ಚಿತ್ರ : ಗಣ
ನಿರ್ಮಾಣ: ಪಾರ್ಥು
ನಿರ್ದೇಶನ: ಹರಿಪ್ರಸಾದ್ ಜಕ್ಕ
ತಾರಾಗಣ: ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ಸಂಪತ್, ರವಿಕಾಳೆ, ರಮೇಶ್ ಭಟ್, ಶಿವು ಕೆ.ಆರ್.ಪೇಟೆ ಇತರರು.
ಆ ಮನೆಯಲ್ಲಿ ಲ್ಯಾಂಡ್ ಫೋನ್ ಇದೆ. ಆದರೆ ಫೋನ್ ಕನೆಕ್ಷನ್ ಇಲ್ಲ. ಆದರೂ ಫೋನ್ ರಿಂಗ್ ಆಗುತ್ತೆ. ಆಕೆ 1993ರ ಕಾಲಘಟ್ಟದಲ್ಲಿರುವ ಟೀಚರ್. ಅವನು 2022ರ ಫ್ಯೂಚರ್ ನಲ್ಲಿರೋನು. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಇಲ್ಲ. ಆದರೂ ಕನೆಕ್ಷನ್ ಇರದ ಆ ಫೋನ್ ನಲ್ಲಿ ಸಂಭಾಷಣೆ. ಆಕೆಯ ಕಾಲಘಟ್ಟದಲ್ಲಿ ನಡೆಯೋ ಘಟನೆಗಳೆಲ್ಲವೂ ಇವನಿಗೆ ಗೊತ್ತು. ಆದರೂ ಕೆಲ ಕೆಟ್ಟ ಘಟನೆ ತಡೆಯಬೇಕು ಅನ್ನೋ ಚಾಲೆಂಜ್ ಅವನದು. ಅದು ಹೇಗೆ? ಅದೇ ಈ ಸಿನಿಮಾದ ವಿಶೇಷತೆ. ಸಿನಿಮಾ ಆರಂಭದಲ್ಲಿ ಎತ್ತ ಸಾಗುತ್ತೆ, ಏನು ನಡೆಯುತ್ತೆ ಅನ್ನುವುದಕ್ಕೆ ಸ್ವಲ್ಪ ತಾಳ್ಮೆಯಿಂದಲೇ ಕೂತು ನೋಡಬೇಕು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ. ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಈ ಸಿನಿಮಾದ ವಿಶೇಷ ಗುಣ ಏನೆಂಬುದನ್ನು ಗಣ ಹೇಳುತ್ತಾ ಹೋಗುತ್ತಾನೆ. ಇತ್ತಿಚಿನ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ, ತಲೆಗೆ ಕೆಲಸ ಕೊಡುವ, ತುಂಬಾನೇ ತದೇಕಚಿತ್ತದಿಂದ ಆಲಿಸುವ ಸಿನಿಮಾ ಇದು. ಒಂದಿಷ್ಟು ಅತ್ತಿತ್ತ ಕಣ್ಣಾಯಿಸಿದರೆ, ಗಮನ ಬೇರೆಡೆ ಹರಿಬಿಟ್ಟರೆ, ಖಂಡಿತವಾಗಿಯೂ ಈ ಚಿತ್ರ ಅರ್ಥ ಆಗೋದು ಕಷ್ಟ. ಇದೊಂದು ರೀತಿ ನೋಡುಗರಿಗೆ ಬಿಗ್ ಟಾಸ್ಕ್. ಸರಿಯಾಗಿ ಗಮನಿಸಿದವರಿಗೆ ಮಾತ್ರ ಗಣ ಅರ್ಥವಾಗುತ್ತಾನೆ ಇಲ್ಲವಾದರೆ ಕಷ್ಟ ಕಷ್ಟ.

