ಜಾಲಿಯಲ್ಲದ ಜಮಾಲಿ ಗುಡ್ಡ! ಭಾವುಕ ಪಯಣದಲ್ಲಿ ಎಲ್ಲವೂ ಆಕಸ್ಮಿಕದ ಅಂತ್ಯ!!

ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ

ರೇಟಿಂಗ್- 2.5 / 5

ಚಿತ್ರ : ಜಮಾಲಿಗುಡ್ಡ
ನಿರ್ದೇಶಕ : ಕುಶಾಲ್ ಗೌಡ
ನಿರ್ಮಾಪಕ: ಶ್ರೀ ಹರಿ
ತಾರಾಗಣ: ಧನಂಜಯ, ಯಶ್ ಶೆಟ್ಟಿ, ಭಾವನಾ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ರುಶಿಕಾ, ಪ್ರಾಣ್ಯ, ಸಂತು, ದಿವ್ಯ ಇತರರು.

ಜಗತ್ತಿನ ಕಣ್ಣಿಗೆ ಮತ್ತು ಪೋಲೀಸರ ದೃಷ್ಟಿಯಲ್ಲಿ ಅವನು ಮೋಸ್ಟ್ ವಾಂಟೆಡ್ ಕ್ರಿಮಿನಲ್! ಹೆಸರು ಹಿರೋಶಿಮ. ಆದರೆ, ಅವನೊಬ್ಬ ಇನ್ನೋಸೆಂಟ್. ನಿಷ್ಕಲ್ಮಷ ಪ್ರೇಮಿ. ಅಂಥಾ ಪ್ರೇಮಿಯೊಬ್ಬ ಆಕಸ್ಮಿಕ ಕೊಲೆಗಾರ. ಯಾಕೆ, ಏನು ಎತ್ತ ಎಂಬುದನ್ನು ತಿಳಿಯಲು ‘ಜಮಾಲಿಗುಡ್ಡ’ ಹತ್ತಿ ಸುಧಾರಿಸಿಕೊಂಡು ನೋಡಬೇಕು!!

ಒಂದೇ ಮಾತಲ್ಲಿ ಹೇಳುವುದಾದರೆ, ಇಡೀ ಸಿನಿಮಾದ ಹೈಲೆಟ್ ಬಾಬಬುಡನ್ ಗಿರಿಯ ಹಸಿರು ವಾತಾವರಣ ಮತ್ತು ಚುಮು ಚುಮು ಮಂಜು ಧುಮುಕುವ ದೃಶ್ಯ. ಇಷ್ಟನ್ನು ಕಣ್ತುಂಬಿಕೊಳ್ಳೋಕೆ ಯಾವುದೇ ಮೋಸವಿಲ್ಲ.

ಇನ್ನು ಡಾಲಿ ಧನಂಜಯ ಅವರ ಎಂದಿನ ಶೈಲಿಯ ಸಿನಿಮಾ ಅಂದುಕೊಂಡು ಬಂದರೆ, ಆ ನಿರೀಕ್ಷೆ ಇಲ್ಲಿ ಸುಳ್ಳಾಗುತ್ತೆ. ಅಂತಹ ಪವಾಡ ಇಲ್ಲಿಲ್ಲ. ಕಥೆ ತೀರಾ ಸರಳ. ಹೊಸ ವಿಷಯವೇನಿಲ್ಲ. ಒಂದೊಳ್ಳೆಯ ಭಾವುಕ ಸನ್ನಿವೇಶಗಳು ಆಗಾಗ ಇಣುಕಿ ನೋಡುತ್ತವೆ ಎಂಬುದು ಬಿಟ್ಟರೆ, ಇಲ್ಲಿ ಎಲ್ಲವೂ ಝಾಳು ಝಾಳು.

