ಹೊಸ ಪ್ರಯೋಗಗಳ ಮೂಲಕ
ಯೂಟ್ಯೂಬ್ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್,
ಸಿಂಗರ್, ಕಂಪೋಸರ್ ALL OK ಅಲಿಯಾಸ್ ಅಲೋಕ್. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್ ಪಾರ್ಟಿ’.
ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್, ಇದು “ಕೋವಿಡ್ ಸಮಯದಲ್ಲಿನ ಕಾನ್ಸೆಪ್ಟ್ವೊಂದರಿಂದ ಪ್ರೇರಣೆ ಪಡೆದು “ಹೌಸ್ ಪಾರ್ಟಿ’ ಹಾಡನ್ನು ಹೊರತಂದಿದ್ದೇನೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್ ರೆಸಾರ್ಟ್ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ .
“ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್ ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಕಿರಿಕ್ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.
ಈ ಆಲ್ಬಂ ಗೆ ಆಕಾಶ್ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.