Categories
ಸಿನಿ ಸುದ್ದಿ

ವರದನ ಲಿರಿಕಲ್ ಸಾಂಗ್ ‌ರಿಲೀಸ್ ಮಾಡಿ ಶುಭಕೋರಿದ ಪ್ರೇಮ್..

ವಿನೋದ್ ಪ್ರಭಾಕರ್ ನಾಯಕರ ಗಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ನಂದೀಶ್ ಬರೆದಿರುವ “ತುಟಿಯು ಹಾಡುತಿದೆ” ಎಂಬ ಹಾಡನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆರ್ ಜೆ ರಾಪಿಡ್ ರಶ್ಮಿ ಈ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ಫೆಬ್ರವರಿ 18ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಅನ್ನೋದು ವಿಶೇಷ.

ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಚಾರ್ಜ್‌ ಶೀಟ್!‌ ಸಸ್ಪೆನ್ಸ್‌ ಥ್ರಿಲ್ಲರ್‌ ಹಿಂದೆ ಬಂದ ಗುರುರಾಜ ಕುಲಕರ್ಣಿ

ಕನ್ನಡದಲ್ಲಿ ಈಗ ಹೊಸಬರದ್ದೇ ಹವಾ. ಹೌದು, ದಿನ ಕಳೆದಂತೆ ಗಾಂಧಿನಗರದಲ್ಲಿ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಹೊಸಬರೆಲ್ಲರೂ ಸೇರಿ “ಜಾರ್ಜ್‌ ಶೀಟ್‌” ಹಾಕೋಕೆ ರೆಡಿಯಾಗಿದ್ದಾರೆ! ಅರೇ ಹೀಗೆಂದಾಕ್ಷಣ, ಏನೇನೋ ಪ್ರಶ್ನೆಗಳು ಸಹಜ. ವಿಷಯವಿಷ್ಟೆ. ಇದು ಕನ್ನಡದ ಹೊಸ ಚಿತ್ರದ ಹೆಸರು. ಹೌದು, “ಚಾರ್ಜ್‌ಶೀಟ್‌” ಮೂಲಕ ಗುರುರಾಜ ಕುಲಕರ್ಣಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರು ಕ್ಲಾಪ್‌ ಮಾಡಿ ಶುಭ ಹಾರೈಸಿದರೆ, ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.

ಅಂದಾಹಗೆ, ಚಾರ್ಚ್‌ಶೀಟ್ ಅಂದಾಕ್ಷಣ ನೆನಪಾಗೋದೇ ಪೋಲಿಸರು. ಹೌದು, ಪೋಲೀಸ್ ಭಾಷೆಯಲ್ಲಿ ಅದು ತನಿಖಾ ವರದಿ ಅಂತರ್ಥ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು ನಿರ್ದೇಶಕ ಗುರುರಾಜ ಕುಲಕರ್ಣಿ ಕೆಲಸ ಮಾಡೋಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಬಾಲಾಜಿ ಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಈ ಚಿತ್ರವನ್ನು ಡಾ.ಸುನೀಲ್ ಕುಂಬಾರ್ ನಿರ್ಮಿಸುತ್ತಿದ್ದಾರೆ. ಇದರೊಂದಿಗೆ ಅವರೇ ಕಥೆ ಬರೆದಿದ್ದಾರೆ. ಜೊತೆಗೆ ಪಾತ್ರವೊಂದರಲ್ಲೂ ಅವರು ಕಾಣಿಸಿಕೊಳ್ಳುತಿದ್ದಾರೆ.


ತಮ್ಮ ಸಿನಿಮಾ ಕುರಿತು ನಿರ್ಮಾಪಕ ಸುನೀಲ್ ಕುಂಬಾರ್ ಹೇಳಿದ್ದಿಷ್ಟು. “ಹತ್ತು ವರ್ಷಗಳ ಹಿಂದೆ ನಾನೂ ಸಹ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯಿದು, ಒಂದರ್ಥದಲ್ಲಿ ಲಾಕ್‌ಡೌನ್ ಸೈಡ್‌ ಎಫೆಕ್ಟ್ ಅಂತಲೂ ಹೇಳಬಹುದು, ವಿಶೇಷ ನಿರೂಪಣೆಯಿರುವ ಚಿತ್ರ ಇದಾಗಿದ್ದು. ಸಿನಿಮಾ ನೋಡುವವರಿಗೆ ಕಥೆ ಏನೆಂದು ಅರ್ಥವಾಗುತ್ತದೆ. ಆದರೆ ಅಲ್ಲಿರುವವರಿಗೆ ಏನು ನಡೆಯುತ್ತೆಂದು ಗೊತ್ತಾಗಲ್ಲ. ವೆಸ್ಟ್ ಬೆಂಗಾಲ್‌ನ ಉಮಾ ಚಕ್ರಬೋರ್ತಿ ಹಾಗೂ ಚನೈನ ಎಸ್.ಆರ್.ರಾಜನ್ ನನ್ನ ಜೊತೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇವರಿಬ್ಬರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ, ಆದರೆ ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ ಎಂದು ವಿವರಿಸಿದರು ನಿರ್ಮಾಪಕ ಸುನೀಲ್‌ ಕುಂಬಾರ್.‌

ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರಿಗೆ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆಯಂತೆ. ” ಚಿತ್ರದ ಕಥೆ, ಟೈಟಲ್ ನಿರ್ಮಾಪಕರು ಕೊಟ್ಟಿದ್ದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ, ಶಾಲೆಯೊಂದರ ವಿದ್ಯಾರ್ಥಿನಿಯ ಕೊಲೆಯಾಗಿರುತ್ತದೆ. ಆ ಕೊಲೆ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್‌ಶೀಟ್.‌ ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಳ್ಳೊಳ್ಳೆಯ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎಂದರು.