ಸಿನಿಮಾ ಕೂಡ ಹೇಳಿಕೊಳ್ಳುವಂತಹ ಅದ್ಧೂರಿಯಾಗಿಲ್ಲ. ಹಾಗಂತ, ಕಥೆಯೊಳಗಿನ ಪಾತ್ರಗಳಿಗೆ ವಿನಾಕಾರಣ ಬಿಲ್ಡಪ್ ಕೊಟ್ಟಿಲ್ಲ. ಕೆಲವು ಸನ್ನವೇಷಗಳು ತೀರಾ ಕಳಪೆ ಎನಿಸಿಬಿಡುತ್ತವೆ. ಒಬ್ಬ ಕ್ರಿಮಿನಲ್ ಹುಡುಕಿ ಬರುವ ಪೊಲೀಸ್ ಅಧಿಕಾರಿ ಮತ್ತು ತಂಡ, ಅದರ ಜೊತೆ ಬರುವ ಶಾರ್ಪ್ ಶೂಟರ್ ಅವರನ್ನೆಲ್ಲಾ ಆ ಸನ್ನಿವೇಶದಲ್ಲಿ ನೋಡುವಾಗ ನಿಜಕ್ಕೂ ಅದು ಫೂಲಿಶ್ ಅನಿಸುತ್ತೆ.

ಒಂದು ಹಸಿರು ಬೆಟ್ಟದ ತಪ್ಪಲಿನಲ್ಲಿ ನಡೆಯೋ ಆ ದೃಶ್ಯಕ್ಕೆ ವಿಪರೀತ ಬಿಲ್ಡಪ್ ಬೇಕಿರಲಿಲ್ಲ. ಆದರೂ ಅದೊಂದು ರೀತಿ ಆಡಿಕೊಳ್ಳುವ ಮಾತಿಗೆ ಸಿಲುಕುವ ದೃಶ್ಯ ಅನ್ನೋದು ಸತ್ಯ.

ಮೊದಲರ್ಧ ಕಾಮನ್ ಆಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ನೋಡುಗರ ತಾಳ್ಮೆ ಪರೀಕ್ಷಿಸುತ್ತೆ. ಕೆಲವೊಮ್ಮೆ ಸಿನಿಮಾದ ಲಿಂಕ್ ಎತ್ತೆತ್ತಲ್ಲೋ ಸಾಗಿ, ನೋಡುಗನ ಗೊಂದಲಕ್ಕೀಡು ಮಾಡುತ್ತೆ. ಇನ್ನೇನು ಸೀಟಿಗೆ ಒರಗಿಕೊಳ್ಳಬೇಕು ಅನ್ನುತ್ತಿದ್ದಂತೆ ಅಲ್ಲೊಂದು ಹಾಡು ಕಾಣಿಸಿಕೊಂಡು ಕೊಂಚ ರಿಲ್ಯಾಕ್ಸ್ ಗೆ ಕಾರಣವಾಗುತ್ತೆ.

95-96 ರ ಕಾಲಘಟ್ಟದ ಕಥೆ ಇದು. ಆದರೆ, ಆ ಫೀಲ್ ಅಷ್ಟಾಗಿ ಕಾಣಸಿಗಲ್ಲ. ನಿರ್ದೇಶಕರು ಲೊಕೇಷನ್ ಸೌಂದರ್ಯಕ್ಕೆ ಒತ್ತು ಕೊಟ್ಟಷ್ಟು, ನಿರೂಪಣೆಗೆ ಒತ್ತು ಕೊಟ್ಟಿದ್ದರೆ, ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ ಜಮಾಲಿಗುಡ್ಡದ ಸೊಬಗು ಮತ್ತಷ್ಟು ರಂಗೇರುತ್ತಿತ್ತು.
ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಕಲ್ಪನೆಯೂ ಸೊಗಸಾಗಿದೆ. ಆದರೆ, ಅದನ್ನು ಮತ್ತಷ್ಟು ಅಂದವಾಗಿ ಕಟ್ಟಿಕೊಡಬಹುದಿತ್ತು. ಅಲ್ಲಲ್ಲಿ ಬರುವ ಸಂಭಾಷಣೆ ಮತ್ತು ಕೆಲ ದೃಶ್ಯಗಳು ಮನಸ್ಸಿಗೆ ನಾಟುತ್ತವೆ. ಉಳಿದಂತೆ ಚಿಟಿಕೆಯಷ್ಟು ಮುದ ಕೊಡುವಷ್ಟರ ಮಟ್ಟಿಗೆ ಮೂಡಿದೆಯಷ್ಟೆ. ಇನ್ನೂ ಪರಿಣಾಮಕಾರಿಯಾಗಿ ತರಬಲ್ಲ ಸಾಧ್ಯತೆಗಳಿದ್ದವು. ಆದರೆ ಅದಿಲ್ಲಿ ಸಾದ್ಯವಾಗಿಲ್ಲ.

