ಮಹಿರ ನಿರ್ದೇಶಕನ ಹೊಸ ಹೆಜ್ಜೆ-ವೈಟ್‌ ಪ್ಯಾಚಸ್‌ ಜನರ ಪರ ನಿಂತ ಮಹೇಶ್‌ಗೌಡ

ಭಾರತದಲ್ಲೇ ಫಸ್ಟ್‌ ಟೈಮ್‌ ಕನ್ನಡ ನಿರ್ದೇಶಕನ ಧೈರ್ಯವಿದು!

ಸಿನಿಮಾ ಸೆಲಿಬ್ರಿಟಿಗಳೆಂದರೆ ಸಾಕು, ಅವರು ಏನೇ ಹೇಳಿದರೂ ಜನರಿಗೆ ಅದೊಂದು ವೇದವಾಕ್ಯ. ಹಾಗಂತ, ಇಲ್ಲಿ ಸೆಲಿಬ್ರಿಟಿಗಳ ಕುರಿತು ಬೇರೇ ಏನನ್ನೋ ಹೇಳಲಾಗುತ್ತಿದೆ ಎಂಬರ್ಥವಲ್ಲ. ಹಲವು ಬ್ರಾಂಡ್‌ಗಳ ಹಿಂದೆ ಹೋಗಿ ಜಾಹಿರಾತು ನೀಡುವ ಸೆಲಿಬ್ರಿಟಿಗಳೂ ಇದ್ದಾರೆ. ಹಾಗೆಯೇ, ಒಂದಷ್ಟು ಸಾರ್ವಜನಿಕವಾಗಿಯೂ ಒಳ್ಳೆಯ ವಿಷಯಗಳ ಮೂಲಕ ಜಾಗೃತಿ ಮೂಡಿಸುವ ಸೆಲಿಬ್ರಿಟಿಗಳೂ ಇದ್ದಾರೆ. ಆದರೆ, ಅದೆಷ್ಟೋ ಸೆಲಿಬ್ರಿಟಿಗಳಲ್ಲಿ ವಿಟಿಲಿಗೋ (ವೈಟ್‌ ಪ್ಯಾಚಸ್‌, ತೊನ್ನು, ಬಿಳಿ ಮಚ್ಚೆ) ಸಮಸ್ಯೆ ಇದ್ದರೂ ಮುಜುಗರ ಆಗುತ್ತೆ ಎಂಬ ಕಾರಣಕ್ಕೆ ಅವರೆಲ್ಲೂ ಅದನ್ನು ತೋರ್ಪಡಿಸಿಕೊಳ್ಳಲ್ಲ. ಅಂತಹ ಧೈರ್ಯಕ್ಕೂ ಮುಂದಾಗಲ್ಲ. ಸೆಲಿಬ್ರಿಟಿಗಳು ಮಾತ್ರವಲ್ಲ, ಅದೆಷ್ಟೋ ಜನರು ಈ ವಿಟಿಲಿಗೋ ಅಂದರೆ, ಬಿಳಿ ಮಚ್ಚೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವರು ರೋಸಿ ಹೋಗಿದ್ದೂ ಇದೆ. ಅಂತಹವರಿಗೆ ಒಂದಷ್ಟು ಧೈರ್ಯ ಹೇಳಲು, ಯಾವುದೇ ಕಾರಣಕ್ಕೂ ಡಿಪ್ರೆಷನ್‌ಗೆ ಹೋಗದಿರಲು ಒಂದಷ್ಟು ಜಾಗೃತಿ ಮೂಡಿಸುವುದಕ್ಕಾಗಿಯೇ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಮಂದಾಗಿದ್ದಾರೆ.

