Categories
ಸಿನಿ ಸುದ್ದಿ

ನಂದಕಿಶೋರ್ ಹೊಸ ಚಿತ್ರಕ್ಕೆ ಶ್ರೇಯಸ್‌ ಹೀರೋ; ಹೆಸರಿಡದ ಚಿತ್ರದಲ್ಲಿ ಕೆ.ಮಂಜು ಪುತ್ರ

ನಿರ್ದೇಶಕ ನಂದಕಿಶೋರ್ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ನಂದಕಿಶೋರ್‌ ಅವರಿಗೆ ಸ್ಟಾರ್‌ ಸಿನಿಮಾಗಳನ್ನು ಮಾಡೋದು ಗೊತ್ತು. ಗೆಲ್ಲೋದು ಗೊತ್ತು. ಹಾಗೆಯೇ ಹೊಸಬರ ಸಿನಿಮಾಗಳ ಮೂಲಕ ಸದ್ದು ಮಾಡೋದು ಕೂಡ ಗೊತ್ತು. ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ. ಅವರೀಗ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ.

ಶ್ರೇಯಸ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರ ಅನೌನ್ಸ್‌ ಮಾಡಲಾಗಿದೆ. ಆದರೆ, ಈ ಸಿನಿಮಾ ಯಾವಾಗ ಅನ್ನೋದು ಗೊತ್ತಿಲ್ಲ. ಈಗ ಸದ್ಯ ಶ್ರೇಯಸ್‌ “ವಿಷ್ಣುಪ್ರಿಯ” ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ನಂದಕಿಶೋರ್‌ ಕೂಡ “ಪೊಗರು” ಸಿನಿಮಾ ನಂತರ ಧ್ರುವ ಸರ್ಜಾ ಅವರಿಗೆ ಮತ್ತೊಂದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆದರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತೇ ಅನ್ನೋದು ಮಾತ್ರ ಗೌಪ್ಯ.

ಯುಗಾದಿ ಹಬ್ಬದ ಬಳಿಕ ಈ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಗುಜ್ಜಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಟಗರು” ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಸದ್ಯಕ್ಕೆ “ಪ್ರೊಡಕ್ಷನ್ ನಂ ೧” ಹೆಸರಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಕಣ್ಣೇ ಅಧಿರಿಂದಿ ಅಂತ ಹಾಡಿದ ಗಾಯಕಿ ಮಂಗ್ಲಿ ಕನ್ನಡಕ್ಕೆ ಬಂದ್ರು ; ಕರಿಯ ಐ ಲವ್‌ ಯು ಸಿನಿಮಾಗೆ ಧ್ವನಿ ಕೊಟ್ರು…

“ಕಣ್ಣೇ ಅಧಿರಿಂದಿ…
ಬಹುಶಃ ಈ ಹಾಡು ಕೇಳದವರಿಲ್ಲ. ಇಂಥದ್ದೊಂದು ಸೂಪರ್‌ ಹಿಟ್‌ ಹಾಡಿಗೆ ಧ್ವನಿಯಾಗಿದ್ದು ಗಾಯಕಿ ಮಂಗ್ಲಿ. ದರ್ಶನ್‌ ಅಭಿನಯದ “ರಾಬರ್ಟ್”‌ ಚಿತ್ರದ ತೆಲುವು ಅವರತಣಿಕೆಗೆ “ಕಣ್ಣೇ ಅಧಿರಿಂದಿ..” ಹಾಡು ಹಾಡಿ ಕನ್ನಡಿಗರ ಮನವನ್ನೂ ಗೆದ್ದಿದ್ದ ಮಂಗ್ಲಿ, ಕನ್ನಡದಲ್ಲಿ ಹಾಡೋದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಒಳ್ಳೆಯ ಗಾಯಕಿ. ಇವರ ಈ ಗಾಯನದ ಹಿಂದೆ ದೊಡ್ಡ ಕಥೆಯೇ ಇದೆ. ತಮ್ಮ ಕಂಠದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ, “ರಾಬರ್ಟ್” ಚಿತ್ರಕ್ಕೆ ಹಾಡಿದ ಆ ಹಾಡು, ನಿಜಕ್ಕೂ ದೊಡ್ಡ ಹೆಸರು ತಂದುಕೊಟ್ಟಿದೆ. ಇನ್ನು, “‘ರಾಬರ್ಟ್” ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲೂ ಮಂಗ್ಲಿ ವೇದಿಕೆಯಲ್ಲಿ “ಕಣ್ಣೇ ಅಧಿರಿಂದಿ” ಹಾಡು ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು.

ಈಗಲೂ ಈ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇಂಥದ್ದೊಂದು ಹಾಡು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮಂಗ್ಲಿ, ಕನ್ನಡದಲ್ಲೊಂದು ಹಾಡು ಹಾಡಿದ್ದಾರೆ. “ಕರಿಯಾ ಐ ಲವ್ ಯು” ಎಂಬ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.

ಅಂದಹಾಗೆ, ಚಿತ್ರದ “ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ…” ಎನ್ನುವ ಹಾಡನ್ನು ಹಾಡಿದ್ದಾರೆ. ಲೋಕೇಶ್‌ ಸಂಗೀತ ನೀಡಿರುವ ಈ ಹಾಡಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್‌ ನೀಡಿದ್ದಾರೆ. ಚಿತ್ರದ ನಾಯಕ ಮಂಜುನಾಥ್‌, ಈ ಗಾಯಕಿಯನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಾಂಗ್‌ ರೆಕಾರ್ಡಿಂಗ್ ಮುಗಿದಿದೆ. ಹಾಡು ಕೂಡ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡಕ್ಕಿದೆ.

