Categories
ಸಿನಿ ಸುದ್ದಿ

ರಕ್ಕಸಪುರದೊಳಗೆ ಶೆಟ್ಟರ ಹವಾ! ರಾಜ್ ಬಿ ಶೆಟ್ಟಿ ಹೊಸ ಸಿನಿಮಾಗೆ ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ಮಾಪಕ

ಸಾಹಸ ನಿರ್ದೇಶಕ ಕೆ.ರವಿವರ್ಮ ಅವರ ಮೊದಲ ನಿರ್ಮಾಣದ, ರವಿ ಸಾರಂಗ ಚೊಚ್ಚಲ ನಿರ್ದೇಶನದ ಹಾಗು ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಮುಹೂರ್ತ ನಡೆದಿದೆ. ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಇದ್ದರು.

ಸಾಹಸ ನಿರ್ದೇಶಕರಾಗಿ ಜನಪ್ರಿರಾಗಿರುವ ರವಿವರ್ಮ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ದಿ ವಿಲನ್”, “ಏಕ್ ಲವ್ ಯಾ” ,‌ “ಕೆಡಿ” ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ರವಿ ಸಾರಂಗ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಜನಪ್ರಿಯ ನಟ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. “ರಕ್ಕಸಪುರದೋಳ್” ಚಿತ್ರ ಚಂದನವನದಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ರಕ್ಷಿತ – ಪ್ರೇಮ್ ದಂಪತಿ ಹಾರೈಸಿದರು.

“ರಕ್ಕಸಪುರದೋಳ್” ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದರು ರಾಜ್ ಬಿ ಶೆಟ್ಟಿ.

ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ. ಪ್ರೇಮ್ ಮತ್ತು ರಕ್ಷಿತ ಅವರಿಗೆ ಧನ್ಯವಾದ. “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು “ರಕ್ಕಸ” ಎನ್ನಬಹುದು. ನಿರ್ಮಾಪಕ ರವಿವರ್ಮ ಹಾಗೂ ನಾಯಕ ರಾಜ್ ಬಿ ಶೆಟ್ಟಿ ಅವರು ಕಥೆ ಮೆಚ್ಚಿಕೊಂಡದ್ದು ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದ‌ರು‌ ನಿರ್ದೇಶಕ ರವಿ ಸಾರಂಗ.

ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು‌ ಮಾತು ಆರಂಭಿಸಿದ ನಿರ್ಮಾಪಕ ಕೆ.ರವಿವರ್ಮ, ಸಾಹಸ ನಿರ್ದೇಶಕನಾಗಿ ನನಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ.

ಅರ್ಜುನ್ ಜನ್ಯ‌ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಹಾಗೂ ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ರಕ್ಷಿತ – ಪ್ರೇಮ್ ಅವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ ಎಂದರು.

ರವಿವರ್ಮ ಅವರು ಸಾಹಸ ನಿರ್ದೇಶಕರಾಗಿ ನನ್ನ ನಿರ್ದೇಶನದ ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ನಟನೆಯನ್ನು ಹತ್ತಿರದಿಂದ ನೋಡಿದ್ದೇನೆ.

ಅವರೊಬ್ಬ ಉತ್ತಮ ಕಲಾವಿದ. ಇನ್ನು ರವಿ ಸಾರಂಗ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡದ “ಆರ್ ಆರ್ ಆರ್” ಚಿತ್ರ. ತ್ರಿಬಲ್ ಆರ್ ತರಹ‌ ಈ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾರೈಸಿದರು.

ನಾಯಕಿ ಸ್ವಾತಿಷ್ಟ ಕೃಷ್ಣ, ನಟ ಬಿ.ಸುರೇಶ್, ನಟಿ ಅರ್ಚನಾ ಕೊಟ್ಟಿಗೆ, ಚಿತ್ರದಲ್ಲಿ ಅಭಿನಯಿಸುತ್ತಿರುವ ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಭಾಷಣೆಕಾರ ಕ್ರಾಂತಿ ಕುಮಾರ್ ಹಾಗೂ ನರಸಿಂಹ ಜಾಲಹಳ್ಳಿ ಮುಂತಾದವರು “ರಕ್ಕಸಪುರದೋಳ್” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ವರಮಹಾಲಕ್ಷ್ಮೀ ಹಬ್ಬಕ್ಕೆ ಶಿವಣ್ಣ 131 ನೇ ಸಿನಿಮಾಗೆ ಚಾಲನೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ಶಿವಣ್ಣನ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಬೆಂಗಳೂರಿನ‌ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್ ಎನ್ ರೆಡ್ಡಿ ಕ್ಲ್ಯಾಪ್ ಮಾಡಿದರು. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ ನಾಳೆಯಿಂದ ಶೂಟಿಂಗ್ ಅಖಾಡಕ್ಕೆ‌ ಇಳಿಯುತ್ತಿದೆ.