ನಾಯಕನಟ ಬಾಲಾಜಿಶರ್ಮ ಅವರು ತಮ್ಮ ಪಾತ್ರ ಕುರಿತು ಹೇಳಿದ್ದು ಹೀಗೆ. ” ನಾನು ಮೂಲತ: ಫೋಟೋಗ್ರಾಫರ್ ಆಗಿದ್ದವನು. ಅದರ ಜೊತೆ ಜೊತೆಗೆ ಬಣ್ಣದ ನಂಟು ಹೆಚ್ಚಿಸಿಕೊಂಡು ಹಲವಾರು ಸೀರಿಯಲ್‌ಗಳಲ್ಲಿ ಅಭಿನಯಿಸಿದೆ. ಅಲ್ಲಿಂದ ಒಂದಷ್ಟು ಸಿನಿಮಾ ಕೂಡ ಮಾಡಿದ್ದೇನೆ. ಈ ಚಿತ್ರ ನನಗೆ ವಿಶೇಷವಾಗಿದೆ. ಕಾರಣ, ಒಂದೊಳ್ಳೆಯ ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಕಥೆ ಇಲ್ಲಿದೆ. ನಾನಿಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ಸಾಮರ್ಥ್ಯ ಚಿತ್ರದಲ್ಲಿ ಸುನೀಲ್ ಅವರ ಜೊತೆ ಅಭಿನಯಿಸಿದ್ದೆ ಎಂದು ವಿವರ ಕೊಟ್ಟರು ಅವರು.

ನಾಯಕಿ ಚೈತ್ರಾ ಕೋಟೂರ್ ಅವರು ಮೊದಲ ಸಲ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದಾರಂತೆ. ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸುತ್ತಾರೆ. ಕೊಲೆಗಾರನನ್ನು ಹೇಗೆ ಸೆರೆ ಹಿಡಿಯುತ್ತಾರೆ ಎಂಬುದನ್ನು ಇಲ್ಲಿ ಹೇಳಹೊರಟಿದ್ದೇವೆ. ಗುರುರಾಜ್ ಕುಲಕರ್ಣಿ ಒಬ್ಬ ಸೆನ್ಸಿಬಲ್ ಡೈರೆಕ್ಟರ್ ಎಂದು ಗುಣಗಾನ ಮಾಡಿದರು ಚೈತ್ರಾ ಕೋಟೂರ್.‌ ಮತ್ತೊಬ್ಬ ನಟ ಸಾಗರ್ ಅವರಿಗೂ ಪೋಲೀಸ್ ಪಾತ್ರ ಸಿಕ್ಕಿದೆಯಂತೆ. ಥ್ರಿಲ್ಲರ್ ಮಂಜು ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಅಂದರು ಅವರು. ಈಗಾಗಲೇ ೨೫೦೦ಕ್ಕೂ ಹೆಚ್ಚು ಸಾಸಹ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು, ಸಾಧಿಸಬೇಕು ಎನ್ನುವ ಫೈರ್ ಇರುವ ತಂಡವಿದು. ಇಲ್ಲಿ ಭರ್ಜರಿ ಎರಡು ಫೈಟ್ಸ್ ಮಾಡುತ್ತಿದ್ದೇನೆ ಎಂದರು. ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಎಂ.ತಿರ್ಥೋ ಸಂಗೀತ ನೀಡಿದ್ದಾರೆ. ಬಲ ರಾಜವಾಡಿ, ಮಹೇಶ್, ಶೈಲೇಶ್,ಸುನಂದಾ, ಗಿರೀಶ್ ಜತ್ತಿ, ಆಪ್ಜಲ್, ಗುರುರಾಜ್ ಹೊಸಕೋಟೆ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಬಾನಂಗಳ ಸೇರಿದ ದೀದಿ ; ಹಾಡುಗಳ ಮೂಲಕ ಎಂದಿಗೂ ಜೀವಂತ ಲತಾಜೀ ! ಗಾನ ಚತುರೆಯ ಒಂದು ನೆನಪು…