Categories
ಸಿನಿ ಸುದ್ದಿ

ಟೀಸರ್‌ ನಂತರ ಮೇಕಿಂಗ್ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಮೂಲಕ ಸೌಂಡ್‌ ಮಾಡಲು ಹೊರಟ ಕಟಿಂಗ್‌ ಶಾಪ್‌ ಚಿತ್ರ ತಂಡ

ಟೀಸರ್‌ ಮೂಲಕ ಸ್ಯಾಂಡಲ್‌ ವುಡ್‌ ನಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಹೊಸಬರʼ ಕಟಿಂಗ್‌ ಶಾಪ್‌ʼ ಸಿನಿಮಾ ಈಗ ಇನ್ನೊಂದು ಹಂತದಲ್ಲಿ ಸುದ್ದಿ ಮಾಡಲು ಹೊರಟಿದೆ. ರಿಲೀಸ್‌ ಪೂರ್ವ ಪ್ರಚಾರದ ಅಂಗವಾಗಿ ಈಗ ಚಿತ್ರ ತಂಡ ಎಪ್ರಿಲ್‌ 7 ರಂದು ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಗೆ ಮುಂದಾಗಿದೆ. ಅಂದು ಸಂಜೆ 6 ಗಂಟೆಗೆ ಪ್ರತಿಷ್ಟಿತ ಪಿಆರ್‌ ಕೆ ಆಡಿಯೋ ಸಂಸ್ಥೆಯ ಮೂಲಕ ಚಿತ್ರದ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಹೊರ ಬರುತ್ತಿದೆ. ಯುವ ಪ್ರತಿಭೆ ಪವನ್‌ ಭಟ್‌ ನಿರ್ದೇಶನ ಈ ಚಿತ್ರದಲ್ಲಿ ಪ್ರವೀಣ್‌, ದೀಪಕ್‌ ಭಟ್‌, ಹಾಗೂ ನಟಿ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗೆಯೇ ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ಹಿರಿಯ ನಿರ್ದೇಶಕರಾದ ದೊರೆ ಭಗವಾನ್‌, ಓಂ ಪ್ರಕಾಶ್‌ ರಾವ್‌, ವತ್ಸಲಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ. ಹಳೇ ಬೇರು ಹೊಸ ಚಿಗುರು ಎನ್ನುವ ಹಾಗೆ ಚಿತ್ರ ತಂಡ ಹಳಬರೊಂದಿಗೆ ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ‌

ಗುರಪುರ ಕೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್‌ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಟಿಂಗ್‌ ಶಾಪ್‌ ಎನ್ನುವ ಚಿತ್ರದ ಶೀರ್ಷಿಕೆಯೇ ಇಲ್ಲಿ ಕೂತೂಹಲಕಾರಿ ಆಗಿದೆ. ಟೈಟಲ್‌ ನೋಡಿದಾಕ್ಷಣ ಇದು ಯಾವುದರ ಕುರಿತ ಸಿನಿಮಾ ಅಂತಂದುಕೊಳ್ಳುವುದು ಕೂಡ ಅಷ್ಟೇ ಸಹಜ. ಆದರೆ ಇದು ಒಬ್ಬ ಸಿನಿಮಾ ಸಂಕಲನಕಾರನ ಕುರಿತ ಸಿನಿಮಾ. ಈಗಾಗಲೇ ಕನ್ನಡದಲ್ಲಿ ಡೈರೆಕ್ಟರ್‌ ಕುರಿತು ಸಿನಿಮಾ ಬಂದಿದೆ. ಹಾಗೆಯೇ ಸ್ಟಾರ್‌ ಕುರಿತು ಸಿನಿಮಾ ಬಂದಿದೆ. ಆದರೆ ಫಸ್ಟ್‌‌ ಟೈಮ್‌ ಒಬ್ಬ ಸಂಕಲನಕಾರನ ಕುರಿತು ಸಿನಿಮಾ ಮಾಡಿದ್ದಾರೆ ಯುವ ನಿರ್ದೇಶಕ ಪವನ್‌ ಭಟ್.‌ ಟೀಸರ್‌ ನಂತರವೀಗ ಚಿತ್ರ ತಂಡ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಮೂಲಕ ಸೌಂಡ್‌ ಮಾಡಲು ಹೊರಟಿದೆ.

Categories
ಸಿನಿ ಸುದ್ದಿ

ಕರಾವಳಿ ಪ್ರತಿಭೆಗಳ ಹೊಸ ಪೆನ್ಸಿಲ್ ಬಾಕ್ಸ್, ಏಪ್ರಿಲ್‌ 9 ಕ್ಕೆ ರಾಜ್ಯಾದ್ಯಂತ ಗ್ರಾಂಡ್‌ ‌ ರಿಲೀಸ್‌

“ಪೆನ್ಸಿಲ್‌ ಬಾಕ್ಸ್‌ʼ ಹೆಸರಿನಲ್ಲೊಂದು ಮಕ್ಕಳ ಸಿನಿಮಾ ರೆಡಿಯಾಗಿದೆ. ದೃಶ್ಯ ಮೂವೀಸ್ ಬ್ಯಾನರಿನಲ್ಲಿ ಇದು ನಿರ್ಮಾಣಗೊಂಡಿದೆ. ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಯ ವಸ್ತು ಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕು ಎಂಬ ಬಯಕೆ. ಇದಾವುದರ ಪರಿವೇ ಇಲ್ಲದೆ ಮುಗ್ಧ ಮಕ್ಕಳ ಮುಗ್ಧ ಪ್ರಪಂಚ, ನಗು ತರಿಸುವ ಹಾಸ್ಯ ಸನ್ನಿವೇಶಗಳೊಂದಿಗೆ ಸಾಗುವ ಕಥೆ ಇದಾಗಿದೆಯಂತೆ. ಸಿನಿಮಾ ಈಗ ರಿಲೀಸ್‌ ಗೆ ರೆಡಿ ಆಗಿದೆ. ಅ ನಿಟ್ಟಿನಲ್ಲಿಯೇ ಚಿತ್ರ ತಂಡ ಸಿದ್ಧತೆ ನಡೆಸಿದೆ. ಅದೇ ನೆಪದಲ್ಲಿ ಚಿತ್ರದ ತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

ಈ ಚಿತ್ರಕ್ಕೆ ದಯಾನಂದ ಎಸ್‌ ರೈ ಬೆಟ್ಟಂಪಾಡಿ ನಿರ್ಮಾಪಕರು. ರಝಾಕ್‌ ಪತ್ತೂರು ಇದರ ನಿರ್ದೇಶಕರು. ಬಹುತೇಕ ಹೊಸಬರು. ಒಂದೊಳ್ಳೆಯ ಕಥೆಯ ಮೂಲಕ ಮಕ್ಕಳ ಸಿನಿಮಾ ಮಾಡ್ಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟಿದೆ. ತುಳುನಾಡಿನ ಹಾಸ್ಯ ಕಲಾವಿದರ ಕನ್ನಡದ ಝಲಕ್ ಇಲ್ಲಿದೆ. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮತ್ತು ನವರಸ ರಾಜ ಭೋಜರಾಜ ವಾಮಂಜೂರು ಅವರ ಪಂಚಿಂಗ್ ಡೈಲಾಗ್ ಈ ಚಿತ್ರದಲ್ಲಿದೆ. ಕಾಮಿಡಿ ಅನ್ನೋದಕ್ಕಿಂತ ಕಥಾ ವಸ್ತು ಇಲ್ಲಿ ಗಮನಾರ್ಹವಾಗಿದೆ. ” ಕಥೆ ಇಲ್ಲಿ ಪ್ರಮುಖ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದಲ್ಲೇ ಮಕ್ಕಳು ನೊಂದು ಹೋಗುತ್ತಿದ್ದಾರೆ. ಅದೆಲ್ಲ ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ʼ ಅಂತ ನಿರ್ದೇಶಕ ರೈಝಾಕ್‌ ಪುತ್ತೂರು ಹೇಳಿದರು.

