ಆಕ್ಟ್‌ನ ಜೋರು ಸುದ್ದಿಯ ಹಿಂದೆ ಬಕ್ಕೇಶ್‌ ಸಂಗೀತದ ಸದ್ದು!

ಹಿನ್ನೆಲೆ ಸಂಗೀತಕ್ಕೆ ದಾವಣಗೆರೆ ಹುಡುಗನ ಕೈಚಳಕ

ಯಶಸ್ವಿ ಸಿನಿಮಾಗೆ ಬ್ಯಾಕ್‌ ಗ್ರೌಂಡ್‌ ಸ್ಕೋರ್‌ ಮಾಡಿದ ತೃಪ್ತಿ

ಈ ಸಿನಿಮಾರಂಗವೇ ಹಾಗೆ. ಇಲ್ಲಿ ತೆರೆಮೇಲೆ ಕಾಣಿಸಿಕೊಂಡವರು ಮಾತ್ರ ಹೈಲೈಟ್‌ ಆಗೋದು ಸಹಜ. ಅದೇ ತೆರೆಯ ಹಿಂದೆ ರಾತ್ರಿ-ಹಗಲು ದುಡಿದವರು ಬೆಳಕಿಗೆ ಬರೋದು ಕೊಂಚ ಕಷ್ಟ. ಬೆಳಕಿಗೆ ಬಂದರೂ, ನಂತರದ ದಿನಗಳಲ್ಲಿ ಫೋಕಸ್‌ ಆಗೋದು ಇನ್ನೂ ಕಷ್ಟ. ಅದೆಷ್ಟೋ, ಸಕ್ಸಸ್‌ಫುಲ್‌ ಸಿನಿಮಾಗಳ ಹಿಂದೆ ಸದ್ದಿಲ್ಲದೆಯೇ ಕೆಲಸ ಮಾಡಿದ ತಾಂತ್ರಿಕವರ್ಗದವರಿದ್ದಾರೆ. ಸಿನಿಮಾ ಜೋರು ಸದ್ದು ಮಾಡಿದಾಗಲಷ್ಟೇ ಅವರ ಕೈಚಳಕದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ. ಅಂದಹಾಗೆ, ಇಲ್ಲೀಗ ಹೇಳಹೊರಟಿರುವ ವಿಷಯ ಕೂಡ ಒಂದು ಸಕ್ಸಸ್‌ಫುಲ್‌ ಸಿನಿಮಾದ ಹಿಂದೆ ತನ್ನ ಪಾಡಿಗೆ ತಾನು ಮಾಡಿಕೊಂಡಿರುವ ಸಂಗೀತ ನಿರ್ದೇಶಕನ ಬಗ್ಗೆ. ಹೌದು, “ಆಕ್ಟ್ ೧೯೭೮” ಎಲ್ಲೆಡೆ ಜೋರು ಸೌಂಡು ಮಾಡುತ್ತಿರೋದು ಗೊತ್ತೇ ಇದೆ. ಆ ಸೌಂಡು ಮಾಡಿದ ಚಿತ್ರಕ್ಕೆ ಹಿನ್ನೆಲೆಯ ಸೌಂಡು ಮಾಡಿದ್ದು ಬೇರಾರೂ ಅಲ್ಲ, ಅದು ರೋಣದ ಬಕ್ಕೇಶ್.‌

