ಕನ್ನಡ ಚಲನಚಿತ್ರ ಪತ್ರಕರ್ತರು ಹೆಮ್ಮೆಯಿಂದ ಕೊಡ ಮಾಡುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ 3ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ ಅಂದರೆ ಮಾರ್ಚ್ 26 ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಕಲರ್ ಫುಲ್ ಆಗಿ ನಡೆಯಲಿದೆ.
ಅಂದು ಸಂಜೆ 5.30ಕ್ಕೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಸಿನಿಮಾ ರಂಗದ ಅನೇಕ ನಟ, ನಟಿಯರು ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಚಿತ್ರರಂಗದ ಗಣ್ಯರು, ಹಿರಿಯ ಕಲಾವಿದರು, ತಂತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ದಿಗ್ಗಜರು ಆಗಮಿಸಲಿದ್ದಾರೆ.
ಕಳೆದ ಎರಡು ವರ್ಷಗಳಲ್ಲೂ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಈ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಿದ್ದು, ಇದು ಮೂರನೇ ವರ್ಷದ ಸಮಾರಂಭ. ಈ ಕಾರ್ಯ ಕ್ರಮಕ್ಕೆ ಸಿನಿಮಾ ಕುಟುಂಬ ಸಾಕ್ಷಿಯಾಗಲಿದೆ.
ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ. ಈ ಹೆಸರು ಕೇಳಿದೊಡನೆ ಕಣ್ಮುಂದೆ ಬರೋದೇ ಅಜಾನುಬಾಹುವಿನಂತಹ ವ್ಯಕ್ತಿ. ಟೈಗರ್ ಪ್ರಭಾಕರ್ ಎಷ್ಟು ಎತ್ತರದ ಗಟ್ಟಿತನದ ವ್ಯಕ್ತಿಯಾಗಿದ್ದರೋ, ಅವರ ವ್ಯಕ್ತಿತ್ವವೂ ಕೂಡ ಹಾಗೆ ಇತ್ತು. ಅವರ ಬಗ್ಗೆ ಈಗ ವಿಷಯ ಪ್ರಸ್ತಾಪವೇಕೆ ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ. ಪ್ರಭಾಕರ್ ಅವರಿಲ್ಲದೆ ಇಂದಿಗೆ ಇಪ್ಪತ್ತೊಂದು (ಮಾರ್ಚ್ 30 1950- 25 ಮಾರ್ಚ್ 2001) ವರ್ಷಗಳು ಗತಿಸಿವೆ. ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳೂ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಟೈಗರ್ ಪ್ರಭಾಕರ್ ಸದಾ ನೆನಪಲ್ಲುಳಿಯೋ ನಟ.
ಅವರು ಇಲ್ಲದ ಈ ಇಪ್ಪತ್ತೊಂದು ವರ್ಷಗಳನ್ನು ನೆನಪಿಸಿಕೊಂಡು ಅವರ ಪುತ್ರ ನಟ ಮತ್ತು ನಿರ್ಮಾಪಕ ವಿನೋದ್ ಪ್ರಭಾಕರ್ ಅವರು ಅಪ್ಪನಿಗೊಂದು ಭಾವುಕ ಪೋಸ್ಟ್ ಮಾಡಿದ್ದಾರೆ. ಅದರ ಸಾರ ಹೀಗಿದೆ…
“ಅಭಿಮಾನಿಗಳಿಂದಲೇ ಟೈಗರ್ ಎಂಬ ಬಿರುದು ಪಡೆದು ಅದೇ ರೀತಿಯಲ್ಲೇ ಬದುಕಿ ಅಪ್ಪ ನಮ್ಮನ್ನಗಲಿದ ದಿನಕ್ಕೆ ಇಂದಿಗೆ 21 ವರ್ಷಗಳು. ಅಪ್ಪ ಉಳಿಸಿ ಹೋದ ನೆನಪುಗಳು ಒಂದಡೆಯಾದರೆ, ಪಡೆದ ಅಭಿಮಾನಿಗಳ ಆಶೀರ್ವಾದ ಇನ್ನೂ ನಮ್ಮ ಕುಟುಂಬದ ಮೇಲಿ ಉಳಿದಿರುವ ಖುಷಿ ಇನ್ನೊಂದೆಡೆ. ಇದ್ದಷ್ಟು ಕಾಲ ಸಿನಿರಸಿಕರನ್ನು ಆಲ್ ರೌಂಡರ್ ರೀತಿಯಲ್ಲಿ ರಂಜಿಸುತ್ತಲೇ ನಮ್ಮನ್ನಗಲಿದರೂ ಕೂಡ ಈಗಲೂ ನಮ್ಮ ನಿಮ್ಮ ನಡುವೆ ತಮ್ಮ ಸುಮಾರು 450 ಪ್ಲಸ್ ಚಿತ್ರಗಳ ಮೂಲಕ ಅಜರಾಮರ. ಅಪ್ಪ ದೈಹಿಕವಾಗಿ ನಮ್ಮನ್ನಗಲಿದ ನೋವು ಇದ್ದೇ ಇದೆ. ಆದರೆ, ನಿಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ತನ ನಮ್ಮೊಂದಿಗಿದ್ದಾರೆ ಎಂಬ ನಂಬಿಕೆ ನಮ್ಮದು. ಪ್ರಚಂಡ ನಟರಾಗಿ, ಸಾಹಸ ಚಕ್ರವರ್ತಿಯಾಗಿ ಬದುಕಿದ್ದ ಟೈಗರ್ ಪ್ರಭಾಕರ್ ಅವರ ಮಗನಾಗಿ, ಒಬ್ಬ ಅಭಿಮಾನಿಯಾಗಿ ನನಗೆ ಹೆಮ್ಮೆ ಇದೆ. ನಿಮ್ಮ ನೆನಪು ನಿತ್ಯ ಹರಿದ್ವರ್ಣದ ಕಾಡಿನಂತೆ ಸದಾ ಹಸಿರಾಗಿರುತ್ತದೆ… ಮಿಸ್ ಯೂ ಅಪ್ಪ ಎಂದು ವಿನೋದ್ ಪ್ರಭಾಕರ್ ಬರೆದುಕೊಂಡಿದ್ದಾರೆ.
ಮರಿ ಟೈಗರ್ ಹೊಸ ಹೆಜ್ಜೆ! ಟೈಗರ್ ಟಾಕೀಸ್ ನಿರ್ಮಾಣ ಶುರು
ಅದೇನೆ ಇರಲಿ, ವಿನೋದ್ ಪ್ರಭಾಕರ್ ಅವರು ಕಳೆದ ವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ತಮ್ಮ ನಟನೆ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ “ಲಂಕಾಸುರ” ಚಿತ್ರ ನಿರ್ಮಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರ ಪತ್ನಿ ವಿನೋದ್ ಪ್ರಭಾಕರ್ ನಿರ್ಮಾಪಕರು.
ನಟ ಪ್ರಥಮ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ ” ನಟ ಭಯಂಕರ”. ಈ ಚಿತ್ರದ ನಾಯಕ ಕೂಡ ಅವರೇ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಬಿಡುಗಡೆಯಾದವು. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ಡಾ. ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು.
ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ ಆರಂಭದಲ್ಲಿ ಇವರನ್ನು ನೋಡಿ, ಏನಪ್ಪಾ, ಹೀಗೆ ಮಾತಾಡುತ್ತಾರೆ? ಅಂದು ಕೊಂಡೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ನಾನು ಇಷ್ಟಪಡುವ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾಯಿತು. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದ ಶ್ರೀಮುರಳಿ, ಪ್ರಥಮ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಹಾರೈಸಿದರು.
ಜಿಲ್ಲಾಧಿಕಾರಿ ದಯಾನಂದ್, ಲಹರಿ ವೇಲು ಹಾಗೂ ವಿ.ನಾಗೇಂದ್ರಪ್ರಸಾದ್ ಸಹ ಪ್ರಥಮ್ ಬಗ್ಗೆ ಮೆಚ್ಚುಗೆಯ ಮಾತನಾಡಿ ಚಿತ್ರಕ್ಕೆ ಶುಭ ಕೋರಿದರು.
ಮಾತಿಗಿಳಿದ ಪ್ರಥಮ್, ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಬಾರಿ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು.
ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಇಂದು ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ. ಮೇ ಹದಿಮೂರರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು. ನಾಯಕಿ ಫ್ರಾನ್ಸ್ ನಿವಾಸಿ ನಿಹಾರಿಕ, ಪ್ರಮುಖ ಪಾತ್ರಧಾರಿ ಚಂದನ, ಸಂಗೀತ ನೀಡಿರುವ ಪ್ರದ್ಯೋತನ್ ಚಿತ್ರದ ಕುರಿತು ಮಾತನಾಡಿದರು.