ಚಿತ್ರದಲ್ಲಿ ಡಾ. ಅಭಿಷೇಕ್ ರಾವ್ , ವೈಷ್ಣವಿ ರವಿ, ಕ್ಷಿತಿ ಕೆ.ಜನ್ಯ ಪ್ರಸಾದ್, ಅಪೇಕ್ಷಾ ಪೈ, ಶಿವಾನಿ ಕೊಪ್ಪ ಮುಂತಾದವರು ಹಾಡಿದ್ದಾರೆ. ದೀಕ್ಷಾ ಡಿ‌ ರೈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಂಗಳೂರು, ಕುಂದಾಪುರ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಎಪ್ರಿಲ್‌ ೯ ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Categories
ಸಿನಿ ಸುದ್ದಿ

ನಟಿ ಎಸ್ಟರ್‌ ನರೋನ್ಹಾ ಈಗ ಸಂಗೀತ ನಿರ್ದೇಶಕಿ! ದಿ ವೇಕೆಂಟ್‌ ಹೌಸ್‌ ಮೂಲಕ ಡೈರೆಕ್ಟರ್‌ ಎನಿಸಿಕೊಂಡ ಶ್ರೇಯಸ್‌ ಚಿಂಗ

ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಒಂದು ವಿಭಾಗದಲ್ಲಿ ಕಲಿತವರು ಮೆಲ್ಲನೆ ಒಂದೊಂದೇ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲೇಳಬೇಕು, ಗುರುತಿಸಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಅನ್ನುವ ಛಲ ಬಂದೇ ಬರುತ್ತೆ. ಈ ನಿಟ್ಟಿನಲ್ಲಿ ಯುವ ನಟ ಶ್ರೇಯಸ್‌ ಚಿಂಗ ಕೂಡ ಸೇರಿದ್ದಾರೆ.

ಇವರೊಬ್ಬರೇ ಅಲ್ಲ, ಇವರೊಂದಿಗೆ ನಟಿ ಎಸ್ಟರ್‌ ನರೋನ್ಹಾ ಕೂಡ ಸೇರಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ. ಹೌದು, ನಟನಾಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್‌ ಚಿಂಗ ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ನಟಿಯಾಗಿದ್ದ ಎಸ್ಟರ್‌ ನರೋನ್ಹಾ ಅವರು ಕೂಡ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಶ್ರೇಯಸ್‌ ಚಿಂಗ ನಿರ್ದೇಶನದ ಚಿತ್ರಕ್ಕೆ “ದಿ ವೇಕೆಂಟ್‌ ಹೌಸ್‌” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರ ಕನ್ನಡದ ಜೊತೆಯಲ್ಲಿ ಕೊಂಕಣಿ ಭಾಷೆಯಲ್ಲೂ ತಯಾರಾಗುತ್ತಿದೆ ಎಂಬುದು ವಿಶೇಷ.

ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್‌ ಮೂಲಕ ಜಾನೆಟ್‌ ನೊರೊನ್ಹಾ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಏಪ್ರಿಲ್‌ ೫ರಂದು ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.
ನಿರ್ದೇಶಕ ಶ್ರೇಯಸ್‌ ಚಿಂಗ ಅವರು ನಟನೆ ಜೊತೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಅವರು ಸುಮಾರು 150೦ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಇನ್ನು ನಟಿ ಎಸ್ಟರ್‌ ನರೋನ್ಹಾ ಅವರಿಗೂ ಇದು ಮೊದಲ ಸಂಗೀತ ನಿರ್ದೇಶನದ ಅನುಭವ. ಅವರಿಗೂ ಒಳ್ಳೆಯ ಕಥೆ ಇರುವ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

ನಿರ್ಮಾಪಕ ಜಾನೆಟ್‌ ನೊರೊನ್ಹಾ ಅವರಿಗೆ ಇದು ಮೂರನೇ ನಿರ್ಮಾಣದ ಸಿನಿಮಾ. ಈ ಹಿಂದೆ ಅವರು “ಸೋಫಿಯಾ ಎ ಡ್ರೀಮ್‌ ಗರ್ಲ್”‌ ಎಂಬ ಸಿನಿಮಾ ಮಾಡಿದ್ದರು. ಇದಕ್ಕೆ 2018ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ನಂತರ ಜಾಕಿಶ್ರಾಫ್ ಮತ್ತು ಎಸ್ಟರ್ ನೊರೊನ್ಹಾ ನಟಿಸಿದ “ಕಾಂತಾರ್” ೆಂಬ ಕೊಂಕಣಿ ಸಿನಿಮಾ ಕೂಡ ನಿರ್ಮಿಸಿದ್ದರು. ವಿದೇಶದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ “ದಿ ವೇಕೆಂಟ್‌ ಹೌಸ್‌” ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಸ್ಟರ್‌ ನರೋನ್ಹಾ ಅವರು ಸಂಗೀತದ ಜೊತೆ ಸಾಹಿತ್ಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರ್ದೇಶಕರೂ ಇಲ್ಲಿ ನಿರ್ದೇಶನದ ಜೊತೆ ಮಾತುಗಳನ್ನು ಪೋಣಿಸಿದ್ದಾರೆ. ವಿಜಯ್‌ ರಾಜ್‌ ಸಂಕಲನವಿದೆ. ಸದ್ಯ ಮೊದಲ ಪೋಸ್ಟರ್‌ ರಿಲೀಸ್‌ ಆಗಿದ್ದು, ಇಷ್ಟರಲ್ಲೇ ಸಿನಿಮಾದ ಪೂರ್ಣ ಮಾಹಿತಿ ಕೊಡುವುದಾಗಿ ನಿರ್ದೇಶಕ ಶ್ರೇಯಸ್‌ ಚಿಂಗ ಹೇಳಿದ್ದಾರೆ.

Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಬಳ್ಳಾರಿ ಸೀಮೆಯ ಅರುಣ್ ನ ಅಮರ ಪ್ರೇಮ – ಕುತೂಹಲದ ರೋಮ್ – ಕಾಮ್ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಪ್ರವೀಣ್ !

ಯುವ ಲೇಖಕ ಹಾಗೂ ಕಥೆಗಾರ ಜಿ.ಪ್ರವೀಣ್‌ ಕುಮಾರ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಪ್ರವೀಣ್‌ ಸಿನಿಮಾಕ್ಕೆ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭವದಲ್ಲೀಗ “ಅಮರ ಪ್ರೇಮಿ ಅರುಣ್‌ʼ ಹೆಸರಿನ ಚಿತ್ರಕ್ಕೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಜತೆಗೆ ಸಂಭಾಷಣೆ ಕೂಡ ಅವರದ್ದೆ. ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ್‌ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೆ ಚಿತ್ರದ ಟೈಟಲ್‌ ಲಾಂಚ್‌ ಹಾಗೂ ಮುಹೂರ್ತ ಕಾರ್ಯಕ್ರಮ ನಡೆಯಿತು.

ದೇವರ ಮೇಲೆ ಸೆರೆಹಿಡಿಯಲಾದ ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್  ಸೇರಿದಂತೆ  ಆರು ಜನ ನಿರ್ದೇಶಕರು ಶೀರ್ಷಿಕೆ ಅನಾವರಣ ಮಾಡಿದರು. ಟೈಟಲ್‌ ಲಾಂಚ್‌ ಹಾಗೂ ಚಿತ್ರದ ಮುಹೂರ್ತದ ನಂತರ ಚಿತ್ರ ತಂಡವು ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ನಿರ್ದೇಶಕ ಜಿ. ಪ್ರವೀಣ್‌ ಕುಮಾರ್ ಪ್ರಕಾರ ಶುದ್ಧ ರೊಮ್ಯಾಂ ಟಿಕ್‌ ಹಾಗೂ ಕಾಮಿಡಿ ಕಥಾ ಹಂದರದ ಚಿತ್ರ. ಇಡೀ ಕಥೆ ಬಳ್ಳಾರಿ ಸುತ್ತಮುತ್ತ ನಡೆಯಲಿದೆಯಂತೆ. ಕಥೆ ಅಲ್ಲಿಗೆ ಸಂಬಂಧಿಸಿ ದ್ದರಿಂದ ಅಲ್ಲಿನ ಭಾಷೆಯ ಸೊಗಡು ಚಿತ್ರದ ಸಂಭಾಷಣೆ ಯಲ್ಲಿದೆಯಂತೆ.

ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್, ಯುಗಾದಿ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದರು. ಪ್ರವೀಣ್‌ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆಗಾರರಾಗಿ ಸಿನಿಮಾ ರಂಗಕ್ಕೆ ಪರಿಚಯವಾದ ಪ್ರವೀಣ್‌ ಕುಮಾರ್‌ ಇದುವರೆಗೂ ಗಿರೀಶ್‌ ಕಾಸರವಳ್ಳಿ, ಯೋಗಾರಾಜ್‌ ಭಟ್‌, ಅಭಯ್‌ ಸಿಂಹ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಶಿಷ್ಯನನ್ನು ಶುಭ ಹಾರೈಸಲು ಅವರೆಲ್ಲರೂ ಬಂದಿದ್ದರು. ಪ್ರವೀಣ್‌ ಗೆ ಒಳ್ಳೆಯದಾಗಲಿ ಅಂದರು.

ಚಿತ್ರಕ್ಕೆ  ಕಿರಣ್ ರವೀಂದ್ರನಾಥ್‌ ಅವರ ಸಂಗೀತ ನಿರ್ದೇಶನವಿದೆ. ಪ್ರವೀಣ್‌ ಎಸ್‌ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಗಿತ್ಯವಿದೆ. ಮಂಡ್ಯ ಮಂಜು ಇದರ ಕಾರ್ಯಕಾರಿ ನಿರ್ಮಾಪಕರು. ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ  ಹರಿಶರ್ವಾ ಇದರ ಹೀರೋ. ದೀಪಿಕಾ ಆರಾಧ್ಯ ನಾಯಕಿ . ಭೂಮಿಕಾ  ರಘು, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು  ಚಿತ್ರದಲ್ಲಿದ್ದು, ಯುಗಾದಿ ನಂತರ ಚಿತ್ರದ ಚಿತ್ರೀಕರಣ ಶುರುವಾಗುತ್ತಿದೆ. ಒಂದೇ ಹಂತದಲ್ಲಿ ಚಿತ್ರ ತಂಡ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ಮುಗಿಸಿಕೊಂಡು ಬರಲಿದೆಯಂತೆ. ಒಲವು ಸಿನಿಮಾ ಬ್ಯಾನರ್‌ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶಕ ಪ್ರವೀಣ್‌ ಕುಮಾರ್‌ ಸೇರಿದಂತೆ ಅವರ ಗೆಳೆಯರು ಇದರ ರೂವಾರಿಗಳು. ತಂಡಕ್ಕೆ ಒಳ್ಳೆಯದಾಗಲಿ.

Categories
ಸಿನಿ ಸುದ್ದಿ

ಪ್ಲೀಸ್‌ ಸಿಎಂ ಸರ್‌ ಯುವರತ್ನ ನೋಡೋದಿಕ್ಕೆ ಅವಕಾಶ ಮಾಡಿ ಕೊಡಿ-ಆ ಮೂವರು ಮುದ್ದು ಮಕ್ಕಳು ಮಾಡಿಕೊಂಡರು ಮನವಿ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಚಿತ್ರದ ರಿಲೀಸ್‌ ಬೆನ್ನಲೇ ಸರ್ಕಾರ ಚಿತ್ರಮಂದಿರದಲ್ಲಿನ ಶೇ. ೫೦ ರಷ್ಟು ಸೀಟು ಭರ್ತಿಗೆ ಆದೇಶಿಸಿದೆ. ಸಹಜವಾಗಿಯೇ ಇದು ಪವರ್‌ ಸ್ಟಾರ್‌ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಫ್ಯಾನ್ಸ್‌ ಯುವರತ್ನಕ್ಕೆ ಹಂಡ್ರಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಸಿಗಲಿ ಅಂತ ಒತ್ತಾಯಿಸುತ್ತಿದ್ದಾರೆ. ವಿಶೇಷವಾಗಿ ಮೂವರು ಮುದ್ದು ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