ಮುಹೂರ್ತದ ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, 2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರೀಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾ ಮೆನ್ ಗೆ ತುಂಬಾ ಕೆಲಸವಿದೆ.

ಮ್ಯೂಸಿಕ್ ಡೈರೆಕ್ಟರ್ ಗೂ ತುಂಬ ತುಂಬ ಕೆಲಸವಿದೆ. ಎಲ್ಲಾ ಆರ್ಟಿಸ್ಟ್ ಗೂ ಕೆಲಸವಿದೆ. ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅಂತಾರೆ ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಇದು ಎಲ್ಲರ ಸಿನಿಮಾ. ಕಲಾವಿದರು, ತಂತ್ರಜ್ಞನರ ಸಿನಿಮಾ. ಜನ ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಇನ್ನೊಂದು ಸರ್ ಪ್ರೈಸ್ ಕ್ಯಾರೆಕ್ಟರ್ ಇದೆ. ಪ್ರತಿಯೊಂದು ಕೆಲಸದಲ್ಲಿ ದೇವರು ನಂಬುತ್ತೇವೆ. ಆದರೆ ಮನುಷ್ಯರೇ ದೇವರನ್ನು ನಂಬುತ್ತಾರೆ. ಇದು ಚಿತ್ರದ ಕಥೆಯ ಎಳೆ ಎಂದರು.

ನಿರ್ದೇಶಕ ಕಾರ್ತಿಕ್ ಅದ್ವೈತ್ ಮಾತನಾಡಿ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ಶಿವಣ್ಣ ಕಥೆ, ಕ್ಯಾರೆಕ್ಟರ್ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್ ಎಂದು ತಿಳಿಸಿದರು.

ಶಿವಣ್ಣನ 131ನೇ ಚಿತ್ರಕ್ಕೆ ಕಾರ್ತಿಕ್ ಅದ್ವೈತ್ ಹೇಳುತ್ತಿದ್ದಾರೆ. ತಮಿಳು ಚಿತ್ರವೊಂದನ್ನು ನಿರ್ಮಿಸಿರುವ ಅವರೀಗ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶಿವಣ್ಣನ 131ನೇ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ.

ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ. ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ.

ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸಹ ನಿರ್ಮಾಪಕರಾಗಿ ಸುಮನ್ ಬಿ, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ: ಕೆಜಿಎಫ್ 2ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಕನ್ನಡದ ಕಾಂತಾರ ಸಿನಿಮಾದ ನಟನೆಗಾಗಿ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ, ಅತ್ತ್ಯುತ್ತಮ ಚಿತ್ರ ಪ್ರಶಸ್ತಿಗೆ ಕೆಜಿಎಫ್ 2 ಭಾಜನವಾಗಿದೆ.

90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಲ್ಲಿಯವರೆಗೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡದ ನಟರು ಮೂರೇ ಜನ. ಎಂ ವಿ ವಾಸುದೇವ ರಾವ್ (ಚೋಮನದುಡಿ- 23ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ), ಸಂಚಾರಿ ವಿಜಯ್ (ನಾನು ಅವನಲ್ಲ ಅವಳು-62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಹಾಗೂ ರಿಷಭ್ ಶೆಟ್ಟಿ (ಕಾಂತಾರ-70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ).
ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡ ಕಹಳೆ ಮೊಳಗಿಸಿದೆ. ಕನ್ನಡ ಚಿತ್ರರಂಗಕ್ಕೆ 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.


ಕಾಂತಾರ, ಕೆಜಿಎಫ್​ ಸಿನಿಮಾಗಳಿಗೆ ಎರಡು ಪ್ರಶ್ರಿಗಳು ಸಿಕ್ಕಿವೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿಅತ್ಯುತ್ತಮ ಮನರಂಜನಾ ಸಿನಿಮಾ ಆಗಿ ಕಾಂತಾರ ಹೊರಹೊಮ್ಮಿದರೆ
ಅತ್ಯುತ್ತಮ ನಟ ಪ್ರಶಸ್ತಿಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ.


ಅತ್ಯುತ್ತಮ ಕನ್ನಡ ಸಿನಿಮಾ ಆ್ಇ ಕೆಜಿಎಫ್ 2 ಹೊರಹೊಮ್ಮಿದೆ.
ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್ 2 ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಹೊಂಬಾಳೆ ಪ್ರೊಡಕ್ಷನ್ ಮೂಲಕ ಕಾಂತಾರ ಹಾಗು ಕೆಜಿಎಫ್ 2 ಸಿನಿಮಾಗಳು ನಿರ್ಮಾಣಗೊಂಡಿದ್ದು ನಿರ್ಮಾಪಕ‌ ವಿಜಯ ಕಿರಗಂದೂರು ಸಂತಸಗೊಂಡಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಬ್ಬದಲ್ಲಿ ತಾರಾಮೇಳ: ಆ.23ಕ್ಕೆ ಗ್ರ್ಯಾಂಡ್ ರಿಲೀಸ್

ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ “ಪೌಡರ್” ತನ್ನ ಪ್ರೀ ರಿಲೀಸ್ ಕಾರ್ಯಕ್ರಮವಾದ “ಪೌಡರ್ ಹಬ್ಬ”ದಿಂದ ಮತ್ತೊಮ್ಮೆ ಸುದ್ದಿಯಾಗಿದೆ‌. ಇತ್ತೀಚೆಗೆ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ “ಪೌಡರ್ ಹಬ್ಬ” ಕನ್ನಡ ಚಿತ್ರರಂಗದ ತಾರಾ ಸಮಾಗಮವೇ ಆಗಿತ್ತು‌.

