Categories
ಸಿನಿ ಸುದ್ದಿ

ಪ್ರಜ್ವಲ್‌ ದೇವರಾಜ್‌ ಜೊತೆ ಗುರುದತ್‌ ಗಾಣಿಗ ಹೊಸ ಚಿತ್ರ – ಥ್ರಿಲ್ಲಿಂಗ್‌ ಸಿನಿಮಾ ಉತ್ಸಾಹದಲ್ಲಿ ಯಂಗೆಸ್ಟ್‌ ಡೈರೆಕ್ಟರ್

ಸಂಕ್ರಾಂತಿಗೆ ಟೈಟಲ್‌ ‌ಲಾಂಚ್‌

ಕನ್ನಡದ ಯಂಗೆಸ್ಟ್ ನಿರ್ದೇಶಕ ಅಂತಲೇ ಚಿತ್ರರಂಗಕ್ಕೆ ಪರಿಚಯವಾದ ಗುರುದತ್ ಗಾಣಿಗ, “ಅಂಬಿ ನಿಂಗ್‌ ವಯಸ್ಸಾಯ್ತೋ” ಚಿತ್ರದ ಮೂಲಕ ನಿರ್ದೇಶಕರಾದವರು. ಆ ಸಿನಿಮಾ ಬಳಿಕ ಅವರು ಮುಂದೆ ಯಾರ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೀಗ ತೆರೆಬಿದ್ದಿದೆ. ಹೌದು, ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅಭಿಷೇಕ್‌ ಅಂಬರೀಶ್‌ ಜೊತೆ ಮಾಡಲಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಎಲ್ಲೂ ಅ‍ಪ್‌ಡೇಟ್‌ ಸಿಗಲಿಲ್ಲ. ಈಗ ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

ಹೌದು, ಈಗ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿರುವ ಅವರು, ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ವಿಶೇಷ ಅಂದರೆ, ಗುರುದತ್‌ ಗಾಣಿಗ ತಮ್ಮ ಎರಡನೇ ನಿರ್ದೇಶನದ ಸಿನಿಮಾಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಸ್ಕ್ರಿಪ್ಟ್‌ ವರ್ಕ್ ಮುಗಿದಿದೆ. ಆದರೆ ಇನ್ನೂ, ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಜನವರಿ ಸಂಕ್ರಾಂತಿ ವೇಳೆಗೆ ಚಿತ್ರತಂಡ ಫಸ್ಟ್ ಲುಕ್ ಲಾಂಚ್ ಮಾಡುವುದರ ಜೊತೆಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು, ಈ ಚಿತ್ರವನ್ನು ಬೆಂಗಳೂರು ‌ಕುಮಾರ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾನವ ಕಳ್ಳಸಾಗಣೆ ಕುರಿತಾದ ಕಥೆಯಾಗಿದ್ದು, ಸಾಕಷ್ಟು ಥ್ರಿಲ್ಲರ್‌ ಅಂಶಗಳು ಇಲ್ಲಿರಲಿವೆ. “ಸಿನಿಲಹರಿ” ಜೊತೆ ಮಾತನಾಡಿದ ನಿರ್ದೇಶಕ ಗುರುದತ್‌ ಗಾಣಿಗ, “ಪ್ರಜ್ವಲ್‌ ದೇವರಾಜ್‌ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್‌ ತಂದುಕೊಡುವ ವಿಶ್ವಾಸವಿದೆ. ಅವರ ಕೆರಿಯರ್‌ನಲ್ಲೇ ಇದೊಂದು ನೆಕ್ಸ್ಟ್‌ ಲೆವೆಲ್‌ಗೆ ಕರೆದುಕೊಂಡು ಹೋಗುವ ಸಿನಿಮಾ ಎಂಬ ಗ್ಯಾರಂಟಿ ಕೊಡುತ್ತೇನೆ.

ಪ್ರಜ್ವಲ್‌ ದೇವರಾಜ್‌ ಅವರು ಕೂಡ ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ತುಂಬಾನೇ ಥ್ರಿಲ್‌ ಆಗಿದ್ದಾರೆ. ನಿರ್ಮಾಪಕ ಕುಮಾರ್‌ ಅವರು, ಕಥೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಗುಣಮಟ್ಟದ ಸಿನಿಮಾ ಕೊಡುವ ಉದ್ದೇಶವಿದೆ. ಚಿತ್ರಕ್ಕೆ “ಮುಂದಿನ ನಿಲ್ದಾಣ” ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಅಭಿ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಚಿತ್ರದಲ್ಲಿ ದೇವರಾಜ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಒಬ್ಬರು, ಖಳನಟರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರು ಕಥೆ ಕೇಳಿ ಈಗಾಗಲೇ ಸಿನಿಮಾದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅದೊಂದು ಮೇಜರ್‌ ಪಾತ್ರ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದೂ ಸ್ಟಾರ್‌ ನಟಿಯರ ಜೊತೆಯೇ ಚರ್ಚೆ ಆಗುತ್ತಿದೆʼ ಎಂದಷ್ಟೇ ಹೇಳುವ ಗುರುದತ್‌ ಗಾಣಿಗ, ಉಳಿದ ವಿಷಯವನ್ನು ಸಂಕ್ರಾಂತಿ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳುತ್ತಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಮಂಜು ಮುಖದಲ್ಲಿ ನಗು ತರಿಸಿದ ʼಕನ್ನೇರಿ”

ಕಲಾತ್ಮಕ ಸಿನಿಮಾದಿಂದ ಕಮರ್ಷಿಯಲ್‌ ಕಡೆ ಮುಖ ಮಾಡಿದ ಕ್ರಿಯಾಶೀಲ ನಿರ್ದೇಶಕ

ಯುವ ನಿರ್ದೇಶಕ ನೀನಾಸಂ ಮಂಜು ಮತ್ತೊಮ್ಮೆ ಖುಷಿಯಲ್ಲಿದ್ದಾರೆ. ಅವರು ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ “ಕನ್ನೇರಿ” ಚಿತ್ರ ಈಗ ಇನ್ನೇರೆಡು ಚಿತ್ರೋತ್ಸವಗಳಿಗೆ ಆಯ್ಕೆ ಆಗಿದೆ. ಇವೆರೆಡು ಪ್ರತಿಷ್ಟಿತ ಫಿಲ್ಮ್‌ ಫೆಸ್ಟಿವೆಲ್ಸ್‌ ಎನ್ನುವುದು ವಿಶೇಷ. ಭಾರತದಲ್ಲೆ ನಡೆಯುವ ಗೋಲ್ಡನ್‌ ಜ್ಯೂರಿ ಫಿಲ್ಮ್‌ ಫೆಸ್ಟಿವೆಲ್‌ ಒಂದಾದರೆ, ಯುಎಸ್‌ಎ ಫಿಲ್ಮ್‌ ಫೆಸ್ಟಿವೆಲ್‌ಗೂ ಕೂಡ” ಕನ್ನೇರಿʼ ಚಿತ್ರ ಅಫೀಷಿಯಲ್‌ ಅಗಿಯೇ ಎಂಟ್ರಿ ಪಡೆದಿದೆ. ಸದ್ಯಕ್ಕೆ ಇವೆರೆಡು ಫೆಸ್ಟಿವೆಲ್‌ ನಡೆಯುವುದು ಯಾವಾಗ, ಅಲ್ಲಿ ʼಕನ್ನೇರಿʼ ಪ್ರದರ್ಶನ ಹೇಗೆ ಎನ್ನುವ ವಿವರ ನಮಗೆ ಮಾತ್ರವಲ್ಲ ಚಿತ್ರ ತಂಡಕ್ಕೂ ಗೊತ್ತಾಗಿಲ್ಲ. ಆದರೆ ಎರಡು ಫೆಸ್ಟಿವೆಲ್‌ ಗೆ ‘ಕನ್ನೇರಿ ‘ಚಿತ್ರ ಅಫಿಷಿಯಲಿ ಎಂಟ್ರಿ ಆಗಿರುವ ಖುಷಿಯನ್ನು ನಿರ್ದೇಶಕ ಮಂಜುʼಸಿನಿಲಹರಿʼಗೆ ಹಂಚಿಕೊಂಡಿದ್ದಾರೆ.

ಹನ್ನೇರೆಡು ಚಿತ್ರೋತ್ಸವಗಳಿಗೆ ‘ಕನ್ನೇರಿ’ ಪಯಣ

ʼಕನ್ನೇರಿʼ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಅ
ಆಗಿರುವುದು ಹಳೇ ಸುದ್ದಿ. ಅದು ಮೊದಲು ಗಮನ ಸೆಳೆದಿದ್ದು ವಿಭಿನ್ನ ಕಥಾ ಹಂದರದ ಮೂಲಕ. ಒಂದು ಬುಡಕಟ್ಟು ಸಮುದಾಯದಲ್ಲಿನ ಹುಡುಗಿಯ ಸುತ್ತಲ ಕತೆ ಇದು. ಅಭಿವೃದ್ದಿ ಹೆಸರಲ್ಲಿ ಇಂದು ದೇಶದ ವಿವಿಧೆಡೆ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ಕಾಡು ನಾಶ ಅಥವಾ ಅಭಿವೃದ್ಧಿ ಹೆಸರಲ್ಲಿ ಆವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಅಲ್ಲಿ ತಮ್ಮ ಮೂಲ ನೆಲೆ ಕಳೆದುಕೊಂಡ ಬುಡಕಟ್ಟು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಾಗೆ ವಲಸೆ ಬಂದವರಿಗೆ ಉದ್ಯೋಗ ಸೇರಿದಂತೆ ಮನೆ, ಮಠ ಇತ್ಯಾದಿ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಅಂತಹ ಅತಂತ್ರಗೊಂಡ ಒಂದು ಬುಡಕಟ್ಟು ಕುಟುಂಬದ ಹುಡುಗಿಯ ಸುತ್ತಲ ಕತೆಯೇ ಕನ್ನೇರಿ. ಆಕೆಯ ಬದುಕಲ್ಲಿ ಏನಾಯಿತು, ಆಕೆ ಯಾರನ್ನು , ಏನನ್ನು ಕಳೆದುಕೊಂಡಳು ಎನ್ನುವುದನ್ನು ನಿರ್ದೇಶಕ ನೀನಾಸಂ ಮಂಜು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.

