ಚಿತ್ರ ವಿಮರ್ಶೆ: ರೇಟಿಂಗ್ 3.5/5
ನಿರ್ಮಾಣ : ಎನ್ ಎಂ ಕಾಂತರಾಜ್
ನಿರ್ದೇಶನ : ಚಂದ್ರಮೋಹನ್
ತಾರಾಗಣ: ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಅರ್ಚನ ಕೊಟ್ಟಿಗೆ, ಶರಣ್ಯ ಶೆಟ್ಟಿ ಇತರರು.
ಕಾಡು, ನಿಧಿ, ಶೋಧ ಮತ್ತು ಐವರು. ಇದು ಸಿನಿಮಾದ ಹೈಲೆಟ್. ಇದೊಂದು ಶೋಧಕ್ಕೆ ಹೊರಡುವವರ ಕಥೆ. ಅಲ್ಲಿ ಆತಂಕವಿದೆ. ನಗೆ ಇದೆ. ಅಚ್ಚರಿ ಇದೆ. ಆಗಾಗ ಚಕಿತಗೊಳಿಸುವ ಅಂಶಗಳೂ ಇವೆ. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ನೋಡಿಸಿಕೊಂಡು ಹೋಗುವ ಸಿನಿಮಾ ಇದು ಎಂದೆನಿಸದಿರದು.
ಇಲ್ಲಿ ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಮತ್ತು ಅರ್ಚನಾ ಕೊಟ್ಟಿಗೆ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. ಈ ಐವರು ನಿಧಿಯ ಶೋಧನೆಗೆ ಕಾಡೊಳಗೆ ಎಂಟ್ರಿ ಕೊಡ್ತಾರೆ. ಯಾವ ನಿಧಿ, ಇಧಿ ಸಿಗುತ್ತಾ, ಅಲ್ಲಿ ಏನಾಗುತ್ತೆ ಎಂಬ ಕುತೂಹಲಕ್ಕೆ ಒಂದೊಮ್ಮೆ ಸಿನಿಮಾ ನೋಡಬಹುದು.

ಈ ಐವರಲ್ಲೊಬ್ಬ ಕಿವಿ ಕೇಳದ ಹುಡುಗ. ಅವನಿಗೆ ಕಾಡೊಳಗೆ ಯಾಕೆ ಹೋಗುತ್ತಿದ್ದೇವೆ ಅನ್ನುವ ಪರಿವಿಲ್ಲ. ಹಾಗಾಗಿಯೇ ಕೆಲ ಸಂದರ್ಭ ಅಪಾರ್ಥ ವಾಗಿ ಬರುವ ಮಾತುಗಳು ನಗೆ ಎಬ್ಬಿಸುತ್ತವೆ.
ಕಾಡು ಅಂದಾಕ್ಷಣ ಪ್ರಾಣಿ ಭಯ ಭೀತಿ ಕಾಮನ್. ಆದರೆ ಇಲ್ಲಿ ಯಾವ ಘಟನೆ ಕೂಡ ನಡೆಯಲ್ಲ. ಆದರೂ ಸನ್ನಿವೇಶ ಮಾತುಗಳು ನೋಡುಗರಲ್ಲಿ ನಗೆ ಹುಟ್ಟಿಸುತ್ತವೆ. ಮಾತುಕತೆಯಲ್ಲೇ ಫಸ್ಟ್ ಹಾಫ್ ಮುಗಿಯುತ್ತೆ. ಅದು ಹೋಗೋದೇ ಗೊತ್ತಾಗಲ್ಲ ಅಷ್ಟೊಂದು ನೀಟ್ ಆಗಿ ನೋಡುಗರನ್ನು ರಂಜಿಸುತ್ತಾ ಕರೆದುಕೊಂಡು ಹೋಗುವಲ್ಲಿ ನಿರ್ದೇಶಕರು ಇಷ್ಟವಾಗುತ್ತಾರೆ.

ಹೇಗೋ ಅವರು ಹೋಗುವ ಸ್ಥಳ ಬರುತ್ತೆ. ಅಲ್ಲೊಂದು ಟ್ವಿಸ್ಟ್ ಕೂಡ ಇದೆ. ಅಂತಹ ಕಾಡೊಳಗೆ ಒಬ್ಬಾತನ ದರ್ಶನ. ಇವರೆಲ್ಲರಿಗೂ ಅಲ್ಲೊಂದು ಭೀತಿ ಶುರುವಾಗುತ್ತೆ. ಮುಂದೇನಾಗಿತ್ತೆ ಅನ್ನೋದೇ ಮಜ.
ಅಲ್ಲೊಂದು ವಿಪರೀತ ಭಯಾನಕ ಎನಿಸೋ ದುಷ್ಟಶಕ್ತಿ. ಆದರೆ ಅವರಿಗೆ ಅದು ಅಪಾಯ ತಂದೊಡ್ಡುತ್ತೋ ಇಲ್ಲವೋ ಅನ್ನೋದು ಸಸ್ಪೆನ್ಸ್.
ನೋಡಿದವರಿಗೆ ಅವರು ಪಾಪ ಅನಿಸುತ್ತೆ. ಇಡೀ ಕಥೆ ಥ್ರಿಲ್ ಜೊತೆ ಮನರಂಜನೆಗೆ ಕರೆದೊಯ್ಯುತ್ತೆ. ಅಷ್ಟಾದರೂ ಅವರಿಗೆ ನಿಧಿ ಸಿಗುತ್ತಾ ಎಂಬ ಪ್ರಶ್ನೆ ಕೊನೆಯವರೆಗೂ ಕಾಡುತ್ತೆ. ನಿಧಿಗಾಗಿ ಅಲ್ಲೊಂದು ಘಟನೆ ನಡೆಯುತ್ತೆ ಅದನ್ನು ನೋಡುವುದಕ್ಕಾದರೂ ಒಮ್ಮೆ ಫಾರೆಸ್ಟ್ ಒಳ ಹೊಕ್ಕಿ ಬರಬಹುದು.

ರಂಗಾಯಣ ರಘು ಹಾಗೂ ಚಿಕ್ಕಣ್ಣ ಇಬ್ಬರ ಹಾಸ್ಯ ಮೋಡಿ ಮಾಡಿದೆ. ಅನೀಶ್, ಗುರುನಂದನ್, ಅರ್ಚನಾ ನಟನೆಯಲ್ಲಿ ಹಿಂದೆ ಉಳಿದಿಲ್ಲ. ಎಲ್ಲರೂ ಸಿಕ್ಕ ಪಾತ್ರಕ್ಕೆ ನ್ಯಾಯ ತುಂಬಿದ್ದಾರೆ.
ಧರ್ಮವಿಶ್ ಅವರ ಹಿನ್ನೆಲೆ ಸಂಗೀತ ಇಲ್ಲಿ ಮಾತಾಡುವಂತಿದೆ. ಇಡೀ ಸಿನಿಮಾದ ಫಾರೆಸ್ಟ್ ಒಳಗಿನ ಆತಂಕವನ್ನು ಭೀತಿಯನ್ನು ಹೆಚ್ಚಿಸಲು ಸಂಗೀತ ಕಾರಣ.
ಇಲ್ಲಿ ಪ್ಲಸ್ ಮೈನಸ್ ಅಂಶಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಒಂದೊಳ್ಳೆಯ ಮನರಂಜನೆಯ ಸಿನಿಮಾ ಎನಿಸಿಕೊಳ್ಳುತ್ತೆ.