ಪೌಡರ್ ಹಬ್ಬದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ದಾನಿಷ್ ಸೇಠ್, ಖ್ಯಾತ ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಪೌಡರ್ ತಾರಾಬಳಗ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್

ಅನಿರುದ್ಧ್ ಆಚಾರ್ಯ,ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಎಲ್ಲರೂ ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

“ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ.

ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. “ಪೌಡರ್” ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.

Categories
ಸಿನಿ ಸುದ್ದಿ

ಗೌರಿ ಕನ್ನಡದ ಹೊಸ ಬೆಳಕು: ಇಂದ್ರಜಿತ್ ಪುತ್ರನಿಗೆ ಒಳ್ಳೆ ಟೈಮ್ ಬಂತು…

ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ರೇಟಿಂಗ್: 3.5/5

ಚಿತ್ರ: ಗೌರಿ
ನಿರ್ಮಾಣ, ನಿರ್ದೇಶನ: ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್, ಮಾನಸಿ ಸುಧೀರ್, ಸಂಪತ್ ಕುಮಾರ್, ಸಿಹಿಕಹಿ ಚಂದ್ರು ಇತರರು.

ಹೆಸರು ಗೌರಿ. ಅವನದು ಊರೂರು ಅಲೆದು ಹೊಟ್ಟೆಪಾಡಿಗೆ ಜನಪದ ಹಾಡಿ ಸಾರುವ ಜೋಗಿ ಕುಟುಂಬ. ಅಪ್ಪ ಜೋಳಿಗೆ ಹಿಡಿದು ಅಲೆದಾಡುವ ಜೋಗಯ್ಯ. ಹಾಸು ಹೊಕ್ಕಾಗಿರುವ ಬಡತನ. ಅಮ್ಮನಿಗೆ ಅರೆ ಕಿವುಡು. ಅವನಿಗೂ ಅಂಥದ್ದೇ ಸಮಸ್ಯೆ. ಅಪ್ಪನ ಕೋಪಕ್ಕೆ ಮಠ ಸೇರುವ ಗೌರಿ, ರಾಗವಾಗಿ ಹಾಡುವುದನ್ನು ಕಲಿಯುತ್ತಾನೆ. ಮುಂದಾ? ಕಥೆ ಹೇಳಿದರೆ ಮಜ ಇರಲ್ಲ ಒಂದೊಮ್ಮೆ ಗೌರಿ ದರ್ಶನ ಮಾಡಿದರೆ ಆಪ್ತ ಸಿನಿಮಾ ನೋಡಿದ ಭಾವ ನಿಮ್ಮದಾಗುತ್ತೆ.

ಇದೊಂದು ಸಂಗೀತ ಪ್ರಧಾನ ಸಿನಿಮಾ. ಆದರೂ ಇಲ್ಲಿ ಪ್ರೀತಿ, ಗೆಳೆತನ, ಮೋಸ, ದ್ವೇಷ, ತಾಯಿ ಮಮತೆ, ಸಾಧಿಸೋ ಛಲ, ಪಶ್ಚಾತ್ತಾಪ, ಕರುಣೆ, ಮರುಕ ಎಲ್ಲವೂ ಇದೆ. ಇವೆಲ್ಲವನ್ನೂ ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎನಿಸಿದರೂ ಅಲ್ಲೊಂದು ಮನಸಿಗೆ ನಾಟುವ ಅಂಶವಿದೆ. ಅದನ್ನು ಅಚ್ಚುಕಟ್ಟಾಗಿ ನಿರೂಪಿಸುವುದರ ಜತೆಗೆ ಎಲ್ಲೂ ಗೊಂದಲವಿಲ್ಲದ ರೀತಿ ತೆರೆ ಮೇಲೆ ತಂದಿದ್ದಾರೆ.

ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ಅಷ್ಟು ನೀಟ್ ಆಗಿ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಹೊಸ ಟ್ವಿಸ್ಟ್ ಗಳಿವೆ. ಸಣ್ಣ ಸಸ್ಪೆನ್ಸ್ ಕೂಡ ಇದೆ. ಅದೇ ಸಿನಿಮಾದ ಕುತೂಹಲ ಕೆರಳಿಸುತ್ತಾ ಹೋಗುತ್ತೆ.