ಕನ್ನೇರಿ ವರ್ತಮಾನದ ಕತೆ

ಕತೆ ವರ್ತಮಾನದ ಬಹು ಚರ್ಚಿತ ವಿಷಯ. ಹಾಗೆ ನೋಡಿದರೆ ಬಡಜನರ ಕರುಣಾಜನಕ ಕತೆ. ಆ ದೃಷ್ಟಿಯಲ್ಲಿ ಒಂದು ಸಾಮಾಜಿಕ ಕಾಳಜಿಯಿಂದಲೇ ಸಿನಿಮಾ ಮಾಡಿರುವ ನಿರ್ದೇಶಕ ಮಂಜು ಅವರ ಪ್ರಯತ್ನ ವಾಣಿಜ್ಯದ ದೃಷ್ಟಿಯಿಂದ ಎಷ್ಟು ವರ್ಕೌಟ್‌ ಆಗುತ್ತೋ ಗೊತ್ತಿಲ್ಲ, ಆದರೆ ಈಗ ಅದು ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವುದು ಒಬ್ಬ ಕ್ರಿಯಾಶೀಲ ನಿರ್ದೇಶಕನ ನಿಜ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಂತೂ ಹೌದು.

ಸಿನಿಮಾ ಸಕಲ ರೀತಿಯಲ್ಲೂ ರಿಲೀಸ್‌ ಗೆ ಸಜ್ಜಾಗಿದೆ. ದೊಡ್ಡ ತಾರಾಗಣವೂ ಇದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಷ್ಟರಲ್ಲಿ ತೆರೆಗೆ ಬರಲಿತ್ತೇನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರತಂಡ ಈಗಲೂ ಸೂಕ್ತ ಸಂದರ್ಭಕ್ಕೆ ಕಾಯುತ್ತಿದೆ. ಆದರೆ ಈ ಸಮಯದಲ್ಲೆ ಚಿತ್ರ ಚಿತ್ರೋತ್ಸವಗಳ ಮೂಲಕ ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವುದು ಚಿತ್ರ ತಂಡಕ್ಕೂ ಖುಷಿ ತಂದಿದೆ.

ಇದು ದುಸ್ಸಾಹಸದ ಕೆಲಸ

‘ ಸಾಮಾಜಿಕ ಕಾಳಜಿಯ ವಿಷಯ ಇಟ್ಟಕೊಂಡು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಒಂದ್ರೀತಿ ದುಸ್ಸಾಹಸದ ಕೆಲಸ. ಯಾಕಂದ್ರೆ ಕಮರ್ಷಿಯಲ್‌ ದೃಷ್ಟಿಯಿಂದ ಇಂತಹ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೆಂಬಲ ಸಿಗುವುದಿಲ್ಲ. ಹಾಗೂ ಕಂಟೆಂಟ್‌ ಮೂಲಕ ಗೆದ್ದರೆ, ನಮ್ಮ ಪುಣ್ಯ. ಹಾಗಾಗಿ ಬಹಳಷ್ಟು ಜನರು ಇಂತಹ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬರುವುದಿಲ್ಲ ಎನ್ನುವುದು ನಿಮಗೂ ಗೊತ್ತು. ಆದರೂ ನಿರ್ಮಾಪಕರನ್ನು ಒಪ್ಪಿಸಿ, ಈ ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆ ಕಷ್ಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಸಿನಿಮಾ ಮುಂದೆ ರಿಲೀಸ್‌ ಆಗಿ ಎಷ್ಟು ಹಣ ಮಾಡುತ್ತೋ ಗೊತ್ತಿಲ್ಲ, ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆಯುತ್ತಿರುವುದು ಗೆದ್ದ ಖುಷಿ ನೀಡುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನೀನಾಸಂ ಮಂಜು.

ಕೋಲ್ಕೋತ್ತಾ ಚಿತ್ರೋತ್ಸವದಲ್ಲಿ ಪ್ರಶಸ್ತಿ

ಈಗಾಗಲೇ ಈ ಚಿತ್ರ ಕೊಲ್ಕೋತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಬೆಸ್ಟ್‌ ಔಟ್‌ಸ್ಟ್ಯಾಂಡಿಂಗ್‌ ಪ್ರಶಸ್ತಿ ಈ ಚಿತ್ರಕ್ಕೆ ಸಿಕ್ಕಿದೆ. ಹಾಗೆಯೇ ಈಗ 12 ಚಿತ್ರೋತ್ಸವಗಳಿಗೂ ಹೋಗಿದೆ. ಅದರಲ್ಲಿ ಆಧಿಕೃತವಾಗಿ ಈಗ ಗೋಲ್ಡನ್‌ ಜ್ಯೂರಿ ಹಾಗೂ ಯುಎಸ್‌ ಎ ಫಿಲ್ಮ್‌ ಫೆಸ್ಟಿವೆಲ್‌ ಗೆ ಪ್ರದರ್ಶನಕ್ಕೆ ಸೆಲೆಕ್ಟ್‌ ಆಗಿದೆ. ಇಲ್ಲೂ ಮೆಚ್ಚುಗೆ ಪಡೆದು ಪ್ರಶಸ್ತಿಗೆ ಪಾತ್ರವಾದರೆ, ನಿರ್ದೇಶಕ ಮಂಜು ಮತ್ತವರ ತಂಡದ ಶ್ರಮ ಇನ್ನಷ್ಟು ಸಾರ್ಥಕ. ಇನ್ನು ಮಂಜುಗೆ ಈ ಪ್ರಯತ್ನ ಅಥವಾ ಸಾಹಸ ಹೊಸದಲ್ಲ. ಅವರ ಚೊಚ್ಚಲ ಚಿತ್ರ ಮೂಕಹಕ್ಕಿ ಕೂಡ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಈಗ ಆ ಸರದಿ ʼಕನ್ನೇರಿ ʼಚಿತ್ರದ್ದು. ಒಂದೆಡೆ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳಲ್ಲಿ ಜನ ಮನ್ನಣೆ ಹಾಗೂ ಪ್ರಶಸ್ತಿಗಳ ಮೂಲಕ ತಮ್ಮನ್ನು ತಾವು ನಿರ್ದೇಶಕನಾಗಿ ಸಾಬೀತು ಮಾಡಿಕೊಳ್ಳುತ್ತಿರುವಾಗಲೇ, ಮತ್ತೊಂದೆಡೆ ಕಮರ್ಷಿಯಲ್‌ ಸಿನಿಮಾ ಮಾಡುವ ಅನಿವಾರ್ಯತೆ ಅವರಿಗೂ ಎದುರಾಗಿದೆ.

ಶೋಗನ್ ಹೊತ್ತು ಕಮರ್ಷಿಯಲ್ ಕಡೆಗೆ

ಈಗವರು ಲೂಸ್‌ ಮಾದ ಯೋಗೇಶ್‌ ಕಾಂಬಿನೇಷನ್‌ ಮೂಲಕ ʼಶೋಗನ್‌ʼಹೆಸರಿನ ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ. ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಹೊರ ಬಂದಿದೆ. ಇಷ್ಟರಲ್ಲಿಯೇ ಅದರತ್ತ ಗಮನ ಹರಿಸುವುದಾಗಿ ಹೇಳುವ ಮಂಜು, ಕಮರ್ಷಿಯಲ್‌ ಸಿನಿಮಾ ಯಾಕೆ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾರೆ. ” ಪ್ರತಿಯೊಂದಕ್ಕೂಕ್ರಿಯಾಶೀಲತೆ ಬೇಕು, ಆದರೆ ಕ್ರಿಯಾಶೀಲತೆಯೇ ಇಲ್ಲ ಹೊಟ್ಟೆ ತುಂಬಿಸೋದಿಲ್ಲ. ಬಹುಕಾಲ ಇಲ್ಲಿ ನಿರ್ದೇಶಕನಾಗಿ ಉಳಿಯಬೇಕಾದರೂ ನಂಗೆ ಕಮರ್ಷಿಯಲ್‌ ಸಿನಿಮಾವೊಂದರ ಗೆಲುವು ಬೇಕು. ಹಾಗೆಯೇ ನಾನು ಕೂಡ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕಾಗಿ ಈ ಕಮರ್ಷಿಯಲ್‌ ಸಿನಿಮಾದ ಪ್ರಯತ್ನ ಎನ್ನುವ ಮೂಲಕ ತಮ್ಮ ಬದಲಾದ ಪರಿಯನ್ನು ವಿವರಿಸುತ್ತಾರೆ ನೀನಾಸಂ ಮಂಜು. ʼನಿ ಲಹರಿʼಕಡೆಯಿಂದ ನಿರ್ದೇಶಕ ಮಂಜು ಅವರಿಗೆ ಶುಭಾಶಯ.

Categories
ಸಿನಿ ಸುದ್ದಿ

ಪ್ರಶಾಂತ್‌ ನೀಲ್‌ ಕಥೆಯಲ್ಲಿ ಶ್ರೀಮುರಳಿ ಬಘೀರ

ರೋರಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಹೊಂಬಾಳೆ ಕೊಡುಗೆ

ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ಡಿಸೆಂಬರ್‌ ೧೭ರಂದು ಹೊಸ ಸಿನಿಮಾ ಅನೌನ್ಸ್‌ ಮಾಡುವುದಾಗಿ ತಮ್ಮ ಟ್ವೀಟ್‌ ಮೂಲಕ ಹೇಳಿಕೊಂಡಿತ್ತು. ಹೊಸ ಚಿತ್ರದ ಘೋಷಣೆ ಮಾಡುವ ಸುದ್ದಿ ಸಾಕಷ್ಟು ಕುತೂಹಲವೂ ಮೂಡಿಸಿತ್ತು. ಅವರ ಹೊಸ ಸಿನಿಮಾ ಅನೌನ್ಸ್‌ ಕುರಿತಂತೆ “ಸಿನಿಲಹರಿ” ಈ ಹಿಂದೆಯೇ ಒಂದು ಸುದ್ದಿಯನ್ನು ಪೋಸ್ಟ್‌ ಮಾಡಿತ್ತು. ಡಿಸೆಂಬರ್‌ 17ರಂದು ಅನೌನ್ಸ್‌ ಮಾಡಲು ಕಾರಣ, ಅಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ ಹುಟ್ಟುಹಬ್ಬ. ಹಾಗಾಗಿ, ಅವರ ಹೊಸ ಚಿತ್ರವನ್ನು ಅನೌನ್ಸ್‌ ಮಾಡಬಹುದು ಎಂದು ಹೇಳಿತ್ತು. ಈಗ ಆ ಸುದ್ದಿ ನಿಜವಾಗಿದೆ. ಹೌದು, ಶ್ರೀಮುರಳಿ ಅವರಿಗೆ ಹೊಂಬಾಳೆ ಫಿಲ್ಮ್ಸ್‌ “ಬಘೀರ” ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದೆ.

ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ “ಸಲಾರ್‌” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್‌ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡುವುದಾಗಿ ಹೇಳಿಕೊಂಡ ವಿಷಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಘೋಷಣೆ ಮಾಡಿದೆ.

ಈ ಚಿತ್ರವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್‌ ನೀಲ್‌ ಅವರ ಕಥೆ ಇದಾಗಿದ್ದು, ವಿಜಯ್‌ ಕಿರಗಂದೂರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ, “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್‌ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ‌ ಮಾಡಿದೆ. ಅಲ್ಲದೆ, “ಜಂಗಲ್‌ ಬುಕ್”‌ನ ವಿಶೇಷ ಪಾತ್ರವಾಗಿದ್ದ ಬಘೀರ ಪಾತ್ರದ ಹೆಸರೇ ಈಗ ಶ್ರೀಮುರಳಿ ಅವರ ಚಿತ್ರಕ್ಕೂ ಇಡಲಾಗಿದೆ. ಇದೊಂದು ಭಾರೀ ನಿರೀಕ್ಷೆ ಹುಟ್ಟಿಸಿರುವ ಶೀರ್ಷಿಕೆಯಾಗಿದೆ. ಈಗ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದ್ದು, ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಮದಗಜನ ನಿರೀಕ್ಷೆ ಸುಳ್ಳಾಗಲೇ ಇಲ್ಲ…! ಸಖತ್ತಾಗಿದೆ ಅಫಿಷಿಯಲ್ ಟೀಸರ್‌

ಪಕ್ಕಾ ಮಾಸ್‌ ಟೀಸರ್‌ ಕೊಟ್ಟ ಮದಗಜ ಟೀಮ್‌‌

 

“ಈ ಪಾಪದ ಪ್ರಪಂಚದಲ್ಲಿ ನಮ್‌ ಪ್ರಯಾಣ… ಕೊಚ್ಚೆಯಲ್ಲಿ ಹವಾಯಿ ಚಪ್ಪಲಿ ಹಾಕ್ಕಂಡ್‌ ನಡೆದಂಗೆ. ನಾವ್‌ ಸರಿಯಾಗ್‌ ನಡೆದ್ರೂ, ಅದು ನಮ್ಮೇಲೆ ಹಾರದೇ ಇರಲ್ಲ…”

ಪಂದ್ಯ ಗೆಲ್ಲಬೇಕು ಅನ್ನೋನು ಪಾಯಿಂಟ್‌ಗೋಸ್ಕರ ಹೊಡಿತಾನೆ. ಪಕ್ಕಾ ಗೆಲ್ಲಬೇಕು ಅನ್ನೋನು ಪಾಯಿಂಟಲ್ಲೇ ಹೊಡಿತಾನೆ..” ಎಂಬ ಮಾಸ್‌ ಡೈಲಾಗ್‌ ಇನ್ನಷ್ಟು ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ…

-ಇದು ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ “ಮದಗಜ” ಚಿತ್ರದೊಳಗಿರುವ ಪಂಚ್‌ ಡೈಲಾಗ್…‌ ಡೈಲಾಗ್‌ ಜೊತೆ ಆ ದೃಶ್ಯಗಳನ್ನೂ ನೋಡೋದೋ ಒಂದು ಮಜಾ… ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಚಿತ್ರ. ಫ್ಯಾನ್ಸ್‌ಗೆ ಹೇಳಿಮಾಡಿಸಿದ ಡೈಲಾಗ್‌ ಸಾಕಷ್ಟು ಇದೆ ಅನ್ನುವುದಕ್ಕೆ ಇಷ್ಟು ಸಾಕು… ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಟೀಸರ್ ನೋಡಿ…

ಶ್ರೀಮರಳಿ ಅಭಿನಯದ ‘ಮದಗಜ’ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇತ್ತು. ಆದು ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್‌, ಫಸ್ಟ್‌ ಲುಕ್‌, ಹೀಗೆ ಹಲವು ಕಾರಣಗಳಿಗೆ ಒಂದಷ್ಟು ಕುತೂಹಲ ಮೂಡಿಸಿತ್ತು. ಸಿನಿಮಾದ ಕಥೆ ಇರಲಿ, ಕಲಾವಿದರ ಆಯ್ಕೆ ಇರಲಿ, ಲೊಕೇಷನ್‌ಗಳಿರಲಿ, ತಾಂತ್ರಿಕ ವರ್ಗವೇ ಇರಲಿ ಎಲ್ಲದ್ದರಲ್ಲೂ ಸೈ ಎನಿಸಿಕೊಂಡಿದ್ದ “ಮದಗಜ” ಫಸ್ಟ್‌ ಲುಕ್‌‌ ಅಫಿಷಿಯಲ್ ಟೀಸರ್‌ ಬಿಡುಗಡೆ ಮಾಡುವುದಾಗಿ ಅನೌನ್ಸ್‌ ಮಾಡಿದ್ದೇ ತಡ, ಸಾಕಷ್ಟು ಕುತೂಹಲವಿತ್ತು. ಆ ಕುತೂಹಲ ಎಳ್ಳಷ್ಟೂ ಸುಳ್ಳು ಮಾಡಿಲ್ಲ.
ಹೌದು, ಶ್ರೀಮುರಳಿ ಅವರ ಹುಟ್ಟುಹಬ್ಬ (ಡಿಸೆಂಬರ್‌ 17)ರ ಬೆಳಗ್ಗೆ 9.09ಕ್ಕೆ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಹೊರಬಂದಿದೆ. ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ತಂಡ ಅವರಿಗೆ ಈ ಸಖತ್‌ ರಗಡ್‌ ಆಗಿರುವ, ಪಕ್ಕಾ ಮಾಸ್‌ ಎನಿಸಿರುವ ಚಿತ್ರದಲ್ಲೇನೋ ಇದೆ ಎನಿಸುವಂತಹ ಟೀಸರ್‌ ಅದಾಗಿದ್ದು, ಫ್ಯಾನ್ಸ್‌ಗಂತೂ ಸಖತ್‌ ಕುತೂಹಲ ಕೆರಳಿಸಿದೆ. ಟೀಸರ್‌ನೊಳಗಿರುವ ಡೈಲಾಗ್‌, ಆ ಮಾಸ್‌ ಎಂಟ್ರಿ, ಹಿನ್ನೆಲೆ ಸಂಗೀತ, ಲೊಕೇಷನ್‌ ಎಲ್ಲವೂ ಹೊಸದಾಗಿದೆ. ಈ ಬಾರಿ ಶ್ರೀಮುರಳಿ ಅವರು “ಮದಗಜ” ಮೂಲಕ ಇನ್ನೊಂದು ಘರ್ಜನೆ ಮಾಡಲಿದ್ದಾರೆ ಎಂಬುದಕ್ಕೆ ಈ ಟೀಸರ್‌ ಸಾಕ್ಷಿಯಂತಿದೆ.

ಪ್ರಶಾಂತ್ ನೀಲ್

 

ಇನ್ನು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಿರುವುದು ವಿಶೇಷ.

ನಿರ್ದೇಶಕ ಮಹೇಶ್ ಕುಮಾರ್

ಸದ್ಯಕ್ಕೆ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ “ಮದಗಜ” ಚಿತ್ರದ ಟೀಸರ್‌ ಲಕ್ಷಾಂತರ ವೀಕ್ಷಣೆಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ಅವರು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.

ನಿರ್ಮಾಪಕ ಉಮಾಪತಿ

ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್‌ ಕೂಡ ಇದೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಅವರ ಹೊಸ ಚಿತ್ರ ಕೂಡ ಅನೌನ್ಸ್‌ ಆಗಿದೆ. “ಜಂಗಲ್‌ಬುಕ್”‌ ಒಳಗಿರುವ ಒಂದಷ್ಟು ಪಾತ್ರಗಳು ಸದಾ ಎಲ್ಲರನ್ನೂಕಾಡುತ್ತವೆ. ಅಂಥದೊಂದು ಕಾಡುವ ಪಾತ್ರವನ್ನೇ ಇಟ್ಟುಕೊಂಡು ಹೊಸದ್ದೊಂದು ಕಥೆ ಹೆಣೆದು ಶ್ರೀಮುರಳಿ ಅವರಿಗೊಂದು ಚಿತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಶ್ರೀಮುರಳಿ ಯಾವ ಕಥೆ ಹಿಂದೆ ಹೊರಟಿದ್ದಾರೆ, ಯಾರು ನಿರ್ದೇಶಕ ಇತ್ಯಾದಿ ವಿಷಯವನ್ನು ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ಓ ಮೈ ಲವ್ ! ಇದು ಹೊಸಬರ ವಿಡಿಯೋ ಆಲ್ಬಂ

ಹೊಸಬರ ಪ್ರಯತ್ನಕ್ಕೆ ಸ್ಟಾರ್ ಗಳ ಮೆಚ್ಚುಗೆ

 

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಮೊದಲು ಮುಖ ಮಾಡುವುದು ಕಿರುಚಿತ್ರ, ಆಲ್ಬಂಗಳತ್ತ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಇವುಗಳು ಉತ್ತಮ ವೇದಿಕೆಯಾಗುತ್ತದೆ ಅಂಥ ನಂಬಿರುವವರು. ಇತ್ತೀಚೆಗೆ ಇದರ ಮೂಲಕವೆ ಗುರುತಿಸಿಕೊಂಡು, ಭರವಸೆ ಮೂಡಿಸಿ ಚಿತ್ರ ನಿರ್ದೇಶಕರಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ’ಓ ಮೈ ಲವ್’ ವಿಡಿಯೋ ಹಾಡು ಸಿದ್ದಗೊಂಡಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೀವನ್‌ಗಂಗಾಧರಯ್ಯ ಹಾಡಿಗೆ ಪರಿಕಲ್ಪನೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಡ್ರಾಮಾ ಜೂನಿಯರ್ಸ್  ಖ್ಯಾತಿಯ ತುಷಾರ್‌ಗೌಡ ನಾಯಕ. ಮಜಾಭಾರತ್‌ದಲ್ಲಿ ಕಾಣಿಸಿಕೊಂಡಿದ್ದ ಆರಾಧನಭಟ್‌ನಿಟ್ಟೋಡಿ ನಾಯಕಿ. ಸಂಗೀತ ಜಿತಿನ್‌ದರ್ಶನ್-ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್‌ಅಂಚಲ್‌ಕರ್, ಸಂಕಲನ ಅಕ್ಷಯ್.ಪಿ.ರಾವ್, ನೃತ್ಯ ತೀಚುಆಚಾರ್ಯ ನಿರ್ವಹಿಸಿದ್ದಾರೆ. ಪ್ರಭಾಕರ್.ಬಿ.ಪಿ, ಶಂಕರಣ್ಣ ಸ್ಟುಡಿಯೋ ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.


