾಟ್ಯವಾಡುತ್ತೆ. ಘಟನೆಯೊಂದರಲ್ಲಿ ಅವನು ಜೈಲು ಸೇರುತ್ತಾನೆ.

ಅಲ್ಲಿ ಮತ್ತೊಬ್ಬ ಕ್ರಿಮಿನಲ್ ನಾಗಸಾಕಿ ಎಂಬಾತನ ನಂಟು ಬೆಳೆದು, ಜೈಲಿಂದ ಇಬ್ಬರೂ ಪರಾರಿಯಾಗುತ್ತಾರೆ. ಸಾಗುವ ದಾರಿ ನಡುವೆ ಆಕಸ್ಮಿಕ ಘಟನೆ ‌ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಕೊನೆಗೆ ಆ ಹೀರೋಶಿಮ ಪೋಲೀಸರ ಕೈಗೆ ಸಿಕ್ತಾನಾ, ಅವನ ಪ್ರೀತಿ ಸಿಗುತ್ತಾ ಅನ್ನುವ ಕುತೂಹಲವಿದ್ದರೆ ಒಂದೊಮ್ಮೆ ಧೈರ್ಯವಾಗಿ ಗುಡ್ಡ- ಬೆಟ್ಟ ಸುತ್ತಾಡಿ ಬರಲ್ಲಡ್ಡಿಯಿಲ್ಲ.

ಯಾರು ಹೇಗೆ?

ಹೀರೋಶಿಮನಾಗಿ ಡಾಲಿ ಧನಂಜಯ ಪಾತ್ರಕ್ಕೆ ಮೋಸ ಮಾಡಿಲ್ಲ. ಆದರೆ, ಯಾಕೋ ಅವರಿಲ್ಲಿ ತೀರಾ ಡಲ್ ಆದವರಂತೆ ಕಾಣುತ್ತಾರೆ. ಆ ಕಾಲಘಟ್ಟದ ಕಥೆ ಆಗಿದ್ದರೂ, ಅದಕ್ಕೆ ಇನ್ನಷ್ಟು ತಯಾರಿ ಬೇಕಿತ್ತು ಎನಿಸುತ್ತೆ. ಉಳಿದಂತೆ ಒಬ್ಬ ಪ್ರೇಮಿಯಾಗಿ, ಮುಗ್ಧನಾಗಿ, ಭಾವುಕತೆ ಹೆಚ್ಚಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ.
ನಾಗಸಾಕಿಯಾಗಿ ಅವರಿಸಿಕೊಂಡಿರುವ ಯಶ್ ಶೈಟಿ ಸಿನಿಮಾದ ಮತ್ತೊಂದು ಹೈಲೆಟ್. ಅವರ ನಟನೆಯ ಲವಲವಿಕೆ ಇಲ್ಲಿ ಎಂದಿಗಿಂತಲೂ ಸೊಗಸಾಗಿದೆ. ಕ್ರಿಮಿನಲ್ ಆಗಿ ನಿಜಕ್ಕೂ ಭಯ ಹುಟ್ಟಿಸೋ ‘ಗೊಗ್ಗಯ್ಯ’ನಾಗಿ ಗಮನ ಸೆಳೆಯುತ್ತಾರೆ. ಅವರ ಗೆಟಪ್ ಇಲ್ಲಿ ವಿಶೇಷವಾಗಿದೆ.


ಅದಿತಿ ಪ್ರಭುದೇವ ಸ್ಪಾ ಹುಡುಗಿಯಾಗಿ ಅಷ್ಟೇನೂ ಪ್ರಭಾವ ಬೀರಿಲ್ಲ. ಅಲಲ್ಲಿ ಭಾವುಕತೆಗೆ ದೂಡುವ ಪ್ರೇಮಿಯಾಗಿ ಜಮಾಲಿಗುಡ್ಡದ ಭಾಗವಾಗಿದ್ದಾರೆ. ಪ್ರಕಾಶ್ ಬೆಳವಾಡಿ ಅಂತಹ ಕಲಾವಿದರನ್ನು ಇಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಸಿಕ್ಕ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ. ನಟ ನಂದಗೋಪಾಲ್ ಅವರನ್ನೂ ಸೀಮಿತಗೊಳಿಸಲಾಗಿದೆ. ಭಾವನಾ ಅವರಿಲ್ಲಿ ಸಿಗರೇಟ್ ಸೇದಿ ಹೊಗೆ ಬಿಡುವುದಕ್ಕಷ್ಟೇ ಸೀಮಿತ. ಉಳಿದಂತೆ ಹಾಗೆ ಬಂದು ಹೋಗುವ ಪಾತ್ರಗಳು ನಿರ್ದೇಶಕರ ಅಣತಿಯಂತೆ ಕಾರ್ಯ ನಿರ್ವಹಿಸಿವೆ.

ಮಾಸ್ತಿ ಹಾಗು ಕುಶಾಲ್ ಅವರ ಸಂಭಾಷಣೆ ತಕ್ಕಮಟ್ಟಿಗೆ ಗಟ್ಟಿಯಾಗಿದೆ. ಅರ್ಜುನ್ ಜನ್ಯ ಅವರ ಸಂಗೀತದ ಒಂದು ಹಾಡು ಪರವಾಗಿಲ್ಲ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಅಷ್ಟಾಗಿ ಹೆಗಲು ಕೊಡಲಾಗಿಲ್ಲ. ಅವರ ಆಲಾಪದ ದನಿಯೇ ಇಲ್ಲಿ ಹಿನ್ನೆಲೆಯಾಗಿರುವುದು ಕೊಂಚ ವೇಗಮಿತಿಗೆ ಕಾರಣ. ಇನ್ನು, ಹರೀಶ್ ಕೊಮ್ಮೆ ಕತ್ತರಿ ಪ್ರಯೋಗ ವೇಗ ಹೆಚ್ಚಿಸಿದೆ. ಕಾರ್ತಿಕ್ ಅವರ ಕ್ಯಾಮೆರಾ ಕೈ ಚಳಕದಲ್ಲಿ ಜಮಾಲಿಗುಡ್ಡದ ಸೊಬಗು ತುಂಬಿದೆ.

error: Content is protected !!