ಇದೊಂದು ಟೈಮ್ ಟ್ರಾವೆಲಿಂಗ್ ಎಳೆ ಹೊಂದಿರುವ ಕಥೆ. ಹಾಗಾಗಿ ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಬೇಕು. ಒಂದಂತೂ ನಿಜ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ನಿರ್ದೇಶಕರ ಕೆಲಸ. ಇಲ್ಲೊಂದಷ್ಟು ಹುಳಬಿಡುವ ಕೆಲಸ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಏನಾಗುತ್ತಿದೆ ಅನ್ನುವುದನ್ನು ಸ್ವಲ್ಪ ಅರ್ಥಮಾಡಿಕೊಂಡು ನೋಡಿದರೆ ಮಾತ್ರ ಗಣನ ಗುಣಗಾನ ಮಾಡಬಹುದು. ಆದರೂ, ಈ ಸಿನಿಮಾ ನೋಡಿದವರಿಗೆ ತಮಿಳಿನ ಮಾರ್ಕ್ ಆಂಟೋನಿ ಸಿನಿಮಾ ನೆನಪಾಗುತ್ತೆ. ಕಥೆ ಅದೇ ಅಲ್ಲ, ಆದರೆ, ಒಂದಷ್ಟು ಸಾಮ್ಯತೆ ಎನಿಸುತ್ತೆ. ಕನ್ನಡಕ್ಕೆ ಇದು ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು ಎನಿಸುತ್ತೆ.
ಇಲ್ಲಿ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ ನೋಡುಗರನ್ನು ಒಂದಷ್ಟು ಗೊಂದಲ ಉಂಟು ಮಾಡುತ್ತಾರೆ ನಿರ್ದೇಶಕರು. ಅವರ ಪ್ರಕಾರ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ, ಕ್ಲ್ಯೆಮ್ಯಾಕ್ಸ್ ನಲ್ಲಿ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡುತ್ತಾರೆ. ಆರಂಭದಲ್ಲಿ ಸಿನಿಮಾ ಮಂದಗತಿ ಎನಿಸುತ್ತಾದರೂ, ದ್ವಿತಿಯಾರ್ಧ ಸಿನಿಮಾ ವೇಗ ಹೆಚ್ಚಿಸುತ್ತೆ. ಒಂದು ಕಾಲದಿಂದ ಇನ್ನೊಂದು ಕಾಲದ ಪಯಣದ ಕಥೆ ಇಲ್ಲಿದೆ. ಟೈಮ್ ಟ್ರಾವೆಲಿಂಗ್ ಸ್ಟೋರಿ ಇದಾಗಿರುವುದರಿಂದ ಇಲ್ಲಿ 1993ರಲ್ಲಿ ನಡೆದ ಘಟನೆ 2022 ರಲ್ಲೂ ಕನೆಕ್ಟ್ ಆಗುತ್ತಾ ಹೋಗುತ್ತೆ. ಒಂದು ಫೋನ್ ಕಾಲ್ ನಲ್ಲಿ ವಿಚಿತ್ರ ಸನ್ನಿವೇಶಗಳು ನಡೆಯುತ್ತಾ ಹೋಗುತ್ತವೆ.

ಅದನ್ನು ಅರ್ಥ ಮಾಡಿಕೊಳ್ಳೋದೇ ದೊಡ್ಡ ಟಾಸ್ಕ್. ನೋಡುಗರಿಗೆ ಅಷ್ಟೊಂದು ದೊಡ್ಡ ಟಾಸ್ಕ್ ಕೊಟ್ಟ ನಿರ್ದೇಶಕರು ಸ್ವಲ್ಪ ಗೊಂದಲ ಎಬ್ಬಿಸೋದು ನಿಜ. ಆದರೂ, ಇದೊಂದು ಗುಡ್ ಥಾಟ್ ಸಿನಿಮಾ. ಅರ್ಥ ಮಾಡಿಕೊಂಡರೆ ಇದೊಂದು ಒಳ್ಳೆಯ ಪ್ರಯೋಗದ ಸಿನಿಮಾ ಅನಿಸುತ್ತೆ. ಹಾಗಂತ ಇದನ್ನು ಕಮರ್ಷಿಯಲ್ ಸಿನಿಮಾ ಅಲ್ಲ ಅಂದುಕೊಳ್ಳುವಂತಿಲ್ಲ. ಇಲ್ಲೂ ಲವ್ ಇದೆ, ಫೈಟ್ ಇದೆ. ಎಮೋಷನ್ಸ್ ಇದೆ. ಅಲ್ಲಲ್ಲಿ ಸ್ವಲ್ಪ ನಗು ತರದ ಹಾಸ್ಯವೂ ಇದೆ. ಹೆಚ್ಚಾಗಿ ಸಿನಿಮಾ ನೋಡಿಸಿಕೊಂಡು ಹೋಗುವ ತಾಕತ್ತು ಹೊಂದಿದೆ. ಆದರೆ, ಅರ್ಥೈಸಿಕೊಳ್ಳಬೇಕಷ್ಟೆ.