ಗೀತೆಯ ಕುರಿತು ಹೇಳುವುದಾದರೆ, ನಮ್ಮ ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳು ನೆನಪಿಸುತ್ತದೆ. ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂದಗಳು ಪ್ರಧಾನ ಪಾತ್ರವಹಿಸುತ್ತವೆ. ವಿಶೇಷವಾಗಿ ಪೋಷಕರು ಮತ್ತು ಮಗುವಿನ ರಿಲೇಶನ್‌ಷಿಪ್‌ದಲ್ಲಿ ಬದುಕಿನುದ್ದಕ್ಕೂ ಅನೇಕ ಕಹಿ ಮತ್ತು ಸಿಹಿ ಕ್ಷಣಗಳನ್ನು ಕಾಣುತ್ತೇವೆ. ಇವಿಷ್ಟು ನಿರ್ದೇಶಕರು ಸಿನಿಮಾಕ್ಕಾಗಿ ಬರೆದ ಕತೆಯ ಒಂದು ಭಾಗದಲ್ಲಿ ಬರಲಿದೆ. ಮೊನ್ನೆಯಷ್ಟೇ ಪ್ರದರ್ಶನಗೊಂಡ ಹಾಡಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಭಟ್, ಬೆಲ್‌ಬಾಟಂ ನಿರ್ಮಾಪಕ ಸಂತೋಷ್‌ಕುಮಾರ್, ಕೆಜಿಎಫ್‌ಗೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕಾ ತಿಮ್ಮೇಶ್ ಮುಂತಾದವರು ಗೀತೆ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ‌ ಎಂಟ್ರಿಯಾಗುತ್ತಿದ್ದಾನೆ ‘ಧ್ರುವತಾರೆ’ ಚಿತ್ರದ ನಟಿಯ ಪುತ್ರ !

‘ನಾನೊಂಥರ ‘ಅಂತ ಬರ್ತಿದ್ದಾನೆ ಡಾಕ್ಟರ್ ಸನ್, ಹೆಸರು ಜೈ ಸನ್


ಬಣ್ಣದ ಜಗತ್ತೇ ಹಾಗೆ. ಇದೊಂಥರ ಮ್ಯಾಗ್ನೆಟ್ ಇದ್ದಂತೆ. ಎಂತವರಿಗೂ ಇದು ಒಂಥರ ತಲೆ ಗಿಮ್ಮ್ ಎನ್ನಿಸದೆ ಇರದು. ಹಾಗೆಯೇ ಸಿನಿಮಾ ಎನ್ನುವ ಸೊಜಿಗಲ್ಲಿನ ಆಕರ್ಷಣೆ ಮೂಲಕ ಬೆಳ್ಳಿತೆರೆಗೆ ನಟನಾಗಿ‌ಬರುತ್ತಿದ್ದಾರೆ ಯುವ ಪ್ರತಿಭೆ ಜೈಸನ್. ಈತ ಡಾಕ್ಟರ್ ಸನ್. ಯು ರಮೇಶ್ ನಿರ್ದೇಶನದ ‘ ನಾನೊಂಥರ ‘ಚಿತ್ರದ ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್ ಅವರ ಪುತ್ರ.

ಹೊಸಬರ ಚಿತ್ರ ಎನ್ನುವುದರ ಜತೆಗೆ ಹಲವು ಕಾರಣಕ್ಕೆ ಸಿನಿಮಾ ಪ್ರೇಕ್ಷಕ ರಲ್ಲಿ ಕುತೂಹಲ‌ ಹುಟ್ಟಿಸಿರುವ ‘ ನಾನೊಂಥರ ‘ ಚಿತ್ರವು ಇದೇ ವಾರ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ( ಡಿ.18) ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ಸರಿ ಸುಮಾರು 82 ಚಿತ್ರ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಯುವ ನಟ ಜೈಸನ್ ಸೆಕೆಂಡ್ ಹೀರೋ. ಅಂದ್ರೆ ನಾಯಕನ ಸಹೋದರನ ಪಾತ್ರ. ಈ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಇದೇ ಮೊದಲು ನಟನಾಗಿ ಕಾಣಿಸಿಕೊಳ್ಳು ತ್ತಿರುವ ನಿರ್ಮಾಪಕಿ ಜಾಕ್ಲಿನ್ ಫ್ರಾನ್ಸಿಸ್ ಪುತ್ರ ಜೈಸನ್ ಗೆ ಸಿನಿಮಾ ಅಂದ್ರೆ ಅಮ್ಮನೇ ಮೊದಲ ಪ್ರೇರಣೆ ಅಂತೆ.

ಅಮ್ಮನ‌ ಒತ್ತಾಯಕ್ಕೆ ನಾನು ಅಂದು ಧ್ರುವತಾರೆ ಸಿನಿಮಾ ಮೂಲಕ ಬಾಲ‌ನಟಿಯಾಗಿ ಅಭಿನಯಿಸಿದ್ದೆ. ಅದೊಂದು ಒಳ್ಳೆಯ ಅನುಭವ.‌ದೊಡ್ಡ ಕಲಾವಿದರ ನಡುವೆ ಕಾಣಿಸಿಕೊಂಡೆ. ಮುಂದೆ ಮಲಯಾಳಂ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಬಂತು.ಆದರೆ ಆಗ‌ ನಮಗೆಸರಿಯಾದ ಮಾರ್ಗದರ್ಶನ ನೀಡುವವರು ಸಿಗಲಿಲ್ಲ.‌ಹಾಗಾಗಿ ಸಿನಿಮಾ ಬಿಟ್ಟು ಶಿಕ್ಷಣ ದ ಕಡೆ ಗಮನಕೊಟ್ಡೆ.‌ಹಾಗಾಗಿಯೇ ಡಾಕ್ಟರ್ ಆದೆ. ಈಗ ಸಿನಿಮಾ ಬಗ್ಗೆ ನಂಗೊಂದಿಷ್ಟು ಗೊತ್ತಿದೆ. ವೈದ್ಯೆಯಾಗಿ ಗೆದ್ದವಳಿಗೆ ಇಲ್ಲೋ ಗೆಲುವು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಅದೇ ಕಾರಣಕ್ಕೆ ನಾನೊಂಥರ ಸಿನಿಮಾ‌ಮಾಡಿದ್ದೇನೆ. ಮುಂದೆ ಮಗನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಆಸೆಇದೆ.

ಡಾ.‌ಜಾಕ್ಲಿನ್ ಫ್ರಾನ್ಸಿಸ್,ನಿರ್ಮಾಪಕಿ

 

‘ ನಂಗೆ ನಟ ಆಗ್ಬೇಕು, ಸಿನಿಮಾ ಮಾಡ್ಬೇಕು ಅನ್ನೋದಕ್ಕೆ ಕಾರಣವೇ ಅಮ್ಮ. ಯಾಕಂದ್ರೆ ಅಮ್ಮ ಬಾಲ‌ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಡಾ. ರಾಜ್ ಕುಮಾರ್ ಅಭಿನಯದ ಧ್ರುವತಾರೆ ಚಿತ್ರದಲ್ಲಿ ಬಾಲ‌ನಟಿಯಾಗಿ ಅಭಿನಯಿಸಿದ್ದಾರೆ. ಅದಕ್ಕೆ ಕಾರಣ ನನ್ನಜ್ಜಿ. ಅವರಿಗೆ ಅಮ್ಮನಟಿ ಆಗ್ಬೇಕು ಅನ್ನೋ ಆಸೆ ಇತ್ತಂತೆ. ಅವರ ಒತ್ತಾಯಕ್ಕೆ ಅಮ್ಮ ಬಾಲ‌ನಟಿಯಾಗಿ ಅವತ್ತು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ್ರಂತೆ. ಅಮ್ಮ ನಂಗೂ ಆಗಾಗ ಅದನ್ನು‌ಹೇಳುತ್ತಿದ್ದರು. ಅದರ ಪ್ರಭಾವವೋ ಏನೋ ನಂಗೂ ನಟ ಆಗ್ಬೇಕು ಅನ್ನೋದು ಬಾಲ್ಯದಿಂದಲೇ ಶುರುವಾಯಿತು. ಈಗ ಆ ಕನಸು ನನಸಾಗುತ್ತಿದೆ. ಫಸ್ಟ್ ಟೈಮ್ ಬಣ್ಣ ಹಚ್ಚಿ ಪ್ರೇಕ್ಷಕ ರ ಮುಂದೆ ಬರುತ್ರಿರುವುದು ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ‌ ‘ಎನ್ನುತ್ತಾರೆ ಜೈಸನ್.

ಸದ್ಯಕ್ಕೆ ಈತ ಪದವಿ ವಿದ್ಯಾರ್ಥಿ. ಬೆಂಗಳೂರಿನ‌ ಬಸವನಗುಡಿ ಬಿಎಂಎಸ್ ಕಾಲೇಜಿನಲ್ಲಿ ಫಸ್ಟ್ ಈಯರ್ ಡಿಗ್ರಿ ಓದುತ್ತಿದ್ದಾನೆ. ಆದರೆ ಓದಿನ ಜತೆಗೆಯೇ ಈಗ ನಾನೊಂಥರ ಚಿತ್ರದೊಂದಿಗೆ ನಟನಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾನೆ.ಮುಂದೆ ಹೇಂಗೆ ಅಂತ ಪ್ರಶ್ನಿಸಿದರೆ ನಂಗೆ ಎರಡು ಮುಖ್ಯ ಅಂತಾರೆ ಜೈಸನ್.
‘ ನಂಗೆ ಕೆರಿಯರ್ ಕೂಡ ಮುಖ್ಯ. ಸದ್ಯಕ್ಕೆ ಎಜುಕೇಶನ್ ಮುಗಿಯೋವರೆಗೂ ಎಜುಕೇಷನ್ ಜತೆಗೆಯೇ ಆ್ಯಕ್ಟಿಂಗ್ ಕಡೆ ಗಮನ‌ಹರಿಸುತ್ತಿದ್ದೇನೆ.‌ ಅಮ್ಮ‌ನ‌‌ ನಿರ್ಧಾರ ಕೂಡ ಹಾಗೆಯೇ ಇದೆ. ಏಜುಕೇಷನ್ ಮುಗಿದ ಮೇಲೆ ಫುಲ್ ಟೈಮ್ ಸಿನಿಮಾ‌ಕಡೆಯೇ ಯೋಚಿಸೋಣ ಅಂತಲೂ‌ ಇದೆ. ಯಾಕಂದ್ರೆ ಅಮ್ಮ ಪ್ರಡ್ಯೂಸರ್. ಇವತ್ತಲ್ಲ ನಾಳೆ ಸಿನಿಮಾ‌ನಿರ್ಮಾಣ ಮಾಡೆ ಮಾಡುತ್ತಾರೆ.‌ ನಾನು ಹಿರೋ ಆಗ್ಬೇಕು ಅನ್ನೋದು ನನಗಿರುವಷ್ಟೇ ಆಸೆ ಅವರಿಗೂ ಇದೆ. ಹಾಗಾಗಿ ನಿಧಾನವಾಗಿಯೇ ಎಜುಕೇಶನ್ ಮುಗಿಸಿಕೊಂಡು‌ಸಿನಿಮಾಕ್ಕೆ ಫುಲ್ ಟೈಮ್ ಆಗಿ ಬರುತ್ತೇನೆ ಅಂತ ನಗು ಬೀರುತ್ತಾರೆ ಜೈಸನ್.