ಮಹೇಶ್‌ ಗೌಡ, ನಿರ್ದೇಶಕ

ಹೌದು, “ಮಹಿರ” ಸಿನಿಮಾ ಮೂಲಕ ಸುದ್ದಿಯಾದ ನಿರ್ದೇಶಕ ಮಹೇಶ್‌ಗೌಡ ಅವರೀಗ ವಿಟಿಲಿಗೋ ಸಮಸ್ಯೆಯಲ್ಲಿ ಸಿಲುಕಿದವರ ಪರ ನಿಲ್ಲುವ ಮನಸ್ಸು ಮಾಡಿದ್ದಾರೆ. ಇಷ್ಟಕ್ಕೂ ಮಹೇಶ್‌ಗೌಡ ಯಾಕೆ, ವೈಟ್‌ ಪ್ಯಾಚಸ್‌ ಇರೋ ಜನರ ಜೊತೆ ಇರಬೇಕು ಅಂದುಕೊಂಡಿದ್ದಾರೆಂದರೆ, ಅವರೂ ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ಸ್ವತಃ ನಿರ್ದೇಶಕ ಮಹೇಶ್‌ಗೌಡ ಅವರೇ ತಮಗೂ ವಿಟಿಲಿಗೋ ಸಮಸ್ಯೆ ಇದೆ ಎಂದು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರೀಗ ಈ ಕುರಿತಂತೆ ಜಾಗೃತಿ ಮೂಡಿಸುವ ಯೋಚನೆ ಬಂದಿದ್ದು ಕೊರೊನಾದ ಲಾಕ್‌ಡೌನ್‌ ಸಮಯದಲ್ಲಿ. ಆ ಕುರಿತಂತೆ ನಿರ್ದೇಶಕ ಮಹೇಶ್‌ಗೌಡ ಅವರು “ಸಿನಿ ಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.

ಇದೊಂದು ಗಂಭೀರ ಹೆಜ್ಜೆ
“ನಾನು ಕನ್ನಡ ಚಿತ್ರರಂಗದಲ್ಲಿದ್ದೇನೆ. “ಮಹಿರ” ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ನಾನೀಗ ವಿಟಿಲಿಗೋ ಕುರಿತು ತುಂಬಾ ಗಂಭೀರವಾಗಿಯೇ ಹೆಜ್ಜೆ ಇಡುತ್ತಿದ್ದೇನೆ. ಎಲ್ಲೋ ಒಂದು ಕಡೆ ಚಿಕ್ಕದ್ದಾಗಿ ವೈಟ್‌ ಪ್ಯಾಚಸ್ ಕಾಣಿಸಿಕೊಂಡಾಗ, ಅದೊಂದು ರೀತಿ ಕಾಡುತ್ತದಲ್ಲದೆ, ಅದನ್ನು ನಾವು ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡ್ತೀವಿ. ಕೆಲವೊಮ್ಮೆ ಬೇಜಾರ್‌ ಆಗುತ್ತೆ. ಕೆಲವರಿಗೆ ಕಣ್ಣು, ಕಿವಿ ಮೂಗು, ಮುಖ ಹೀಗೆ ಹಲವು ಕಡೆ ಕಾಣಿಸಿಕೊಳ್ಳತ್ತೆ. ಹಾಗಂತ ಇದು ಖಂಡಿತವಾಗಿಯೂ ಖಾಯಿಲೆ ಅಲ್ಲ. ಅದೂ ಒಂದು ರೀತಿಯ ಟೈಪ್‌ ಆಫ್‌ ಸ್ಕಿನ್ ಅಷ್ಟೇ. ಅದು‌ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವೈಟ್‌ ಪ್ಯಾಚಸ್‌ ಇದ್ದರೆ, ಸ್ಕಿನ್‌ ಕ್ಯಾನ್ಸರ್‌ ಕೂಡ ಬರಲ್ಲ. ಇಷ್ಟಕ್ಕೂ ನಾನು ವೈಟ್‌ ಪ್ಯಾಚಸ್‌ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವೂ ಇದೆ.

ಸರ್ಕಾರದಿಂದಾಗಲಿ, ಎನ್‌ಜಿಓಗಳಿಂದಾಗಲಿ, ಬ್ರಾಂಡ್‌ ಕಂಪೆನಿಗಳ ಜಾಹಿರಾತಾಗಲಿ ಈ ಕುರಿತಂತೆ ಪ್ರಚಾರವಿಲ್ಲ. ಜಾಗೃತಿಯೂ ಮೂಡಿಸಿಲ್ಲ. ಇದಕ್ಕೆ ಚಿಕಿತ್ಸೆ ಹೆಚ್ಚು ಕೊಡಿಸಬೇಕು. ಮೆಡಿಸನ್‌ ಇದ್ದರೂ ವಾಸಿ ಆಗೋದು ಕಷ್ಟ. ಮಕ್ಕಳಿಗೆ ಮಾತ್ರ ಕೆಲವೊಮ್ಮೆ ಕ್ಯೂರ್‌ ಆಗುವ ಅವಕಾಶ ಇರುತ್ತೆ. ಮನುಷ್ಯ ಹೆಚ್ಚು ಒತ್ತಡದಲ್ಲಿದ್ದಾಗ, ಡಿಪ್ರೆಷನ್‌ಗೆ ಹೋದಾಗ, ಲವ್‌ ಫೇಲ್ಯೂರ್‌ ಆಗಿ ಯೋಚನೆಯಲ್ಲಿದ್ದಾಗ, ಮದುವೆ, ಮನೆ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ತನ್ನದೇ ಆದ ಗಂಭೀರ ಯೋಚನೆಗೆ ಸಿಲುಕಿಕೊಂಡಾಗ ವೈಟ್‌ ಪ್ಯಾಚಸ್‌ ಹೆಚ್ಚಾಗುತ್ತೆ. ಇದು ಬಹಳಷ್ಟು ಜನರಿಗೆ ಗೊತ್ತಿರೋದಿಲ್ಲ. ಆದೇ ಡಿಪ್ರೆಶನ್‌ಗೆ ಹೋದವರನ್ನು ಹುಡುಕಿ ಕೆಲವರು ಬನ್ನಿ ಕೌನ್ಸಿಲ್‌ ಮಾಡೋಣ ಅಂತಾರೆ. ಆದರೆ, ವೈಟ್‌ ಪ್ಯಾಚಸ್‌ ಕುರಿತಂತೆ ಕೌನ್ಸಿಲ್‌ ಮಾಡೋರ್ಯಾರು?