ಕಥೆ ಇಷ್ಟು…

ಅವನೊಬ್ಬ ಬಾರ್ ಸಪ್ಲೈಯರ್. ಮಸಾಜ್ ಸೆಂಟರ್ ನಲ್ಲಿ ಸ್ವರ್ಗ ನೋಡಬಹುದು ಅನ್ನೋ ಗೆಳೆಯನೊಬ್ಬನ ಮಾತು ಕೇಳಿ ಸ್ಪಾ ವೊಂದಕ್ಕೆ ಹೋಗ್ತಾನೆ. ಅಲ್ಲಿ ಮಸಾಜ್ ಮಾಡುವ ಅಂದದ ಹುಡುಗಿಯನ್ನು ನೋಡಿ ಪ್ರೀತಿಗೆ ಜಾರುತ್ತಾನೆ. ಆ ಪ್ರೀತಿ ಅವರಿಬ್ಬರ ಬದುಕಲ್ಲಿ ನಾಟ್ಯವಾಡುತ್ತೆ. ಘಟನೆಯೊಂದರಲ್ಲಿ ಅವನು ಜೈಲು ಸೇರುತ್ತಾನೆ.

ಅಲ್ಲಿ ಮತ್ತೊಬ್ಬ ಕ್ರಿಮಿನಲ್ ನಾಗಸಾಕಿ ಎಂಬಾತನ ನಂಟು ಬೆಳೆದು, ಜೈಲಿಂದ ಇಬ್ಬರೂ ಪರಾರಿಯಾಗುತ್ತಾರೆ. ಸಾಗುವ ದಾರಿ ನಡುವೆ ಆಕಸ್ಮಿಕ ಘಟನೆ ‌ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಕೊನೆಗೆ ಆ ಹೀರೋಶಿಮ ಪೋಲೀಸರ ಕೈಗೆ ಸಿಕ್ತಾನಾ, ಅವನ ಪ್ರೀತಿ ಸಿಗುತ್ತಾ ಅನ್ನುವ ಕುತೂಹಲವಿದ್ದರೆ ಒಂದೊಮ್ಮೆ ಧೈರ್ಯವಾಗಿ ಗುಡ್ಡ- ಬೆಟ್ಟ ಸುತ್ತಾಡಿ ಬರಲ್ಲಡ್ಡಿಯಿಲ್ಲ.

ಯಾರು ಹೇಗೆ?