ಜೈಸನ್ ಗೆ ಇಗಷ್ಟೇ 18 ವರ್ಷ.‌ ಕಟ್ಟು ಮಸ್ತು ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿದ್ದಾನೆ.‌ ಅದಕ್ಕೆ ತಕ್ಕಂತೆ ಈಗ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರಂತೆ. ಹಾಗೆಯೇ ಸಿನಿಮಾ ಸಂಬಂಧಿತ ಎಲ್ಲಾ ತರಬೇತಿ ಕೂಡ ಶುರುವಾಗಿದೆಯಂತೆ.’ ಸಿನಿಮಾ ನಂಗೆ ಹೊಸದು. ತುಂಬಾ ಬ್ಲಾಂಕ್ ಆಗಿಯೇ ಮೊದಲ ಸಿನಿಮಾದಲ್ಲಿ ನಟಿಸಿದ್ದೇನೆ. ನಿರ್ದೇಶಕರು ಎಲ್ಲವನ್ನು ಹೇಳಿಕೊಟ್ಟರು. ಮುಂದೆ ಅಮ್ಮ ನನಗಾಗಿಯೇ ಸಿನಿಮಾ ಮಾಡೋ‌ಆಲೋಚನೆಯಲ್ಲಿದ್ದಾರೆ. ಆ ಹೊತ್ತಿಗೆ ನಾನು ಎಲ್ಲ ರೀತಿಯಲ್ಲೂ ರೆಡಿ ಆಗಿರೋಣ ಅಂತ, ಈಗ ಜಿಮ್ ಗೆ ಹೋಗುತ್ತಿದ್ದೇನೆ. ಫೈಟ್ ಅಭ್ಯಾಸವು ನಡೆದಿದೆ. ಇಷ್ಟರಲ್ಲಿಯೇ ಆ್ಯಕ್ಟಿಂಗ್ ತರಬೇತಿಯೂ ನಡೆಯಲಿದೆ. ಒಟ್ಟಿನಲ್ಲಿ ಹೀರೋ ಆಗಲು ಏನ್ ಬೇಕು ಅದನ್ನು‌ಶ್ರದ್ದೆಯಿಂದ ಕಲಿಯಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದು ಜೈ ಸನ್, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮಗೆ ನಟ ಯಶ್ ಅಂದ್ರೆ ಅಚ್ಚು ಮೆಚ್ಚು ಅಂತಾರೆ. ಅದೇ ರೀತಿ ಜೈಸನ್ ಕೂಡ ಬೆಳೆಯಲಿ ಎನ್ನುವುದು ‘ಸಿನಿ‌ಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ಅಬ್ಬರಿಸಲು ಸಜ್ಜಾದ ಪ್ರಜ್ವಲ್‌ ಅಬ್ಬರ! ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಡೈನಾಮಿಕ್‌ ಪ್ರಿನ್ಸ್‌ ತ್ರೀ ಶೇಡ್‌

ಮೂರು ಅವತಾರದಲ್ಲಿ ಎದುರಾಳಿ ಸಂಹಾರ

ಪ್ರಜ್ವಲ್‌ ದೇವರಾಜ್‌ ಅಭಿನಯದ ಹೊಸ ಚಿತ್ರ “ವೀರಂ” ಇತ್ತೀಚೆಗಷ್ಟೇ ಶುರುವಾಗಿದೆ. ಅದಕ್ಕೂ ಮುನ್ನ ಶುರುವಾಗಿದ್ದ ಅವರ ಹೊಸ ಚಿತ್ರ “ಅಬ್ಬರ” ಈಗ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಶೇ.೭೦ರಷ್ಟು ಚಿತ್ರೀಕರಣ ಮುಗಿಸಿರುವ “ಅಬ್ಬರ” ಇನ್ನುಳಿದ ಚಿತ್ರೀಕರಣ ಪೂರೈಸಿದರೆ ಪ್ರೇಕ್ಷಕರ ಮುಂದೆ ಬರಲು ರೆಡಿ. ಇತ್ತೀಚೆಗೆ ಚಿತ್ರತಂಡದ ಜೊತೆ ಆಗಮಿಸಿದ್ದ ನಿರ್ದೇಶಕ ರಾಮ್‌ನಾರಾಯಣ್‌, ತಮ್ಮ “ಅಬ್ಬರ” ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು ಹೀಗೆ.
“ನಾನು ಈಗಾಗಾಲೇ ದೇವರಾಜ್‌ ಸರ್‌ ಜೊತೆ, ಪ್ರಣವ್‌ ಅವರ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಪ್ರಜ್ವಲ್‌ ದೇವರಾಜ್‌ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅದು “ಅಬ್ಬರ” ಮೂಲಕ ಸಿಕ್ಕಿದೆ. ಈ ಸಿನಿಮಾದ ಕಥೆ ಹೇಳಬೇಕು ಅಂತ ಫೋನ್‌ ಮಾಡಿದಾಗ, ಪ್ರಜ್ವಲ್‌ ಅವರು, ಒಪ್ಪಿ, ಕಥೆ ಹೇಳೋಕೆ ಕರೆದರು. ಹೋಗಿ ಕಥೆ ಹೇಳಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಾಕಷ್ಟು ಹೀರೋಗಳಿಗೆ ಕಥೆ ಹೇಳಿದ್ದೇನೆ. ಆದರೆ, ಪ್ರಜ್ವಲ್‌ ಅವರಿಗೆ ಹೇಳಿದ ಅನುಭವ ಮರೆಯಲಾರೆ. ಯಾಕೆಂದರೆ, ಅವರು ತುಂಬಾ ಆಸಕ್ತಿಯಿಂದ, ಶ್ರದ್ಧೆಯಿಂದ ಕಥೆ ಕೇಳಿದ್ದಲ್ಲದೆ, ಒಮ್ಮೆಲೇ ಈ ಸಿನಿಮಾ ಮಾಡೋಣ ಎಂದು ಗ್ರೀನ್‌ಸಿಗ್ನಲ್‌ ಕೊಟ್ಟರು. ಹಾಗಾಗಿ ಈ “ಅಬ್ಬರ” ಶುರುವಾಯ್ತು.

ಅಪ್ಪ ಮಗನ ಬಾಂಧವ್ಯ ಹೈಲೆಟ್
ಇಲ್ಲಿ ಮೂವರು ನಾಯಕಿಯರು ಇದ್ದಾರೆ. ಕಥೆಯಲ್ಲಿ ಸಸ್ಪೆನ್ಸ್‌ ಇದೆ. ರಾಜ್‌ಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಾಕರ್‌ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್‌ ದೇವರಾಜ್‌ ಅವರಿಗಿಲ್ಲಿ ಮೂರು ವಿಭಿನ್ನ ಶೇಡ್‌ ಇರುವ ಪಾತ್ರವಿದೆ. ಶೂಟಿಂಗ್‌ ವೇಳೆ ಒಂದೇ ದಿನ ಮೂರು ಶೇಡ್‌ ಇರುವ ಪಾತ್ರ ಮಾಡಿದ್ದು ವಿಶೇಷ. ಒಂದು ಶಾಟ್‌ ಆದ ಕೂಡಲೇ, ಇನ್ನೊಂದು ಶೇಡ್‌ ಪಾತ್ರಕ್ಕೆ ರೆಡಿಯಾಗಿ ಬರುತ್ತಿದ್ದರು. ಎಲ್ಲೂ ಸಮಯ ತೆಗೆದುಕೊಳ್ಳದೆ, ತುಂಬಾ ಸ್ಪೀಡ್‌ ಆಗಿಯೇ ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರ ಶ್ರದ್ಧೆ ನನಗೆ ಇಷ್ಟವಾಯಿತು. ಚೆನ್ನೈ ಮೂಲದ ಜಿ.ಕೆ.ಗಣೇಶ್‌ ಕ್ಯಾಮೆರಾ ಹಿಡಿದಿದ್ದಾರೆ. ‌‌

ಹೈವೋಲ್ಟೇಜ್‌ ಸ್ಟಂಟ್ಸ್

ಚಾಲೆಂಜಿಂಗ್‌ ಸೀನ್‌ಗಳನ್ನು ತುಂಬಾನೇ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಎಂದಿನಂತೆ ನನ್ನ ಜೊತೆ ವೆಂಕಟೇಶ್‌ ಯುಡಿವಿ ಸಂಕಲನ ಮಾಡಿದ್ದಾರೆ. ರವಿಬಸ್ರೂರು ಅವರ ಅದ್ಭುತ ಸಂಗೀತವಿದೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ. ನಾನೂ ಒಂದು ಹಾಡು ಬರೆದಿದ್ದೇನೆ. ಚಿತ್ರದಲ್ಲಿ ಸ್ಟಂಟ್ಸ್‌ ಕೂಡ ಹೈಲೈಟ್.‌ ವಿನೋದ್‌, ಪಳನಿರಾಜ್, ಡಿಫರೆಂಟ್‌ ಡ್ಯಾನಿ ಮತ್ತು ಮಾಸ್‌ಮಾದ ಒಂದೊಂದು ಫೈಟ್‌ ಸಂಯೋಜಿಸಿದ್ದಾರೆ. ಸದ್ಯಕ್ಕೆ ಹಿನ್ನೆಲೆ ಸಂಗೀತ ಬಾಕಿ ಇದೆ. ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾ ಸಮಸ್ಯೆಯಿಂದ ತಡವಾಗಿದೆ” ಎಂದು ವಿವರ ಕೊಟ್ಟ ರಾಮ್‌ನಾರಾಯಣ್‌, ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ದುಷ್ಟನ ಸಂಹಾರ ಮಾಡಲು ಭಗವಂತ ಹೇಗೆ ಹಲವು ಅವತಾರ ಎತ್ತುತ್ತಾನೋ, ಹಾಗೆ ನಮ್ಮ ಚಿತ್ರದ ಹೀರೋ ಹಲವು ಅವತಾರಗಳನ್ನು ತಾಳಿ ಎದುರಾಳಿಯನ್ನು ಸಂಹರಿಸುತ್ತಾನೆ. ತಂದೆ ಮೇಲೆ ಮಗನಿಗಿರುವ ಗೌರವ, ಪ್ರೀತಿಸಿದ ಹುಡುಗಿಯನ್ನೇ ತನ್ನ ಪ್ರತೀಕಾರಕ್ಕೆ ಬಳಸಿಕೊಳ್ಳುವಂತಹ ಸಂದರ್ಭ ಬಂದಾಗ ಮಾಡುವ ಕೆಲಸ, ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಮಾಡುವಂತಹ ತ್ಯಾಗ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ನಿಭಾಹಿಸುವ ಕರ್ತವ್ಯದಲ್ಲಿ ಹೀರೋ ಹೇಗೆಲ್ಲಾ ವರ್ತಿಸುತ್ತಾನೆ ಅನ್ನೋದು ಕಥೆ ಎನ್ನುತ್ತಾರೆ ಅವರು.