ಇಲ್ಲಿ ತಾಯಿ ಸೆಂಟಿಮೆಂಟ್ ವರ್ಕೌಟ್ ಆಗಿದೆ. ಕಥೆಯಲ್ಲಿ ಗ್ರಾಮೀಣ ಭಾಗದ ಸ್ಪರ್ಶವಿದ್ದರೂ ಈಗಿನ ಟ್ರೆಂಡ್ ಗೆ ಬೇಕಾದ ಎಲಿಮೆಂಟ್ಸ್ ಹೇರಳವಾಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು.

ಇನ್ನು ಕೆಲವು ಕಡೆ ಬೇಡದ ಸನ್ನಿವೇಶಗಳಿವೆ. ಗೆಳೆಯರ ಬಳಗದಲ್ಲಿ ಒಂದು ಪಾತ್ರ ಏನೇನೋ ಡೈಲಾಗ್ ಹೇಳಿ ವಿನಾಕಾರಣ ಕಿರಿಕಿರಿ ಎನಿಸುತ್ತೆ. ಅದು ಬಿಟ್ಟರೆ, ಸಿನಿಮಾದಲ್ಲಿ ಅಷ್ಟೇನು ತಪ್ಪು ಕಾಣಿಸಲ್ಲ.

ಇಲ್ಲಿ ಹಾಡು ಮತ್ತು ಫೈಟ್ ಪ್ಲಸ್. ಚಿತ್ರದ ಮೂರು ಹಾಡುಗಳು ಗುನುಗುವಂತಿವೆ. ಜಬರ್ದಸ್ತ್ ಫೈಟ್ಚಕೂಡ ಖುಷಿ ಕೊಡುತ್ತೆ. ಸೆಕೆಂಡ್ ಹಾಫ್ ಸ್ವಲ್ಪ ಭಾವುಕತೆಗೆ ದೂಡುತ್ತೆ. ಉಳಿದಂತೆ ಒಂದೊಳ್ಳೆಯ ಫೀಲ್ ಕೊಡುವ ಸಿನಿಮಾ ಇದು.

ಯಾರು ಹೇಗೆ?

ಮೊದಲ ಬಾಲ್ ನಲ್ಲೇ ನಾಯಕ ಸಮರ್ಜಿತ್ ಲಂಕೇಶ್ ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಪ್ರತಿಭಾವಂತ ಯುವ ನಟನ ಆಗಮನವಾದಂತಾಗಿದೆ. ಮೊದಲ ಸಿನಿಮಾವಾದರೂ ಅನುಭವಿಯಂತೆ ಕಾಣುತ್ತಾರೆ. ಡ್ಯಾನ್ಸು, ಫೈಟು, ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪಕ್ಕಾ ಲವರ್ ಬಾಯ್ ಆಗಿ ನೆಲೆ ಕಾಣುವ ಲಕ್ಷಣಗಳಿವೆ.
ಸಾನ್ಯಾ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಾನಸಿ ಸುಧೀರ್, ಸಂಪತ್ ಕುಮಾರ್ ಇರುವಷ್ಟು ಕಾಲ ಕಾಡುತ್ತಾರೆ. ಮಾನಸಿ ಅವರ ನಟನೆ ಭಾವುಕತೆ ಹೆಚ್ಚಿಸುತ್ತದೆ.

ಇನ್ನು ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ ಕೈಚಳಕದಲ್ಲಿ ಗೌರಿ ಅಂದವಾಗಿ ಮೂಡಿಬಂದಿದೆ.
ಹಾಡುಗಳ ವಿಚಾರಕ್ಕೆ ಬಂದರೆ, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೇರಗಿ, ಅನಿರುದ್ ಶಾಸ್ತ್ರಿ ಇವರ ಕೆಲಸ‌ ಎದ್ದು ಕಾಣುತ್ತೆ.

ಒಂದು ಗಮನಿಸಬೇಕಾದ ವಿಷಯ ಅಂದರೆ, ಇಲ್ಲಿ ಅನಗತ್ಯ ದೃಶ್ಯವಿಲ್ಲ. ವಿನಾಕಾರಣ ಮಾತಿಲ್ಲ, ಕಥೆಯ ಚೌಕಟ್ಟು ಮೀರಿ ಏನೂ ಇಲ್ಲ. ಸದ್ಯ ಕನ್ನಡಕ್ಕೊಬ್ಬ ನಾಯಕ ನಟನ ಆಗಮನವಾಗಿದೆ ಅನ್ನೋದಂತೂ ಪಕ್ಕಾ.