ಕನ್ನಡದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಲೋವರ್ ಬ್ಯಾಕ್ ಪೇನ್ ಆಗಿದ್ದು, ಸದ್ಯ ಅವರ ಫ್ಯಾಮಿಲಿ ಡಾಕ್ಟರ್ ಕೆಲವು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೌದು, ಶ್ರೀ ಮುರಳಿ ಅವರು ನಿತ್ಯವೂ ಗಂಟೆಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ. ಇದು ಈಗಿನಿಂದಲ್ಲ, ಹಲವು ವರ್ಷಗಳಿಂದಲೂ ಅವರು ಜಿಮ್ಗೆ ಹೋಗಿ ಬಾಡಿ ಫಿಟ್ ಆಗಿಟ್ಟುಕೊಂಡವರು. ಈಗ ಸದ್ಯ ಅವರು ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ “ಬಘೀರ” ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಪಾತ್ರಕ್ಕಾಗಿ ಶ್ರೀಮುರಳಿ ಅವರು ಜೋರಾಗಿಯೇ ತಯಾರಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಲೋವರ್ ಬ್ಯಾಕ್ ಪೇನ್ ಮಾಡಿಕೊಂಡಿದ್ದರು. ಇದರಿಂದ ಶ್ರೀಮುರಳಿ ಅವರು ನಡೆದಾಡಲೂ ಸಹ ತೊಂದರೆ ಪಟ್ಟಿದ್ದರು. ಅದರಲ್ಲೂ ಅವರು ನಟ ಪ್ರಥಮ್ ಅಭಿನಯದ “ನಟ ಭಯಂಕರ” ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಆಗಲೂ ಅವರು ನಿಂತು ಮಾತನಾಡದಷ್ಟು ನೋವಿತ್ತು. ಅದರಲ್ಲೂ ಶ್ರೀಮುರಳಿ ಅವರು ಬಂದು ಸಿನಿಮಾ ತಂಡವನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದರು.
ಅದಾದ ಎರಡು ದಿನಗಳ ಬಳಿಕವೂ ಅವರಿಗೆ ಲೋವರ್ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ಅವರಿಗೆ ಆ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬ ವೈದ್ಯರ ಬಳಿ ಹೋಗಿದ್ದಾರೆ. ನಂತರ ವೈದ್ಯರು ಪರಿಶೀಲಿಸಿ ಅವರಿಗೆ ಒಂದು ವಾರದ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಶ್ರೀಮುರಳಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಸಿನಿಲಹರಿ ಜೊತೆ ಮಾತನಾಡಿದ ನಟ ಶ್ರೀಮುರಳಿ, ಜಿಮ್ ವೇಳೆ ತೊಂದರೆ ಆಗಿರೋದು ನಿಜ. ಒಂದಷ್ಟು ವರ್ಕೌಟ್ ಮಾಡುವಾಗ ಇದೆಲ್ಲಾ ಕಾಮನ್ ಅಂದುಕೊಂಡೆ. ಅದು ನನಗೆ ಲೋವರ್ ಬ್ಯಾಕ್ ಪೇನ್ ಕಾಣಿಸಿಕೊಂಡಿದ್ದು, ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ. ಸ್ವಲ್ಪ ದಿನ ರೆಸ್ಟ್ ಮಾಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ ಶ್ರೀಮುರಳಿ.
ಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಅದ ಟೈಟಲ್ ನೋಡಿದವರಿಗೆ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಅದರಲ್ಲೂ ಫಸ್ಟ್ ಲುಕ್ ಪೋಸ್ಟರ್ ಕೂಡ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಆದಷ್ಟು ಬೇಗ ಶ್ರೀಮುರಳಿ ಅವರು ನೋವಿನಿಂದ ಚೇತರಿಸಿಕೊಳ್ಳಲಿ ಅನ್ನೋದು ಸಿನಿಲಹರಿ ಆಶಯ.
ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್ನಲ್ಲಿ ಸದಾ ಸುದ್ದಿಯಲ್ಲಿರುವ ರ್ಯಾಪರ್, ಸಿಂಗರ್, ಕಂಪೋಸರ್ ALL OK ಅಲಿಯಾಸ್ ಅಲೋಕ್. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್ ಪಾರ್ಟಿ’.
ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್, ಇದು “ಕೋವಿಡ್ ಸಮಯದಲ್ಲಿನ ಕಾನ್ಸೆಪ್ಟ್ವೊಂದರಿಂದ ಪ್ರೇರಣೆ ಪಡೆದು “ಹೌಸ್ ಪಾರ್ಟಿ’ ಹಾಡನ್ನು ಹೊರತಂದಿದ್ದೇನೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್ ರೆಸಾರ್ಟ್ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ .
“ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್ ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಕಿರಿಕ್ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.
ಈ ಆಲ್ಬಂ ಗೆ ಆಕಾಶ್ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.
ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಹೇಳುತ್ತಾರೆ. ಆದರೆ ಅದು ಯಾವತ್ತಿಗೊ ಅಲ್ಲ. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವಿಟ್ಟುಕೊಂಡು ಏಪ್ರಿಲ್ ಒಂದರಂದು ತೆರೆಗೆ ಬರಲು ಸಿದ್ದವಾಗಿದೆ “ಇನ್ ಸ್ಟಂಟ್ ಕರ್ಮ”.
ಈ ಹಿಂದೆ ” ಡಿ.ಕೆ.ಬೋಸ್” ಎಂಬ ಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಎರಡನೇ ಚಿತ್ರ. ನಾನು ಕೆಲವು ದಿನಗಳ ಹಿಂದೆ ನಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದೆ. ಅಲ್ಲಿ ನಡೆದ ಘಟನೆ ಈ ಚಿತ್ರಕ್ಕೆ ಸ್ಪೂರ್ತಿ. ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಸಂದೀಪ್ ಮಹಾಂತೇಶ್.
ನಿರ್ಮಾಪಕ ಸಂತೋಷ್ ಮಹಂತೇಶ್, ಚಿತ್ರದಲ್ಲಿ ಅಭಿನಯಿಸಿರುವ ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಂಜಯ್, ಸಂಗೀತ ನಿರ್ದೇಶಕ ಸೂರಜ್ ಹಾಗೂ ಛಾಯಾಗ್ರಾಹಕ ಭಾಸ್ಕರ್ ಹೆಗಡೆ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿ, ಚಿತ್ರವನ್ನು ಬೆಂಬಲಿಸುವಂತೆ ಕೋರಿದರು.
ಈ ಚಿತ್ರ ಐದು ಹುಡುಗರ ಸುತ್ತ ಸಾಗುತ್ತದೆ. ಯಶ್ ಶೆಟ್ಟಿ, ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ ಹಾಗೂ ಹರಿ ಧನಂಜಯ್ ನಟಿಸಿದ್ದಾರೆ.
ವರ್ತೂರು ಮಂಜು ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ “ಶಂಭೋ ಶಿವ ಶಂಕರ” ಚಿತ್ರದ ಹಾಡುಗಳು ಈಗ ಬಿಡುಗಡೆಯಾಗಿವೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗು ನಟ ವಸಿಷ್ಠ ಸಿಂಹ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿತನ್ ಸಂಗೀತದ ಗೌಸ್ಪೀರ್ ಸಾಹಿತ್ಯ ಇರುವ ನವೀನ್ ಸಜ್ಜು ಹಾಡಿರುವ “ನಾಟಿಕೋಳಿ” ಹಾಡು ಸಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡತ್ತಿದೆ.
ನಾನು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿದ್ದವನು. ಹಿರಿತೆರೆಯಲ್ಲಿ ಇದು ಚೊಚ್ಚಲ ಚಿತ್ರ. ನನ್ನ ಕನಸಿಗೆ ಜೀವ ತುಂಬಿದ ನಿರ್ಮಾಪಕ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಬಹುದಿನಗಳ ಗೆಳೆಯ ವಸಿಷ್ಠ ಸಿಂಹ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಶಂಕರ್ ಕೋನಮಾನಹಳ್ಳಿ.
ಸಿನಿಮಾ ನಿರ್ಮಾಣದ ಬಗ್ಗೆ ವರ್ತೂರು ಮಂಜು, ಗೀತರಚನೆ ಕುರಿತು ಗೌಸ್ ಫಿರ್ ಹಾಗೂ ಸಂಗೀತದ ಬಗ್ಗೆ ಹಿತನ್ ಹಾಸನ್ ಮಾಹಿತಿ ನೀಡಿದರು. ಛಾಯಾಗ್ರಾಹಕ ನಟರಾಜು ಮದ್ದಾಲ, ನೃತ್ಯ ನಿರ್ದೇಶಕ ಕಲೈ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು.
ನನಗೆ ಅಭಿನಯ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಅಭಿನಯ ಕಲಿಸಿದ ನಿರ್ದೇಶಕರಿಗೆ ನಾನು ಆಭಾರಿ ಎಂದರು ನಾಯಕ ಅಭಯ್.