” ಪ್ಲೀಸ್‌ ಸರ್‌ ಯುವರತ್ನ ಚಿತ್ರಕ್ಕೆ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಿ, ನಾವು ಮಾಸ್ಕ್‌ ಹಾಕ್ಕೊಂಡು ಸ್ಯಾನಿಟೈಸ್‌ ಮಾಡಿಕೊಂಡು ಸಿನಿಮಾ ನೋಡುತ್ತೇವೆʼ ಅಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾಳೆ( ಭಾನುವಾರ) ನಮ್ಮ ಪೋಷಕರು ಯುವರತ್ನ ಸಿನಿಮಾಗೆ ಟಿಕೆಟ್‌ ಬುಕ್‌ ಮಾಡಿದ್ದಾರೆ. ಅಪ್ಪು ಅಂದ್ರೆ ನಮಗೆ ತುಂಬಾ ಇಷ್ಟ , ನಾವು ಸಿನಿಮಾ ನೋಡಬೇಕು, ಟಿಕೆಟ್‌ ಕ್ಯಾನ್ಸಲ್‌ ಆಗಬಾರದು ಅಂತ ಆ ಮೂವರು ಮಕ್ಕಳೂ ವಿಡಿಯೋದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಮತ್ತೊಂದೆಡೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡ ವಿನೂತನವಾಗಿ ಹಂಡ್ರೆಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದೆ. ಅದಕ್ಕಂತಲೇ ವಿನೂತನವಾದ ಪೋಸ್ಟರ್‌ ಲಾಂಚ್‌ ಮಾಡಿದೆ.

Categories
ಸಿನಿ ಸುದ್ದಿ

ಏಪ್ರಿಲ್‌ 5ರಿಂದ ಮದಗಜ ಚಿತ್ರೀಕರಣ ಶುರು ನಾಲ್ಕನೇ ಹಂತದ ಶೂಟಿಂಗ್‌ಗೆ ಟೀಮ್‌ ರೆಡಿ

ಶ್ರೀಮುರಳಿ ಅಭಿನಯದ “ಮದಗಜ” ಏಪ್ರಿಲ್‌ 5ರಿಂದ ಶುರುವಾಗಲಿದೆ. ಉಮಾಪತಿ ನಿರ್ಮಾಣದ ಈ ಚಿತ್ರದ ಚಿತ್ರೀಕರಣದ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ದೊಡ್ಡ ಮಟ್ಟದ ಬಜೆಟ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಬೃಹತ್ ನಾಲ್ಕು ಸೆಟ್‌ಗಳಲ್ಲಿ “ಫೈಟ್ಸ್” ಮತ್ತು “ಇಂಟ್ರೊಡಕ್ಷನ್ ಸಾಂಗ್” ಶೂಟಿಂಗ್‌ ನಿರಂತರವಾಗಿ ನಡೆಯಲಿದೆ.

ಚಿತ್ರೀಕರಣ ಸತತವಾಗಿ ನಡೆಯಲಿದೆ. ಈಗಾಗಲೇ ಎಲ್ಲೆಡೆ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಈಗಾಗಲೇ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.

Categories
ಸಿನಿ ಸುದ್ದಿ

ಸಿನಿಮಂದಿ ಬದುಕಲ್ಲಿ ಕೊರೋನಾ ಎಂಬ ಹೆಮ್ಮಾರಿ ನರ್ತನ – ಆತಂಕದಲ್ಲಿ ಇಡೀ ಕನ್ನಡ ಚಿತ್ರೋದ್ಯಮ

ಚಿತ್ರರಂಗದ ಪಾಡು ಮುಂದೇನು? ಅರೇ, ಇದೆಂಥಾ ಮಾತು ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಏನಿಲ್ಲ. ಆದರೆ, ಈಗಿನ ವಾಸ್ತವತೆಯನ್ನು ನೋಡಿದಾಗ, ಚಿತ್ರರಂಗದ ಪಾಡು ಏನಾಗಬಹುದು ಎಂಬ ಆತಂಕ ಖಂಡಿತ ಕಾಡದೇ ಇರದು. ಕನ್ನಡ ಚಿತ್ರರಂಗ ಈಗ ಅಕ್ಷರಶಃ ಕುಗ್ಗಿ ಹೋಗಿದೆ. ಮೊದಲೇ ಕೊರೊನಾ ಹೊಡೆತದಿಂದ ತತ್ತರಿಸಿದ್ದ ಸಿನಿಮಾ ಉದ್ಯಮ, ಇತ್ತೀಚೆಗಷ್ಟೇ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಅದರ ಬೆನ್ನಲ್ಲೇ ಈಗ ಪುನಃ ಅರ್ಧ ಭರ್ತಿ ಆದೇಶವೂ ಹೊರಬಿದ್ದಿದೆ. ಮೊದಲೇ ನಲುಗಿದ್ದ ಕನ್ನಡ ಚಿತ್ರರಂಗ, ಈಗ ಮತ್ತಷ್ಟು ನಲುಗಿ ಹೋಗುವುದಂತೂ ನಿಜ. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡು ಟಫ್‌ರೂಲ್ಸ್‌ಮಾಡಿದ್ದೇನೋ ನಿಜ. ಎಂಟು ಪ್ರಮುಖ ಜಿಲ್ಲೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಚಿತ್ರರಂಗಕ್ಕೂ ಇದರ ಬಿಸಿ ತಟ್ಟಿದೆ. ಈ ನಿರ್ಧಾರದಿಂದ ಚಿತ್ರೋದ್ಯಮ ಏನೆಲ್ಲಾ ಸಂಕಷ್ಟ ಎದುರಿಸುತ್ತೆ ಅನ್ನೋದೇ ಸದ್ಯ ಎದುರಿಗಿರುವ ಪ್ರಶ್ನೆ.