Categories
ಸಿನಿ ಸುದ್ದಿ

ಜಿಎಸ್ ಟಿ ಇದು ಮೂರು ತಲೆಮಾರಿನ ಚಿತ್ರ: ಅಜ್ಜಿ ಮಗ ಮೊಮ್ಮಗನ ಸಿನಿಮಾ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ಮಾಡಿರುವ “GST” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಬಿನಿ ಬಳಿಯ ಸಂದೇಶ್ ಅವರ ಹೊಸ ರೆಸಾರ್ಟ್ ನಲ್ಲಿ ನಾಯಕ ಸೃಜನ್ ಹಾಗೂ ನಾಯಕಿ ರಜನಿ ಭಾರದ್ವಾಜ್ ನಟಿಸಿದ ಹಾಡೊಂದರ ಚಿತ್ರೀಕರಣ ಹಾಗೂ ಮೈಸೂರಿನಲ್ಲಿ ಸೃಜನ್ ಲೋಕೇಶ್, ಸಂಹಿತ ವಿನ್ಯ, ತಬಲನಾಣಿ, ಗಿರೀಶ್ ಶಿವಣ್ಣ, ವಿನೋದ್ ಗೊಬ್ಬರಗಾಲ ಮುಂತಾದವರು ಅಭಿನಯಿಸಿದ ಮತ್ತೊಂದು ಹಾಡಿನ ಚಿತ್ರೀಕರಣ ನಡೆದಿದೆ.

ಸೃಜನ್ ಲೋಕೇಶ್ ಹಾಗೂ ಚಂದನ್ ಶೆಟ್ಟಿ ಹಾಡುಗಳನ್ನು ಬರೆದಿದ್ದಾರೆ. ಮುರುಗಾನಂದ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಎರಡು ಹಾಡುಗಳ ಚಿತ್ರೀಕರಣದೊಂದಿಗೆ “ಜಿ ಎಸ್ ಟಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಎರಡು ಹಾಡುಗಳಿಗೂ ಮುರುಗಾನಂದ ಅವರು ಹಾರಾರ್ ಕಾಮಿಡಿ ಜಾನರ್ ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಿಜಿ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

“GST” ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಅವರು ಪ್ರಮುಖಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದ್ದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸಿದ್ದಾರೆ.

ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ “GST” ಚಿತ್ರಕ್ಕೆ “ಘೋಸ್ಟ್ ಇನ್ ಟ್ರಬಲ್” ಎಂಬ ಅಡಿಬರಹವಿದೆ.

ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.

Categories
ಸಿನಿ ಸುದ್ದಿ

ಗೌರಿ ಇದು ಗೋಲ್ಡನ್ ಹ್ಯಾಂಡ್ ಚಿತ್ರ: ಆಗಸ್ಟ್ 15ಕ್ಕೆ ರಿಲೀಸ್- ಸಮರ್ಜಿತ್ ಗೆ ಉಪ್ಪಿ ಸಾಥ್

ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿದೆ. ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ “ಗೌರಿ” ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪ್ರೀ ರಿಲೀಸ್ ಇವೆಂಟ್ ನಲ್ಲಿ ಫ್ಯಾಷನ್ ಶೋ ಸಹ ಆಯೋಜಿಸಲಾಗಿತ್ತು. ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಭಾಗಿಯಾಗಿದ್ದರು.

ಇಂದ್ರಜಿತ್‍ ಅವರದ್ದು ಗೋಲ್ಡನ್‍ ಹ್ಯಾಂಡ್‍ ಎಂದು ಮಾತನಾಡಿದ ಉಪೇಂದ್ರ ಅವರು, ಇಂದ್ರಜಿತ್, ದೀಪಿಕಾ ಪಡುಕೋಣೆ ಅವರನ್ನು ಇಲ್ಲಿ ಕರೆದುಕೊಂಡು ಬಂದು ಬ್ರೇಕ್‍ ಕೊಟ್ಟರು. ಈಗ ಅವರು ಇಂಟರ್‌ನ್ಯಾಷನಲ್‌ ಸ್ಟಾರ್ ಆಗಿದ್ದಾರೆ. ಇವರ ಮಗ ಯಾವುದಾದರೂ ದೃಷ್ಟೀಲಿ ಇಲ್ಲಿ ಇರ್ತಾನೆ ಅನಿಸುತ್ತಾ? ಬಾಲಿವುಡ್ ಗೊ, ಹಾಲಿವುಡ್ ಗೊ ಹೋಗೋ ತರಹ ಇದ್ದಾನೆ. ಅವನನ್ನು ಇಲ್ಲೇ ಇರಿಸಿಕೊಳ್ಳೋಕೆ ನಿಮ್ಮ ಕೈಲಿ ಸಾಧ್ಯ ಇದೆ.

