ಅಘೋರ ಹೊಸ ಬಗೆಯ ಸಿನಿಮಾ. ಹೊಸತನ ಸಾರುವ ಈ ಚಿತ್ರ ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ…
ಕನ್ನಡದಲ್ಲಿ ಈಗಾಗಲೇ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿವೆ. ಅವರ ಸಿನಿಮಾಗಳೂ ಸಹ ಹಲವು ಬಗೆಯ ಶೀರ್ಷಿಕೆ ಹೊತ್ತು ಬಂದಿವೆ. ಅದರೊಂದಿಗೆ ವಿಭಿನ್ನ ಕಥೆಯುಳ್ಳ ಸಿನಿಮಾಗಳೂ ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಅಘೋರ” ಸಿನಿಮಾವೂ ಸೇರಿದೆ.
ಹೌದು, ಅಘೋರ ಹೊಸಬಗೆಯ ಚಿತ್ರ. ಕೆಲ ಸಿನಿಮಾಗಳು ರಿಲೀಸ್ ಗೂ ಮೊದಲೇ ಜೋರು ಸೌಂಡು ಮಾಡುತ್ತವೆ. ಅಂಥದ್ದೊಂದು ಸೌಂಡಿಗೆ ಅಘೋರ ಸಿನಿಮಾ ಸೇರಿದೆ. ಅಂದಹಾಗೆ, ಈ ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್. ನಿರ್ದೇಶಿದ್ದಾರೆ. ಇವರು ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅಘೋರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೋಕ್ಷ ಸಿನಿಮಾಸ್ ಬ್ಯಾನರ್ ನಲ್ಲಿ ಪುನಿತ್ ಎಂ.ಎನ್. ಚಿತ್ರವನ್ನು ನಿರ್ಮಿಸಿದ್ದಾರೆ.
ಇಷ್ಟಕ್ಕೂ ಅಘೋರ ಕಥೆ ಏನು?
ಅಘೋರ ಬಗ್ಗೆ ಹೇಳುವುದಾದರೆ, ಇದೊಂದು ಹಾರರ್ ಫ್ಯಾಂಟಸಿ ಸಿನಿಮಾ. ಅದರಲ್ಲೂ ಒಂದು ನಂಬಿಕೆ ಹಿಂದಿರುವ ಕಥಾಹಂದರ ಇಲ್ಲಿದೆ. ಜಗತ್ತಿನಲ್ಲಿ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ಇದೆಲ್ಲದರಲ್ಲೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ. ಇಷ್ಟೆಲ್ಲಾ ಇದ್ದರೂ ಈ ಪ್ರಕೃತಿಯ ಸೃಷ್ಟಿಕರ್ತ ಯಾರು? ರಕ್ಷಕ ಯಾರು? ಇಂತಹ ಆಲೋಚನೆಯನ್ನು ಆಳವಾಗಿ ನೋಡಿದಾಗ ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದಕ್ಕೆ ತಕ್ಕಂತೆ ಚಿತ್ರಕಥೆಯೂ ಇಲ್ಲಿದೆ.
ಇನ್ನು, ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಕೂಡ ಪಾತ್ರಗಳಾಗಿವೆ. ಪ್ರಕೃತಿಯೊಂದಿ ಗೆ ಏಕೆ ಬದುಕ ಬೇಕು ಮತ್ತು ಸಾವು ಏಕೆ ಅನಿವಾರ್ಯ ಇದು ಯಾರಿಂದ, ಯಾವಾಗ , ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಎಷ್ಟೇ ಪ್ರಯತ್ನಿಸಿದರೂ ಕರ್ಮದ ರೀತಿಯಲ್ಲಿ ಅದು ಸಂಭವಿಸುತ್ತದೆ. ಒಟ್ಟಾರೆ ಈ ಚಿತ್ರದ ಸಾರಾಂಶ ಬಗ್ಗೆ ಹೇಳುವುದಾದರೆ, ಕರ್ಮ ಅನ್ನೋದು ಯಾರಿಗೂ ಬಿಡಲ್ಲ ಎಂಬ ಅಂಶಗಳು ಇಲ್ಲಿವೆ.
ಅವಿನಾಶ್ ಚಿತ್ರದಲ್ಲಿ ಅಘೋರಿಯಾಗಿ ನಟಿಸಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನಿತ್ ಗೌಡ, ರಚನಾ ದಶರತ್ ದ್ರವ್ಯಶೆಟ್ಟಿ ಇತರರು ಕಾಣಿಸಿಕೊಂಡಿದ್ದಾರೆ. ಶರತ್ ಜಿ ಕುಮಾರ್ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯವಿದೆ. ಎಲ್. ಆರ್ . ಜೀವನ್ ಸಂಭಾಷಣೆ ಇದೆ. ಎ.ಆರ್ .ರೆಹಮಾನ್ ಬಳಿ ಕೆಲಸ ಮಾಡಿರುವ ಎ. ಬಿ. ಮುರಳೀಧರನ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ಮಾಡಿದ್ದಾರೆ. ತ್ಯಾಗರಾಜ್ ಅವರು
ಚಿತ್ರದ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಇನ್ನು ಸಂಜಿತ್ ಹೆಗ್ಡೆ, ಸರಿಗಪ ಖ್ಯಾತಿಯ ಹನುಮಂತ, ಸಚಿನ್ ಹಾಡಿದ್ದಾರೆ. ಯುಡಿವಿ ವೆಂಕಟೇಶ್ ಸಂಕಲನವಿದೆ.
ಮಾಸ್ ಮಾದ ಅವರ ಸಾಹಸವಿದೆ. ಅದೇನೆ ಇರಲಿ, ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು, ಚಿತ್ರ ಫೆಬ್ರವರಿ 25ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ಕೆ ಆರ್ ಜಿ ಸ್ಟುಡಿಯೋ ಸ್ ರಿಲೀಸ್ ಜವಾಬ್ದಾರಿ ಹೊತ್ತುಕೊಂಡಿದೆ.
ರಿಲೀಸ್ ಮೊದಲೇ ಪ್ರಶಸ್ತಿಯ ಗರಿ…
ಅಘೋರಿ ಸಿನಿಮಾ ಬಗ್ಗೆ ಹೇಳುವುದಾದರೆ ಸುಮಾರು
16 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ 32 ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಚೊಚ್ಚಲ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ನಟ, ಅತ್ಯುತ್ತಮ ಖಳ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಮೇಕಪ್ ಇತ್ಯಾದಿ ವಿಭಾಗದಲ್ಲಿ ಪ್ರಶಸ್ತಿ ಬಾಚಿದೆ.