ಕಥೆ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಫಸ್ಟ್ ಹಾಫ್ ಬಂದಿರುತ್ತೆ. ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟ್ ಗಳೊಂದಿಗೆ ಸಾಗುವ ಸಿನಿಮಾದಲ್ಲಿ ಒಂದಷ್ಟು ಏರಿಳಿತಗಳು ಎದುರಾಗುತ್ತವೆ. ಅದನ್ನು ದಾಟಿಕೊಂಡು ಹೋಗುವಷ್ಟರಲ್ಲಿ ಅಂತ್ಯವಾಗುತ್ತೆ. ಸಿನಿಮಾದಲ್ಲಿ ವಿನಾಕಾರಣ ಹಾಡು ಬಂದು ಗೊಂದಲ ಎಬ್ಬಿಸಲ್ಲ. ಬೇಕಂತನೇ ಫೈಟ್ ಎದುರಾಗಲ್ಲ. ಎಲ್ಲವೂ ಕಥೆಗೆ ಪೂರಕವೆನಿಸುತ್ತೆ. ಆದರೂ, ಕೆಲವೊಂದು ಹೊಡೆದಾಟ ಅನಗತ್ಯ ಎನಿಸದಿರದು. ಕಥೆಯಲ್ಲೇನೂ ಗೊಂದಲ ಇಲ್ಲ. ಆದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ಹಿಡಿತ ಇರಬೇಕಿತ್ತು. ಇನ್ನಷ್ಟು ರೋಚಕವಾಗಿ ತೋರಿಸಲು ಅವಕಾಶವಿತ್ತು. ಅದಿಲ್ಲಿ ಸಾಧ್ಯವಾಗಿಲ್ಲ.

ಕಥೆ ಇಷ್ಟು…
ಆರಂಭದಲ್ಲಿ ಎರಡು ಮರ್ಡರ್ ಆಗುತ್ತೆ. ಅದು 1993ರಲ್ಲಿ ಆಗುವ ಕೊಲೆ. 2022ರಲ್ಲಿ ಎರಡು ಅಸ್ತಿಪಂಜರ ಸಿಕ್ಕು ದೊಡ್ಡ ನ್ಯೂಸ್ ಆಗುತ್ತೆ. ಗಣ ಇಲ್ಲಿ ಟಿವಿಯೊಂದರ ಜರ್ನಲಿಸ್ಟ್. ಬ್ರೇಕಿಂಗ್ ನ್ಯೂಸ್ ಕೊಡುವ ಗಣ, ಎರಡು ಅಸ್ತಿಪಂಜರದ ಮುಂದೆ ನಿಂತು ಅದು ಕೊಲೆ ಅನ್ನುತ್ತಾನೆ, ಅಷ್ಟೇ ಅಲ್ಲ, ಅದು ಗಂಡು, ಹೆಣ್ಣು ಅಂತಾನೂ ಹೇಳ್ತಾನೆ. ಮೂರು ದಶಕಗಳ ಹಿಂದೆ ಆಗಿರುವ ಘಟನೆಯನ್ನು ಕೊಲೆ ಅಂತ ಹೇಳುವ ಅವನಿಗೆ ದೊಡ್ಡ ಟಾಸ್ಕ್ ಅದಾಗುತ್ತೆ. ಕೊಲೆಯಾದ ಟೀಚರ್ ಒಬ್ಬರ ಜೊತೆಗೆ ಲ್ಯಾಂಡ್ ಫೋನ್ ನಲ್ಲಿ ಮಾತಾಡೋಕೆ ಶುರುವಾಗ್ತಾನೆ! ಅದೊಂದು ಎನರ್ಜಿ ಪಾಸ್ ಆಗುವ ವ್ಯಕ್ತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಪಯಣಿಸುತ್ತಾನೆ. 