ಈ ತರಹ ಹೊಸ ತಲೆಮಾರಿನವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕು ಅಂದರೆ ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯ. ಅದಕ್ಕೆ ನೀವೆಲ್ಲಾ ಚಿತ್ರ ನೋಡಬೇಕು. ಈ ಬ್ಯೂಟಿ ಮತ್ತು ಬುದ್ಧಿವಂತಿಕೆ ಮುಗ್ಧತೆಯಿಂದ ಬರುತ್ತದೆ. ಮುಗ್ಧತೆ ಇದೆಯಲ್ಲಾ ಅದೇ ಬ್ಯೂಟಿ. ಇವರ ಮುಖವನ್ನು ನೋಡಿ. ಇವರಿಗೆ ನಾನು ಹಾರೈಸುವುದು ಮುಖ್ಯವಲ್ಲ. ನೀವು ಹಾರೈಸಬೇಕು. ಫಸ್ಟ್ ಡೇ, ಫಸ್ಟ್ ಶೋ ಎಲ್ಲರೂ “ಗೌರಿ” ಸಿನಿಮಾ ನೋಡಿ. ಇವರ ಸಿನಿಮಾ ನೋಡಿದರೆ ನಮಗೂ ಖುಷಿ ಆಗುತ್ತೆ. ಇಂದ್ರಜಿತ್‍ ಅವರು ಶೋಮ್ಯಾನ್. ಈ ತರಹ ಕಾರ್ಯಕ್ರಮ ಮಾಡೋದಕ್ಕೆ ಅವರಿಂದಲೇ ಸಾಧ್ಯ. ಸಿನಿಮಾ ಸಹ ಅದೇ ರೀತಿ ಮಾಡಿರುತ್ತಾರೆ. ಕಾರ್ಯಕ್ರಮವನ್ನೇ ಹೀಗೆ ಮಾಡಿದ್ದಾರೆ, ಇನ್ನೂ ಸಿನಿಮಾ ಹೇಗೆ ಮಾಡಿರಬಹುದು ಯೋಚಿಸಿ ಎಂದರು.

ಸಮರ್ಜಿತ್‍ ಲವ್‍ಸ್ಟೋರಿಗಳಿಗೂ ಸೂಟ್ ಆಗುತ್ತಾನೆ, ಆ್ಯಕ್ಷನ್‍ ಚಿತ್ರಗಳಿಗೂ ಹೊಂದುತ್ತಾನೆ. ದೇಹವನ್ನೂ ಚೆನ್ನಾಗಿ ಬೆಳೆಸಿದ್ದಾನೆ. ಡ್ಯಾನ್ಸ್ ಸಹ ಮಾಡ್ತಾನೆ. ಜನ ಈಗಾಗಲೇ ಹೃತಿಕ್‍ ರೋಶನ್‍ ಅಂತ ಹೇಳೋಕೆ ಶುರು ಮಾಡಿದ್ದಾರೆ. ನೀನು ನಿನ್ನ ಮುಗ್ಧತೆಯನ್ನ ಉಳಿಸಿಕೋ ಸಾಕು. ಎಷ್ಟು ಮುಗ್ಧನಪ್ಪಾ ನೀನು. ಇಲ್ಲಿ ಮುಗ್ಧತೆ ಉಳಿಸಿಕೊಳ್ಳೋದು ಬಹಳ ಕಷ್ಟ. ಸ್ವಲ್ಪ ದಿನ ಚಿತ್ರರಂಗದಲ್ಲಿ ಇದ್ದರೆ ಸಾಕು, ನಾವೆಲ್ಲಾ ಬಹಳ ಕಿಲಾಡಿಗಳಾಗಿ ಬಿಡ್ತೀವಿ.

ಚಿಕ್ಕವರಾಗಿದ್ದಾಗ ಬಹಳ ಮುಗ್ಧರಾಗಿರುತ್ತೇವೆ. ಕೆಲವರು ವಯಸ್ಸಾದ ಮೇಲೂ ಹಾಗೇ ಇರುತ್ತಾರೆ. ಕೆಲವರು ಮಾತ್ರ ತಮಗೆ ಎಲ್ಲಾ ಗೊತ್ತು ಎಂದು ಕಳೆದುಕೊಂಡುಬಿಡುತ್ತಾರೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಸಮರ್ಜಿತ್ ಲಂಕೇಶ್ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.

ಸಿನಿಮಾ ಒಂದು ಕ್ರಿಯಾಶೀಲ ಮಾಧ್ಯಮ. ಪ್ರತಿ ಕ್ಷಣ ಯೋಚನೆ ಮಾಡಿ, ಏನಾದರೂ ಹೊಸತನ ತರುತ್ತಾರೆ ಎಂದರೆ ಅದು ಉಪೇಂದ್ರ. ಅವರು ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಅದೃಷ್ಟ. ಉಪ್ಪಿ ಸಾರ್ ಅವರು ತಮ್ಮ ಬುದ್ಧಿವಂತಿಕೆಯಿಂದ ಮತ್ತು ಕ್ರಿಯಾಶೀಲತೆಯಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಇವತ್ತು ಕನ್ನಡ ಚಿತ್ರರಂಗವನ್ನು ಜಗತ್ತಿಗೆ ತೆಗೆದುಕೊಂಡು ಹೋಗಿದ್ದಾರೆ.