ಭಾರತೀಯ ಚಿತ್ರರಂಗ ಕಂಡ ಅಪರೂಪದ ಗಾಯಕಿ ಲತಾಜೀ. ಇವರ ಹಾಡುಗಳಿಗೆ ಮನಸೋತವರೇ ಇಲ್ಲ. ಬಹುತೇಕ ಭಾಷೆಗಳಲ್ಲಿ ಯಶಸ್ವಿ ಹಾಡುಗಳನ್ನು ಹಾಡಿರುವ ಸಕ್ಸಸ್‌ಫುಲ್‌ ಗಾಯಕಿ ಅವರು. ಅವರು ಈಗಿಲ್ಲ. ಆದರೆ, ಅವರ ನೂರಾರು ಹಿಟ್‌ ಸಾಂಗ್‌ಗಳು ಇಂದಿಗೂ ಜೀವಂತವಾಗಿವೆ. ಲತಾಜಿ ಅವರನ್ನು ದೀದಿ ಅಂತಾನೆ ಎಲ್ಲರು ಕರೆಯುತ್ತಿದ್ದರು. ದೀದಿ ಬಾಲಿವುಡ್‌ ಮಾತ್ರವಲ್ಲ, ಎಲ್ಲಾ ಚಿತ್ರರಂಗದಲ್ಲೂ ಹಾಡಿ ಸೈ ಎನಿಸಿಕೊಂಡವರು. ಕನ್ನಡದಲ್ಲೂ ಲತಾಜಿ ಹಾಡಿದ್ದಾರೆ. ಹಳೆಯ “ಸಂಗೊಳ್ಳಿ ರಾಯಣ್ಣ” ಸಿನಿಮಾದಲ್ಲಿ ಇವರ ಹಾಡಿದೆ. “ಬೆಳ್ಳನೆ ಬೆಳಗಾಯಿತು…” ಎಂಬ ಹಾಡು ಕೇಳಿದ್ದರೆ, ಅಲ್ಲಿರುವ ಧ್ವನಿ ಅದೇ ಲತಾಜಿ ಅವರದು. ಅವರು ಒಂದೇ ಭಾಷೆಗೆ ಸೀಮಿತವಾಗಲಿಲ್ಲ. ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಪಂಜಾಬ್‌ ಹೀಗೆ ಇನ್ನಿತೆ ಭಾಷೆಯ ಚಿತ್ರಗಳಲ್ಲೂ ತಮ್ಮ ಮಧುರ ಕಂಠ ನೀಡಿದ್ದಾರೆ. ಈಗ ಅವರ ಹಾಡುಗಳು ಜೀವಂತವಾಗಿವೆ. ಅವರು ಬಿಟ್ಟು ಹೋದಂತಹ ಆದರ್ಶಗಳಿವೆ. ಅವರ ಬಳಿ ಕಲಿತ ಅನೇಕ ಗಾಯಕರಿದ್ದಾರೆ. ಸಂಗೀತ ನೀರ್ದೇಶಕರಿದ್ದಾರೆ. ಅಂತಹ ನಿರ್ದೇಶಕರ ಪೈಕಿ ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರೂ ಸಹ ದೀದಿ ಅವರನ್ನು ಬಲು ಹತ್ತಿರದಿಂದ ಬಲ್ಲವರು. ಅಂತಹ ಲತಾಜಿ ಕುರಿತು ತಮ್ಮ ಹಳೆಯ ನೆನಪುಗಳನ್ನು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸುಧೀರ್‌ ಅತ್ತಾವರ್…
“ಒಮ್ಮೆ ಆಶಾಬೋಸ್ಲೆ ಅವರೊಂದಿಗೆ ಅವರ ಮನೆಯಲ್ಲೇ ಹಾಡಿನ ಬಗ್ಗೆ ಮಾತಾಡುತ್ತಿದ್ದ ಸಮಯವದು. ಲತಾ ದೀದಿ ತಂಗಿಗೆ ಫೋನ್ ಮಾಡಿ ನನ್ನ ಬಗ್ಗೆ ಒಂದಷ್ಟು ಹೇಳಿದ್ದರು. “ಹಾಂ ದೀದಿ… ಉಷಾ (ಸಣ್ಣ ತಂಗಿ)ದು ರೆಕಾರ್ಡಿಂಗ್ ಆಯ್ತು. ನಾನು ನಾಳೆ ಮಾಡುತ್ತೇನೆ. ನಿಮ್ಮ ಧ್ವನಿ ಕೂಡಾ ಸುಧೀರ್ ಬೇಕು ಅಂತ ಹೇಳುತ್ತಿದ್ದಾರೆ. ಬಹಳ ವರ್ಷಗಳ ನಂತರ ನಾವೆಲ್ಲ ಸೇರಿ ಒಂದು ಹಾಡು ಹಾಡಿದಂತಾಗುತ್ತದೆ ಅಂತ ಆಶಾ ದೀದಿ ಲತಾಜಿಗೆ ಹೇಳಿದರು. ನಾನು ಸುಧೀರ್ ಹತ್ರ ಮಾತನಾಡುತ್ತೇನೆ ಅಂದ್ರು ಲತಾಜಿ. ಐದು ದಿನಗಳ ನಂತರ ನಾನು ಬೆಂಗಳೂರಿನಲ್ಲಿದ್ದಾಗ ಲತಾ ದೀದಿಯ ಫೋನ್ ಬಂತು.

ಆಗ ನನ್ನ ಖುಷಿಗೆ ಪಾರವೇ ಇರಲಿಲ್ಲ.
ದೀದಿ ಅವರು ಮುಂಬಯಿಯಲ್ಲಿ ಫೆಡರ್ ರೋಡ್‌ನಲ್ಲಿರುವ ಪ್ರಭು ಕುಂಜ್ ನಿವಾಸಕ್ಕೆ ಬರಲು ಹೇಳಿದ್ದರು. ಆಶಾಜಿ, ಉಷಾಜಿ ಮತ್ತು ಝನೈ (ಆಶಾಜಿ ಮೊಮ್ಮಗಳು) ಅವರ ಎಲ್ಲರ ಸ್ವರಗಳನ್ನು ನಾನು ರೆಕಾರ್ಡ್‌ ಮಾಡಿದ್ದೆ. ನಿಜಕ್ಕೂ ಅದೊಂದು ಸಂತಸದ ಸಂದರ್ಭ. ಲತಾಜಿ ಅವರ ಧ್ವನಿ ಸೇರಿಸುವುದು ಮಾತ್ರ ಬಾಕಿ ಇತ್ತು. ಆದರೆ. ಮನೆಗೆ ಹೋದಾಗಲೂ ಅಷ್ಟೊಂದು ಲವ ಲವಿಕೆಯಿಂದ ಇರಲಿಲ್ಲ ದೀದಿ. ಆದರೆ, ಅವರು ನೀಲಿ ಸೀರೆ ಧರಿಸಿ ತುಂಬಾನೇ ಖುಷಿಯಿಂದ ನನ್ನನ್ನು ಮತ್ತು ತಂಡವನ್ನು ಅವರು ಬರ ಮಾಡಿಕೊಂಡರು. ಅವರ ಈವರೆಗಿನ ಸಿನಿಮಾ ಮತ್ತು ಗಾಯನ ಕುರಿತಂತೆ ಮಾತನಾಡಲು ಶುರು ಮಾಡಿದರು.