ರೋಣದ ಬಕ್ಕೇಶ್‌, ಸಂಗೀತ ನಿರ್ದೇಶಕ

ಮಂಸೋರೆ ನಿರ್ದೇಶನದ ” ಆಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು ಇದೇ ರೋಣದ ಬಕ್ಕೇಶ್.‌ ಸಿನಿಮಾ ನೋಡಿದ ಬಹುತೇಕರ ಸಿನಿಪ್ರಿಯರು, ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಹಾಗೂ ಸಂಗೀತ ಕುರಿತು ಮಾತನಾಡುತ್ತಿದ್ದಾರೆ. ಒಂದೊಳ್ಳೆಯ ಚಿತ್ರಕ್ಕೆ ಅಷ್ಟೇ ಪೂರಕ ಎಂಬಂತಹ ಹಿನ್ನೆಲೆ ಸಂಗೀತ ಕೊಡುವ ಮೂಲಕ ಆ ಯಶಸ್ವಿ ಸಿನಿಮಾದ ಒಂದು ಭಾಗವಾಗಿರೋದು ಈ ಯುವ ಸಂಗೀತ ನಿರ್ದೇಶಕ ರೋಣದ ಬಕ್ಕೇಶ್. ಇಷ್ಟಕ್ಕೂ ಈ ರೋಣದ ಬಕ್ಕೇಶ್‌ ಯಾರು? ಎಲ್ಲಿಯವರು, ಅವರ ಹಿನ್ನೆಲೆ ಏನು ಎಂತ ಕುರಿತು ಸ್ವತಃ ರೋಣದ ಬಕ್ಕೇಶ್‌ ಅವರೇ “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.

“ಬೆಣ್ಣೆದೋಸೆ ನಗರಿ ದಾವಣಗೆರೆ ನನ್ನೂರು. ಬಿಸಿಎ ಮತ್ತು ಎಂಸಿಎ ಓದು ಮುಗಿಸಿ ಬೆಂಗಳೂರಿಗೆ ಬಂದೆ. ಕಾಲೇಜು ದಿನಗಳಿಂದಲೂ ಸಂಗೀತದ ಕಡೆ ಒಲವು ಹೆಚ್ಚಾಗಿತ್ತು. ಸಿನಿಮಾರಂಗಕ್ಕೆ ಕಾಲಿಟ್ಟು ಆರು ವರ್ಷಗಳಾಗಿವೆ. ಆರಂಭದಲ್ಲಿ ನಿರ್ದೇಶಕ ಗೌಸ್‌ಪೀರ್‌ ನಿರ್ದೇಶನದ “ಶಾರ್ಪ್‌ ಶೂಟರ್‌” ಚಿತ್ರಕ್ಕೆ ಹಿನ್ನೆಲೆ ಗಾಯಕನಾಗಿ ತನ್ನ ಕೆಲಸ ಶುರುಮಾಡಿದೆ. ಮೂಲತಃ ನಾನೊಬ್ಬ ಗಾಯಕ. ” ದಿ ಲೈಫ್‌ ಆಫ್‌ ಮ್ಯೂಸಿಕ್‌ ಅಂಡ್‌ ಆರ್ಟ್‌” ಹೆಸರಿ ಸ್ವಂತ ಸಂಗೀತ ಬ್ಯಾಂಡ್‌ ಇತ್ತು.

ಆ ಬ್ಯಾಂಡ್‌ ಮೂಲಕ ನಾನು ಫೈವ್‌ ಸ್ಟಾರ್ಸ್‌ ಹೋಟೇಲ್‌, ಪಬ್ಸ್‌ ಸೇರಿದಂತೆ ಇತರೆಡೆ ತಂಡದ ಗೆಳೆಯ ಜೊತೆಗೂಡಿ ಹಲವು ಕಾರ್ಯಕ್ರಮ ಕೊಟ್ಟಿದ್ದೇನೆ. ಶ್ರೀಶೈಲಂನಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೊಡ್ಡ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದೇನೆ. ಸಂಗೀತ ಕೆಲಸದ ಜೊತೆಗೆ ನಾನು, ಟೆಕ್‌ ಸಪೋರ್ಟರ್‌ ಆಗಿ ಕೆಲಸ ಮಾಡಿದ್ದೇನೆ. ರಘುದೀಕ್ಷಿತ್‌, ಪಿಆರ್‌ಕೆ ಸ್ಟುಡಿಯೋ, ರಾಜನ್‌ ಸ್ಟುಡಿಯೋ ಸೇರಿದಂತೆ ಬೆಂಗಳೂರಿನ ಸುಮಾರು ೨೦೦ ಸ್ಟುಡಿಯೋಗಳಿಗೆ ನಾನು ಟೆಕ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದುಂಟು” ಎಂದು ತಮ್ಮ ಜರ್ನಿ ನೆನಪಿಸಿಕೊಳ್ಳುತ್ತಾರೆ ರೋಣದ ಬಕ್ಕೇಶ್.‌