‘ಎ’, ‘ಉಪೇಂದ್ರ’ ಮತ್ತು ‘ಸೂಪರ್’ ಚಿತ್ರಗಳನ್ನು ನಾವು ಯೋಚನೆ ಮಾಡೋಕೂ ಸಾಧ್ಯವಿಲ್ಲ. ನನ್ನ ಮಗ ‘ಉಪೇಂದ್ರ’ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದೆ, ಅವರು ಆಗಿನ ಕಾಲಕ್ಕೆ ಟೊರೋಂಟಿನೋ ಶೈಲಿಯ ಸಿನಿಮಾ ಮಾಡಿದ್ದರು ಎಂದು ಹೇಳುತ್ತಿದ್ದ.

ಆ ರೀತಿಯ ಯೋಚನೆ ಮಾಡೋದು ಅಸಾಧ್ಯ. ಅವರು ನಮ್ಮ ನಡುವೆ ಇದ್ದಾರೆ ಅನ್ನೋದು ನಮ್ಮ ಹೆಮ್ಮೆ ಎಂದು ಹೇಳಿ, ಉಪೇಂದ್ರ ಅವರಿಗೆ ಧನ್ಯವಾದ ತಿಳಿಸಿದ ಇಂದ್ರಜಿತ್ ಲಂಕೇಶ್, ಆಗಸ್ಟ್‌ 15 ರಂದು ಬಿಡುಗಡೆಯಾಗುತ್ತಿರುವ “ಗೌರಿ” ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ ಎಂದರು.

ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ತಮ್ಮ ಮೊದಲ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು.

Categories
ಸಿನಿ ಸುದ್ದಿ

ತಂಗಲಾನ್ ನಿರೀಕ್ಷೆಯ ಸಿನಿಮಾ: ವಿಕ್ರಮ್ ನಟನೆಯ ಈ ಚಿತ್ರ ಆ.15ಕ್ಕೆ‌ ರಿಲೀಸ್

ಜ್ಞಾನವೇಲ್ ರಾಜ್ ನಿರ್ಮಾಣದ,‌ ಪ.ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್‍ ಅಭಿನಯದ ‘ತಂಗಲಾನ್’ ಚಿತ್ರವು ಇದೇ ಆಗಸ್ಟ್ 15ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೆಜಿಎಫ್‍ನಲ್ಲಿ ನಡೆದಿರಬಹುದಾದ ಒಂದು ಕಾಲ್ಪನಿಕ ಕಥೆಯನ್ನು ಚಿತ್ರ ಮಾಡಿದ್ದಾರೆ “ಕಬಾಲಿ” ಖ್ಯಾತಿಯ ನಿರ್ದೇಶಕ ಪ. ರಂಜಿತ್‍. ಈ ಚಿತ್ರದಲ್ಲಿ ವಿಕ್ರಮ್, ಮಾಳವಿಕಾ ಮೋಹನನ್, ಪಾರ್ವತಿ, ಬ್ರಿಟಿಷ್‍ ನಟ ಡೇನಿಯಲ್‍ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡಲು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಕ್ರಮ್‍, ‘ನಾನು ಇದುವರೆಗೂ “ಅನ್ನಿಯನ್”, “ಪಿತಾಮಗನ್” ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ‘ತಂಗಲಾನ್‍’ ಚಿತ್ರಕ್ಕೆ ಹೋಲಿಸಿದರೆ ಅದು ಶೇ. 8ರಷ್ಟು ಮಾತ್ರ. ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಿತ್ರ. ಪ್ರತಿ ದೃಶ್ಯಕ್ಕೂ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಏಟು ಬಿದ್ದಿವೆ.

ರೊಮ್ಯಾಂಟಿಕ್‍ ದೃಶ್ಯಗಳು ಸಹ ಕಷ್ಟವಾಗಿತ್ತು. ನಾವು ನಮಗೆ ಗೊತ್ತಿಲ್ಲದ ಪಾತ್ರಗಳಾಗುವುದೇ ನಿಜವಾದ ಕಷ್ಟ. ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಏನಾಗಿದ್ದರಿಬಹುದು? ಆಗಿನ ಬುಡಕಟ್ಟು ಜನಾಂಗದವರು ಹೇಗಿದ್ದಿರಬಹುದು ಎಂದು ನಮಗೆ ಗೊತ್ತಿಲ್ಲ. ಹಾಗಾಗಿ, ಯಾವ ದೃಶ್ಯವೂ ಸುಲಭವಾಗಿರಲಿಲ್ಲ. ಇಲ್ಲಿ ನಾವು ಅವರ ತರಹ ನಟನೆ ಮಾಡಬೇಕು ಎಂಬುದಕ್ಕಿಂತ, ಅವರ ತರಹ ಇರಬೇಕಿತ್ತು. ಈ ಚಿತ್ರಕ್ಕಾಗಿ ಒಂದು ಶತಕದ ಹಿಂದಕ್ಕೆಹೋಗುವಂತಾಯಿತು ಎಂದು ತಿಳಿಸಿದರು.

