ಅಭಿಮಾನಿ ದೇವರಿಗೆ ಭರಪೂರ ಸ್ವಾಗತ

ಆಕ್ಟ್-‌1978 ನೋಡಲು ಬಂದ ಸಿನಿ ಪ್ರೇಮಿಗೆ ಗುಲಾಬಿ ಹೂವಿನ ಗೌರವ

 

ಅಂತೂ ಇಂತೂ “ಆಕ್ಟ್‌ -1978”  ಚಿತ್ರ ನೋಡುಗರಲ್ಲಿ ಖುಷಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ಶುಭ ಶುಕ್ರವಾರ ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್‌ ಕೂಡ ಪಡೆದುಕೊಂಡಿದೆ. ಎಲ್ಲೆಡೆ “ಆಕ್ಟ್‌ – 1978” ಚಿತ್ರದ್ದೇ ಮಾತು. ನಿರ್ದೇಶಕ ಮಂಸೋರೆ ಅವರ ಹೊಸ ಆಲೋಚನೆಯ ಕಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಜನರು ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಒಂದು ಸಿನಿಮಾದ ಕಥೆ ಚೆನ್ನಾಗಿದ್ದರೆ, ಅದರ ನಿರೂಪಣೆ ಸೊಗಸಾಗಿದ್ದರೆ, ಹೇಳುವ ಶೈಲಿ ಅದ್ಭುತವಾಗಿದ್ದರೆ, ತೋರಿಸುವ ರೀತಿ ಸರಿಯಾಗಿದ್ದರೆ, ಜನರು ಖಂಡಿತವಾಗಿಯೂ ಯಾವತ್ತೂ ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಈಗ “ಆಕ್ಟ್‌ 1978” ಚಿತ್ರವನ್ನೂ ಪ್ರೇಕ್ಷಕ ಮನಸಾರೆ ಒಪ್ಪಿಕೊಂಡಿದ್ದಾನೆ.

 

ಚಿತ್ರಮಂದಿರಗಳಿಂದ ಹೊರಬರುವ ಪ್ರೇಕ್ಷಕನಲ್ಲಿ ಅದೇನೋ ಪುಳಕ. ಏನೋ ಸಾಧಿಸಿದ ಖುಷಿ. ತಾನು ಅನುಭವಿಸಿದ ನೋವನ್ನುತೆರೆಯ ಮೇಲೆ ಕಂಡಷ್ಟೇ ಆನಂದಭಾಷ್ಪ. ಅದೆಲ್ಲವನ್ನೂ ಅಷ್ಟೇ ಸೊಗಸಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ ಅವರ ಕೆಲಸವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚುತ್ತಿದ್ದಾನೆ. ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ, ಅಭಿಮಾನಿಗಳೇ ನಮ್ಮ ದೇವರು ಅಂತ ಬಂದ ಪ್ರತಿಯೊಬ್ಬ ಸಿನಿಪ್ರೇಮಿಗೂ ಗುಲಾಬಿ ಹೂವು ಕೊಡುವ ಮೂಲಕ ಕೈಮುಗಿದು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುತ್ತಿದೆ.

 

ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲೂ ಕೂಡ “ಆಕ್ಟ್‌ 1978”  ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಚಿತ್ರತಂಡದ ಸದಸ್ಯರು ಬಾಗಿಲು ಬಳಿ ನಿಂತು, ಅಭಿಮಾನಿಗಳೇ ನಮ್ಮ ದೇವರು ಎಂದು ಕೈಮುಗಿದು ಬರಮಾಡಿಕೊಳ್ಳುವ ರೀತಿಗೆ ಪ್ರೇಕ್ಷಕ ಕೂಡ ಫಿದಾ ಆಗಿದ್ದಾನೆ.

ಇನ್ನು, ಚಿತ್ರಮಂದಿರ ಒಳಹೊಕ್ಕ ಪ್ರೇಕ್ಷಕ ಸಿನಿಮಾ ನೋಡಿದ ಮೇಲೆ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಬಂದು ಭಾರದ ನಿಟ್ಟುಸಿರು ಬಿಟ್ಟು, ಸಿನಿಮಾಗೆ ಜಯವಾಗಲಿ ಎನ್ನುತ್ತಿದ್ದಾನೆ. ಅಂತೂ ಒಂದೊಳ್ಳೆಯ ಕಥೆ ಹೆಣೆದು, ವಾಸ್ತವ ಅಂಶಗಳನ್ನು ಜನರ ಮುಂದಿಟ್ಟ ಮಂಸೋರೆ ಅಂಡ್‌ ತಂಡಕ್ಕೆ ಭರಪೂರ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

 

 

Related Posts

error: Content is protected !!