ನಿಜ ಹೇಳ್ತೀನಿ. ಅವರೊಬ್ಬ ಖ್ಯಾತ ಗಾಯಕಿ. ಹೇಗೆಲ್ಲಾ ಇರಬಹುದಿತ್ತು. ಆದರೆ, ಒಂಚೂರು ಗತ್ತು ಇಲ್ಲ… ಹಮ್ಮು ಬಿಮ್ಮುಗಳಿಲ್ಲ…! ನಮ್ಮ ಮನೆಯ ತಾಯಿಯಂತೆಯೇ ನಮ್ಮನ್ನು ಪ್ರೀತಿಯಿಂದ ಸತ್ಕರಿಸಿದರು, ಖುಷಿಯಿಂದಲೇ ಮಾತನಾಡಿದರು ಮತ್ತೆ ಹಾಡಿದರು ಕೂಡ! ಈಗ ರೆಕಾರ್ಡಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಹುಷಾರಾಗುತ್ತೇನೆ. ಬಪ್ಪಿ ಲಹಿರಿ ಕೂಡಾ ಕಾಯ್ತಾ ಇದ್ದಾರೆ. ಒಟ್ಟಿಗೆ ಮುಗಿಸುತ್ತೇನೆ ಎಂದು ಆ ವೇಳೆ ಮಾತು ಕೊಟ್ಟರು. ಹುಷಾರಾದ ಮೇಲೆ ಹಾಡುತ್ತೇನೆ ಅಂದಿದ್ದರು ಅವರು.

ದೀದಿಗಾಗಿಯೇ ಕೊಡಲು ಗೆಳೆಯ ಸಂಕಲನಕಾರ ವಿದ್ಯಾಧರ್ ತಂದಿದ್ದ ಮೈಸೂರ್‌ ಪಾಕ್ ನೋಡಿ ಅವರ ಸಂತಸಪಟ್ಟರು. ನೀವು ಕನ್ನಡದಲ್ಲಿ “ಬೆಳ್ಳನೆ ಬೆಳಗಾಯ್ತು…” ಅಂತ ಒಂದು ಹಾಡು ಹಾಡಿದ್ದೀರಲ್ಲವೇ ದೀದಿ ಅಂತ ಮೆಲ್ಲನೆ ನಾನು ಕೇಳಿದೆ. ಆಗ ಅವರು ತಕ್ಷಣವೇ, ಒಂದಲ್ಲ ನಾಲ್ಕು ಹಾಡು ಹೇಳಿದ್ದೇನೆ ಅಂತ ಹೇಳಿ, ನಾಲ್ಕೂ ಹಾಡಿನ ಒಂದೊಂದು ತುಣುಕು ಹಾಡಿದರು. ಸುಮಾರು 55 ಸಾವಿರಕ್ಕೂ ಹೆಚ್ಚು, ಜಗತ್ತಿನ ನಾನಾ ಭಾಷೆಗಳಲ್ಲಿ ಹಾಡಿದ್ದ ಈ ಮಾತೆಯ ಕನ್ಬಡಾಭಿಮಾನ ಕಂಡು ನಿಜಕ್ಕೂ ನಾನು ದಂಗಾದೆ.

ನಾನು ಕನ್ನಡ ಮತ್ತು ಕನ್ನಡಿಗರನ್ಬು ಹೇಗೆ ಮರೆಯಲಿ…?
ನನ್ನನ್ಬು ಈ ಕ್ಷೇತ್ರಕ್ಕೆ ಪರಿಚಯಿಸಿದ ಮಾಸ್ಟರ್ ವಿನಾಯಕ್ ರವರು ಕನ್ನಡಿಗರೇ ಅಂತ ಅಂದಾಗ ನಾನು ತೀವ್ರ ಭಾವುಕನಾದೆ. ದೀದಿ ನಿಮ್ಮ ಮತ್ತು ಹಿರಿಯ ನಿರ್ದೇಶಕರಾದ ಎಂ.ಎಸ್. ಸತ್ಯು ಅವರ ಜೊತೆಗಿನ ಒಡನಾಟದ ಬಗ್ಗೆ ಹೇಳಿ ಅಂದಾಗ, ನಾನು ಎರಡು ಸಲ ಭೇಟಿ ಆಗಿದ್ದೆ. ನನಗಿಂತ ಒಂದು ವರ್ಷ ಚಿಕ್ಕವರು ಸತ್ಯು. ಆದರೆ, ದೊಡ್ಡ ಹೆಸರು ಮಾಡಿದ್ದಾರೆ.” ಅಂತ ಹೇಳುತ್ತಲೇ ಒಂದಷ್ಟು ಮಾತುಕತೆ ಮುಂದುವರೆದಿತ್ತು.

ಅವರು ಹಾಗೆ ಮಾತಾಡುವಾಗ, ನಾನು ಒಮ್ಮೆ ಮಂಗಳೂರಿಗೆ ಬರಬೇಕು ಅಂತಾನೂ ಹೇಳಿದ್ದರು. ಅದರೆ ಉಷಾಜಿ ಅವರನ್ನು ಮಂಗಳೂರಿಗೆ ಕರೆಸಿಕೊಂಡಾಗಲೂ ದೀದಿ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ನನ್ನ ಹಾಡಿಗೆ ಅವರು ಕೊಡಬೇಕಾಗಿದ್ದ ಧ್ವನಿ ಹಾಗೆಯೇ ಬಾಕಿ ಉಳಿದುಕೊಂಡಿತು ಎನ್ನುವ ಸುಧೀರ್‌ ಅತ್ತಾವರ್‌ , ದೀದಿ ಅವರ ಬಗೆಗಿನ ನೆನಪುಗಳನ್ನು ಈ ರೀತಿ ಹಂಚಿಕೊಳ್ಳುವ ಮೂಲಕ ಹಾಡು ಹಾಡಿಸಲು ಸಾಧ್ಯವಾಗದಿದ್ದಕ್ಕೆ ಈಗಲೂ ನನಗೆ ನೋವಿದೆ ಅನ್ನುತ್ತಾರೆ ಅವರು.