ನನಗೂ ಈ ಸಮಸ್ಯೆ ಇದೆ
ಎಲ್ಲದರ ಬಗ್ಗೆಯೂ ಜಾಗೃತಿ ಇದೆ. ಆದರೆ, ಇದರ ಬಗ್ಗೆ ಇಲ್ಲ ಎನ್ನುವ ಮಹೇಶ್‌ಗೌಡ, ನಾನೊಬ್ಬ ನಿರ್ದೇಶಕ. ನನಗೂ ಈ ಸಮಸ್ಯೆ ಇದೆ. ಆ ಕಷ್ಟ, ನೋವು, ಮುಜುಗರ ನಾನೂ ಅನುಭವಿಸಿದ್ದೇನೆ. ಮನರಂಜನೆ ಕ್ಷೇತ್ರದಲ್ಲಿರೋ ಯಾರೂ ತನಗೆ ವೈಟ್‌ ಪ್ಯಾಚಸ್‌ ಇದೆ ಅಂತ ಹೇಳಿಕೊಂಡಿಲ್ಲ. ಅಥವಾ ವೈಟ್‌ ಪ್ಯಾಚಸ್‌ ಇರುವವರ ಪರ ನಿಂತಿಲ್ಲ. ನಾನೀಗ ಆ ಕೆಲಸಕ್ಕೆ ಮುಂದಾಗಿದ್ದೇನೆ. ಇಡೀ ದೇಶದಲ್ಲೇ ಮನರಂಜನೆ ಫೀಲ್ಡ್‌ನಲ್ಲಿರೋ ಯಾರೊಬ್ಬರು ಮುಂದಾಗಿಲ್ಲ. ನಾನು ಮುಂದಾಗುತ್ತಿದ್ದೇನೆ ಎಂಬ ಖುಷಿ ಇದೆ. ಇದರಲ್ಲಿ ಯಾವುದೇ ಮುಜುಗರ ಇಲ್ಲ. ಕೊರೊನಾ ಸಮಯದಲ್ಲಿ ನಾನು ಈ ನಿರ್ಧಾರ ಮಾಡಿದೆ.

 

ಡಿಪ್ರೆಷನ್‌ ಬದಿಗೊತ್ತಿ, ವಾವ್‌ ಅಂತ ಮಾಡಬೇಕು ಅಂದುಕೊಂಡೆ. ಮೊದಲು ಬಾಡಿ ಪಾಸಿಟಿವ್‌ ಮಾಡಿಕೊಂಡೆ. ಫಿಟ್ನೆಸ್‌ ಮೂಲಕ ನಾನು ಈ ವೈಟ್‌ ಪ್ಯಾಚಸ್‌ ಕುರಿತು ಜಾಗೃತಿ ಮೂಡಿಸಬೇಕು ಅಂದುಕೊಂಡೆ, ನನಗೆ ೧೧ ವರ್ಷ ಇದ್ದಾಗಲೇ ವೈಟ್‌ ಪ್ಯಾಚಸ್‌ ಕಾಣಿಸಿಕೊಂಡಿತ್ತು. ನಾನು ಎಲ್ಲೇ ಹೋದರೂ, ಹಾಫ್ಯ ಹ್ಯಾಂಡ್‌ ಷರ್ಟ್‌, ಟೀ ಷರ್ಟ್‌ ಹಾಕಿಲ್ಲ. ನಾನೊಬ್ಬ‌ ಲಂಡನ್‌ ರಿಟರ್ನ್‌. ಇಲ್ಲಿಗೆ ಬಂದಾಗಲೂ ಸಮಾಜ ಏನಂದುಕೊಳ್ಳುತ್ತೋ, ಜನರು ಏನು ತಿಳಿದುಕೊಳ್ಳುತ್ತಾರೋ ಎಂಬ ಬೇಸರ, ಸಣ್ಣ ಅಳಕು ಇತ್ತು. ಆದರೆ, ಈಗ ಅದೆಲ್ಲ ಬಿಟ್ಟು ಬಂದಿದ್ದೇನೆ. ಕೆಲಸ ಕ್ಷೇತ್ರದಲ್ಲಿರೋರು ಇದ್ದಾರೆ. ಯಾರೂ ಈ ಬಗ್ಗೆ ಯೋಚಿಸಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ನನ್ನಂತೆಯೇ ಇತರರು ಇರಬಹುದು. ಅವರಿಗೆ ಮುಜುಗರ ಆಗಬಹುದೇನೋ, ಆದರೆ, ನನಗೆ ಯಾವ ಬೇಸರವಿಲ್ಲ. ಈ ಬಗ್ಗೆ ನಾನು ಒಂದಷ್ಟು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ.