ಮೊದಲ ಹೆಜ್ಜೆ…
ಗಾಯಕನಾಗಿ ಹಲವು ಕಾರ್ಯಕ್ರಮ ಕೊಡುತ್ತಲೇ, ಸಿನಿಮಾದತ್ತ ವಾಲಿದೆ. “ಒಂದ್‌ ಕಥೆ ಹೇಳ್ಲಾ” ನನ್ನ ಮೊದಲ ಚಿತ್ರ. ನನ್ನ ಗೆಳೆಯ ಕೋ ಕಂಪೋಸರ್ ಕಾರ್ತಿಕ್‌ ಅವರೊಂದಿಗೆ ಸೇರಿದ ಕೆಲಸ ಮಾಡುತ್ತಾ ಬಂದೆ. ನನ್ನ ಎಲ್ಲಾ ಪ್ರಾಜೆಕ್ಟ್‌ಗಳಲ್ಲೂ ಅವರ ಸಾಥ್‌ ಇದೆ. ಅಲ್ಲಿಂದ ಇಲ್ಲಿಯವರೆಗೆ ನಾನು “ಧರಣಿ ಮಂಡಲ ಮಧ್ಯೆದೊಳಗೆ”, ಚಾರ್ಲಿ ಅಲ್ಪ ತಂಗೊ”, “ದ್ವಿಮುಖ”, “ಅವನಲ್ಲಿ ಇವಳಿಲ್ಲಿ”, “ಸಲಾಂ ಬೆಂಗಳೂರು”, “ಜಾಕ್‌ ಪಾಟ್‌” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಮುಂದೆ “ರೂಮ್‌ ಬಾಯ್”‌ ಎಂಬ ಹೊಸ ಚಿತ್ರ ಹಾಗೂ ಗೌಸ್‌ಪೀರ್‌ ನಿರ್ದೇಶನದ ಇನ್ನೂ ಹೆಸರಿಡದ ದಿಗಂತ್‌ ಅಭಿನಯದ ಚಿತ್ರಕ್ಕೂ ಸಂಗೀತ ನೀಡುತ್ತಿದ್ದೇನೆ. ಎನ್ನುವ ರೋಣದ ಬಕ್ಕೇಶ್‌, ನಾನು ಸುದೀಪ್‌ ಸರ್‌ ಅವರ ಎಲ್ಲಾ ಭಾಷೆಯ ಕನ್ನಡ ಸೆಕ್ಷನ್‌ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಅವರ “ಸೈರಾ”, “ದಬಾಂಗ್‌ ೩” ಚಿತ್ರಗಳ ಕನ್ನಡ ಡಬ್ಬಿಂಗ್‌ ವರ್ಷನ್‌ಗೆ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದು ನಾನೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮ್ಮ ಸ್ಟುಡಿಯೋದಲ್ಲೇ ಸುದೀಪ್‌ ಸರ್‌ ಬಂದು ಡಬ್‌ ಮಾಡಿದ್ದು ವಿಶೇಷತೆಗಳಲ್ಲೊಂದುʼ ಎಂಬುದು ಬಕ್ಕೇಶ್‌ ಮಾತು.