Categories
ಸಿನಿ ಸುದ್ದಿ

ಬದಲಾಯ್ತು ಬೈ ಟು ಲವ್ ಬಿಡುಗಡೆ ಡೇಟ್ ; ಫೆಬ್ರವರಿ 25 ಅಲ್ಲ‌ 18ಕ್ಕೆ ಸಿನಿಮಾ ತೆರೆಗೆ!

ಬಜಾರ್ ಹೀರೋ ಧನ್ವೀರ್ ಹಾಗೂ ಹರಿ ಸಂತು…ಸುಪ್ರಿತ್ ಈ ಮೂರು ಕಾಂಬೋದ ಬಹು ನಿರೀಕ್ಷಿತ ಸಿನಿಮಾ ಬೈ ಟು ಲವ್.. ಈಗಾಗಲೇ ಫೆಬ್ರವರಿ 25ರಂದು ಬರೋದಾಗಿ ಅನೌನ್ಸ್ ಮಾಡಿದ್ದ ಬೈ ಟು ಲವ್ ಒಂದು ವಾರ ಮುಂಚೆನೇ ತೆರೆಗೆ ಬರಲಿದೆ. ಅಂದ್ರೆ ಫೆಬ್ರವರಿ 25ರ ಬದಲಿಗೆ ಫೆಬ್ರವರಿ 18ಕ್ಕೆ ಬೈ ಟು ಲವ್ ಪ್ರೇಮ್ ಕಹಾನಿ ತೆರೆಗಪ್ಪಳಿಸಲಿದೆ.

ಬೈ ಟು ಲವ್ ಸಿನಿಮಾ ಆರಂಭದಿಂದ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಪೋಸ್ಟರ್, ಟೀಸರ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆ ಹುಟ್ಟಿಸಿರುವ ಬೈ ಟು ಲವ್ ಸಿನಿಮಾದಲ್ಲಿ ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಮ್ಯಾಜಿಕ್ ಮಾಡಲಿದೆ. ಈ ಹಿಂದೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈ ‘ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ.

ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್‌’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಮೃತ್ಯೋರ್ಮ ರಿಫ್ ಗೆ ಆಯ್ಕೆ; ಇದು ಸುಧೀರ್ ಅತ್ತಾವರ ಚಿತ್ರ

ಕನ್ನಡಚಿತ್ರರಂಗದಲ್ಲಿ ವಿನೂತನ ಪ್ರಯೋಗಾತ್ಮಕ ಸಿನಿಮಾ ಸುಧೀರ್ ಅತ್ತಾವರ್ ನಿರ್ದೇಶನದ “ಮೃತ್ಯೋರ್ಮ ” ಮಾರ್ಚ್ 25ರಿಂದ 30ರವರೆಗೆ ಜೈಪುರ ಮತ್ತು ಜೋಧ್ ಪುರಗಳಲ್ಲಿ ನಡೆಯಲಿರುವ ಪ್ರತಿಷ್ಠತ ಎಂಟನೇ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವದ (ರಿಫ್) ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. “ಬಿಡಿಟಿ ಅಭಿಯಂತರ ಚಿತ್ರ” ಅರ್ಪಿಸಿ, ತ್ರಿವಿಕ್ರಮ ಬೆಳ್ತಂಗಡಿ ಅವರು ನಿರ್ಮಾಣ ಮಾಡಿರುವ ಚಿತ್ರವು “ಸಕ್ಸಸ್ ಫಿಲಂಸ್” ಮತ್ತು “ಧೃತಿ ಕ್ರಿಯೇಷನ್” ಬ್ಯಾನರ್ ಅಡಿ ನಿರ್ಮಾಣ ಗೊಂಡಿದೆ .

ಕಳೆದ ಬಾರಿಯೂ ನಿರ್ದೇಶಕರ “ಮಡಿ” ಎಂಬ ಚಿತ್ರಕ್ಕೆ ರಿಫ್ ನಲ್ಲಿ “ಗ್ಲೋಬಲ್ ಬೆಸ್ಟ್ ಸೋಷಿಯಲ್ ಅವೇರ್ನೆಸ್ಸ್ ಫಿಲ್ಮ್” ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳು ಲಭಿಸಿತ್ತು. ಅಲ್ಲದೆ “ಮಡಿ” ಚಿತ್ರವನ್ನು ಬಾಲಿವುಡ್ ನ ಹಲವು ನಿರ್ದೇಶಕ, ನಿರ್ಮಾಪಕ ಹಾಗು ಕಲಾವಿದರು ಮೆಚ್ಚಿಕೊಂಡಿದ್ದರು.