ಚಿತ್ರರಂಗವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರ ಸ್ಥಿತಿಯಂತೂ ಹೇಳತೀರದು. ಇಲ್ಲಿ ಕೋಟಿ ನಿರ್ಮಾಪಕರು, ಸ್ಟಾರ್‌ನಿರ್ದೇಶಕರು, ಸ್ಟಾರ್‌ನಟರಿಂದ ಹಿಡಿದು ಕಟ್ಟ ಕಡೆಯ ಕಾರ್ಮಿಕರೂ ಇದ್ದಾರೆ. ಈಗ ಅವರೆಲ್ಲರೂ ಒಂದೇ ದೋಣಿಯಲ್ಲಿರುವಂತಹ ಪರಿಸ್ಥಿತಿ ಬಂದೊದಗಿದೆ. ಲಾಕ್‌ಡೌನ್‌ಸಂದರ್ಭದಲ್ಲಂತೂ ಚಿತ್ರರಂಗದಲ್ಲಿ ದುಡಿಮೆ ಮಾಡುವವರ ಪರಿಸ್ಥಿತಿ ಡೋಲಾಯಮಾನವಾಗಿತ್ತು. ಮೆಲ್ಲೆನೆ ಉಸಿರಾಡಲು ಅವಕಾಶ ಸಿಕ್ತು ಅಂತ ನಿಟ್ಟುಸಿರು ಬಿಡುವ ಹೊತ್ತಲೇ ಪುನಃ ಅದಕ್ಕೆ ಬ್ರೇಕ್‌ಬಿತ್ತು. ಇದರಿಂದ ಈಗ ಅಕ್ಷರಶಃ ಚಿತ್ರರಂಗದ ಅನೇಕರು ಬೀದಿಗೆ ಬರುವಂತಹ ಸ್ಥಿತಿ ಎದುರಾಗುತ್ತಿದೆ. ಇದು ಹೀಗೆ ಮುಂದುವರೆದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ದೊಡ್ಡ ಆತಂಕದ ಅಲೆಯನ್ನು ಎದುರಿಸಬೇಕಾಗುತ್ತೆ. ಚಿತ್ರರಂಗವನ್ನು ನಂಬಿದ ಸಾವಿರಾರು ಕುಟುಂಬಗಳಿವೆ. ಲಕ್ಷಾಂತರ ಜನರಿದ್ದಾರೆ. ಎಲ್ಲಾ ನಿರ್ಮಾಣ, ನಟನೆ, ನಿರ್ದೇಶನ, ಕಾಸ್ಟ್ಯೂಮ್‌, ಪ್ರೊಡಕ್ಷನ್ಸ್‌, ಮೇಕಪ್‌, ಟ್ರಾನ್ಸ್‌ಪೋರ್ಟ್‌ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಸಿನಿಮಂದಿ ಬದುಕು ಮೂರಾಬಟ್ಟೆಯಾಗುವಂತಹ ಭೀತಿಯಲ್ಲಿದೆ. ಕೊರೊನಾ ತಂದಿಟ್ಟ ಆತಂಕದಿಂದಾಗಿ ಇಲ್ಲಿ ಅನ್ನದಾತ ಎನಿಸಿಕೊಂಡವರೂ ಕೂಡ ಒದ್ದಾಡಿದ ಉದಾಹರಣೆಗೇನೂ ಕಮ್ಮಿ ಇಲ್ಲ.

ಈ ಕಲರ್‌ಫುಲ್‌ದುನಿಯಾದಲ್ಲಿ ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ಮಂದಿ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಕಳೆದ ಒಂದು ವರ್ಷದಿಂದಲೂ ಇದೇ ಅತಂತ್ರ ಪರಿಸ್ಥಿತಿಯಲ್ಲಿರುವ ಚಿತ್ರರಂಗಕ್ಕೆ ಮತ್ತೆ ದೊಡ್ಡ ಹೊಡೆತ ಬಿದ್ದಿರುವುದನ್ನು ನೋಡಿದರೆ, ಅಂತಿಮ ಹಂತ ತಲುಪುವ ಸೂಚನೆಯೇನೋ ಎಂಬಂತೆ ಭಾಸವಾಗುತ್ತಿದೆ.
ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿತ್ತು. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಅರ್ಧ ಭರ್ತಿ ಆದೇಶದಿಂದ ಚಿತ್ರರಂಗ ಮತ್ತೆ ಮೊದಲಿನಂತಾಗಲು ವರ್ಷಗಳೇ ಬೇಕಾಗಬಹುದೇನೋ? ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಚಿತ್ರರಂಗವನ್ನೇ ನಂಬಿದವರ ಪಾಡು ಅತಂತ್ರದಲ್ಲಿರುವುದಂತೂ ಸತ್ಯ.

“ರಾಬರ್ಟ್‌” ಚಿತ್ರ ಬಿಡುಗಡೆ ನಂತರ ಚಿತ್ರರಂಗದ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಆ ದಿನಗಳಿಗೆ ಚಿತ್ರರಂಗ ಮರಳುತ್ತೆ ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಆ ಚಿತ್ರದ ಬಳಿಕ ಪುನೀತ್‌ರಾಜಕುಮಾರ್‌ಅಭಿನಯದ “ಯುವರತ್ನ” ರಿಲೀಸ್‌ಆಯ್ತು. ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದಂತೆಯೇ ಪುನಃ, ಅರ್ಧ ಭರ್ತಿ ಆದೇಶ ಹೊರಬಿತ್ತು. “ಯುವರತ್ನ” ಬಳಿಕ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಉತ್ಸಾಹ ತೋರಿದ್ದವು. ವರ್ಷಗಟ್ಟಲೆ ಕಾದಿದ್ದ ಸಿನಿಮಾಗಳಿಗೆ ಸರ್ಕಾರದ ಈ ಆದೇಶದಿಂದ ಆಘಾತವಾಗಿದ್ದು ಸುಳ್ಳಲ್ಲ. ಸಾಲ ಸೂಲ ಮಾಡಿ ಸಿನಿಮಾ ಮಾಡಿದ್ದ ಅನೇಕ ಹೊಸ ನಿರ್ಮಾಪಕರು, ಹೇಗೋ ರಿಲೀಸ್‌ಮಾಡಿ, ಬದುಕಿ ಬಿಡೋಣ ಅಂದುಕೊಂಡಿದ್ದರು. ಈಗ ನೋಡಿದರೆ, ಅದಕ್ಕೂ ಕಲ್ಲು ಬಿದ್ದಂತಾಗಿದೆ. ಮೂಲಗಳ ಪ್ರಕಾರ ೩೫೦ ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಇಷ್ಟೂ ಚಿತ್ರಗಳ ಬಜೆಟ್‌ಲೆಕ್ಕ ಹಾಕಿದರೆ, ಸಾವಿರ ಕೋಟಿ ಮೀರುತ್ತೆ.

