ಸಂಬಂಜ ಅನ್ನೋದು ದೊಡ್ಡದು ಕನಾ…
ಈ ಪದಗಳೊಮ್ಮೆ ಕಿವಿಗಪ್ಪಳಿಸಿದರೆ, ನೆನಪಾಗೋದೇ ದೇವನೂರು ಮಹಾದೇವ ಅವರು. ಹೌದು ಅವರ ಜನಪ್ರಿಯಗೊಂಡ “ಕುಸುಮ ಬಾಲೆ” ಪುಸ್ತಕದೊಳಗಿರುವ ಮರೆಯದ ಸಾಲುಗಳಿದು. ಇಷ್ಟಕ್ಕೂ ಈ ದೇವನೂರು ಮಹಾದೇವ ಅವರ ಪುಸ್ತಕದೊಳಗಿರುವ “ಸಂಬಂಜ ಅನ್ನೋದು ದೊಡ್ಡದು ಕನಾ…ʼ ಚಿತ್ರವೊಂದರ ಟ್ಯಾಗ್ ಲೈನ್. ಅ ಚಿತ್ರ ಬೇರಾವೂದೂ ಅಲ್ಲ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಸದ್ದಿಲ್ಲದೆಯೇ ಶೂಟಿಂಗ್ ಮುಗಿಸಿ, ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದಿರುವ “ಡಿ ಎನ್ ಎ” ಸಿನಿಮಾ.
ಹೌದು, ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಹೊಸ ರೀತಿಯ ನಿರೂಪಣೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು, ಭಾವನಾತ್ಮಕ ಸಂಬಂಧಗಳ ನಡುವಿನ ಕಥಾಹಂದರ ಹೊಂದಿದೆ. ಪ್ರಸ್ತುತ ದಿನಮಾನದಲ್ಲಿ ನಡೆಯುವ ವಿಷಯಗಳೇ ಚಿತ್ರದ ಹೈಲೈಟ್. ಜಾತಿ,ಧರ್ಮಗಳ ಹೆಸರಿನಲ್ಲಿ ಮನಷ್ಯ-ಮನಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ, ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೆ? ಭಾವನಾತ್ಮಕ ಸಂಬಂಧವೆ? ಅನ್ನುವ ವಿಷಯವನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಪ್ರಕಾಶ್ ರಾಜು ಮೇಹು. ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಸಿನಿಮಾರಂಗದ ಕೆಲ ಗೆಳೆಯರು, ಅಪ್ತರು, ತಂತ್ರಜ್ಞರು, ಚಿತ್ರದೊಳಗಿರುವ ಅಂಶಗಳ ಬಗ್ಗೆ, ನಿರ್ದೇಶಕರ ಆಲೋಚನೆಗಳ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ವೀಕ್ಷಿಸಿ, ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡುವುದರ ಜೊತೆಗೆ ಚಿತ್ರದೊಳಗಿರುವ ತಾಕತ್ತಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಬಂಧಗಳ ಮೌಲ್ಯಗಳಿರುವ ಕಥೆಯಲ್ಲಿ ಭಾವುಕತೆಯೇ ತುಂಬಿದೆ. ಹಾಗಾಗಿ, ಇದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಸಿನಿಮಾ ಇದಾಗಲಿದೆ ಎಂಬುದು ಅವರ ಮಾತು.
ಅದೇನೆ ಇರಲಿ, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಸಮಸ್ಯೆಯಿಂದ ಇಡೀ ಚಿತ್ರರಂಗವೇ ಸ್ಥಬ್ಧಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರರಂಗ ಚೇತರಿಸಿಕೊಂಡು, ಪುನಃ ಮೊದಲಿನಂತೆಯೇ ರಂಗೇರಲಿದೆ. “ಡಿಎನ್ಎ” ಕೂಡ ಬಿಡುಗಡೆಗೆ ಎದುರು ನೋಡುತ್ತಿದೆ. ಸದ್ಯ ಚಿತ್ರಮಂದಿರಕ್ಕೆ ದೊಡ್ಡ ಸಿನಿಮಾಗಳು ಅಪ್ಪಳಿಸಿದ ಬಳಿಕ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.