ಹೆಚ್ಚು ಗುಣಾತ್ಮಕ ಮನರಂಜನೀಯ ಸಿನೆಮಾಗಳನ್ನು ಗುರುತಿಸುತ್ತಿರುವ “ರಿಫ್” ಚಿತ್ರೋತ್ಸವವು ಅಂತಾರಾಷ್ಟೀಯ ಮಟ್ಟದಲ್ಲಿ ಪ್ರತಿಷ್ಟಿತ ಚಿತ್ರೋತ್ಸವ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ.ಅಲ್ಲದೆ ಈ ಚಿತ್ರೋತ್ಸವವು ರಾಷ್ಟ್ರೀಯ ಮಟ್ಟದ ವಾಹಿನಿಗಳ ಗಮನವನ್ನೂ ಹೆಚ್ಚು ಸೆಳೆದುಕೊಳ್ಳುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳಲ್ಲಿ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ದುಬೈ ನಲ್ಲಿ ಪ್ರೊಡಕ್ಷನ್ ಕಂಪೆನಿ ಆರಂಭಿಸಿರುವ ಸಕ್ಸಸ್ ಫಿಲಂಸ್; ಧೃತಿ ಕ್ರಿಯೇಷನ್ ಜೊತೆ “ಮೃತ್ಯೋರ್ಮ” ಸಿನಿಮದ ಅಂತಾರಾಷ್ಟ್ರೀಯ ಪ್ರೀಮಿಯರ್ ನ ಪ್ಲಾನ್ ಕೂಡಾ ಮಾಡಿಕೊಳ್ಳುತ್ತಿದೆ. ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿರುವ ತ್ರಿವಿಕ್ರಮ್ ಬೆಳ್ತಂಗಡಿ ಮತ್ತು ಮುಂಬೈ -ದುಬೈ ಗಳಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಸುಧೀರ್ ಅತ್ತಾವರ್ ಅವರ ಜೋಡಿ ಸಿನಿಮಾ ನಿರ್ಮಾಣದ ಹೊಸ ಅವಿಷ್ಕಾರ ಮತ್ತು ಕಲ್ಪನೆಯೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದಾರೆ.


ರಾಕೇಶ್ ಅಡಿಗ, ಹರ್ಷಿಕ ಪೂಣಚ್ಚ, ಸ್ಮಿತ, ಉಷಾ ಉತುಪ್ ಮೊದಲಾದವರು ನಟಿಸಿರುವ “ಮೃತ್ಯೋರ್ಮ” ಚಿತ್ರಕ್ಕೆ ಅಮೃತಂಗಮಯ…. ಎಂಬ ಅಡಿ ಬರಹವಿದೆ. ಚಿತ್ರದ ತಾಂತ್ರಿಕ ವರ್ಗದಲ್ಲಿ ವೀರ್ ಸಮರ್ಥ್ ಮತ್ತು ರವಿ ಬಸ್ರೂರ್ ಸಂಗೀತ, ವಿದ್ಯಾಧರ್ ಶೆಟ್ಟಿ ಸಂಕಲನ ಮತ್ತು ಎಂ ಎಸ್ ಸತ್ಯು ರವರ ಕಲೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಫೆಬ್ರವರಿ 25ಕ್ಕೆ ಬೈಟು ಲವ್; ಪ್ರೇಮ್ ಕಹಾನಿಗೆ ದಿನಗಣನೆ!

‘ಬಜಾರ್’ ಹುಡುಗ ಧನ್ವೀರ್ ಮತ್ತು ‘ಕಿಸ್’ ಬ್ಯೂಟಿ ಶ್ರೀಲೀಲಾ ನಟನೆಯ ‘ಬೈ ಟು ಲವ್’ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಹರಿ ಸಂತೋಷ್ ನಿರ್ದೇಶನದ ಈ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟು ಹಾಕಿತ್ತು. ಪೋಸ್ಟರ್, ಟೀಸರ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆಯ ಚಿಟ್ಟೆಯಂತಿದ್ದ ಬೈ ಟು ಲವ್ ಕಹಾನಿ ಕಣ್ತುಂಬಿಕೊಳ್ಳೋದಿಕ್ಕೆ ದಿನಗಣನೆ ಶುರುವಾಗಿದೆ.

ಫೆಬ್ರವರಿ 25ಕ್ಕೆ ಬೈ ಟು ಲವ್ ತೆರೆಗೆ!
ಬೈ ಟು ಲವ್ ಸಿನಿಮಾ ಬೆಳ್ಳಿಪರದಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ತಿಂಗಳ 25ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಅದ್ಭುತವಾಗಿ ಮೂಡಿ ಬಂದಿದೆ. ‘ಬಜಾರ್‌’ನಲ್ಲಿ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈ ‘ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್‌’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

ಲೀಲು-ಬಾಲು ಟ್ರ್ಯಾಕ್ ಹಿಟ್!

ಬೈ ಟು ಲವ್ ಸಿನಿಮಾದ ಯಾರು ಏನಾದ್ರೂ ಅಂದ್ಕೊಂಡ್ಲಿ ಏನಂತೆ.. ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ. ಧನ್ವೀರ್ ಮತ್ತು ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ. ನಿರ್ದೇಶಕ ಹರಿ ಸಂತೋಷ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮಾನೋ ಕಂಠಸಿರಿಯಲ್ಲಿ ಮೂಡಿ ಬಂದಿರುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.

Categories
ಸಿನಿ ಸುದ್ದಿ

ಸಂದೇಶ್ ಪ್ರೊಡಕ್ಷನ್ಸ್ ಚಿತ್ರದಲ್ಲಿ ಶಿವರಾಜಕುಮಾರ್; ವಿಭಿನ್ನ ಕಥೆಗೆ ಚಿ.ಗುರುದತ್ ನಿರ್ದೇಶನ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್. ನಿರ್ಮಿಸುತ್ತಿದ್ದಾರೆ.

ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಗುರುದತ್ ಹಾಗೂ ಶಿವರಾಜಕುಮಾರ್ ಅವರು ಆತ್ಮೀಯ ಸ್ನೇಹಿತರು. ಇದು ಎಲ್ಲರಿಗೂ ಗೊತ್ತು. ಗೆಳೆಯನಿಗೆ ಹೊಸ ಬಗೆಯ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ ಗುರುದತ್.

ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು
ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಸದ್ಯಕ್ಕಿಷ್ಟು ಮಾಹಿತಿ. ಚಿತ್ರದ ಕಥೆ, ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ಸುದ್ದಿ ಇಷ್ಟರಲ್ಲೇ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ (75) ಇಂದು (ಬುಧವಾರ) ನಿಧನರಾಗಿದ್ದಾರೆ. ಸುಮಾರು ಮೂರುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅಶೋಕ್ ರಾವ್, ಖಳನಟರಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಡಾ.ರಾಜ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದರು. ಇಲ್ಲಿಯವರೆಗೆ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಶೋಕ್ ರಾವ್ ಅವರು ಕೆಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಶೋಕ್ ರಾವ್ ಅವರು ತಮ್ಮ ನಟನೆ ಮೂಲಕ ಸಾಕಷ್ಟು ಗಮನಸೆಳೆದಿದ್ದರು. ಅದರಲ್ಲೂ ಖಳನಟರಾಗು ಹೀರೋ ಲೆವೆಲ್ ಪಾತ್ರಗಳಷ್ಟೇ ಗಮನ ಸೆಳೆದಿದ್ದರು.

ಮೃತರ ಅಂತ್ಯಕ್ರಿಯೆ ಹೆಬ್ಬಾಳ ಸಮೀಪದ ಚಿತಾಗಾರದಲ್ಲಿ ಮಧ್ಯಾಹ್ನ ಎರಡು ಗಂಟಗೆ ನೆರವೇರಲಿದೆ.
ಮೃತರ ಕುಟುಂಬಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Categories
ಸಿನಿ ಸುದ್ದಿ

ಅಘೋರ ಎಂಬ ಕೌತುಕ ಸಿನಿಮಾ; ರಿಲೀಸ್ ಮೊದಲೇ ಜೋರು ಸದ್ದು ಮಾಡಿದ ಹೊಸಬರ ಚಿತ್ರ

ಅಘೋರ ಹೊಸ ಬಗೆಯ ಸಿನಿಮಾ. ಹೊಸತನ ಸಾರುವ ಈ ಚಿತ್ರ ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ…

ಕನ್ನಡದಲ್ಲಿ ಈಗಾಗಲೇ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿವೆ. ಅವರ ಸಿನಿಮಾಗಳೂ ಸಹ ಹಲವು ಬಗೆಯ ಶೀರ್ಷಿಕೆ ಹೊತ್ತು ಬಂದಿವೆ. ಅದರೊಂದಿಗೆ ವಿಭಿನ್ನ ಕಥೆಯುಳ್ಳ ಸಿನಿಮಾಗಳೂ ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಅಘೋರ” ಸಿನಿಮಾವೂ ಸೇರಿದೆ.
ಹೌದು, ಅಘೋರ ಹೊಸಬಗೆಯ ಚಿತ್ರ. ಕೆಲ ಸಿನಿಮಾಗಳು ರಿಲೀಸ್ ಗೂ ಮೊದಲೇ ಜೋರು ಸೌಂಡು ಮಾಡುತ್ತವೆ. ಅಂಥದ್ದೊಂದು ಸೌಂಡಿಗೆ ಅಘೋರ ಸಿನಿಮಾ ಸೇರಿದೆ. ಅಂದಹಾಗೆ, ಈ ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್. ನಿರ್ದೇಶಿದ್ದಾರೆ. ಇವರು ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅಘೋರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೋಕ್ಷ ಸಿನಿಮಾಸ್ ಬ್ಯಾನರ್ ನಲ್ಲಿ ಪುನಿತ್ ಎಂ.ಎನ್. ಚಿತ್ರವನ್ನು ನಿರ್ಮಿಸಿದ್ದಾರೆ.

ಇಷ್ಟಕ್ಕೂ ಅಘೋರ ಕಥೆ ಏನು?

ಅಘೋರ ಬಗ್ಗೆ ಹೇಳುವುದಾದರೆ, ಇದೊಂದು ಹಾರರ್ ಫ್ಯಾಂಟಸಿ ಸಿನಿಮಾ. ಅದರಲ್ಲೂ ಒಂದು ನಂಬಿಕೆ ಹಿಂದಿರುವ ಕಥಾಹಂದರ ಇಲ್ಲಿದೆ. ಜಗತ್ತಿನಲ್ಲಿ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ಇದೆಲ್ಲದರಲ್ಲೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ. ಇಷ್ಟೆಲ್ಲಾ ಇದ್ದರೂ ಈ ಪ್ರಕೃತಿಯ ಸೃಷ್ಟಿಕರ್ತ ಯಾರು? ರಕ್ಷಕ ಯಾರು? ಇಂತಹ ಆಲೋಚನೆಯನ್ನು ಆಳವಾಗಿ ನೋಡಿದಾಗ ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದಕ್ಕೆ ತಕ್ಕಂತೆ ಚಿತ್ರಕಥೆಯೂ ಇಲ್ಲಿದೆ.

ಇನ್ನು, ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಕೂಡ ಪಾತ್ರಗಳಾಗಿವೆ. ಪ್ರಕೃತಿಯೊಂದಿ ಗೆ ಏಕೆ ಬದುಕ ಬೇಕು ಮತ್ತು ಸಾವು ಏಕೆ ಅನಿವಾರ್ಯ ಇದು ಯಾರಿಂದ, ಯಾವಾಗ , ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಎಷ್ಟೇ ಪ್ರಯತ್ನಿಸಿದರೂ ಕರ್ಮದ ರೀತಿಯಲ್ಲಿ ಅದು ಸಂಭವಿಸುತ್ತದೆ. ಒಟ್ಟಾರೆ ಈ ಚಿತ್ರದ ಸಾರಾಂಶ ಬಗ್ಗೆ ಹೇಳುವುದಾದರೆ, ಕರ್ಮ ಅನ್ನೋದು ಯಾರಿಗೂ ಬಿಡಲ್ಲ ಎಂಬ ಅಂಶಗಳು ಇಲ್ಲಿವೆ.