ಇಲ್ಲಿ ಹಣ ಹಾಕಿ ಹಣ ತೆಗೆಯುತ್ತೇನೆ ಅನ್ನೋದು ಕಷ್ಟದ ಮಾತು. ಹೋಗಲಿ ಹಾಕಿದ ಹಣ ತೆಗೆಯೋಣ ಅಂತಂದುಕೊಂಡರೂ, ಕೊರೊನಾ ಹೊಡೆತ ಕೊಟ್ಟಿದೆ. ಹೇಗೋ ಬಂದಷ್ಟು ಬರಲಿ ಅಂದುಕೊಂಡು ರಿಲೀಸ್‌ಗೆ ಸಜ್ಜಾಗಿದ್ದರೂ, ಅರ್ಧ ಭರ್ತಿ ಆದೇಶ ಮತ್ತಷ್ಟು ನರಳುವಂತೆ ಮಾಡಿಬಿಟ್ಟಿದೆ. ಹೇಗೋ ಒಂದಷ್ಟು ಸಿನಿಮಾಗಳು ಚಿತ್ರೀಕರಣ ಶುರುಮಾಡಿದ್ದವು. ಈಗ ಶೂಟಿಂಗ್‌ಮಾಡೋಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದೊದಗಿದೆ. ಹೇಗೋ ಚಿತ್ರೀಕರಣ ಶುರುವಾಯ್ತು ಅಂತ ಕಾರ್ಮಿಕ ವಲಯ ಸಂಭ್ರಮದಲ್ಲೇ ಇತ್ತು. ಆದರೀಗ, ಅವರ ಅನ್ನಕ್ಕೂ ಕುತ್ತು ಬರುವಂತಾಗಿದೆ. ಅವರ ಗೋಳಿನ ದನಿ ಮಾತ್ರ ಅಲ್ಲೇ ಗಿರಕಿಹೊಡೆಯುವಂತಾಗಿದೆ.

ಅದೇನೆ ಇರಲಿ, ಸರ್ಕಾರದ ಈ ಕ್ರಮದಿಂದ ಸಿನಿಮಾಗಳಿಗೆ ಪೆಟ್ಟು ಕೊಟ್ಟಿದ್ದಷ್ಟೇ ಅಲ್ಲ, ನಿರ್ಮಾಪಕರನ್ನೂ ಹೈರಾಣಾಗಿಸಿದೆ. ಚಿತ್ರಮಂದಿರಗಳಲ್ಲಿ ದುಡಿಯುವ ಕೈಗಳು ಹಿಜುಕಿಕೊಳ್ಳುವಂತಾಗಿದೆ. ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದರು. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳಿಗೆ ಅರ್ಧ ಭರ್ತಿ ಎಂಬ ನಿರ್ಧಾರದಿಂದ ಇಡೀ ಚಿತ್ರೋದ್ಯಮವೇ ದಿಕ್ಕು ತೋಚದಂತಾಗಿ ಕುಳಿತಿದೆ. ಈಗಾಗಲೇ ಒಂದು ವರ್ಷದಿಂದ ಕಾದು ಸೋತು, ಸಣ್ಣಗಾಗಿರುವ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಈಗ ಆ ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗುತ್ತಿವೆ. ಕೋಟಿ ಹಣ ಹಾಕಿ ನಿರ್ಮಿಸಿದ್ದ ನಿರ್ಮಾಪಕ ಕೂಡ ಮತ್ತಷ್ಟು ದಿನ ಒದ್ದಾಡುವಂತಹ ಸ್ಥಿತಿ ಬಂದೊದಗಿದೆ. “ಯುವರತ್ನ” ಮೇಲೇಳುವ ಹೊತ್ತಲ್ಲೇ ಈ ನಿರ್ಧಾರ ಹೊರಬಂದಿದೆ.

“ಕೋಟಿಗೊಬ್ಬ 3”, “ಸಲಗ”, ”ಕೆಜಿಎಫ್‌″, “ಕೃಷ್ಣ ಟಾಕೀಸ್‌”, “ಭಜರಂಗಿ” ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿದ್ದವು. ಈಗ ಅನಿವಾರ್ಯ ಎಂಬಂತೆ ಮಂದಕ್ಕೆ ಹೋದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ನಿರ್ಧಾರ ಮತ್ತಷ್ಟು ಕಠಿಣಗೊಂಡರೆ, ಸಿನಿಮಾರಂಗದ ಪಾಡೇನು, ಸ್ಟಾರ್‌ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೂ ಇದೆ. ಆ ಎಲ್ಲಾ ಸಿನಿಮಾ ನಿರ್ಮಾಪಕರ ಸ್ಥಿತಿ ಏನಾಗಬೇಡ? ಚಿತ್ರರಂಗವನ್ನೇ ನಂಬಿದವರ ಬದುಕು ಹೇಗಾಗಬೇಡ? ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲಿರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಹೊಡೆತ ತಿನ್ನುತ್ತವೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮತ್ತದೇ ಭಯ ಹುಟ್ಟಿಸುತ್ತಿರುವ ಕೊರೊನಾ, ಚಿತ್ರರಂಗದವರ ಬಣ್ಣವನ್ನು ಅಳಿಸದಂತಿರಲಿ ಎಂಬುದೇ ಸಿನಿಲಹರಿಯ ಆಶಯ.

Categories
ಸಿನಿ ಸುದ್ದಿ

ಬಣ್ಣ ನಂಬಿ ಬದುಕುವರ ಬಣ್ಣ ಅಳಿಸೋದು ಬೇಡ ಅಂದ್ರು ಶ್ರೀಮುರಳಿ! ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಅನ್ನೋದು ರೋರಿಂಗ್‌ ಸ್ಟಾರ್‌ ಕಳಕಳಿ