ಕಥೆಯಲ್ಲೊಂದು ವಿಶೇಷತೆ ಇದೆ
ಪ್ರಜ್ವಲ್ ದೇವರಾಜ್‌ ಅವರಿಗೆ ಈ ಚಿತ್ರ ಮಾಡಬೇಕೆನಿಸಿದ್ದು, ಕಥೆ ಮತ್ತು ಪಾತ್ರವಂತೆ. ಅದರ ಜೊತೆಗೆ ನಿರ್ದೇಶಕ ರಾಮ್‌ನಾರಾಯಣ್‌ ಅವರು ಕಮರ್ಷಿಯಲ್‌ ನಿರ್ದೇಶಕರು ಎಂಬ ಕಾರಣವೂ ಕೂಡ. “ಕಥೆ ಕೇಳಿದಾಗ, ಅದರಲ್ಲೊಂದು ವಿಶೇಷತೆ ಇತ್ತು. ಮೂರು ಶೇಡ್‌ ಪಾತ್ರ ಇದ್ದುದರಿಂದ ನನಗೂ ಚಾಲೆಂಜ್‌ ಎನಿಸಿತ್ತು. ರಾಮ್‌ನಾರಾಯನ್‌ ಹೆಣೆದ ಕಥೆಯೊಳಗೆ ಗಟ್ಟಿತನವಿತ್ತು. ಹಾಗಾಗಿ ಅವರೊಂದಿಗೆ ಕೆಲಸ ಮಾಡಲೇಬೇಕು ಎನಿಸಿ ಈ ಚಿತ್ರ ಒಪ್ಪಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿಯೇ ಸಿನಿಮಾ ಮಾಡಿದ್ದಾರೆ. ರಾಮ್‌ನಾರಾಯಣ್‌ ಒಮ್ಮ ಕಮರ್ಷಿಯಲ್ ನಿರ್ದೇಶಕರ ಜೊತೆಗೆ ಒಳ್ಳೆಯ ಮನುಷ್ಯ. ಹಾಗಾಗಿಯೇ ಈ ಚಿತ್ರ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ನಾನು ಮೂರು ವಿಭಿನ್ನ ಶೇಡ್‌ ಇರುವ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೇನೋ ಗೊತ್ತಿಲ್ಲ. ಆದರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಇನ್ನು, ನಿರ್ಮಾಪಕ ಬಸವರಾಜ್‌ ಅವರು ಸಾಕಷ್ಟು ಖರ್ಚು ಮಾಡಿದ್ದಾರೆ. “ಅಬ್ಬರ” ಅಂದಾಕ್ಷಣ, ಎಲ್ಲವೂ ಅಬ್ಬರವಾಗಿರಬೇಕು. ಅದು ತೆರೆಯ ಮೇಲೆ ನೋಡಿದರೆ, ಅಷ್ಟೊಂದು ಅಬ್ಬರ ಅಂತ ಗೊತ್ತಾಗುತ್ತೆ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಕೊಟ್ಟಿದ್ದಾರೆ. ಸಿನಿಮಾ ಅಬ್ಬರವಾಗಿದೆʼ ಎನ್ನುತ್ತಾರೆ ಪ್ರಜ್ವಲ್‌ ದೇವರಾಜ್.‌

ಮೂವರ ಬೆಡಗಿಯರ ಜೊತೆ ಡಿಂಗು ಡಾಂಗು
ನಾಯಕಿ ನಿಮಿಕಾ ರತ್ನಾಕರ್‌ ಅವರಿಗೆ ಇಲ್ಲಿ ಒಂದು ರೀತಿಯ ಬಜಾರಿ ಪಾತ್ರವಂತೆ. ಪ್ರಜ್ವಲ್‌ ಅವರ ಜೊತೆ ಕೆಲಸ ಮಾಡಿದ್ದು ಅವರಿಗೆ ಮರೆಯಲಾರದ ಅನುಭವವಂತೆ. ತುಂಬಾನೇ ಕಂಫರ್ಟಬಲ್ ಟೀಮ್‌ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ” ಎಂಬುದು ನಿಮಿಕಾ ಮಾತು. ಇನ್ನು, ರಾಜ್‌ಶ್ರೀ ಪೊನ್ನಪ್ಪ ಅವರು ಇಷ್ಟು ದಿನ ಮುಂಬೈನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ, ಕನ್ನಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಅವರು, “ಅಬ್ಬರ” ಮೂಲಕ ಎಂಟ್ರಿಯಾಗಿದ್ದೇನೆ. ನಾನಿಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಸಲ ಪ್ರಜ್ವಲ್‌ ಸರ್‌ ಜೊತೆ ಕೆಲಸ ಮಾಡಿದ್ದೇನೆ. ಪಾತ್ರದ ಬಗ್ಗೆ ಹೇಳುವುದಾದರೆ, ಅದೊಂದು ಸಿಂಪಲ್‌ ಹುಡುಗಿಯ ಪಾತ್ರ. ತುಂಬಾನೇ ಮುಗ್ಧತೆ ಇರುವಂಥದ್ದು. ನಿರ್ದೇಶಕ ರಾಮ್‌ ನಾರಾಯಣ್‌ ಸರ್‌, ನನ್ನ ನಂಬಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯೂ ಇದೆ. ಇನ್ನು, ನಿರ್ಮಾಪಕ ಬಸವರಾಜ್‌ ಅವರು, ಯಾವುದಕ್ಕೂ ಕಡಿಮೆ ಮಾಡದೆ, ಅದ್ಧೂರಿಯಾಗಿಯೇ ಸಿನಿಮಾ ಮಾಡಿದ್ದಾರೆ ಎಂದರು ರಾಜ್‌ಶ್ರೀ ಪೊನ್ನಪ್ಪ.  ಲೇಖಾಚಂದ್ರ ಅವರಿಲ್ಲಿ ಡಾಕ್ಟರ್‌ ಪಾತ್ರ ಮಾಡಿದ್ದು, ಅವರಿಗೇ ಇಲ್ಲೊಂದು ಖಾಯಿಲೆ ಇರುವ ಪಾತ್ರ ಕೊಟ್ಟಿದ್ದಾರಂತೆ. ಅದು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಲೇಖಾಚಂದ್ರ, ಪ್ರಜ್ವಲ್‌ ಜೊತೆ ರವಿಶಂಕರ್‌ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆ ಎನಿಸಿದೆ ಎನ್ನುತ್ತಾರೆ ಅವರು.

ಗೆಳೆಯನಿಗೆ ಮಾಡಿದ ಚಿತ್ರ
ನಿರ್ಮಾಪಕ ಬಸವರಾಜ್‌ ಮಂಚಯ್ಯ (ಹಿತ್ತಲಪುರ) ಅವರು ಈ ಹಿಂದೆ “ಬಿ೩” ಸಿನಿಮಾ ಮಾಡಿದ್ದರು. ನಿರ್ದೇಶಕ ರಾಮ್‌ನಾರಾಯಣ್‌ ಮತ್ತು ನಿರ್ಮಾಪಕ ಬಸವರಾಜ್‌ ಕಳೆದ ಹತ್ತು ವರ್ಷಗಳ ಗೆಳೆಯರಂತೆ. ಹತ್ತು ವರ್ಷದ ಹಿಂದೆ ಒಂದು ಸಿನಿಮಾ ಮಾಡೋಣ ಅಂತ ನಿರ್ಮಾಪಕರು ಹೇಳಿದ್ದರಂತೆ. ಆದರೆ, ಕಾಲ ಕೂಡಿ ಬಂದಿರಲಿಲ್ಲವಂತೆ. ಈಗ “ಅಬ್ಬರ” ಮೂಲಕ ಅದು ಸಾಧ್ಯವಾಗಿದೆ. ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿ ನನಗಿದೆ” ಎನ್ನುತ್ತಾರೆ ಬಸವರಾಜ್‌ ಮಂಚಯ್ಯ.

Categories
ಸಿನಿ ಸುದ್ದಿ

ಮನೆ ಹತ್ತಿರ ಬರಬೇಡಿ, ನೀವಿರುವ ಕಡೆಯಿಂದಲೇ ಹರಸಿ, ಹಾರೈಸಿ

ಅಭಿಮಾನಿಗಳಲ್ಲಿ  ರೋರಿಂಗ್ ಸ್ಟಾರ್ ಶ್ರೀ ಮುರಳಿ‌ ಮನವಿ

 

ನಟ ರೋರಿಂಗ್ ಸ್ಟಾರ್ ಶ್ರೀ‌ಮುರಳಿ ಅವರಿಗೆ ನಾಳೆ( ಡಿ.17) ಹುಟ್ಟು ಹಬ್ಬ.‌‌ ಆದರೆ ಈ ಬಾರಿಯ ಹುಟ್ಟು ಹಬ್ಬವನ್ಜು ಅವರು ತುಂಬಾ ಸರಳವಾಗಿ‌ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಕೊರೋನಾ. ಪ್ರತಿ ವರ್ಷ ಈ ದಿನ‌ ಬಂತೆಂದರೆ ಮನೆ ಮುಂದೆ ‌ಸಾವಿರಾರು ಮಂದಿ ಅಭಿಮಾನಿಗಳ ಜತೆಗೆ ಕೇಕ್ ಕತ್ತರಿಸಿ, ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ನಟ ಶ್ರೀ‌ಮುರಳಿ, ಈ ಬಾರಿ ಕೊರೋನಾ‌ ಕಾರಣದಿಂದಲೇ ಸಿಂಪಲ್ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾಗಿ ಅಂದು ಅಭಿಮಾನಿಗಳು‌ ಎಲ್ಲೆಂದೆಲ್ಲಿಂದಲೋ ‌ಬಂದು‌ ಮನೆ ಮುಂದೆ ಸೇರುವುದು ಬೇಡ ಅಂತ ಮನವಿ‌ ಮಾಡಿಕೊಂಡಿದ್ದಾರೆ.