1993 ರಲ್ಲಿ ಕೊಲೆಯಾದವರ ಜೊತೆ ಸಂಪರ್ಕ ಬೆಳೆಸುವ ಆತ, ಮುಂದೆ ಅವರನ್ನು ಕಾಪಾಡುವ ಹಂತಕ್ಕೂ ಹೋಗ್ತಾನೆ. ಆ ಕಾಲದದಲ್ಲಿ ನಡೆದ ಘಟನೆ ಫ್ಯೂಚರ್ ಗೂ ಹೇಗೆ ಟಚ್ ಆಗುತ್ತೆ. ಅದೆಲ್ಲಾ ಸಾಧ್ಯನಾ? ಅದೇ ಟೈಮ್ ಟ್ರಾವೆಲಿಂಗ್ ಸ್ಟೋರಿಯ ವಿಶೇಷ. ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಪ್ರಜ್ವಲ್ ದೇವರಾಜ್ ಇಲ್ಲಿ ಗಮನಸೆಳೆಯುತ್ತಾರೆ. ಹೊಡೆದಾಟದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆ ಪಾತ್ರಕ್ಕೆ ಇನ್ನಷ್ಟು ಧಮ್ ಕಟ್ಟಬೇಕಿತ್ತು. ಯಶ ಅವರು ಚೆನ್ನಾಗಿ ಕಾಣುತ್ತಾರೆ ಅನ್ನೋದು ಬಿಟ್ಟರೆ, ಅಷ್ಟೇನು ಗಮನ ಸೆಳೆಯಲ್ಲ. ವೇದಿಕಾ ಸಿನಿಮಾದ ಹೈಲೆಟ್. ಉಳಿದಂತೆ ರವಿಕಾಳೆ ವಿಶೇಷ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ರಮೇಶ್ ಭಟ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಸಂಪತ್ ಇಲ್ಲಿ ನೆಗೆಟಿವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಶಿವು ಕೆ.ಆರ್.ಪೇಟೆ ಪಾತ್ರ ಹಾಸ್ಯವಾಗಿದ್ದರೂ, ಅವರು ನಗಿಸೋಕೆ ಕಷ್ಟಪಟ್ಟಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಸಿಕ್ಕ ಪಾತ್ರಕ್ಕೆ ತಕ್ಕಮಟ್ಟಿಗೆ ನ್ಯಾಯ ಸಲ್ಲಿಸಿವೆ.
ಇನ್ನು, ಜೈ ಆನಂದ್ ಛಾಯಾಗ್ರಾಹಣದಲ್ಲಿ ಗಣ ಅಂದವಾಗಿದ್ದಾನೆ. ಅನೂಪ್ ಸೀಳಿನ್ ಸಂಗೀತದ ಹಾಡು ಗುನುಗುವಂತೇನಿಲ್ಲ. ಹಿನ್ನೆಲೆ ಸಂಗೀತದ ಬಗ್ಗೆ ಹೇಳದಿರುವುದೇ ಒಳಿತು. ಇಂತಹ ಕಥೆಗೆ ಬೇಕಾದ ಬಿಜಿಎಂ ಕೊಡುವಲ್ಲಿ ಅವರು ಹಿಂದುಳಿದಿದ್ದಾರೆ. ಸಂಕಲನ ಚಿತ್ರದ ವೇಗವನ್ನು ಎತ್ತಿಹಿಡಿದಿದೆ ಎನ್ನಬಹುದು.