ಹೀರೋಶಿಮನಾಗಿ ಡಾಲಿ ಧನಂಜಯ ಪಾತ್ರಕ್ಕೆ ಮೋಸ ಮಾಡಿಲ್ಲ. ಆದರೆ, ಯಾಕೋ ಅವರಿಲ್ಲಿ ತೀರಾ ಡಲ್ ಆದವರಂತೆ ಕಾಣುತ್ತಾರೆ. ಆ ಕಾಲಘಟ್ಟದ ಕಥೆ ಆಗಿದ್ದರೂ, ಅದಕ್ಕೆ ಇನ್ನಷ್ಟು ತಯಾರಿ ಬೇಕಿತ್ತು ಎನಿಸುತ್ತೆ. ಉಳಿದಂತೆ ಒಬ್ಬ ಪ್ರೇಮಿಯಾಗಿ, ಮುಗ್ಧನಾಗಿ, ಭಾವುಕತೆ ಹೆಚ್ಚಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ.
ನಾಗಸಾಕಿಯಾಗಿ ಅವರಿಸಿಕೊಂಡಿರುವ ಯಶ್ ಶೈಟಿ ಸಿನಿಮಾದ ಮತ್ತೊಂದು ಹೈಲೆಟ್. ಅವರ ನಟನೆಯ ಲವಲವಿಕೆ ಇಲ್ಲಿ ಎಂದಿಗಿಂತಲೂ ಸೊಗಸಾಗಿದೆ. ಕ್ರಿಮಿನಲ್ ಆಗಿ ನಿಜಕ್ಕೂ ಭಯ ಹುಟ್ಟಿಸೋ ‘ಗೊಗ್ಗಯ್ಯ’ನಾಗಿ ಗಮನ ಸೆಳೆಯುತ್ತಾರೆ. ಅವರ ಗೆಟಪ್ ಇಲ್ಲಿ ವಿಶೇಷವಾಗಿದೆ.


ಅದಿತಿ ಪ್ರಭುದೇವ ಸ್ಪಾ ಹುಡುಗಿಯಾಗಿ ಅಷ್ಟೇನೂ ಪ್ರಭಾವ ಬೀರಿಲ್ಲ. ಅಲಲ್ಲಿ ಭಾವುಕತೆಗೆ ದೂಡುವ ಪ್ರೇಮಿಯಾಗಿ ಜಮಾಲಿಗುಡ್ಡದ ಭಾಗವಾಗಿದ್ದಾರೆ. ಪ್ರಕಾಶ್ ಬೆಳವಾಡಿ ಅಂತಹ ಕಲಾವಿದರನ್ನು ಇಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಸಿಕ್ಕ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ. ನಟ ನಂದಗೋಪಾಲ್ ಅವರನ್ನೂ ಸೀಮಿತಗೊಳಿಸಲಾಗಿದೆ. ಭಾವನಾ ಅವರಿಲ್ಲಿ ಸಿಗರೇಟ್ ಸೇದಿ ಹೊಗೆ ಬಿಡುವುದಕ್ಕಷ್ಟೇ ಸೀಮಿತ. ಉಳಿದಂತೆ ಹಾಗೆ ಬಂದು ಹೋಗುವ ಪಾತ್ರಗಳು ನಿರ್ದೇಶಕರ ಅಣತಿಯಂತೆ ಕಾರ್ಯ ನಿರ್ವಹಿಸಿವೆ.

ಮಾಸ್ತಿ ಹಾಗು ಕುಶಾಲ್ ಅವರ ಸಂಭಾಷಣೆ ತಕ್ಕಮಟ್ಟಿಗೆ ಗಟ್ಟಿಯಾಗಿದೆ. ಅರ್ಜುನ್ ಜನ್ಯ ಅವರ ಸಂಗೀತದ ಒಂದು ಹಾಡು ಪರವಾಗಿಲ್ಲ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಅಷ್ಟಾಗಿ ಹೆಗಲು ಕೊಡಲಾಗಿಲ್ಲ. ಅವರ ಆಲಾಪದ ದನಿಯೇ ಇಲ್ಲಿ ಹಿನ್ನೆಲೆಯಾಗಿರುವುದು ಕೊಂಚ ವೇಗಮಿತಿಗೆ ಕಾರಣ. ಇನ್ನು, ಹರೀಶ್ ಕೊಮ್ಮೆ ಕತ್ತರಿ ಪ್ರಯೋಗ ವೇಗ ಹೆಚ್ಚಿಸಿದೆ. ಕಾರ್ತಿಕ್ ಅವರ ಕ್ಯಾಮೆರಾ ಕೈ ಚಳಕದಲ್ಲಿ ಜಮಾಲಿಗುಡ್ಡದ ಸೊಬಗು ತುಂಬಿದೆ.

Related Posts

error: Content is protected !!