ಕೊರೋನಾ ಕಾರಣಕ್ಕೆ ಈವರ್ಷ ಕನ್ನಡದ ಬಹಳಷ್ಟು ನಟರು ಹಾಗೂ ನಟಿಯರು ತಮ್ಮ‌ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದು ನಿಮಗೂ ಗೊತ್ತು, ಅದೇ ರೀತಿ ನಟ ಶ್ರೀ‌ಮುರಳಿ ಕೂಡ ಅದೇ ಸೂತ್ರ ಪಾಲಿಸುತ್ತಿದ್ದಾರೆ. ಅದು‌ ಅನಿವಾರ್ಯ ಕೂಡ. ಕೊರೋನಾ‌ ತಡೆಗಟ್ಟಬೇಕಾದರೆ, ಹೆಚ್ವು ಜನ ಒಂದೆಡೆ ಸೇರುವುದು, ಸಭೆ – ಸಮಾರಂಭ ನಡೆಸುವುದಕ್ಕೂ ಬ್ರೇಕ್ ಹಾಕಬೇಕಿದೆ. ಒಬ್ಬ ಜನಪ್ರಿಯ ನಟನಾಗಿ ಶ್ರೀ‌ಮುರಳಿ ಕೂಡ ಅದನ್ನೇ ಪಾಲಿಸುತ್ತಿರುವುದು ವಿಶೇಷ.‌‌

ಆದರೆ ಅಭಿಮಾನಿಗಳಿಗೆ ಬೇಸರ. ಯಾಕಂದ್ರೆ ತಮ್ಮ‌ನೆಚ್ಚಿನ‌ ನಟನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕಾಗಿ. ಆದರೆ ಶ್ರೀ ಮುರಳಿ ಅವರು ಅದಕ್ಕೂ ಅಭಿಮಾನಿಗಳಲ್ಲಿ ತಮ್ಮದೇ ರೀತಿಯಲ್ಲಿ‌ಮನವಿ‌ಮಾಡಿಕೊಂಡಿದ್ದಾರೆ.

ಅಭಿಮಾನಿಗಳೇ ದೇವರೆಂದು ಹೇಳಿ, ಅದನ್ನು ಪ್ರಾಮಾಣಿಕವಾಗಿ ಪಾಲಿಸಿದ ಅಣ್ಣಾವ್ರ ಮಾತಿನಿಂತೆ ನಡೆಯುವ ನಟ ನಾನು. ಯಾವುದೇ ಕಲಾವಿದನಿಗೆ ಆಭಿಮಾನಿಗಳೆ ದೇವರು. ಅವರಿಂದಲೇ ನಮ್ಮ ಸ್ಟಾರ್‌ಗಿರಿ ಎಂಬುವುದು ನನ್ನ ಬಲವಾದ ನಂಬಿಕೆ. ನಾನು ಕೂಡ ನಟ ಗುರುತಿಸಿಕೊಂಡಿದ್ದೇನೆಂದರೆ ಅದಕ್ಕೆ ಕಾರಣ ಅಭಿಮಾನಿಗಳ ಆಶೀರ್ವಾದ. ಆದರೆ ಕೊರೋನಾದ ಅಡಚಣೆ ಇರುವುದು ನಿಮಗೂ ತಿಳಿದಿದ್ದೆ. ಹಾಗಾಗಿ ಡಿಸೆಂಬರ್‌ 17 ರಂದು ನನ್ನ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು‌ಸ್ಪಷ್ಟ ಪಡಿಸಿದ್ದಾರೆ.

ಈ ಬಾರಿಯ ನನ್ನ ಹುಟ್ಟು ಹಬ್ಬ ತುಂಬಾ ಸರಳವಾಗಿರುತ್ತೆ. ಅದರ ಜತೆಗೆ ಆ ದಿನ ನಾನು ಮನೆಯಲ್ಲಿರುವುದಿಲ್ಲ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕುಟುಂಬ ಸಮೇತ ಹೊರಗಡೆ ಹೋಗುತ್ತೇನೆ. ಇಂತಹ ಸಮಯದಲ್ಲಿ ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಆಚರಣೆಗೆ ಎಲ್ಲಿಂದಲೋ ಬಂದು, ನಮ್ಮ ಮನೆ ಮುಂದೆ ಜಮಾಯಿಸಿಕೊಳ್ಳುವುದು ತರವಲ್ಲ. ಹಾಗಂತ ನಾನು ನಿಮ್ಮ ಪ್ರೀತಿ, ಆಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದೆನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಅಭಿಮಾನಿಗಳ ಲ್ಲಿ‌ಮನವಿ‌‌ಮಾಡಿಕೊಂಡಿದ್ದಾರೆ ನಟ ಶ್ರೀ‌ಮುರಳಿ.

ಈ ಬಾರಿಯ ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿರುವುದು ಅವರ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಾಗಿಲ್ಲ. ಹಾಗಾಗಿ ಗುರುವಾರ ಬೆಳಗ್ಗೆಯಿಂದಲೇ ಅವರ ಮನೆ ಎದುರು ಸೇರಿಕೊಂಡಿದ್ದರ ವಿಷಯ ಕೇಳಿ, ಶ್ರೀಮುರಳಿ ಅವರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಅದೇ ಕಾರಣಕ್ಕೆ‌ ‌ಈ ಬಾರಿಯ ಸರಳ ಹುಟ್ಟು ಹಬ್ಬದ ಆಚರಣೆಯ ತಮ್ಮ ನಿರ್ಧಾರ ಅಭಿಮಾನಿಗಳಿಗೆ ಗೊತ್ತಾಗಲಿದೆ ಎಂದು ಅವರು ಅಧಿಕೃತ ವಾಗಿಯೇ ಸಿನಿ ಲಹರಿ ಜತೆ ಮಾತನಾಡಿದರು.

Categories
ಸಿನಿ ಸುದ್ದಿ

ಬರಗಾಲದಲ್ಲೂ ಬೆಳೆ ತೆಗೆದ ಆಕ್ಟ್‌ 1978

 ಟೆನೆಟ್‌ ಗೂ ಟಾಂಟ್‌ ಕೊಟ್ಟ ಕನ್ನಡ ಸಿನಿಮಾ

ಆಕ್ಟ್‌ 1978 ಚಿತ್ರ ತೆರೆ ಕಂಡು ಯಶಸ್ವಿ 25 ದಿನಗಳ ಪ್ರದರ್ಶನ ಕಂಡಿದೆ. ಕೊರೋನಾ ಆತಂಕದ ನಡುವೆಯೇ ಈ ಚಿತ್ರ ಇಷ್ಟು ದಿನಗಳೂ ಯಶಸ್ವಿ ಪ್ರದರ್ಶನ ಕಂಡಿದ್ದು ಒಂದ್ರೀತಿ ಮಿರಾಕಲ್.‌ ಹಾಗೆ ನೋಡಿದರೆ ಉತ್ತಮ ಕಲೆಕ್ಷನ್‌ ಜತೆಗೆಯೇ ೨೫ ದಿನಗಳ ಪ್ರದರ್ಶನ ಎನ್ನುವುದು ಬರಗಾಲದಲ್ಲಿ ಬೆಳೆ ತೆಗೆದ ಹಾಗೆ. ಕೊರೋನಾ ಕಾರಣಕ್ಕೆ ಲಾಕ್‌ಡೌನ್ ಆಗಿ ಹೆಚ್ಚು ಕಡಿಮೆ ಐದಾರು ತಿಂಗಳಿಗೆ ಚಿತ್ರ ಮಂದಿರಗಳು ಮತ್ತೆ ಒಪನ್ ಅದವು. ಅದರೂ ಕೊರೋನಾ ಆತಂಕ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಚಿತ್ರ ಮಂದಿರಗಳು ಅಷ್ಟೋ ಇಷ್ಟೋ ಸುರಕ್ಷತೆ ಕ್ರಮಗಳ ಮೂಲಕ ಒಪನ್‌ ಅಗಿದ್ದರೂ, ಚಿತ್ರ ಮಂದಿರಕ್ಕೆ ಬರುವಷ್ಟು ಜನ ಇನ್ನು ಕೊರೋನಾ ಆತಂಕದಿಂದ ದೂರವಾಗಿಲ್ಲ. ಇಂತಹ ದಿನಗಳನಡುವೆಯೇ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆಯಂದ್ರೆ, ಬರಗಾಲದಲ್ಲಿ ಬೆಳೆ ತೆಗೆದ ಹಾಗೆಯೇ ಹೌದು.

ಲಾಕ್‌ ಡೌನ್‌ ನಂತರದ ಮೊದಲ ಸಿನಿಮಾವಾಗಿ ಆಕ್ಟ್‌ 1978 ತೆರೆಗೆ ಬಂದಿದ್ದು ಕೂಡ ಒಂದು ಸಾಹಸವೇ. ಎಲ್ಲರಿಗೂ ಈ ಸಿನಿಮಾದ ಕತೆ ಹೇಗೋ ಏನೋ ಎನ್ನುವಂತೆಯೇ ಇತ್ತು. ಚಿತ್ರ ಮಂದಿರಕ್ಕೆ ಜನ ಬರದಿದ್ದರೆ ನಿರ್ಮಾಪಕರ ಕತೆ ಏನು ಎನ್ನುವುದು ಹಲವರ ಆತಂಕವೂ ಆಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂದಿರಗಳಲ್ಲಿ ಅಚ್ಚರಿಯೇ ನಡೆದುಹೋಯಿತು. ಚಿತ್ರ ಮಂದಿರಗಳಿಗೆ ಜನ ಬಂದರು. ಆಕ್ಟ್‌ 1978 ಚಿತ್ರ ತಂಡಕ್ಕೆ ಖುಷಿ ತಂದಿತು. ಅಲ್ಲಿಂದ ಶುರುವಾದ ಈ ಚಿತ್ರದ ಯಶಸ್ವಿ ಜರ್ನಿ , ಇಲ್ಲಿಗೀಗ ೨೫ ದಿನಗಳನ್ನು ಪೂರೈಸಿದೆ. ವಿಶೇಷ ಅಂದ್ರೆ, ಕಳೆದ ವಾರ ಮಲ್ಟಿಪ್ಲೆಕ್ಸ್‌ ಗಳಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ʼ ಆರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದು ಜನ ಆಶೀರ್ವಾದ. ವಾರದ ದಿನಗಳಲ್ಲಂತೂ, ಅದ್ಬುತ ಪ್ರತಿಕ್ರಿಯೆ ಸಿಗುತ್ತಾ ಬಂದಿದೆ. ಕಳೆದ ವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ಇದು ಕನ್ನಡಿಗರು ಕೊಟ್ಟ ಬೆಂಬಲ. ಇದೆಲ್ಲ ನೋಡಿದರೆ ಖುಷಿ ಆಗುತ್ತದೆʼ ಎನ್ನುತ್ತಾರೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟ ಸಂಚಾರಿ ವಿಜಯ್.‌ ಹಾಗೆಯೇ ಚಿತ್ರ ತಂಡ ಚಿತ್ರ ಮಂದಿರಗಳಿಗೆ ಭೇಟಿ ನೀಡಿ, ಪ್ರೇಕ್ಷಕರ ಜತೆಗೆ ಮಾತುಕತೆ ನಡೆಸಿದ ಸಂದರ್ಭಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದೆ. ಎಲ್ಲ ಕಡೆಯೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Categories
ಸಿನಿ ಸುದ್ದಿ

“ರಾ” ಗಿಣಿ ಪರಾರಿ! ದೂರದ ದುಬೈನಲ್ಲಿ ಅವರಿಗೇನು ಕೆಲಸ?