ಅವಿನಾಶ್ ಚಿತ್ರದಲ್ಲಿ ಅಘೋರಿಯಾಗಿ ನಟಿಸಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನಿತ್ ಗೌಡ, ರಚನಾ ದಶರತ್ ದ್ರವ್ಯಶೆಟ್ಟಿ ಇತರರು ಕಾಣಿಸಿಕೊಂಡಿದ್ದಾರೆ. ಶರತ್ ಜಿ ಕುಮಾರ್ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯವಿದೆ. ಎಲ್. ಆರ್‌ . ಜೀವನ್ ಸಂಭಾಷಣೆ ಇದೆ. ಎ.ಆರ್ .ರೆಹಮಾನ್ ಬಳಿ ಕೆಲಸ ಮಾಡಿರುವ ಎ. ಬಿ. ಮುರಳೀಧರನ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ಮಾಡಿದ್ದಾರೆ. ತ್ಯಾಗರಾಜ್ ಅವರು
ಚಿತ್ರದ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಇನ್ನು ಸಂಜಿತ್ ಹೆಗ್ಡೆ, ಸರಿಗಪ ಖ್ಯಾತಿಯ ಹನುಮಂತ, ಸಚಿನ್ ಹಾಡಿದ್ದಾರೆ. ಯುಡಿವಿ ವೆಂಕಟೇಶ್ ಸಂಕಲನವಿದೆ.
ಮಾಸ್ ಮಾದ ಅವರ ಸಾಹಸವಿದೆ. ಅದೇನೆ ಇರಲಿ, ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು, ಚಿತ್ರ ಫೆಬ್ರವರಿ 25ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ಕೆ ಆರ್ ಜಿ ಸ್ಟುಡಿಯೋ ಸ್ ರಿಲೀಸ್ ಜವಾಬ್ದಾರಿ ಹೊತ್ತುಕೊಂಡಿದೆ.

ರಿಲೀಸ್ ಮೊದಲೇ ಪ್ರಶಸ್ತಿಯ ಗರಿ…

ಅಘೋರಿ ಸಿನಿಮಾ ಬಗ್ಗೆ ಹೇಳುವುದಾದರೆ ಸುಮಾರು
16 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ 32 ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಚೊಚ್ಚಲ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ನಟ, ಅತ್ಯುತ್ತಮ ಖಳ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಮೇಕಪ್ ಇತ್ಯಾದಿ ವಿಭಾಗದಲ್ಲಿ ಪ್ರಶಸ್ತಿ ಬಾಚಿದೆ.

Categories
ಸಿನಿ ಸುದ್ದಿ

ವೆಡ್ಡಿಂಗ್ ಗಿಫ್ಟ್ ಡಬ್ಬಿಂಗ್ ಮುಗೀತು! ಇಲ್ಲಿ ಪ್ರೇಮ ಲಾಯರ್‌

ಹೊಸಬರ ಚಿತ್ರ “ವೆಡ್ಡಿಂಗ್‌ ಗಿಫ್ಟ್‌” ಸಿನಿಮಾ ಚಿತ್ರೀಕರಣ ಮುಗಿದಿರೋದು ಎಲ್ಲರಿಗೂ ಗೊತ್ತಿದೆ. ಈಗ ಚಿತ್ರದ ಡಬ್ಬಿಂಗ್‌ ಕೆಲಸವೂ ಪೂರ್ಣಗೊಂಡಿದೆ. ಹೌದು, ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಡಬ್ಬಿಂಗ್‌ ಮುಗಿದಿದೆ. ಖ್ಯಾತ ನಟಿ ಪ್ರೇಮ ಚಿತ್ರದ ಮುಖ್ಯ ಆಕರ್ಷಣೆ. ಇತ್ತೀಚೆಗೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಪ್ರೇಮ್ ಅವರು ಡಬ್ಬಿಂಗ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತಾಡುವ ಪ್ರೇಮ, “ನಾನು ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ.

ನಿರ್ದೇಶಕ ವಿಕ್ರಂಪ್ರಭು ಅವರು ಉತ್ತಮ ಕಥೆ ಮಾಡಿದ್ದಾರೆ. ನಾನು ಕೋರ್ಟಿನಲ್ಲಿ ಕೆಲವು ಕಲಾಪಗಳನ್ನು ನೋಡಿದ್ದೀನಿ. ಅಲ್ಲಿ ವಕೀಲರು ಮಾತನಾಡುವ ಹತ್ತಿರದಿಂದ ಕಂಡ ನನಗೆ ಈ ಪಾತ್ರ ಮಾಡಲು ಅನುಕೂಲವಾಯಿತು ಎಂದು ಪ್ರೇಮ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.
ಈಗಿನ ಕಾಲದ ಕೆಲವು ಕಾನೂನುಗಳನ್ನು ಕೆಲವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಎಂಬ ವಿಷಯಯಿಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ವಿಕ್ರಂಪ್ರಭು ಅವರ ಮಾತು.


ಚಿತ್ರದಲ್ಲಿ ನಿಶಾನ್ ನಾಣಯ್ಯ, ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ, ಚಿತ್ರ ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನವಿದೆ. ಉದಯಲೀಲ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಅವರ ಸಂಕಲನ ಚಿತ್ರಕ್ಕಿದೆ.

error: Content is protected !!