ಕಲರ್ ಫುಲ್ ಕನಸು ಕಟ್ಟಿಕೊಂಡು ಈ ಬಣ್ಣದ ಲೋಕಕ್ಕೆ ಬರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಾಗೆಯೇ ಪ್ರತಿ ದಿನ ಹೊಸ ಬಗೆಯ ಸಿನಿಮಾಗಳೂ ಸಾಕಷ್ಠು ಸೆಟ್ಟೇರುತ್ತಿವೆ. ಆ ಸಾಲಿಗೆ ‘ಕೆಂಡದ ಸೆರಗು’ ಎಂಬ ಸಿನಿಮಾ ಕೂಡ ಸೇರಿದ್ದು, ಚಿತ್ರೀಕರಣ ಕೂಡ ಮುಗಿದಿದೆ. ಇದು ಮಹಿಳಾ ಪ್ರಧಾನ ಚಿತ್ರ. ರಾಕಿ ಸೋಮ್ಲಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.
ಹೌದು, ‘ಕೆಂಡದ ಸೆರಗು’ ಈ ಶೀರ್ಷಿಕೆಯೇ ವಿಶೇಷವಾಗಿದೆ ಅಂದಮೇಲೆ, ಸಿನಿಮಾ ಕಥಾಹಂದರ ಕೂಡ ವಿಶೇಷವಾಗಿರಲೇಬೇಕು. ಇದು ಕಾದಂಬರಿ ಆಧಾರಿತ ಸಿನಿಮಾ. ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಈಗ ಚಿತ್ರವಾಗುತ್ತಿದೆ. ವಿಶೇಷ ಅಂದರೆ ರಾಕಿ ಸೋಮ್ಲಿ ಅವರೇ ತಮ್ಮ ಕಾದಂಬರಿ ಇಟ್ಟುಕೊಂಡು ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ರಾಕಿ ಸೋಮ್ಲಿ ಅವರ ಈ ಕಾದಂಬರಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಶಸ್ತಿ ಪಡೆದಿರುವುದು ಮತ್ತೊಂದು ಸ್ಪೆಷಲ್.
2020 ರಲ್ಲಿ ಯುವ ಬರಹಗಾರ ಚೊಚ್ಚಲ ಕೃತಿ ಅಡಿಯಲ್ಲಿ ಈ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಅದೇ ಕಾದಂಬರಿಯನ್ನೆ ರಾಕಿ ಸೋಮ್ಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾದರೂ, ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಇದೆ. ಗೀತ ಸಾಹಿತಿಯಾಗಿ, ಸಂಭಾಷಣೆಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಮೊದಲ ಕನಸು ‘ಕೆಂಡದ ಸೆರಗು’ ಶೂಟಿಂಗ್ ಕೂಡ ಮುಗಿದಿದೆ.
ಏನು ಕಥೆ?
ಕೆಂಡದ ಸೆರಗು’ ಈ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣಿನ ಶೋಷಣೆ, ಬವಣೆ , ಮೋಸ, ಇತ್ಯಾದಿ ವಿಷಯಗಳು ಸಿನಿಮಾದ ಹೈಲೆಟ್. ಸಿನಿಮಾ ಆಕರ್ಷಣೆಯೇ ಹೆಣ್ಣಿನ ಕಥೆ. ಅವಳ ಅಸಹಾಯಕತೆ, ಹೋರಾಟ ಇಲ್ಲಿ ಹೈಲೆಟ್. ನೊಂದ ಹೆಣ್ಣನ್ನು ದೂಷಿಸುವ ಸಮಾಜ, ಕೆಟ್ಟ ವ್ಯವಸ್ಥೆ ಮತ್ತಿತರ ವಿಷಯಗಳಿವೆ.
ವರ್ಧನ್ ಎಂಬ ಖಡಕ್ ಖಳ ನಟ…
ಬಿಗ್ ಬಾಸ್ ಖ್ಯಾತಿಯ ಭೂಮಿಶೆಟ್ಟಿ ‘ಕೆಂಡದ ಸೆರಗು’ ಸಿನಿಮಾದ ಪ್ರಮುಖ ಆಕರ್ಷಣೆ. ಮಹಿಳಾ ಪ್ರಧಾನ ಸಿನಿಮಾ ಅಂದಮೇಲೆ, ವಿಲನ್ ಇರದಿದ್ದರೆ ಹೇಗೆ? ಇಲ್ಲೂ ಖಡಕ್ ವಿಲನ್ ಇದ್ದಾರೆ. ಒಬ್ಬ ಕೆಟ್ಟ ಪೊಲೀಸ್ ಅಧಿಕಾರಿಯಾಗಿ ನಟ ವರ್ಧನ್ ತೀರ್ಥಹಳ್ಳಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಲ್ಲಿ ದುಷ್ಟ ಅಧಿಕಾರಿ ಆಗಿರುವುದರಿಂದ ದಾಡಿ ಬಿಟ್ಟು ರಗಡ್ ಅಧಿಕಾರಿಯಾಗಿ ಕಾಣಲಿದ್ದಾರೆ.
ಈಗಾಗಲೇ ವರ್ಧನ್ ಕನ್ನಡ ಚಿತ್ರರಂಗದಲ್ಲಿ ಹಲವು ಬಗೆಯ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ತಮ್ಮ ವಿಶಿಷ್ಠ ಮ್ಯಾನರಿಸಂ ಮೂಲಕವೇ ನಿರ್ದೇಶಕರ ನಟರಾಗಿ, ಎಲ್ಲಾ ಬಗೆಯ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ. ‘ಕೆಂಡದ ಸೆರಗು’ ಸಿನಿಮಾದ ಪಾತ್ರ ವಿಭಿನ್ನವಾಗಿದ್ದು, ಒಳ್ಳೆಯ ತಂಡದಲ್ಲಿ ಹೊಸ ಬಗೆಯ ಕಥೆ ಇರುವ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ವರ್ಧನ್.
ಕೆಂಡದ ಸೆರಗಲ್ಲಿ ಇವರೆಲ್ಲಾ ಇದಾರೆ…
ಕೆಂಡದ ಸೆರಗು ಮಹಿಳಾ ಪ್ರಧಾನ ಕಥೆಯಾದರೂ ಚಿತ್ರದಲ್ಲಿ ವರ್ಧನ್, ಯಶ್ ಶೆಟ್ಟಿ ಕೂಡ ಅಬ್ಬರಿಸಲಿದ್ದಾರೆ. ಉಳಿದಂತೆ, ಶೋಭಿತ, ಅರ್ಚನಾ, ಪ್ರತಿಮಾ, ಮೋಹನ್ ಇತರರು ಇದ್ದಾರೆ. ವಿಶೇಷ ಅಂದರೆ ಮಾಲಾಶ್ರೀ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖ ಆಕರ್ಷಣೆ.
ಚಿತ್ರಕ್ಕೆ ವಿಪಿನ್ ರಾಜ್ ಕ್ಯಾಮೆರಾ ಹಿಡಿದಿದ್ದಾರೆ. ವೀರೇಶ್ ಕಬ್ಳಿ ಸಂಗೀತವಿದೆ. ಕೊಡುತ್ತಿದ್ದಾರೆ. ಕ್ಯಾಪ್ಟನ್ ಕಿಶೋರ್ ನೃತ್ತ, ಶ್ರೀಕಾಂತ್ ಸಂಕಲನವಿದೆ. ಚಿತ್ರವನ್ನು ಕೊಟ್ರೇಶ್ ಗೌಡ ನಿರ್ಮಿಸಿದ್ದಾರೆ.