ಅವರೇಕೆ ಹೀಗೆ ಮಾಡಿದರು?

ಆ ರಾಗಿಣಿ ಬೇರೆ… ಈ “ರಾ” ಗಿಣಿ ಬೇರೆ…

“ರಾ”… ಗಿಣಿ ಈಗ ಪರಾರಿ…!
ಅರೇ, ಇದೇನಪ್ಪಾ, ಡ್ರಗ್ಸ್‌ ಕೇಸ್‌ನಲ್ಲಿ ರಾಗಿಣಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ಯಾವಾಗ ಜೈಲಿಂದ ಪರಾರಿಯಾದರು ಎಂಬ ಪ್ರಶ್ನೆ ಮತ್ತು ಅಚ್ಚರಿ ಎರಡೂ ಆಗಬಹುದು. ವಿಷಯವಿಷ್ಟೇ, ಇಲ್ಲಿ ಹೇಳುತ್ತಿರುವ ವಿಷಯ ನಟಿ ರಾಗಿಣಿ ವಿಷಯವಲ್ಲ. “ರಾ” ಎಂಬ ಹೊಸಬರ ಚಿತ್ರದ ನಾಯಕಿಯೊಬ್ಬರ ವಿಷಯ.

ಹೌದು, ನವ ನಿರ್ದೇಶಕ ರಾಜೇಶ್‌ಗೌಡ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ “ರಾʼ ಚಿತ್ರದ ನಾಯಕಿ ಸನಾನೈಕ್‌ ಎಂಬುವವರು ಚಿತ್ರದ ಪ್ರಚಾರಕ್ಕೆ ಬಾರದೆ, ಎಲ್ಲೂ ಕಾಣಿಸುತ್ತಿಲ್ಲ. ಸರಿಯಾಗಿ ಚಿತ್ರತಂಡಕ್ಕೆ ಸ್ಪಂದಿಸುತ್ತಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಅಷ್ಟೇ ಅಲ್ಲ, ಸ್ವತಃ ನಿರ್ದೇಶಕ ರಾಜೇಶ್‌ಗೌಡ ಅವರೇ, ನಾಯಕಿ ಸನಾನೈಕ್‌ ಫೋನ್‌ಗೂ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸನಾ‌ ನೈಕ್

ವಿಷಯವೇನು…?
ಕನ್ನಡದಲ್ಲಿ “ರಾ” ಹೆಸರಿನ ಸಿನಿಮಾವೊಂದು ರೆಡಿಯಾಗಿರುವುದು ಗೊತ್ತೇ ಇದೆ. ಚಿತ್ರಕ್ಕೆ ಸೆನ್ಸಾರ್‌ ಕೂಡ ಆಗಿದೆ. ಈಗ ಪ್ರೇಕ್ಷಕರ ಎದುರು ಬರಲು ಚಿತ್ರ ರೆಡಿಯಾಗಿದೆ. ವಾಹಿನಿಯಲ್ಲಿ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ್ದ ರಾಜೇಶ್‌ಗೌಡ, ಸುಮಾರು ವರ್ಷಗಳ ಅನುಭವದ ಮೇಲೆ “ರಾ” ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಈ ಸಿನಿಮಾಗೆ, ಸನಾ ನೈಕ್‌ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ರಾಜೇಶ್‌ಗೌಡ, ಈಗ ಪ್ರಚಾರಕ್ಕೆ ನಾಯಕಿಯನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಆದರೆ, ನಾಯಕಿ ಮಾತ್ರ, ಇವರ ಫೋನ್‌ ಕಾಲ್‌ಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಸಿನಿಮಾ ಕೆಲಸಗಳು ಕೊರೊನಾ ಮುನ್ನವೇ ಮುಗಿದಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿತ್ತು. ಈಗ ಎಲ್ಲವೂ ಮೆಲ್ಲನೆ ಓಪನ್‌ ಆಗಿರುವುದರಿಂದ “ರಾ” ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಇದಕ್ಕೂ ಮುನ್ನ, ರಾಜೇಶ್‌ಗೌಡ ಅವರು, ೨೦೧೯ರಲ್ಲಿ ದುಬೈನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಆಗ ನಾಯಕಿ ಸನಾನೈಕ್‌ ಅವರು ದುಬೈನಲ್ಲೇ ಇದ್ದರೂ, ಅವರ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಉಡುಪಿಯಲ್ಲೂ ಒಂದು ದೊಡ್ಡ ಈವೆಂಟ್‌ನಲ್ಲೂ ಭಾಗವಹಿಸಲಿಲ್ಲ. ಎಂಬ ಬೇಸರದ ಮಾತುಗಳನ್ನು ನಿರ್ದೇಶಕ ರಾಜೇಶ್‌ಗೌಡ ಹೊರಹಾಕುತ್ತಾರೆ. ಸದ್ಯಕ್ಕೆ ದುಬೈನಲ್ಲೇ ಬೀಡುಬಿಟ್ಟಿರುವ ನಾಯಕಿ ಸನಾನೈಕ್‌, ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ ಫೋನ್‌ ಮಾಡಿದರೂ ಯಾವುದೇ ರೀತಿಯಲ್ಲೂ ಉತ್ತರ ಕೊಡುತ್ತಿಲ್ಲ. ಆದರೆ, ಫೆಬ್ರವರಿಯಲ್ಲಿ ಬರ್ತೀನಿ ಅಂತಿದ್ದಾರೆ ವಿನಃ, ಬೇರೇನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.


ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ನಾಯಕಿ ಸನಾನೈಕ್‌ ನಿರ್ದೇಶಕರಿಗೆ ಕಾಣುತ್ತಿಲ್ಲ, ಮಾತಿಗೂ ಸಿಗುತ್ತಿಲ್ಲ. ಉಡುಪಿಯೊಲ್ಲೊಂದು ಈವೆಂಟ್‌ ಮಾಡಿದ್ದರೂ ಬಂದಿಲ್ಲ. ಹೊಸಬರು ಎಂಬ ಕಾರಣಕ್ಕೆ ಅವರಿಗೆ ನಾವು ಅವಕಾಶ ಕೊಟ್ಟೆವು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈಗ ನೋಡಿದರೆ, ಪ್ರಚಾರಕ್ಕೆ ಬಾರದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ದುಬೈನಲ್ಲಿದ್ದೇನೆ ಅಂತಾರೆ. ಆದರೆ, ಅಲ್ಲೇನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗುವುದೇ ಕಷ್ಟ. ಆದರೆ, ಅವಕಾಶ ಸಿಕ್ಕರೂ ಈ ನಾಯಕಿ ಚಿತ್ರತಂಡಕ್ಕೆ ಹೀಗೆಲ್ಲಾ ಬೇಜಾರು ಮಾಡುತ್ತಿದ್ದಾರೆ. ಒಂದು ಸಿನಮಾ ಮಾಡಿ ಮುಗಿಸುವುದು ಸುಲಭದ ಕೆಲಸವಲ್ಲ. ನಿರ್ಮಾಪಕರು ನಂಬಿ ಹಣ ಹಾಕಿರುತ್ತಾರೆ. ಅವರಿಗೆ ಹಣ ಹಿಂದಿರುಗಬೇಕಾದರೆ, ಸಿನಿಮಾ ರಿಲೀಸ್‌ ಆಗಬೇಕು, ರಿಲೀಸ್‌ ಮಾಡಬೇಕಾದರೆ, ಅದಕ್ಕೂ ಮೊದಲು ಜನರಿಗೆ ಸಿನಿಮಾ ಬಗ್ಗೆ ಗೊತ್ತಾಗಬೇಕು, ಗೊತ್ತಾಗಬೇಕಾದರೆ, ಸರಿಯಾಗಿಯೇ ಸಿನಿಮಾ ಪ್ರಚಾರ ಮಾಡಬೇಕು. ಆದರೆ, ಪ್ರಚಾರ ಮಾಡಲು ಹೊರಟರೆ, ನಾಯಕಿಯೇ ಸಿಗುತ್ತಿಲ್ಲ. ಏನು ಮಾಡಬೇಕು ಎಂಬುದು ನಿರ್ದೇಶಕರ ಅಳಲು.

ನಿರ್ದೇಶಕ ರಾಜೇಶ್‌ಗೌಡ

ಅದೇನೆ ಇರಲಿ, ಒಂದು ಕನ್ನಡ ಸಿನಿಮಾದ ಕನ್ನಡದ ನಾಯಕಿಯಾಗಿರುವ ಸನಾನೈಕ್‌, ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೆ ದೂರದ ದುಬೈನಲ್ಲಿ ಕುಳಿತರೆ, ಇಲ್ಲಿ ಸಿನಮಾಗೆ ಹಣ ಹಾಕಿರುವ ನಿರ್ಮಾಪಕರ ಗತಿ ಏನು? ಹತ್ತಾರು ಕನಸು ಕಟ್ಟಿಕೊಂಡಿರುವ ನಿರ್ದೇಶಕರ ಪಾಡೇನು? ಈಗಲಾದರೂ ನಾಯಕಿ ಸನಾನೈಕ್‌ ಇಂಡಿಯಾಗೆ ಬಂದು, ತಮ್ಮ “ರಾ” ಸಿನಿಮಾದ ಪ್ರಚಾರಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!