ಸಕ್ಸಸ್‌ ಕ್ರೆಡಿಟ್‌ ಮಂಸೋರೆಗೆ ಹೋಗಬೇಕು
“ಆಕ್ಟ್‌ ೧೯೭೮” ಚಿತ್ರಕ್ಕೆ ನಾನು ಹಿನ್ನೆಲೆ ಸಂಗೀತದ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಒಂದೊಳ್ಳೆಯ ಸಿನಿಮಾದಲ್ಲಿ ನಾನೂ ಒಂದು ಭಾಗವಾಗಿದ್ದೇನೆ ಅನ್ನೋದೇ ದೊಡ್ಡ ಹೆಮ್ಮೆ. ಗೆಳೆಯ ರಾಹುಲ್‌ ಶಿವಕುಮಾರ್‌ ಅವರ ಮೂಲಕ ನಿರ್ದೇಶಕ ಮಂಸೋರೆ ಅವರ ಪರಿಚಯ ಆಯ್ತು. ನಾನು ಅವರ “ಅಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತೇನೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಅವರ ಈ ಚಿತ್ರಕ್ಕೆ ಕೆಲಸ ಮಾಡಬೇಕು ಅಂತ ಗೊತ್ತಾದಾಗ ಜವಾಬ್ದಾರಿ ಹೆಚ್ಚಾಯ್ತು. ಯಾಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಜೊತೆಗಿನ ಕೆಲಸ ಆಗಿದ್ದರಿಂದ ಸ್ವಲ್ಪ ಭಯವೂ ಇತ್ತು. ಆದರೆ, ಚಿತ್ರಕ್ಕೆ ಮಾಡಿದ ಸಂಗೀತದ ಕೆಲಸ ಅತ್ಯಂತ ತೃಪ್ತಿ ನೀಡಿದೆ. ನಿರ್ದೇಶಕ ಮಂಸೋರೆ ಅವರಿಗೆ ವಿಷನ್‌ ಇತ್ತು. ನಾನು ಅವರನ್ನು ಹಾಗೂ ಅವರ ಚಿತ್ರವನ್ನು ಅರ್ಥ ಮಾಡಿಕೊಳ್ಳೋಕೆ ತಿಂಗಳಾಯ್ತು. ಮೊದಲು ಎರಡು ರೀಲ್‌ ಕೊಟ್ಟು ಕೆಲಸ ಶುರುಮಾಡಿ ಅಂದರು.

ಅವರು ಜೋರಾಗಿ ಕೇಳಿಸುವಂತೆ ಸಂಗೀತ ಇರಬಾರದು. ಸಿನಿಮಾದಲ್ಲಿ ಸಂಗೀತ ಇದೆಯೋ, ಇಲ್ಲವೋ ಅನ್ನುವ ರೀತಿ ಇರಬೇಕು. ಒಂದು ರೀತಿ ಜೆಲ್‌ ಆಗಿರಬೇಕಷ್ಟೇ ಅಂದರು. ಸಾಮಾನ್ಯವಾಗಿ ಕೆಲ ಪಕ್ಕಾ ಕಮರ್ಷಿಯಲ್‌ ಸಿನಿಮಾಗಳಿಗೆ ಅಬ್ಬರದ ಸಂಗೀತ ಕೊಡೋದು ತುಂಬಾನೇ ಸುಲಭ. ನನಗೆ ಈ ಚಿತ್ರ ಸಿಕ್ಕಿದ್ದು, ಲಾಕ್‌ಡೌನ್‌ ಇನ್ನು ಹದಿನೈದು ದಿನ ಇದ್ದಾಗ. ಇಡೀ ಲಾಕ್‌ಡೌನ್ ಸಮಯದಲ್ಲೇ ನಾನು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಸ್ಪರ್ಶ ನೀಡಿದೆ. ಈ ಸಿನಿಮಾ ನೋಡಿದವರು ನನ್ನ ಸಂಗೀತದ ಬಗ್ಗೆಯೂ ಮಾತಾಡುತ್ತಿದ್ದಾರೆ. ಏನೇ ಆದರೂ, ಅದು ನಿರ್ದೇಶಕ ಮಂಸೋರೆ ಅವರಿಗೆ ಆ ಸಕ್ಸಸ್‌ ಕ್ರೆಡಿಟ್‌ ಸಲ್ಲಬೇಕು. ಅವರ ಕಲ್ಪನೆಗೆ ನಾನು ತಕ್ಕಂತೆ ಕೆಲಸ ಮಾಡಿದ್ದೇನಷ್ಟೇ. ಆರಂಭದಲ್ಲಿ ನಾನು ಎರಡು ಸಲ ಕಂಪ್ಲೀಟ್‌ ಕೆಲಸ ಮಾಡಿದ್ದರೂ, ಅದನ್ನು ತೆಗೆಸಿ, ಪುನಃ ಬೇರೆ ಫಾರ್ಮೆಟ್‌ ಮೂಲಕ ನನ್ನಿಂದ ಕೆಲಸ ತೆಗೆಸಿದ್ದಾರೆ.