ನಾಯಕಿ ಸೋನಾಲ್ ಮಾಂಟೆರೊ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೋಹಿತ್ ಹಾಗೂ ರಕ್ಷಕ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ. ಹೌದು, ಸ್ಟಾರ್ ಚಿತ್ರಗಳು ಈಗ ಸಾಲಾಗಿ ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ “ಹೋಮ್ ಮಿನಿಸ್ಟರ್” ಚಿತ್ರ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈಗಾಗಲೇ ಜಿಬ್ರಾನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಆನಂದ್ ಆಡಿಯೋ ಮೂಲಕ ಈ ಹಾಡುಗಳು ಬಿಡುಗಡೆಯಾಗಿವೆ.
ಸಚಿವ ಮುನಿರತ್ನ, ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ಪ್ರಿಯಾಂಕ ಉಪೇಂದ್ರ ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾಗುತ್ತಿದೆ. ಮತ್ತೊಂದು ಕಡೆಯಿಂದ ಭಯ. ಜನ ಈ ಕಥೆಯನ್ನು ಯಾವರೀತಿ ತೆಗೆದುಕೊಳ್ಳುತ್ತಾರೋ? ಎಂದು. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು, ಈ ಸಿನಿಮಾ ಮಾಡೋಣ ಸರ್. ಎಲ್ಲರಿಗೂ ಹಿಡಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ನನ್ನೊಂದಿಗೆ ನಟಿಸಿರುವ ವೇದಿಕ , ತಾನ್ಯ ಹೋಪ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಮ್ಮ ಕರೆಗೆ ಓಗೊಟ್ಟು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ಉಪೇಂದ್ರ.
ಚಿತ್ರದಲ್ಲಿ ನಟಿಸಿರುವ ವೇದಿಕ, ತಾನ್ಯ ಹೋಪ್, ಚಾಂದಿನಿ, ವಿನಯ್ ಚಂಡೂರ್, ಸಂಭಾಷಣೆ ಬರೆದಿರುವ ಧರ್ಮೇಂದ್ರ, ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚನೇನಿ ಹಾಗೂ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಬೆಂಗಳೂರು ಕುಮಾರ್ ಫಿಲಂಸ್ ನ ಕುಮಾರ್ “ಹೋಮ್ ಮಿನಿಸ್ಟರ್” ಕುರಿತು ಮಾತನಾಡಿದರು.
ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ವೇದಿಕ, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರಿದ್ದಾರೆ.
ಸದ್ಯ ಕನ್ನಡದಲ್ಲಿ ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಕೆಜಿಎಫ್ ೨. ಹೌದು, ಯಶ್ ಅಭಿನಯದ ಈ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅದಕ್ಕೂ ಮೊದಲೇ ಸಿನಿಮಾ ದೊಡ್ಡ ಮಟ್ಟದ ಕುತೂಹಲವನ್ನು ಮೂಡಿಸಿದೆ. ಈಗ ಹೊಸ ಸುದ್ದಿ ಅಂದರೆ, ಸೋಮವಾರ ಚಿತ್ರದ “ತೂಫಾನ್” ಎಂಬ ಹಾಡೊಂದು ಹೊರಹೊಮ್ಮಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಮೊದಲೇ “ತೂಫಾನ್” ಸಾಂಗ್ ರಿಲೀಸ್ ಆಗುತ್ತೆ ಅಂತ ಅನೌನ್ಸ್ ಮಾಡಿದ್ದರಿಂದ ಎಲ್ಲೆಡೆಯಿಂದಲೂ ಕುತೂಹಲ ಹೆಚ್ಚಾಗಿತ್ತು. ಆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಪಕ್ಕಾ ಮಾಸ್ ಎನಿಸಿರುವ ಹಾಡಿಗೆ ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ. “ತೂಫಾನ್ ತೂಫಾನ್ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ… ತೂಫಾನ್ ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ…” ಎಂದ ಸಾಗುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಈ ಹಾಡಿಗಾಗಿ ಯಶ್ ಫ್ಯಾನ್ಸ್ ಎದುರು ನೋಡುತ್ತಿದ್ದರು. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆಯ ಸುರಿಮಳೆಯಾಗಿದೆ. ಇನ್ನು, ಲಹರಿ ಮ್ಯೂಸಿಕ್ ಮತ್ತು ಟೀ ಸೀರಿಸ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಿದೆ.
