ಯುವ ಲೇಖಕ ಹಾಗೂ ಕಥೆಗಾರ ಜಿ.ಪ್ರವೀಣ್ ಕುಮಾರ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಪ್ರವೀಣ್ ಸಿನಿಮಾಕ್ಕೆ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭವದಲ್ಲೀಗ “ಅಮರ ಪ್ರೇಮಿ ಅರುಣ್ʼ ಹೆಸರಿನ ಚಿತ್ರಕ್ಕೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಜತೆಗೆ ಸಂಭಾಷಣೆ ಕೂಡ ಅವರದ್ದೆ. ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ್ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಲಾಂಚ್ ಹಾಗೂ ಮುಹೂರ್ತ ಕಾರ್ಯಕ್ರಮ ನಡೆಯಿತು.
ದೇವರ ಮೇಲೆ ಸೆರೆಹಿಡಿಯಲಾದ ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಸೇರಿದಂತೆ ಆರು ಜನ ನಿರ್ದೇಶಕರು ಶೀರ್ಷಿಕೆ ಅನಾವರಣ ಮಾಡಿದರು. ಟೈಟಲ್ ಲಾಂಚ್ ಹಾಗೂ ಚಿತ್ರದ ಮುಹೂರ್ತದ ನಂತರ ಚಿತ್ರ ತಂಡವು ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ನಿರ್ದೇಶಕ ಜಿ. ಪ್ರವೀಣ್ ಕುಮಾರ್ ಪ್ರಕಾರ ಶುದ್ಧ ರೊಮ್ಯಾಂ ಟಿಕ್ ಹಾಗೂ ಕಾಮಿಡಿ ಕಥಾ ಹಂದರದ ಚಿತ್ರ. ಇಡೀ ಕಥೆ ಬಳ್ಳಾರಿ ಸುತ್ತಮುತ್ತ ನಡೆಯಲಿದೆಯಂತೆ. ಕಥೆ ಅಲ್ಲಿಗೆ ಸಂಬಂಧಿಸಿ ದ್ದರಿಂದ ಅಲ್ಲಿನ ಭಾಷೆಯ ಸೊಗಡು ಚಿತ್ರದ ಸಂಭಾಷಣೆ ಯಲ್ಲಿದೆಯಂತೆ.
ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್, ಯುಗಾದಿ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದರು. ಪ್ರವೀಣ್ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆಗಾರರಾಗಿ ಸಿನಿಮಾ ರಂಗಕ್ಕೆ ಪರಿಚಯವಾದ ಪ್ರವೀಣ್ ಕುಮಾರ್ ಇದುವರೆಗೂ ಗಿರೀಶ್ ಕಾಸರವಳ್ಳಿ, ಯೋಗಾರಾಜ್ ಭಟ್, ಅಭಯ್ ಸಿಂಹ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಶಿಷ್ಯನನ್ನು ಶುಭ ಹಾರೈಸಲು ಅವರೆಲ್ಲರೂ ಬಂದಿದ್ದರು. ಪ್ರವೀಣ್ ಗೆ ಒಳ್ಳೆಯದಾಗಲಿ ಅಂದರು.
ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಪ್ರವೀಣ್ ಎಸ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಗಿತ್ಯವಿದೆ. ಮಂಡ್ಯ ಮಂಜು ಇದರ ಕಾರ್ಯಕಾರಿ ನಿರ್ಮಾಪಕರು. ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ ಹರಿಶರ್ವಾ ಇದರ ಹೀರೋ. ದೀಪಿಕಾ ಆರಾಧ್ಯ ನಾಯಕಿ . ಭೂಮಿಕಾ ರಘು, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು ಚಿತ್ರದಲ್ಲಿದ್ದು, ಯುಗಾದಿ ನಂತರ ಚಿತ್ರದ ಚಿತ್ರೀಕರಣ ಶುರುವಾಗುತ್ತಿದೆ. ಒಂದೇ ಹಂತದಲ್ಲಿ ಚಿತ್ರ ತಂಡ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ಮುಗಿಸಿಕೊಂಡು ಬರಲಿದೆಯಂತೆ. ಒಲವು ಸಿನಿಮಾ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶಕ ಪ್ರವೀಣ್ ಕುಮಾರ್ ಸೇರಿದಂತೆ ಅವರ ಗೆಳೆಯರು ಇದರ ರೂವಾರಿಗಳು. ತಂಡಕ್ಕೆ ಒಳ್ಳೆಯದಾಗಲಿ.