ಎಲ್ಲವೂ ಬೆಂಗಳೂರಲ್ಲೇ ಆಗಿದ್ದು…
ಇನ್ನೊಂದು ಖುಷಿಯ ವಿಚಾರ ಅಂದರೆ, “ಆಕ್ಟ್‌ ೧೯೭೮” ಚಿತ್ರಕ್ಕೆ ಲೈವ ಸಂಗೀತ ಚೆನ್ನೈನಲ್ಲಿ ನಡೆದಿಲ್ಲ. ಬೆಂಗಳೂರಲ್ಲೇ ಲೈವ್‌ ಕೆಲಸ ನಡೆದಿದೆ. ನಾರಾಯಣ್‌ ಶರ್ಮ ಅವರು ವಯಲಿನ್‌ ನುಡಿಸಿದ್ದಾರೆ. ಇವರು ಸಂಗೀತ ನಿರ್ದೇಶಕರಾದ ಅಜನೀಶ್‌ ಲೋಕಾನಾಥ್‌, ಚರಣ್‌ ರಾಜ್‌ ಅವರ ಜೊತೆ ಕೆಲಸ ಮಾಡುತ್ತಿರುತ್ತಾರೆ. ಇನ್ನು, ಋತ್ವಿಕ್‌ ಭಟ್ಟಾಚಾರ್ಯ ಗಿಟಾರ್‌ ನುಡಿಸಿದ್ದಾರೆ. ಒಳ್ಳೊಳ್ಳೆಯ ತಾಂತ್ರಿಕ ಕಲಾವಿದರು ಈ ಸಿನಿಮಾ ಹಿಂದೆ ಕೆಲಸ ಮಾಡಿದ್ದಾರೆ. ನನಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳಿಗೆ ಕೆಲಸ ಮಾಡುವ ಆಸೆ ಇದೆ. ನನಗಿದ್ದ ಗೀಳು ಸಂಗೀತ. ಅದೀಗ ನೆರವೇರಿದೆಯಷ್ಟೇ ಅಲ್ಲ, ಜವಾಬ್ದಾರಿಯನೂ ಹೆಚ್ಚಿಸಿದೆ. ಹೊಸಬರು, ಹಳಬರು ಎನ್ನದೆ, ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವುದಷ್ಟೇ ನನ್ನ ಗುರಿ. ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಸಿನಿಮಾ ಸಂಗೀತ ಕ್ಷೇತ್ರವೂ ಹೊರತಲ್ಲ. ಹೊಸ ಸೌಂಡಿಂಗ್‌ ಕೊಟ್ಟರೆ, ಖಂಡಿತವಾಗಿಯೂ ಜನರಿಗೆ ಇಷ್ಟವಾಗುತ್ತೆ. ನಮ್ಮ ಕೆಲಸಕ್ಕೂ ಮನ್ನಣೆ ಸಿಗುತ್ತೆ ಎಂಬುದು ಬಕ್ಕೇಶ್‌ ಮಾತು.

Related Posts

error: Content is protected !!