ಕೊರೊನಾ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಷ್ಟೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಟಫ್‌ ರೂಲ್ಸ್‌ ಜಾರಿ ಮಾಡಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗ ದೊಡ್ಡ ಧ್ವನಿ ಎತ್ತಿದೆ.
ಈ ಆದೇಶ ಹೊರಬರುತ್ತಿದ್ದಂತೆಯೇ ಚಿತ್ರರಂಗದ ಸ್ಟಾರ್‌ ನಟರಿಂದ ಹಿಡಿದು, ಚಿತ್ರೋದ್ಯಮದ ಎಲ್ಲರೂ ಒಕ್ಕೊರಲ ಧ್ವನಿ ಎತ್ತಿದ್ದಾರೆ. ಅಂತೆಯೇ ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರೂ ಕೂಡ ತಮ್ಮ ಟ್ವೀಟ್‌ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅವರು ಮಾಡಿರುವ ಟ್ವೀಟ್‌ನಲ್ಲಿ “ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿರೋಧ ಇಲ್ಲ. ಇದು ಅಗತ್ಯ ಕೂಡ. ಸರ್ಕಾರ ಕೈಗೊಳ್ಳುವ ನಿರ್ಧಾರಗಳಲ್ಲಿ ಬಣ್ಣವನ್ನೇ ನಂಬಿ ಬದುಕುವರ “ಬಣ್ಣ” ಅಳಿಸೋದು ಬೇಡ ಎಂಬ ಮನವಿ ನಮ್ಮದು. ಕೊರೋನಾ ಎಚ್ಚರಿಕೆ ಕ್ರಮಗಳೊಂದಿಗೆಯೇ ಮನರಂಜಿಸುವ ಕೆಲಸ ಚಿತ್ರೋದ್ಯಮದಿಂದ ಆಗುತ್ತೆ ಎಂಬ ನಂಬಿಕೆ ಸರ್ಕಾರಕ್ಕೂ ಬರಲಿ” ಎಂದು ಹೇಳಿದ್ದಾರೆ.
ಅವರ ಈ ಟ್ವೀಟ್‌ಗೆ ಫ್ಯಾನ್ಸ್‌ ಸೇರಿದಂತೆ ಸಾಮಾಜಿಕ ವಲಯದಿಂದಲೂ ಮೆಚ್ಚುಗೆ ಸಿಕ್ಕಿದ್ದು, ಎಲ್ಲರೂ ಶ್ರೀಮುರಳಿ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.


ಇನ್ನು, ಸಾಮಾಜಿಕ ತಾಣದಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಶ್ರೀಮುರಳಿ, “ಮನಸು ಬಹಳ ಬೇಜಾರಾಗುತ್ತಿದೆ. ಈಗಷ್ಟೇ ಒಂದು ನ್ಯೂಸ್‌ ಕೇಳಿದೆ. ಮತ್ತೊಮ್ಮೆ ಶೇ.50ರಷ್ಟು ಆಕ್ಯುಪೆನ್ಸಿಗೆ ಅವಕಾಶ ಕೊಟ್ಟಿದ್ದಾರೆ ಅಂತ. ನಿನ್ನೆ ತಾನೇ “ಯುವರತ್ನ” ರಿಲೀಸ್‌ ಆಗಿದೆ. ಅದಕ್ಕೂ ಮುಂಚೆ “ರಾಬರ್ಟ್‌” ರಿಲೀಸ್‌ ಆಗಿದೆ. ಈ ವಾರ ಒಂದಷ್ಟು ಸಿನಿಮಾಗಳು ರಿಲೀಸ್‌ ಆಗಬೇಕಿದೆ. ಏನ್‌ ಮಾಡಬೇಕು ಸರ್.‌ ರಿಲೀಸ್‌ ಆಗಿರುವ ಸಿನಿಮಾಗಳ ಗತಿ ಏನಾಗಬೇಕು ಸರ್.‌ ಹಲವು ಸಂಸಾರಗಳು ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದೇವೆ ಸರ್.‌ ನಮಗೆ ಬೇರೇನೂ ಗೊತ್ತಿಲ್ಲ ಸರ್.‌ ಜನರಿಗೆ ಅಳಿಸ್ತೀವಿ, ಇಲ್ಲ ನಗಸ್ತೀವಿ ಇಷ್ಟೇ ಸರ್‌ ಗೊತ್ತಿರೋದು. ಎಲ್ಲೋ ಒಂದು ಕಡೆ ನಿಜವಾಗಿಯೂ ನೋವಾಗುತ್ತಿದೆ ಸರ್.‌ ಏನ್‌ ಮಾಡಬೇಕು ನಿರ್ಮಾಪಕರು.

ಅಷ್ಟೊಂದು ಖರ್ಚು ಮಾಡಿ ಎಂಟರ್‌ಟೈನ್‌ಮೆಂಟ್‌ಗೋಸ್ಕರ ಸಿನಿಮಾ ಮಾಡಿದಾಗ ನಾವೆಲ್ಲಾ ಏನ್‌ ಆಗಬೇಕು ಸರ್.‌ ದಯವಿಟ್ಟು ಇದನ್ನು ವಾಪಸ್‌ ತಗೊಳ್ಳಿ. ದಯವಿಟ್ಟು ಶೇ.100 ಆಕ್ಯುಪೆನ್ಸಿಗೆ ಅವಕಾಶ ಕೊಡಿ ಸರ್.‌ ಇದು ನಮ್ಮ ಮನವಿ. ನೀವು ಇವತ್ತು ಇದನ್ನು ಮಾಡಲಿಲ್ಲವೆಂದರೆ, ಹಲವಾರು ಜನರು‌ ನಾಳೆ ಬೀದಿಗೆ ಬರುತ್ತಾರೆ. ಇನ್ನಷ್ಟು ಸಿನಿಮಾಗಳು ರಿಲೀಸ್‌ ಆಗುತ್ತವೆ. ವ್ಯಾಕ್ಸಿನೇಷನ್‌ ಬಂದಿದೆ ಸರ್.

ಎಲ್ಲರೂ ತಗೊಂಡು ಸೇಫ್‌ ಆಗ್ತಾರೆ. ನೀವೇ ಸಲಹೆ ಕೊಟ್ಟಿದ್ದೀರಿ. ಆದರೂ ಈ ನಿರ್ಧಾರದಿಂದ ಭಯ ಆಗುತ್ತಿದೆ. ಮತ್ತೊಮ್ಮೆ ಶೇ.100ರಷ್ಟು ಆಕ್ಯುಪೆನ್ಸಿ ಕೊಡಿ” ಎಂದು ಮನವಿ ಮಾಡಿದ್ದಾರೆ.
ಅದೇನೆ ಇರಲಿ, ಈಗ ಚಿತ್ರರಂಗದ ಸ್ಟಾರ್‌ ನಟರೆಲ್ಲರೂ ಒಗ್ಗಟ್ಟಾಗಿ ಮನವಿ ಮಾಡುತ್ತಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಯೋಚಿಸಿ, ಚಿತ್ರರಂಗದ ಮನವಿಗೆ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.

error: Content is protected !!