 

ಭಾರತದಲ್ಲೇ ಮೊದಲಿಗ
ಇಂಡಿಯಾದಲ್ಲೇ ಮೊದಲ ಸಲ ಸಿನಿಮಾ ಇಂಡಸ್ಟ್ರಿಯಿಂದ ವಿಟಿಲಿಗೋ ಇರುವ ವ್ಯಕ್ತಿಯಾಗಿ ನಾನು ಮುಂದೆ ಬಂದಿದ್ದೇನೆ. ಇಲ್ಲಿ ಫಿಲಾಸಫಿ ಹೇಳೋಕೆ ಹೊರಟಿಲ್ಲ. ಈ ಮೂಲಕ ನಾನು ಎಜುಕೇಷನ್‌ ಕೊಡಲ್ಲ. ಸರ್ಕಾರದಿಂದಲೋ ಅಥವಾ ಎನ್‌ಜಿಓದಿಂದಲೋ ಫಂಡ್‌ ರೈಸ್‌ ಮಾಡಿಸಿಕೊಳ್ಳುವ ಯೋಚನೆಯೂ ಇಲ್ಲ. ನನ್ನ ಶ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಹಳ್ಳಿಗಳಲ್ಲಿ, ಶಾಲೆ, ಕಾಲೇಜ್‌, ಕಾರ್ಪೋರೆಟ್‌ ಕಂಪೆನಿ ಹೀಗೆ ಇತರೆಡೆ ಮಾತಾಡುವ ಮೂಲಕ ಜಾಗೃತಿ ಆಗಬೇಕು ಎಂದು ಬಯಸಿದ್ದೇನೆ. ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ. ನನಗೆ ಕೈ, ಕಾಲಲ್ಲೂ ವೈಟ್‌ ಪ್ಯಾಚಸ್‌ ಇದೆ. ಕಳೆದ ಒಂದಷ್ಟು ತಿಂಗಳ ಕಾಲ ನಾನು ಸ್ವೀಟ್‌ ತಿಂದಿಲ್ಲ, ಸಾಲ್ಟ್‌, ಎಣ್ಣೆ ಪದಾರ್ಥ ಮುಟ್ಟಿಲ್ಲ. ಇದರಿಂದ ಪರದಾಡಿದ್ದೂ ಇದೆ.

ಜಾಗೃತಿ ಮೂಡಿಸುವ ಕೆಲಸಕ್ಕೆ ಯಾರಾದರೂ ಕೈ ಚಾಚಿದರೆ, ಸ್ಟಾರ್‌ ನಟರೂ ಜೊತೆಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಕಂಪೆನಿಗಳು ಜಾಹಿರಾತಿಗೆ ಆಹ್ವಾನಿಸಿದರೆ, ಅದರಿಂದ ಬಂದ ಹಣದಲ್ಲಿ ಒಂದಷ್ಟು ಬಡ ಮಕ್ಕಳನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವಿದೆ” ಎನ್ನುತ್ತಾರೆ ಮಹೇಶ್‌ ಗೌಡ. ಅದೇನೆ ಇರಲಿ, ಇಂಥದ್ದೊಂದು ಕೆಲಸಕ್ಕೆ ಮುಂದಾಗಿರುವ ನಿರ್ದೇಶಕ ಮಹೇಶ್‌ಗೌಡ ಅವರಿಗೆ “ಸಿನಿ ಲಹರಿ” ಹಾರೈಸಲಿದೆ.

Related Posts

error: Content is protected !!