ರವಿಬಸ್ರೂರು ಅವರೇ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಅವರೊಂದಿಗೆ ದೊಡ್ಡ ಗಾಯಕರ ತಂಡವೇ ಇದೆ. ಈ ಹಾಡಿಗೆ ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀತ್ ರುದ್ರರಂಗ, ರವಿಬಸ್ರೂರು, ವರ್ಷ ಆಚಾರ್ಯ ಸೇರಿದಂತೆ ಇತರೆ ಗಾಯಕರ ಧ್ವನಿಯೂ ಈ ಹಾಡಿಗೆ. ಅಂದಹಾಗೆ, ಈ ಲಿರಿಕಲ್ ವಿಡಿಯೋ ಹಾಡು ಸದ್ಯಕ್ಕೆ ಸಾಕಷ್ಟು ಸೌಂಡು ಮಾಡುತ್ತಿದೆ. ಕೆಜಿಎಫ್ ೨ ಸಿನಿಮಾ ಏಪ್ರಿಲ್ 14ಕ್ಕೆ ರಾಜ್ಯ, ದೇಶ ವಿದೇಶಗಳಲ್ಲೂ ತೆರೆಗೆ ಅಪ್ಪಳಿಸಲಿದೆ.
ನಟ ರಿಷಿ ಇದೀಗ ಖುಷಿಯ ಮೂಡ್ನಲ್ಲಿದ್ದಾರೆ. ಹೌದು, ಈಗಾಗಲೇ ಸದಭಿರುಚಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಆಡಿಯನ್ಸ್ ಹೊಂದಿರುವ ಅದರಲ್ಲೂ, ಫ್ಯಾಮಿಲಿ ಪ್ರೇಕ್ಷಕ ವೃಂದವನ್ನು ಸಂಪಾದಿಸಿರುವ ರಿಷಿ ಸಿಂಪಲ್ ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ” ಹಾಗು ಹೇಮಂತ್ ನಿರ್ದೇಶನದ “ಕವಲುದಾರಿ” ಮೂಲಕ ತಾನೊಬ್ಬ ಫ್ಲೆಕ್ಸಿಬಲ್ ನಟ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಸದಾ ನಗುಮೊಗದಲ್ಲೇ ಇರುವ ರಿಷಿ, ಹೊಸ ಬಗೆಯ ಅದರಲ್ಲೂ ಕಂಟೆಂಟ್ ಬೇಸ್ಡ್ ಸಿನಿಮಾಗೆ ಒತ್ತುಕೊಟ್ಟವರು. ಕಥೆ ಮತ್ತು ಪಾತ್ರ ಇಷ್ಟವಾದರೆ, ಆ ಚಿತ್ರತಂಡದಲ್ಲಿ ತಾನೂ ಒಬ್ಬ ಅಂತ ಕೈ ಜೋಡಿಸುವ ನಟ ಅವರು. ಅ ಕಾರಣಕ್ಜೆ ಅವರೀಗ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಅದರ ಮಧ್ಯೆಯೇ ಅವರ ಅಭಿನಯದ “ರಾಮನ ಅವತಾರ” ಚಿತ್ರವನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ.
ಈ ಕುರಿತು ತಮ್ಮ ಮುಖಪುಟದಲ್ಲಿ ರಿಷಿ “ರಾಮನ ಅವತಾರ” ಚಿತ್ರ ಮುಕ್ತಾಯ ಬಗ್ಗೆ ಬರೆದುಕೊಂಡಿದ್ದಾರೆ.
‘ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಹಾಗು ಚಿತ್ರಮಂದಿರಗಳಲ್ಲಿ ಸಿಗೋಣ. ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ’ ಎಂದಿದ್ದಾರೆ.
ಅದೇನೆ ಇರಲಿ, ಹಿಂದಿನ ಎರಡು ಚಿತ್ರಗಳಲ್ಲೂ ಮೋಡಿ ಮಾಡಿ ಸೈ ಎನಿಸಿಕೊಂಡಿದ್ದ ರಿಷು, ಈಗ ‘ರಾಮನ ಅವತಾರ’ ಸಿನಿಮಾ ಎದುರು ನೋಡುತ್ತಿದ್ದಾರೆ. ಆ ಚಿತ್ರ ಮುಗಿಸಿದ ಖುಷಿಯಲ್ಲಿದ್ದಾರೆ. ಮುಂದೆಯೂ ಹೊಸ ಬಗೆಯ ಚಿತ್ರ ಕೊಡವ ಉತ್ಸಾಹದಲ್ಲಿದ್ದಾರೆ.