ಕಾಸರವಳ್ಳಿ ಚಿತ್ರಕ್ಕೆ ರೋಮ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾಗೆ ಸಿಕ್ಕ ಗೌರವ

 

ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಪ್ರತಿಷ್ಠಿತ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ರೋಂನಲ್ಲಿ ನಡೆದ ಏಷ್ಯಾಟಿಕಾ ಚಿತ್ರೋತ್ಸವದಲ್ಲಿ ಡಿಸೆಂಬರ್‌ ೨೧ರಂದು ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಗಿರೀಶ್‌ ಕಾಸರವಳ್ಳಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರ ಖ್ಯಾತ ಸಾಹಿತಿ, ಗೀತ ರಚನೆಕಾರ ಜಯಂತ್‌ ಕಾಯ್ಕಿಣಿ ಅವರ “ಹಾಲಿನ ಮೀಸೆ” ಕಥೆ ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನುಬೆಳೆಸಿ, ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸ ಶ್ರೇಷ್ಠ ಪುರಂದರ ದಾಸರ ಹಾಡೊಂದರ ಶೀರ್ಷಿಕೆ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ೬೦ರ ದಶಕದ ಕನಸು ಮತ್ತು ಈ ಕಾಲದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ ಅನ್ನೋದೇ ಕಥೆ.  “ದ್ವೀಪ” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್.ಗುಣ ಶೇಖರನ್‌ ಸಂಕಲನವಿದೆ. ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನವಿದೆ. ಅನನ್ಯ ಕಾಸರವಳ್ಳಿ ಅವರ ವಸ್ತ್ರ ವಿನ್ಯಾಸವಿದ್ದು, ಸಾವಂತ್‌, ಕಿರಣ್‌ ಕುಮಾರ್‌ ಹಾಗೂ ಯಶವಂತ ಯಾದವ್‌ ಅವರ ಸಹನಿರ್ದೇನವಿದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್‌ ಬಾಬು ಅವರ ಪ್ರಸಾಧನ ಇದೆ. ಮೋಹನ್‌ ಕಾಮಾಕ್ಷಿ ಅವರ ತಾಂತ್ರಿಕ ನೆರವು ಚಿತ್ರಕ್ಕಿದೆ.

ಶಿವಕುಮಾರ್‌, ನಿರ್ಮಾಪಕ

 

ಚಿತ್ರದಲ್ಲಿ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತ ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್‌, ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್‌, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇತರರು ಇದ್ದಾರೆ.
೨೦೧೦ ರಲ್ಲಿ “ಕೂರ್ಮಾವತಾರ” ಚಿತ್ರದ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣದತ್ತ ಮುಖಮಾಡಿದ್ದ ಗಿರೀಶ್‌ ಕಾಸರವಳ್ಳಿ ಅವರು ಹತ್ತು ವರ್ಷಗಳ ಬಳಿಕ ಒಂದೊಳ್ಳೆಯ ಸಿನಿಮಾ ಮಾಡಿದ್ದು, ಇದು ಅವರ ೧೫ನೇ ಚಿತ್ರ. ಇನ್ನು, ಹಲವಾರು ಯಶಸ್ವಿ ಧಾರಾವಾಹಿ ನಿರ್ಮಿಸಿರುವ ನಿರ್ಮಾಪಕ ಎಸ್.ವಿ.ಶಿವಕುಮಾರ್‌ ಅವರ ಮೂರನೇ ಸಿನಿಮಾ ಇದು. ಸಿನಿಮಾ ರೆಡಿಯಾಗಿದ್ದು, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.

 

Related Posts

error: Content is protected !!