ಈ ಚಿತ್ರದ ಪಾತ್ರಕ್ಕಾಗಿ ವಿಕ್ರಮ್‍ ಆರು ತಿಂಗಳ ತಯಾರಿ ನಡೆಸಿದಾರಂತೆ ಹಾಗೂ ತುಂಬಾ ತೂಕವನ್ನು ಕಳೆದುಕೊಂಡಿದಾರಂತೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲ್ಕೈದು ಗಂಟೆಗಳ ಕಾಲ ಮೇಕಪ್‍ ಹಾಕಿಕೊಳ್ಳಬೇಕಿತ್ತು ಎಂದು ಚಿತ್ರೀಕರಣ ಸಮಯದ ಅನುಭವವನ್ನು ವಿಕ್ರಮ್ ಹಂಚಿಕೊಂಡರು.

ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುವುದಕ್ಕೆ ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ದೊಡ್ಡ ಸ್ಫೂರ್ತಿ ಎಂದು ತಿಳಿಸಿದ ಚಿಯಾನ್ ವಿಕ್ರಮ್, ಉತ್ತಮ ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎನ್ನುವುದನ್ನು ಆ ಚಿತ್ರ ತೋರಿಸಿತು’ ಎಂದರು.

ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕ ಪ.ರಂಜಿತ್ ವಿವರಿಸಿದರು. “ನಾನು ಮತ್ತು ವರಲಕ್ಷ್ಮೀ” ಕನ್ನಡ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡ ನಟಿ ಮಾಳವಿಕ ಮೋಹನನ್ “ತಂಗಲಾನ್” ಚಿತ್ರದ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಹಾಲಿವುಡ್ ನಟ ಡೇನಿಯಲ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಚಿತ್ರ ಪ್ರತಿಷ್ಠಿತ ಕೆ.ವಿ‌.ಎನ್ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ‌.

Categories
ಸಿನಿ ಸುದ್ದಿ

ನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಚಾಲನೆ: ಸೆಟ್ ಬಾಯ್ ಕೈಯಲ್ಲಿ ಕ್ಲಾಪ್ ಮಾಡಿಸಿದ ಯಶ್

ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಸೆಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞರ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.


ಇದೊಂದು ರೀತಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬ.
ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ಟಾಕ್ಸಿಕ್ಸ್ ಮುಹೂರ್ತ ವೇಳೆ ಯಶ್ ಆಪ್ತರು ಭಾಗವಹಿಸಿದ್ದರು.

ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ ಗೆ ಮುಹೂರ್ತ ನೆರವೇರಿದ್ದು ವಿಶೇಷ.
ಎಚ್ ಎಮ್ ಟಿ ಫ್ಯಾಕ್ಟರಿಯಲ್ಲಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ನಡೆಸಲಾಗಿದೆ.
ಇಂದಿನಿಂದಲೇ ಟಾಕ್ಸಿಕ್ ಶೂಟಿಂಗ್ ನಲ್ಲಿ ರಾಕಿಭಾಯ್
ಭಾಗಿಯಾಗಿದ್ದಾರೆ.

ಮೂರು ವರ್ಷಗಳ ನಂತರ ಕೊನೆಗೂ ಯಶ್ ಅವರ 19 ಚಿತ್ರಕ್ಕೆ
ಚಾಲನೆ ದೊರೆತಿದೆ‌
ಟಾಕ್ಸಿಕ್ ಶುರುಮಾಡುವ ಮೊದಲೇ,ಸೂರ್ಯ ಸದಾಶಿವ ರುದ್ರ, ಮಂಜುನಾಥನ ದರ್ಶನ ಪಡೆದು ಬಂದಿದ್ದರು ನಟ ಯಶ್.

ಗೀತು ಮೋಹಮ್ ದಾಸ್ ನಿರ್ದೇಶನದ ,ಕೆವಿಎನ್ ಪ್ರೊಡಕ್ಷನ್ ಬ ಕೆ. ವೆಂಕಟ್ ನಾರಾಯಣ ನಿರ್ಮಾಣದಲ್ಲಿ ಈ ಸಿನಿಮಾ ಶುರುವಾಗುತ್ತಿದೆ.

Categories
ಸಿನಿ ಸುದ್ದಿ

ಪೆಪೆಯಲ್ಲಿ ಜೇನು ಕುರುಬ ಹಾಡು: ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ

ಪ್ರತಿ ಸಿನಿಮಾದಲ್ಲಿಯೂ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ.

ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್ ಅಡಿ ಚಿತ್ರ ಹಾಡೊಂದನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ.

ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ಈ ಹಾಡು ಸೂಕ್ತ ಉದಾಹರಣೆ.

ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮೂಡಿ ಬರ್ತಿರುವ ಪೆಪೆ ಒಂದು ರೀತಿ ಪರಿಪೂರ್ಣ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

error: Content is protected !!